ಬಹಿರಂಗ
ಚುನಾವಣಾ ಅಕ್ರಮದ ಮೂಲಕ ಸೋಲಿಸಲ್ಪಟ್ಟ ‘ಪ್ರಜಾಪ್ರಭುತ್ವದ ಪಿತ’
1951-52 ಡಿಸೆಂಬರ್-ಜನವರಿ ತಿಂಗಳಲ್ಲಿ ಈ ದೇಶದಲ್ಲಿ ಫ್ರಥಮ ಲೋಕಸಭಾ ಚುನಾವಣೆ ನಡೆಯಿತು. 1952ರ ಜನವರಿ 3 ರಂದು ಮತದಾನ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರರು ಬಾಂಬೆ(ಇಂದಿನ ಮುಂಬೈ) ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಾಂಬೆ ನಗರ ಉತ್ತರ ಕ್ಷೇತ್ರ, ಅಂದಿನ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ದ್ವಿಸದಸ್ಯ ಕ್ಷೇತ್ರವಾಗಿತ್ತು. ಅಂದರೆ ಆ ಕ್ಷೇತ್ರದಿಂದ ಓರ್ವ ಸಾಮಾನ್ಯ ವರ್ಗದ ಸದಸ್ಯ ಮತÀ್ತು ಓರ್ವ ಪರಿಶಿಷ್ಟಜಾತಿಯ ಸದಸ್ಯ ಹೀಗೆ ಇಬ್ಬರೂ ಆಯ್ಕೆಯಾಗಬೇಕಿತ್ತು.
ಈ ಪ್ರಕಾರ ಅಲ್ಲಿ ಚುನಾವಣೆ ಘೋಷಣೆಯಾಗಿ 11ಜನ ನಾಮಪತ್ರ ಸಲ್ಲಿಸಿ ಮೂವರು ನಾಮಪತ್ರ ವಾಪಸ್ ಪಡೆದು ಕಣದಲ್ಲಿ 8ಜನ ಅಭ್ಯರ್ಥಿಗಳು ಉಳಿದರು. ಅಂದಹಾಗೆ ಆ 8ಜನ ಅಭ್ಯರ್ಥಿಗಳಲ್ಲಿ ಪರಿಶಿಷ್ಟಜಾತಿಯ ಅಭ್ಯರ್ಥಿಗಳೂ ಇದ್ದರು ಮತ್ತು ಸಾಮಾನ್ಯ ಅಭ್ಯರ್ಥಿಗಳೂ ಇದ್ದರು ಮತ್ತು ಯಾಕೆ ಹೀಗೆ ಇಬ್ಬರನ್ನೂ ಒಟ್ಟಿಗೆ ಮಾಡಲಾಗಿತ್ತೆಂದರೆ ಪರಿಶಿಷ್ಟರು, ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಲು ಅವರೂ ಅರ್ಹರಾದುದರಿಂದ ಸಾಮಾನ್ಯ ಕ್ಷೇತ್ರ ಮತ್ತು ಪರಿಶಿಷ್ಟರ ಕ್ಷೇತ್ರ ಹೀಗೆ ಎರಡನ್ನೂ ಒಟ್ಟಿಗೆ ಮಿಶ್ರ ಮಾಡಲಾಗಿತ್ತು. ಅಂದಹಾಗೆ ಈ ಮಿಶ್ರ ದ್ವಿಸದಸ್ಯ ಕ್ಷೇತ್ರದಲ್ಲಿ ಮೊದಲ ಸ್ಥಾನವನ್ನು ಪರಿಶಿಷ್ಟ ಅಭ್ಯರ್ಥಿಯೇ ಪಡೆದಿದ್ದರೆ ಸಾಮಾನ್ಯ ಅಭ್ಯರ್ಥಿಯಾಗಿ ಪರಿಶಿಷ್ಟಜಾತಿಯ ಅಭ್ಯರ್ಥಿಯೇ ಆಯ್ಕೆಯಾಗಬಹುದಿತ್ತು ಮತ್ತು ಯಥಾಪ್ರಕಾರ ಮೀಸಲು ಕ್ಷೇತ್ರದಿಂದಲೂ ಮತ್ತೋರ್ವ ಪರಿಶಿಷ್ಟ ಆಯ್ಕೆಯಾಗುತ್ತಿದ್ದ. ಅಕಸ್ಮಾತ್ ಮೊದಲ ಸ್ಥಾನದಲ್ಲಿ ಸಾಮಾನ್ಯ ಅಭ್ಯರ್ಥಿಯೇ ಇದ್ದರೆ ಸಹಜವಾಗಿ ಆತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದ ಮತ್ತು ಉಳಿದ ಪರಿಶಿಷ್ಟಜಾತಿಯ ಸ್ಥಾನಕ್ಕೆ ಪರಿಶಿಷ್ಟ ಅಭ್ಯರ್ಥಿಗಳಲ್ಲಿ ಯಾರು ಹೆಚ್ಚು ಮತ ಪಡೆದಿರುತ್ತಾರೋ ಅವರು ಆಯ್ಕೆಯಾಗುತ್ತಿದ್ದರು. ಒಟ್ಟಾರೆ ದ್ವಿಸದಸ್ಯ ಸ್ಥಾನದ ಆಯ್ಕೆಯ ಈ ಪ್ರಕ್ರಿಯೆ ಗೊಂದಲಮಯವಾಗೇನು ಇರಲಿಲ್ಲ.
ದ್ವಿಸದಸ್ಯ ಈ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಹೇಗಿತ್ತೆಂದರೆ ಕಣದಲ್ಲಿ ಅಭ್ಯರ್ಥಿಗಳು 8 ಮಂದಿ ಇದ್ದುದರಿಂದ ಪ್ರತೀ ಮತದಾನ ಕೇಂದ್ರದಲ್ಲಿಯೂ ಪ್ರತೀ ಅಭ್ಯರ್ಥಿಗೆ ಒಂದರಂತೆ 8 ಮತ ಪಟ್ಟಿಗೆಗಳನ್ನು(ಬೂತ್‍ಗಳನ್ನು) ಇಡಲಾಗಿತ್ತು. ಮತದಾರನಿಗೆ ಸಾಮಾನ್ಯ ಕ್ಷೇತ್ರಕ್ಕೊಂದು ಮತ್ತು ಮೀಸಲು ಕ್ಷೇತ್ರಕ್ಕೊಂದು ಹೀಗೆ ಎರಡು ಬೇರೆ ಬೇರೆ ಬಣ್ಣದ ಮತ ಪತ್ರಗಳನ್ನು ನೀಡಲಾಗಿತ್ತು. ಸಾಮಾನ್ಯ ಕ್ಷೇತ್ರದ ಮತಪತ್ರದಲ್ಲಿ ಪರಿಶಿಷ್ಟ ಅಭ್ಯರ್ಥಿಗಳನ್ನೂ ಒಳಗೊಂಡಂತೆ ಎಲ್ಲಾ ಎಂಟು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳಿದ್ದವು. ಪರಿಶಿಷ್ಟರ ಮೀಸಲಿನ ಮತಪತ್ರದಲ್ಲಿ ಕೇವಲ ಪರಿಶಿಷ್ಟ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳು ಮಾತ್ರ ಇದ್ದವು. ಮತದಾರ ಆ ಎರಡೂ ಮತಪತ್ರಗಳನ್ನು ಪಡೆದು ಎರಡರಲ್ಲೂ ತನಗೆ ಇಷ್ಟವಾದ ಅಭ್ಯರ್ಥಿಗಳ ಚಿಹ್ನೆಗಳಿಗೆ ಮುದ್ರೆಯೊತ್ತಿ ಸಹಿ ಮಾಡಿ ಸಂಬಂಧಿಸಿದ ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಮಾತ್ರ ಹಾಕಬೇಕಿತ್ತು.
ಈ ಹಿನ್ನೆಲೆಯಲ್ಲಿ ಮತದಾರನೋರ್ವ ಅಭ್ಯರ್ಥಿಯೊಬ್ಬರಿಗೆ ತಾನು ನೀಡಿದ ಮತವನ್ನು, ಸಂಬಂಧಿತ ಮತಪತ್ರವನ್ನು ಅದೇ ಅಭ್ಯರ್ಥಿಯ ಮತಪೆಟ್ಟಿಗೆಯಲ್ಲಿ ಹಾಕದೆ ಬೇರೆ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕಿದರೆ ಅದು ಕುಲಗೆಟ್ಟ ಮತವಾಗುತ್ತಿತ್ತು. ಗಮನಾರ್ಹವೆಂದರೆ ಮತದಾರ ತನಗೆ ನೀಡಲಾದ ಎರಡೂ ಮತಪತ್ರಗಳನ್ನು ತನ್ನಿಷ್ಟದ ಒಂದೇ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕಿದರೂ ಅದರಲ್ಲಿ ಒಂದು ಮತ ಕುಲಗೆಡುತ್ತಿತ್ತು ಈ ನಿಟ್ಟಿನಲ್ಲಿ ಇದನ್ನು ‘ಹಾಗೆ ಮಾಡುವುದು ಅಕ್ರಮ’ ಎಂದು ಅಂದಿನ ಜನಪ್ರತಿನಿಧಿ ಕಾಯಿದೆ ಸ್ಪಷ್ಟವಾಗೇ ಘೋಷಿಸಿತ್ತು. ಇದಲ್ಲದೆ ಮತದಾರ ತನಗೆ ಕೇವಲ ಒಂದು ಓಟು ಹಾಕುವ ಮಾತ್ರ ಇಚ್ಚೆ ಇದೆ, ಇನ್ನೊಂದು ಓಟು ಹಾಕುವ ಇಚ್ಚೆ ಇಲ್ಲ ಎಂದರೆ ಆತ ತನ್ನಿಷ್ಟದ ಆ ಒಂದು ಓಟನ್ನು ಮಾತ್ರ ಹಾಕಿ ಉಳಿದ ಒಂದು ಮತಪತ್ರವನ್ನು ವಾಪಸ್ ಮತಗಟ್ಟೆಯ ಅಧಿಕಾರಿಗೆ ನೀಡುವ ಅವಕಾಶವೂ ದ್ವಿಸದಸ್ಯ ಆ ಕ್ಷೇತ್ರದಲ್ಲಿ ಇತ್ತು.
ಈ ಪ್ರಕಾರ ಅಂಬೇಡ್ಕರರು ಸ್ಪರ್ಧಿಸಿದ್ದ ಬಾಂಬೆ ನಗರ ಉತ್ತರ ಆ ಕ್ಷೇತ್ರಕ್ಕೆ 1952 ಜನವರಿ 3 ರಂದು ಚುನಾವಣೆ ನಡೆದು ಜನವರಿ 7ರಂದು ಮತಎಣಿಕೆ ಪ್ರಾರಂಭವಾಗಿ ಜನವರಿ 11ಕ್ಕೆ ಎಣಿಕೆ ಮುಕ್ತಾಯವಾಯಿತು. ಫಲಿತಾಂಶವನ್ನು ಕ್ರಮಸಂಖ್ಯೆ, ಪಡೆದ ಮತಗಳು ಮತ್ತು ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಬಿದ್ದ ಬೇರೆ ಅಭ್ಯರ್ಥಿಗಳ ಮತಗಳು ಅರ್ಥಾತ್ ಕುಲಗೆಟ್ಟ ಮತಗಳ ಪ್ರಕಾರ ಪಟ್ಟಿಮಾಡಿ ದಾಖಲಿಸುವುದಾದರೆ..
ಅಭ್ಯರ್ಥಿ ಪಡೆದ ಮತ @ ಕುಲಗೆಟ್ಟ ಮತ
1. ಡಾ.ಅಂಬೇಡ್ಕರ್ * 1,23,576 @ 2921
2. ಅಶೋಕ್ ಆರ್.ಮೆಹ್ತಾ * 1,39,741 @ 5,597
3. ಎಸ್.ಎ.ಡಾಂಗೆ * 96,755 @ 39,165
4. ಗೋಪಾಲ್ ವಿ.ದೇಶ್‍ಮುಖ್ * 40,786 @ 6,634
5. ವಿಠಲ್ ಬಿ.ಗಾಂಧಿ * 1,49,138 @ 10,881
6. ಕೇಶವ ಬಿ.ಜೋಶಿ * 15,195 @ 1,168
7. ನಾರಾಯಣ್ ಎಸ್.ಕಜ್ರೋಳ್ಕರ್ * 1,38,137 @ 6,892
8. ನೀಲಕಾಂತ್ ಬಿ.ಪಾರುಯೇಕರ್ * 12,560 @ 1,025
ಈ ಪಟ್ಟಿಯ ಪ್ರಕಾರ ಎರಡು ಸ್ಥಾನ ಇದ್ದ ಈ ಕ್ಷೇತ್ರದಲ್ಲಿ ಸಾಮಾನ್ಯ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಯಾಗಿ ಅತಿ ಹೆಚ್ಚು ಮತ ಪಡೆದ(1,49,138) ವಿಠಲ್ ಬಿ.ಗಾಂಧಿ ಆಯ್ಕೆಯಾದರೆ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ನಾರಾಯಣ್ ಎಸ್.ಕಜ್ರೋಳ್ಕರ್ 1,38,137 ಮತ ಪಡೆದು ಆಯ್ಕೆಯಾದರು. 1,23,576 ಮತ ಪಡೆದ ಅಂಬೇಡ್ಕರರು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಜ್ರೋಳ್ಕರ್ ವಿರುದ್ಧ 14,561 ಮತಗಳ ಅಂತರದಿಂದ ಸೋತರೆ ಸಾಮಾನ್ಯ ಕ್ಷೇತ್ರದಲ್ಲಿ ಅಂಬೇಡ್ಕರರ ಎಸ್‍ಸಿಎಫ್(ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್) ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಸೋಷಿಯಲಿಸ್ಟ್ ಪಾರ್ಟಿಯ ಅಶೋಕ್ ಆರ್.ಮೆಹ್ತಾ 1,39,741 ಮತ ಪಡೆದು ಅದೇ ಕಾಂಗ್ರೆಸ್‍ನ ವಿಠಲ್ ಬಿ.ಗಾಂಧಿಯವರ ಎದುರು 9,397 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಅಂದಹಾಗೆ ಇಲ್ಲಿ ವ್ಯಾಪಕವಾಗಿ ದಾಖಲಿಸಲ್ಪಟ್ಟ ಕುಲಗೆಟ್ಟ ಮತಗಳು? ಅಂಬೇಡ್ಕರರು ಸೋತಿದ್ದೇ ಅಥವಾ ಸೋಲಿಸಲ್ಪಟ್ಟಿದ್ದೇ ಕುಲಗೆಡಿಸಲ್ಪಟ್ಟ ಈ ಮತಗಳ ಕಾರಣಕ್ಕಾಗಿ! ಸೋತ ನಂತರ ಸ್ವತಃ ಅಂಬೇಡ್ಕರರು ಈ ಸಂಬಂಧ 1952 ಏಪ್ರಿಲ್ 21ರಂದು ಅಂದಿನ ಚುನಾವಣಾ ಆಯೋಗಕ್ಕೆ ದೂರು ದಾಖಲಿಸುತ್ತಾರೆ ಮತ್ತು ತಮ್ಮ ಆ ದೂರಿನಲ್ಲಿ ಬಾಬಾಸಾಹೇಬರು ಅತಿ ಹೆಚ್ಚು ಕುಲಗೆಟ್ಟ ಮತಗಳನ್ನು ‘ಪಡೆದ’ ಕಮ್ಯೂನಿಸ್ಟ್ ಪಕ್ಷದ ನಾಯಕ ಶ್ರೀಪಾದ ಅಮೃತ ಡಾಂಗೆ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಾಲ್ ವಿ.ದೇಶ್‍ಮುಖ್, ಈ ಇಬ್ಬರೂ ಅಭ್ಯರ್ಥಿಗಳು ನಡೆಸಿದ ಅಕ್ರಮಗಳನ್ನು ಹೂಡಿದ ವಾಮಮಾರ್ಗಗಳನ್ನು ಹೇಳುತ್ತಾ ಹೋಗುತ್ತಾರೆ. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ.1, ಪು.411).
ಅಂಬೇಡ್ಕರರ ಆ ದೂರಿನ ಮುಖ್ಯಾಂಶಗಳನ್ನು ಪ್ರಸ್ತಾಪಿಸುವುದಾದರೆ, ಮೊದಲೇ ಹೇಳಿದ ಹಾಗೆ ಒಬ್ಬ ಮತದಾರ ತನ್ನ ಎರಡೂ ಓಟುಗಳನ್ನು ಒಬ್ಬನೇ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕುವುದು ತಪ್ಪು, ಅದು ಕುಲಗೆಡುತ್ತದೆ. ಆದರೆ ಆಶ್ಚರ್ಯವೆಂದರೆ ಹಾಗೆ ಮತಗಳನ್ನು ಕುಲಗೆಡಿಸಲೆಂದೇ ಮೇಲ್ಕಂಡ ಈ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಭರಪೂರ ಪ್ರಚಾರ ನಡೆಸಿದ್ದರು. ಹೀಗೆ ಮತಗಳನ್ನು ಕುಲಗೆಡಿಸುವುದರಿಂದ ತಾವು ಗೆಲ್ಲಲಾಗುವುದಿಲ್ಲ ಎಂದು ಈ ಇಬ್ಬರೂ ಅಭ್ಯರ್ಥಿಗಳಿಗೂ ಗೊತ್ತಿತ್ತು. ಆದರೆ ಅವರ ಅಂತಹ ನಡೆಯ ಒಟ್ಟಾರೆ ಉದ್ದೇಶ? ಅಂಬೇಡ್ಕರರನ್ನು ಸೋಲಿಸುವುದಾಗಿತ್ತು!
ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 39,165 ಕುಲಗೆಟ್ಟ ಮತಗಳನ್ನು ಪಡೆದ ಕಮ್ಯೂನಿಸ್ಟ್ ನಾಯಕ ಎಸ್.ಎ.ಡಾಂಗೆ ಪ್ರಚಾರದ ಸಮಯದಲ್ಲಿ ಹೊರಡಿಸಿದ್ದ ಒಂದು ಕರಪತ್ರದಲ್ಲಿ ಕಣದಲ್ಲಿರುವ ಪ್ರಚಂಡ ಅಭ್ಯರ್ಥಿ ತಾನಾಗಿದ್ದು ಮತದಾರರು ‘ತಮ್ಮೆರಡು ಓಟುಗಳನ್ನು’ ನನಗೇ ನೀಡಬೇಕು ಎಂದು ಆಗ್ರಹಿಸಿದ್ದರು! ಅಲ್ಲದೆ ಅದೇ ಡಾಂಗೆಯವರು ತಮ್ಮ ಪಕ್ಷ ಕಮ್ಯೂನಿಸ್ಟ್ ಪಕ್ಷದ ಮುಖವಾಣಿ ‘ಯುಗಾಂತರ’ ಎಂಬ ಮರಾಠಿ ವಾರಪತ್ರಿಕೆಯಲ್ಲಿ ಹೊರಡಿಸಿದ್ದ ಜಾಹೀರಾತಿನಲ್ಲಿ ‘ಮತದಾರರು ತಮ್ಮ ಎರಡೂ ಓಟುಗಳನ್ನು’ ತಮ್ಮ ಒಂದೇ ಡಬ್ಬಕ್ಕೆ ಹಾಕಬೇಕು ಎಂದು ತಮ್ಮ ಗುರುತಾದ ‘ಇಂಜಿನ್’ ಚಿತ್ರ ಸಮೇತ ಕೋರಿದ್ದರು! ಡಾಂಗೆಯವರ ಒಟ್ಟಾರೆ ಉದ್ದೇಶ ಸ್ಪಷ್ಟ ಇತ್ತು ಅಂದರೆ ಅದು ತನಗೆ ಲಾಭವಾಗಬೇಕು ಎಂದಲ್ಲ, ಬದಲಿಗೆ ಅಂಬೇಡ್ಕರರಿಗೆ ನಷ್ಟವಾಗಬೇಕು ಎಂದು!
ಈ ಸಂಬಂಧ ಕರಪತ್ರವೊಂದರಲ್ಲಿ ಕುದ್ದು ಅಂಬೇಡ್ಕರರ ಹೆಸರನ್ನೇ ಉಲ್ಲೇಖಿಸಿದ್ದ ಸದರಿ ಡಾಂಗೆ “ಪರಿಶಿಷ್ಟ ಜಾತಿಗೆ ಸೇರಿದ್ದ ಅಂಬೇಡ್ಕರರು ದ್ವಿಸದಸ್ಯ ಈ ಕ್ಷೇತ್ರದಲ್ಲಿ ಸಾಮಾನ್ಯ ಅಭ್ಯರ್ಥಿ ಮತ್ತು ಪರಿಶಿಷ್ಟ ಜಾತಿಯ ಅಭ್ಯರ್ಥಿ ಹೀಗೆ ಎರಡೂ ಸ್ಥಾನಗಳ ಅಭ್ಯರ್ಥಿಯಾಗುವ ಅವಕಾಶ ಹೊಂದಿದ್ದಾರೆ. ಆದುದರಿಂದ ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು ಪರಿಶಿಷ್ಟಜಾತಿಯ ಅಂಬೇಡ್ಕರರಿಗೆ ಓಟು ಕೊಟ್ಟರೆ ಅದು ಪರಿಶಿಷ್ಟರ ಮತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಆದ್ದರಿಂದ ಮತದಾರರು ತಮ್ಮ ಎರಡೂ ಮತಗಳನ್ನು ನನ್ನ ‘ಇಂಜಿನ್’ ಗುರುತಿಗೇ ನೀಡಿ”!
ಅಬ್ಬಾ! ಎಂತಹ ತಂತ್ರ! ಸಾಮಾನ್ಯ ಕ್ಷೇತ್ರ ಆಗಿದ್ದ ಆ ಬಾಂಬೆ ಉತ್ತರ ಕ್ಷೇತ್ರದಿಂದ ಅಂಬೇಡ್ಕರ್ ಕೇವಲ ಪರಿಶಿಷ್ಟರ ಓಟುಗಳಿಂದ ಮಾತ್ರ ಗೆಲ್ಲಬೇಕಂತೆ, ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು ಅಂಬೇಡ್ಕರರಿಗೆ ಮತ ಹಾಕಿದರೆ ಅದು ಪರಿಶಿಷ್ಟರ ಹಕ್ಕನ್ನು ಕಸಿದುಕೊಂಡಂತೆಯಂತೆ. ಆ ಕಾರಣಕ್ಕಾಗಿ ಮತದಾರ ಎರಡೂ ಓಟುಗಳನ್ನು ಒಬ್ಬ ವ್ಯಕ್ತಿಯ ಡಬ್ಬಕ್ಕೇ ಹಾಕಿ ತನ್ನ ಮತವನ್ನು ಕುಲಗೆಡಿಸಿಕೊಳ್ಳಬೇಕಂತೆ! ಈ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ಡಾಂಗೆಯವರು ತಮ್ಮ ಕುಯುಕ್ತಿಯ ಇಂಥ ನಡೆಯಿಂದ ಮತದಾರರನ್ನು ಎಷ್ಟು ದಿಕ್ಕುತಪ್ಪಿಸುವುದು ಸಾಧ್ಯವೋ ಅಷ್ಟೂ ದಿಕ್ಕುತಪ್ಪಿಸಿದರು ತನ್ಮೂಲಕ ಅಂಬೇಡ್ಕರರು ಚುನಾವಣೆಯಲ್ಲಿ ಸೋಲುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು! ಹೇಗೆಂದರೆ ಕುಲಗೆಟ್ಟ ಒಟ್ಟು ಮತಗಳು 74,333. ಅದರಲ್ಲಿ ಡಾಂಗೆಯವರ ಇಂತಹ ಅಪಪ್ರಚಾರದಿಂದ ಬರೋಬ್ಬರಿ ಅವರೊಬ್ಬರಿಗೇ ಬಿದ್ದ ಕುಲಗೆಟ್ಟ ಮತಗಳೇ 39,165! ಅಂದಹಾಗೆ ಅಂಬೇಡ್ಕರ್ ಸೋತದ್ದು? 14,561 ಮತಗಳಿಂದ! ಈ ಹಿನ್ನೆಲೆಯಲ್ಲಿ ಅಂಬೇಡ್ಕರರ ಸೋಲಿನ ಅಂತರಕ್ಕಿಂತ ಮೂರು ಪಟ್ಟು ಹೆಚ್ಚು ಮತ ಕುಲಗೆಡಿಸುವಲ್ಲಿ ಡಾಂಗೆ ಯಶಸ್ವಿಯಾಗಿದ್ದರು. ಡಾಂಗೆಯವರ ಇಂತಹ ಹೀನ ತಂತ್ರವನ್ನು ತಮ್ಮ ಆ ಚುನಾವಣಾ ದೂರಿನಲ್ಲಿ ಅಂಬೇಡ್ಕರರು ಸಾಕ್ಷಿ ಸಮೇತ, ಅಂದರೆ ಕರಪತ್ರ ಪ್ರತಿ, ಪೇಪರ್ ಕಟಿಂಗ್‍ಗಳನ್ನು ಲಗತ್ತಿಸುವುದರ ಜೊತೆ ಕ್ರಮ ಕೈಗೊಳ್ಳಬೇಕೆಂದು ಆಯೋಗಕ್ಕೆ ಅರುಹಿದ್ದರು.
ಮುಂದುವರಿದು ಅಂಬೇಡ್ಕರರು ಮತ್ತೋರ್ವ ಅಭ್ಯರ್ಥಿಯ ಅಪಪ್ರಚಾರವನ್ನು ಸಾಕ್ಷಿ ಸಮೇತ ದಾಖಲಿಸಿದ್ದರು. ಅದು ಪಕ್ಷೇತರ ಅಭ್ಯರ್ಥಿ ಹಿಂದುತ್ವವಾದಿ ಗೋಪಾಲ್ ವಿ.ದೇಶ್‍ಮುಖ್‍ರವರಿಗೆ ಸಂಬಂಧಿಸಿದ್ದು. ಸದರಿ ದೇಶ್‍ಮುಖ್ ‘ವಿವಿಧ ವೃತ್ತಾ’ ಎಂಬ ಪತ್ರಿಕೆಯಲ್ಲಿ ಡಿಸೆಂಬರ್ 31, 1951ರಲ್ಲಿ ಹೊರಡಿಸಿದ್ದ ಪತ್ರಿಕಾ ಹೇಳಿಕೆಯಲ್ಲಿ “ಬಾಂಬೆ ಉತ್ತರ ಕ್ಷೇತ್ರವು ದ್ವಿಸದಸ್ಯ ಸಾಮಾನ್ಯ ಕ್ಷೇತ್ರವಾಗಿದ್ದು ಇಲ್ಲಿ ಎರಡೂ ಸ್ಥಾನಗಳನ್ನು ಪರಿಶಿಷ್ಟರೇ ಗೆಲ್ಲುವಂತಹ ತಂತ್ರವನ್ನು ಅಂಬೇಡ್ಕರರು ರೂಪಿಸಿದ್ದಾರೆ. ಆ ಕಾರಣದಿಂದ ಮತದಾರರು ಅಂಬೇಡ್ಕರರ ಇಂತಹ ತಂತ್ರವನ್ನು ಸೋಲಿಸಲು ತಮ್ಮ ಎರಡೂ ಓಟುಗಳನ್ನು ಅಂಬೇಡ್ಕರರನ್ನು ಹೊರತು ಪಡಿಸಿ ಇತರರಿಗೆ ನೀಡಿ. ಆ ಮೂಲಕ ಪರಿಶಿಷ್ಟೇತರರೂ ಆಯ್ಕೆಯಾಗುವಂತೆ ಮಾಡಿ” ಎಂದಿದ್ದರು. ಮುಂದುವರಿದು ಅದೇ ದೇಶ್‍ಮುಖ್ ಅದೇ ‘ವಿವಿಧ ವೃತ್ತಾ’ ಪತ್ರಿಕೆಯಲ್ಲಿ “ಮತದಾರನೋರ್ವ ಹಿಂದೂ ಅಭ್ಯರ್ಥಿಯ ಪೆಟ್ಟಿಗೆಯಲ್ಲಿ ಮಾತ್ರ ತನ್ನ ಎರಡೂ ಮತಗಳನ್ನು ಹಾಕಬೇಕು ಮತ್ತು ಅದು ಯಾವುದೇ ರೀತಿಯಲ್ಲೂ ಕಾನೂನಿಗೆ ವಿರುದ್ಧವಲ್ಲ” ಎಂಬ ಹೇಳಿಕೆ ನೀಡಿ ಕೋಮುಭಾವವನ್ನು ಬಹಿರಂಗವಾಗೇ ಬಡಿದೆಬ್ಬಿಸಿದ್ದರು! (ಇಲ್ಲಿ ದೇಶ್‍ಮುಖ್‍ರ ‘ಹಿಂದೂ ಅಭ್ಯರ್ಥಿಗೆ ಮಾತ್ರ’ ಎಂಬ ಪದವನ್ನು ಗಮನಿಸಬೇಕು! ಅಂದರೆ ಅಂಬೇಡ್ಕರರು ಒಟ್ಟಾರೆ ಪರಿಶಿಷ್ಟರು ಹಿಂದೂಗಳಲ್ಲ ಎಂಬುದು ಆ ಕಾಲದಲ್ಲೇ 1952ರಲ್ಲೇ ಸ್ಪಷ್ಟ.) ಈ ಸಂಬಂಧ ದೇಶ್‍ಮುಖ್‍ರ ಇಂತಹ ಕೋಮುಭಾವದ ಪತ್ರಿಕಾ ಹೇಳಿಕೆಯ ವರದಿಯ ತುಣುಕನ್ನೂ ಸಹ ಅಂಬೇಡ್ಕರರು ತಮ್ಮ ಆ ಚುನಾವಣಾ ತಕರಾರು ಅರ್ಜಿಯ ಜೊತೆ ಲಗತ್ತಿಸಿದ್ದರು.
ಒಟ್ಟಾರೆ ಹೇಳುವುದಾದರೆ ಕಮ್ಯೂನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೆ, ಹಿಂದುತ್ವವಾದಿ ನಾಯಕ ಗೋಪಾಲ್ .ವಿ.ದೇಶ್‍ಮುಖ್ ಇಬ್ಬರೂ “ವಯಕ್ತಿಕವಾಗಿ ಅವರಿಬ್ಬರಿಗು ಯಾವುದೇ ಲಾಭವಾಗದಿದ್ದರೂ ಅಂಬೇಡ್ಕರರ ಗೆಲುವಿನ ಸಂಭವವನ್ನು ತಪ್ಪಿಸುವ ಏಕೈಕ ಉದ್ದೇಶ ಇಟ್ಟುಕೊಂಡು ಎರಡೂ ಓಟುಗಳನ್ನು ತಮಗೆ ಹಾಕಿ” ಎಂಬ ಚುನಾವಣಾ ಹೀನ ತಂತ್ರ ಹೆಣೆದು, ಮತದಾರರನ್ನು ಗೊಂದಲಗೊಳಿಸುವಲ್ಲಿ ಯಶಸ್ವಿಯಾದರು. ಇದನ್ನು ಉಲ್ಲೇಖಿಸುತ್ತಾ ಅಂಬೇಡ್ಕರರು ತಮ್ಮ ಆ ಚುನಾವಣಾ ದೂರಿನಲ್ಲಿ ಸದರಿ ಬಾಂಬೆ ಸಿಟಿ ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಈ ಇಬ್ಬರು ಅಭ್ಯರ್ಥಿಗಳ ಇಂತಹ ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಅನೂರ್ಜಿತಗೊಳಿಸಿ ಮರುಚುನಾವಣೆ ನಡೆಸಬೇಕು ಎಂದು ಕೋರಿದರು.
ಅಂತೆಯೇ ಅಂಬೇಡ್ಕರರು ಸಲ್ಲಿಸಿದ ಆ ಚುನಾವಣಾ ದೂರಿನ ವಿಚಾರಣೆ ಶ್ರೀ ಎನ್.ಜೆ.ವಾಡಿಯಾ, ಶ್ರೀ ಎಂ.ಕೆ.ಲಲ್ಕಾಕ, ಶ್ರೀ ಜಿ.ಪಿ.ಮುರುಡೇಶ್ವರ್ ರವರನ್ನೊಳಗೊಂಡ ಚುನಾವಣಾ ಟ್ರಿಬ್ಯೂನಲ್‍ನಲ್ಲಿ ನಡೆಯುತ್ತದೆ ಮತ್ತು ಸ್ವತಃ ಅಂಬೇಡ್ಕರರೇ ಆ ಟ್ರಿಬ್ಯೂನಲ್ ಮುಂದೆ ವಿಚಾರಣೆಗೆ ಹಾಜರಾಗಿ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 123(2)ರ ಅಡಿಯಲ್ಲಿ ಚುನಾವಣೆಯಲ್ಲಿ ಮತದಾರರ ಮೇಲೆ ‘ಅಕ್ರಮ ಪ್ರಭಾವ’ ಬೀರಿದ ಆ ಇಬ್ಬರು ಅಭ್ಯರ್ಥಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ, ಸೆಕ್ಷನ್ 100ರ ಪ್ರಕಾರ “ಭಾರಿ ಅಕ್ರಮದ ಆಧಾರದಲ್ಲಿ ಸದರಿ ಚುನಾವಣೆಯನ್ನು ರದ್ದುಪಡಿಸುವಂತೆ””ಪ್ರಬಲ ವಾದ ಮಂಡಿಸುತ್ತಾರೆ. ಅಂದಹಾಗೆ ಜನಪ್ರತಿನಿಧಿ ಕಾಯ್ದೆ ಅಂದಿನ ನಿಯಮ 25(1)ರ ಪ್ರಕಾರವೇ ‘ಮತದಾರನೊಬ್ಬ ತನ್ನ ಎರಡೂ ಮತವನ್ನೂ ಒಂದೇ ಬ್ಯಾಲಟ್ ಬಾಕ್ಸ್‍ನಲ್ಲಿ ಹಾಕುವುದು ಕಾನೂನಿಗೆ ವಿರುದ್ಧ’.
ಹೀಗಿರುವಾಗ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಕಾನೂನಿಗೆ ವಿರುದ್ಧವಾದ ಇಂತಹ ಕ್ರಿಯೆ ನಡೆಸಿ ಎಂದು ಮತದಾರರಿಗೆ ಬಹಿರಂಗವಾಗಿ ಪತ್ರಿಕಾ ಪ್ರಕಟಣೆಗಳ ಮೂಲಕ ಆಗ್ರಹಿಸುತ್ತಾರೆ ಎಂದರೆ ಇದು ಚುನಾವಣಾ ಅಕ್ರಮದ ಉದ್ದೇಶಪೂರ್ವಕ ಆಚರಣೆಯಲ್ಲದೆ ಮತ್ತೇನು? ಮತ್ತು ಅದು ನ್ಯಾಯಬದ್ಧ ಚುನಾವಣೆ ಹೇಗಾಗುತ್ತದೆ? ಮುಂದುವರಿದು ಅಂಬೇಡ್ಕರರು “ನಾನು ನನ್ನ ಸ್ಥಾನವನ್ನು 13000 ಓಟುಗಳಿಂದ ಕಳೆದುಕೊಂಡೆ. ಡಾ.ದೇಶ್‍ಮುಖ್ ಮತ್ತು ಶ್ರೀ ಡಾಂಗೆ ಇಂತಹ ನೀಚ ತಂತ್ರಗೈಯದಿದ್ದರೆ ಕೇವಲ ಶ್ರೀ ಡಾಂಗೆಯವರು ಕುಲಗೆಡಿಸಿದ ಆ 39000 ಓಟುಗಳಲ್ಲೇ ಖಂಡಿತ ನಾನು ಬಹುಸಂಖ್ಯೆಯ ಓಟುಗಳನ್ನು ಪಡೆಯುತ್ತಿದ್ದೆ. (ಆ ಮೂಲಕ ಆಯ್ಕೆಯಾಗುತ್ತಿದ್ದೆ). ಈ ನಿಟ್ಟಿನಲ್ಲಿ ಮತದಾರರ ಮೇಲೆ ಹೀಗೆ ಶ್ರೀ ಡಾಂಗೆ ಮತ್ತು ಶ್ರೀ ದೇಶ್‍ಮುಖ್ ಅಕ್ರಮ ಪ್ರಭಾವ ಬೀರಿದ್ದಕ್ಕೆ ಸಾಕ್ಷಿಯಾಗಿ ಭಾರೀ ಸಂಖ್ಯೆಯ ಕುಲಗೆಟ್ಟ ಮತಗಳು(73,333) ನ್ಯಾಯಾಲಯದ ಮುಂದಿದೆ.
ನ್ಯಾಯಾಲಯ ಈ ವ್ಯಾಪಕ ಅಕ್ರಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇದರ ಆಧಾರದ ಮೇಲೆ ಬಾಂಬೆ ನಗರ ಉತ್ತರ ಆ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದ ಚುನಾವಣಾ ಭ್ರಷ್ಟ ಆಚರಣೆಗಳು ನಡೆದಿರುವುದರಿಂದ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 100ರ ಅಡಿಯಲ್ಲಿ ಆ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು” ಎಂದು ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ನಿಖರ ವಾದ ಮಂಡಿಸುತ್ತಾರೆ.
ಅಂಬೇಡ್ಕರರ ಈ ವಾದಕ್ಕೇ ಜಯ ಸಿಕ್ಕಿತೆ? ಖಂಡಿತ ಇಲ್ಲ. ಎಲ್ಲ ಚುನಾವಣಾ ವಿಚಾರಣೆಗಳಂತೆ ಇದೂ ಕೂಡ ‘ಹಿಯರಿಂಗ್ ಮುಂದಕ್ಕೆ’ ಎಂಬಂತೆ ಮುಂದೆ ಹೋಯಿತು. ಅಂಬೇಡ್ಕರರಿಗೆ ನ್ಯಾಯ ಧಕ್ಕಲಿಲ್ಲ. ಆದರೆ ಸತ್ಯ? ಅಂದರೆ ಅಂಬೇಡ್ಕರರನ್ನು ಈ ದೇಶದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ತಂತ್ರಗೈದು ಸೋಲಿಸಿದ ಸತ್ಯ? ಅವರೇ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ರೂಪದಲ್ಲಿ ಸದ್ಯ ನಮ್ಮ ಮುಂದೆ ಇದೆ. ಖಂಡಿತ, ಹೆಂಡ, ಬಾಡು, ದುಡ್ಡಿಗೆ ಚುನಾವಣೆ ಗೆಲ್ಲುತ್ತಿರುವ ಈ ಕಾಲದಲ್ಲಿ, ಹಾಗೆಯೇ ವಿವಿಧ ಜಾತಿಗಳನ್ನು ಎತ್ತಿಕಟ್ಟಿ, ಅಭ್ಯರ್ಥಿಗಳ ಮೂಲಕ ನಾನಾ ಅಪಪ್ರಚಾರ ನಡೆಸುವ ಈ ಕಾಲದಲ್ಲಿ ಅಂಬೇಡ್ಕರರ ಅಂದಿನ ಸೋಲು ಕೂಡ ಅಂತಹ ‘ಕಾಲದ’ ಕಹಿ ವಾಸ್ತವವಾಗುತ್ತದೆ.
ಯಾಕೆಂದರೆ ‘ವಿಕಿಪಿಡಿಯಾ ಅಂತರ್ಜಾಲ’ ತಾಣದಲ್ಲಿ ದಾಖಲಾಗಿರುವಂತೆ 1952ರ ಭಾರತದ ಪ್ರಥಮ ಲೋಕಸಭಾ ಚುನಾವಣೆಯ ಅತಿ ಪ್ರಮುಖ ಸೋಲು ಡಾ.ಅಂಬೇಡ್ಕರರದ್ದು! ಇಲ್ಲಿ ಪ್ರತ್ಯೇಕ ಮತದಾನ ಪದ್ಧತಿಯ ಅನಿವಾರ್ಯತೆಯನ್ನು ಕೂಡ ದಾಖಲಿಸಬೇಕಾಗುತ್ತದೆ. 1932ರಲ್ಲಿ ಅಂಬೇಡ್ಕರರು ಒತ್ತಾಯಿಸಿದ ಈ ಮತದಾನ ಪದ್ಧತಿ ಜಾರಿಯಾಗಿದಿದ್ದರೆ 1952ರಲ್ಲಿ ಅವರು ಖಂಡಿತ ಸೋಲುತ್ತಿರಲಿಲ್ಲ. ಜಿ.ವಿ.ದೇಶ್‍ಮುಖ್‍ರಂಥ ಹಿಂದೂ ಕೋಮುವಾದಿ ಅದೆಷ್ಟೇ ಕೋಮು ಪ್ರಚೋದನೆ ನಡೆಸಿದ್ದರೂ ‘ಪ್ರತ್ಯೇಕ ಮತದಾನ’ದ ಪರಿಶಿಷ್ಟರೇ ಪರಿಶಿಷ್ಟರಿಗೆ ಮಾತ್ರ ಮತ ಹಾಕುವ ಆ ಪದ್ಧತಿಯಲ್ಲಿ ಬಾಬಾಸಾಹೇಬರು ಸ್ಪಷ್ಟವಾಗಿ ಆಯ್ಕೆಯಾಗಿರುತ್ತಿದ್ದರು. ಆದರೆ ಅಂಬೇಡ್ಕರರ ಆ ಮಹತ್ವದ ಬೇಡಿಕೆಯನ್ನು ಮಹಾತ್ಮ ಗಾಂಧಿ ‘ಅರ್ಥಮಾಡಿಕೊಂಡು’ ಜಾರಿಯಾಗದಂತೆ ತಡೆದರು. ಆ ಮೂಲಕ ಅಂಬೇಡ್ಕರರ ಸೋಲಿಗೆ 1932ರಲ್ಲೇ ಗಾಂಧಿ ಮುನ್ನುಡಿ ಬರೆದಿದ್ದರು.
ಒಟ್ಟಾರೆ ಗಾಂಧಿಯವರ ಮುನ್ನುಡಿ ಮತ್ತು ಅದಕ್ಕೆ ಪೂರಕವಾಗಿ ಡಾಂಗೆ ಮತ್ತು ದೇಶ್‍ಮುಖ್‍ರ ಇಂತಹ ಚುನಾವಣಾ ಅಕ್ರಮದ ಬೆನ್ನುಡಿ ಈ ದೇಶದ ಜನರಿಗೆ ಓಟುಹಾಕುವ ಹಕ್ಕುಗಳಿಸಿಕೊಟ್ಟ ‘ಭಾರತದ ಪ್ರಜಾಪ್ರಭುತ್ವದ ಪಿತ’ ಅಂಬೇಡ್ಕರರ ಸೋಲಿಗೆ ಕಾರಣವಾದವು ಎಂಬುದು ಪ್ರಜಾಪ್ರಭುತ್ವದ ವ್ಯಂಗ್ಯವೆನಿಸಿದರೂ ಘಟಿಸಿರುವುದಂತೂ ಸತ್ಯ.
–ರಘೋತ್ತಮ ಹೊ.ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
-
ದಿನದ ಸುದ್ದಿ6 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ3 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ2 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

