Connect with us

ಬಹಿರಂಗ

ದೇಶಪ್ರೇಮ ಮತು ದೇಶದ್ರೋಹ

Published

on

  • ದೇಶವೆಂದರೆ ಒಂದು ಭೂಪ್ರದೇಶ, ಅಲ್ಲಿ ಜೀವಿಸುವ ಜನರು, ಅವರ ಅಸ್ತಿತ್ವಕ್ಕಾಗಿ ಬಳಸುವ ಜೀವನಾಧಾರ ವಸ್ತುಗಳು ಮತ್ತು ಅವನ್ನು ಪಡೆಯಲು ಸಾಮಾಜಿಕವಾಗಿ ಬಳಸುವ ಶ್ರಮ ಮತ್ತು ಸಹಜೀವಿಗಳೊಂದಿಗಿನ ಶ್ರಮಸಂಬಂಧಗಳು ಎಲ್ಲವೂ ಕೂಡಿರುವ ವಾಸ್ತವವೇ ದೇಶ. ಇವುಗಳ ಬಗೆಗಿನ ಸ್ವಾಭಾವಿಕ ಪ್ರೀತಿಯೇ ದೇಶಪ್ರೇಮ. ಹಾಗಿದ್ದ ಮೇಲೆ ‘ದೇಶಭಕ್ತಿ’ ಎಂಬುದು ಹುಟ್ಟಿದ್ದು ಹೇಗೆ? ದೇಶಭಕ್ತಿ ಎಂಬುದು ಊಳಿಗಮಾನ್ಯ ರಾಜಕೀಯದ ಪರಿಕಲ್ಪನೆ.ಸಂಘಪರಿವಾರ ಈಗ ಹರಡುತ್ತಿರುವ ‘ದೇಶಭಕ್ತಿ‘ ಮತ್ತು ‘ದೇಶದ್ರೋಹ‘ದ ಕಲ್ಪನೆಗಳ ಹಿಂದೆ ಊಳಿಗಮಾನ್ಯ ವ್ಯವಸ್ಥೆಯ ಮತ್ತು ಫ್ಯಾಸಿಸ್ಟ್ ‘ದೇಶ’ದ ಪರಿಕಲ್ಪನೆಯ ಮಿಶ್ರಣ ಇದೆ.

ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ

18-19ನೇ ಶತಮಾನದ ಸ್ಕಾಟಿ? ಕವಿ, ಸರ್ ವಾಲ್ಟರ್ ಸ್ಕಾಟ್ ಬರೆದ ‘Patriotism’
ಎಂಬ ಕವನ ಹೀಗೆ ಪ್ರಾರಂಭವಾಗುತ್ತದೆ:
Breathes there the man with soul so dead
who never to himself hath said
‘This is my own my native land

ಇದನ್ನು ಕುವೆಂಪುರವರು ಕನ್ನಡಿಸಿದ್ದು,
ಅದು- ದೇಶ ನನ್ನದು, ನನ್ನದು ನಾಡು
ಎನ್ನದ ಮಾನವನೆದೆ ಸುಡುಗಾಡು” ಎಂದು ಪ್ರಾರಂಭವಾಗುತ್ತದೆ. ಅವರ ಅನುವಾದದಲ್ಲಿ ‘Native’ಎಂಬ ಪದಕ್ಕಿರುವ ಅರ್ಥಪುಷ್ಟಿಯು ವ್ಯಕ್ತವಾಗುವುದಿಲ್ಲ.

ದೇಶಪ್ರೇಮ, ದೇಶಾಭಿಮಾನ ಮುಂತಾದ ಪದಗಳು ಮೇಲುನೋಟಕ್ಕೆಎಲ್ಲ ಮನುಷ್ಯರೂ, ಅವರು ಹುಟ್ಟಿ-ಬೆಳೆದು ವಾಸಿಸುವ ಅಥವಾ ವಲಸೆಹೋಗಿ ಜೀವಿಸುವ ಒಂದು ಭೂ ಪ್ರದೇಶಕ್ಕೂ ಅವರಿಗೂ ನಡುವೆ ಇರುವ ಭೌತಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಕುರಿತು ಹೇಳುವಂತೆ ತೋರುತ್ತವೆ. ನಾಡು, ದೇಶ ಎಂಬ ಪದಗಳು ಮೂಲಭೂತವಾಗಿ ಭೂ ಪ್ರದೇಶವನ್ನೇ ಕುರಿತು ಹೇಳುತ್ತವೆ. ಅವುಗಳ ವಿಶಾಲತೆಯನ್ನು ಹಿಗ್ಗಿಸುತ್ತಾ ಹೋದರೆ ಖಂಡ, ವಿಶ್ವ, ಜಗತ್ತುಎಂದಾಗಿ, ಇಡೀ ಭೂಮಿಗೆ ವಿಸ್ತರಿಸುತ್ತದೆ. ಮತ್ತೂ ವಿಸ್ತರಿಸಿದರೆ, ಸಾಂದ್ರವಾಗಿರುವ ಭೂಮಿಯ ವಾಸ್ತವತೆಯು ಅಳ್ಳಕವಾಗುತ್ತಾ ಹೋಗಿ ಎಲ್ಲವನ್ನೂ ಒಳಗೊಳ್ಳುವ ‘ಬ್ರಹ್ಮಾಂಡ’ ಎಂಬ ಅಮೂರ್ತವಾದ ಭಾವನೆಯಾಗಿಬಿಡುತ್ತದೆ.

ಅದರೊಂದಿಗಿನ ಮನುಷ್ಯ ಸಂಬಂಧವೂ ಸಹ ವಿಶಾಲಗೊಂಡು ‘ವಿಶ್ವಪ್ರೇಮ’, ಎಂದಾಗುತ್ತದೆ. ಅದೇ ರೀತಿಯಲ್ಲಿ ಈ ಸಂಬಂಧವನ್ನು ಕಿರಿದುಗೊಳಿಸುತ್ತಾ, ನಿರ್ದಿಷ್ಟಗೊಳಿಸುತ್ತಾ ಹೋದರೆ ಅದರ ಬಗ್ಗೆ ಇರುವ, ಪ್ರೀತಿ, ಅಭಿಮಾನ ಮುಂತಾದವುಗಳೆಲ್ಲಾ ದೇಶ, ಪ್ರಾಂತ್ಯ, ಜಿಲ್ಲೆ, ಊರು, ಕುಟುಂಬಗಳಿಗೆ ಕುಗ್ಗುತ್ತಾ ಕೊನೆಗೆ ಮನುಷ್ಯರ ಭೌತಿಕ ಮತ್ತು ಭಾವನಾತ್ಮಕಗಾಢ ಸಂಬಂಧಗಳ ಕೇಂದ್ರವಾದ ‘ಮನೆ’ಯನ್ನುತಲುಪುತ್ತವೆ. ‘ಮನೆ’ಯಲ್ಲಿನ ತಂದೆ, ಅಜ್ಜ, ಅಜ್ಜಿ, ಸೋದರ-ಸೋದರಿ, ಬಂಧು-ಬಳಗವನ್ನು ಒಳಗೊಳ್ಳುತ್ತದೆ. ಈ ಸಂಬಂಧಗಳನ್ನು ಮತ್ತೂ ನಿರ್ದಿಷ್ಟಗೊಳಿಸಿದರೆ, ಅದು ವ್ಯಕ್ತಿಯ ಹುಟ್ಟಿನೊಂದಿಗೆ ಬಿಡಿಸಲಾಗದಷ್ಟುಗಾಢ ಸಂಬಂಧವಿರುವ ವ್ಯಕ್ತಿಗೆ ಅಂದರೆ ತಾಯಿಗೆ, ಇನ್ನೂ ನಿರ್ದಿಷ್ಟವಾಗಿ ತಾಯಿಯ ಗರ್ಭಕ್ಕೆ ಬಂದು ನಿಲ್ಲುತ್ತವೆ.

ತಾಯಿಯ ಗರ್ಭದಲ್ಲಿರುವವರೆಗೂ ವ್ಯಕ್ತಿಗೆ (ಅಂದರೆ, ಮಗುವಿಗೆ) ಪೋಷಣೆ ಮತ್ತು ಭದ್ರತೆಗಳು ಕುಟುಂಬದ ಹಿನ್ನೆಲೆಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತವೆ. ಹುಟ್ಟಿದಮೇಲೆ ಪೋಷಣೆ ಮತ್ತು ಭದ್ರತೆಗಳು ಪಾಲನೆಯ ರೂಪದಲ್ಲಿ ತಾಯಿ-ತಂದೆ ಮತ್ತು ಕುಟುಂಬದ ಜನರಿಂದ ಸಾಮಾಜಿಕವಾಗಿ ದೊರೆಯುತ್ತವೆ.

ಹುಟ್ಟಿನಿಂದ ಹಿಡಿದು ಸಾಯುವ ಕಡೆಯ ಕ್ಷಣದವರೆಗೂ ಪ್ರತಿ ವ್ಯಕ್ತಿಗೂ ಪೋಷಣೆ ಮತ್ತು ಭದ್ರತೆಗಳು ಬೇಕೇ ಬೇಕು. ‘ಎಲ್ಲಿಗೇ ಹೋದರೂ’, ‘ಮನೆಗೆ’ ಮರಳಬೇಕು ಎಂಬ ಹಂಬಲ ವ್ಯಕ್ತಿಗಳಲ್ಲಿ ಸದಾ ತುಡಿಯುತ್ತಿರುತ್ತದೆ. ಮನೆಯ ಸುಖ-ಕೌಟುಂಬಿಕ ನೆಮ್ಮದಿ ಇತ್ಯಾದಿ ಹಂಬಲಗಳೆಲ್ಲಾ ಹುಟ್ಟುವ ಮುಂಚಿನಿಂದಲೂ ಎಲ್ಲರಲ್ಲಿಯೂ ಇರುವಂಥವೇ. ಇವು ವಾಸ್ತವದಲ್ಲಿ ತಾಯಿಯ ಗರ್ಭದಲ್ಲಿದ್ದುಕೊಂಡು, (ಯಾವಯತ್ನವನ್ನೂ ಮಾಡದೆ) ಮಗುವು ಹೊಕ್ಕಳು ಬಳ್ಳಿಯ ಮೂಲಕ ತಾಯಿಯಿಂದ ನೇರವಾಗಿ ಪಡೆಯುತ್ತಿದ್ದ ಪೋಷಣೆ (ಆಹಾರ-ಶಕ್ತಿ) ಮತ್ತು ಭದ್ರತೆ (ಸುರಕ್ಷತೆ)ಗಳನ್ನು ಸದಾ ಪಡೆಯುತ್ತಿರಬೇಕೆಂಬ ಹಂಬಲಗಳ ಮುಂದುವರಿಕೆಯೇ ಆಗಿದೆ.

ತಾಯಿಯನ್ನು ಕಂಡಾಗ ಆಗುವ ಸಂತೋಷ, ಎಲ್ಲಿಗೇ ಹೋದರೂ ಮತ್ತೆ, ಮನೆಗೆ ಮರಳಿದಾಗ ಆಗುವ ಸಂತೋ?ಕ್ಕೆ ಸಂವಾದಿಯಾದದ್ದು. ಈ ದೃಷ್ಟಿಯಿಂದತಾಯಿಯಗರ್ಭವನ್ನು ವ್ಯಕ್ತಿಯ ಮೊದಲ ‘ಮನೆ’ ಎಂದುಕರೆಯಬಹುದು. ಈ ಅರ್ಥದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂಎರಡು ಮನೆಗಳಿವೆ. ಹುಟ್ಟುವುದಕ್ಕಿಂತ ಮುಂಚಿನ ಮನೆ, ಅಂದರೆ ತಾಯಿಯ ಗರ್ಭ ಮತ್ತು ಹುಟ್ಟಿದ ಮೇಲೆ ಪೋಷಣೆ ಮತ್ತು ಭದ್ರತೆಗಳನ್ನು ಒದಗಿಸುವ, ಅನುಭವಿಸುವ ತಾಣವಾದ ‘ನಮ್ಮ ಮನೆ’.

ಗರ್ಭಿಣಿ ತಾಯಿಯು ಕೃಶಳಾಗಿರಲಿ ಅಥವಾ ಆರೋಗ್ಯವಂತಳಾಗಿರಲಿ, ಹೇಗೇ ಇದ್ದರೂ ಮಗುವಿಗೆ ಆಕೆಯ ಗರ್ಭವೇ ‘ಮನೆ’. ಹಾಗೆಯೇ ವ್ಯಕ್ತಿಯು ವಾಸಿಸುವ ಸ್ಥಳವು ಗುಡಿಸಿಲಾಗಿರಲಿ ಅಥವಾ ಬಂಗಲೆಯಾಗಿರಲಿ ಅದು ಮನೆಯೇ. ಈ ಎರಡರ ಸಂಯೋಜಿತ ರೂಪವೇ ತಾಯಿಯ ಮನೆ (ತವರು), ತಾಯಿಯಊರು (ಹುಟ್ಟಿದೂರು) ತಾಯಿಯ ಭಾ? (ತಾಯ್ನುಡಿ), ಮತ್ತು ತಾಯಿ ಬದುಕುವ ನಾಡು (ತಾಯ್ನಾಡು). ‘ನನ್ನ ಮನೆ’ ಎಂದರೂ ಅದೇ, ‘ನನ್ನದೇಶ’ ಎಂದರೂ ಅದೇ.

ಗರ್ಭಸ್ಥವಾಗಿರುವಾಗಲೇ ಭ್ರೂಣದ ಬೆಳವಣಿಗೆಯೊಂದಿಗೆ, ಮತ್ತು ಮಗುವಿನ ಮೆದುಳಿನ ಬೆಳವಣಿಗೆಯೊಂದಿಗೆ ತಳುಕು ಹಾಕಿಕೊಂಡಿರುವ ತಾಯಿ ಮತ್ತು ಪೋಷಕ ಜನರ ಕುಟುಂಬ (ವಂಶ), ತಾಯ್ನುಡಿ, ತಾಯ್ನಾಡುಗಳ ಬಗೆಗಿನ ಗಾಢಪ್ರೇಮವು ಏಕಕಾಲಕ್ಕೆ ಭೌತಿಕವೂ ಹೌದು ಭಾವನಾತ್ಮಕವೂ ಹೌದು. ಈ ಕಾರಣಕ್ಕಾಗಿಯೇ ಈ ಸಂಬಂಧದ ಹೊಗಳಿಕೆ, ಪ್ರಶಂಸೆಗಳು ವ್ಯಕ್ತಿಗೆ ಅತೀವ ಸಂತೋಷವನ್ನು ಕೊಡುತ್ತದೆ. ತೆಗಳಿಕೆ ಅಥವಾ ನಿಂದನೆಗಳು ಭಾವೋದ್ರೇಕದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟಿಸುತ್ತವೆ.

ವ್ಯಕ್ತಿಗಳು ಸಣ್ಣವರಿದ್ದಾಗ ಪೋಷಣೆ ಮತ್ತು ಭದ್ರತೆಗಳನ್ನು ತಾಯಿ ತಂದೆಯರ ಮೂಲಕ ಕುಟುಂಬದಿಂದ ಪಡೆಯುತ್ತಾರೆ. ತಾಯಿಗೆ ಹತ್ತಿರವಿರುವ ಕುಟುಂಬದ ಸದಸ್ಯರು ಸ್ವತಹ ತಮ್ಮ ಪೋಷಣೆ ಮತ್ತು ಭದ್ರತೆಗಳನ್ನು ತಮ್ಮ ಸಾಮಾಜಿಕ ಶ್ರಮಗಳಿಂದ ಹುಟ್ಟುವ ಜೀವನಾಧಾರ ವಸ್ತುಗಳ ಮೂಲಕ, ತಾವಿರುವ ಭೂಪ್ರದೇಶದಿಂದ ಪಡೆಯುತ್ತಾರೆ. ಇವೆಲ್ಲವುಗಳ ಒಟ್ಟುರೂಪವೇ ದೇಶ.

ಈ ದೇಶದ ಬಗೆಗಿನ ವ್ಯಕ್ತಿಗಳ ಪ್ರೀತಿಯು ಏಕಕಾಲಕ್ಕೆ ಸ್ವಾಭಾವಿಕವಾದದ್ದು ಮತ್ತು ಸಾಮಾಜಿಕವಾದದ್ದು. ಹೀಗೆ, ದೇಶವೆಂದರೆ ಒಂದು ಭೂಪ್ರದೇಶ, ಅಲ್ಲಿ ಜೀವಿಸುವ ಜನರು, ಅವರ ಅಸ್ತಿತ್ವಕ್ಕಾಗಿ ಬಳಸುವ ಜೀವನಾಧಾರ ವಸ್ತುಗಳು ಮತ್ತು ಅವನ್ನು ಪಡೆಯಲು ಸಾಮಾಜಿಕವಾಗಿ ಬಳಸುವ ಶ್ರಮ ಮತ್ತು ಸಹಜೀವಿಗಳೊಂದಿಗಿನ ಶ್ರಮ ಸಂಬಂಧಗಳು ಎಲ್ಲವೂ ಕೂಡಿರುವ ವಾಸ್ತವವೇ ದೇಶ. ಇವುಗಳ ಬಗೆಗಿನ ಸ್ವಾಭಾವಿಕ ಪ್ರೀತಿಯೇ ದೇಶಪ್ರೇಮ.

ಹಾಗಿದ್ದ ಮೇಲೆ ‘ದೇಶಭಕ್ತಿ’ ಎಂಬುದು ಹುಟ್ಟಿದ್ದು ಹೇಗೆ?

ಶ್ರಮಸಂಬಂಧಗಳಲ್ಲಿ ಜೀವನಾಧಾರ ವಸ್ತುಗಳನ್ನು ಉತ್ಪಾದಿಸಲು ಬೇಕಾದ ಉತ್ಪಾದನಾ ಸಾಧನಗಳನ್ನು ಬಲಿಷ್ಠರಾದ ಕೆಲವರು ತಮ್ಮ ಕೈಲಿಟ್ಟುಕೊಂಡು ತಾವು ಶ್ರಮಪಡದೆ, ಸಾಮಾನ್ಯ ಜನರ ಶ್ರಮದಿಂದ ಜೀವಿಸುತ್ತಾ ಅವರ ಪೋಷಣೆ – ಭದ್ರತೆಗಳನ್ನು ನಿಯಂತ್ರಿಸುವ ಶೋಷಕ ವ್ಯವಸ್ಥೆಯು ಸಾವಿರಾರು ವರ್ಷಗಳ ಹಿಂದಿನ ಗುಲಾಮ ಪದ್ಧತಿಯಲ್ಲಿ ರೂಢಿಗೆ ಬಂದಿತು. ಈ ಆಧುನಿಕ ಕಾಲದಲ್ಲೂ ಇಂಥ ಶೋಷಕ ವ್ಯವಸ್ಥೆಯು ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಹೆಸರುಗಳಲ್ಲಿ ಇಂದಿಗೂ ಜೀವಂತವಾಗಿದೆ.

ಭೂಪ್ರದೇಶ, ಉತ್ಪಾದನಾ ಸಾಧನಗಳು ಮತ್ತು ಶ್ರಮಶಕ್ತಿಯ ಮೂಲವಾದ ಸಾಮಾನ್ಯ ಜನರು ಮತ್ತು ಅವರ ಸಂತಾನವನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವುದರಲ್ಲಿ ಬಲಿಷ್ಠರ ಎರಡು ಬಣಗಳ ನಡುವೆ ಹೊಡೆದಾಟ-ಕಾದಾಟಗಳು ನಡೆದಾಗಲೆಲ್ಲಾ ಬಲಿಷ್ಠರಿಗಾಗಿ ಕಾದಾಡಿ ಪ್ರಾಣಕೊಡಲು ಸಾಮಾನ್ಯ ಜನರನ್ನೇ ಬಳಸಿಕೊಳ್ಳುವುದು ಬಹು ಹಿಂದಿನಿಂದಲೂ ಬಳಕೆಯಲ್ಲಿರುವ ಮತ್ತೊಂದು ಕ್ರೂರಪದ್ಧತಿ. ಅವರಿಗೆ ಸಮವಸ್ತ್ರವನ್ನು ಹಾಕಿ ಆಯುಧಗಳನ್ನು ಕೊಟ್ಟುಕಾದಾಡಲು ಕಳಿಸಿದರೆ ಅವರೇ ರಾಜಭಕ್ತಿಯುಳ್ಳ ಸೈನಿಕರು ಅಥವಾ ರಾಜಭಟರು.

ಈ ಪದ್ಧತಿಯಿಂದಾಗಿ, ಸಾಮಾನ್ಯ ಜನರಲ್ಲಿ ಸ್ವಾಭಾವಿಕವಾಗಿ ಮತ್ತು ಸಾಮಾಜಿಕವಾಗಿ ಇದ್ದ ‘ದೇಶಪ್ರೇಮ’ವು ತಮ್ಮನ್ನು ನಿಯಂತ್ರಿಸುವ ಬಲಿಷ್ಠ ಶೋಷಕರ ಬಗ್ಗೆ ಇಟ್ಟುಕೊಳ್ಳಲೇಬೇಕಾದ ಭಯ ಮತ್ತು ಬಲವಂತದ ಗೌರವಗಳಿಗೆ ಮತ್ತೊಂದು ಹೆಸರಾದ ‘ದೇಶಭಕ್ತಿ’ಯಾಗಿ ಕಾಲಕ್ರಮೇಣ ಮಾರ್ಪಟ್ಟಿತು. ಹೀಗೆ ಸಾಮಾನ್ಯ ಜನರಿಗೆ ಪೋಷಣೆ ಮತ್ತು ಭದ್ರತೆಗಳನ್ನು ಒದಗಿಸುವ ‘ದೇಶ’ದ ಸ್ಥಾನವನ್ನು ಬಲಿಷ್ಠರಾದ ಶೋಷಕರು ಆಕ್ರಮಿಸಿಕೊಂಡು ತಾವೇ ದೇಶವೆಂದು, ತಮ್ಮ ಬಗ್ಗೆ ಸಾಮಾನ್ಯ ಜನರು ಇಟ್ಟುಕೊಳ್ಳಬೇಕಾದ ಭಯ-ಗೌರವಗಳೇ ದೇಶಭಕ್ತಿಯೆಂದು ಬಲಾತ್ಕರಿಸುತ್ತಾ ಬಂದದ್ದರ ಫಲವಾಗಿ ‘ದೇಶಪ್ರೇಮ’ದ ಸ್ಥಾನದಲ್ಲಿ, ‘ದೇಶಭಕ್ತಿ’ಯೆಂಬ ಪರಿಕಲ್ಪನೆಯು ಪ್ರತಿಷ್ಠಾಪನೆಗೊಂಡಿತು.

ದೇಶಪ್ರೇಮವು ಅಥವಾ ರಾಷ್ಟ್ರಪ್ರೇಮವು ಸ್ವಾಭಾವಿಕವಾದದ್ದು ಮತ್ತು ಸಾಮಾಜಿಕವಾದದ್ದು. ದೇಶಭಕ್ತಿ ಎಂಬುದು ಊಳಿಗಮಾನ್ಯ ರಾಜಕೀಯದ ಪರಿಕಲ್ಪನೆ. ಅದನ್ನು ನಂಬುವವರ ದೃಷ್ಟಿಯಲ್ಲಿ ಜನರು ತಮ್ಮನ್ನು ನಿಯಂತ್ರಿಸುವ ಶೋಷಕರ ಬಗ್ಗೆ ಭಯ-ಭಕ್ತಿಯನ್ನು ತೋರಿಸಿದರೆ, ಅದು ದೇಶಭಕ್ತಿ. ಅವರನ್ನೇ ಪ್ರಶ್ನಿಸಿದರೆ ಅಥವಾ ಅವರ ಬಗ್ಗೆ ಭಯ-ಭಕ್ತಿಯನ್ನು ತೋರಿಸದಿದ್ದರೆ ಅದು ‘ರಾಜದ್ರೋಹ’ ಅಥವಾ ‘ದೇಶದ್ರೋಹ’.

ಸದ್ಯದ ರಾಜಕೀಯ ಸಂದರ್ಭದಲ್ಲಿ ಸಂಘಪರಿವಾರದ ಆಳುವ ಜನರು ಪ್ರಜಾಪ್ರಭುತ್ವದ ವಿಧಾನದಲ್ಲೇ ಅಧಿಕಾರಕ್ಕೆ ಬಂದಿದ್ದರೂ ಸಹ ಅವರ ರಾಜಕೀಯ ಮೌಲ್ಯಗಳ ಬೇರುಗಳು ಇನ್ನೂ ಆಸ್ತಿಕ ಮೂಲದ ಊಳಿಗಮಾನ್ಯ ವ್ಯವಸ್ಥೆಯಲ್ಲೇ ಇವೆ. ಸಾಮಾನ್ಯ ಜನರಲ್ಲಿರುವ ಸ್ವಾಭಾವಿಕವಾದ ದೇಶಪ್ರೇಮವನ್ನು ಗುರುತಿಸಲಾಗದ ಅವರು ತಮ್ಮನ್ನು ಪ್ರಶ್ನಿಸುವವರೆಲ್ಲರನ್ನೂ ‘ದೇಶದ್ರೋಹಿ’ಗಳೆಂದು ಜರೆದು ಶಿಕ್ಷಿಸಲು ಹಾತೊರೆಯುತ್ತಾರೆ. ಭಾರತವೆಂಬ ಭೂಪ್ರದೇಶದ ಸಾಮಾನ್ಯ ಜನರೊಂದಿಗೆ, ರಕ್ತಸಂಬಂಧಗಳಲ್ಲಿ ಹೇಗೋ ಹಾಗೆ ಸಾಮಾಜಿಕ ಶ್ರಮಸಂಬಂಧಗಳಲ್ಲಿ ಬದುಕುತ್ತಿರುವ ಎಲ್ಲರೂ ದೇಶಪ್ರೇಮಿಗಳೇ. ಆದ್ದರಿಂದ, ಜನರ ದೇಶಪ್ರೇಮವನ್ನು ಶಂಕಿಸುವ, ಸಾಬೀತುಪಡಿಸಿ ಎಂದು ಆಗ್ರಹಿಸುವ, ಅಥವಾ ಆಳುವವರನ್ನು ಪ್ರಶ್ನಿಸುತ್ತಾರೆಂಬ ಕಾರಣಕ್ಕಾಗಿ ಯಾರನ್ನೇ ಆಗಲಿ ‘ದೇಶದ್ರೋಹಿ’ಗಳೆಂದು ದೂಷಿಸುವ ಕ್ರಮಗಳು ಪ್ರಜಾತಾಂತ್ರಿಕವೂ ಅಲ್ಲ, ನ್ಯಾಯಯುತವೂ ಅಲ್ಲ.

17ನೇ ಶತಮಾನದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಯುರೋಪಿನಲ್ಲಿ ಉದಯಿಸಿ ಬೇರು ಬಿಡಲು ಆರಂಭಿಸಿದಾಗ ಬೆಳೆದು ಬಂದ ‘ದೇಶ’ದ ಪರಿಕಲ್ಪನೆ ನಮ್ಮ ಈಗಿನ ‘ದೇಶ’ದ ಕಲ್ಪನೆಯನ್ನು ಪ್ರಧಾನವಾಗಿ ರೂಪಿಸುತ್ತಿದೆ. ‘ದೇಶ’ವನ್ನು ಆಯಾ ಬಂಡವಾಳಶಾಹಿ ವರ್ಗದ ಪ್ರಭುತ್ವದ ಅಧಿಪತ್ಯದಲ್ಲಿರುವ – ಸ್ವಂತ ಮಾರುಕಟ್ಟೆಯಾಗಿ; ಭೂಮಿ, ಗಣಿ ಮತ್ತಿತರ ಪ್ರಾಕೃತಿಕ ಸಂಪನ್ಮೂಲಗಳು ಹಾಗೂ ಬಂಡವಾಳ ಇತ್ಯಾದಿ ಸೇರಿದಒಟ್ಟು ಸಂಪತ್ತು ಆಗಿ;- ನೋಡುವುದು; ಯುದ್ಧ ಅಥವಾ ಇತರ ಆಕ್ರಾಮಕ ಕ್ರಮಗಳಿಂದ ಇತರ ದೇಶಗಳನ್ನು ಅವುಗಳ ‘ಮಾರುಕಟ್ಟೆ’ ಮತ್ತು ‘ಸಂಪತ್ತು’ಗಳನ್ನು ಗೆದ್ದುಕೊಳ್ಳಬೇಕಾದ ಅಧೀನಕ್ಕೊಳಪಡಿಸಬೇಕಾದ ದ್ವೇಷಕ್ಕೆ ಯೋಗ್ಯವಾದವುಗಳಾಗಿ ನೋಡುವುದು – ಆಗ ಬೆಳೆದು ಬಂದ ‘ದೇಶ’ದ ಪರಿಕಲ್ಪನೆ. ಯುರೋಪಿನ ಪ್ರಮುಖ ‘ದೇಶ’ಗಳು ಜಗತ್ತಿನಾದ್ಯಂತ ‘ವಸಾಹತು’ಗಳನ್ನು ಗೆದ್ದುಕೊಳ್ಳಲು ಆರಂಭಿಸಿದ ಮೇಲೆ ಮತ್ತು ವಸಾಹತುಗಳಿಗಾಗಿ ಪೈಪೋಟಿಯ ಭಾಗವಾಗಿ ಮಹಾಯುದ್ಧ ನಡೆದ ಮೇಲಂತೂ ಈ ಕಲ್ಪನೆ ಇನ್ನಷ್ಟು ಗಟ್ಟಿಯಾಯಿತು.

ದೇಶಭಕ್ತಿಎಂದರೆ ‘ದೇಶ’ದ ಬಂಡವಾಳಶಾಹಿ ವರ್ಗದ ಹಿತಾಸಕ್ತಿಗಳನ್ನು ಪ್ರಶ್ನಿಸದಿರುವುದು, ಕಣ್ಣು ಮುಚ್ಚಿ ಎತ್ತಿ ಹಿಡಿಯುವುದು, ಇತರ ದೇಶಗಳನ್ನು ಹಗೆಗಳಂತೆ ಕಂಡು ದ್ವೇಷಿಸುವುದು ಎಂದಾಯಿತು. ದೇಶಭಕ್ತಿ ಎಂದರೆ ದೇಶದ ಆಳುವ ವರ್ಗ, ಅದರ ಪ್ರಭುತ್ವ, ಅದರ ಆಗಿನ ಸರಕಾರ ಇವೆಲ್ಲವನ್ನು ಒಂದೇ ಎಂದು ಬಗೆದು ಅವುಗಳಿಗೆ ಭಯ-ಭಕ್ತಿಯಿಂದ ನಡೆದುಕೊಳ್ಳುವುದು ಎಂದಾಯಿತು. ಫ್ಯಾಸಿಸ್ಟ್ ದೇಶದ ಪರಿಕಲ್ಪನೆ ಇದರ ಪರಾಕಾಷ್ಟೆಯಾಗಿತ್ತು. ಇದರಲ್ಲಿ – ದೇಶ, ಪ್ರಭುತ್ವ, ಸರಕಾರ – ಇವೆಲ್ಲವೂ ಒಬ್ಬ ಸರ್ವಾಧಿಕಾರಿಯಲ್ಲಿ ಮೂರ್ತೀಭವಿಸಿ ಅವನಿಗೆ ಭಯ ಭಕ್ತಿಯಿಂದ ನಡೆದುಕೊಳ್ಳುವುದು ದೇಶಭಕ್ತಿ ಎಂದಾಯಿತು.

ವಸಾಹತುಶಾಹ-ವಿರೋಧಿ ಚಳುವಳಿಗಳು, ಅಕ್ಟೋಬರ್ ಕ್ರಾಂತಿಯಿಂದಾರಂಭಿಸಿ ಜನತಾ ಪ್ರಜಾಪ್ರಭುತ್ವ ಅಥವಾ ಸಮಾಜವಾದಿ ಪ್ರಭುತ್ವ ಸ್ಥಾಪಿಸಿದ ದೇಶಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಜನ-ಕೇಂದ್ರಿತ ಮತ್ತು ಮೇಲೆ ಹೇಳಿದ ಪರಿಕಲ್ಪನೆಗೆ ತದ್ವಿರುದ್ಧವಾದ ಪರಿಕಲ್ಪನೆಯನ್ನು ರೂಪಿಸಲಾಯಿತು. ಆದರೆ 1990ರ ದಶಕದಲ್ಲಿ ಇವುಗಳ ಅವನತಿಯೊಂದಿಗೆ ಬಂಡವಾಳಶಾಹಿ ಮತ್ತು ಫ್ಯಾಸಿಸ್ಟ್ ‘ದೇಶ’ದ ಮತ್ತು ‘ದೇಶಭಕ್ತಿ’ಯ ಪರಿಕಲ್ಪನೆ ಮತ್ತೆ ವ್ಯಾಪಕವಾಗಿ ಮುನ್ನೆಲೆಗೆ ಬಂದಿದೆ. ಸಂಘಪರಿವಾರ ಈಗ ಹರಡುತ್ತಿರುವ ‘ದೇಶಭಕ್ತಿ’ ಮತ್ತು ದೇಶದ್ರೋಹ’ದ ಕಲ್ಪನೆಗಳ ಹಿಂದೆ ಊಳಿಗಮಾನ್ಯ ವ್ಯವಸ್ಥೆಯ ಮತ್ತು ಫ್ಯಾಸಿಸ್ಟ್ ‘ದೇಶ’ದ ಪರಿಕಲ್ಪನೆಯ ಮಿಶ್ರಣ ಇದೆ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು

Published

on

~ಗೋವರ್ಧನ ನವಿಲೇಹಾಳು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್‌ಗೆ ಸಂತೋಷದ ಸುದ್ದಿಯಾದರೂ, ಎಸ್‌ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.

ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್‌ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.

ಸಮರ್ಥ್ ಶಾಮನೂರು ಅವರ ಮುಂದಿನ ನಡೆ

ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.

ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.

ಬಿಜೆಪಿಯ ಮುಂದಿನ ಸವಾಲುಗಳು

ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.

ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್‌ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.

ಎಸ್‌ಡಿಪಿಐ ಮುಂದಿನ ಸವಾಲು

ಎಸ್‌ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್‌ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್‌ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.

ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.

ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್‌ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.

ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending