ಬಹಿರಂಗ
KGF ನ ನಿಜ ರಕ್ತಪಾತ : ಎಲ್ಲರೂ ಓದಲೇ ಬೇಕಾದ ಲೇಖನ..!
KGF ಎಂಬ ಸಿನೆಮಾ ಇನ್ನೇನು ತೆರೆಯ ಮೇಲೆ ಬರಲಿದೆ.ಸಿನೆಮಾದ ನಾಯಕ ಯಶ್ ಎಂಬ ಕಾರಣದಿಂದ ಅದಕ್ಕೆ ಭಾರೀ ಪ್ರಚಾರ ಮತ್ತು ನಿರೀಕ್ಷೆ ಎರಡೂ ನಡೆದಿದೆ.ಆದರೆ ಈ ಹೆಸರಿನ ಹಿಂದೆ ದಲಿತರ ರಕ್ತಸಿಕ್ತ ಅಧ್ಯಾಯ ಮತ್ತು ಚಳುವಳಿಯನ್ನು ದಿಟ್ಟವಾಗಿ ಮುನ್ನಡೆಸಿದ ಇತಿಹಾಸ ಇರುವ ವಿಚಾರ ಎಷ್ಟು ಜನರಿಗೆ ಗೊತ್ತಿದೆ?
ಸುಮಾರು ಹದಿಮೂರು ಸಾವಿರ ಅಡಿಗಳಷ್ಟು ಆಳವಿರುವ ಜಗತ್ತಿನ ಏಕೈಕ ಆಳದ ಗಣಿತೋಡಿದ ಅವರು ಎಷ್ಟು ನರಕ ಹಿಂಸೆ ಅನುಭವಿಸಿದರೋ ಯಾರಿಗೆ ಗೊತ್ತು? 1881 ರಿಂದ1930 ರ ಅವಧಿಯಲ್ಲಿ ಜಗತ್ತಿಗೆ ಮೂರುಲಕ್ಷಕ್ಕೂ ಹೆಚ್ಚು ಕಿಲೋಗ್ರಾಂ ತೂಕದ ಚಿನ್ನವನ್ನು ಸಂಪಾದಿಸಿಕೊಟ್ಟ ಅವರ ಶ್ರಮ ಬೆವರಿಗೆ ಸಿಕ್ಕ ಬೆಲೆಯೇನು ಗೊತ್ತಾ 12000 ಕಾರ್ಮಿಕರ ಬಲಿ, ಇದು ಯಾರಿಗೆ ಗೊತ್ತು?
ಹೌದು 1881 ರಲ್ಲಿ ಚಿನ್ನದ ಗಣಿಗಾರಿಕೆ ಕೆಲಸಕ್ಕೆ ಬ್ರಿಟೀಷ್ ಸರ್ಕಾರ ದಲಿತರನ್ನ ಆಯ್ಕೆ ಮಾಡಿತು, ಅದು ಮುಂದಾಲೋಚನೆ ಮಾಡಿ, ಕೇವಲ ಕೂಲಿಗಾಗಿ ಹಗಲು-ರಾತ್ರಿಯನ್ನದೆ ದುಡಿಯುತ್ತಿದ್ದ ಶ್ರಮಿಕವರ್ಗವಾಗಿತ್ತು, ಬೇರೆ ಪ್ರಭಾವಿ ಜನಾಂಗದವರಂತೆ ಯಾವ ಪಾಲನ್ನು ಅಪೇಕ್ಷಿಸದೆ ಇದ್ದ ಕಾರಣ ಅವರಿಗೆ ಇಂತಿಷ್ಟು ಕೂಲಿ ನಿಗದಿಪಡಿಸಿ, ಗಣಿಯ ಸುತ್ತ ವಸತಿ ವ್ಯೆವಸ್ತೆ ಕಲ್ಪಿಸಿ ದುಡಿಸಿಕೊಳ್ಳಲಾಗಿತ್ತು, ಅದು ಯಾವ ಮಟ್ಟದಲ್ಲಿ ಅಂದರೆ ಗಣಿ ಸುತ್ತಲಿನ ಸುಮಾರು 10-15 ಕಿ ಮೀ ಪ್ರದೇಶದಲ್ಲಿ ಬೇರೆ ಜನಾಂಗಗಳ ಪ್ರವೇಶಕ್ಕೆ ಅವಕಾಶವೇ ಇಲ್ಲದ ಮಟ್ಟಿಗೆ ನಿರ್ಭಂಧಿಸಿದ್ದರೂ, ( ಅದನ್ನು ಈಗಲೂ ಸಹ ಕೆಜಿಎಫ್ ಸುತ್ತಲೂ ನೋಡಬಹುದು ಕೋಲಾರದಲ್ಲಿ ಶೇ 85%ರಷ್ಟು ದಲಿತರೆ ವಾಸವಾಗಿರುವುದೂ ಸಹ,)
ಮೊದಮೊದಲು ಎಲ್ಲಾ ಚನ್ನಾಗಿಯೇ ಇತ್ತು, ಮೇಲ್ಪದರದ ಚಿನ್ನವನ್ನೆಲ್ಲ ತೆಗೆದಾಯಿತು, ಆದರೆ ಎರಡನೆ ಹಂತದ ಗಣಿಗಾರಿಕೆಯು ಬಹಳ ಕ್ಲಿಷ್ಟಕರವಾಗಿತ್ತು ಹೆಚ್ಚು ಹಾಳ ತೋಡಿದಂತೆಲ್ಲ ಮಣ್ಣು ಕುಸಿದು ಅಲ್ಲಿನ ಸುಮಾರು ಕಾರ್ಮಿಕರು ಅಸುನೀಗಿದರು, ಈ ಬಗ್ಗೆ ಬ್ರಿಟೀಷ್ ಅಧಿಕಾರಿಗಳು ಮುತುವರ್ಜಿವಹಿಸಿದರೂ ಸಹ ಹೆಚ್ಚು ಏನು ಮಾಡಲಾಗಲಿಲ್ಲ, 13000ಅಡಿ ಆಳದಲ್ಲಿ ಉಸಿರಾಡಲೂ ಗಾಳಿಯೂ ಇಲ್ಲದ ಪರಿಸ್ಥಿತಿಯಲ್ಲೂ ಸಹ ಸೀಮೆಎಣ್ಣೆಯ ಬತ್ತಿಗಳನ್ನು ಬಳಸಿ ಗಣಿತೋಡುತ್ತಿದ್ದರು, ಎಷ್ಟೋಭಾರಿ ಬತ್ತಿ ಕೆಟ್ಟೋದಂತಃ ಸಂಧರ್ಭದಲ್ಲಿ ಆ ಗುಹೆಗಳಿಂದ ಹೊರಬರಲು ಗೊತ್ತಾಗದೆ ಹಲವರು ಹಸುನೀಗಿದ ಉದಾಹರಣೆಗಳೆ ಹೆಚ್ಚು, ಆಗ ಜೀತದಾರರಾಗಿ ದುಡಿಯುತ್ತಿದ್ದ ಪಂಡೀತ್ ಅಯೋಧಿದಾಸರ ತಂದೆಯೂ ಸಹ ಮಣ್ಣುಕುಸಿದು ಮೃತಪಟ್ಟರು ನಂತರ ಈ ಬಗ್ಗೆ ಚಳುವಳಿಗಳು ಹುಟ್ಟಿಕೊಂಡವು ಅಯೋಧಿದಾಸರು ಇದರ ಮುಂಚೂಣಿ ನಾಯಕರಾಗಿ ನಿಂತರು.
ಆದರೆ ಕೂಲಿಯನ್ನೆ ನಂಬಿ ಬದುಕ್ಕಿದ ಶ್ರಮಿಕರನ್ನ ಎದುರಿಸಿ ದುಡಿಸಿಕೊಳ್ಳುತ್ತಿದ್ದರು, ಆಗಲೇ ಅಲ್ಲಿ ಗಣಿಯ ಮಣ್ಣು ಕುಸಿದು 1800 ಜನ ಕಾರ್ಮಿಕರು ಒಟ್ಟಿಗೆ ಮೃತಪಟ್ಟರು, ಇದು ಚಳುವಳಿಗೆ ತೀವ್ರವಾದ ವೇಗವನ್ನು ನೀಡಿದ್ದು ಎಷ್ಟರಮಟ್ಟಿಗೆಂದರೆ ಸ್ವತಃ ಬಾಬಾಸಾಹೇಬ್ ಅಂಬೇಡ್ಕರರೆ ಕೆಜಿಎಫ್‌ಗೆ ಭೇಟಿನೀಡಿ ಚಳುವಳಿಯಲ್ಲಿ ಭಾಗವಹಿಸಿ ಆಗಿನ ಸರ್ಕಾರಕ್ಕೆ ಹಾಗೂ ಅಲ್ಲಿನ ಆಡಳಿತ ವರ್ಗಕ್ಕೆ ತಾಕಿತು ಮಾಡಿದ್ದರು, ಕಾರ್ಮಿಕರ ಬೇಡಿಕೆಯನ್ನೆಲ್ಲ ಪೂರೈಸಿದ್ದರೂ, ( ನಿಮಗೊಂದು ವಿಚಾರ ತಿಳಿದಿರಲಿ ಭಾರತದಲ್ಲಿ 12 ಗಂಟೆ ಇದ್ದ ದುಡಿಮೆಯ ಅವಧಿಯನ್ನು ರದ್ದುಗೊಳಿಸಿ ಪ್ರಪ್ರಥಮ ಭಾರಿಗೆ ಎಂಟು ಗಂಟೆಗಳ ಅವಧಿ ಮಾತ್ರ ದುಡಿಯಬೇಕೆಂದು, ಹೆಚ್ಚಿನ ಅವಧಿ ಕೆಲಸಕ್ಕೆ ಹೆಚ್ಚು ಕೂಲಿ ಹಾಗೂ ವರ್ಷದ ಆದಾಯದ ಇಂತಿಷ್ಟು ಪ್ರಮಾಣ ಕಾರ್ಮಿಕರಿಗೆ ಬೋನಸ್ ರೂಪದಲ್ಲಿ ಕೊಡಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದರು, ಮೊದಲ ಕಾನೂನು ಮಂತ್ರಿಯಾದಾಗ ಸ್ವತಃ ಮುತುವರ್ಜಿವಹಿಸಿ ಇದನ್ನು ಜಾರಿಗೊಳಿಸಿದರು )
ಸ್ವತಂತ್ರ ನಂತರ ಈ ಪ್ರದೇಶ ರಾಜಕೀಯ ರೂಪ ಪಡೆದು ಚಿನ್ನದ ಅದಿರು ಮಿಶ್ರಿತ ಕಚ್ಚಾ ಮಣ್ಣಿಗಾಗೆ ಇಲ್ಲಿ ಸಾವಿರಾರು ಜೀವಗಳು ಬಲಿಯಾಗಿದ್ದಾರೆ, ತಮ್ಮ ಪ್ರಭಾವಕ್ಕಾಗಿ ಅಂಡರ್‌ವಲ್ಡ್ರ್ ಮಾಫಿಯಾಗಳು ಬೆಳೆದು ನಿಂತಿವೆ, ಅದು ಎಷ್ಟರ ಮಟ್ಟಿಗೆಂದರೆ ಅಲ್ಲಿನ ಯಾವುದೇ ಪೊಲೀಸ್ ಠಾಣೆಯಲ್ಲೂ ಸಹ ಒಬ್ಬ ಅಧಿಕಾರಿ ಆರು ತಿಂಗಳು ಪೂರೈಸಿದರೆ ದೊಡ್ಡ ಸಾಧನೆ ಎನ್ನುವಷ್ಟರ ಮಟ್ಟಿಗೆ, ಇವರ ಪ್ರಭಾವವಿದೆ, ಕತ್ತಲಾದ ನಂತರ ಇಲ್ಲಿ ನಡೆಯುತ್ತಿದ್ದ ಚಟುವಟಿಕೆಗಳನ್ನು ಊಹಿಸಲು ಅಸಾಧ್ಯವಾಗಿತ್ತು, ಅದನ್ನು ಕಣ್ಣಾರೆ ಕಂಡು ಬದುಕುಳಿದವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರಾ, ಅದು ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದಂತಃ ಉಸಿರು ಕಟ್ಟುವ ವಾತಾವರಣದಲ್ಲಿ ಬದುಕಿದ ಉದಾಹರಣೆಗಳೆಷ್ಟೊ, ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದವರೆಷ್ಟೊ ಹಾಗೆ ತಮ್ಮ ಕಣ್ಣಮುಂದೆಯೆ ಬೆಳೆದು ನಿಂತ ಮಕ್ಕಳ ಸಾವುಕಂಡವರೆಷ್ಟೊ, ಈ ಥರಃ ಅಲ್ಲಿನ ರಕ್ತಸಿಕ್ತ ಚರಿತ್ರೆ ಈಗಲೂ ಸಹ ನಡೆಯುತ್ತಿದೆ,
ಈಗೆ ಅವರು ದುಡಿದ ಚಿನ್ನ ಇಂದು ಯಾವ ದೇವರ ಅಥವಾ ದೇವತೆಯ ಅಥವಾ ಹೆಣ್ಣು/ಗಂಡುಗಳ ಮೂರ್ತಿ ಅಥವಾ ದೇಹದ ಮೇಲಿದೆಯೋ ಯಾರಿಗೆ ಗೊತ್ತು?
ಒಟ್ಟಾರೆ ಭದ್ರಾವತಿ ಮತ್ತು ಕೆಜಿಎಫ್ ಗಳಲ್ಲಿನ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದವರು ದಲಿತರು ಎಂಬ ಕಾರಣಕ್ಕಾಗಿ ಮಾಧ್ಯಮಗಳು ಆಸಕ್ತಿ ತೋರಲಿಲ್ಲ, ಅದರಲ್ಲೂ ಶೇ 40% ರಿಂದ 50% ತಮಿಳು ದಲಿತರೂ ಇದ್ದಕಾರಣ ಕನ್ನಡ ಸಂಘಟನೆಗಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದ ನೋವಿನ ಮತ್ತು ವಂಚನೆಯ ಇತಿಹಾಸ ಎಷ್ಟು ಜನಕ್ಕೆ ಗೊತ್ತು.
ಜೀತಗಾರರಾಗಿ ಬದುಕಿದ್ದರೂ ಪಂಡಿತ್ ಅಯೋಧಿದಾಸ್ ರವರ ಶ್ರಮ ಮತ್ತು ಬದ್ಧತೆಯ ಕಾರಣದಿಂದ ಬಾಬಾಸಾಹೇಬರ ಪೂರ್ವದಲ್ಲೇ ಕ್ರಾಂತಿ ಹುಟ್ಟುಹಾಕಿ ಅದನ್ನು ಬೆಳೆಸಲು ಮನುವಾದಿಗಳಿಗೆ ಹೆದರದೆ ಎದೆಯೊಡ್ಡಿದ ಇತಿಹಾಸ ದಾಖಲಾಗದೇ ಇರುವುದೇಕೆ? ಸ್ವತಃ ಬಾಬಾಸಾಹೇಬರ ಭೇಟಿ ಬಳಿಕ ಅವರು ನಡೆಸಿದ ಚಳುವಳಿಯನ್ನು ನಡೆಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಲ್ಲಿ ಹುಲಿಯಂತೆಯೇ ಬದುಕಿದ್ದ ಶ್ರೀ ಸಿ.ಎಮ್.ಆರ್ಮುಗಂ,ಅವರ ಬಳಿಕ RPIಯನ್ನು ಪ್ರತಿನಿಧಿಸಿದ ಕನ್ನಡಿಗರಾದ ಭಕ್ತವತ್ಸಲ,ರಾಜೇಂದ್ರ ರವರಂತಹವರನ್ನು ಕೊಟ್ಟ ಸ್ವಾಭಿಮಾನಿ ದಲಿತರ ಇತಿಹಾಸವೇಕೆ ನಮ್ಮವರಿಗೆ ತಿಳಿದಿಲ್ಲ.
ಇಂದು ಕೆಜಿಎಫ್ ಸಿನಿಮಾ ಬಿಡುಗಡೆಯಾಗಲು ಸಿದ್ದವಾಗಿರುವುದರಿಂದ ಈ ಬಗ್ಗೆ ಬರೆಯಬೇಕಾಯಿತು.ಕನ್ನಡಪ್ರಭ ದಲ್ಲಿ ಬಂದಿರುವ ಕೇಶವಮೂರ್ತಿ ಯವರ ಲೇಖನ ಇದಕ್ಕೆ ಕಾರಣವಾಯಿತು. ಸಿನೆಮಾ ಇಂಥಹ ಭೀಕರ ಚರಿತ್ರೆಯನ್ನು ಹೇಳುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಜಿಎಫ್ ನ ನಿಜವಾದ ಇತಿಹಾಸವನ್ನು ನಮ್ಮವರು ದಾಖಲೆ ಮಾಡಲೇಬೇಕಿದೆ.
ಕನ್ನಡವೆಂದರೆ ಮೂಗು ಮುರಿಯುತ್ತಿದ್ದ ದ್ರಾವಿಡ ಪರಂಪರೆಯ ತಮಿಳುನಾಡು ಇಂದು ಈ ಚಿತ್ರಕ್ಕೆ ಕೆಂಪುಹಾಸಿನ ಸ್ವಾಗತ ನೀಡುತ್ತಿದ್ದಾರೆಂದರೆ ಅದಕ್ಕೆ ಮುಖ್ಯಕಾರಣವೇ ಈ ಮೂಲನಿವಾಸಿಗಳ ರಕ್ತಸಿಕ್ತ ಚರಿತ್ರೆ, ನನ್ನ ದೃಷ್ಟಿಯಲ್ಲಿ ಇದೊಂದೇ ಆ ಚಿನ್ನದ ಶ್ರಮಿಕ ಪೂರ್ವಜರಿಗೆ ಸಲ್ಲಿಸಬಹುದಾದ ಸಣ್ಣಗೌರವ ಅಷ್ಟೆ,
ಇದರ ಮೇಲೂ ಯಾರಾದರು ಇದಕ್ಕೆ ಮಸಿಬಳಿಯುವ ಕೆಲಸ ಮಾಡಿದರೆ ಅದು ಕೇವಲ ಕಟ್ಟುಕಥೆ, ತಮ್ಮ ಜನಾಂಗದ ಮೇಲಿನ ಕುರುಡು ಪ್ರೀತಿ, ಹಾಗೂ ಇತಿಹಾಸಕ್ಕೆ ಮಾಡಿದ ದ್ರೋಹ, ಸಾಧ್ಯವಾದಷ್ಟು ತಲುಪಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



