ನೆಲದನಿ
ಮರೆಯೋದುಂಟೆ ಮೈಸೂರು ದೊರೆಯ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ
“ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಇದು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.
ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ.
ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ್ ಆಗಿ ನೇಮಿಸಲ್ಪಟವರು ಸರ್. ಫ್ರೇಜರ್ ರವರು. ಮುಂದೆ 1902 ಆಗಸ್ಟ್ 8ರಂದು ಬ್ರಿಟಿಷ್ ರಿಜೆನ್ಸಿಯಿಂದ ಅಧಿಕಾರ ಸ್ವೀಕರಿಸುತ್ತಾ, ಯುವರಾಜ ಕೃಷ್ಣರಾಜರು ತಮ್ಮ ಮುಂದಿನ ಆಳ್ವಿಕೆ ಹೇಗಿರುತ್ತದೆ ಎಂಬುದಕ್ಕೆ ಹೀಗೆ ನುಡಿಯುತ್ತಾರೆ, “ನನ್ನ ಮೇಲೆ ಹೊರಿಸಲ್ಪಟ್ಟಿರುವ ಭಾರವು ಎಷ್ಟು ಮಹತ್ತರವಾದುದು ಎಂಬುದನ್ನು ನಾನು ಸಂಪೂರ್ಣವಾಗಿ ತಿಳಿದಿದ್ದೇನೆ.
ಇದನ್ನು ಮಾತಿನಿಂದಲ್ಲ ಕೃತಿಯಿಂದ ಸಾಬೀತುಪಡಿಸಬೇಕೆಂದು ನಿಶ್ಚಯಿಸಿಕೊಂಡಿದ್ದೇನೆ, ನನ್ನ ಪ್ರಜೆಗಳ ಸುಖ ಸಂತೋಷಗಳಿಗೆ ಎಂದೂ ಕುಂದುಂಟಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಸಂಸ್ಥಾನದ ಸ್ಥಿತಿಯು ಇನ್ನೂ ಉತ್ತಮವಾಗುವಂತೆ ಮಾಡುತ್ತೇನೆ. ಯಾರ ಭಯವಾಗಲಿ, ದಾಕ್ಷಿಣ್ಯವಾಗಲಿ ಇಲ್ಲದೇ ಯಾರ ತಂತ್ರಕ್ಕೂ ಹಿಂಜರಿಯದೇ, ಯಾವ ಮಂತ್ರಕ್ಕೂ ಒಳಗಾಗದೇ ನನ್ನ ಪ್ರಜೆಗಳ ನಿರಂತರ ಹಿತ ರಕ್ಷಣೆಗಾಗಿ ರಾಜ್ಯ ಭಾರ ನಿರ್ವಹಿಸುತ್ತೇನೆ” ಎನ್ನುತ್ತಾರೆ.
ಹಾಗಿದ್ದರೆ ಮಹಾರಾಜರು ನುಡಿದಂತೆ ನಡೆದರೆ? ತಮ್ಮ ಮಾತನ್ನು ಜೀವನದುದ್ದಕ್ಕೂ ಉಳಿಸಿಕೊಡರೆ? ಖಂಡಿತ 38 ವರ್ಷಗಳ ಅವರ ಭವ್ಯ ನಿರ್ದಾಕ್ಷಿಣ್ಯ ಆಡಳಿತ ಅದಕ್ಕೆ ಸಾಕ್ಷೀಭೂತವಾಗಿದೆ. ಆಡಳಿತ ಚುಕ್ಕಾಣಿ ಹಿಡಿದ ಮಹಾರಾಜರು ತಾನೊಬ್ಬ ರಾಜ ಇಡೀ ರಾಜ್ಯವೇ ನನ್ನ ಬಿಗಿಮುಷ್ಠಿಯಲ್ಲಿರಬೇಕು ಎಂದುಕೊಳ್ಳಲಿಲ್ಲ. ಬದಲಾಗಿ ತಾನೊಬ್ಬ ಜನ ಸೇವಕ ಜನ ಸೇವೆಯೇ ತನ್ನ ನೈಜ ಗುರಿಯೆಂದು ಪ್ರತಿಪಾದಿಸಿ ಅಪ್ಪಟ ಪ್ರಜಾಪ್ರಭುತ್ವವಾದಿ ಅರಸು ಎನ್ನಿಸಿಕೊಂಡರು.
ಅದಕ್ಕಾಗಿ ಪ್ರಜಾಪ್ರತಿನಿಧಿ ಸಭೆಯನ್ನು ಬಲಗೊಳಿಸಿ 1907ರಲ್ಲಿ ನ್ಯಾಯಾವಿಧಾಯಕ ಸಭೆಯನ್ನು ಸ್ಥಾಪಿಸಿ ಸರ್ವರಿಗೂ ಅದರಲ್ಲಿ ಪ್ರಾತಿನಿದ್ಯ ನೀಡಿ ಸಮಾನತೆ ಮೆರೆದರು. ಇಡೀ ರಾಜ್ಯವನ್ನೇ ತಮ್ಮ ಆಸ್ತಿಯೆಂದು ಪರಿಗಣಿಸದೆ ತಮ್ಮ ಸಂಸಾರಕ್ಕೆ ಎಷ್ಟು ಹಣ ಬೇಕೆಂಬುದನ್ನು ಕೂಡ ಅಯ-ವ್ಯಯದ ಮೂಲಕ ಪ್ರಜಾಪ್ರತಿನಿಧಿ ಸಭೆಯಲ್ಲಿ ಅನುಮೊದನೆ ಪಡೆದುಕೊಳ್ಳಲು ಪ್ರಾರಂಭಿಸಿದರು. ಪ್ರಾಯಶಃ ಮಹಾರಾಜರ ಈ ಕ್ರಮ ಇಡೀ ಭರತ ಖಂಡದಲ್ಲೆಯೇ ಅಪರೂಪದ್ದು.
ಸಾಮಾಜಿಕ ನ್ಯಾಯದ ಪರ ಮಹಾರಾಜರ ನಿಲುವು ಮೀಸಲಾತಿ ಚಳುವಳಿಯ ಇತಿಹಾಸದಲ್ಲೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು: 1902ರಲ್ಲಿ ಕೊಲ್ಲಪುರ ಸಂಸ್ಥಾನದಲ್ಲಿ ಅಲ್ಲಿಯ ಅರಸು ಶಾಹು ಮಹಾರಾಜರು ಹಿಂದುಳಿದ ವರ್ಗಗಳಿಗೆ ಶೇ. 50 ಮೀಸಲಾತಿ ನೀಡಿದ ನಂತರ ಅದರಿಂದ ಸ್ಪೂರ್ತಿಗೊಂಡ ಅವರು 1927ರಲ್ಲಿ ಮಿಲ್ಲರ್ (Miller) ಆಯೋಗದ ಶಿಫಾರಸ್ಸಿನಂತೆ ಬ್ರಾಹ್ಮಣೇತರರಿಗೆ (Non-Brahmin Reservation in Mysore State) ಶೇ 75% ಮೀಸಲಾತಿ ನೀಡುತ್ತಾರೆ (Backward Caste Reservation in Mysore State). ತನ್ಮೂಲಕ ಸಾಮಾಜಿಕ ನ್ಯಾಯದಲ್ಲಿ ಹೊಸ ಶಕೆಗೆ ನಾಂದಿ ಹಾಡುತ್ತಾರೆ.
ಮಹಾರಾಜರ ಈ ನಿರ್ಧಾರದ ವಿರುದ್ಧ ಅಂದಿನ ದಿವಾನರಾಗಿದ್ದ ಸರ್. ಎಂ ವೀಶ್ವೇಶ್ವರಯ್ಯನವರು (Mokshagundam Visvesvarayya) “ಜಾತಿ ಆಧಾರಿತ ಮೀಸಲಾತಿ ನೀಡುವುದರಿಂದ ಪ್ರತಿಭೆಗೆ ದಕ್ಕೆ ಉಂಟಾಗುತ್ತದೆ ಆಡಳಿತದಲ್ಲಿ ದಕ್ಷತೆ ಹಾಳಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು” ಎನ್ನುತ್ತಾರೆ.
ಅಚ್ಚರಿ ಎಂದರೆ ಮಹಾರಾಜರು ಇದರಿಂದ ವಿಚಲಿತರಾಗುವುದಿಲ್ಲ. ಬದಲಿಗೆ ಬೇಸತ್ತ ವೀಶ್ವೇಶ್ವರಯ್ಯನವರು ನೀಡುವ ರಾಜೀನಾಮೆಯನ್ನು ಯಾವುದೇ ಗತ್ಯಂತರವಿಲ್ಲದೆ ಸ್ವೀಕರಿಸುತ್ತಾರೆ!
ಅಂದಹಾಗೆ ತಮ್ಮ 38 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಮಹಾರಾಜರು ಸಾಧನೆಯ ಸುರಿಮಳೆಯನ್ನೆ ಸುರಿಸುತ್ತಾರೆ. ದೇವದಾಸಿ ಪದ್ದತಿಯನ್ನು ನಿರ್ಮೂಲನೆಗೊಳಿಸಿದ್ದು, ಗೆಜ್ಜೆಪೂಜೆ ಕಾರ್ಯಕ್ರಮವನ್ನು ನಿಷೇಧಿಸಿದ್ದು, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದು, ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲು ಕಾನೂನು ರೂಪಿಸಿದ್ದು ಮಹಾರಾಜರ ಸಾಮಾಜಿಕ ಕಳಕಳಿಯ ಬಿಂಬಗಳಾಗಿವೆ. “ಜಾತಿ ಆಧಾರದ ಮೇಲೆ ಯಾರನ್ನು ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪ್ರವೃತ್ತಿಯನ್ನು ಸರ್ಕಾರವು ಎತ್ತಿಹಿಡಿಯಲಾರದು” ಎಂಬ ಗೆಜೆಟ್ ಪ್ರಕಟಣೆಯ ಮೂಲಕ ಅಸ್ಷೃಶ್ಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಅವರು ಶಿಕ್ಷಣವೇ ಎಲ್ಲ ಅಭಿವೃದ್ಧಿಗೂ ಮೂಲ ಎಂದು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಾರೆ.
ಮುಂದುವರಿದು 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಬಿಸಿದ್ದು, ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪಿಸಿದ್ದು, 1911 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಿಸಿದ್ದು, ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿಗೊಳಿಸಿದ್ದು ಮತ್ತು ವಯಸ್ಕರಿಗಾಗಿ 7000 ವಯಸ್ಕರ ಶಾಲೆಗಳನ್ನು ಪ್ರಾರಂಭಿಸಿದ್ದು ಶಿಕ್ಷಣದ ಬಗ್ಗೆ ಮಹಾರಾಜರ ಆದ್ಯತೆಯನ್ನು ತೋರಿಸುತ್ತದೆ.
ಹಾಗಂತ ಅವರು ಕೃಷಿ ಕ್ಷೇತ್ರವನ್ನು ಕಡೆಗಣಿಸುವುದಿಲ್ಲ. ವಿಶ್ವವಿಖ್ಯಾತ ಕೃಷ್ಣ ರಾಜ ಸಾಗರ ನಿರ್ಮಾಣಗೊಂಡಿದ್ದು ಇವರ ಕಾಲದಲ್ಲೇ. ಇದರ ಮೂಲಕ ಆ ಕಾಲದಲ್ಲೇ 1,20,000 ಎಕರೆ ಭೂಮಿಗೆ ನೀರಾವರಿ ಕಲ್ಪಿಸಲಾಯಿತು. ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಜಲ ವಿದ್ಯುತ್ ಯೋಜನೆ ಪ್ರಾರಂಭವಾದದ್ದು ಕೂಡ ಇವರ ಕಾಲದಲ್ಲೇ. 1902ರಲ್ಲಿ ಕಾವೇರಿ ನದಿಗೆ ಶಿವನಸಮುದ್ರದಲ್ಲಿ ಅಡ್ಡಲಾಗಿ ಜಲ ವಿದ್ಯುತ್ ಉತ್ಪಾದನಾ ಕಾರ್ಯ ಪ್ರಾರಂಭವಾಗಿದ್ದು, 30,000 ವೋಲ್ಟ್ ವಿದ್ಯುತ್ತನ್ನು ಕೋಲಾರ ಚಿನ್ನದ ಗಣಿಗೆ ವರ್ಗಾಯಿಸಿದ್ದು ಅಚ್ಚರಿಯೆನಿಸಿದರೂ ಸತ್ಯ.
ಈ ಸಂದರ್ಭದಲ್ಲಿಯೇ ಜನರು ಮಹಾರಾಜ ನಾಲ್ವಡಿಯವರನ್ನು “ಕೃಷ್ಣ ರಾಜ ಭೂಪ ಮನೆ ಮನೆ ದೀಪ” ಎಂದದ್ದು. ಏಕೆಂದರೆ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ನಗರದಲ್ಲಿ ವಿದ್ಯುತ್ ದೀಪಗಳು ಬೆಳಗಿದ್ದು, ಮೈಸೂರು ಸೇರಿದಂತೆ ಇತರ ನಗರ, ಹಳ್ಳಿಗಳಲ್ಲಿ ವಿದ್ಯುತ್ ದೀಪ ಬೆಳಗಿದ್ದು ಇವರ ಕಾಲದಲ್ಲೇ ಅದಕ್ಕೆ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಾರಾಜ ನಾಲ್ವಡಿ ಕೃಷ್ಣ ಒಡೆಯರ್ ಸಾಧನೆ ಅನನ್ಯ. ಈ ಕಾರಣದಿಂದಲೇ ಒಂದೆಡೆ ಡಿವಿಜಿಯವರು “ನನ್ನ ತಿಳುವಳಿಕೆಯಲ್ಲಿ 1881ರಿಂದ 1940ರ ಅವಧಿಯ ವರ್ಷಗಳು ಮೈಸೂರಿನ ಸುವರ್ಣಯುಗ” ಎಂದಿರುವುದು.
ಹಾಗೇಯೇ 1938ರ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ “ಭರತ ಖಂಡದಲ್ಲಿಯೇ ಮೈಸೂರು ಮಾದರಿ ಸಂಸ್ಥಾನ” ಎಂದು ದಾಖಲಿಸಿರುವುದು. ಹಾಗಿದ್ದರೆ ಇಷ್ಟೆಲ್ಲ ಸಾಧನೆಗೈದ ನಾಲ್ವಡಿಯವರಿಗೆ ಸಮಸ್ಯೆಗಳು ಕಾಡಲಿಲ್ಲವೇ? ಎನ್ನುವುದಾದರೆ ಉತ್ತರ ಹೌದು. ಬ್ರಾಹ್ಮಣೇತರರಿಗೆ ಶೇ. 75 ಮಿಸಲಾತಿ ಜಾರಿ ಮಾಡಿದ್ದರಿಂದ ಕುದ್ದು ಹೋದ ಪಟ್ಟಭದ್ರ ಹಿತಾಸಕ್ತಿಗಳು 1938 ರಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಮಾಡಿ ಮಹಾರಾಜರ ವಿರುದ್ಧ ಪಿತೂರಿ ನಡೆಸುತ್ತವೆ ಮತ್ತು ಇಂತಹದ್ದೇ ಮತ್ತೊಂದು ಘಟನೆಯಲ್ಲಿ ವಿಧುರಾಶ್ವಥ್ಥ ಎಂಬಲ್ಲಿ ಧ್ವಜಾರೋಹಣ ನಡೆದು ಗೋಲಿಬಾರ್ ಮಾಡಲಾಗುತ್ತದೆ.
ದುರಂತವೆಂದರೆ ಈ ಗೋಲಿಬಾರ್ ಗೆ ಮಹಾರಾಜರು ಮತ್ತು ದಿವಾನರು ಕಾರಣ ಎಂದು ಅಪಪ್ರಚಾರ ಮಾಡಲಾಗುತ್ತದೆ. ಇದರಿಂದ ಮಹಾರಾಜರು ತೀವ್ರವಾಗಿ ಘಾಸಿಗೊಳಗಾಗುತ್ತಾರೆ. ಈ ಎಲ್ಲಾ ಗೊಂದಲಗಳ ನಡುವೆ ಅವರ ಬೆನ್ನೆಲುಬಂತಿದ್ದ ಅವರ ಸಹೋದರ ಕಂಠೀರವ ನರಸಿಂಹರಾಜ ಒಡೆಯರ್ ರವರು ಆಕಾಲಿಕ ಮರಣಕ್ಕೀಡಾಗುತ್ತಾರೆ.
ಇದು ಮಹಾರಾಜರನ್ನು ಇನ್ನಷ್ಟು ಆಘಾತಕ್ಕೀಡುಮಾಡುತ್ತದೆ, ಇಂತಹ ಆಘಾತ ಒತ್ತಡಗಳು ಅಂತಿಮವಾಗಿ ಬಲಿತೆಗೆದುಕೊಳ್ಳುವುದು ಸ್ವತಃ ಮಹಾರಾಜರನ್ನೇ, ಜುಲೈ 31, 1940 ರಂದು ತೀವ್ರ ಹೃದಯಾಘಾತಕ್ಕೆ ಒಳಗಾದ ರಾಜರ್ಷಿ, ಪ್ರಜಾ ಚಿಂತಕ, ಸಾಮಾಜಿಕ ಪರಿವರ್ತನೆಯ ರೂವಾರಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ರ ಪವಿತ್ರ ಚೇತನವು ಆಗಸ್ಟ್ 03, 1940 ರಂದು ಅವರ ದೇಹವನ್ನು ಬಿಟ್ಟು ಆಗಲುತ್ತದೆ, ತನ್ಮೂಲಕ ತನ್ನ ಲಕ್ಷಾಂತರ ದೇಶವಾಸಿಗಳನ್ನು ತಬ್ಬಲಿ ಮಾಡುತ್ತದೆ.
ಆಡಳಿತ ಪ್ರಭೃತಿಗಳಲ್ಲಿ ಭ್ರಷ್ಟಚಾರವೇ ಸದಾಚಾರವಾಗಿ, ಸಾಮಾಜಿಕ ಕಳಕಳಿ, ಜನ ಸೇವೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ನಾಲ್ವಡಿಯವರಂತಹ ಮಾಹಾಚೇತನಗಳ ಅಗತ್ಯ ಈಗ ತುಂಬಾ ಇದೆ. ಇಂತಹ ಮಹಾಚೇತನ ಪ್ರತಿಯೊಬ್ಬರ ಎದೆಯಲ್ಲಿ ತುಂಬಲಿ, ಅವರ ಉಜ್ವಲ ಇತಿಹಾಸ ಪ್ರತಿಯೊಬ್ಬರ ಮನದಲ್ಲಿ ಅನುರಣಿಸಲಿ ಎಂಬುದಷ್ಟೇ ಸದ್ಯದ ಕಳಕಳಿ.
ಕಡೆಯದಾಗಿ ಕವಿ ಹನಸೋಗೆ ಸೋಮಶೇಖರ್ ರವರ ಕವನದ ಒಂದು ಸಾಲು “ಮರೆಯೋದುಂಟೆ ಮೈಸೂರು ದೊರೆಯ… ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ…”
–ರಘೋತ್ತಮ ಹೊ ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
- ರುದ್ರಪ್ಪ ಹನಗವಾಡಿ
ನಾನು ಮದುವೆಯಾದ ಮೇಲೆ ನಮ್ಮೂರಿನಲ್ಲಿಯೇ 3-4 ಅಂತರ್ಜಾತಿ ಮದುವೆಗಳಾದವು. ಮೈಸೂರಿನಲ್ಲಿ ನಮ್ಮ ಜೊತೆಗಿದ್ದ ಪ್ರೊ. ಗೊಟ್ಟಿಗೆರೆ ಶಿವರಾಜು ಚನ್ನರಾಯ ಪಟ್ಟಣದಲ್ಲಿ ರಾಜ್ಯಶಾಸ್ತçದ ಅಧ್ಯಾಪಕನಾಗಿದ್ದ. ಅವನ ಸಹೋದ್ಯೋಗಿಗಳಾಗಿದ್ದ ನರಸಿಂಹಾಚಾರ್ ಇಂಗ್ಲಿಷ್ ಅಧ್ಯಾಪಕ ಮತ್ತು ಪ್ರೊ. ಸುಮತಿ ಎನ್. ಗೌಡ ಅಧ್ಯಾಪಕರಾಗಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು.
ಅವರನ್ನು ನೇರ ಬಿಆರ್‌ಪಿಗೆ ಕರೆತಂದು, ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದನು. ನಾನು ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಕೃಷ್ಣಪ್ಪನವರಿಗೆ ಸುದ್ದಿ ಮುಟ್ಟಿಸಿ, ಮದುವೆಯ ಏರ್ಪಾಡು ಮಾಡಿದೆ. ಹುಡುಗಿ ಒಕ್ಕಲಿಗ ಜಾತಿ, ಹುಡುಗ ಬ್ರಾಹ್ಮಣನಾಗಿದ್ದ. ಸಹೋದ್ಯೋಗಿಗಳ ಪ್ರೀತಿಯ ಮದುವೆ ಮಾಡಿದ ಪ್ರೊ. ಜಿ.ಬಿ. ಶಿವರಾಜು ನಂತರ ದಿನಗಳಲ್ಲಿ ಗೌಡ ಜಾತಿಗೆ ಸೇರಿದ ಸಂಬಂಧಿಕರಿಂದ ಅನೇಕ ರೀತಿಯ ಕಿರುಕುಳಕ್ಕೂ ಒಳಗಾಗಬೇಕಾಯಿತು. ಆದರೆ ಈ ದಂಪತಿಗಳು ಶಿವರಾಜು ಪರ ಇರಬೇಕಾದವರು ನಂತರದ ದಿನಗಳಲ್ಲಿ ಇವರುಗಳಿಂದಲೇ ಕಿರುಕುಳ ಅನುಭವಿಸುವಂತೆ ಆದುದು ವಿಪರ್ಯಾಸವೇ ಸರಿ. ಮಾಡಿದ ಉಪಕಾರ ಸ್ಮರಣೆ ನಮ್ಮ ವ್ಯಕ್ತಿತ್ವದಲ್ಲಿ ಇರದಿದ್ದರೆ, ಮನುಷ್ಯನಿಂದ ಮತ್ತಿನ್ನೇನನ್ನು ಮಾಡಲು ಸಾಧ್ಯ?
ಈ ಸರಣಿಯಲ್ಲಿ ಇಲ್ಲಿಯೇ ಇನ್ನೊಬ್ಬನ ಕಥೆ ಹೇಳಿ ಮುಗಿಸುವೆ. ಬಳ್ಳಾರಿ ಮೂಲದ ಒಬ್ಬ ಡಾಕ್ಟರ್ ಮತ್ತು ಅವರ ಕೈಕೆಳಗೆ ಇದ್ದ ನರ್ಸ್ ಇಬ್ಬರೂ ಪ್ರೀತಿಸಿದ್ದು, ಮದುವೆಯಾಗುವ ತಯಾರಿಯಲ್ಲಿದ್ದರು. ಶಿವಮೊಗ್ಗದ ಕಡೆಯ ಗೆಳೆಯರೊಬ್ಬರ ಮೂಲಕ ನನ್ನಲ್ಲಿಗೆ ಬಂದರು. ಇಬ್ಬರೂ ಮದುವೆಗೆ ಅರ್ಹ ವಯಸ್ಸಿನವರಾಗಿದ್ದು, ಬೇರೆ ಬೇರೆ ಜಾತಿಯವರಾದ ಕಾರಣ, ಹುಡುಗಿಗೆ ನನ್ನದೇ ಮನೆ ವಿಳಾಸಕೊಟ್ಟು ಮದುವೆ ಮಾಡಿಸಿ ಕಳಿಸಿಕೊಟ್ಟೆವು. ನಾನಾಗ ಪ್ರೊಬೆಷನರಿ ತಹಸೀಲ್ದಾರ್‌ನಾಗಿ ತರೀಕೆರೆಯಲ್ಲಿದ್ದೆ. ಅಲ್ಲಿನ ಸಬ್ ರಿಜಿಸ್ಟ್ರಾರ್ ಚಳಗೇರಿ ಎನ್ನುವವರ ಜೊತೆ ಮಾತಾಡಿ ರಿಜಿಸ್ಟ್ರೇಷನ್ ಮುಗಿಸಿ ಕಳಿಸಿದೆ.
ಇದೆಲ್ಲ ಆಗಿ ಒಂದು ವಾರದಲ್ಲಿ ಹುಡುಗನ ಕಡೆಯ ನಿವೃತ್ತ ಸೇನಾ ಅಧಿಕಾರಿ ಬಂದು ಗಾಯತ್ರಿಯೊಬ್ಬಳೇ ಮನೆಯಲ್ಲಿದ್ದಾಗ ನನ್ನ ಬಗ್ಗೆ ಆಕ್ಷೇಪಿಸಿ ನಾನು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಸಂಬಂಧಿ, ನಿನ್ನ ಗಂಡನ ಕೆಲಸ ಕೂಡ ಕಳೆದುಕೊಳ್ಳುವಂತೆ ಮಾಡುತ್ತೇನೆ’ ಎಂದೆಲ್ಲ ಕೂಗಾಡಿ ಹೋಗಿದ್ದ. ನಾನು ತರೀಕೆರೆಯಿಂದ ಬಂದಾಕ್ಷಣ ಇವಳು ಆತಂಕದಿAದ `ನಾವೇನೋ ಮದುವೆಯಾಗಿದ್ದೇವೆ. ಬೇರೆಯವರ ಮದುವೆ ಮಾಡಲು ಹೋಗಿ ಯಾಕೆ ತೊಂದರೆಗೊಳಗಾಗಬೇಕೆಂದು’ ಅಲವತ್ತುಕೊಂಡಳು.
ನಾನು ಈ ರೀತಿ ಮದುವೆಗಳ ಬಗ್ಗೆ ಖಚಿತ ತಿಳುವಳಿಕೆಯುಳ್ಳವನಾಗಿದ್ದು, ಈ ಬಗ್ಗೆ ರಾಜ್ಯದಲ್ಲಿ ನಡೆದಿದ್ದ ಶಿವರಾಮ ಕಾರಂತ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್, ಕೃಷ್ಣಪ್ಪ, ಪ್ರೊ. ಎಂ. ನಂಜುಂಡಸ್ವಾಮಿ, ಪ್ರೊ. ರವಿವರ್ಮಕುಮಾರ್, ಹೀಗೆ ಮದುವೆಯಾದವರ ಬಗ್ಗೆ ಸಾಲು ಸಾಲು ಹೆಸರುಗಳನ್ನು ತಿಳಿಸಿ ಗಾಯತ್ರಿಗೆ ಸಮಾಧಾನ ಮಾಡುತ್ತಿದ್ದೆ.
ನಾವು ಮದುವೆಯಾಗಿ ಆರು ತಿಂಗಳು ಆಗಿರಲಿಲ್ಲ, ನಮ್ಮ ವಿದ್ಯಾರ್ಥಿಯೊಬ್ಬರ ಅಕ್ಕ ಪ್ಲಾರಿ ಬಿಆರ್‌ಪಿ ಹತ್ತಿರವಿರುವ ಜಂಕ್ಷನ್‌ನಿಂದ ಭದ್ರಾವತಿಗೆ ಸ್ಟೆಫೆಂಡಿಯರಿ ಗ್ರಾಜ್ಯುಯೇಟ್ ಸ್ಕೀಂನಲ್ಲಿ ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗ ಸಿದ್ದಯ್ಯ ಭದ್ರಾವತಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಬಿಆರ್‌ಪಿ ಹತ್ತಿರದ ಶಾಂತಿನಗರದಿಂದ ದಿನವೂ ಬಸ್‌ನಲ್ಲಿ ಓಡಾಡುತ್ತಿರುವಾಗ ಪರಿಚಯವಾಗಿ ಪ್ರೀತಿಯ ಸೆಳೆತದಲ್ಲಿದ್ದರು. ಒಂದು ದಿನ ಬೆಳಗಿನ ಜಾವ ಹುಡುಗನ ಅಣ್ಣ ಬಂದು ಅವರಿಬ್ಬರ ಪ್ರೀತಿಗೆ ತಮ್ಮ ಒಪ್ಪಿಗೆ ಇದ್ದು ಹುಡುಗಿ ಕಡೆಯವರು ಒಪ್ಪುವುದಿಲ್ಲ, ಮದುವೆ ಮಾಡಿಸಬೇಕಾಗಿ ಕೋರಿದ.
ಹುಡುಗಿಯ ತಮ್ಮ ನನ್ನ ವಿಭಾಗದಲ್ಲಿಯೇ ನೇರ ವಿದ್ಯಾರ್ಥಿಯಾಗಿದ್ದ. ಈಗಾಗಲೇ ನಮ್ಮ ವಿಭಾಗದಲ್ಲಿ ಇವರು ಬರೀ ಇಂತದೇ ಕೆಲಸ ಮಾಡುತ್ತಿರುತ್ತಾನೆಂದು ಅಪಪ್ರಚಾರ ಬೇರೆ ಮಾಡುತ್ತಿದ್ದರು. ಆದರೂ ಎಲ್ಲ ಸೇರಿಕೊಂಡು ಇಂದಿರಾ ಕೃಷ್ಣಪ್ಪನವರಿಗೆ ತಿಳಿಸಿ ಭದ್ರಾವತಿಯಲ್ಲಿ ಮದುವೆ ನಡೆಸಲಾಯಿತು. ಮದುವೆಯಾದ ನಂತರ ಹೆಣ್ಣಿನ ಕಡೆಯವರು ನನ್ನನ್ನು ಹೊಡೆಯಲು ಜಂಕ್ಷನ್ ಎಂಬಲ್ಲಿ ಕಾಯುತ್ತಿದ್ದಾರೆ, ಇಲ್ಲಿ ಕಾಯುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿದ್ದರು. ಆದರೆ ದಿನಗಳೆದಂತೆ ಹುಡುಗ-ಹುಡುಗಿಯ ಮದುವೆಯನ್ನು ಈರ್ವರ ಕಡೆಯವರು ಒಪ್ಪಿ ನಂತರ ನಮ್ಮ ಕಡೆಗೆ ದೂರುವುದನ್ನು ನಿಲ್ಲಿಸಿದರು. ಈಗ ಇಬ್ಬರೂ ತಮ್ಮ ವೃತ್ತಿಯಲ್ಲಿ ಮುಂದುವರಿದು ಮಕ್ಕಳೊಂದಿಗೆ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ.
ಹೀಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಕೃಷ್ಣಪ್ಪನವರು ಪ್ರಾರಂಭಿಸಿದ ಒಲವಿನ ಸರಳ ಮದುವೆಗಳು ಸಾಲು ಸಾಲಾಗಿ ನಡೆಯುತ್ತಾ, ಡಿ.ಎಸ್.ಎಸ್. ಮತ್ತು ರೈತ ಸಂಘದ ಅನೇಕ ಕಾರ್ಯಕರ್ತರು ತಮ್ಮ ಕಾರ್ಯಸೂಚಿಯಲ್ಲಿ ಕಾರ್ಯಗತ ಮಾಡಬೇಕಾದ ಜವಾಬ್ದಾರಿ ಎಂಬಂತೆ ಸರಳ ಅಂತರ್‌ಜಾತಿ ಮದುವೆಗಳನ್ನು ನಡೆಸುವಂತಾಯಿತು. ಅದು ಇಂದಿಗೂ ಕರ್ನಾಟಕದಲ್ಲಿ ನಡೆದುಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ನಮ್ಮ ಬಿಆರ್‌ಪಿ ಸ್ನಾತಕೋತ್ತರ ಕೇಂದ್ರ
- ರುದ್ರಪ್ಪ ಹನಗವಾಡಿ
ದಟ್ಟ ಮಲೆನಾಡಲ್ಲದಿದ್ದರೂ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದು ನಿಸರ್ಗ ಸೌಂದರ್ಯವನ್ನು ಹೆಚ್ಚಿಸುತ್ತಿತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಶಾಖೆಗಳಾಗಲೀ, ಒಂದು ಸ್ವತಂತ್ರ ವಿಶ್ವವಿದ್ಯಾಲಯವಾಗುವ ಯಾವ ತಯಾರಿಯೂ ಕಾಣುತ್ತಿರಲಿಲ್ಲ.
ಪ್ರಾರಂಭದಿಂದ ಇದ್ದ, ನಾಲ್ಕು ವಿಭಾಗಗಳು ಮತ್ತು 15-16ಜನ ಅಧ್ಯಾಪಕರುಗಳಾಗಿದ್ದನ್ನು ಬಿಟ್ಟರೆ ವಿಕಾಸದ ಯಾವ ಲಕ್ಷಣಗಳೂ ಇರಲಿಲ್ಲ. ನಾನು ಬಂದು ನಾಲ್ಕು ವರ್ಷಗಳಲ್ಲಿ ನನ್ನ ಜೀವನದಲ್ಲಿ ಮದುವೆ ಮತ್ತು ನಮಗೆ ಮಗುವಾದುದ್ದನ್ನು ಬಿಟ್ಟರೆ ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಯಲ್ಲಿ ಮತ್ತೇನೂ ಬೆಳವಣಿಗೆಗಳು ನಡೆಯಲಿಲ್ಲ.
ಸ್ವಂತ ವಿಷಯದಲ್ಲಿ ನಾನು ಆರ್ಥಿಕ ಸಂಕಷ್ಟಕ್ಕೆ ಬಿದ್ದಿದ್ದೆ. ಮದುವೆಯಾಗುವ ಯಾವ ಪೂರ್ವಭಾವಿ ತಯಾರಿ ಇಲ್ಲದೆ ತಕ್ಷಣ ಆಗಬೇಕಾದ ಕಾರಣ ಸುಮಾರು 15 ಸಾವಿರದಷ್ಟು ವಿಶ್ವಾಸಿಕ ಸ್ನೇಹಿತರಿಂದ ಸಾಲ ಮಾಡಿದ್ದೆ. ಹೊಸ ಸಂಸಾರ ಹೂಡಿಕೆಗೆ ಬೇಕಾದ ಕನಿಷ್ಠ ಸೌಕರ್ಯಗಳೂ ಇಲ್ಲದೆ ಇದ್ದರೂ ಸದ್ಯ ಪಿಡಬ್ಲೂಡಿ ಕ್ವಾಟ್ರಸ್ ಒಂದನ್ನು ಅಲಾಟ್‌ಮೆಂಟ್ ಮಾಡಿಸಿಕೊಂಡಿದ್ದೆ. ಹಾಗಾಗಿ ಮದುವೆಯಾದಾಕ್ಷಣ ಉಳಿದುಕೊಳ್ಳಲು ಅದು ಅನುಕೂಲವಾಗಿತ್ತು. ಪ್ರಭು ಮತ್ತು ರೈತಸಂಘದ ಮಂಜಪ್ಪ, ಸ್ಟೀಲ್ ಅಂಗಡಿ ಶಾಂತು ಎಲ್ಲ ಶಿವಮೊಗ್ಗದಲ್ಲಿ ಪ್ರಭುವಿನ ಸ್ನೇಹಿತರಾಗಿದ್ದರು. ಬೇಕಾದ ಕನಿಷ್ಠ ಪಾತ್ರೆಗಳನ್ನು ಅವನ ಸ್ನೇಹಿತನಿಂದಲೇ ಸಾಲವಾಗಿ ತಂದಿದ್ದೆ. ಉಳಿದಂತೆ ಅವಶ್ಯ ಬಿದ್ದಾಗ ನನ್ನ ಸ್ನೇಹಿತರಾಗಿದ್ದ ಪ್ರಭು, ಜಿಎನ್‌ಕೆ ಜೊತೆ ಸಾಲ ಮಾಡಿ ತೀರಿಸೋ ವ್ಯವಸ್ಥೆಯಲ್ಲಿ ದಿನಗಳು ಕಳೆಯುತ್ತಿದ್ದವು.
ಆರ್ಥಿಕ ಸಂಕಷ್ಟ ಬಿಟ್ಟರೆ ನಮ್ಮಿಬ್ಬರ ಹೊಂದಾಣಿಕೆ ಅನನ್ಯವಾಗಿತ್ತು. ಬೇಂದ್ರೆಯವರ ಕವನದ ಸಾಲಿನಂತೆ
‘ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು’ ಎಂಬಂತೆ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೆವು.
ರಜಾ ದಿನಗಳಲ್ಲಿ ಬಿಆರ್‌ಪಿಯಲ್ಲಿ ಇದ್ದ ಟೆಂಟ್ ಸಿನಿಮಾಕ್ಕೆ ಇಲ್ಲವೇ ಶಿವಮೊಗ್ಗಕ್ಕೆ ರಾಜಕುಮಾರ್ ಅವರ ಹೊಸ ಸಿನಿಮಾಗಳಿಗೆ ಹೋಗಿ ಬರುತ್ತಿದ್ದೆವು. ಇಂದಿರಾ ಕೃಷ್ಣಪ್ಪನವರ ಭದ್ರಾವತಿ ಮನೆಗೆ ರಜಾ ದಿನಗಳಲ್ಲಿ ಹೋಗಿ ಬರುತ್ತಿದ್ದೆವು. ಮದುವೆಯಾದಾಕ್ಷಣ ಎಲ್ಲೂ ‘ಹನಿಮೂನ್’ಗೆಂದು ತಿರುಗಾಡಲು ಹೋಗಲಿಲ್ಲ. ಇದ್ದ ಸ್ನೇಹಿತರ ಮನೆ ಕಡೆಗೆ ಹೋಗಿ ಕಾಲ ಕಳೆದು ಬರುತ್ತಿದ್ದೆವು. ಕುಮ್ಮೂರ ಬಸವಣ್ಯಪ್ಪ, ಉಮಾ ಚಿತ್ರದುರ್ಗದಲ್ಲಿ ಇಬ್ಬರೂ ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಮನೆಯಲ್ಲಿ ಉಳಿದು ಚಿತ್ರದುರ್ಗದ ಕೋಟೆಯನ್ನು ಇಬ್ಬರೇ ಸುತ್ತಿಕೊಂಡು ಬಂದು ಮಾರನೆ ದಿನ ಚಳ್ಳಕೆರೆಗೆ ಹೋಗಿದ್ದೆವು.
ಚಳ್ಳಕೆರೆಯಲ್ಲಿ ಗಾಯತ್ರಿಯ ಸೀನಿಯರ್ ಮತ್ತು ನನ್ನ ಹಳೇ ವಿದ್ಯಾರ್ಥಿನಿ ಶಾರದಾ, ಡಾ. ಚಂದ್ರಶೇಖರ್ ಎಂಬ ಅವರ ಸೋದರ ಮಾವನನ್ನು ಮದುವೆಯಾಗಿ ಅಲ್ಲಿನ ಪಿಹೆಚ್‌ಸಿಯಲ್ಲಿ ಡಾಕ್ಟರ್ ಆಗಿ ಕೆಲಸದಲ್ಲಿದ್ದರು. ನಾವಿದ್ದ ಎರಡೂ ದಿನಗಳಲ್ಲ್ಲಿ ಅಕ್ಕರೆಯಿಂದ ವಿಶೇಷ ಅಡುಗೆ ಮಾಡಿ ತುಂಬ ವಾತ್ಸಲ್ಯದಿಂದ ನಮ್ಮನ್ನು ಸತ್ಕರಿಸಿದ್ದಳು. ಅವರಿಬ್ಬರ ಅಕ್ಕರೆಯ ಆತಿಥ್ಯ ನಾವಿಬ್ಬರೂ ಎಂದೂ ಮರೆಯಲಾಗದ ನೆನಪಾಗಿ ಉಳಿದಿದೆ. ಆ ನಂತರದ ದಿನಗಳಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಶಾರದ ಎಲ್ಲಿದ್ದಾರೆ ಎಂಬುದು ತಿಳಿಯದೆ 40 ವರ್ಷಗಳೇ ಕಳೆದು ಹೋಗಿದ್ದವು.
ಈಗ್ಗೆ ಎರಡು ವರ್ಷಗಳಲ್ಲಿ ಯರ‍್ಯಾರನ್ನೋ ಕೇಳಿ, ಅವರ ವಿಳಾಸ ಪಡೆದು ನಾವಿಬ್ಬರು ನೆನಪು ಮಾಡಿ ಮಾತಾಡಿದೆವು. ಮನೆಗೆ ಆಹ್ವಾನಿಸಿದ ಮೇರೆಗೆ ಇತ್ತೀಚೆಗಷ್ಟೆ ಬಂದು ಹೋಗಿದ್ದಳು. ಹೀಗೆ ಬಂದು ಹೋಗಿ 3 ತಿಂಗಳಲ್ಲಿ ಹೃದಯಾಘಾತದಿಂದ ಶಾರದಾ ತೀರಿಕೊಂಡಳು. ಇಷ್ಟು ದೀರ್ಘ ಕಾಲದ ಅಜ್ಞಾತವಾಸದ ಕಾರಣ ತಿಳಿದು ಬೇಸರವಾಗಿತ್ತು. ಶಾರದಾ-ಚಂದ್ರಶೇಖರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಅಕಾಲಿಕ ಮರಣ ಹೊಂದಿದ್ದಳು.
ಇನ್ನೊಬ್ಬಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಗಂಡ ಡಾಕ್ಟರ್ ಆಗಿದ್ದರೂ ಮನೆಯಲ್ಲಿ ಒಂದು ಎಮ್ಮೆ ಸಾಕಿಕೊಂಡು ಮೇಯಿಸುತ್ತಾ ಗಂಡ ಮಕ್ಕಳಿಗೆ ಹಾಲು, ಮಜ್ಜಿಗೆ ಮಾಡಿ ಉಣಿಸುತ್ತಿದ್ದ ಶಾರದಾ ಅವರಿಗೆ ಬದುಕಿನಲ್ಲಿ ನೆಮ್ಮದಿಗಿಂತ ನೋವೇ ಜಾಸ್ತಿಯಾಗಿದ್ದೊಂದು ವಿಷಾದದ ಸಂಗತಿ. ಒಳ್ಳೆಯ ಮನಸ್ಸುಗಳಿಗೆ ನೋವುಗಳೇ ಹೆಚ್ಚೆಂಬುದು ಅವಳ ವಿಚಾರದಲ್ಲಿ ನಿಜವಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
- ರುದ್ರಪ್ಪ ಹನಗವಾಡಿ
ಇದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.
ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.
ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.
ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)
-
ದಿನದ ಸುದ್ದಿ5 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ4 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ5 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ3 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ4 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ3 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು
-
ದಿನದ ಸುದ್ದಿ4 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ