ರಾಜಕೀಯ
NRC ಮತ್ತು CAA ಯಾರಿಗೆ ಲಾಭ..?
- ಬಿಂದು ಗೌಡ ಕೆಪಿಸಿಸಿ,ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ
ಒಂದು ಮನೆಯಲ್ಲಿ ನಾಲ್ಕು ಜನ ಇದ್ರು ಆದ್ರೆ ತಿನ್ನೋಕೆ ಇದ್ದಿದ್ದೇ ಎರಡು ರೊಟ್ಟಿ ಕಡೆಗೆ ಅರ್ಧ ಅರ್ಧ ತಗೊಂಡು ಹಂಚಿಕೊಂಡು ತಿನ್ನೋಣ ಅಂತ ಮಾತು ಕಥೆ ಆಯ್ತು ಇನ್ನೇನು ಎರಡು ರೊಟ್ಟಿ ಭಾಗ ಆಗಿ ನಾಲ್ಕು ಜನ ಹಂಚಿಕೊಳ್ಳಬೇಕು ಅಷ್ಟರಲ್ಲಿ ಹೊರಗಿಂದ ಯಾರೋ 3 ಜನ ಬಂದ್ರು ಈಗ ಇರುವ 2 ರೊಟ್ಟಿಯನ್ನು 4+3 ಅಂದ್ರೆ 7 ಜನ ಹಂಚಿಕೊಳ್ಳಬೇಕು , ಹೇಗೆ ಹಂಚಿಕೊಳ್ಳುತ್ತಾರೆ, ಇದರಿಂದ ಹೊಟ್ಟೆ ತುಂಬುತ್ತಾ ? ರೊಟ್ಟಿಯನ್ನು ಹಂಚಿಕೊಳ್ಳಬಹುದು ಭೂಮಿಯನ್ನು ಹಂಚಿಕೊಳ್ಳೋಕೆ ಸಾಧ್ಯವಾ ?
ಹೌದು ಈಗಿನ ಸಧ್ಯದ ಪರಿಸ್ಥಿತಿ ಹಾಗಿದೆ ದೇಶದಲ್ಲಿ ಈಗಾಗಲೇ ನಿರುದ್ಯೋಗ ಸಮಸ್ಯೆ ಕಳೆದ 45 ವರ್ಷದಲ್ಲೇ ಇದೆ ಮೊದಲ ಬಾರಿಗೆ ಇಷ್ಟರ ಮಟ್ಟಿಗೆ ನಿರುದ್ಯೋಗ ಸಮಸ್ಯೆ ಕಂಡು ಬಂದಿದೆ ಅಂತದರಲ್ಲಿ ಹೊರ ದೇಶಗಳಿಂದ ಬರುವವರಿಗೆ ಜಾಗ ಕೊಟ್ಟು ಪೌರತ್ವವನ್ನು ಕೊಡ್ತೀರಿ ಆಮೇಲೆ ಅವರಿಗೆ ಉದ್ಯೋಗ ಎಲ್ಲಿಂದ ಕೊಡ್ತೀರಿ ? ಬಂದವರು ಬಂದವರ ಹಾಗೆ ಇರ್ತಾರ ? ನೋ ಮದುವೆ ಮಕ್ಕಳು ಹೀಗೆ ಜನಸಂಖ್ಯೆ ಹೆಚ್ಚುತ್ತಲೇ ಹೋಗುತ್ತೆ ಅವರಿಗೆಲ್ಲ ಉದ್ಯೋಗ, ಆಹಾರ ಎಲ್ಲಿಂದ ಉತ್ಪತ್ತಿ ಆಗುತ್ತೆ ಈಗಾಗಲೇ ಅವೈಜ್ಞಾನಿಕ ಜಿ ಎಸ್ ಟಿ ಹೊರೆಯಾಗಿದೆ.
ನೋಟ್ ಬಂದಿಗಳ ಕಾರಣಕ್ಕೆ ಎಷ್ಟೋ ಕಾರ್ಖಾನೆ , ಉದ್ದಿಮೆ , ವ್ಯವಹಾರಗಳು ಮುಚ್ಚಿಹೋಗಿವೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ , ಇಲ್ಲಿರುವವರೇ ಕೆಲಸಗಳನ್ನ ಕಳೆದುಕೊಂಡು ಮನೆಯಲ್ಲಿ ಕೂತಿರುವಾಗ , ನಿರುದ್ಯೋಗ ಹಸಿವಿನ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ದೊಡ್ಡ ದೊಡ್ಡ ಉದ್ಯಮಿಗಳು ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ CAA ಅವಶ್ಯಕತೆ ಇದೆಯಾ ?
ಇನ್ನು NRC ಇದಿನ್ನೂ ಜಾರಿಯಾಗಿಲ್ಲ , ಆಗುತ್ತೆ ಅನ್ನುವ ಸುಳಿವು ಇದೆ 1990ರಲ್ಲಿ ಹುಟ್ಟಿರುವ ನನ್ನಲ್ಲೇ BIRTH CERTIFICATE ಇಲ್ಲ ಇನ್ನು ಹಳ್ಳಿಗಾಡುಗಳಲ್ಲಿ ಹುಟ್ಟಿದ , ಮನೆಯಲ್ಲಿಯೇ ಹೆರಿಗೆ ಆದವರ ಜನನ ಪ್ರಮಾಣ ಪತ್ರವನ್ನು ಎಲ್ಲಿಂದ ತರೋದು , ಆದಿವಾಸಿಗಳು , ಹಕ್ಕಿ ಪಿಕ್ಕಿಯವರು ಬುಡಕಟ್ಟಿನವರು ಇಂದಿಗೂ ಸೌಲಭ್ಯ ವಂಚಿತರಾಗಿ ಅರಣ್ಯಗಳಲ್ಲಿ ಇದ್ದಾರೆ ಅವರೆಲ್ಲ ಎಲ್ಲಿಂದ ತರ್ತಾರೆ ?? ನಮ್ಮ ದೇಶದಲ್ಲಿ ಏನಿಲ್ಲ ಅಂದ್ರು ಸಾವಿರಾರು ಅನಾಥ ಆಶ್ರಮ , ವೃದ್ಧಾಶ್ರಮಗಳು ಇವೆ ಅವರೆಲ್ಲ ಎಲ್ಲಿಂದ ತರ್ತಾರೆ ತಮ್ಮ ಜನನ ಪ್ರಮಾಣ ಪತ್ರಗಳನ್ನು ?
ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್ , ವೋಟರ್ ಐಡಿ , ಪಾಸ್ ಪೋರ್ಟ್ , ರೇಶನ್ ಕಾರ್ಡ್ , ಡ್ರೈವಿಂಗ್ ಲೈಸನ್ಸ್ ಇದ್ಯಾವುದೂ ಕೂಡ ದಾಖಲೆ ಅಲ್ಲ ಅನ್ನೋದೇ ಆದ್ರೆ ಇನ್ನೇನು ಕೊಟ್ಟು ಸಾಭೀತು ಪಡಿಸಬೇಕು ??
ಬಿಜೆಪಿ MEMBERSHIP CARD ತೋರಿಸಿ ಈ ದೇಶದ ಪ್ರಜೆ ಅಂತ ಸಾಬೀತು ಪಡಿಸಬೇಕಾ ???
ಆಧಾರ್ ಕಾರ್ಡ್ ಆಧಾರ ಅಲ್ಲ ಅಂದಾದರೆ ಯಾವ ಆಧಾರದ ಮೇಲೆ ಮಾಡಿದ್ದು ಅದನ್ನ ಯಾತಕ್ಕಾಗಿ ಮಾಡಿದ್ದು , ಜನಗಳ ಸಮಯ ಜೊತೆಗೆ ಹಣ ಎರಡು ಖರ್ಚಾಗಿದೆ ಇನ್ನು ಆಗುತ್ತಲೇ ಇದೆ ಒಂದು ಸಾರಿ ಅಪ್ಡೇಟ್ ಮಾಡಿಸೋಕೆ 50 ರೂಪಾಯಿ ಕೊಡಬೇಕು ಆಧಾರ್ ಆಧಾರ ಅಲ್ಲ ಅಂದಮೇಲೆ ಅಪ್ಡೇಟ್ ಯಾಕೆ ಮಾಡಿಸಬೇಕು ಬ್ಯಾನ್ ಮಾಡಿ ಜನರ ಸಮಯ ಮತ್ತು ದುಡ್ಡು ಆದ್ರೂ ಉಳಿಯುತ್ತೆ!
ಇದರಿಂದ ಮುಸಲ್ಮಾನರಿಗೆ ಮಾತ್ರ ತೊಂದರೆ ಅನ್ನೋದು ಮೂರ್ಖತನ , ಪಕ್ಕದ ಮನೆ ಅಹ್ಮದ್ ಭಾಯ್ ಅವರ ಹಿರೀಕರು ಜನನ ಪುರಾವೆ ಇಟ್ಕೊಂಡಿದ್ರೆ ಅವರಿಗೇನು ಸಮಸ್ಯೆ ಇಲ್ಲ ಇಲ್ಲಿನ ಪೌರತ್ವ ಪಡೀತಾರೆ ಅದೇ ಅಹ್ಮದ್ ಅಣ್ಣನ ಪಕ್ಕದ ಮನೆಯವ ಸುರೇಶ ಯಾವ ದಾಖಲೆ ಇಟ್ಕೊಂಡಿಲ್ಲ ಅಂದ್ರೆ ಅವನು ಈ ದೇಶದ ಪ್ರಜೆ ಅಲ್ಲ ಅಂತ ಡೈರೆಕ್ಟ್ ಆಗಿ ಡಿಟೆಂಶನ್ ಸೆಂಟರ್ ಗೆ ಹಾಕ್ತಾರೆ ಹಿಂದೂ ಅಂತ ಸುಮ್ಮನೆ ಬಿಡೋದಿಲ್ಲ .
ಆದ್ದರಿಂದ NRC ಮತ್ತು CAA ಇಂದ ಅನಾನುಕೂಲವೆ ಹೊರತು ಅನುಕೂಲವಾಗಲಿ , ಲಾಭವಾಗಲಿ ದೇಶದ ಜನತೆಗೆ ಇಲ್ಲ ಇದರಿಂದ ಅನುಕೂಲ ಬಹುಶಃ ಬಿಜೆಪಿಗರಿಗೆ ಆಗಬಹುದು (ವೋಟರ್ಸ್ ಮ್ಯಾಟರ್ಸ್ ) ಅಷ್ಟೇ ಬಿಟ್ರೆ ಬೇರೆ ಇಲ್ಲ , ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಕೆಲಸಕ್ಕೆ ಬಾರದ ಇಂತಹ ವಿಚಾರಗಳನ್ನು ಬಿಟ್ಟು ನಿಜವಾಗಿಯೂ ಗಮನ ಕೊಡಬೇಕಾದ ಆರ್ಥಿಕ ಸಮಸ್ಯೆ , ಶಿಕ್ಷಣ , ರಕ್ಷಣೆ , ಭದ್ರತೆ , ನಿರುದ್ಯೋಗ ಇವುಗಳ ಬಗ್ಗೆ ಗಮನ ಕೊಡಲಿ.
ಇನ್ನುಳಿದಂತೆ ಭಾವುಕವಾಗಿ ಯೋಚನೆ ಮಾಡೋದಾದರೆ ಹೌದು ನಮಗೆ ಬೇಕಿಲ್ಲ ನಾವು ಈ ಮಣ್ಣಿನ ಮಕ್ಕಳು ನಮ್ಮ ನೆಲದಲ್ಲಿ ನಾವು ಯಾರಿಗೂ ನಾವು ಇಲ್ಲಿಯವರು ಎಂದು ಸಾಬೀತು ಪಡಿಸುವ ಅವಶ್ಯಕತೆ ಇಲ್ಲ !
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


