Connect with us

ದಿನದ ಸುದ್ದಿ

ಭಿಕ್ಷೆಯಲ್ಲ.,ನಮ್ಮ ಶಾಸನ ಬದ್ದ ಹಕ್ಕು..!

Published

on

  • ಹಿರಿಯೂರು ಪ್ರಕಾಶ್

ಕರುನಾಡಿನ ಕಣ್ಮಣಿಗಳೇ..
ನಿಮ್ಮ ಮೂರು ನಿಮಿಷ ಪ್ಲೀಸ್..!

ರ್ನಾಟಕವೆಂದರೆ ದೆಹಲಿ ಸುಲ್ತಾನರಿಗೆ ಅದೇಕೋ ಮೊದಲಿನಿಂದಲೂ ಒಂಥರಾ ಅಪಥ್ಯವೋ, ಮಲತಾಯಿ ಧೋರಣೆಯೋ, ರಾಜಕೀಯ ದ್ವೇಷವೋ, ಹೊಟ್ಟೆ ಉರಿಯೋ, ಅಸೂಯೆಯೋ, ಅಥವಾ ಇಲ್ಲಿಂದ ಆರಿಸಿ ಹೋದ ಸಂಸದರ ಅಸೀಮ ಅಸಮರ್ಥತೆಯ ಪ್ರಭಾವವೋ ಒಟ್ಟಿನಲ್ಲಿ ಕನ್ನಡ ನಾಡೆಂದರೆ ದೆಹಲಿಯ ಆಡಳಿತಗಾರರಿಗೆ ಒಂದು ರೀತಿಯಲ್ಲಿ Taken for granted ಎನ್ನುವಂತಾಗಿದೆ.

ಒಂದೇ ಸಾಲಿನಲ್ಲಿ ಹೇಳುವುದಾದರೆ ದೇಶದ ಒಟ್ಟಾರೆ ಪ್ರಗತಿಗೆ, ಆರ್ಥಿಕ ಅಭಿವೃದ್ಧಿಗೆ ರಾಜ್ಯದ ಕೊಡುಗೆ ಬೆಟ್ಟದಷ್ಟಿದ್ದರೂ ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ದೊರೆಯುವ ಸಹಕಾರ, ಸಹಾಯ ಮೊದಲಿನಿಂದಲೂ ಅಷ್ಟಕ್ಕಷ್ಟೇ ! ಅದು ರಾಜ್ಯಗಳಿಗೆ ಶಾಸನಬದ್ದವಾಗಿ ದೊರೆಯುವ ಹಣಕಾಸಿನ ನೆರವಿನ ಪಾಲು ಇರಬಹುದು, ಪ್ರವಾಹ, ನೆರೆ ಹಾವಳಿ, ಬರ ಮುಂತಾದ ಪ್ರಾಕೃತಿಕ ವಿಕೋಪಗಳಿಂದಾದ ಅಪಾರ ಹಾನಿಗೆ‌ ಬರಬೇಕಾದ ನೆರವು ಇರಬಹುದು, ಇಲ್ಲವೇ ಯಾವುದೇ ಜಲ ವಿವಾದ, ಗಡಿ ವಿವಾದ ಅಥವಾ ಇನ್ನಾವುದೇ ಅಂತರರಾಜ್ಯ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯಗಳೇ ಇರಬಹುದು. ಕೇಂದ್ರದಲ್ಲಿ ಅಧಿಕಾರ ನೆಡೆಸುವ ಪಕ್ಷ ಯಾವುದೇ ಇರಬಹುದು, ಲಾಗಾಯ್ತಿನಿಂದಲೂ ನಮ್ಮ ರಾಜ್ಯಕ್ಕೆ ಹೆಚ್ಚುವರಿಯಾಗಿ ಹೇಳಿಕೊಳ್ಳುವಂತಹಾ ಅನುಕೂಲ ಯಾವ ಕೇಂದ್ರ ಸರ್ಕಾರದಿಂದಲೂ ಖಂಡಿತಾ ಆಗಿಲ್ಲ.

ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯಲ್ಲಿ, ಸಂಯುಕ್ತ ಸರ್ಕಾರಗಳ ಪದ್ದತಿಯಲ್ಲಿ ದೇಶದ ಹಿತದೃಷ್ಟಿಯಿಂದ ‌ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ತಾಯಿಯಂತೆ ಹಾಗೂ ರಾಜ್ಯ ಸರ್ಕಾರ ಮಕ್ಕಳಂತೆ .

ಒಬ್ಬ ತಾಯಿ ತನ್ನ ಎಲ್ಲಾ ಮಕ್ಕಳನ್ನು ಭೇಧವೆಣಿಸದೇ ನೋಡುವಳೋ ಅದೇ ರೀತಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಿದೆ. ಇದರಲ್ಲಿ ಯಾವುದೇ ರಾಜಕೀಯವೆಸಗಿದಲ್ಲಿ ಅದು ಇಡೀ ಫ಼ೆಡರಲ್ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿ ದೇಶದ ಹಿನ್ನಡೆಗೆ ಕಾರಣವಾಗುತ್ತದೆ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಇದು ಕೇವಲ ಪುಸ್ತಕದಲ್ಲಷ್ಟೇ ಇದೆಯೇನೋ ಎಂಬ ಭಾವನೆ ಮೂಡುತ್ತಲಿದೆ.

ರಾಜ್ಯದ ಯಾವುದೇ ಆರ್ಥಿಕ ಅನುಮೋದನೆಗೆ ಕೇಂದ್ರದ ನೆರವು ಅಗತ್ಯ. ಏಕೆಂದರೆ ಒಂದು ರಾಜ್ಯಕ್ಕೆ ಆದಾಯಕ್ಕಿಂತ ಜಾಸ್ತಿ ಖರ್ಚು ಇರುವುದರಿಂದ ಅದು ತನ್ನ ಎಲ್ಲಾ ಯೋಜನೆಗಳನ್ನು ಕೇಂದ್ರದ ನೆರವಿಲ್ಲದೇ ಪೂರೈಸಲು ಸಾಧ್ಯವಾಗದು. ಈ ಹಿನ್ನಲೆಯಲ್ಲಿಯೇ ಕೇಂದ್ರ ಹಣಕಾಸು ಆಯೋಗದ ರಚನೆಯಾಗಿದ್ದು. ರಾಜ್ಯಗಳ ಆರ್ಥಿಕ ಸ್ಥಿತಿ ಗತಿಯನ್ನು ಅಧ್ಯಯನ‌ ಮಾಡಿ ಅನುದಾನವನ್ನು ನಿಷ್ಪಕ್ಷಪಾತವಾಗಿ ರಾಜ್ಯಗಳಿಗೆ ಹಂಚಿಕೆ ಮಾಡುವುದು ಅದರ ಗುರಿ.

ಇದರ ಜೊತೆಗೆ ಸ್ವಾತಂತ್ರ್ಯೋತ್ತರ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗವನ್ನು ರದ್ದು ಗೊಳಿಸಿ 2015 ರ ಜನವರಿಯಲ್ಲಿ NITI ( National Institution for Transforming India ) ಆಯೋಗವನ್ನು ರಚಿಸಲಾಯಿತು. ಇವೆಲ್ಲದರ ಮೂಲೋದ್ದೇಶ ರಾಜ್ಯಗಳ ಒಟ್ಟಾರೆ ಅಭಿವೃದ್ಧಿ ಯೇ ಆಗಿದೆ. ಒಟ್ಟಿನಲ್ಲಿ ರಾಜ್ಯದ ಆರ್ಥಿಕ ಯೋಜನೆಗಳಿಗೆ, ಮಹತ್ತರ ಹಣಕಾಸಿನ ಯೋಜನೆಗಳ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ನಿರ್ಧಾರವೇ ಅಂತಿಮ‌.

ಹಾಗಂತ ಕೇಂದ್ರ ಸರ್ಕಾರವೇನೂ ರಾಜ್ಯಗಳಿಗೆ ಪುಕ್ಕಟ್ಟೆಯಾಗಿ ಅನುದಾನ‌ ನೀಡುವುದಿಲ್ಲ. ಅದು ನೀಡುವ ಹಣದಲ್ಲಿ ರಾಜ್ಯದಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದ ಪಾಲು, ಕೇಂದ್ರದ ಮಹತ್ತರ ಯೋಜನೆಗಳನ್ನು ಜಾರಿಗೆ ತರಲು ಬೇಕಾಗುವ ವೆಚ್ಚ ಇತ್ಯಾದಿಗಳ ರೂಪದಲ್ಲಿ ನೀಡುತ್ತದೆ. ಎಲ್ಲರಿಗೂ ತಿಳಿದಿರುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೆರಿಗೆಯ ರೂಪದಲ್ಲಿ ಹಣ ಸಂಗ್ರಹಿಸುತ್ತವೆ. ಅವು…

  • ರಾಜ್ಯ ತೆರಿಗೆ ಸಂಗ್ರಹಿಸಿ ರಾಜ್ಯದ ಉಪಯೋಗಕ್ಕೆ.
  • ರಾಜ್ಯ ತೆರಿಗೆ ಸಂಗ್ರಹಿಸಿ ಕೇಂದ್ರದ ‌ಉಪಯೋಗಕ್ಕೆ.
  • ಕೇಂದ್ರ ಸಂಗ್ರಹಿಸಿ ರಾಜ್ಯದ ಉಪಯೋಗಕ್ಕೆ.
  • ಕೇಂದ್ರ ಸಂಗ್ರಹಿಸಿ ಕೇಂದ್ರಕ್ಕೆ ಬಳಸಿಕೊಳ್ಳುವುದು.

ಹೀಗಾಗಿ ರಾಜ್ಯ ಸರ್ಕಾರ ತಾನು ಸಂಗ್ರಹಿಸಿ ಕೇಂದ್ರಕ್ಕೆ ಸಲ್ಲಿಸಿದ ತೆರಿಗೆ ಹಣದಲ್ಲಿ ರಾಜ್ಯದ ಪಾಲನ್ನು ಪಡೆಯುವ ಎಲ್ಲಾ ಅಧಿಕಾರ ಇದೆ. ಇದು ರಾಜ್ಯಗಳ ಹಕ್ಕು ಕೂಡಾ. ಈ ನಿಟ್ಟಿನಲ್ಲಿ ಆಯಾ ರಾಜ್ಯದ ಅಭಿವೃದ್ಧಿ, ಯೋಜನೆ, ಹಿಂದುಳಿದಿರುವಿಕೆ, ಜನಸಂಖ್ಯೆ, ಭೌಗೋಳಿಕ ಕಾರಣಗಳ ಆಧಾರದ ಮೇಲೆ ರಾಜ್ಯದ ಪಾಲಿನ ಹಣವನ್ನು ಹಣಕಾಸು ಆಯೋಗದ ಅಥವಾ ನೀತಿ ಆಯೋಗದ ಮುಖೇನ ಕೇಂದ್ರ ಸರ್ಕಾರ‌ ನಿರ್ಧರಿಸುತ್ತದೆ. ಈ ಹಿನ್ನಲೆಯಲ್ಲಿ ನಮ್ಮ ರಾಜ್ಯದ ಸ್ಥಾನದ ಬಗ್ಗೆ ಒಂದೆರಡು ಮಾತುಗಳು.

ಕರ್ನಾಟಕ ಇಡೀ ದೇಶದಲ್ಲೇ ಪ್ರಗತಿಯತ್ತ ನಾಗಾಲೋಟದಿಂದ‌ ಮುನ್ನುಗ್ಗುತ್ತಿರುವ ರಾಜ್ಯಗಳಲ್ಲೊಂದು. ಐಟಿ.ಬಿಟಿ. ಸಂಪರ್ಕ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿ ತಂತ್ರಜ್ಞಾನವನ್ನು‌ ಹೊರ ದೇಶಗಳಿಗೆ ರಫ಼್ತು ಮಾಡುವಂತಹ ಬೌದ್ಧಿಕ ಸಂಪತ್ತನ್ನು‌ ಹೊಂದಿರುವ ರಾಜ್ಯ. ದೇಶದ ಒಟ್ಟು ಆಂತರಿಕ ಉತ್ಪನ್ನ ದಲ್ಲಿ (GDP) ಶೇ ಹತ್ತರಷ್ಟು ಕೊಡುಗೆ (ಸುಮಾರು ಹದಿನಾರು ಲಕ್ಷ‌ಕೋಟಿ ) ನಮ್ಮ ರಾಜ್ಯದ್ದು. ಕೇಂದ್ರಕ್ಕೆ ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯ ಕರ್ನಾಟಕ.

ಅತಿ ಹೆಚ್ಚು GST ಸಂಗ್ರಹಣೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನ. ( ಸುಮಾರು ಎಂಟು ಸಾವಿರ ಕೋಟಿ GST ಮತ್ತು ಮೂರುವರೆ ಸಾವಿರ‌ ಕೋಟಿ ಸೆಸ್ ರೂಪದಲ್ಲಿ ). ಎಲ್ಲಾ ಆರ್ಥಿಕ ರಂಗದಲ್ಲೂ ಉತ್ತಮ ಪ್ರಗತಿ ಸಾಧಿಸಿರುವ ರಾಜ್ಯ ಜನಸಂಖ್ಯಾ ನಿಯಂತ್ರಣದಲ್ಲೂ ಔನ್ನತ್ಯ ಸಾಧಿಸಿದೆ. ಆದರೆ ಈ ಎಲ್ಲಾ ಪ್ರಗತಿಯ ಬೆಳವಣಿಗೆಯೇ ಈಗ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಅಡ್ಡಬರುತ್ತಿವೆ‌ ಎಂದರೆ ಅಚ್ಚರಿಯಾಗಬಹುದಲ್ಲವೇ ? ಹಾಗೇ ಸ್ವಲ್ಪ ಗಮನಿಸಿ !

ಉದಾಹರಣೆಗೆ ದೇಶದ GDP ಕೊಡುಗೆಯಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕ ತಾನು ಸಂಗ್ರಹಿಸಿದ ಪ್ರತಿ‌ ನೂರು ರೂಪಾಯಿ ತೆರಿಗೆಯಲ್ಲಿ ಕೇವಲ 42 ರೂ ಗಳನ್ನು ಕೇಂದ್ರದಿಂದ ಪಡೆದರೆ, ಜಿಡಿಪಿ ಕೊಡುಗೆಯಲ್ಲಿ ದೇಶದಲ್ಲಿ ಹದಿನೈದನೇ ಸ್ಥಾನದಲ್ಲಿರುವ ಬಿಹಾರ ತನ್ನ‌ ಪ್ರತಿ ನೂರು ರೂಪಾಯಿ ತೆರಿಗೆಗೆ ಕೇಂದ್ರದಿಂದ 200 ರೂಗಳನ್ನು ಪಡೆಯುತ್ತೆ. ಇನ್ನು ಉತ್ತರ ಪ್ರದೇಶ ಸಹಾ ತನ್ನ ಪ್ರತೀ‌ ನೂರು ರೂ ತೆರಿಗೆಗೆ ಕೇಂದ್ರದ ಪಾಲು ಎಂದು 150 ರೂಗಳನ್ನು ಪಡೆಯುತ್ತದೆ. ಇದು ಸಹಜವಾದ ಆರ್ಥಿಕ ವ್ಯವಸ್ಥೆಯಲ್ಲಿ ಆಗುವ ಪ್ರಕ್ರಿಯೆಯಾದರೂ ಈ ಮಟ್ಟಿನ ತಾರತಮ್ಯ ಏಕೆಂದು ಹೇಳೋದು ಕಷ್ಟ !

ಅಂದರೆ ಕೇಂದ್ರಕ್ಕೆ ಕರ್ನಾಟಕದ ಆರ್ಥಿಕ ಸಂಪತ್ತನ್ನು ಹೆಚ್ಚಿಗೆ ಕೊಟ್ಟು ಅಲ್ಲಿಂದ ಅದರ ಅರ್ಧದಷ್ಟನ್ನಾದರೂ ಕಾನೂನಾತ್ಮಕವಾಗಿ ಪಡೆಯಲು ಅವರ ಮುಂದೆ ಮಂಡಿಯೂರಿ ಕೂರಬೇಕಾದ ಕರ್ನಾಟಕದ ದುರಂತ ಇತಿಹಾಸ ನಿನ್ನೆ‌ ಮೊನ್ನೆಯದಲ್ಲ. ಉತ್ತರದವರ ಈ ಅಘೋಷಿತ ದಬ್ಬಾಳಿಕೆಯ ಧೋರಣೆ ಆನೂಚಾನವಾಗಿ ಮುಂದುವರೆಯುತ್ತಲೇ ಬಂದಿದೆ. ಇದಕ್ಕೆ ಹಣಕಾಸು ಆಯೋಗ ನೀಡುವ ಕಾರಣಗಳು ಕ್ಷುಲ್ಲಕ ಮಾತ್ರವಲ್ಲ‌ ಬದಲಿಗೆ‌ ಹಾಸ್ಯಾಸ್ಪದವೂ ಹೌದು.

ಕರ್ನಾಟಕ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಸಾಧಿಸುತ್ತಲಿದೆ. ಜನಸಂಖ್ಯೆ ನಿಯಂತ್ರಣದಲ್ಲಿದೆ ಹಾಗಾಗಿ ಅನುದಾನ ಕಡಿಮೆಯಂತೆ ! ವಿಪರ್ಯಾಸವೆಂದರೆ ಇದುವರೆಗೂ ಜನಸಂಖ್ಯೆಯ ಪ್ರಮಾಣವನ್ನು 1971 ರ ಜನಗಣತಿಯ ಆಧಾರದ ಮೇಲೆ ಲೆಕ್ಕಾಚಾರ ಹಾಕಿ ರಾಜ್ಯದ ಪಾಲನ್ನು ನಿರ್ಧರಿಸಲಾಗುತ್ತಿತ್ತು.

ಆದರೆ ಈಗ ಅದರ ಲೆಕ್ಕಾಚಾರವನ್ನು 2001ರ ಜನಗಣತಿ ಯ ಆಧಾರದ ಮೇಲೆ ಮಾಡುವುದರಿಂದ ಸಹಜವಾಗಿ ಈ ವಿಷಯದಲ್ಲಿ ನಿಯಂತ್ರಣದಲ್ಲಿ ಸಾಕಷ್ಟು ಪ್ರಬುದ್ಧತೆಯನ್ನು ರಾಜ್ಯ ಸಾಧಿಸಿರುವುದರಿಂದ ಹಾಗೂ ಇದೇ ಸಮಯದಲ್ಲಿ ಉತ್ತರದ ಇತರೆ ರಾಜ್ಯಗಳು ಇನ್ನೂ ಅದೇ ಕಳಪೆ ಸಾಧನೆಯಲ್ಲಿರುವುದರಿಂದ ನಮ್ಮ ಅನುದಾನಕ್ಕೆ ಕತ್ತರಿ ಬೀಳುತ್ತಿದೆ ! ಹೆಚ್ಚಿನ ಸಾಕ್ಷರತೆ ಪ್ರಮಾಣ ಕೂಡಾ ನಮಗೇ ಈ ವಿಚಾರದಲ್ಲಿ ಮುಳುವಾಗಿರುವುದಕ್ಕೆ ಏನೆಂದು ಪ್ರತಿಕ್ರಿಯಿಸಬೇಕೋ ಗೊತ್ತಾಗುತ್ತಿಲ್ಲ. ಅಂದರೆ
” ಅಭಿವೃದ್ಧಿ ಸಾಧಿಸಿದಲ್ಲಿ ಅನುದಾನವಿಲ್ಲ” ಎನ್ನುವುದೇ ಕೇಂದ್ರದ ಪಾಲಿಸಿಯೇ ????

ಕೇವಲ‌ ಬಿಹಾರ ಉತ್ತರ ಪ್ರದೇಶ ಮಾತ್ರವಲ್ಲ. ಇನ್ನು ವಿಶೇಷ ಪ್ಯಾಕೇಜ್ ಅಂತೆಲ್ಲಾ ಹೇಳಿ ಅಸ್ಸಾಂ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಮುಂತಾದ ಹತ್ತು ಹದಿನೈದು ರಾಜ್ಯಗಳಿಗೆ ಹೆಚ್ಚುವರಿಯಾಗಿ ಅಂದರೆ ಅವರ ಆದಾಯಕ್ಕಿಂತಲೂ ಹೆಚ್ಚಿನ ಅನುದಾನವನ್ನು ಕೊಡುಗೆಯಾಗಿ ನೀಡುವ ಕೇಂದ್ರದ ಹಣದಲ್ಲಿ ನಮ್ಮ ಪಾಲು ಬಳಕೆಯಾಗುತ್ತಲಿದೆ. ಈ ಬಗ್ಗೆ ಅಂಕಿ ಅಂಶಗಳನ್ನು ನೋಡಿದರೆ‌ ನಮ್ಮ ತೆರಿಗೆ ಹಣ ಹೇಗೆಲ್ಲಾ ವ್ಯಯವಾಗುತ್ತಿದೆಯೆಂದು ನೋವಾಗಬಹುದು. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಹಜ.

ಇದ್ದವರಿಂದ ಪಡೆದು ಇಲ್ಲದವರಿಗೆ ನೀಡುವ ಪ್ರಗತಿಪರ ತೆರಿಗೆ ಪದ್ದತಿ ನಮ್ಮದು. ಹೀಗಾಗಿ ಖಂಡಿತಾ ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಕಾರಣ ಭಾರತಾಂಬೆಯ ಎಲ್ಲಾ ಮಕ್ಕಳೂ ಅನುಕೂಲವಾಗಿಲ್ಲ. ಹಾಗಾಗಿ ಆರ್ಥಿಕವಾಗಿ ಅಭದ್ರತೆಯಲ್ಲಿರುವ‌ ಸೋದರರಿಗೆ ಸಹಾಯ ಹಸ್ತ ಚಾಚೋಣ. ಆದರೆ ನಮ್ಮ ಬುಡಕ್ಕೇ ಪೆಟ್ಟು ಬಂದಾಗಲಾದರೂ ನಮ್ಮೆಡೆಗೆ ಗಮನ‌ಹರಿಸದಿರುವ ವರ್ತನೆಗೆ ರಾಜಕೀಯ ಹೊರತಾದ ಅನ್ಯ ಸಕಾರಣಗಳುಂಟೇ ?

ಇದು ಹೋಗಲಿ ‌ಬಿಡಿ. ರಾಜ್ಯಗಳು ‌ನೆರೆ ಹಾವಳಿ, ಬರ, ಪ್ರವಾಹ ಅಂತೆಲ್ಲಾ ಪ್ರಕೃತಿ ವಿಕೋಪಕ್ಕೆ ಸಿಕ್ಕು ಸುಣ್ಣವಾದಾಗ ತಕ್ಷಣವೇ ನೆರವಿಗೆ ಧಾವಿಸುವುದು ಕೇಂದ್ರದ ಕರ್ತವ್ಯ. ಅದಕ್ಕಾಗಿಯೇ ರಾಷ್ಟ್ರೀಯ ವಿಪತ್ತು ಪರಿಹಾರ‌ ನಿಧಿಯಿದ್ದು ( NDRF National disaster response fund ) ಇದು ಸಂಪೂರ್ಣವಾಗಿ ಕೇಂದ್ರದ‌ ನಿಧಿಯಾಗಿರುತ್ತದೆ. ಅಲ್ಲದೇ ಈ ಪರಿಹಾರಗಳಿಗಾಗಿಯೇ ರಾಜ್ಯದ ವಿಪತ್ತು ಪರಿಹಾರ‌ನಿಧಿ ( SDRF:- State disaster response fund ) ಸಹಾ ಇದ್ದು ಇದರಲ್ಲಿ ರಾಜ್ಯದ ಕೊಡುಗೆಯೂ ಇರುತ್ತೆ.

ಕಳೆದ ಎರಡು‌ ಮೂರು ವರ್ಷಗಳಿಂದ ಸತತ ಪ್ರಕೃತಿ ವಿಕೋಪಕ್ಕೆ ಸಿಕ್ಕು ನರಳುತ್ತಿರುವ ನಮ್ಮ ರಾಜ್ಯಕ್ಕೆ ಈ‌ ಭಾಗದಿಂದಲೂ ಸಿಗಬೇಕಾದ ನೆರವು ಸಿಕ್ಕಿಲ್ಲ . ಅನೇಕ‌ ನಿಯೋಗಗಳು, ಮನವಿಗಳು, ಸಮೀಕ್ಷೆಗಳು ಎಲ್ಲವೂ‌ ಮುಗಿದಿದ್ದರೂ ಸಮಯಕ್ಕೆ ಸಿಗಬೇಕಾದ ನ್ಯಾಯೋಚಿತವಾದ ‌ಪರಿಹಾರ ಸಿಗದೇ ಸಂತ್ರಸ್ತರನ್ನು ಸಂಕಷ್ಟದಲ್ಲಿ ದೂಡುವಂತಾಗಿದೆ.

ಉದಾಹರಣೆಗೆ ಕಳೆದ ತಿಂಗಳು ಸಂಭವಿಸಿದ ನೆರೆ ಹಾವಳಿಯಿಂದಾಗಿ ರಾಜ್ಯದ ಸುಮಾರು ಹದಿನೆಂಟು ಜಿಲ್ಲೆಗಳ ಎರಡು ಸಾವಿರಕ್ಕೂ‌ ಹೆಚ್ಚಿನ ಹಳ್ಳಿಗಳಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಕೇಂದ್ರದಿಂದ ಹಣಕಾಸು ಮತ್ತು ಗೃಹ ಮಂತ್ರಿಗಳು ಬಂದು ಸಮೀಕ್ಷೆ ಮಾಡಿ ತಿಂಗಳುಗಳೇ ಉರುಳಿವೆಯಾದರೂ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.

ಮಿಕ್ಕೆಲ್ಲಾ ವಿಚಾರಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ಮಾನ್ಯ ಪ್ರಧಾನಿಗಳೂ ಸಹಾ ಪರಿಹಾರದ ಬಗ್ಗೆ ಮೌನ ಮುರಿದಿಲ್ಲ. ಹೀಗಾದರೆ ನೊಂದ ಜನರ ಗೋಳನ್ನು ಕೇಳುವವರು ಯಾರು ?? ಈ‌ ಬಗ್ಗೆ ಗಟ್ಟಿದನಿಯಲ್ಲಿ ಅಧಿಕಾರಯುತವಾಗಿ ಕೇಳುವ ಧೈರ್ಯವಿರುವ ಜನಪ್ರತಿನಿಧಿಗಳಿಲ್ಲದಿರುವುದು ಕನ್ನಡಿಗರ ದೌರ್ಭಾಗ್ಯ !

ಕೇವಲ ಇದಿಷ್ಟೇ ಅಲ್ಲ. ರಾಜ್ಯದ ಗ್ರಾಮೀಣ ಭಾಗಗಳ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗಾಗಿ ( NRDWP ) ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ( MGNREGS ) ಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಬರಬೇಕಾದ ಅನುದಾನವನ್ನೂ ತೀವ್ರವಾಗಿ ಕಡಿತಗೊಳಿಸಲಾಗಿದ್ದು ಅಪೂರ್ಣ ಯೋಜನೆಗಳನ್ನು ಮುಗಿಸಲು ರಾಜ್ಯ ಸರ್ಕಾರ ತನ್ನ‌ ಮೀಸಲಿನಿಂದ ಹಣವನ್ನು ಒದಗಿಸಬೇಕಾಗಿದ ಸ್ಥಿತಿ ಬಂದಿದೆ. ಯಾಕೆ ಹೀಗೆಂದು ಹೇಳುವವರೂ ಇಲ್ಲ ಮತ್ತು ಕೇಳುವವರು ಮೊದಲೇ ಇಲ್ಲ !

ಇನ್ನು ಅಂತರರಾಜ್ಯ ನದಿ ನೀರು, ಗಡಿ ಅಥವಾ ವಾಣಿಜ್ಯಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ನ್ಯಾಯವೆನ್ನುವುದು ದೂರವೇ ಆಗಿದೆ. ಕರ್ನಾಟಕಕ್ಕೆ ಸತತವಾಗಿ ಅನ್ಯಾಯವಾಗುತ್ತಿದ್ದರೂ ಈ ಬಗ್ಗೆ ಸಮರ್ಥವಾಗಿ ರಾಜ್ಯದ ಪರ ದನಿ ಎತ್ತುವವವರೇ ಇಲ್ಲದಂತಾಗಿದ್ದು ಒಂದೆಡೆಯಾದರೆ,ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದ ಸಂಸದರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸದೆ ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿರುವುದರ ಫಲವಾಗಿ ಸಂಸತ್ತನ್ನು ಹೇಳಿದಂತೆ ಕೇಳುವ ಹಾಗೆ ಮಾಡುವ ತಾಕತ್ತು ತೋರಿದ್ದಾರೆ. ಹೀಗಾಗಿ ಕಾವೇರಿ, ಕೃಷ್ಣ, ಮಹದಾಯಿ ಮುಂತಾದ ನದಿ ವಿವಾದಗಳಲ್ಲಿ ರಾಜ್ಯಕ್ಕೆ ಸತತ ಹಿನ್ನಡೆಯಾಗುತ್ತಲೇ ಇದೆ.

ಕೇಂದ್ರ ಸರ್ಕಾರಗಳು ಮೊದಲಿನಿಂದಲೂ ನಮ್ಮ ರಾಜ್ಯದ ಮೇಲೆ ಸವಾರಿ ಮಾಡಿದ್ದರ ಫಲವನ್ನು ಈಗ ಅನುಭವಿಸುತ್ತಿದ್ದೇವೆ. ದೇಶದ ಪ್ರಗತಿಗೆ ರಾಜ್ಯದ ಸಹಕಾರ ಸಂಪತ್ತು‌ ಬೇಕು. ಆದರೆ ನಮ್ಮ‌ ಕಷ್ಟ ಕಾಲದಲ್ಲಿ ನ್ಯಾಯೋಚಿತವಾಗಿ ಬರಬೇಕಾದ ಪರಿಹಾರ ಮಾತ್ರ ಕೊಡದೇ ಇರುವುದು ಯಾವ ಕಾರಣಕ್ಕಾಗಿ ?? ಇದು ಒಕ್ಕೂಟ ವ್ಯವಸ್ಥೆಯಲ್ಲಿ ತೋರುವ ಪಕ್ಷಪಾತ ಧೋರಣೆಯಲ್ಲವೇ ?

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷವಿದ್ದಲ್ಲಿ ರಾಜ್ಯಕ್ಕೆ ಅನುಕೂಲವಾಗುತ್ತದೆ ಎಂಬುದು ಕೇವಲ ಭ್ರಮೆಯೇ ? ನ್ಯಾಯವಾಗಿ ಬರಬೇಕಾದ ರಾಜ್ಯದ ಪಾಲನ್ನು ಕೇಳುವುದು ನಮ್ಮ‌ ಹಕ್ಕು ಮತ್ತು ಕೊಡಬೇಕಾದದ್ದು ಕೇಂದ್ರದ ಕರ್ತವ್ಯವೇ ಹೊರತು ‌ರಾಜ್ಯವನ್ನು‌ ಭಿಕ್ಷುಕರ ಸ್ಥಾನದಲ್ಲಿ‌ ನಿಲ್ಲಿಸುವುದು ಕೇಂದ್ರಕ್ಕೆ ತರವಲ್ಲ. ಅನುದಾನದಲ್ಲಿ ತಾರತಮ್ಯವೆಸಗದೇ ಅವಶ್ಯಕತೆಗೆ ತಕ್ಕಂತೆ ತಕ್ಷಣ ನೀಡಬೇಕಾದದ್ದು ಕೇಂದ್ರದ ಕರ್ತವ್ಯ. ಅದು ಆಡಳಿತ ನೆಡೆಸುವವರ ಮೂಗಿನ ನೇರಕ್ಕೆ ಇರಲೇ ಬಾರದು.

ರಾಜ್ಯದ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಹಾಗೂ ಸಂಸದರು ಪಕ್ಷಭೇಧ ಮರೆತು ರಾಜ್ಯದ ಜನರ ಅದರಲ್ಲೂ ವಿಶೇಷವಾಗಿ ಸಂತ್ರಸ್ತರ ಪರವಾಗಿ ಗಟ್ಟಿ ದನಿಯಲ್ಲಿ ಹಕ್ಕೊತ್ತಾಯ ಮಂಡಿಸದಿದ್ದರೆ ಕರುನಾಡಿನ ಸ್ಥಿತಿ ಹೀಗೆ ದೈನೇಶಿಯಾಗಿಯೇ ಮುಂದುವರೆಯುವುದರಲ್ಲಿ ಅನುಮಾನವಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿ, ಅನುದಾನದ ವಿಷಯದಲ್ಲಿ ಕೊಳಕು ರಾಜಕೀಯವನ್ನು ಬದಿಗಿಟ್ಟು ರಾಜ್ಯದ ಹಿತಚಿಂತನೆಯಲ್ಲಿ ನಮ್ಮ ಪ್ರಜಾಪ್ರತಿನಿಧಿಗಳು ತೊಡಗಲಿ.

ಕೊನೇಪಕ್ಷ ಕನ್ನಡಿಗರಾದರೂ ರಾಜಕೀಯ ಭೇಧ ಭಾವ ಮರೆತು, ಕರುನಾಡಿಗಾಗುತ್ತಿರುವ ಅನ್ಯಾಯದ ವಿರುದ್ಧ ಒಕ್ಕೊರಲಿನಿಂದ ದನಿಯೆತ್ತುವ ಕೆಲಸ ಮಾಡಿ ರಾಜ್ಯದ ಬಗೆಗಿನ ಬದ್ಧತೆ ತೋರಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending