Connect with us

ದಿನದ ಸುದ್ದಿ

ಭಾರತದ ದಿವ್ಯ ಮೌನವೇ ಗಟ್ಟಿಯಾದ ಧ್ವನಿ

Published

on

  • ಮೂಲ : ಗೋಪಾಲಕೃಷ್ಣ ಗಾಂಧಿ (ದ ಹಿಂದೂ 15-9-20),ಅನುವಾದ : ನಾ ದಿವಾಕರ

1918-20ರ ಸ್ಪಾನಿಷ್ ಫ್ಲೂ, 1958, 66, 73 ಮತ್ತು 1980ರ ಆರ್ಥಿಕ ಹಿಂಜರಿತ ಮತ್ತು 1962ರ ಭಾರತ-ಚೀನಾ ಯುದ್ಧ ಇವೆಲ್ಲವೂ ಮತ್ತೊಮ್ಮೆ ಭಾರತವನ್ನು, ಭಾರತೀಯರನ್ನು ಕಾಡುತ್ತಿದೆ. ಈ ಬಹುಮುಖಿ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು ಎಂದು ಬಹುಶಃ ಯಾರಿಗೂ ತಿಳಿಯುತ್ತಿಲ್ಲ. ವಾಸ್ತವ ಎಂದರೆ ವಸ್ತುಸ್ಥಿತಿ ಹೇಗಿದೆ ಎಂದೂ ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ.

ಕೋವಿದ್ 19 ಕುರಿತಂತೆ ನಮಗೆ ಕರಾರುವಾಕ್ಕಾಗಿ, ವಸ್ತುನಿಷ್ಠವಾಗಿ, ಅಧಿಕಾರಯುತವಾಗಿ, ಸಮಾಧಾನಕರವಾಗಿ ನಿರ್ದಿಷ್ಟ ಮಾಹಿತಿಯನ್ನು ನಮಗೆ ಯಾರೂ ನೀಡುತ್ತಿಲ್ಲ. ಸಾಂಕ್ರಾಮಿಕ ರೋಗಗಳ ತಜ್ಞ ಡಾ ಟಿ ಜಾಕಬ್ ಜಾನ್ ಅವರು ಹೇಳುವಂತೆ ಭಾರತ ಬ್ರೆಜಿಲ್ ಮತ್ತು ಅಮೆರಿಕವನ್ನೂ ಹಿಂದಿಕ್ಕಿ , ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶವಾಗಿ ಹೊರಹೊಮ್ಮುತ್ತಿದೆ.

ದಿನನಿತ್ಯ ವರದಿಯಾಗುವ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಆದರೆ ಈ ಕುರಿತು ಸವಿವರವಾಗಿ ತಿಳಿದುಕೊಳ್ಳುವುದು ಸಾಕಷ್ಟಿದೆ. ಸರ್ಕಾರಿ ಮೂಲಗಳಿಂದ ಅಧಿಕೃತ ಮಾಹಿತಿಯನ್ನು ಈ ದೇಶದ ನಾಗರಿಕರು ಪಡೆಯಬೇಕಿದೆ. ಇದು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ಕೋವಿದ್ 19 ಸಾಮುದಾಯಿಕವಾಗಿ ಹರಡುತ್ತಿದೆಯೇ? (ಸಮುದಾಯ ಪ್ರಸರಣ ಏಪ್ರಿಲ್ ತಿಂಗಳಲ್ಲೇ ಆರಂಭವಾಗಿದೆ ಎಂದು ಆಗಲೇ ತಜ್ಞರು, ವೈದ್ಯರು ಎಚ್ಚರಿಸಿದ್ದರು-ಅನು) ಇದು ಹೌದಾದರೆ ದಿನನಿತ್ಯದ ಪರೀಕ್ಷೆ ಮತ್ತು ತಪಾಸಣೆಯ ಪ್ರಮಾಣವನ್ನು ಹೆಚ್ಚಿಸಬೇಕು. ಅವಶ್ಯಕತೆಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಸೌಲಭ್ಯಗಳು ಮತ್ತು ವೆಂಟಿಲೇಟರ್‍ಗಳನ್ನು ಒದಗಿಸಬೇಕು.

ಅಥವಾ ಜನರು ತಮ್ಮ ಮನೆಯಲ್ಲಿದ್ದುಕೊಂಡೇ ತಾವೇ ಪರೀಕ್ಷೆ ಮಾಡಿಸಿಕೊಂಡು, ಚಿಕಿತ್ಸೆ ಪಡೆದು ಈ ವೈರಾಣುವಿನಿಂದ ಪಾರಾಗಬೇಕು ಎಂದು ಅಪೇಕ್ಷಿಸಲಾಗುತ್ತಿದೆಯೇ ? ಈಗ ಕೊರೋನಾ ವೈರಾಣು ನಗರ ಪ್ರದೇಶಗಳನ್ನು ತೊರೆದು ಭಾರತದ ಹಳ್ಳಿ ಹಳ್ಳಿಗಳನ್ನು ತಲುಪುತ್ತಿದೆಯೇ ? ಇದು ಹೌದಾದರೆ ಗ್ರಾಮೀಣ ಭಾರತದ ಜನತೆಗೆ ತಮ್ಮ ಮೇಲೆ ಎರಗಿರುವ ಈ ಅಪಾಯದ ಅರಿವು ಇದೆಯೇ ? ಭಾರತದ ಗ್ರಾಮಗಳು ಈ ಸೋಂಕಿನ ಪರಿಣಾಮವನ್ನು ಎದುರಿಸಲು ಕನಿಷ್ಟ ಮಟ್ಟದ ತಯಾರಿ ನಡೆಸಿವೆಯೇ ?

ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಆರೋಗ್ಯ ಕೇಂದ್ರಗಳು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿವೆಯೇ ? ನಮ್ಮ ಆಲೋಚನೆಯಾದರೂ ಏನು ? ಏನಾದರೂ ಯೋಚಿಸಿರಲೇಬೇಕಲ್ಲವೇ ? ಸೋಂಕಿನ ಪ್ರಮಾಣ ಮತ್ತು ಪ್ರಸರಣ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಎಲ್ಲ ರೀತಿಯ ಚಟುವಟಿಕೆಗಳಿಗೂ ಅವಕಾಶ ನೀಡುತ್ತಿರುವ ಅಧಿಕಾರ ವರ್ಗದಲ್ಲಿ ಈ ಆಲೋಚನೆ ಬಂದಿರಬೇಕಲ್ಲವೇ ? ಇದಕ್ಕೆ ತಾರ್ಕಿಕ ವಿವರಣೆ ಖಂಡಿತವಾಗಿಯೂ ಬೇಕಿದೆ.

ಶೋಧಿಸಬೇಕಾದ ಪ್ರಶ್ನೆಗಳು ಹಲವು

ಇದೇ ರೀತಿ ಲಾಕ್ ಡೌನ್ ಪರಿಣಾಮದಿಂದ ಮತ್ತು ಆರ್ಥಿಕ ಹಿಂಜರಿತದ ಪರಿಣಾಮ ದೇಶಾದ್ಯಂತ ವೇತನ ಪಡೆಯುವಂತಹ ನೌಕರರ ಮತ್ತು ಕೂಲಿಯಿಲ್ಲದ ಜನರ ಜೀವನೋಪಾಯ ಸತತವಾಗಿ ಕುಸಿಯುತ್ತಿರುವುದರ ಪರಿಣಾಮ ಏನು ಎನ್ನುವುದು ನಮಗೆ ತಿಳಿದಿಲ್ಲ. ದೇಶದಲ್ಲಿ ಜನಸಾಮಾನ್ಯರ ಕೊಳ್ಳುವ ಸಾಮರ್ಥ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ರಫ್ತು ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಫಸಲನ್ನು ಏನು ಮಾಡಬಹುದು ಎನ್ನುವುದೂ ನಮಗೆ ತಿಳಿದಿಲ್ಲ.

ನಮ್ಮ ಗೋದಾಮುಗಳಲ್ಲಿ ಭರ್ತಿ ದವಸ ಧಾನ್ಯಗಳು ತುಂಬಿದ್ದರೂ ಇತ್ತ ಜನಸಾಮಾನ್ಯರು ಹಸಿವಿನಿಂದ ಸಾಯುತ್ತಿರುವ ವಿಡಂಬನೆಯನ್ನು ನಾವು ಕಾಣಲಿದ್ದೇವೆಯೇ ? ನಗರಗಳಲ್ಲಿರುವ ಹಿತವಲಯದ ಜನರು ನಿತ್ಯ ಹಾಲು ಖರೀದಿಸುತ್ತಿದ್ದಾರೆ ಆದರೆ ಹಾಲು ಪೂರೈಸುವವರಿಗೆ ಸೂಕ್ತ ಬೆಲೆಯಲ್ಲಿ ಹಣ ಪಾವತಿಸಲಾಗುತ್ತಿದೆಯೇ ? ಈ ವಿಚಾರದಲ್ಲಿ ನಾಗರಿಕರಿಗೆ ಮನದಟ್ಟಾಗುವಂತೆ ತಿಳಿಸಿ ಹೇಳುವ ಹಣಕಾಸು ತಜ್ಞರು ಸರ್ಕಾರದಲ್ಲಿ ಇಲ್ಲವೇ ಇಲ್ಲ.

ಇನ್ನೂ ಮುಖ್ಯವಾದ ಸಂಗತಿ ಎಂದರೆ, ನಮ್ಮ ನಡುವೆ ವಿಶ್ಲೇಷಕರು ಮತ್ತು ಚರ್ಚಾಪಟುಗಳು ಹೇರಳವಾಗಿ ಲಭ್ಯವಿದ್ದರೂ, ವಿದ್ವತ್ ಪೂರ್ಣ ಎನ್ನಬಹುದಾದ ಸಾಮಾಜಿಕ ತತ್ವಶಾಸ್ತ್ರಜ್ಞರು ಇಲ್ಲ. ಭಾರತ ಇಂದು ಎದುರಿಸುತ್ತಿರುವ ವೈದ್ಯಕೀಯ, ಆರ್ಥಿಕ ಮತ್ತು ಪರಿಸರ ಸಂಬಂಧಿತ ಬಿಕ್ಕಟ್ಟಿನ ಎಲ್ಲ ಅಂಶಗಳನ್ನೂ ಪರಸ್ಪರ ಸಂಪರ್ಕಿಸಿ ಇದರ ಜಾಗತಿಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಭಾರತದ ಪ್ರಜೆಗಳಿಗೆ ಸಾಧ್ಯವಾಗುತ್ತಿಲ್ಲ.

ದೇಶದ ನೈಸರ್ಗಿಕ ಸಂಪತ್ತು ಮತ್ತು ಸಂಪನ್ಮೂಲಗಳನ್ನು, ಮಾನವ ಸಂಪನ್ಮೂಲಗಳನ್ನು ಏಕಸ್ವಾಮ್ಯ ಕಾರ್ಪೋರೇಟ್ ಉದ್ಯಮಿಗಳ ಲಾಭಗಳಿಕೆಗಾಗಿ ಲೂಟಿ ಮಾಡಲಾಗುತ್ತಿರುವುದರಿಂದಲೇ ಭಾರತದ ಪ್ರಜೆಗಳು ಕೋವಿದ್ 19ನಿಂದ ಹೆಚ್ಚಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದು ಸುಸ್ಪಷ್ಟವಾಗಿ, ಧೈರ್ಯದಿಂದ ಹೇಳಲು ನಮ್ಮ ನಡುವೆ ದಿ. ಅನಿಲ್ ಅಗರ್ವಾಲ್ ಅವರಂತಹ ತಜ್ಞರು ಇಲ್ಲ.

ಈ ಬಿಕ್ಕಟ್ಟು ಎಲ್ಲರನ್ನೂ ಬಾಧಿಸಿದೆ. ಸರ್ಕಾರಕ್ಕೂ ಇದರ ಬಿಸಿ ತಟ್ಟಿದೆ. ಸಿಡಿಲಿನಂತೆ ಎರಗಿದೆ. ಎಲ್ಲರೂ ಸಹ, ವಿಶೇಷವಾಗಿ ಆಡಳಿತಾರೂಢ ಸರ್ಕಾರ ದಿನನಿತ್ಯ ಇದರಿಂದ ಪಾಠ ಕಲಿಯುವಂತಾಗಿದೆ. ಆದರೆ ಜ್ಞಾನದ ಕೊರತೆ ನಮ್ಮೊಳಗಿನ ಪೊಳ್ಳುತನವನ್ನು ಹೊರಗೆಡಹುತ್ತಿದೆ.

ಕುತೂಹಲಕಾರಿ ಸಂಗತಿ ಎಂದರೆ ಕೋವಿದ್ 19 ನಿವಾರಣೆಗೆ ಲಸಿಕೆ ಕಂಡುಹಿಡಿಯುವ ಬಗ್ಗೆ ಪುಂಖಾನುಪುಂಖವಾಗಿ ಊಹೆಗೂ ನಿಲುಕದಂತಹ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತಿದೆ. 6 ರಿಂದ 12 ತಿಂಗಳಲ್ಲಿ ಲಸಿಕೆ ಸಿದ್ಧವಾಗುತ್ತಿದೆ ಎಂದವರೇ ಈಗ ಭಾರತದ 130 ಕೋಟಿ ಜನರನ್ನು ತಲುಪುವಷ್ಟು ಲಸಿಕೆಗೆ ಇನ್ನೂ ಐದಾರು ವರ್ಷ ಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಬಹುಶಃ ನಾವು ಕೊರೋನಾ ಯುಗದಲ್ಲಿ ಊಹೆಗಳಲ್ಲೇ ಬದುಕುತ್ತೇವೆ ಎನಿಸುತ್ತದೆ.

ನಮ್ಮನ್ನು ರಕ್ಷಿಸುವವರು ಎಂದು ಅವತರಿಸುತ್ತಾರೋ ಎನ್ನುವ ಕುತೂಹಲ ಸಮಸ್ತ ಜನತೆಯಲ್ಲೂ ಕಂಡುಬರುತ್ತಿದೆ. ಆದರೆ ಅಂತಹ ಸಂರಕ್ಷಕನೊಬ್ಬ ಅವತರಿಸುತ್ತಾನೆ ಎಂಬ ನಿರೀಕ್ಷೆಯಲ್ಲಿರುವುದು ಮಾನವ ಸಮಾಜದ ಜ್ಞಾನ ಪರಂಪರೆಗೆ ಮತ್ತು ಆತ್ಮಗೌರವಕ್ಕೆ ಸಲ್ಲುವುದಲ್ಲ. ಸಾಂಕ್ರಾಮಿಕ ಪಿಡುಗಿನ ಕಬಂಧ ಬಾಹುಗಳಲ್ಲಿ ಸಿಲುಕಿ, ಆರ್ಥಿಕ ಹಿಂಜರಿತವನ್ನು ಎದುರಿಸಿ, ಯುದ್ಧದ ವಾತಾವರಣವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಈ ದೇಶದ ನಾಗರಿಕರಾದ ನಾವು ಏನು ಮಾಡಬೇಕು ?

ಪ್ರಭುತ್ವದ ಆಧಾರ ಸ್ತಂಭಗಳು

ವಸ್ತುಸ್ಥಿತಿಯನ್ನು ಅರಿಯುವುದೆಂದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ಶಕ್ತರಾಗಿರುವುದು ಎಂದರ್ಥ. ಈಗಿನ ವಾಸ್ತವ ಸನ್ನಿವೇಶ, ಪರಿಸ್ಥಿತಿ ಹೇಗಿದೆ ಎಂದು ನಮಗೆ ತಿಳಿಯಬೇಕಿದೆ ಎಂದು ನಾವು ಆಗ್ರಹಿಸಲು ಇದು ಸಕಾಲ. ಕೊರೋನಾ ವೈರಾಣು ಮತ್ತು ಅದರ ಪರಿಣಾಮವನ್ನು ಮುಚ್ಚಿಟ್ಟಿದ್ದಕ್ಕಾಗಿ ಚೀನಾ ತೀವ್ರ ಖಂಡನೆಗೊಳಗಾಗಿದೆ.

ನಾವೂ ಸಹ ಇದೇ ಆರೋಪವನ್ನು ಎದುರಿಸಬೇಕಿಲ್ಲ. ಪ್ರಭುತ್ವದ ಮೂರು ಪ್ರಮುಖ ಆಧಾರ ಸ್ತಂಭಗಳ ಪೈಕಿ ಜ್ಞಾನವನ್ನು ಹಂಚಿಕೊಳ್ಳುವ ಹೊಣೆಗಾರಿಕೆ ಕಾರ್ಯಾಂಗದ ಮೇಲಿರುತ್ತದೆ. ಇದು ಕಾರ್ಯಾಂಗದ ಕರ್ತವ್ಯವೂ ಹೌದು. ದೇಶವನ್ನು ಕಾಡುತ್ತಿರುವ ಕೊರೋನಾ ಸಾಂಕ್ರಾಮಿಕ ಪಿಡುಗಿನ ಬಗ್ಗೆ, ಆರ್ಥಿಕ ಕುಸಿತ ಮತ್ತು ಹಿಂಜರಿತದ ಬಗ್ಗೆ ಹಾಗೂ ಗಡಿ ಪ್ರದೇಶದಲ್ಲಿ ಚೀನಾದೊಡನೆ ನಡೆಯುತ್ತಿರುವ ಸಂಘರ್ಷದ ಬಗ್ಗೆ , ಭಾರತದ ಪ್ರಜೆಗಳಾದ ನಾವು ಸಮಗ್ರ ಮಾಹಿತಿ ಪಡೆಯುವ ಹಕ್ಕು ಹೊಂದಿದ್ದೇವೆ, ಪಡೆಯಬೇಕಿದೆ.

ಇದಕ್ಕೆ ಈ ದೇಶ ಸಿದ್ಧವಾಗಿದೆಯೇ ? ಅಥವಾ ವೈರಾಣು ಮತ್ತು ಯುದ್ಧ ಎರಡೂ ಅಪಾಯಗಳನ್ನು, ಸವಾಲುಗಳನ್ನು ಎದುರಿಸಲು ದೇಶ ಸಜ್ಜಾಗಿದೆಯೇ ? ಸೆಪ್ಟಂಬರ್ 11ರಂದು ನಮ್ಮ ವಿದೇಶಾಂಗ ಸಚಿವರಾದ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಏರ್ಪಟ್ಟಿರುವ ಒಪ್ಪಂದ ನಿಜಕ್ಕೂ ಶ್ಲಾಘನೀಯವಾದುದು. ಇದು ಉಭಯ ದೇಶಗಳನ್ನು ಯುದ್ಧದ ಸನ್ನಿವೇಶದಿಂದ ಮುಕ್ತಗೊಳಿಸಿದೆ.

ಆದರೆ ಈ ಮಾಸ್ಕೋ ಒಮ್ಮತದ ಒಪ್ಪಂದವನ್ನು ಉಲ್ಲಂಘಿಸುವ ಸನ್ನಿವೇಶ ಎದುರಾದರೆ, ಗಡಿಯಲ್ಲಿ ಕ್ಷಿಪಣಿಗಳು ಸದ್ದುಮಾಡಲಾರಂಭಿಸುತ್ತವೆ. ಯುದ್ಧ ಮತ್ತು ಕೊರೋನಾ ವೈರಾಣು ಭಾರತಕ್ಕೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಮೊದಲ ವಿಶ್ವ ಮಹಾ ಯುದ್ಧ ಸಂಭವಿಸಿದ ಬೆನ್ನಲ್ಲೇ 1918-20ರ ಸ್ಪಾನಿಷ್ ಫ್ಲೂ ಭಾರತವನ್ನು ಹಿಂಡಿ ಹಿಪ್ಪೇಕಾಯಿ ಮಾಡಿದ್ದನ್ನು ಕಂಡಿದ್ದೇವೆ. ಯುದ್ಧಭೂಮಿಯಿಂದ ಸೋಂಕು ಹೊತ್ತುಕೊಂಡೇ ಹಿಂದಿರುಗಿದ ಭಾರತದ ಯೋಧರು ಸಾಂಕ್ರಾಮಿಕ ಸೋಂಕನ್ನು ಹಳ್ಳಿ ಹಳ್ಳಿಗೂ ವ್ಯಾಪಿಸಲು ಕಾರಣರಾಗಿಬಿಟ್ಟರು. 1 ಕೋಟಿ 70 ಲಕ್ಷ ಭಾರತೀಯರು ಬಲಿಯಾಗಬೇಕಾಯಿತು.

ಒಂದು ವೇಳೆ ಈ ಯುದ್ಧ ಸಂಭವಿಸಿದ್ದೇ ಆದಲ್ಲಿ ಅದರಿಂದ ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಹಣಕಾಸು ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಕಾರ್ಯಾಂಗ ಈ ದೇಶದ ಪ್ರಜೆಗಳಿಗೆ ಸ್ಪಷ್ಟಪಡಿಸಬೇಕು. ಭಾರತ ಚೀನಾ ಗಡಿ ವಿವಾದಕ್ಕೆ ಇಂದು ಅಗತ್ಯವಾಗಿ ಬೇಕಿರುವುದು ದೇಶಪ್ರೇಮದ ಯುದ್ಧೋನ್ಮಾದವಲ್ಲ ಬದಲಾಗಿ ರಾಜತಾಂತ್ರಿಕ ಮಾತುಕತೆಗಳು ಬೇಕಿವೆ. ಈ ನಿಟ್ಟಿನಲ್ಲಿ ದೇಶದ ಸಮಸ್ತ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಾರ್ಯಾಂಗದ ಕರ್ತವ್ಯ.

ಸಂಸತ್ತಿನಲ್ಲಿ ವಾತಾವರಣ

ಇಲ್ಲಿ ಪ್ರಭುತ್ವದ ಎರಡನೆ ಆಧಾರ ಸ್ತಂಭ, ಶಾಸಕಾಂಗದ ಪಾತ್ರ ಮುಖ್ಯವಾಗುತ್ತದೆ. ಅರ್ಧ ಹೆಜ್ಜೆ ಮುಂದಿಟ್ಟಿರುವ ಭಾರತದ ಸಂಸತ್ತಿನ ಕಲಾಪ ನಡೆಯುತ್ತಿದೆ. ಹದಿನೈದು ದಿನಗಳ ಕಾಲ ಸಂಸದರು ಖುದ್ದು ಹಾಜರಾಗಲಿದ್ದಾರೆ. ಇದು ಸಾಮಾನ್ಯವಾಗಿ ನಡೆಯುವ ಅವಧಿಯಲ್ಲಿ ಅರ್ಧದಷ್ಟು ಅವಧಿ ಮಾತ್ರ ನಡೆಯುವ ಕಲಾಪವಾಗಲಿದೆ.

ಕೊರೋನಾ ಕುರಿತ ನಮ್ಮ ಕಾಳಜಿಯ ಹಿನ್ನೆಲೆಯಲ್ಲಿ ಇದು ಉತ್ತಮ ಹೆಜ್ಜೆ. ಆದರೆ ಸಂಸತ್ತಿನ ಕಲಾಪವೇ ಬೇರೆ, ಸಂಸತ್ತಿನ ಉತ್ಸಾಹ ಮತ್ತು ಕಾಳಜಿಯೇ ಬೇರೆ. ಸಂಸತ್ ಕಲಾಪದ ವೇಳೆ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸುವ ಮೂಲಕ, ಸರ್ಕಾರದಿಂದ ಮಾಹಿತಿ ಪಡೆಯಲು ಸಂಸದರಿಗೆ ಇರುವ ಬ್ರಹ್ಮಾಸ್ತ್ರವೊಂದನ್ನು ಕಸಿದುಕೊಂಡಿರುವುದು ದುರಂತ. ಇದಕ್ಕೂ ಹೆಚ್ಚಿನ ದುರಂತಗಳನ್ನು ನಾವು ಸಂಸತ್ತಿನಲ್ಲಿ ಕಾಣುವ ಸಾಧ್ಯತೆಗಳಿವೆ.

ಬ್ರಿಟೀಷರ ಆಳ್ವಿಕೆಯಲ್ಲಿ ಶಾಸಕಾಂಗವೇ ಇರಲಿಲ್ಲ. ಆದರೂ ದೆಹಲಿಯಲ್ಲಿದ್ದ ಇಂಪೀರಿಯಲ್ ಶಾಸಕಾಂಗ ಸಮಿತಿ ಈ ದೇಶದ ಜನಕ್ಕೆ ಅನ್ಯಾಯ ಮಾಡಿತ್ತು. 1919ರ ಅರಾಜಕತೆ ಹಾಗೂ ಕ್ರಾಂತಿಕಾರಿ ಅಪರಾಧಗಳ ಕಾಯ್ದೆ, ರೌಲಟ್ ಕಾಯ್ದೆಯೆಂದು ಜನಪ್ರಿಯವಾಗಿದೆ, ಈ ಸಮಿತಿಯಲ್ಲಿ 1919ರ ಮಾರ್ಚ್ 18ರಂದು ಅಂಗೀಕೃತವಾಗಿತ್ತು. ಇದು ಮೂಲತಃ ಮಹಾಯುದ್ಧಕ್ಕೆ ನೆರವಾಗಲು ರೂಪಿಸಲಾದ ಕಾಯ್ದೆಯಾಗಿತ್ತು.

ಆದರೆ ಇದರ ಪರಿಣಾಮ ದೇಶದಲ್ಲಿ ವ್ಯಕ್ತಿಗತ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ವಾಕ್ ಸ್ವಾತಂತ್ರ್ಯ ಮತ್ತು ಸಭೆ ಸೇರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. 1975-77ರ ತುರ್ತುಪರಿಸ್ಥಿತಿ ಹೇರುವ ಸಂದರ್ಭದಲ್ಲೂ ಸಹ ಸಂಸತ್ತಿನ ಅನುಮೋದನೆ ಪಡೆಯಲಾಗಿತ್ತು.

ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಸಕ್ತ ಸಂಸತ್ತಿನಿಂದ ಹೆಚ್ಚಿನ ಎಚ್ಚರಿಕೆ ಮತ್ತು ವಿವೇಕಯುತ ನಡೆಯನ್ನು ನಿರೀಕ್ಷಿಸಬೇಕಾಗುತ್ತದೆ. ದೇಶ ಒಂದು ಮಾರಣಾಂತಿಕ ವೈರಾಣುವಿನ ಅಪಾಯ ಎದುರಿಸುತ್ತಿರುವಾಗ, ಎಂದೂ ಕಾಣದಂತಹ ಆರ್ಥಿಕ ಹಿನ್ನಡೆ ಎದುರಿಸುತ್ತಿರುವಾಗ, ಯುದ್ಧದ ಕಾರ್ಮೋಡ ಕವಿಯುತ್ತಿರುವಾಗ ರೌಲಟ್ ಕಾಯ್ದೆಯ ಚಿಂತನೆಗಳು ಸರ್ಕಾರದ ಕಲ್ಪನೆಯಲ್ಲೂ ಇರಕೂಡದು.

ಇಲ್ಲಿ ಪ್ರಭುತ್ವದ ಮೂರನೆಯ ಆಧಾರ ಸ್ತಂಭ ನ್ಯಾಯಾಂಗದ ಪಾತ್ರ ಮುನ್ನೆಲೆಗೆ ಬರುತ್ತದೆ. ವಿಧಿ 370, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಜಮ್ಮು ಕಾಶ್ಮೀರ ಹೈಕೋರ್ಟಿನಲ್ಲಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಸಂದರ್ಭದಲ್ಲಿ ಭಾರತದ ನ್ಯಾಯಾಂಗ ತನ್ನ ಸ್ವಾಯತ್ತತೆಯನ್ನು ಸಾಧಿಸಿ ತೋರಿಸಬಹುದಿತ್ತು.

ತನ್ನ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸಾಮಥ್ರ್ಯವನ್ನು ಪ್ರದರ್ಶಿಸಬಹುದಿತ್ತು. ಏನು ಹೇಳಬೇಕಾಗಿದೆಯೋ, ಏನನ್ನು ಮನದಟ್ಟು ಮಾಡಬೇಕಾಗಿದೆಯೋ ಅದನ್ನು ಹೇಳಲು ಕೆಲವೇ ಪದಗಳು ಸಾಕಾಗುತ್ತವೆ. ನ್ಯಾ ಚಂದ್ರಚೂಡ್ ಹೇಳಿರುವಂತೆ “ ಪ್ರತಿರೋಧ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಯ ರಕ್ಷಣಾ ಕವಚ ಇದ್ದಂತೆ ”.

ಇಂದು ಪ್ರಭುತ್ವದ ಸಾಂಸ್ಥಿಕ ನೆಲೆಯ ಸುತ್ತ ಜಡತ್ವದ ಲಕ್ಷಣಗಳು ಗೋಚರಿಸುತ್ತಿವೆ. ಇದು ಈ ಸಾಂಸ್ಥಿಕ ನೆಲೆಯ ಉಸಿರನ್ನು ಕಟ್ಟಿಸುತ್ತದೆ, ಹಾಗೆಯೇ ನಮ್ಮ ಉಸಿರನ್ನೂ ಸಹ. ಮಾಧ್ಯಮಗಳು ನಮ್ಮನ್ನು, ಅಂದರೆ ಭಾರತದ ಪ್ರಜೆಗಳನ್ನು, ಮುನ್ನಡೆಸುತ್ತಿರುವ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯಕ್ಕೆ ಜೀವ ಕೊಡುವ ಸಾಧನಗಳಾಗಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ದಿನದ ಸುದ್ದಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ ಗುರುಕುಲ ಶಾಲೆ (Gurukul School) ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ವರ್ಚಸ್ಸನ್ನು ಸಾಬೀತುಪಡಿಸಿದೆ. ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ಮದಿಹಾ ಸಾಧನೆಯ ಶಿಖರದಲ್ಲಿ

ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಮದಿಹಾ ಅವರು ಒಟ್ಟು ಶೇ. 98 ಅಂಕಗಳನ್ನು ಗಳಿಸುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಸಾಧನೆಗೈದಿದ್ದಾರೆ. ಈಕೆಯ ಸಾಧನೆಯು ಸಹಪಾಠಿಗಳಿಗೆ ಮತ್ತು ಕಿರಿಯ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅಲ್ಲದೇ ಕುಶಾಲ್‌ ಶೇ. 97 ದ್ವಿತೀಯ ಹಾಗೂ ಸಮರ್ಥ್‌ 95.5 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಗಮನ ಸೆಳೆದ ಫಲಿತಾಂಶ: ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಿದೆ.

ಡಿಸ್ಟಿಂಕ್ಷನ್ ಸಾಧಕರು: 15 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಥಮ ಶ್ರೇಣಿ: ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉತ್ತಮ ಫಲಿತಾಂಶ: ಉಳಿದ ಎಲ್ಲಾ ವಿದ್ಯಾರ್ಥಿಗಳು ಸಹ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶಾಲೆಯು ನೂರಕ್ಕೆ ನೂರರಷ್ಟು ಫಲಿತಾಂಶದತ್ತ ದಾಪುಗಾಲು ಹಾಕಿದೆ.

ಯಶಸ್ಸಿನ ಹಿಂದಿನ ಶಕ್ತಿ:

ವಿದ್ಯಾರ್ಥಿಗಳ ಈ ಭವ್ಯ ಸಾಧನೆಗೆ ಶಾಲೆಯ ವ್ಯವಸ್ಥಿತ ಮಾರ್ಗದರ್ಶನವೇ ಕಾರಣ ಎಂದು ಆಡಳಿತ ಮಂಡಳಿ ತಿಳಿಸಿದೆ. ಶಾಲಾ ಕಾರ್ಯದರ್ಶಿ ಅಬ್ದುಲ್ ಸರ್ ಅವರ ನಿರಂತರ ಮಾರ್ಗದರ್ಶನ, ಆಡಳಿತ ಮಂಡಳಿಯ ಬೆಂಬಲ, ಮುಖ್ಯೋಪಾಧ್ಯಾಯರ ಸಮರ್ಥ ನಾಯಕತ್ವ ಹಾಗೂ ಶಿಕ್ಷಕ ವೃಂದದವರ ಅವಿರತ ಪರಿಶ್ರಮ ಈ ಯಶಸ್ಸಿಗೆ ಬುನಾದಿಯಾಗಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಶಾಲಾ ಕಾರ್ಯದರ್ಶಿ ಅಬ್ದುಲ್‌, “ವಿದ್ಯಾರ್ಥಿಗಳ ಏಕಾಗ್ರತೆ, ಪೋಷಕರ ಸಹಕಾರ ಮತ್ತು ಶಿಕ್ಷಕರ ಬೋಧನಾ ಶೈಲಿಯಿಂದ ಈ ಮೈಲಿಗಲ್ಲು ಸಾಧ್ಯವಾಗಿದೆ. ಈ ಯಶಸ್ಸು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಉನ್ನತ ಗುರಿಗಳನ್ನು ತಲುಪಲು ಪ್ರೇರಣೆಯಾಗಲಿ,” ಎಂದು ಹಾರೈಸಿದ್ದಾರೆ.
ಶಾಲೆಯ ಈ ಸಾಧನೆಗೆ ಪೋಷಕರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭಕೋರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ

Published

on

ಸುದ್ದಿದಿನ,ದಾವಣಗೆರೆ: ಬಿಜೆಪಿಯು ಪಂಚರಾಜ್ಯಗಳ ಚುನಾವಣೆಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆ ಮಾಡಲು ಹೋಗಿ ಮುಖಭಂಗಕ್ಕೀಡಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕವಿತಾ ಚಂದ್ರಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಹುನ್ನಾರ ದೇಶದ ಜನರ ಮುಂದೆ ಬಯಲಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಮಹಿಳೆಯರ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ಹೇಳುತ್ತಿರುವ ಬಿಜೆಪಿಯು ಮಹಿಳೆಯರ ಭಾವನೆ ಜೊತೆ ಚೆಲ್ಲಾಟ ಆಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳು ಡಿಲಿಮಿಟೇಶನ್ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆಯೇ ವಿನಾಃ ಮಹಿಳಾ ಮೀಸಲಾತಿ ಮಸೂದೆಗಲ್ಲ. ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿದ್ದರೆ 2023 ರ ಕಾನೂನನ್ನು ಜಾರಿಗೆ ತರಬೇಕು.

ನಾರಿ ಶಕ್ತಿ ವಂದನ ಚೌಕಟ್ಟು ಎಂದು ವ್ಯಾಪಕವಾಗಿ ಕರೆಯಲ್ಪಡುವ 2023ರ ಕಾನೂನು, ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯ ಅನುಷ್ಠಾನವನ್ನು ಹೊಸ ಜನಗಣತಿಯನ್ನು ಪೂರ್ಣಗೊಳಿಸಿ ನಂತರ ಡಿಲಿಮಿಟೇಶನ್ ಬಗ್ಗೆ ಚರ್ಚಿಸಿ
ಅನುಷ್ಠಾನಗೊಳಿಸಲಿ. ಅದನ್ನು ಬಿಟ್ಟು ವಿನಾಕಾರಣ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಸೋಲಾಗಿರುವುದು “ಪ್ರಜಾಪ್ರಭುತ್ವದ ಗೆಲುವು. ಭಾರತದ ಒಕ್ಕೂಟ ರಚನೆ ಬದಲಾಯಿಸಲು ಮುಂದಾಗಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪಿತೂರಿಗೆ ತಕ್ಕ ಉತ್ತರ ನೀಡಲಾಗಿದೆ. ಇದು ಸಂವಿಧಾನಕ್ಕೆ ಸಿಕ್ಕ ಗೆಲುವು, ದೇಶಕ್ಕೆ, ವಿರೋಧ ಪಕ್ಷದ ಒಗ್ಗಟ್ಟಿಗೆ ಸಿಕ್ಕ ಗೆಲುವು.

ಉತ್ತರ ಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಸೃಷ್ಟಿಸಿ ಹೇಗಾದರೂ ಅಧಿಕಾರದಲ್ಲಿ ಉಳಿಯಬೇಕೆಂಬ ಬಿಜೆಪಿಯ ಪಿತೂರಿ ಜನರಿಗೆ ಅರ್ಥವಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಡಿಮೆ ಸ್ಥಾನ ಆಗುವ ಆತಂಕ ಇದೆ. ಯಾವುದೇ ರೀತಿಯಲ್ಲಿಯೂ ಚರ್ಚಿಸದೇ ಏಕಾಏಕಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಗೆ ಮುಂದಾಗಿದ್ದೇಕೆ ಎಂದು ಕವಿತಾ ಚಂದ್ರಶೇಖರ್
ಪ್ರಶ್ನಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

Published

on

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು ನನಗೆ ಬಹಳ ಹೆಮ್ಮೆ ತಂದಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಜಿ.ಭರತ್ ಮತ್ತು ಪೋಷಕರನ್ನು ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ವಿದ್ಯಾರ್ಥಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸಂತಸದ ವಿಷಯ. ವಿದ್ಯಾ ಲಕ್ಷ್ಮಿ ಶಾಲೆಯವರು ಬಹಳ ಪ್ರಾಮಾಣಿಕವಾಗಿ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿ ಅವರನ್ನು ಉನ್ನತ ಮಟ್ಟಕ್ಕೆ ತರಲು ಶ್ರಮಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ನಮಗೆ ಮೊದಲ ಆದ್ಯತೆ ದೇಗುಲಗಳಿಗಿಂತ ಶಾಲೆಗಳಿಗೆ ಇರಬೇಕು. ಇಂತಹ ಶಾಲೆಯೆಂಬ ದೇಗುಲದಿಂದ ಹೊರ ಬರುವ ಭರತ್‌ನಂತಹ ಮಕ್ಕಳು ಮುಂದಿನ ದಿನಗಳಲ್ಲಿ ಈ ದೇಶದ ಉನ್ನತ ಅಧಿಕಾರಿಗಳಾಗಿ ಅಥವಾ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending