Connect with us

ಬಹಿರಂಗ

ಮತ್ತೆ ಮತ್ತೆ ಪ್ರಶ್ನೆ ! ಎಡಪಂಥ ಎಂದರೇನು ? ಯಾರು ಎಡ ಪಂಥೀಯರು ?

Published

on

ಭಾರತದ ಮೊದಲ ಎಡಪಂಥೀಯ ನಾಯಕರು ಸುಭಾಷ್ ಚಂದ್ರ ಬೋಸ್, ನೆಹರೂ, ಮುಜಾಫರ್ ಅಹಮದ್, ಜೆಪಿ, ಅಂಬೇಡ್ಕರ್,ಕವಿ ನಜರುಲ್ ಇಸ್ಲಾಂ, ಇ.ಎಂ.ಎಸ್ ನಂಬೂದರಿಪಾದ್ ಮೊದಲಾದವರು ಎಂಬುದು ಗೊತ್ತೆ ? ಅಂಬೇಡ್ಕರ್‌ರವರು ಜಾತಿ ವ್ಯವಸ್ಥೆಯ ವಿರುದ್ಧ ಸ್ವತಂತ್ರ ಹೋರಾಟ ಸಾಗಿಸುತ್ತಿದ್ದ ಎಡ ಪಂಥೀಯ ಹೋರಾಟಗಾರ , ಮತ್ತು ಅಸಾಮಾನ್ಯ ಎಡ ಚಿಂತಕರಾಗಿದ್ದರು.

ಎಡಪಂಥ, ಎಡ ಪಕ್ಷ ಎಂಬ ಮೊದಲ ಹೆಸರು ಬಂದದ್ದು ಫ್ರೆಂಚ್ ರಾಜ ಸಭೆಯಲ್ಲಿ . ರಾಜಪ್ರಭುತ್ವದ ಪರ ಇದ್ದ ಸಾಮಂತರು, ನೊಬಲ್‌ಗಳು ಪ್ರಜಾಪ್ರಭುತ್ವದ ಪರ ಇದ್ದ ಸಾಮಾನ್ಯ ಜನರ ಭಾಷೆ , ವರ್ತನೆ ಒರಟು.ಪ್ರಜಾಪ್ರಭುತ್ವ ಬೇಕು ಎಂದು ಅರಚಾಡುತ್ತಾರೆ . ಅವರ ಜೊತೆ ಕುಳಿತುಕೊಳ್ಳುವುದಾಗಲ್ಲ ಎಂದು ರಾಜನ ಬಲಗಡೆ ಕುಳಿತುಕೊಳ್ಳಲಾರಂಭಿಸಿದರು, ಹೀಗಾಗಿ ಸಾಮಾನ್ಯ ಜನರು,ಪ್ರಜಾಪ್ರಭುತ್ವ ಬೇಕೆನ್ನುವವರಿಗೆ ಉಳಿದದ್ದು ಎಡ ಭಾಗ ಮಾತ್ರ. ಹೀಗೆ ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ದನಿ ಎತ್ತುವವರು, ಅದನ್ನು ಬದಲಾಯಿಸಬೇಕೆನ್ನುವವರು ಎಡ ಪಕ್ಷವಾದರು.

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಇನ್ನೂ ಆರೆಸ್ಸೆಸ್ ಬಗ್ಗೆ ಜನಕ್ಕೆ ತಿಳಿಯುವ ಮೊದಲೇ , ಕಾಂಗ್ರೆಸ್‌ನೊಳಗೇ ಧಾರ್ಮಿಕ ಮೌಲ್ಯಗಳನ್ನು, ವರ್ಣ- ಜಾತಿ ವ್ಯವಸ್ಥೆಯನ್ನು , ಪಾಳೆಯಗಾರಿ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಬಲ ಪಂಥ ರೂಪುಗೊಂಡಿದ್ದವು. ಕಾಂಗ್ರೆಸ್‌ನ ಒಳಗೇ ಇದ್ದು ಹಿಂದೂ ಮಹಾ ಸಭಾದ ನಾಯಕರಾಗಿದ್ದ ಮದನ ಮೋಹನ ಮಾಳವೀಯ, ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕರ ಹಿಂಬಾಲಕರು , ಸರ್ದಾರ್ ವಲ್ಲಭಬಾಯ್ ಪಟೇಲ್, ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮೊದಲಾದವರು ಈ ಬಲಪಂಥದವರು. ಗಾಂಧೀಜಿ ಇದರ ನಾಯಕರು.

ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕು;
ವರ್ಣ-_ಜಾತಿ ವ್ಯವಸ್ಥೆ , ಪಾಳೆಯಗಾರೀ ಮೌಲ್ಯಗಳು , ದೊಡ್ಡ ಭೂಮಾಲಕರ ಹಿಡಿತ ವ್ಯವಸ್ಥೆ ತೊಲಗಬೇಕು ,
ಪ್ರಜಾಪ್ರಭುತ್ವ, ಗಣರಾಜ್ಯ ಅಸ್ತಿತ್ವಕ್ಕೆ ಬರಬೇಕು ಎಂಬ ಪ್ರಮುಖ ತತ್ವಗಳಿಗೆ ಈ ಬಲಪಂಥೀಯರ ವಿರೋಧ.

ಇಂತಹ ನಿಲುವುಗಳನ್ನು ಒಪ್ಪದವರು ಕಾಂಗ್ರೆಸ್‌ನ ಒಳಗೇ ಎಡಪಂಥದವರಾದರು. ಮೇಲೆ ಹೇಳಿದಂತೆ ಬೋಸ್, ನೆಹರೂ ಇದರ ಮೊದಲ ನಾಯಕರು. ನಂತರ ಜೆಪಿ, ಇಎಂಎಸ್ ಸೇರಿ ಕಾಂಗ್ರೆಸ್‌ನೊಳಗೇ ಕಾಂಗ್ರೆಸ್ ಸಮಾಜವಾದಿ ಪಕ್ಷ ಕಟ್ಟಿಕೊಂಡರು. ಹಲವು ರಾಜ್ಯಗಳಲ್ಲಿ ಇದು ಬೆಳೆಯಿತು.
ಕಾಂಗ್ರೆಸ್‌ನ ಒಳಗೆ ಮತ್ತು ಹೊರಗೆ ರೈತ,ಕಾರ್ಮಿಕ ಚಳುವಳಿಗಳನ್ನು ಬೆಳೆಸುತ್ತಿದ್ದ ಕಮ್ಯೂನಿಸ್ಟ್ ಪಕ್ಷ ಕೂಡಾ ಈ ಎಡ ಪಂಥದ ಅಂಗವಾಯಿತು.

ಈ ಎಲ್ಲರನ್ನೂ ಒಳಗೊಂಡ ಎಡಪಂಥ ಗಾಂಧೀಜಿಯವರನ್ನೇ ಹಿಮ್ಮೆಟ್ಟಿಸುವ, ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಗಾಂಧೀಜಿಯವರ ಅಭ್ಯರ್ಥಿಯನ್ನೇ ಸೋಲಿಸಿ 1936ರಲ್ಲಿ ಸುಭಾಷರನ್ನು ಗೆಲ್ಲಿಸುವ ಶಕ್ತಿ ಪಡೆಯಿತು.
ಆಗ ಗಾಂಧೀಜಿ ಎಡಪಂಥದವರ ಮೇಲೆ ಸಮರ ಸಾರಿದರು. ಬಲಪಂಥೀಯರೆಲ್ಲರೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿ ಸುಭಾಷರ ಅಧ್ಯಕ್ಷತೆಯನ್ನು ನಿಷ್ಕ್ರಿಯಗೊಳಿಸಿದರು. ನೆಹರೂರವರನ್ನು ತಮ್ಮೆಡೆಗೆ ಸೆಳೆದುಕೊಂಡರು.
ಆಗಲೇ ಸುಭಾಷರು ಕಾಂಗ್ರೆಸ್ ತ್ಯಜಿಸಿ ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಎಡ ಪಕ್ಷವನ್ನು ಕಟ್ಟಿದರು.

ನಂತರ ಭಾರತದಲ್ಲಿ ಎಡ ಪಂಥೀಯರೆಂದರೆ ಕಾಂಗ್ರೆಸ್‌ನ ಎಡ ಪಂಥ, ಲೋಹಿಯಾ, ಕೃಪಲಾನಿ ಸೇರಿದಂತೆ ಸಮಾಜವಾದಿ ಪಕ್ಷದ ಹಲವು ಬಣಗಳು, ಅಂಬೇಡ್ಕರ್‌ರವರ ರಿಪಬ್ಲಿಕನ್ ಪಕ್ಷ, ಕಮ್ಯೂನಿಸ್ಟ್ ಪಕ್ಷ , ಮುಂದೆ ಅದರ ಎರಡು ವಿಭಜಿತ ಅಂಗಗಳಾದ ಸಿಪಿಎಂ, ಸಿಪಿಐ ಪಕ್ಷಗಳು, ಫಾರ್ವರ್ಡ್ ಬ್ಲಾಕ್ ಮುಂತಾದವುಗಳು ಎಡಪಂಥೀಯ ಪಕ್ಷಗಳೆಂದು ಪರಿಗಣಿತವಾಗಿದ್ದವು.

ನಕ್ಸಲೀಯರು ಎಡ ಪಂಥೀಯ ಎಂದು ಪರಿಗಣಿತವಾಗಿರಲಿಲ್ಲ. ಕೆಲ ಕಾಲಾನಂತರ ಸಶಸ್ತ್ರ ಕ್ರಾಂತಿಯ ದಾರಿಯನ್ನು ತ್ಯಜಿಸಿ ಜನ ಚಳುವಳಿಯ ಹಾದಿಗೆ ಮರಳಿದ ಒಂದೆರಡು ಬಣಗಳು ಮಾತ್ರ ಇಂದು ಎಡ ಪಂಥೀಯ ಚಳುವಳಿಯ ಭಾಗವಾಗಿವೆ.

ಒಟ್ಟುನಲ್ಲಿ ಪಾಳೆಯಗಾರಿ ವ್ಯವಸ್ಥೆ, ಅದರ ಭಾಗವಾದ ವರ್ಣ- ಜಾತಿ ಬೇಧ, ವಸಾಹತುಶಾಹಿ, ಅಮೇರಿಕ ನೇತೃತ್ವದ ಸಾಮ್ರಾಜ್ಯಶಾಹಿ
ವಿರುದ್ಧ ಮತ್ತು ಪ್ರಜಾಪ್ರಭುತ್ವ, ಸಮಾನತೆಯ ಪರ ಇರುವವರೆಲ್ಲರೂ ಎಡ ಪಂಥ ಎಂಬುದು ಅದರ ವಿವರಣೆಯ ಭಾಗ.
ಆದರೆ ವಿವಿಧ ಹಂತಗಳಲ್ಲಿ ಸಮಾಜವಾದಿ ಪಕ್ಷದ ವಿವಿಧ ಬಣಗಳು ತಮ್ಮ ಸ್ವತಂತ್ರ ಅಸ್ತಿತ್ವ ಕಳೆದುಕೊಂಡು ಕಾಂಗ್ರೆಸ್ ಅಥವಾ ಬಿಜೆಪಿ ಸೇರಿದವು. ಕಾಂಗ್ರೆಸ್‌ನ ಒಳಗಡೆಯ ಎಡ ಪಂಥ ಚಂದ್ರಶೇಖರ್ ನಾಯಕತ್ವದಲ್ಲಿ ಹೊರಬಂದು ಜನತಾ ದಳ ಸೇರಿತು.

ಈಗ ಎಡ ಪಕ್ಷಗಳೆಂದರೆ ಎರಡು ಕಮ್ಯೂನಿಸ್ಟ್ ಪಕ್ಷಗಳು, ಫಾರ್ವರ್ಡ್ ಬ್ಲಾಕ್ , ರೆವಲ್ಯೂಷನರಿ ಸಮಾಜವಾದಿ ಪಕ್ಷ, ಎಸ್‌ಯುಸಿಐ, ಸಶಸ್ತ್ರ ಕ್ರಾಂತಿ ತ್ಯಜಿಸಿದ ಎರಡು ನಕ್ಸಲೀಯ ಬಣಗಳು.‌ಹೀಗಾಗಿ ಎಡ ಪಕ್ಷಗಳೆಂದರೆ ಕಮ್ಯೂನಿಸ್ಟ್ ಎಂದಾಗಿರುವುದು ವಿಷಾದನೀಯ ಸ್ಥಿತಿ.
ರಾಜಕೀಯ ಪಕ್ಷಗಳ ಹೊರಗೆ ಸಮಾಜವಾದಿ ಚಿಂತಕರು, ವಿಶಾಲ ಎಡಪಂಥದ ಭಾಗವಾಗಿರುವ ಅಕಾಡೆಮಿಕ್ ,ಸಾಹಿತಿ, ಕಲಾವಿದರು, ದಲಿತ, ಮಹಿಳಾ, ಆದಿವಾಸಿ ಸಾಮಾಜಿಕ ಚಳುವಳಿಗಾರರು ಇದ್ದಾರೆ. ಆದರೆ ಒಂದು ಒಗ್ಗಟ್ಟನ್ನು ರೂಪಿಸಿಕೊಂಡಿಲ್ಲ.
ಇದು ಭಾರತದ ಎಡಪಂಥದ ಸಂಕ್ಷಿಪ್ತ ಚರಿತ್ರೆ.

  • ಕೃಪೆ : ಫೇಸ್‌ಬುಕ್‌ ಪೋಸ್ಟ್

ಜಿ.ಎನ್. ನಾಗರಾಜ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ

ಸುದ್ದಿದಿನ,ದಾವಣಗೆರೆ:ತಾಲ್ಲೂಕಿನ ಕಾಡಜ್ಜಿ ಗ್ರಾಮದ ದೇಗುಲಗಳಲ್ಲಿ ನಿಧಿ ಶೋಧಿಸಲು ಯತ್ನಿಸಿದ ಆರು ಜನರ ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾಡಜ್ಜಿ ಗ್ರಾಮದ ಬಸವರಾಜ (42), ಮಲೇಬೆನ್ನೂರಿನ ಪ್ರಕಾಶ...

ದಿನದ ಸುದ್ದಿ2 days ago

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು 

ಸುದ್ದಿದಿನ,ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಸುಗಮ, ಪಾರದರ್ಶಕ ಮತ್ತು ಅತ್ಯಂತ ಸುರಕ್ಷಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯದಿಂದ...

ದಿನದ ಸುದ್ದಿ1 week ago

ಎಸ್‌ಎಸ್‌ಎಲ್‌ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ

ಸುದ್ದಿದಿನ,ದಾವಣಗೆರೆ: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ ಗುರುಕುಲ ಶಾಲೆ (Gurukul School) ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ವರ್ಚಸ್ಸನ್ನು...

ದಿನದ ಸುದ್ದಿ1 week ago

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ

ಸುದ್ದಿದಿನ,ದಾವಣಗೆರೆ: ಬಿಜೆಪಿಯು ಪಂಚರಾಜ್ಯಗಳ ಚುನಾವಣೆಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆ ಮಾಡಲು ಹೋಗಿ ಮುಖಭಂಗಕ್ಕೀಡಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ...

ದಿನದ ಸುದ್ದಿ1 week ago

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು...

ದಿನದ ಸುದ್ದಿ1 week ago

ಏ 25 ರಂದು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಗೆ ಉಚಿತ ತರಬೇತಿ

ಸುದ್ದಿದಿನ,ದಾವಣಗೆರೆ : ನಗರದ ಧವನ್ ಕಾಲೇಜಿನಲ್ಲಿ Viksit47 ಅಕಾಡೆಮಿ ವತಿಯಿಂದ ಉಚಿತ ತರಬೇತಿ ಕಾರ್ಯಗಾರವನ್ನು ಇದೇ 25 ರಂದು ಆಯೋಜಿಸಲಾಗಿದೆ ಎಂದು ಮುಖ್ಯಸ್ಥರಾದ ತೇಜಸ್ ಹೆಚ್.ಎನ್ ಅವರು...

ದಿನದ ಸುದ್ದಿ1 week ago

ಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್

ಸುದ್ದಿದಿನ,ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವಿದ್ಯಾರ್ಥಿ ಭರತ್ ಜಿ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 625ಕ್ಕೆ 625 ಅಂಕಗಳನ್ನು...

ದಿನದ ಸುದ್ದಿ2 weeks ago

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ

ಸುದ್ದಿದಿನ,ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 23) ಮಧ್ಯಾಹ್ನ 12ಕ್ಕೆ ಪ್ರಕಟಿಸಲಾಗುತ್ತದೆ. ಫಲಿತಾಂಶವನ್ನು ವೆಬ್‌ಸೈಟ್ (https://karresults.nic.in) ಲಿಂಕ್ ಮೂಲಕ ಹಾಗೂ KarnatakaOne mobile app...

ದಿನದ ಸುದ್ದಿ2 weeks ago

ಬಾಳೆ ಸಸಿಗಳ ಮಾರಾಟ : ಸಂಪರ್ಕಿಸಿ

ಸುದ್ದಿದಿನ,ದಾವಣಗೆರೆ: ಉತ್ತಮ ಗುಣಮಟ್ಟದ ಜಿ-9 ತಳಿಯ ಅಂಗಾಂಶ ಕೃಷಿ ಬಾಳೆಗಳನ್ನು ಕೃಷಿ ಇಲಾಖೆ ಮಾರಾಟ ಮಾಡಲಾಗುತ್ತಿದೆ. ಆಸಕ್ತ ರೈತರು ಸಹಾಯಕ ತೋಟಗಾರಿಕಾ ಅಧಿಕಾರಿ, ಅಂಗಾಂಶ ಕೃಷಿ ಬಾಳೆ,...

ದಿನದ ಸುದ್ದಿ2 weeks ago

ಮಹಿಳಾ ಮತದಾರರನ್ನು ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವ ಬಿಜೆಪಿ ಕುತಂತ್ರ ವಿಫಲವಾಯಿತು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ

ಸುದ್ದಿದಿನ,ದಾವಣಗೆರೆ:ಬಿಜೆಪಿ ಮಹಿಳಾ ಮತದಾರರನ್ನು ಒಂದು ಪ್ರಬಲ ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವಲ್ಲಿ ಪ್ರಯತ್ನಿಸಿತ್ತು. ‘ನಾರಿ ಶಕ್ತಿ’ ಎಂಬ ಬ್ರಾಂಡ್ ಅಡಿಯಲ್ಲಿ ಮಹಿಳೆಯರನ್ನು ನೇರವಾಗಿ ತಲುಪುವ ತಂತ್ರವನ್ನು ಬಿಜೆಪಿ...

Trending