ಬಹಿರಂಗ
ಪರಿಸರ ಪ್ರಜ್ಞೆಯ ಕೊರತೆಯ ನಡುವೆಯೇ ಮತ್ತೊಂದು ದಿನ..!
- ನಾ ದಿವಾಕರ
ನಮ್ಮ ಸುತ್ತಲಿನ ವಾತಾವರಣವನ್ನೂ ಮೀರಿದ ವಿಶಾಲ ಪ್ರಪಂಚದ ಅರಿವು ಅತ್ಯವಶ್ಯ.
ಮಾನವ ಸಮಾಜಕ್ಕೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳಿಗೂ ಒಂದು ದಿನಾಚರಣೆ ಇರುವುದು ಆಧುನಿಕ ಜಗತ್ತಿನ ವೈಶಿಷ್ಟ್ಯ. ಮನುಜ ಸಂಬಂಧಗಳು, ಸಾಮಾಜಿಕ ವಿದ್ಯಮಾನಗಳು, ಚಾರಿತ್ರಿಕ ದಿನಗಳು ವಾರ್ಷಿಕ ದಿನಾಚರಣೆಗಳ ರೂಪದಲ್ಲಿ ಸಾರ್ವಜನಿಕ ಜನಸಾಮಾನ್ಯರ ನಡುವೆ ಇತಿಹಾಸದ ಪ್ರಜ್ಞೆಯನ್ನು ಜಾಗೃತಗೊಳಿಸಿ, ವರ್ತಮಾನದ ಅರಿವನ್ನು ವಿಸ್ತರಿಸಲು ನೆರವಾಗುತ್ತವೆ.
ಮೂಲತಃ ಪಾಶ್ಚಿಮಾತ್ಯ ರಾಷ್ಟ್ರಗಳಿಂದಲೇ ಮೂಡಿಬಂದ ಈ ಆಚರಣೆಗಳು ಆಧುನಿಕ ಯುಗದಲ್ಲಿ, ಜಾಗತೀಕರಣಗೊಂಡ ಅರ್ಥವ್ಯವಸ್ಥೆಯಲ್ಲಿ ಮಾರುಕಟ್ಟೆ ಸಂಬಂಧಿತವಾಗಿಯೇ ಉಳಿದುಬಿಡುತ್ತವೆ. ಒಂದು ವಿಶಿಷ್ಟ, ನಿರ್ದಿಷ್ಟ ದಿನವನ್ನು ಏತಕ್ಕಾಗಿ ಆಚರಿಸಲಾಗುತ್ತದೆ , ಈ ಆಚರಣೆಯ ಮೂಲಕ ಏನನ್ನು ಸಾಧಿಸಲು ಹೊರಟಿದ್ದೇವೆ ಎಂಬ ಸಾಮಾನ್ಯ ಅರಿವೂ ಇಲ್ಲದೆ ಯಾಂತ್ರಿಕವಾಗಿ ಆಚರಿಸಲಾಗುವ ಹಲವು ದಿನಗಳನ್ನು ಕಾಣುತ್ತಲೇ ಬಂದಿದ್ದೇವೆ. ನಾಗರಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಮತ್ತು ಮಾನವ ಸಮಾಜದ ಉನ್ನತಿಗಾಗಿ ಸಾಮಾನ್ಯ ಜನರ ನಡುವೆ ಜಾಗೃತ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ದಿನಾಚರಣೆಗಳು ಸಾಗಬೇಕಾಗುತ್ತವೆ. ಇಂತಹ ಆಚರಣೆಗಳಲ್ಲೊಂದು ಇಂದು ಆಚರಿಸಲಾಗುತ್ತಿರುವ ವಿಶ್ವ ಪರಿಸರ ದಿನ.
ಭಾರತದ ಸಂದರ್ಭದಲ್ಲಿ ನೋಡಿದಾಗ ಸಾಮಾನ್ಯ ಪರಿಸರ ಪ್ರಜ್ಞೆಯೇ ಇಲ್ಲದಂತಹ ಒಂದು ಬೃಹತ್ ಜನಸಮೂಹ ನಮ್ಮ ನಡುವೆ ಇದೆ. ಪರಿಸರ ಎಂದ ಕೂಡಲೇ ಸಾಮಾನ್ಯ ಗ್ರಹಿಕೆಯು ಕಾಡು ಮೇಡು, ಬೆಟ್ಟ ಗುಡ್ಡ, ಜಲಮೂಲಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳತ್ತ ಹೊರಳುತ್ತದೆ. ಜೀವ ವೈವಿಧ್ಯತೆಯನ್ನು ಕಾಪಾಡಲು ಬೇಕಾದ ಹಸಿರು ವಲಯ ಇದರಲ್ಲಿ ಪ್ರಧಾನವಾಗಿ ಬಿಂಬಿತವಾಗುತ್ತದೆ. ಭಾರತದ ಅರಣ್ಯ ಇಲಾಖೆ ತನ್ನ 2021ರ ವರದಿಯನ್ನು ಬಿಡುಗಡೆ ಮಾಡಿದ್ದು 2019 ರಿಂದ 21ರ ಅವಧಿಯಲ್ಲಿ ಭಾರತದ ಒಟ್ಟು ಅರಣ್ಯ ಪ್ರದೇಶದಲ್ಲಿ 1540 ಚದರ ಕಿಲೋಮೀಟರ್ ಹೆಚ್ಚಳ ಕಂಡುಬಂದಿದೆ. 2021ರ ಭಾರತೀಯ ಅರಣ್ಯ ವರದಿಯ ಅನುಸಾರ ದೇಶದ ಒಟ್ಟು ಅರಣ್ಯ ಪ್ರದೇಶದ ವ್ಯಾಪ್ತಿ 7,13,789 ಚದರ ಕಿಲೋಮೀಟರ್ ಇದ್ದು, ಓಟ್ಟು ಭೌಗೋಳಿಕ ಪ್ರದೇಶದ ಶೇ 21.71ರಷ್ಟಿದೆ. 2019ರಲ್ಲಿ ಇದು ಶೇ 21.67ರಷ್ಟಿತ್ತು.
ಈ ವರದಿಯ ಅನುಸಾರ ಭಾರತದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಅರಣ್ಯಪ್ರದೇಶದ ವ್ಯಾಪ್ತಿ ಹೆಚ್ಚಾಗಿರುವುದು ಕಂಡುಬರುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಈ ದತ್ತಾಂಶಗಳಲ್ಲಿ ಕೆಲವು ತಾಂತ್ರಿಕ ತಕರಾರುಗಳನ್ನೂ ಗುರುತಿಸಲು ಸಾಧ್ಯ. ಹೆಚ್ಚಳವಾಗಿರುವ ಅರಣ್ಯ ಪ್ರದೇಶದ ವ್ಯಾಪ್ತಿಗೆ ಮೂಲಕ ಕಾರಣ, ರಿಮೋಟ್ ಸೆನ್ಸಿಂಗ್ ಮೂಲಕ ಮಾಡಲಾಗುವ ಈ ಸಮೀಕ್ಷೆಯಲ್ಲಿ ಮುಕ್ತ ಅರಣ್ಯಗಳನ್ನೂ ಒಳಗೊಳ್ಳಲಾಗಿದೆ. ಮುಕ್ತ ಅರಣ್ಯಗಳೆಂದರೆ ವಾಣಿಜ್ಯ ಪ್ಲಾಂಟೇಷನ್‌ಗಳನ್ನೂ ಸೇರಿಸಿಕೊಳ್ಳಲಾಗುತ್ತದೆ. ದಟ್ಟಾರಣ್ಯ ಪ್ರದೇಶಗಳನ್ನಷ್ಟೇ ಪರಿಗಣಿಸಿದಾಗ 2019-21ರ ಅವಧಿಯಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿರುವುದು ಕಂಡುಬರುತ್ತದೆ.
ಈ ವರದಿಯೊಂದಿಗೇ ಬಿಡುಗಡೆಯಾಗಿರುವ ಮಾಂಗಬೇ-ಇಂಡಿಯಾ ಸಮೀಕ್ಷೆಯ ಅನುಸಾರ 2009-19ರ ಒಂದು ದಶಕದ ಅವಧಿಯಲ್ಲಿ ಭಾರತದ ಈಶಾನ್ಯ ಪ್ರದೇಶದಲ್ಲಿ 3199 ಚದರ ಕಿಲೋಮೀಟರ್ ಅರಣ್ಯಪ್ರದೇಶ ಮರೆಯಾಗಿದೆ. ಇದು ಅತಂಕಕಾರಿ ವಿಚಾರವಾಗಿದೆ. ಏಕೆಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾ ಈ ರಾಜ್ಯಗಳನ್ನೊಳಗೊಳ್ಳುವ ಈಶಾನ್ಯ ಭಾರತ, ಜಗತ್ತಿನ 17 ಅತಿದೊಡ್ಡ ಜೀವವೈವಿಧ್ಯ ಉಷ್ಣ ಪ್ರದೇಶವಾಗಿದೆ. ಭಾರತದ ಒಟ್ಟು ಶೇ 7.98 ಭೌಗೋಳಿಕ ಪ್ರದೇಶವನ್ನು ಹೊಂದಿರುವ ಈಶಾನ್ಯ ಭಾರತ ಒಟ್ಟು ಶೇ 25ರಷ್ಟು ಅರಣ್ಯಪ್ರದೇಶವನ್ನು ಹೊಂದಿದೆ.
ಈ ಪ್ರದೇಶದಲ್ಲೇ ಅರಣ್ಯ ವಲಯ ಕ್ಷೀಣಿಸುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದ್ದು ಇದಕ್ಕೆ ಮೂಲ ಕಾರಣ ಅಭಿವೃದ್ಧಿ ಯೋಜನೆಗಳೇ ಆಗಿವೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಅರಣ್ಯ ಮತ್ತು ಜಲಸಂಪನ್ಮೂಲಗಳನ್ನೂ ಸೇರಿದಂತೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನೂ ಮಾರುಕಟ್ಟೆಯ ಉತ್ಪಾದನೆಯ ಮೂಲಗಳೆಂದೇ ಪರಿಗಣಿಸುವುದರಿಂದ, ನಿಸರ್ಗ ಶೋಷಣೆ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ 29 ಸಾವಿರ ಚದರ ಕಿಲೋಮೀಟರ್ ಅರಣ್ಯ ಪ್ರದೇಶಗಳು ಅಭಿವೃದ್ಧಿ ಯೋಜನೆಗಳಿಗೆ ಬಲಿಯಾಗಿವೆ.
ಇದರ ಪೈಕಿ 23 ಸಾವಿರ ಚದರ ಕಿಲೋಮೀಟರ್ ಕೈಗಾರಿಕಾ ಯೋಜನೆಗಳಿಗೇ ಬಲಿಯಾಗಿದೆ. ಮಧ್ಯಪ್ರದೇಶವೊಂದರಲ್ಲೇ ಈ ಅವಧಿಯಲ್ಲಿ 14 ಸಾವಿರ ಚದರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಗಣಿಗಾರಿಕೆ, ರಕ್ಷಣಾ ಯೋಜನೆಗಳು ಮತ್ತು ಜಲವಿದ್ಯುತ್ ಉತ್ಪಾದನೆಗಾಗಿ ನೀಡಲಾಗಿದೆ. ಸ್ವತಂತ್ರ ಅಧ್ಯಯನಗಳ ಪ್ರಕಾರ ಪಶ್ಚಿಮ ಘಟ್ಟಗಳ ನಾಲ್ಕೂ ವಲಯಗಳಲ್ಲಿ ಅರಣ್ಯ ಸಂಪತ್ತು ಕ್ಷೀಣಿಸುತ್ತಿದ್ದು ಉತ್ತರದಲ್ಲಿ ಶೇ 2.84, ಕೇಂದ್ರದಲ್ಲಿ ಶೇ 4.38 ಮತ್ತು ದಕ್ಷಿಣದಲ್ಲಿ ಶೇ 5.77ರಷ್ಟು ಅರಣ್ಯ ವಲಯ ಅಭಿವೃದ್ಧಿ ಯೋಜನೆಗಳ ಪಾಲಾಗಿದೆ. ಕೇಂದ್ರ ಸರ್ಕಾರದ ಬದಲಾದ ನೀತಿಗಳ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ 25 ಸಾವಿರ ಹೆಕ್ಟೇರ್ ಅಂದರೆ 250 ಚದರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗಳಿಗಾಗಿ ಒದಗಿಸಲಾಗುತ್ತದೆ. ಇವುಗಳಲ್ಲಿ ಮುಖ್ಯವಾಗಿ ಗಣಿಗಾರಿಕೆ, ರಕ್ಷಣಾ ಯೋಜನೆಗಳು, ಅಣೆಕಟ್ಟುಗಳು, ವಿದ್ಯುತ್ ಉತ್ಪಾದನೆ, ಕೈಗಾರಿಕೆ ಮತ್ತು ರಸ್ತೆ ಅಭಿವೃದ್ಧಿಯನ್ನು ಗುರುತಿಸಬಹುದು.
2019ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕೇಂದ್ರ ಪರಿಸರ ಸಚಿವಾಲಯವು ಛತ್ತಿಸ್‌ಘಡದ ದಟ್ಟ ಹಸದೇವ್ ಅರಂಡ್ ಅರಣ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಿ ಪರಿಸರ ನಿರಪೇಕ್ಷಣೆಯನ್ನು ನೀಡಿತ್ತು. ಈ ಪ್ರದೇಶದ 1 ಲಕ್ಷ 70 ಸಾವಿರ ಹೆಕ್ಟೇರ್ ದಟ್ಟಾರಣ್ಯವನ್ನು ಕಲ್ಲಿದ್ದಲು ಗಣಿಗಾರಿಕೆಗಾಗಿ ನೀಡಲಾಗಿತ್ತು. 30 ಕಲ್ಲಿದ್ದಲು ನಿಕ್ಷೇಪಗಳಿರುವ ಈ ಪ್ರದೇಶದಲ್ಲಿ ರಾಜಸ್ಥಾನ ವಿದ್ಯುತ್ ಉತ್ಪಾದನ್ ನಿಗಮ್ ನಿಗಮವು ವಿದ್ಯುತ್ ಉತ್ಪಾದನೆ ಮಾಡಲಿದ್ದು, ಇದರ ನಿರ್ವಹಣೆಯನ್ನು ಅದಾನಿ ಒಡೆತನದ ರಾಜಸ್ಥಾನ ಕೊಲೀರೀಸ್ ಲಿಮಿಟೆಡ್‌ಗೆ ನೀಡಲಾಗಿದೆ. ಈಗಾಗಲೇ 841 ಹೆಕ್ಟೇರ್ ದಟ್ಟಾರಣ್ಯ ಪ್ರದೇಶವನ್ನು ಈ ಕಂಪನಿಗೆ ಗುತ್ತಿಗೆಯ ಆಧಾರದಲ್ಲಿ ನೀಡಲಾಗಿದೆ.
ಕಳೆದ ಅಕ್ಟೋಬರ್ ಮಾಹೆಯಲ್ಲಿ ಛತ್ತೀಸ್ಘಡದ ಹಲವು ಸಂಘಟನೆಗಳು ಈ ಯೋಜನೆಗಳನ್ನು ವಿರೋಧಿ, ಅರಣ್ಯ ಒತ್ತುವರಿಯನ್ನು ತಡೆಗಟ್ಟುವ ಆಗ್ರಹದೊಂದಿಗೆ 300 ಕಿಲೋಮೀಟರ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದವು. ರಾಯ್‌ಪುರ ವಲಯದ 350ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಅಕ್ರಮ ಭೂ ಒತ್ತುವರಿಯ ವಿರುದ್ಧ ಈ ಹೋರಾಟದಲ್ಲಿ ಭಾಗವಹಿಸಿದ್ದವು. ಆದಾಗ್ಯೂ ಈ ವರ್ಷದ ಮಾರ್ಚ್ ಮಾಹೆಯಲ್ಲಿ ರಾಜ್ಯ ಸರ್ಕಾರವು ಪಾರ್ಸಾ ಕಲ್ಲಿದ್ದಲು ನಿಕ್ಷೇಪದ ಕಾರ್ಯಾಚರಣೆಗಾಗಿ 1136 ಹೆಕ್ಟೇರ್ ಭೂಮಿಯನ್ನು ಗಣಿಗಾರಿಕೆಗೆ ಬಳಸಿಕೊಳ್ಳಲು ನಿರಪೇಕ್ಷಣ ಪತ್ರವನ್ನು ನೀಡಿದೆ.
ಆಳುವ ವರ್ಗಗಳ ಈ ದ್ವಂದ್ವ ನೀತಿಗಳ ನಡುವೆಯೇ ಭಾರತ ಇಂದು ಹೆಚ್ಚಿನ ಉಷ್ಣಾಂಶದ ಅಪಾಯವನ್ನು ಎದುರಿಸುತ್ತಿದೆ. 2030ರ ವೇಳೆಗೆ ದೇಶದ ಒಟ್ಟು ಭೂ ಪ್ರದೇಶದ ಶೇ 30ರಷ್ಟನ್ನು ಅರಣ್ಯವಲಯವನ್ನಾಗಿ ಮಾಡುವ ಸರ್ಕಾರದ ಧ್ಯೇಯ ಸಾಕಾರಗೊಳ್ಳುವುದು ಬಹುಶಃ ಅಂಕಿಅಂಶಗಳಲ್ಲಿ ಮಾತ್ರವೇ ಸಾಧ್ಯ ಎನಿಸುತ್ತದೆ. ಅಥವಾ ಕಾಫಿ, ಚಹಾ, ತೆಂಗು ಮುಂತಾದ ಅರಣ್ಯೇತರ ಉತ್ಪನ್ನಗಳ ಪ್ಲಾಂಟೇಷನ್‌ಗಳನ್ನು ಒಳಗೊಳ್ಳುವ ಮೂಲಕ ಒಟ್ಟಾರೆ ಅರಣ್ಯ ಪ್ರದೇಶದ ಹೆಚ್ಚಳವನ್ನು ಬಿಂಬಿಸಬಹುದು. ಆದರೆ ಅರಣ್ಯವನ್ನೇ ನಂಬಿ ಬದುಕುವ ಸಾವಿರಾರು ಜೀವ ಪ್ರಬೇಧಗಳು ಮತ್ತು ಅರಣ್ಯ ಬದುಕನ್ನೇ ಆಶ್ರಯಿಸುವ ಲಕ್ಷಾಂತರ ಆದಿವಾಸಿ ಕುಟುಂಬಗಳ ಜೀವನೋಪಾಯಕ್ಕೆ ಅಂಕಿಅಂಶಗಳು ನೆರವಾಗುವುದಿಲ್ಲ. ದಿನದಿಂದ ದಿನಕ್ಕೆ ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುತ್ತಿರುವ ಆದಿವಾಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಈ ಆತಂಕಗಳ ನಡುವೆಯೇ ನಾವು ಮತ್ತೊಂದು ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ಪರಿಸರ ಮಾಲಿನ್ಯ ಎಂದರೆ ಕೇವಲ ಕಾರ್ಖಾನೆಯಿಂದ ಹೊರಸೂಸಲಾಗುವ ಇಂಗಾಲ ಅಥವಾ ಕೈಗಾರಿಕಾ ತ್ಯಾಜ್ಯಗಳು ಮಾತ್ರವೇ ಅಲ್ಲ. ಅಥವಾ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಸಮೀಕರಣಕ್ಕೊಳಗಾಗಿರುವ ಶಬ್ದಮಾಲಿನ್ಯದ ಮಾದರಿಗಳೂ ಅಲ್ಲ. ನಾವು ಬದುಕುತ್ತಿರುವ ಸಮಾಜದಲ್ಲಿ ನಿತ್ಯ ಕಾಣುತ್ತಿರುವ ಪರಿಸರ ಮಾಲಿನ್ಯ ಮತ್ತು ಜಲಮಾಲಿನ್ಯದ ಕಾರಣಗಳನ್ನು ಶೋಧಿಸುವುದರಲಿ, ಗುರುತಿಸಲೂ ಆಧುನಿಕ ನಾಗರಿಕತೆ ವಿಫಲವಾಗುತ್ತಿದೆ. ಬೃಹತ್ ಬೆಟ್ಟಗಳು, ಬೃಹದಾಕಾರದ ಬಂಡೆಗಳು ನಗರ ಸಂಸ್ಕೃತಿಯ ಗ್ರಾನೈಟ್ ಸಂಸ್ಕೃತಿಯ ಬಲಿಪಶುಗಳಾಗುತ್ತಿವೆ. ಕರಗುತ್ತಿರುವ ಈ ಬೆಟ್ಟಗಳು ಭವಿಷ್ಯದಲ್ಲಿ ಭೌಗೋಳಿಕ ಅಸಮತೋಲನ ಉಂಟುಮಾಡುವ ಅಪಾಯ ಒಂದೆಡೆಯಾದರೆ, ವರ್ತಮಾನದಲ್ಲೇ ಕಲ್ಲಿದ್ದಲು ಗಣಿಗಳ ಕುಸಿತ, ಕಲ್ಲುಗಣಿಗಳ ಸ್ಫೋಟ ಮತ್ತು ಬಂಡೆಗಳ ಕುಸಿತದಿಂದ ಸಾವಿರಾರು ಶ್ರಮಜೀವಿಗಳ ಜೀವ ಹರಣವಾಗುತ್ತಿದೆ.
ಜಲಸಂಪನ್ಮೂಲಗಳನ್ನು ರಕ್ಷಿಸುವ ಯಾವುದೇ ವೈಜ್ಞಾನಿಕ ಆಡಳಿತ ನೀತಿಯನ್ನು ಜಾರಿಗೊಳಿಸದ ಸರ್ಕಾರಗಳು ನದಿಗಳು ತುಂಬಿ ಹರಿದಾಗ ಬಾಗಿನ ಅರ್ಪಿಸಲು ತೋರುವಷ್ಟು ಆಸ್ಥೆ ಆ ನದಿ ನೀರಿನ ರಕ್ಷಣೆಯ ಬಗ್ಗೆ ತೋರುವುದಿಲ್ಲ. ಪೂಜನೀಯವಾಗಿ ಕಾಣಲಾಗುವ ಜಲಮೂಲಗಳನ್ನು, ನದಿಗಳನ್ನು ಮಾರುಕಟ್ಟೆ ಬಳಕೆಯ ವಸ್ತುಗಳಂತೆ ಪೋಲು ಮಾಡುತ್ತಿರುವುದನ್ನು ಮತ್ತು ನಗರಗಳ ಐಷಾರಮಿ ಬದುಕಿನ ಕಚ್ಚಾವಸ್ತುಗಳಂತೆ ಬಳಸುತ್ತಿರುವುದನ್ನು ಸದ್ದು ಮಾಡದೆ ಗಮನಿಸುತ್ತಲೇ ಇದ್ದೇವೆ.
ಮೈಸೂರಿನ ಪ್ರತಿಷ್ಠಿತ ಚಾಮುಂಡಿ ಬೆಟ್ಟವೂ ಈ ಆಧುನಿಕತೆ, ಧಾರ್ಮಿಕತೆ ಮತ್ತು ಪ್ರವಾಸೋದ್ಯಮದ ವಾಣಿಜ್ಯ ಹಿತಾಸಕ್ತಿಗಳಿಗೆ ಬಲಿಯಾಗುತ್ತಿದ್ದು, ರೋಪ್‌ವೇ ನಿರ್ಮಿಸುವ ಮೂಲಕ ಅಲ್ಲಿನ ಜೈವವೈವಿಧ್ಯತೆಗೆ ಸಂಚಕಾರ ತರಲು ಎಲ್ಲ ಸಿದ್ಧತೆಗಳೂ ನಡೆದಿವೆ. ಕಲ್ಲಿದ್ದಲು ಗಣಿಗಾರಿಕೆಯಾಗಲೀ, ಅಣು ವಿದ್ಯುತ್ ಉತ್ಪಾದನೆಯಾಗಲೀ ಅಥವಾ ಬೃಹತ್ ಅಣೆಕಟ್ಟುಗಳೇ ಆಗಲಿ, ಅರಣ್ಯ ಸಂಪತ್ತಿನ ಸಮಾಧಿಯ ಮೇಲೆ ನಿರ್ಮಿತವಾಗುವ ಈ ಮಾರುಕಟ್ಟೆ ಸಾಮ್ರಾಜ್ಯಗಳನ್ನು ವಿರೋಧಿಸುವುದೂ ಸಹ “ ದೇಶದ್ರೋಹ ” ಅಥವಾ “ ಅಭಿವೃದ್ಧಿ ವಿರೋಧ ” ಎಂಬ ಹಣೆಪಟ್ಟಿಯನ್ನು ಹೊತ್ತು ಹೋರಾಟ ನಡೆಸಬೇಕಿದೆ.
ನಗರೀಕರಣ ಹೆಚ್ಚಾದಂತೆಲ್ಲಾ ಜನದಟ್ಟಣೆ ಮತ್ತು ವಾಹನದಟ್ಟಣೆಯೂ ಹೆಚ್ಚಾಗುತ್ತಿದ್ದು, ಆಧುನಿಕ ನಾಗರಿಕತೆಯಲ್ಲಿ ಈ ದಟ್ಟಣೆಯಿಂದುಂಟಾಗುವ ಪರಿಸರ ಮಾಲಿನ್ಯದ ಪರಿಜ್ಞಾನವೇ ಇಲ್ಲದಂತಾಗುತ್ತಿದೆ. ವಾಹನಗಳು ಉಗುಳುವ ಹೊಗೆ, ದಿನಕ್ಕೆ 20 ಗಂಟೆಗಳ ಕಾಲವಾದರೂ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯ, ನಗರೀಕೃತ ಜೀವನದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಮತ್ತೊಬ್ಬರ ಹೊಣೆಯನ್ನಾಗಿ ಮಾಡಿರುವ ಆಧುನಿಕ ಮಾನವ ಸಮಾಜದ ಬೇಜವಾಬ್ದಾರಿ ನಡವಳಿಕೆ ಇವೆಲ್ಲವೂ ನಮ್ಮ ಸುತ್ತಲಿನ ಪರಿಸರವನ್ನೇ ಗೊಬ್ಬರದ ಗುಂಡಿಗಳನ್ನಾಗಿ ಮಾಡುತ್ತಿದೆ.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಣೆ, ಶೇಖರಣೆ, ಸಂಸ್ಕರಣೆ ಮತ್ತು ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಕೋಟ್ಯಂತರ ರೂಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೂ ರಸ್ತೆಬದಿಯ ಕಸದ ರಾಶಿ ಇಲ್ಲದ ಬಡಾವಣೆಗಳನ್ನು ಎಲ್ಲೆಂದರಲ್ಲಿ ಕಾಣಬಹುದಾಗಿದೆ. ಗಂಗಾನದಿಯ ಮಾಲಿನ್ಯದ ಬಗ್ಗೆ ಸದಾ ಪರಿತಪಿಸುತ್ತಾ ಭಾವುಕವಾಗುವ ಮಧ್ಯಮ ವರ್ಗದ ಮನಸುಗಳು ತಮ್ಮ ರಸ್ತೆಯಲ್ಲೇ ಇಕ್ಕೆಲಗಳಲ್ಲಿರುವ ಕಸದ ರಾಶಿಯನ್ನು ಕಂಡೂ ಕಾಣದಂತೆ ಇರುತ್ತವೆ. ಈ ಕಸದ ರಾಶಿಯೇ ಬೀಡಾಡಿ ದನಗಳಿಗೆ ಭೂರಿಭೋಜನದ ಕೇಂದ್ರಗಳೂ ಆಗಿರುತ್ತವೆ.
ಅಂದರೆ, ಸಾರ್ವಜನಿಕ ಪರಿಕಲ್ಪನೆಯಲ್ಲಿ “ ಪರಿಸರ ” ಒಂದು ಅಮೂರ್ತ ಪ್ರಜ್ಞೆಯಾಗಿ ಮಾತ್ರ ಕಂಡುಬರುತ್ತಿದೆ. ಅಥವಾ ಅತೀತತೆಯ ನೆಲೆಯಲ್ಲಿ, ಭಾವನಾತ್ಮಕತೆಯ ನೆಲೆಯಲ್ಲಿ ಮಾತ್ರವೇ ಕಂಡುಬರುತ್ತಿದೆ. ಹಾಗಾಗಿಯೇ ನದಿ ಸ್ವಚ್ಚತೆಯ ಬಗ್ಗೆ ಉಪನ್ಯಾಸಗಳನ್ನು ನೀಡುವವರೂ ಸಹ, ನದಿ ತೀರಗಳಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳನ್ನಾಗಲೀ, ಅದರಿಂದ ಉಂಟಾಗುವ ಮಾಲಿನ್ಯವನ್ನಾಗಲೀ ಗಂಭೀರವಾಗಿ ಪರಿಗಣಿಸುವುದೇ ಇಲ್ಲ.
ಮೈಸೂರಿನ ಸುತ್ತಲಿನ ಕಾವೇರಿ, ಕಪಿಲೆ, ಕಬಿನಿ ನದಿಯ ತೀರಗಳಲ್ಲಿ ನಡೆಯುವ ಚಟುವಟಿಕೆಗಳನ್ನು ನಿರ್ಬಂಧಿಸುವುದು ಪರಿಸರ ಪ್ರಜ್ಞೆಯ ಒಂದು ಭಾಗವಾದಾಗ ಮಾತ್ರವೇ ನಮ್ಮ ಜಲಮಾಲಿನ್ಯ ಕುರಿತ ಪ್ರಲಾಪಗಳಿಗೆ ಅರ್ಥ ಮೂಡಲು ಸಾಧ್ಯ. ಇಲ್ಲಿ ಧಾರ್ಮಿಕ ನಂಬಿಕೆಗಳ ಪ್ರಶ್ನೆ ಎದುರಾಗುವುದಾದರೂ, ನದಿ ನೀರನ್ನು ಮಲಿನಗೊಳಿಸದೆಯೇ ಈ ವಿಧಿವಿಧಾನಗಳನ್ನು ಆಚರಿಸಬಹುದಾದ ಮಾರ್ಗಗಳನ್ನೂ ಕಂಡುಕೊಳ್ಳಬೇಕಿದೆ. ಜನಸಾಮಾನ್ಯರ ಶ್ರದ್ಧಾಭಕ್ತಿಗಳಿಗೆ ಭಂಗ ಉಂಟುಮಾಡದೆಯೇ ಈ ನದಿಗಳ ಮತ್ತು ಬೆಟ್ಟಗುಡ್ಡಗಳ ನೈಸರ್ಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಶಾಲ ಮನೋಭಾವವನ್ನು ಆಧುನಿಕ ಸಮಾಜ ರೂಢಿಸಿಕೊಳ್ಳಬೇಕಿದೆ.
ಇದಕ್ಕೆ ಅಡ್ಡಿಯಾಗಬಹುದಾದ ಮಾರುಕಟ್ಟೆ, ವಾಣಿಜ್ಯ ಮತ್ತು ಪ್ರವಾಸೋದ್ಯಮದ ಹಿತಾಸಕ್ತಿಗಳಿಗೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳೂ ಬಂಡವಾಳದ ಮೂಲಗಳಾಗಿಯೇ ಕಾಣುವುದರಿಂದ, ಆಡಳಿತ ನೀತಿಯನ್ನು ರೂಪಿಸುವ ಸರ್ಕಾರಗಳು ತಮ್ಮ ನಿಸರ್ಗ ಪ್ರಜ್ಞೆ ಮತ್ತು ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಸೂಕ್ಷ್ಮಗೊಳಿಸಬೇಕಿದೆ. ಬಂಡವಾಳಶಾಹಿ ಅಭಿವೃದ್ಧಿಯ ಮಾದರಿಗಳು ನಿಸರ್ಗವನ್ನು ಶೋಷಣೆಗೊಳಪಡಿಸುವುದೇ ಅಲ್ಲದೆ ಪರಿಸರ ಅಸಮತೋಲನವನ್ನು ಹೇಗೆ ಸೃಷ್ಟಿಸುತ್ತದೆ ಎನ್ನಲು ಕೇದಾರನಾಥದಲ್ಲಿ ನಡೆಯುತ್ತಿರುವ ಭೂಕುಸಿತಗಳು, ಎರಡು ವರ್ಷದ ಹಿಂದೆ ಕರ್ನಾಟಕದ ಕೊಡಗಿನಲ್ಲಿ ಸಂಭವಿಸಿದ ಅನಾಹುತಗಳು ಕೇವಲ ನಿದರ್ಶನಗಳಷ್ಟೇ. ಆಧುನಿಕ ನಗರೀಕರಣ ಪ್ರಕ್ರಿಯೆಗೆ ಬಲಿಯಾಗುತ್ತಿರುವ ನದಿ ತೀರಗಳು ಮರಳು ಗಣಿಗಾರಿಕೆಯಿಂದ ಒಡಲು ಬರಿದುಮಾಡಿಕೊಳ್ಳುತ್ತಿರುವಂತೆಯೇ, ನಿಸರ್ಗ ಸಮತೋಲನ ಕಾಪಾಡುವ ಬೆಟ್ಟಗುಡ್ಡಗಳು ನಿರ್ಮಾಣ ಕಾಮಗಾರಿಗಳಿಗೆ ಜಲ್ಲಿ, ಕಲ್ಲು, ಎಮ್‌ಸ್ಯಾಂಡ್ ಪೂರೈಸುವ ಸಲುವಾಗಿ ಬರಿದಾಗುತ್ತಿವೆ.
ಮೈಸೂರಿನಲ್ಲೇ ಇರುವ ತ್ಯಾಜ್ಯ ವಿಲೇವಾರಿ ಘಟಕವನ್ನು “ ಸೂಯೆಜ್ ಫಾರ್ಮ್ ” ಎಂದು ಮುದ್ದಾಗಿ ಕರೆಯಲಾಗುತ್ತದೆ. ವಾಸ್ತವದಲ್ಲಿ ಅದು “ ಸೆವೇಜ್ ಫಾರ್ಮ್ ” ಅಂದರೆ ಇಡೀ ನಗರದ ತ್ಯಾಜ್ಯವನ್ನು ಸಂಗ್ರಹಿಸುವ ಬೃಹತ್ ಕಸದ ಬೆಟ್ಟಗಳನ್ನು ಹೊಂದಿರುವ ಒಂದು ತಾಣ. ಈ ತಾಣದ ಸುತ್ತಲಿನ ಜನತೆ ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳು ಮೈಸೂರು ಮಹಾನಗರ ಪಾಲಿಕೆಯನ್ನಾಗಲೀ, ಅದೇ ವಲಯದಲ್ಲಿ ವಾಸಿಸುವ ಜನಪ್ರತಿನಿಧಿಗಳಿಗಾಗಲೀ ಸಮಸ್ಯೆ ಎನಿಸುತ್ತಲೇ ಇಲ್ಲ.
ಆದರೂ ಅಲ್ಲಿನ ನಿವಾಸಿಗಳು ತಮ್ಮ ಜೀವನ ನಿರ್ವಹಣೆಗಾಗಿ ಆರೋಗ್ಯ ಕಾಪಾಡಿಕೊಂಡು, ಹಲವು ಅನಾರೋಗ್ಯಗಳೊಂದಿಗೇ ಬದುಕುತ್ತಿದ್ದಾರೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಅನಾರೋಗ್ಯವನ್ನು ತಪ್ಪಿಸುವ ಯಾವುದೇ ಯೋಜನೆ ಇರುವುದಿಲ್ಲ ಬದಲಾಗಿ ತಲೆದೋರುವ ಅನಾರೋಗ್ಯಗಳ ನಿವಾರಣೆಗೆ “ ಕಲ್ಯಾಣ ಯೋಜನೆಗಳನ್ನು ” ರೂಪಿಸಲಾಗುತ್ತದೆ. ಯಶಸ್ವಿನಿ, ಜನೌಷಧಿ, ಆಯುಷ್ಮಾನ್ ಇತ್ಯಾದಿ. ಇದು ಬಂಡವಾಳ ವ್ಯವಸ್ಥೆಯ ದ್ವಂದ್ವಗಳಲ್ಲಿ ಅತ್ಯಂತ ಪ್ರಧಾನವಾದುದು.
ಈ ಕಾಳಜಿ, ಕಳಕಳಿ ಮತ್ತು ದ್ವಂದ್ವಗಳ ನಡುವೆಯೇ ನಾವು ಮತ್ತೊಂದು ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ಕಸ ಆಯಲು ಬರುವವರು ಕೈಗವುಸುಗಳಿಲ್ಲದ, ಮುಖಗವುಸುಗಳಿಲ್ಲದೆ, ಸೂಕ್ತ ವೇತನ ಸೌಲಭ್ಯಗಳೂ ಇಲ್ಲದೆ ತಮ್ಮ ಜೀವವನ್ನೇ ಪಣಕಟ್ಟಿಟ್ಟು ಮನೆಮನೆಗೆ ಬರುತ್ತಿರುತ್ತಾರೆ. ಆದರೂ ರಸ್ತೆಯ ಇಕ್ಕೆಲಗಳಲ್ಲಿ ತಾಜ್ಯದ ರಾಶಿ ರಾರಾಜಿಸುತ್ತಿರುತ್ತದೆ. ಮತಯಾಚನೆಗೆ ಬರುವ ಜನಪ್ರತಿನಿಧಿಗಳು ಮೂಗಿನೊಂದಿಗೆ ಒಳಗಣ್ಣನ್ನೂ ಮುಚ್ಚಿಕೊಂಡು ಹಾದು ಹೋಗಿಬಿಡುತ್ತಾರೆ.
ಬೀಡಾಡಿ ದನಗಳು ಈ ಕಸದ ರಾಶಿಗಳಲ್ಲಿ ಬಾಯಾಡಿಸಿ ಮತ್ತಷ್ಟು ಹರಡಿಬಿಡುತ್ತವೆ. ಸುತ್ತ ವಾಸಿಸುವ ನಾಗರಿಕರು, ಗಂಗೆಯ ಪಾವಿತ್ರ್ಯತೆ, ಹಿಮಾಲಯದ ಭವ್ಯತೆಯ ಭ್ರಮೆಯಲ್ಲಿ ತೇಲಾಡುತ್ತಾ ಸ್ವಚ್ಚ ಭಾರತದ ಫಲಾನುಭವಿಗಳಾಗಿ ತಮ್ಮ ಬದುಕು ಸವೆಸುತ್ತಾ ಸಾಗುತ್ತಾರೆ. ಪರಿಸರ ಮಾಲಿನ್ಯ ಬಾಧಿಸಬೇಕಿರುವುದು ಈ ಜನತೆಯನ್ನು, ಜಾಗೃತಿ ಮೂಡಿಸಬೇಕಿರುವುದು ಈ ಜನತೆಯ ನಡುವೆ, ಸಾರ್ವಜನಿಕ ವೇದಿಕೆ ಅಥವಾ ವಿಚಾರ ಸಂಕಿರಣಗಳಲ್ಲಿ ಅಲ್ಲ. ಈ ಸುಡುವಾಸ್ತವವನ್ನು ಅರ್ಥಮಾಡಿಕೊಂಡರೆ ಪರಿಸರ ದಿನಾಚರಣೆಯೂ ಸಾರ್ಥಕವಾದೀತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

-
ದಿನದ ಸುದ್ದಿ3 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ2 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ3 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ3 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ಅಂಕಣ1 day agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ1 day agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ


