ಸಿನಿ ಸುದ್ದಿ
‘ಪುಟ್ಟಣ್ಣ ಕಣಗಾಲ್’ ನಮ್ಮ ನಾಡು ಕಂಡ ಸಾಮಾಜಿಕ ಕಳಕಳಿಯುಳ್ಳ ಶ್ರೇಷ್ಠ ಚಲನಚಿತ್ರ ನಿರ್ದೇಶಕ

- ಕ್ರಾಂತಿರಾಜ್ ಒಡೆಯರ್ ಎಂ,ಪ್ರಾಧ್ಯಾಪಕರು, ಮೈಸೂರು
1970 ರ ಸಂದರ್ಭದಲ್ಲಿ, ಕನ್ನಡ ಚಿತ್ರರಂಗದಲ್ಲಿ, ಬರೀ ಪೌರಾಣಿಕ ಚಲನಚಿತ್ರಗಳು ತಯಾರಾಗುತ್ತಿದ್ದುದ್ದು ಒಂದೆಡೆಯಾದರೆ, ಮತ್ತೊಂದೆಡೆ ಸಾಮಾಜಿಕ ಪಿಡುಗುಗಳ ಆಚರಣೆಯಲ್ಲಿ ತಲ್ಲೀನವಾಗಿ, ಬುದ್ದಿಗೆ ಜಡ್ಡು ಹಿಡಿಸಿಕೊಂಡಿದ್ದ ಸಮಾಜ. ಈ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯುಳ್ಳ ಕಥೆಗಳನ್ನು ಹುಡುಕಿ, ಚಿತ್ರಗಳನ್ನು ಮಾಡಿ, ಚಿತ್ರರಂಗಕ್ಕೆ ಹೊಸತನ್ನು ಕಲಿಸಿಕೊಟ್ಟದ್ದೂ ಅಲ್ಲದೇ, ತಮ್ಮ ಚಿತ್ರಗಳನ್ನೇ ಸಮಾಜಕ್ಕೆ ಕನ್ನಡಿಯ ಹಾಗೆ ಹಿಡಿದು, ಸಮಾಜವೇ ತನ್ನ ಬಗ್ಗೆ ಅಸಯ್ಯ ಪಡುವಂತೆ ಮಾಡಿದ ಶ್ರೇಯಸ್ಸು ಚಲನಚಿತ್ರ ಇತಿಹಾಸ ಕಂಡ ಶ್ರೇಷ್ಠ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲುತ್ತದೆ.
ಅಂದಿನ ವಸಾಹತುಶಾಯಿ ಮನಸ್ಥಿತಿಯ, ಸಾಮಾಜಿಕ ಬದಲಾವಣೆಯನ್ನೇ ಒಪ್ಪಿಕೊಳ್ಳದ ಸಾಮಾಜಿಕ ವ್ಯವಸ್ಥೆಯಲ್ಲಿ, ಸಾಮಾಜಿಕ ಕ್ರಾಂತಿ ಆಧಾರಿತ ಚಿತ್ರಗಳನ್ನು ತಯಾರಿಸಿ, ಹೆಚ್ಚು ಹೆಚ್ಚು ಜನ ಆ ಚಿತ್ರಗಳನ್ನು ನೋಡುವಂತೆ ಮಾಡಿದವರು ಪುಟ್ಟಣ್ಣ ಕಣಗಾಲ್. ತುಂಬ ಚಿಕ್ಕ ವಯಸ್ಸಿಗೆ ಸಾವಿಗೀಡಾದ ಪುಟ್ಟಣ್ಣ, ಹಲವಾರು ಪ್ರಯೋಗಗಳ ಮೂಲಕ ಕನ್ನಡ ಚಲನಚಿತ್ರ ಇತಿಹಾಸದಲ್ಲೇ ಅದ್ಬುತ ಹೆಸರನ್ನು ಮಾಡಿ ತಮ್ಮ ಛಾಪನ್ನು ಮೂಡಿಸಿದರು.
ಜಾತಿ ಧರ್ಮಗಳೇ ಉಸಿರಾಗಿದ್ದ 70 ರ ದಶಕದಲ್ಲಿ, ಅಂತರಧರ್ಮೀಯ ಪ್ರೀತಿಯನ್ನು ಸಾರುವ ನಾಗರಹಾವು ಚಿತ್ರವನ್ನು ಸಮಾಜಕ್ಕೆ ಕೊಟ್ಟವರು ಪುಟ್ಟಣ್ಣ.
ತಮ್ಮ ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ, ಜಮೀನ್ದಾರಿ ಪದ್ಧತಿ ಹಾಗು ಸಾಮಾಜಿಕ ಅನ್ಯಾಯಗಳ ವಿರುದ್ಧ ಗ್ರಾಮದ ಯುವಕರು ಸಿಡಿದು ಬೀಳುವ ವಿಷಯವನ್ನು ತೆಗೆದುಕೊಂಡು, ಅಂದಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಸಮಾಜವಾದಿ ಸಿದ್ದಾಂತದ ಕಡೆಗೆ ಯುವಕರು ವಾಲುವಂತೆ ಮಾಡಿದವರು ಪುಟ್ಟಣ್ಣ.
1981 ರಲ್ಲಿ ಅಷ್ಟು ಯಶಸ್ಸು ಕಾಣದ ರಂಗನಾಯಕಿ ಚಿತ್ರದಲ್ಲಿ, ಮಗನೇ ತಾಯಿಯನ್ನು ಬಯಸುವ ಕಥೆಯುಳ್ಳ ಚಿತ್ರವನ್ನು ನೋಡಿದರೆ, “ಈಡಿಪಸ್” ಕಥೆ ನೆನಪಾಗುತ್ತದೆ. ಇಂದಿಗೂ ಕೂಡ ರಂಗನಾಯಕಿ ಚಿತ್ರವನ್ನು ಎಷ್ಟು ಬಾರಿ ನೋಡಿದರೂ, ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.
ಹೆಣ್ಣು ತನ್ನ ಸ್ವತಂತ್ರ ಚಿಂತನೆಯಿಂದ ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವುದನ್ನು ಎಂದಿಗೂ ಬಯಸದ ಸಮಾಜಕ್ಕೆ, ಒಂದು ಗಂಡು, ಹೆಣ್ಣಿನ ಸ್ವಾತಂತ್ರ ಹಾಗು ಸ್ವಾವಲಂಬನೆಯನ್ನು ಇಷ್ಟಪಡುವುದೂ ಅಲ್ಲದೇ, ಅದನ್ನು ಪ್ರೇರೇಪಿಸುವ ವಿಷಯವನ್ನು ಇಟ್ಟುಕೊಂಡು ಶುಭಮಂಗಳ ಚಿತ್ರವನ್ನ ಕೊಟ್ಟವರು ಪುಟ್ಟಣ್ಣ ಕಣಗಾಲ್.
ಹಣ ಹಾಗು ಅಧಿಕಾರದ ಮದದಲ್ಲಿ ಬದುಕುವ ಶ್ರೀಮಂತ ಮನೆತನದ ಮಕ್ಕಳು, ಕಷ್ಟ ಪಟ್ಟು ದುಡಿದು ತಿನ್ನುವುದನ್ನ ಮೈಗೂಡಿಸಿಕೊಳ್ಳುವುದೂ ಅಲ್ಲದೇ, ಬಡ ಕುಟುಂಬದ ಹೆಣ್ಣು ಮಕ್ಕಳನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವ ವಿಭಿನ್ನ ಚಿಂತನೆಯ ಕಥೆಯನ್ನು ಧರಣಿಮಂಡಲ ಮಧ್ಯದೊಳಗೆ ಚಿತ್ರದ ಮೂಲಕ ಕೊಟ್ಟವರು ಪುಟ್ಟಣ್ಣ.
ಶ್ರೀಮಂತ ಸ್ನೇಹಿತನಿಂದ ಶೋಷಣೆಗೆ ಒಳಗಾಗಿದ್ದ ಒಂದು ಹೆಣ್ಣನ್ನು, ಅವಳಿಗೆ ಸಮಾಜದಲ್ಲಿ ಕೆಟ್ಟ ಹೆಸರು ಬರಬಾರದೆಂದು, ಅವಳನ್ನು ಮದುವೆಯಾಗಿ, ಶ್ರೇಷ್ಠ ಬಾಂಧವ್ಯವನ್ನು ತೋರಿಸುವ ಯುವಕನ ಕತೆಯುಳ್ಳ ಅಮೃತ ಗಳಿಗೆಯಂತಹ ಚಿತ್ರ ಕೊಟ್ಟರು ಪುಟ್ಟಣ್ಣ. ಅವರ ಮಾನಸ ಸರೋವರ ಚಿತ್ರವಂತೂ, ಎಲ್ಲ ಪೀಳಿಗೆಯ ಭಗ್ನ ಪ್ರೇಮಿಗಳು ನೋಡಿ ಕಣ್ಣೀರಾಕುವ ಚಿತ್ರ.
ಹೀಗೆ ತಮ್ಮ ಚಿತ್ರಗಳ ಮೂಲಕ ಚಲನಚಿತ್ರ ರಂಗಕ್ಕೆ ಹೊಸ ಹೊಸ ನಟ ನಟಿಯರನ್ನು ಪರಿಚಯಿಸುವುದೂ ಅಲ್ಲದೇ, ಚಲನಚಿತ್ರಗಳ ಮೂಲಕ ಸಾಮಾಜಿಕ ಬದಲಾವಣೆಗೆ ಸಾಕ್ಷಿಯಾದ ಪುಟ್ಟಣ್ಣನವರು, ಹಲವು ಹಳೆ ಹಾಗು ಹೊಸ ತಲೆಮಾರಿನ ಚಿತ್ರ ನಿರ್ದೇಶಕರಿಗೆ ಒಂಥರಾ ಮೇಷ್ಟ್ರು. ಇವರ ಚಿತ್ರಗಳು ಹಲವು ಭಾಷೆಗಳಿಗೆ ರಿಮೇಕ್ ಆಗಿದ್ದು, ಇವರನ್ನು ಪಡೆದ ಕನ್ನಡ ಚಲನಚಿತ್ರ ರಂಗ ಹಾಗು ನಮ್ಮ ನಾಡು ಧನ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ

ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್‍ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.
ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂ.ಇ.ಎಸ್ ಗ್ರೌಂಡ್ ನಲ್ಲಿ ‘ಘೋಸ್ಟ್’ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಘೋಸ್ಟ್’ ಚಿತ್ರವನ್ನು ಆರ್.ಜೆ. ಶ್ರೀನಿ ಬರೆದು, ನಿರ್ದೇಶಿಸಿದ್ದು, ಅರ್ಜುನ್ ಜನ್ಯಾ ಸಂಗೀತವಿದೆ. ಶಿವರಾಜಕುಮಾರ್ ಜೊತೆ ಮಲಯಾಳಂ ನಟ ಜಯರಾಮ್, ಹಿಂದಿ ನಟ ಅನುಪಮ್ ಖೇರ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
