ಲೈಫ್ ಸ್ಟೈಲ್
ಈಚಲುಹುಳದ (ಈಸುಳ್ಳಿ) ವರ್ಮಿ ಚಾಟ್ಸ್..!
ನಮ್ಮ ಗ್ರಾಮೀಣ ತಳಸ್ತರ ಜನರು ಸಸ್ಯಾಹಾರದೊಂದಿಗೆ, ಬೇಟೆಯಾಡಿ ಅಟ್ಟುಣ್ಣುವ ಮೊಲ, ಮುಂಗುಸಿ, ಆಮೆ, ಅಳಿಲು, ಉಡ, ಕಮ್ಮಾರ ಕಾಗೆ, ಸರ್ಲೆ ಹಕ್ಕಿ, ಕೊಕ್ಕರೆ, ನೀರುಕೋಳಿ, ಕಾಡುಕೋಳಿ, ಬುಲ್ಡೆಮುಳುಗ ಪಕ್ಷಿ, ಮೀನು, ಸೀಗಡಿ, ಕೆಂಜುಗ, ಏಡಿಕಾಯಿ, ಮಳೆಗಾಲದಲ್ಲಿ ಹುತ್ತದಿಂದ ಉಕ್ಕಿ ಬರುವ ಈಚಲು ಹುಳು (ಈಸುಳ್ಳಿ), ಹುತ್ತದ ಗೆಜ್ಜಲರಾಣಿ ಹುಳು (ತುಪ್ಪದ ಈಚಲು), ಹೊಲಗದ್ದೆಗಳಲ್ಲಿರುವ ತ್ವಾಡ, ಬೆಳ್ಳಿಲಿ, ಬಾರುಬೆಕ್ಕು, ಮನೆಬೆಕ್ಕು, ಹೊಲಗದ್ದೆಗಳ ಅಕ್ಕಡಿಸಾಲು ಗಿಡಗಳಲ್ಲಿ ಗೂಡು ಕಟ್ಟಿ ಜೀವಿಸುವ ಪುರ್ಲಕ್ಕಿ, ಪಾರಿವಾಳ, ಬೆಳವ, ಗದ್ದೆ ಮಿಡತೆ ಮುಂತಾದ ಸಣ್ಣ ಪುಟ್ಟ ಜೀವಿಗಳನ್ನು ಬೇಟೆಯಾಡಿ ತಿನ್ನುತ್ತಾರೆ.
ಕೇರೆ ಹಾವಿನ ಬಾಡೆಸರನ್ನು ಬಿದಿರು ಗೊಟ್ಟದಲ್ಲಿ ತುಂಬಿ ಉಳುವ ದನಗಳಿಗೆ ಕುಡಿಸಿದ ಬಳಿಕ ಮಿಕ್ಕ ಮಾಂಸವನ್ನು ತಾವೂ ತಿಂದು ತಮ್ಮ ಬೇಟೆ ನಾಯಿಗಳಿಗೂ ತಿನ್ನಿಸುತ್ತಾರೆ. ಕೇರೆ ಹಾವಿನ ಬಾಡಾಮ್ರ ಕುಡಿದ ಹೋರಿಗಳು ಸುಂಕೇರಿ ಯಾವಾಗಲೂ ಸಿರಸಿರನೆ ಸಿರಗುಡತೊಡಗಿದರೆ, ಬೇಟೆ ನಾಯಿಗಳು ಮತ್ತು ಮಂದಬುದ್ಧಿಯವರು ಚುರುಕಾಗುತ್ತಾರೆ ಹಾಗೂ ಗಂಡಸರು ಸದಾ ಸಿಟ್ಟು ಕ್ವಾಪ ಕಾತಾಳ ಕ್ಯಾಣಗಳನ್ನು ಪ್ರದರ್ಶಿಸುವ ‘ಕಡಿದುಗಾರ ಗಂಡಸರು’ ಆಗುತ್ತಾರೆಂದು ನಂಬುತ್ತಾರೆ. ಕೇರೆ ಹಾವಿನ ಹುಳಿಸಾರನ್ನು ಮನುಷ್ಯರು ಸೇವಿಸುವುದನ್ನು ಆದಷ್ಟು ಅವಾಯ್ಡ್ ಮಾಡುತ್ತಾರೆ.
ಬೆಳವ, ಕೌಜಲ, ಪಾರಿವಾಳ, ಪುರ್ಲಕ್ಕಿ (ಪುರುಡಕ್ಕಿ) ಮುಂತಾದ ಸಣ್ಣ ಗಾತ್ರದ ಪಕ್ಷಿಗಳ ಮೊಟ್ಟೆಗಳನ್ನು ಸಗಣಿ ಉಂಡೆಯಲ್ಲಿಟ್ಟು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ. ಪೊದೆಗಿಡಗಳಿಂದ ಇದ್ದಕ್ಕಿದ್ದಂತೆ ಪುರ್ರನೆ ಹಾರುವ ಪುರುಡಕ್ಕಿಯನ್ನು ನೋಡಿದ ಕೂಡಲೇ, ‘ಪುರುಡಕ್ಕಿ ಪುರ್ರಂತು- ಮಾವನ ತರಡು ಜಲ್ಲಂತು’ ಎಂದು ಆ ಹಕ್ಕಿಯನ್ನು ಹಿಡಿಯಲು ಪ್ರಯತ್ನಿಸುತ್ತಾರೆ.
ಮುಂಗಾರು ಮಳೆಗಾಲದಲ್ಲಿ ಮಳೆ ಸುರಿದು ನಿಂತಾಗ, ಹುತ್ತದಿಂದ ಉಕ್ಕಿ ಹೊರಗೆ ಹಾರಿಹೋಗುವ ಈಚಲಹುಳುಗಳನ್ನು ರಾತ್ರಿ ವೇಳೆ ಸುಡಿಗೆ ಗರಿಗಳ ಜ್ವಾಲೆಗೆ ಆಕರ್ಷಿಸಿ ರೆಕ್ಕೆ ಸುಟ್ಟು ಹಿಡಿಯುತ್ತಾರೆ. . ಗೆದ್ದಲು ಜಾತಿಗೆ ಸೇರಿದ ಈಚಲ ಹುಳುಗಳನ್ನು ಇಂಗ್ಲೀಷಿನಲ್ಲಿ ‘ವಿಂಗ್ಡ್ ವೈಟ್ ಆ್ಯಂಟ್ಸ್’ ಎಂದು ಕರೆಯುತ್ತಾರೆ. ಗೆದ್ದಲು ಹುಳುಗಳೇ ಬೆಳೆದು ರೆಕ್ಕೆ ಮೂಡಿ ಈಚಲು ಹುಳಗಳಾಗಿ ರೂಪಾಂತರವಾಗುತ್ತವೆ. ಹುತ್ತದ ತಳದಲ್ಲಿ ಈಚಲಹುಳಗಳ ಸಾಮ್ರಾಜ್ಯದ ಅಧಿಪತಿಯಾಗಿ ರಾಣಿಹುಳು ಅಥವಾ ತುಪ್ಪದ ರಾಣಿಹುಳ ಇರುತ್ತದೆ. ಇದರ ಸಣ್ಣ ತಲೆಯನ್ನು ಉಗುರಿನಿಂದ ಚಿವುಟಿ ತೆಗೆದೆಸೆದು ಇಡೀ ಉಂಡೆ ಹುಳುವನ್ನು ಒಮ್ಮೆಲೆ ಗಂಟಲಿನೊಳಗೆ ಇರಿಸಿಕೊಂಡು ಮಾತ್ರೆಯಂತೆ ನುಂಗಿಬಿಡುತ್ತಾರೆ.
ಎಲ್ಲಾ ಕಾಲಗಳಲ್ಲೂ ಸಿಗುವ ಮೀನು ಸೀಗಡಿ ಏಡಿಕಾಯಿಗಳಂತೆ ಈಚಲು ಹುಳುಗಳು ಸದಾಕಾಲ ಸಿಗುವುದಿಲ್ಲ. ಇವು ಸಿಗುವುದು ಮುಂಗಾರಿನಲ್ಲಿ ಮಾತ್ರ. ಈಚಲು ಹುಳುಗಳು ಬೀದಿಗಳ ಕರೆಂಟ್ ಕಂಬದ ದೀಪದ ಬೆಳಕಿಗೆ ಆಕರ್ಷಿತವಾಗಿ ಗುಂಪುಗಳಲ್ಲಿ ಹಾರಿ ಬಂದು, ಅಪಾರ ಹುಳುಗಳು ದೀಪದ ಶಾಖಕ್ಕೆ ರೆಕ್ಕೆ ಕಳಚಿ ಬೀಳುತ್ತವೆ. ಹೀಗೆ ಬೀದಿ ದೀಪದ ಬೆಳಕಿಗೆ ಬರುವ ಹುಳುಗಳನ್ನು ಜನರು ತೆಂಗಿನಗರಿ ಅಥವಾ ಅಡಕೆ ಗರಿಗಳ ಸುಡಿಗೆ ಸೂಡುಗಳಿಂದ ತಮ್ಮತ್ತ ಸೆಳೆದು ಕಡ್ಡಿಪೊರಕೆಯಿಂದ ಗುಡಿಸಿ, ಮಡಕೆಗಳಿಗೆ ತುಂಬಿಕೊಂಡು, ಕಳಚಿದ ರೆಕ್ಕೆ ಕಸಕಡ್ಡಿ ಕೇರಿ ನೇರ್ಪು ಮಾಡಿಕೊಳ್ಳುತ್ತಾರೆ.
ಈಚಲಹುಳುಗಳನ್ನು ಬೇಟೆಯಾಡಲು ಅನೇಕ ತಂತ್ರಗಳನ್ನು ಅನುಸರಿಸಲಾಗುತ್ತದೆ. ಹುಳುಗಳಿರುವ ಹುತ್ತವನ್ನು ಹುಡುಕಿ ಕ್ವಾವೆಗಳನ್ನೆಲ್ಲಾ ಅಂಟು ಮಣ್ಣಿನಿಂದ ಮುಚ್ಚಿ ಮುದ್ರೆಮಾಡಿ ಹುತ್ತದ ತಳದಲ್ಲಿ ಒಂದೇ ಒಂದು ಕ್ಯಾವೆಯನ್ನು ಮಾತ್ರ ತೆರೆದಿರಿಸಿ, ತಂಗಡಿ ಗಿಡದ ಸೊಪ್ಪನ್ನು ಅಥವಾ ಲಕ್ಕಿಗಿಡದ ಸೊಪ್ಪನ್ನು ಹುತ್ತದ ಕ್ವಾವೆಗಳ ಮೇಲೆ ಮಂದವಾಗಿ ಹರಡಿ ಗಾಳಿ ಸುಳಿಯದಂತೆ ಹುತ್ತವನ್ನು ಮುಚ್ಚುತ್ತಾರೆ. ಹುತ್ತದ ಬುಡದಲ್ಲಿ ಮುಚ್ಚದೇ ತೆರೆದಿರಿಸಿರುವ ಕ್ಯಾವೆಯ ಹತ್ತಿರ 2X2 ಅಡಿಗಳಷ್ಟು ಗುಂಡಿಯನ್ನು ತೋಡಿ ಆ ಗುಂಡಿಯೊಳಕ್ಕೆ ಹುಳಗಳು ಹರಿದುಹೋಗುವಂತೆ ವ್ಯವಸ್ಥೆಮಾಡಿ ಗುಂಡಿಯ ಅರ್ಧ ಪ್ರಮಾಣ ನೀರುತುಂಬಿ ಮೇಲ್ಭಾಗಕ್ಕೆ ಅತ್ತಲಿತ್ತಲೂ ಅಡ್ಡಡ್ಡವಾಗಿ ಲಕ್ಕಿಸೊಪ್ಪು ಅಥವಾ ತಂಗಡಿ ಸೊಪ್ಪನ್ನು ಹರಡುತ್ತಾರೆ. ಹುಳುಗಳು ಆ ಸೊಪ್ಪಿನ ಕೆಳಕ್ಕೆ ಹರಿದುಬಂದು ಸೊಪ್ಪಿನ ಕಾವಿನಲ್ಲಿ ರೆಕ್ಕೆ ಕಳೆದುಕೊಂಡು, ಹಸಿ ಸೊಪ್ಪಿನ ಗಮಲಿಗೆ ಅಮಲೇರಿ ಗುಪ್ಪೆಯಾಗಿ ಗುಂಡಿಯೊಳಗೆ ಬಿದ್ದಿರುತ್ತವೆ.
ಚಾಪೆಗಳ ಮೇಲೆ ಅಥವಾ ಹಾಸುಬಂಡೆಗಳ ಮೇಲೆ ಈ ಈಚಲು ಹುಳಗಳನ್ನು ಹರಡಿ ಬಿಸಿಲಿನಲ್ಲಿ ಎರಡು ದಿನ ಚೆನ್ನಾಗಿ ಒಣಗಿಸಿ ಮತ್ತೊಮ್ಮೆ ಕೇರಿ ಶುಚಿಗೊಳಿಸುತ್ತಾರೆ. ಒಲೆ ಮೇಲೆ ಹುರಿದ ಒಣ ಈಚಲು ಹುಳಗಳೊಂದಿಗೆ ಚಿನಕುರುಳಿ-ಎಳ್ಳು-ಕುಸುಬೆ- ಹುರಿದ ಹೆಸರುಕಾಳು- ಹುರಿದ ಅಲಸಂದೆಕಾಳು,ಜೋಳದ ಅವಲು, ಒಣಕೊಬ್ಬರಿ ತುರಿ- ಬೆಳ್ಳುಳ್ಳಿ- ಹುರಿಗಡಲೆ- ಹುರಿದ ಕಳ್ಳೇಬೀಜಗಳಿಗೆ ಉಪ್ಪು ಹಾಗೂ ಸ್ವಲ್ಪ ಖಾರದ ಪುಡಿ ಅಥವಾ ಕಾಳುಮೆಣಸಿನ ಪುಡಿ ಉದುರಿಸಿ ಒಲೆ ಮೇಲೆ ಖಾರಮಂಡಕ್ಕಿಯಂತೆ ಅಗ್ಗರಿಸಿ ‘ಕುರುಕ್ಲು’ ಕೈತಿಂಡಿ ತಯಾರಿಸಲಾಗುತ್ತದೆ. ಹುಳುಗಳಲ್ಲಿಯೇ ಎಣ್ಣೆ ಅಥವಾ ತುಪ್ಪ ಇರುವುದರಿಂದ ಒಗ್ಗರಣೆ ಹಾಕಿ ಅಗ್ಗರಿಸಲು ಪ್ರತ್ಯೇಕ ಎಣ್ಣೆ ಬಳಸುವ ಅಗತ್ಯವಿಲ್ಲ.
ಈ ಖಾದ್ಯವನ್ನು ಮಕ್ಕಳು ಹಿತವಾಗಿ ಸವಿಯುತ್ತಾರೆ. ರೊಟ್ಟಿಯೊಂದಿಗೆ ನೆಂಚಿಕೆಯಾಗಿ ಅಥವಾ ಟೈಂಪಾಸ್ ವರ್ಮಿ ಚಾಟ್ಸ್ ಆಗಿ ಬಳಕೆಯಾಗುವ ಇದು ಬಸುರಿ ಬಾಣಂತಿಯರಿಗೆ ಪೌಷ್ಟಿಕ ಆಹಾರವಾಗಿ ಒದಗುತ್ತದೆ. ನಮ್ಮ ಗ್ರಾಮೀಣ ಜನರು ಒಣ ಸೀಗಡಿಯಿಂದ ತಯಾರಿಸಿದ ಚಟ್ಣಿಪುಡಿ, ಹಸಿ ತೊಗರಿ ಕಾಳಿನೊಂದಿಗೆ ಏಡಿಕಾಯಿ ಹಾಕಿ ತಯಾರಿಸಿದ ಹುಳಿಸಾರು, ಸಸ್ಲು ಮೀನು – ಮಳ್ಳೆಮೀನು – ಕರಿಮೀನಿನ ಹುಳಿಸಾರು, ಏಡಿಕಾಯಿ ಸೂಪು ಮುಂತಾದ ರುಚಿಕರ ತಿನಿಸುಗಳನ್ನು ತಯಾರಿಸಿ ಪಾಂಗಿತವಾಗಿ ಸವಿಯುತ್ತಾರೆ. ಇಂತಹ ತಿನಿಸುಗಳು ‘ಜೀವಕ್ಕೆ ತಂಪು – ಜುಟ್ಟಿಗೆ ಭದ್ರ. In my childhood days, my mother Vaddagere Kadaramma was an expert in preparing this wormy chats, you know!’
ವಿಶೇಷ ಸೂಚನೆ : ಮಾಂಸಾಹಾರ ಪ್ರಿಯ ಬೇಟೆಗಾರರು ತಿನ್ನುವ ಕೆಲವು ಜೀವಿಗಳಿವು. ಮೀನು – ಸೀಗಡಿ- ಏಡಿಕಾಯಿ ಮುಂತಾದ ಕೆಲವು ಆಹಾರಕ್ಕೆಂದೇ ಸೀಮಿತವಾಗಿರುವ ಜೀವಿಗಳನ್ನು ತಿನ್ನುವ ಬಗ್ಗೆ ನಮ್ಮ ಆಕ್ಷೇಪವಿರಲಾರದು. ಆಮೆ, ಉಡ, ನರಿ, ತೋಳ, ಬಾರುಬೆಕ್ಕು, ಮುಂಗುಸಿ, ಬಾವಲಿ, ನವಿಲು, ಜಿಂಕೆ, ಕಡವೆ, ಕಾಡೆಮ್ಮೆ ಇನ್ನೂ ಮುಂತಾದ ಅಮೂಲ್ಯ ಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಅಪಾರ ಪ್ರಮಾಣದ ಕಾಡು – ಕಾಡುಪ್ರಾಣಿಗಳು ನಾಶವಾಗಿಹೋಗಿವೆ. ಇಷ್ಟೊಂದು ನಾಶದ ಬಳಿಕ ಜಾರಿಯಾಗಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಯಿಂದಾಗಿ ಕೆಲವು ಅಮೂಲ್ಯ ಜೀವಿಗಳು ಉಳಿದುಕೊಂಡಿವೆ. ಹೀಗಿದ್ದೂ ಶ್ರೀಮಂತರು ಮತ್ತುkm
ರಾಜಕಾರಣಿಗಳ ಶಾಮೀಲಾ ತಿಯಿಂದಾಗಿ ಅವರ ನಾಲಗೆ ರುಚಿ ಹಾಗೂ ಕಳ್ಳಸಾಗಾಣಿಕೆಗೆ ಈ ಜೀವಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿದೆ. ಇವುಗಳನ್ನು ರಕ್ಷಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂಬುದನ್ನು ಮರೆಯದಿರೋಣ.
-ಡಾ.ವಡ್ಡಗೆರೆ ನಾಗರಾಜಯ್ಯ
8722724174
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.
http://Visit : www.suddidina.com
3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?
ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.
ಉದಾಹರಣೆ:
ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.
ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!
ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ಖಾತೆದಾರರು ಏನು ಮಾಡಬೇಕು?
1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.
2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.
3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.

ದಿನದ ಸುದ್ದಿ
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುವುದಿಲ್ಲ. ಖಾಸಗಿ ರೈಡ್-ಹೇಲಿಂಗ್ ಆ್ಯಪ್‌ಗಳಾದ ಓಲಾ, ಉಬರ್, ರ‍್ಯಾಪಿಡೋ ನಂತಹ ಆ್ಯಪ್‌ಗಳಲ್ಲೇ ನೇರವಾಗಿ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಲು ಮತ್ತು ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಹತ್ವದ ಸೇವೆಯು ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
http://Visit : www.suddidina.com
ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಾವು ಹಲವು ಖಾಸಗಿ ರೈಡ್ ಅಗ್ರಿಗೇಟರ್ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗುವ ಯಾವುದೇ ಖಾಸಗಿ ಕಂಪನಿಯು ಬಿಎಂಟಿಸಿಯ ಲೈವ್ ಡೇಟಾವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಕ್ಯಾಬ್ ಅಥವಾ ಆಟೋಗಳಿಂದ ಇಳಿದು ಮುಂದಿನ ಪ್ರಯಾಣಕ್ಕೆ ಬಸ್ ಹಿಡಿಯುವವರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.
ನಮ್ಮ ಬಿಎಂಟಿಸಿ 2.0′ ಆ್ಯಪ್‌ನಲ್ಲಿ ಏನಿದೆ ಹೊಸತು?
ಖಾಸಗಿ ಆ್ಯಪ್‌ಗಳ ಜೊತೆ ಡೇಟಾ ಹಂಚಿಕೊಳ್ಳುವುದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0′ ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಆ್ಯಪ್ ಕುರಿತು ಪ್ರಯಾಣಿಕರು ನೀಡಿದ್ದ ದೂರುಗಳು ಮತ್ತು ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಹೊಸ ಆ್ಯಪ್‌ನಲ್ಲಿ ಬಿಎಂಟಿಸಿ ನೆಟ್‌ವರ್ಕ್‌ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ನ ಲೈವ್ ಲೋಕೇಶನ್ ಅತ್ಯಂತ ನಿಖರವಾಗಿ ಲಭ್ಯವಾಗಲಿದೆ. ಪ್ರಸ್ತುತ ಬಿಎಂಟಿಸಿ ಬಳಿ 1,771 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಒಟ್ಟು 6,938 ಬಸ್‌ಗಳಿವೆ. ಪ್ರತಿದಿನ ಸರಾಸರಿ 6,200 ಬಸ್‌ಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ.
ಸಾರಿಗೆ ಸಚಿವರ ಮಹತ್ವದ ಸಭೆ ಮತ್ತು ನಿರ್ದೇಶನ:
ವಿಧಾನಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
200 ಹೊಸ ಮಿನಿ ಬಸ್‌ಗಳ ಖರೀದಿ:
ಮೆಟ್ರೋ ಫೀಡರ್ ಸೇವೆ ಹಾಗೂ ನಗರದ ಕಿರಿದಾದ ರಸ್ತೆಗಳ ಸಂಪರ್ಕಕ್ಕಾಗಿ 200 ಹೊಸ 7 ಮೀಟರ್ ಉದ್ದದ ಮಿನಿ ಡೀಸೆಲ್ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಈ ಚಿಕ್ಕ ಬಸ್‌ಗಳು ಸುಲಭವಾಗಿ ಸಂಚರಿಸಬಲ್ಲವು. ಸದ್ಯ 9 ಮತ್ತು 12 ಮೀಟರ್ ಉದ್ದದ 255 ಬಸ್‌ಗಳು ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ನಾಲ್ಕು ನಿಗಮಗಳಿಗೆ 1,000 ಬಸ್ ಖರೀದಿ ಯೋಜನೆಯ ಭಾಗವಾಗಿ ಈ ಖರೀದಿ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್‌ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ಮತ್ತು ಸಂಚಾರ ಪೊಲೀಸರ ಜೊತೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.
ಎಸಿ ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ:
ಪಿಎಂ ಇ-ಡ್ರೈವ್ ಯೋಜನೆಯಡಿ ಬರಲಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 200 ಮಿನಿ ಎಸಿ ಇ-ಬಸ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಿಸುವಂತೆ ಸಚಿವರು ಸೂಚಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳು ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಲು ಐಟಿ ಪಾರ್ಕ್‌ಗಳ ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಹೆಚ್ಚಿಸಲು ಮತ್ತು ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಎಲ್ಲಾ ನಿಗಮಗಳಲ್ಲಿ ಆದಾಯ ಸೋರಿಕೆ ತಡೆದು ಅನಗತ್ಯ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ.

ದಿನದ ಸುದ್ದಿ
EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ
ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.
http://Visit : www.suddidina.com
ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.
ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.
ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.
ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.
ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.



