ದಿನದ ಸುದ್ದಿ
ಕಿಮ್ ಕಿ ಡುಕ್; ಎಣ್ಣೆ ತೀರಿದ ಏಷಿಯಾದ ವಿಕ್ಷಿಪ್ತ ಹಣತೆ
- ಡಾ.ನೆಲ್ಲುಕುಂಟೆ ವೆಂಕಟೇಶ್
ಕಳೆದ ದಕ್ಷಿಣ ಕೊರಿಯಾದ ನಿರ್ದೇಶಕ ಕಿಮ್ ಕಿ ಡುಕ್ ಲಾಟ್ವಿಯಾದ ಆಸ್ಪತ್ರೆಯೊಂದರಲ್ಲಿ ಮರಣ ಹೊಂದಿದ. ಕೊರೋನ ವೈರಸ್ಸು ಈತನನ್ನು ತಿಂದು ಹಾಕಿದೆ. ಕಿಮ್ ಸಾವು ಜಗತ್ತಿನ ಗಂಭೀರ ಸಿನಿಮಾಸಕ್ತರನ್ನು ಕಾಡಿದಂತೆ ನಮ್ಮನ್ನು ಕಾಡಲಿಲ್ಲ. ಕಡೇ ಪಕ್ಷ ಕೇರಳವನ್ನು ಕಾಡಿದಷ್ಟೂ ಕಾಡಲಿಲ್ಲ. ಕೇರಳ ಮನೆ ಮಗನನ್ನು ಕಳೆದುಕೊಂಡ ಹಾಗೆ ಸ್ಪಂದಿಸಿದೆ. [ಮಲಯಾಳಂಗೆ ಆತನ ಬಹುಪಾಲು ಸಿನಿಮಾಗಳು ಡಬ್ ಆಗಿವೆ. ಅಲ್ಲಿ ಅವನ ಸಿನಿಮಾ ಉತ್ಸವಗಳೂ ನಡೆದಿವೆ}.
ಅವನ ಸಾವಿನ ಕುರಿತು ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ತುಸು ಸದ್ದು ಮಾಡಿದ್ದು ಬಿಟ್ಟರೆ ಹೆಚ್ಚೇನೂ ಚರ್ಚೆಯಾಗಲಿಲ್ಲ. ಎಂದಿನಂತೆ ಕರ್ನಾಟಕದ ಸಿನಿಮಾ ಜನ ತಣ್ಣಗೆ ಪ್ರತಿಕ್ರಿಯಿಸಿದರು. ಬಹಳ ಜನ ಕನ್ನಡ ಸಿನಿಮಾದವರಿಗೆ ಈತ ಗೊತ್ತಿದ್ದನೋ ಇಲ್ಲವೋ ತಿಳಿಯದು. ಕನ್ನಡ ಬಾಲಿವುಡ್ಡನ್ನು ಮಾದರಿಯಾಗಿಟ್ಟುಕೊಂಡು ಸಿನಿಮಾ ಮಾಡಲು ಪ್ರಯತ್ನಿಸುತ್ತಿದೆ. ಮಲೆಯಾಳಂಗೆ ಇರುವ ಡಯಸ್ಪೋರಾ ಗುಣದಿಂದಾಗಿ ಅವರನ್ನು ಜಗದ ಜತೆ ಸಂವಾದ ಮಾಡುವ ಮಾಂತ್ರಿಕರನ್ನಾಗಿಸಿದೆ.
ಮಲೆಯಾಳಿಗರು ಮನುಷ್ಯನ ಆಳದ ಇಂಪಲ್ಸಿವ್ ಗುಣಗಳನ್ನು ಹಿಡಿದು ಯೂನಿವರ್ಸಲ್ ಆಗಬಹುದಾದ ಸಿನಿಮಾಗಳನ್ನು ಕಟ್ಟುತ್ತಿದ್ದಾರೆ. ಕನ್ನಡಕ್ಕೆ ಇದು ಯಾಕೊ ಸಾಧ್ಯವಾಗಿಲ್ಲ. ನಮ್ಮಲ್ಲಿ ಯೂನಿಫಾರ್ಮಿಟಿಯ ಫ್ರೇಮಿನಲ್ಲಿಟ್ಟ ಪ್ರೇಮ, ಜೋಕುಗಳು, ಅಂತರಂಗವೇ ಇಲ್ಲದಂತೆ ಕಾಣುವ ಇಟ್ಟಿಗೆ, ಜಲ್ಲಿಯಂಥ ವಿಲನ್‍ಗಳು, ಅವರ ರಕ್ತಪಾತಗಳು ಇವುಗಳನ್ನು ಪದೇ ಪದೇ ತಿರುಗಿಸಿ ಸೂಕ್ಷ್ಮತೆಯುಳ್ಳವರನ್ನು ಸಿನಿಮಾಗಳತ್ತ ನೋಡದ ಹಾಗೆ ಮಾಡಲಾಗಿದೆ.
ಹಿಂಸೆಯಲ್ಲಿ ರಣ ಹಿಂಸೆ ತೋರಿಸುವ ಸಿನಿಮಾ ದುಡ್ಡು ಮಾಡುತ್ತದೆ ಎಂಬ ಸೂತ್ರವೇನೋ ಇವರಿಗೆ ಸಿಕ್ಕಿಬಿಟ್ಟಂತಿದೆ. ಇದು ನೋಡುಗರ ಸಮಸ್ಯೆಯೋ ಇಲ್ಲ ಸಿನಿಮಾ ಮಾಡುವವರ ಸಮಸ್ಯೆಯೋ ತಿಳಿಯದು. ಇಬ್ಬರೂ ಒಬ್ಬರತ್ತ ಒಬ್ಬರು ಮಾತ್ರ ಕೈ ತೋರಿಸಿಕೊಂಡು ಕೂತಿದ್ದಾರೆ. ಇದೆಲ್ಲದರ ನಡುವೆ ಕನ್ನಡ ತೆಳುವಾಗುತ್ತಿದೆ. ಆಧುನಿಕ ಸಂದರ್ಭದಲ್ಲಿ ಆಹಾರ ಸಂಸ್ಕೃತಿ, ಸಿನಿಮಾ, ಸಂಗೀತ ಸಂಸ್ಕøತಿಗಳು ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ವಿಸ್ತರಿಸಲು ಕಾರಣವಾಗುತ್ತಿವೆ. ನಾವು ಇದನ್ನು ಮರೆತಂತೆ ವರ್ತಿಸುತ್ತಿದ್ದೇವೆ.
ಕನ್ನಡದ ಕಲಾತ್ಮಕ ಸಿನಿಮಾಗಳೂ ಸಹ ನನ್ನನ್ನು ಕಾಡಿದ್ದಿಲ್ಲ. ಅವು ಡಾಕ್ಯುಮೆಂಟರಿ ಲೆವೆಲ್ಲಿನಿಂದ ಮೇಲೆದ್ದ ಹಾಗೆ ಕಂಡೇ ಇಲ್ಲ. ಇಷ್ಟಕ್ಕೂ ಸಿನಿಮಾವನ್ನು ಕಲಾತ್ಮಕ, ಕಮರ್ಷಿಯಲ್ ಎಂದು ವಿಂಗಡಿಸುವುದೇ ತಪ್ಪಲ್ಲವೇ? ಕಲಾತ್ಮಕ ಸಿನಿಮಾ ಒಂದನ್ನು ಜನ ನೋಡದಿದ್ದರೆ, ತಿಂದ ಬಂಡವಾಳವನ್ನು ಅದು ವಾಪಸ್ಸು ನೀಡದಿದ್ದರೆ ಅಂಥ ಸಿನಿಮಾವನ್ನು ಯಾಕೆ ಮಾಡಬೇಕು? ಕಮರ್ಷಿಯಲ್ ಚಿತ್ರಕ್ಕೆ ಕಲೆಯ ಸ್ಪರ್ಶವೇ ಇಲ್ಲದಿದ್ದರೆ ಅದೂ ಸಹ ಹುಸಿಯಾದ ರಚನೆಯೇ ಅಲ್ಲವೇ?
ಒಳ್ಳೆಯತನ ಮತ್ತು ಕೆಟ್ಟತನಗಳನ್ನು ಸರಳ ರೇಖೆಗಳಲ್ಲಿ ಇರಿಸಿ ನೋಡುವ ಚಾಳಿಯೊಂದು ಕನ್ನಡವನ್ನು ಆವರಿಸಿಕೊಂಡು ಕೂತಿದೆ. ನಾಯಕನಾದವನು ಹೀಗೆ ಇರಬೇಕು ಎಂಬ ಫಾರ್ಮುಲಾವನ್ನು ಅಚ್ಚು ಕಟ್ಟಾಗಿ ಪಾಲಿಸಲಾಗುತ್ತದೆ. ರಾಮನೊಳಗೂ, ಕೃಷ್ಣನೊಳಗೂ ಅಸಂಖ್ಯಾತ ಓರೆ ಕೋರೆಗಳಿದ್ದವು ಎಂದು ವ್ಯಾಸ, ವಾಲ್ಮೀಕಿಯರು ತೋರಿಸುತ್ತಾರೆ. ಮನುಷ್ಯನಾಗುವುದೆಂದರೆ ಮೃಗೀಯತೆಯಿಂದ ಬಿಡುಗಡೆ ಪಡೆಯುವುದೆಂದು ಅರ್ಥ.
ತಂದೆ ಆ ಮೃಗತ್ವದಿಂದ ಬಿಡುಗಡೆ ಪಡೆದಿದ್ದ ಎಂದರೆ ಮಗನಿಗೆ ಮನುಷ್ಯತ್ವ ಬಂದು ಬಿಡುತ್ತದೆ ಎಂದಲ್ಲ. ಮಗನೂ ಸಂಘರ್ಷ ಮಾಡಿಯೇ ಬದುಕಬೇಕು. ಈ ತಾಕಲಾಟಗಳೇ ಮನಶ್ಯಾಸ್ತ್ರದ ಮೂಲ ತಾಕುಗಳು. ಬುಡಕಟ್ಟು, ನಾಗರಿಕತೆ, ರಾಷ್ಟ್ರಗಳಿಗೂ ಇಂಪಲ್ಸಿವ್ ಕ್ಯಾರೆಕ್ಟರ್ ಇರುತ್ತದೆ. ಪ್ರೇಮ, ಕಾಮ, ಧರ್ಮದ ಸ್ಥಗಿತ ಮೌಲ್ಯಗಳು, ಜಾತಿ, ವರ್ಗಗಳ ದಮನಕಾರಿ ಗುಣಗಳು ರಾಷ್ಟ್ರದ ಶ್ರೇಷ್ಠತೆಯ ಸಮಸ್ಯೆಗಳು. ಹಿಂಸೆ, ಶಾಂತಿ ಕುರಿತಾದ ಹಂಬಲ, ಪ್ರೀತಿ ಕುರಿತ ದಾಹ ಇವೆಲ್ಲ ಮನುಷ್ಯರನ್ನು ನಿರಂತರ ಕಾಡುತ್ತಲೇ ಇವೆ. ಕಂಗೆಡಿಸುತ್ತಲೇ ಇವೆ. ನಾಯಕನೊಳಗೊಳಗೊಬ್ಬ ಖಳ. ಖಳನೊಳಗೊಬ್ಬ ಮನುಷ್ಯನಿರಲು ಸಾಧ್ಯ ಎಂದು ಪಂಪ ರನ್ನರ ಕಾಲದಲ್ಲೇ ಕನ್ನಡವು ಚಿಂತಿಸಿದೆ.
ಕನ್ನಡದ ಸಿನಿಮಾಗಳು ನಡುಗಿಸುವಂತಹ, ಮುಟ್ಟಿ ನೋಡಿಕೊಳ್ಳುವಂತಹ, ಕಾಡುವಂತಹ ಇಂಪಲ್ಸಿವ್ ಕ್ಯಾರೆಕ್ಟರ್‍ಗಳನ್ನು ಸೃಷ್ಟಿಸಿದೆಯೇ? ಎಂಬುದನ್ನು ಕೇಳಿಕೊಳ್ಳಲು ಸಕಾಲ ಇದು. ಪಕ್ಕದ ಮಲಯಾಳಂ ಸಿನಿಮಾಗಳ ಮೂಲಕ ವಿಶ್ವಸ್ಥ ವ್ಯಾಕರಣವನ್ನು ಹಿಡಿದು, ಸ್ಥಳೀಯ ರಂಗು ಬಳಿದುಕೊಂಡು ನರ್ತಿಸುತ್ತಿದೆ. ತಮಿಳಿನಲ್ಲೂ ಪ್ರಧಾನ ಧಾರೆಯ ದೃಷ್ಟಿಕೋನವನ್ನು ಭಂಗಿಸುವ ಸಿನಿಮಾಗಳು ಆಗಾಗ ಬರುತ್ತಿವೆ.
ಕನ್ನಡ ಸಿನಿಮಾಗಳ ಪ್ರಗತಿಪರತೆ ಜಾತಿ, ಧರ್ಮ ಮೀರಿ ಪ್ರೀತಿ ಮಾಡುವುದು, ಪಾಠ ಮಾಡುವ ಮೇಷ್ಟ್ರುಗಳನ್ನು ಜೋಕರುಗಳಾಗಿ ಚಿತ್ರಿಸುವುದು, ಆಡಳಿತಶಾಹಿಯನ್ನು ಕೆಟ್ಟದಾಗಿ ಬಯ್ಯುವುದು, ಬಡವನೊಬ್ಬ ವೇಗವಾಗಿ ಶ್ರೀಮಂತನಾಗುವುದು, ರೌಡಿಯಾದರೂ ಒಳ್ಳೆಯ ಕಾರಣಕ್ಕೆ ಇತರರನ್ನು ಕೊಲ್ಲುವುದು ಮುಂತಾದ ಕತೆಗಳಾಚೆಗೆ ಹೋಗಿದ್ದು ಬಹಳ ಕಡಿಮೆ. ವಾಸ್ತವವಲ್ಲದ ಹುಸಿಯ ಬಣ್ಣವನ್ನು ಜನರ ಮೆದುಳ ಮೇಲೆ ತೇಲಿಸಲಾಗುತ್ತಿದೆ.
ಕಿಮ್ ಕಿ ಡುಕ್ ಸಾವು ಇದನ್ನೆಲ್ಲ ನೆನಪಿಸಿತು. ಕಿಮ್ ವಿಪರೀತ ವಿಕ್ಷಿಪ್ತ ಮನಸ್ಸಿನ ಮನುಷ್ಯ. ದಕ್ಷಿಣ ಕೊರಿಯಾದ ಗ್ಯೊಂಗ್ ಸ್ಯಾಂಗ್ ಪ್ರದೇಶದಲ್ಲಿ ಹುಟ್ಟಿ ಸಿಯೋಲ್‍ನ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ದುಡಿದ. ಅಲ್ಲಿಂದ ಪ್ಯಾರಿಸ್ಸಿಗೆ ಹೋಗಿ ಬೀದಿಗಳಲ್ಲಿ ಪೈಂಟಿಂಗ್ ಮಾಡುತ್ತಾ ಅಲ್ಲಿನ ಕಲೆಯ ಅಭಿವ್ಯಕ್ತಿ ವಿಧಾನಗಳನ್ನು ಆಳವಾಗಿ ಗಮನಿಸತೊಡಗಿದ.
ನಿಧಾನಕ್ಕೆ ಸಿನಿಮಾ ಕಡೆಗೆ ನಡೆದ. 1996 ರಲ್ಲಿ ಕ್ರೊಕೋಡೈಲ್ ಸಿನಿಮಾ ಮಾಡಿದ. ಬುದ್ಧಿಸ್ಟ್ ದೇಶವಾದ ದಕ್ಷಿಣ ಕೊರಿಯಾದಲ್ಲಿ ಈತನ ಸಿನಿಮಾಗಳ ಬೆಚ್ಚಿ ಬೀಳಿಸುವ ಗುಣ, ಅತಿ ಎನ್ನಿಸುವ ಒರಟುತನ, ಹಸಿ ಹಸಿಯಾದ ಮನುಷ್ಯರ ವಾಂಛೆಗಳು ಮೀಡಿಯಾಗಳ, ಪಂಡಿತರ ಗಮನ ಸೆಳೆಯಲಿಲ್ಲ. ಸಿಟ್ಟಿಗೆದ್ದ ಕಿಮ್ ತನ್ನ ದೇಶದಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲವೆಂದು ಹಠ ಮಾಡಿದ.
ಕಿಮ್‍ನ ಸಿನಿಮಾ ‘ ದ ನೆಟ್’ ಅನ್ನು ನಾನು 2017 ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ನೋಡಿದೆ. ಆ ಸಿನಿಮಾ ವಿಶ್ವಾತ್ಮಕವಾದವನ್ನು ಪ್ರತಿಪಾದಿಸುತ್ತಿದ್ದ ಜಗತ್ತಿನ ಅನೇಕ ಚಿಂತಕರನ್ನು ನೆನಪಿಸಿತು. ಮನುಷ್ಯನ ಒಳ್ಳೆಯದಕ್ಕೆಂದು ನಿರ್ಮಾಣವಾದ ರಾಷ್ಟ್ರವೆಂಬ ಆಧುನಿಕ ರಾಜಕೀಯ ಸಂರಚನೆಯು ಭೀತಿಕಾರಕ ಮತ್ತು ಹಿಂಸ್ರಕವೆಂದು ಆ ಸಿನಿಮಾ ವಿವರಿಸುತ್ತದೆ.
ನೆಟ್ ಸಿನಿಮಾ ನೋಡಿದ ನಂತರ ಅವನ ಉಳಿದ ಸಿನಿಮಾಗಳನ್ನು ಹುಡುಕಿ ಹುಡುಕಿ ನೋಡತೋಡಗಿದೆ. ಕೆಲವು ಸಿನಿಮಾಗಳು ವಿಕ್ಷಿಪ್ತ ಅನ್ನಿಸಿದರೆ ಕೆಲವು ಮನುಷ್ಯನ ನಾಭಿಯಾಳದ ಸಂಕಟದಿಂದ ಎದ್ದು ಬರುತ್ತಿವೆ ಅನ್ನಿಸಿದವು. ನನ್ನನ್ನು ಬಹಳ ಕಾಡಿದ ಸಿನಿಮಾಗಳು ಮೂರು; ದ ನೆಟ್, 3 ಐರನ್ ಮತ್ತು ಸ್ಪ್ರಿಂಗ್, ಸಮ್ಮರ್, ಫಾಲ್ ವಿಂಟರ್ ಅಂಡ್ ಸ್ಪ್ರಿಂಗ್. ಸಿನಿಮಾ ನೋಡಿ ಬಹಳ ಕಾಲವಾದರೂ ಅದರ ಗುಂಗಿನಿಂದ ಹೊರಬರಲಾಗದಂತೆ ಈ ಸಿನಿಮಾಗಳು ಕಾಡುತ್ತಿವೆ.
ಅತ್ಯುತ್ತಮ ಕಲಾಕೃತಿಯೊಂದು ಸದಾ ತನ್ನನ್ನು ಬಂಧಿಸುವ ಫಾರ್ಮ್ ಅನ್ನು ಮುರಿಯಲು ಪ್ರಯತ್ನಿಸುತ್ತಿರುತ್ತದೆ. ಸಿನಿಮಾ, ಪೈಂಟಿಂಗ್, ಕತೆ, ಪದ್ಯ, ಕಾದಂಬರಿ, ನಾಟಕ ಎಲ್ಲವೂ ಹಾಗೆಯೇ. ಫಾರ್ಮಿನ ಬಂಧನದಿಂದ ಬಿಡಿಸಿಕೊಳ್ಳದೆ ಇದ್ದರೆ ಅಂತಹ ಕಲಾಕೃತಿ ಕೃತಕ ಅನ್ನಿಸಲಾರಂಭಿಸುತ್ತದೆ. ಕಾಲ, ದೇಶಗಳ ಹಂಗು ಮೀರಿ ಕತೆ, ಕಲಾಕೃತಿಯು ಮನುಷ್ಯರೆಲ್ಲರ ಸಂಕಟ, ತೊಳಲಾಟ ಅನ್ನಿಸತೊಡಗಿದರೆ ಮಾತ್ರ ಬದುಕಿನ ಕತೆಯಾಗುತ್ತದೆ. ಕಿಮ್ ನ ಸಿನಿಮಾಗಳು ಅಂತಹ ದಿಗಂತದ ಕಡೆಗೆ ಏರಲು ಯತ್ನಿಸುತ್ತವೆ.
ಕುರಸೋವಾನ ನಂತರ ಪಶ್ಚಿಮದ ಜಗತ್ತು ಏಷ್ಯಾದ ಕಡೆಗೆ ತಿರುಗಿ ನೋಡಿದ್ದು ಒಂದರ್ಥದಲ್ಲಿ ಕಿಮ್ ಕಿ ಡುಕ್ ಕಾರಣದಿಂದಾಗಿ. (ಭಾರತದಲ್ಲಿ ಸತ್ಯಜಿತ್ ರೇ ಮತ್ತು ಅಮೀರ್ ಖಾನ್ ಒಂದಿಷ್ಟು ಸೆಳೆವ ಕೆಲಸ ಮಾಡಿದ್ದಾರೆ).ಇರಾನಿನ ಮಜೀದ್ ಮಜೀದಿಯೂ ಈ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾನೆ. ಕಿಮ್ ಗಿಂತ ಒಂದು ವರ್ಷ ದೊಡ್ಡನಾದ ಮಜೀದಿ ಮಕ್ಕಳ ಮೂಲಕ ಮನುಷ್ಯರ ಸಂಕಟಗಳನ್ನು ಹೇಳಲು ಪ್ರಯತ್ನಿಸುತ್ತಾನೆ.
ಮಜೀದಿಯ ‘ಚಿಲ್ಡ್ರನ್ ಆಫ್ ಹೆವನ್’, ‘ದ ಕಲರ್ ಆಫ್ ಪ್ಯಾರಡೈಸ್’ ಗಮನಾರ್ಹ ಕಲಾಕೃತಿಗಳು. ಸಿನಿಮಾಗಳ ಮೂಲಕ ವiಜೀದಿ ಇರಾನಿನ ಗ್ರಾಮೀಣ ಕೃಷಿ ಕುಟುಂಬಗಳ ಕಣ್ಣೀರು, ಸಂಕಟ, ಪ್ರೇಮ ಮತ್ತು ಮನುಷ್ಯರ ನವಿರುತನಗಳನ್ನು ಹೆಕ್ಕಿ ತರಲು ಪ್ರಯತ್ನಿಸುತ್ತಾನೆ. ಮಕ್ಕಳನ್ನು ದೇವರ ಪ್ರತಿನಿಧಿಗಳೆಂದು ಗ್ರಹಿಸುತ್ತಾನೆ.
ಕಿಮ್ ಮಜೀದಿಯ ಹಾಗೆ ಬೇಗ ಆರ್ದ್ರಗೊಳ್ಳುವ ಮನುಷ್ಯನಲ್ಲ. ಆತ ಒಂದರ್ಥದಲ್ಲಿ ದೇವರ ವಿರುದ್ಧವೇ ದಂಗೆ ಏಳುವ ಮನುಷ್ಯ. ಅವನ ಸ್ಪ್ರಿಂಗ್ ಸಮ್ಮರ್… ಸಿನಿಮಾ ಒಂದರ್ಥದಲ್ಲಿ ಬುದ್ಧನ ವಿರುದ್ಧ ದಂಗೆ ಏಳುವ ಸಿನಿಮಾ. ಮಹಾಯಾನಿ ಬೌದ್ಧಗುರು ಮತ್ತು ಶಿಷ್ಯನ ನಡುವೆ ನಡೆವ ಈ ಕತೆ ಚಕ್ರಗತಿ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಮುಖ್ಯವಾಗಿ ಅದು ಎರಡು ತತ್ವಗಳನ್ನು ಪ್ರತಿಪಾದಿಸುತ್ತದೆ.
ಒಂದು, “ಕಾಮವು ತನ್ನ ತೀರದ ದಾಹದಿಂದ ಇನ್ನೊಂದು ಜೀವದ ಮೇಲೆ ಪೊಸೆಸಿವ್ ಆಗುತ್ತದೆ, ಕಡೆಗೆ ಕೊಲೆ ಮಾಡಲು ಉತ್ತೇಜಿಸುತ್ತದೆ”. ಗುರು, ಶಿಷ್ಯರು ಪ್ರಕೃತಿಯ ಏರಿಳಿತಗಳನ್ನು ನೋಡುತ್ತಾ ಸರೋವರದ ಮಧ್ಯದ ಕುಟೀರದಲ್ಲಿ ಬದುಕಿದ್ದ ನೆಲೆಗೆ ಖಿನ್ನ ಮನಸ್ಸಿನ ಕಾಯಿಲೆ ಅಂಟಿದ್ದ ಹುಡುಗಿಯೊಬ್ಬಳು ಬರುತ್ತಾಳೆ. ಶಿಷ್ಯ ಅವಳ ಮೋಹಕ್ಕೆ ಬಿದ್ದು ಅವಳೊಂದಿಗೆ ಮಲಗುತ್ತಾನೆ. ಗುರುವಿಗೆ ಗೊತ್ತಾಗುತ್ತದೆ.
ಇದು ಪುನರಾವರ್ತನೆಯಾಗುತ್ತದೆ. ಆಗ ಗುರು ಮೇಲಿನ ಮಾತನ್ನು ಶಿಷ್ಯನಿಗೆ ಹೇಳುತ್ತಾನೆ. ಗಂಡಿನ ಸ್ಪರ್ಶದಿಂದ ಹುಡುಗಿ ಗುಣಮುಖಳಾಗುತ್ತಾಳೆ. ದೈಹಿಕ ಸಂಪರ್ಕದಿಂದ ಕಾಯಿಲೆ ವಾಸಿಯಾಗುವುದಾರೆ ಅದು ಒಮ್ಮೆ ಸಾಕು ಎನ್ನುವಷ್ಟು ಪ್ರಾಕ್ಟಿಕಲ್ ಆಗಿ ಗುರು ಯೋಚಿಸುತ್ತಾನೆ.
ಆದರೆ ಅದೇ ಕಾಯಿಲೆಯಾಗಿಟ್ಟರೆ ನಾಶ ಖಂಡಿತ ಎನ್ನುವುದು ಆತನ ನಿಲುವು. ಹುಡುಗಿಯನ್ನು ಹೊರಡುವಂತೆ ಹೇಳುತ್ತಾನೆ. ಅವಳು ಹೋದ ಕೂಡಲೇ ಶಿಷ್ಯ ಭೋರೆಂದು ಗೋಳಾಡಿ ಅವಳ ಹಿಂದೆ ಹೋಗುತ್ತಾನೆ. ಕಡೆಗೊಂದು ದಿನ ವಾಪಸ್ಸು ಬರುತ್ತಾನೆ. ಪಶ್ಚಾತ್ತಾಪ, ಸಿಟ್ಟಿನಲ್ಲಿ ಭುಗಿಲೆದ್ದು ಹೇಳುತ್ತಾನೆ. ‘ ಅವಳಿಂದ ಬಯಸಿದ್ದು ಪ್ರೇಮವನ್ನು ಮಾತ್ರ. ಅವಳು ಬೇರೊಬ್ಬನೊಂದಿಗೆ ಹೊರಟು ಹೋದಳು. ಕಡೆಗೆ, ಅವಳನ್ನು ಕೊಂದು ಬಂದೆ’ ಎಂದು ನೆತ್ತರು ಒಣಗದ ಚಾಕು ತೋರಿಸುತ್ತಾನೆ.
ಎರಡು, ‘ನೀನು ಪ್ರಾಣಿಗಳಿಗೆ ಕಲ್ಲು ಕಟ್ಟಿ ಬಂದೆಯಲ್ಲ ಅವನ್ನು ಬಿಡಿಸು ಹೋಗು. ಬದುಕಿದ್ದರೆ ಬಚಾವಾದೆ, ಸತ್ತು ಹೋಗಿದ್ದಾರೆ ನಿನ್ನ ಜೀವನ ಪರ್ಯಂತ ಆ ಕಲ್ಲಗಳನ್ನು ಎದೆಯೊಳಗೆ ಹೊತ್ತುಕೊಂಡು ಓಡಾಡಬೇಕು’ ಎನ್ನುತ್ತಾನೆ. ಶಿಷ್ಯ ಆಶ್ರಮಕ್ಕೆ ಹೇಗೆ ಬಂದ ಗೊತ್ತಿಲ್ಲ. ಬಂದವನು ಆಡುತ್ತಾ ಆಡುತ್ತಾ ನೀರಿನಲ್ಲಿದ್ದ ಕಪ್ಪೆಗೆ, ಮೀನಿಗೆ, ನೀರ ಹೊರಗಿದ್ದ ಹಾವಿಗೆ ಕಲ್ಲು ಕಟ್ಟಿ ಬಿಟ್ಟು ಬರುತ್ತಾನೆ. ನೋಡಿದ ಗುರು ಮಲಗಿದ್ದ ಶಿಷ್ಯನಿಗೆ ಕಲ್ಲು ಕಟ್ಟುತ್ತಾನೆ.
ಎದ್ದು ಓಡಾಡಲಾಗದೆ ಕಲ್ಲು ಬಿಚ್ಚು ಎಂದು ಗೋಳಾಡುವ ಶಿಷ್ಯನಿಗೆ ಗುರು ಮೇಲಿನ ಮಾತುಗಳನ್ನು ಹೇಳುತ್ತಾನೆ. ನೋಡಿದರೆ ಹಾವು ಮೀನುಗಳೆರಡೂ ಸತ್ತು ಹೋಗಿರುತ್ತವೆ. ಕಪ್ಪೆ ಬದುಕಿರುತ್ತದೆ. ಮಗು ಕಣ್ಣೀರಿಟ್ಟು ದುಃಖಿಸುತ್ತದೆ. ದೊಡ್ಡವನಾದ ಹುಡುಗ ಕೊಲೆಗಡುಕನಾಗುತ್ತಾನೆ. ಅವನಿಗೆ ಮಹಾಯಾನದ ಪ್ರಜ್ಞಾಪಾರಮಿತ ಸೂತ್ರವನ್ನು ಕೈಯಾರೆ ಕಲಿಯುವಂತೆ ಮಾಡುತ್ತಾನೆ. ಬೌದ್ಧರ ಯಶಸ್ಸು ಇರುವುದು ಶಿಕ್ಷಣವನ್ನು ಕೈಗಳ ಮೂಲಕ ಕಲಿಸುವುದರಲ್ಲಿ ಇರಬೇಕು.
ಅನುಭವದಿಂದ ಕಲಿಯುವ ವಿದ್ಯೆಗೆ ತಾಳಿಕೆ ಗುಣ ಹೆಚ್ಚು. ಕಲಿಸುವ ಬೌದ್ಧ ಗುರುಗಳು ಕರುಣೆಯನ್ನೂ ತುಂಬಲು ನೋಡುತ್ತಾರೆ. ಅದು ಎಲ್ಲ ಸಾರಿ ಫಲ ನೀಡದು. ಕೊಲೆಗಾರ ಶಿಷ್ಯನನ್ನು ಪೊಲೀಸರು ಎಳೆದೊಯ್ಯಲು ಬರುತ್ತಾರೆ. ಪ್ರಜ್ಞಾಪಾರಮಿತ ಸೂತ್ರವನ್ನು ಬೆಕ್ಕಿನ ಬಾಲದಲ್ಲಿ ಅದ್ದಿ ಗುರು ಬರೆಯುತ್ತಾ ಹೋಗುತ್ತಾನೆ. ಶಿಷ್ಯ ಕೊಲೆಗೆ ಬಳಸಿದ ಚಾಕು ಹಿಡಿದು ಮರದ ಹಲಗೆಯ ಮೇಲಿನ ಅಕ್ಷರಗಳನ್ನು ಕೆತ್ತುತ್ತ ಹೋಗುತ್ತಾನೆ.
ಪೊಲೀಸನೊಬ್ಬ ಮೇಣದ ಬತ್ತಿ ಹಿಡಿದು ಕೆತ್ತಲು ಸಹಾಯ ಮಾಡುತ್ತಾನೆ. ಕೆತ್ತುತ್ತಲೇ ನಿದ್ದೆ ಹೋದ ಆರೋಪಿಗೆ ತನ್ನ ಕೋಟು ಬಿಚ್ಚಿ ಹೊದಿಸುತ್ತಾನೆ. ಅಕ್ಷರ ಕೆತ್ತಿದ್ದು ಮುಗಿದ ನಂತರ ಬೆಳಿಗ್ಗೆ ಶಿಷ್ಯನನ್ನು ಬೇಡಿ ತೊಡಿಸದೆ ಕರೆದೊಯ್ಯುತ್ತಾರೆ. ಶಿಷ್ಯನ ಜೊತೆಯಲ್ಲಿ ಬೆಕ್ಕೂ ಸಹ ಗುರುವನ್ನು ಬಿಟ್ಟು ಹೋಗುತ್ತದೆ. ಶಿಷ್ಯನನ್ನು ಎಳೆದೊಯದ್ದ ನಂತರ ಗುರು ದೋಣಿಯೊಳಗೆ ಬೆಂಕಿ ಹಚ್ಚಿಕೊಂಡು ದೇಹತ್ಯಾಗ ಮಾಡುತ್ತಾನೆ. ಬಿಡುಗಡೆಯಾದ ಶಿಷ್ಯ ಮರಳಿ ಬರುತ್ತಾನೆ. ತಾನು ಬಾಲ್ಯದಲ್ಲಿ ಕೊಂದಂತದೇ ಹಾವು ಕುಟೀರ ಸೇರಿರುತ್ತದೆ. ಸಂತನಾಗುವಿಕೆ ಅಲ್ಲಿಂದ ಶುರುವಾಗುತ್ತದೆ.
ಹೆಪ್ಪುಗಟ್ಟಿದ ಸರೋವರ. ಎಲೆ ಉದುರಿದ ಕಾಡು. ಮೌನವಾದ ಸೃಷ್ಟಿಯ ಒಂದು ಜಾವ ಅಳುವ ಹಸುಗೂಸನ್ನು ಹೊತ್ತ ಮುಖ ಮುಚ್ಚಿಕೊಂಡ ಹೆಣ್ಣೊಬ್ಬಳು ಆಶ್ರಮಕ್ಕೆ ಬರುತ್ತಾಳೆ. ಮಗುವನ್ನು ಆಶ್ರಮದಲ್ಲಿ ಬಿಟ್ಟು ನಡೆಯತೊಡಗುತ್ತಾಳೆ. ಮಂಜು ಗಡ್ಡೆ ಕರಗಿದ್ದ ಒಂದು ನೀರ ಕಂದರಕ್ಕೆ ಬಿದ್ದು ಸಾಯುತ್ತಾಳೆ. ಸಂತನಾಗುವವ ಹೋಗಿ ನೋಡಿದರೆ ಹೆಂಗಸಿನ ಬದಲು ಬುದ್ಧನ ವಿಗ್ರಹ ಸಿಗುತ್ತದೆ. ಮಗು ಚಟುವಟಿಕೆಯಿಂದ ಓಡಾಡತೊಡಗುತ್ತದೆ.
ಅದೂ ಕೂಡ, ಮೀನು, ಹಾವು ಮತ್ತು ಕಪ್ಪೆಯ ಬಾಯಿಗೆ ಕಲ್ಲು ತುರುಕಿ ಗಹಗಹಸಿ ನಗುತ್ತದೆ. ಇದು ಸಿನಿಮಾ. ಮಜೀದಿಯ ಮಕ್ಕಳು ದೇವದೂತರು.ವಿಶ್ವ ಮಾನವರು. ಕಿಮ್ ತೋರಿಸುವ ಮಕ್ಕಳೊಳಗೆ ನಿಸರ್ಗದ ಚಲನೆಯನ್ನು ಕಟ್ಟಿ ಹಾಕುವ, ಕೊಂದು ಖುಷಿಪಡುವವರು. ಮಜೀದಿ ದೊಡ್ಡವರ ಸಣ್ಣತನ ಮಕ್ಕಳಾಗುವ ಪ್ರಕ್ರಿಯೆಯಲ್ಲಿ ಅಳಿದು ಹೋಗುತ್ತದೆ ಎನ್ನುತ್ತಾನೆ.
ಕಿಮ್ ಮಕ್ಕಳು ಬದುಕನ್ನು ಸ್ಪರ್ಶಿಸಿ ದಾರ್ಶನಿಕರಾಗಬೇಕು, ಜ್ಞಾನ ಎಂಬುದು ಸುಖಾಸುಮ್ಮನೆ ದಕ್ಕುವುದಿಲ್ಲ ಎನ್ನುತ್ತಾನೆ. ಜ್ಞಾನವಿಲ್ಲದ ಮಗುತನ ಉಪಯೋಗವಿಲ್ಲದ್ದು. ಅದು ಮಾಡುವ ಕ್ರೌರ್ಯದ ಭಾರ ಹಗುರವಾದದ್ದೇನೂ ಅಲ್ಲ ಎಂಬುದು ಕಿಮ್ ನಿಲುವು.
ಕಿಮ್ ಇದಿಷ್ಟನ್ನೂ ಋತುಗಳ ಪಲ್ಲಟಗಳ ರೂಪಕದ ಮೂಲಕ ವಿವರಿಸುತ್ತಾನೆ. ಮೋಕ್ಷ ಎನ್ನುವುದು ಸ್ವಂತ ಅನುಭವವಿಲ್ಲದೆ ಉಪದೇಶಗಳಿಂದ ಬರಲಾರದು ಎನ್ನಿಸುತ್ತದೆ. ಬುದ್ಧನೂ ಅನುಭವಗಳ ಮೂಲಕವೇ ಲೋಕ ಸಂಗತಿಗಳನ್ನು ವಿವರಿಸಿದ. ಜತೆಗೆ ಪತಿತನಾಗದೆ ಮನುಷ್ಯ ಪಾವನನಾಗಲಾರನೆ? ಎಂಬೊಂದು ಪ್ರಶ್ನೆಯನ್ನು ಸಿನಿಮಾ ತಣ್ಣಗೆ ಕೇಳುತ್ತದೆ. ಮನುಷ್ಯನಾಳದ ಹಿಂಸೆ ಭೀಕರ ತಾರಕ ಮುಟ್ಟದೆ ಸಾಕ್ಷಾತ್ಕಾರ ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಬುದ್ಧ ಗುರುವೇ ಉತ್ತರ ಹೇಳಬೇಕು.
‘ದ ನೆಟ್’ ಸಿನಿಮಾದ ವಸ್ತು ಯುರೋಪಿಗೆ ಹೊಸತಲ್ಲ. ರಾಷ್ಟ್ರವಾದದ ಗಾಯಗಳು ಯುರೋಪನ್ನು ಮಾಗಿಸಿವೆ. ಆದರೆ ಒಂದೇ ತಾಯ ಮಕ್ಕಳಾದ ಉತ್ತರ, ದಕ್ಷಿಣ ಕೊರಿಯಾದಂತಹ ಪ್ರಾಚೀನ ಬೌದ್ಧ ರಾಷ್ಟ್ರಗಳು ಇದನ್ನು ಹೇಗೆ ನಿಭಾಯಿಸಬೇಕೆಂದು ತೋಚದೆ ಒದ್ದಾಡುತ್ತಿವೆ.
ಉಭಯ ರಾಷ್ಟ್ರಗಳ ಸೈದ್ಧಾಂತಿಕ ಕಲಹಗಳು, ನಿಷ್ಠೆಗಳು ಮನುಷ್ಯನನ್ನು ಹುಳುವಿನಂತೆ ಹೊಸಕಿ ಹಾಕುವುದರ ಕುರಿತು ಸಿನಿಮಾ ಮಾತನಾಡುತ್ತದೆ. ಅತ್ಯಂತ ದಾರಿದ್ರ್ಯದಲ್ಲಿರುವ ಕಮ್ಯುನಿಸಂನ ಹೆಸರಿನಲ್ಲಿ ಸರ್ವಾಧಿಕಾರಿ ಆಳುತ್ತಿರುವ ಉತ್ತರ ಕೊರಿಯಾದ ಮೀನುಗಾನೊಬ್ಬನ ದೋಣಿ ಗಾಳಿಗೆ ಸಿಲುಕಿ ದಕ್ಷಿಣ ಕೊರಿಯಾ ಭಾಗಕ್ಕೆ ಹರಿದು ಬಿಡುತ್ತದೆ.
ಒಂದು ಜುಜುಬಿ ಕೆರೆಯೂ ರಾಷ್ಟ್ರ ರಾಷ್ಟ್ರಗಳ ನಡುವೆ ಹರಿದು ಹೋಗಿರುತ್ತದೆ. ಮೀನುಗಾರನನ್ನು ದಕ್ಷಿಣದ ಸೈನಿಕರು ಬಂಧಿಸುತ್ತಾರೆ. ಭೀಕರ ಹಿಂಸೆ ನೀಡುತ್ತಾರೆ. ಕಡೆಗೆ, ಉತ್ತರ ಕೊರಿಯಾ ಕುಟುಂಬ ಮೂಲದ ದಕ್ಷಿಣ ಕೊರಿಯಾದ ತರುಣ ಸೈನಿಕನೊಬ್ಬ ಮೀನುಗಾರನ ನೆರವಿಗೆ ಬರುತ್ತಾನೆ. ಹಾಗಾಗಿ ಮೀನುಗಾರ ಸಾಯದೆ ಉಳಿದುಕೊಳ್ಳುತ್ತಾನೆ. ಹೊರಗಿನವರನ್ನು ಗೂಢಾಚಾರರೆಂದು ವಿಚಾರಿಸುವ ವೇಳೆ ನೀಡುವ ಭೀಕರ ಹಿಂಸೆ ಎದೆ ನಡುಗಿಸುತ್ತದೆ. ಅನೇಕರು ನಾಲಿಗೆಯನ್ನು ತಿರುಗಿಸಿ ನರ ಕಡಿದುಕೊಂಡು ಸತ್ತು ಬೀಳುತ್ತಾರೆ ಹಿಂಸೆ ತಾಳದೆ.
ಮೀನುಗಾರ ಅಮಾಯಕನೆಂದು ದಕ್ಷಿಣದವರಿಗೆ ಅರ್ಥವಾಗುತ್ತದೆ. ಅದಾದ ನಂತರ ಆತನಿಗೆ ದಕ್ಷಿಣ ರಾಷ್ಟ್ರದ ವೈಭವೋಪೇತ ನಗರ ತೋರಿಸಬೇಕೆಂಬ ತಂತ್ರ ಹೊಳೆಯುತ್ತದೆ. ಶತ್ರು ದೇಶದ ಮನುಷ್ಯನಿಗೆ ತನ್ನ ಸಾಹುಕಾರಿಕೆ ತೋರಿಸಬೇಕೆಂಬುದು ಯುದ್ಧ ತಂತ್ರ ಹಾಗೂ ಕ್ರೌರ್ಯದ ಇನ್ನೊಂದು ಮುಖ. ನೋಡಲು ಮೀನುಗಾರ ನಿರಾಕರಿಸುತ್ತಾನೆ. ನಗರದ ಝಗಮಗಿಸುವ ವೈಭವ ನೋಡಲಾರೆನೆಂದು ಮುಖ ಮುಚ್ಚಿಕೊಳ್ಳುತ್ತಾನೆ.
ದಕ್ಷಿಣದವರು ಹೆಣ್ಣು ಮಕ್ಕಳನ್ನು ಮಾರಿ, ತಲೆ ಹಿಡಿದು ನಗರಗಳನ್ನು ಕೊಬ್ಬಿಸಿದ್ದಾರೆ ಎಂಬುದು ಆತನ[ ಉತ್ತರದವರ] ಅಭಿಪ್ರಾಯ. ಇದು ಬಂಡವಾಳಿಗ ದೇಶಗಳ ಕುರಿತಾದ ಕಠೋರ ವಿಮರ್ಶೆ. ಅನ್ನವಿಲ್ಲದೆ ಬಡತನದಲ್ಲಿ ಜನರು ಸಾಯುವ ಚಿತ್ರಣ ಕಮ್ಯುನಿಸ್ಟ್ ಉತ್ತರ ಕೊರಿಯಾದ ಕುರಿತ ವಿಮರ್ಶೆ. ಮೀನುಗಾರನನ್ನು ನಡು ಬೀದಿಯಲ್ಲಿ ಬಿಟ್ಟು ಸೈನಿಕರು ಹಿಂಬಾಲಿಸ ತೊಡಗುತ್ತಾರೆ. ಆತ ಕಣ್ಣು ಮುಚ್ಚಿಕೊಂಡು ಓಡತೊಡಗುತ್ತಾನೆ.
ದಕ್ಷಿಣದವರ ಶ್ರೀಮಂತಿಕೆ ಸೆಳೆದುಬಿಟ್ಟರೆ ಎಂಬ ಭಯ ಅವನದು. ಕಡೆಗೆ ದಿಕ್ಕುಗಾಣದೆ ಬೀದಿ ಬೀದಿಯಲ್ಲಿ ಅಲೆಯುತ್ತಾನೆ. ಹಂದಿಯ ಸೂಪನ್ನು ಜೀವನದಲ್ಲಿ ನೋಡಿಯೇ ಇಲ್ಲವೇನೋ ಎಂಬಂತೆ ಕುಡಿಯುತ್ತಾನೆ. ನಗರದ ವೈಭವ ನೋಡಿ ಬೆರಗಾಗುತ್ತಾನೆ. ಕಡೆಗೆ ತರುಣ ಸೈನಿಕನ ಉಸ್ತುವಾರಿಯೊಳಗೆ ಆತ ದಕ್ಷಿಣದವರ ಕುರಿತು ತುಸು ಉದಾರಿಯಾಗುತ್ತಾನೆ. ತರುಣ ಹೊಸ ಬಟ್ಟೆಯನ್ನು, ಒಂದಿಷ್ಟು ಹಣವನ್ನು ಕೊಡುತ್ತಾನೆ. ಕಡೆಗೊಂದು ದಿನ ಉತ್ತರದ ಗಡಿಯೊಳಗೆ ಆತನನ್ನು ಬಿಟ್ಟು ಬಿಡುತ್ತಾರೆ.
ಈಗ ಉತ್ತರದ ಸೈನಿಕರ ಗೂಢಾಚಾರಿಕೆ ಶುರುವಾಗುತ್ತದೆ. ತರುಣ ಸೈನಿಕ ನೀಡಿದ್ದ ಹಣವನ್ನು ಮೀನುಗಾರ ತನ್ನ ಗುದದ್ವಾರದೊಳಗೆ ಬಚ್ಚಿಟ್ಟುಕೊಳ್ಳುತ್ತಾನೆ. ಉತ್ತರದವರಿಗೆ ಈತ ಗೂಢಾಚಾರನಾಗಿ ಬದಲಾಗಿರಬಹುದೇ ಎಂಬ ಅನುಮಾನ. ಜೊತೆಗೆ ಆತ ತಂದಿರಬಹುದಾದ ಹಣದ ಬಗ್ಗೆ ಆಸೆ. ಅಲ್ಲಿನ ಸೈನ್ಯದ ಸ್ಥಳೀಯ ಮುಖಂಡ ಮೀನುಗಾಗರನನ್ನು ಹಿಂಬಾಲಿಸುತ್ತಾನೆ. ಕಡೆಗೆ ಆತ ಮಲ ವಿಸರ್ಜನೆ ಮಾಡಿದ ನಂತರ ಮಲ ಕೆದಕಿ ಹಣವನ್ನು ತೆಗೆದುಕೊಳ್ಳುತ್ತಾನೆ.
ಇದು ಉತ್ತರ ಕೊರಿಯಾದ ಸೈನಿಕರ ಭ್ರಷ್ಟತೆ. ಅವನಿಗೆ ಮೀನು ಹಿಡಿಯಲೂ ಬಿಡದೆ ಕಿರುಕುಳ ನೀಡುತ್ತಾರೆ. ಇತ್ತ ಹೊಟ್ಟೆಗೂ ಇಲ್ಲ. ಸೈನಿಕರ ಕಿರುಕುಳ ಬೇರೆ. ಮೀನುಗಾರ ಪ್ರತಿಭಟಿಸುತ್ತಾನೆ. ಕಡೆಗೆ ತಲ್ಲಣಗೊಳಿಸುವ ಹಸಿವು ಸೈನ್ಯದ ಆಜ್ಞೆ ಧಿಕ್ಕರಿಸುವಂತೆ ಮಾಡುತ್ತದೆ. ದೋಣಿ ತೆಗೆದುಕೊಂಡು ನೀರಿಗಿಳಿಯುತ್ತಾನೆ. ಸೈನಿಕರು ಗುಂಡು ಹೊಡೆದು ಅವನನ್ನು ಕೊಲ್ಲುತ್ತಾರೆ. ಎಲ್ಲ ಸರ್ವಾಧಿಕಾರಿ ಪ್ರಭುತ್ವಗಳೂ ಮನುಷ್ಯನನ್ನು ನಿಕೃಷ್ಟವಾಗಿ ನೋಡುತ್ತವೆ. ಅದಕ್ಕೆ ರಾಷ್ಟ್ರ ಸಂರಚನೆ ಎಂಬುದು ನೆಪದ ಆಯುಧವಾಗಿರುತ್ತದೆ. ಸದಾ ಕೀಳರಿಮೆಯಲ್ಲಿ ಬದುಕುವ ಅದು ದ್ವೇಷ ಮತ್ತು ಗುಮಾನಿಗಳನ್ನು ತನ್ನ ಒಡಲೊಳಗಿಟ್ಟುಕೊಂಡು ಏಗುತ್ತಿರುತ್ತದೆ.
ಎರಡೂ ಸಿನಿಮಾಗಳು ವಿಭಿನ್ನ ದಿಕ್ಕುಗಳನ್ನು ವಿವರಿಸುವ ಕಲಾಕೃತಿಗಳು. ಒಂದು ರಾಷ್ಟ್ರಗಳ ನಡುವಿನ ಕ್ರೌರ್ಯವನ್ನು, ಗಡಿಗಳ ನೆಪದಲ್ಲಿ ನಡೆಯುವ ದಮನವನ್ನು ಕುರಿತು ಗೇಲಿ ಮಾಡುತ್ತದೆ. ಕಮ್ಯುನಿಸ್ಟ್ ದೇಶದ ಬಡತನ, ಭ್ರಷ್ಟ ಮತ್ತು ದುಷ್ಟ ಸರ್ವಾಧಿಕಾರಿ ಮಿಲಿಟರಿ ಆಡಳಿತದಂತೆಯೇ ದಕ್ಷಿಣ ಕೊರಿಯಾ ಪ್ರಜಾಪ್ರಭುತ್ವದ ಹೆಸರಲ್ಲಿ, ನಡೆಸುವ ಕ್ರೌರ್ಯ ಕೂಡ ಅತ್ಯಂತ ಭೀಕರ.
ಮನುಷ್ಯನ ಮನಸ್ಸನ್ನು ಪಲ್ಲಟಗೊಳಿಸುವ ಸಂಪತ್ತಿನ ಧಿಮಾಕು ಅಮಾನವೀಯ. ರಾಷ್ಟ್ರವಾದದ ಕ್ರೌರ್ಯ 21 ನೇ ಶತಮಾನದ ಏಷ್ಯಾದ, ಆಫ್ರಿಕಾಗಳ ನೆಲದಲ್ಲಿ ಮುಂದುವರೆಯುತ್ತಿದೆ. ಎರಡೂ ರಾಷ್ಟ್ರಗಳೂ ಅಮಾನವೀಯವೇ. ಕ್ರೂರ ಸ್ವಭಾವದವೆ. ಬೌದ್ಧ ಮಾರ್ಗವೆಂಬುದು ಅತ್ಯಂತ ಕೃತಕ ಇಲ್ಲಿ. ಇದು ರಾಜಕೀಯ ಕಥನ.
‘ಸ್ಪ್ರಿಂಗ್, ಸಮ್ಮರ್..’ ಆಧ್ಯಾತ್ಮದ ನಡುವಿನ ವಾಂಛೆಗಳ ರಾಜಕೀಯ ಕಥನ ಪಂಪನ ಆದಿ ಪುರಾಣದಂತೆ. ‘ದ ನೆಟ್’ ಸಿನಿಮಾ ರಾಜಕೀಯಕ್ಕೆ ಆಧ್ಯಾತ್ಮಿಕ ಸ್ಪರ್ಶ ಬೇಕು ಎಂದು ಬಯಸುವ ವಿಕ್ರಮಾರ್ಜುನ ವಿಜಯ. ಒಟ್ಟಾರೆ, ನೆಲದ ಬಯಕೆಯ ಕುರುಕ್ಷೇತ್ರದಲ್ಲಿ ಬಡವರ ಭಿನ್ನಪವ ಕೇಳಿದವರಿಲ್ಲ.
ಕಡೆಯದಲ್ಲದ ಮುಖ್ಯ ಮಾತು; ಇಂಥ ಸಿನಿಮಾಗಳನ್ನು ನೀಡಿದ ಕಿಮ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಮೂವರು ಹೆಣ್ಣು ಮಕ್ಕಳು ಮೀಟೂ ಚಳುವಳಿಯಲ್ಲಿ ಭಾಗವಹಿಸಿ ಕೋರ್ಟಿಗೆ ಹೋಗಿದ್ದರು. ಕೋರ್ಟು ಆತನಿಗೆ ದಂಡ ಹಾಕಿ ಖುಲಾಸೆ ಮಾಡಿತು. ದಿಕ್ಕೆಡಿಸುವ ಸಿನಿಮಾ ಮಾಡಿದ ಕಿಮ್ ಸ್ವತಃ ಗಂಡಿನ ಠೇಂಕಾರದ ಮೂಟೆಯಾಗಿದ್ದನೇ ಎಂಬೊಂದು ಪ್ರಶ್ನೆಯನ್ನೂ ಉಳಿಸಿ ಹೋಗಿದ್ದಾನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

