ಲೈಫ್ ಸ್ಟೈಲ್
ದೂರವಿರಲಿ ಗೋಮಾತೆ ಕೆಚ್ಚಲು ಬಾವೆಂಬ ಮಹಾಕಿಚ್ಚಿಂದ..!
- ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ
ವಚನಕಾರರ ನುಡಿಯಂತೆ “ಮನದೊಳಗಿನ ಕಿಚ್ಚು ತನ್ನ ಮನೆಯ ಸುಡದಲ್ಲದೇ ನೆರೆ ಮನೆಯ ಸುಡದು” ಆದರೆ ಕೆಚ್ಚಲ ಬಾವಿನಿಂದ ಆ ರಾಸಿನ ಕೆಚ್ಚಲು ಮಾತ್ರವಲ್ಲದೇ ಹೈನುಗಾರನ ಜೀವನವನ್ನು ಬುಡಮೇಲು ಮಾಡಬಹುದು.
ಹೈನುಗಾರರಿಗೆ ವೈದ್ಯರನ್ನು ಅತಿ ತುರ್ತಾಗಿ ಕರೆಯುವ ಕೆಲವು ಸಂದರ್ಭಗಳಿರುತ್ತವೆ. ಅವುಗಳಲ್ಲಿ ಕಷ್ಟಕರ ಹೆರಿಗೆ, ತೀವ್ರರೀತಿಯ ಹೊಟ್ಟೆ ಉಬ್ಬರ, ವಿಷಪ್ರಾಶನ, ಬೆಂಕಿ ಅನಾಹುತ, ರಸ್ತೆ ಅಪಘಾತ ಇತ್ಯಾದಿ. ಈ ಪಟ್ಟಿಗೆ ಕೆಚ್ಚಲು ಬಾವು ಕೂಡಾ ಸೇರುತ್ತದೆ!!. ಕೆಚ್ಚಲು ಬಾವು ಬಂದಿರುವುದನ್ನು ಕಂಡುಕೊಳ್ಳುವುದು ತುಂಬಾ ಸುಲಭ.
ಕೆಚ್ಚಲನ್ನು ನೋಡಿದರೆ ಸಾಕು ಹೇಳಿಬಿಡಬಹುದು. ಆದರೆ ಚಿಕಿತ್ಸೆ ಅಷ್ಟೇ ಕ್ಲಿಷ್ಟ. “ಪ್ರಾರಂಭಿಕ ಹಂತದಲ್ಲಿ ಕೂಡಲೇ ಸೂಕ್ತ ಚಿಕಿತ್ಸೆ ನೀಡಿದರೆ ಮಾತ್ರ ಗುಣವಾಗುವ ಸಾಧ್ಯತೆ ಇದೆ” ಎನ್ನತ್ತಾರೆ ಬಹುತೇಕ ತಜ್ಞರು. ಒಂದು ಸಲ ಕೆಚ್ಚಲು ಗಟ್ಟಿಯಾದರೆ ಅದನ್ನು ಸರಿ ಪಡಿಸುವುದು ಅಸಾಧ್ಯ.
ಹಾಲು ಕೊಡುವ ಹಸುವಿನ ಕೆಚ್ಚಲಿನ ಉರಿಯೂತವೇ ಕೆಚ್ಚಲುಬಾವು. ಇದರಲ್ಲಿ ಒಂದು ಅಥವಾ ಹೆಚ್ಚು ಮೊಲೆಗಳು ಕಾಯಿಲೆಗೆ ಒಳಗಾಗಬಹುದು. ಅನೇಕ ಜಾತಿಯ ಸೂಕ್ಷ್ಮಾಣು ಜೀವಿಗಳಿಂದ ಈ ರೋಗವು ದನ ಮತ್ತು ಎಮ್ಮೆ ಆಡುಗಳಲ್ಲಿ ಕಂಡುಬ೦ದರೂ ಹೆಚ್ಚು ಹಾಲು ಕೊಡುವ ಮಿಶ್ರತಳಿ ಹಸುಗಳಲ್ಲಿ ಇದರ ತೀವ್ರತೆ ಹೆಚ್ಚು.
ಕೆಚ್ಚಲು ಬಾವು ಬರಲು ಕಾರಣಗಳೇನು?
ಸದಾ ಗಲೀಜಿನಿಂದ ಕೂಡಿದ ಕೊಟ್ಟಿಗೆ, ಹಾಲು ಕರೆಯುವ ಪಾತ್ರೆಗಳು, ಹಾಲು ಕರೆಯುವ ವ್ಯಕ್ತಿ ಮೂಲಕ ರೋಗ ಹರಡುತ್ತದೆ. ರೋಗದಿಂದ ನರಳುತ್ತಿರುವ ರಾಸುಗಳು, ಮೊಲೆ ತೊಟ್ಟುಗಳ ಗಾಯ, ಕಲುಷಿತ ಹಾಲು ಕರೆಯುವ ಯಂತ್ರ ಇವೆಲ್ಲ ರೋಗಾಣುಗಳ ಮೂಲಗಳು.
ರೋಗಾಣುಗಳು ಮೊಲೆ ತೊಟ್ಟುಗಳ ಮೂಲಕ ಕೆಚ್ಚಲಿನೊಳಗೆ ಪ್ರವೇಶ ಪಡೆದು ತೀವ್ರಗತಿಯಲ್ಲಿ ಅಲ್ಲಿಯೇ ವೃದ್ಧಿ ಹೊಂದಿ ಹಾಲು ಉತ್ಪಾದಿಸುವ ಗ್ರಂಥಿಗಳನ್ನು ಹಾಳು ಮಾಡುತ್ತವೆ. ಹಾಲು ಅಮೃತಕ್ಕೆ ಸಮಾನ ಎಂದು ಹೇಳುತ್ತೇವೆ, ಹಾಲು ಇಷ್ಟಪಡದ ವ್ಯಕ್ತಿಗಳು ವಿರಳ. ಅದರಂತೆ ಸೂಕ್ಷ್ಮಾಣು ಜೀವಿಗಳು ಸಹಾ ಕೆಚ್ಚಲಿನ ಹಾಲಿನ ಮಾಧ್ಯಮವನ್ನು ಬಳಸಿಕೊಂಡು ತೀವೃಗತಿಯಲ್ಲಿ ಬೆಳೆಯುತ್ತವೆ. ಇದರಿಂದಾಗಿ ಬಾವು ಕಾಣಿಸಿಕೊಳ್ಳುತ್ತದೆ. ಇದೇ ಕೆಚ್ಚಲು ಬಾವು.
ಲಕ್ಷಣಗಳಾವುವು?
ಅತಿ ತೀವ್ರತರದ ಕೆಚ್ಚಲುಬಾವು ಉಂಟಾದರೆ ಕೆಲವೇ ಗಂಟೆಗಳಲ್ಲಿ ಕೆಚ್ಚಲು ಊದಿಕೊಂಡು ಕೆಂಪಾಗುತ್ತದೆ. ತೀವ್ರ ಜ್ವರ, ಮೇವು ನೀರು ಬಿಡುವುದು, ಕೆಚ್ಚಲು ಮುಟ್ಟಿದರೆ ನೋವಿನಿಂದ ಕಾಲು ಎತ್ತುವುದು ಅಥವಾ ಕಾಲು ಜಾಡಿಸುವುದು ಇತ್ಯಾದಿ ಪ್ರಮುಖ ಲಕ್ಷಣಗಳು. ಹಿಂಡಿದರೆ ನೀರಿನಂತಹ ದ್ರವ ಅಥವಾ ಮೊಸರಿನಂಥ ಹಾಲು ಬರುತ್ತದೆ.
ಒಟ್ಟಾರೆ ಹಾಲಿನ ಪ್ರಮಾಣ ಬಹಳ ಕಡಿಮೆ ಇರುವುದು. ಅತ್ಯಂತ ಶೀಘ್ರದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಆ ಭಾಗದ ಕೆಚ್ಚಲು ಗಟ್ಟಿಯಾಗಬಹುದು. ಒಮ್ಮೊಮ್ಮೆ ರೋಗಕಾರಕ ಬ್ಯಾಕ್ಟೀರಿಯಾಗಳು ಉತ್ಪಾದಿಸಿದ ವಿಷದ ನಂಜು ರಕ್ತಕ್ಕೆ ಸೇರಿ ಹಸು ಸಾವಿಗೀಡಾಗಲೂಬಹುದು.
ಕೆಲವೊಮ್ಮೆ ಹಿಂಡಿದೊಡನೆ ರಕ್ತ ಮಿಶ್ರಿತ ಹಾಲು ಕರೆಯುತ್ತವೆ. ಇದಕ್ಕೆ ಹಾಲು ಕರೆಯುವ ಮೊಲೆಗಳನ್ನು ಅತೀಯಾಗಿ ಜಗ್ಗುವುದು, ಅಥವಾ ರಾಸುಗಳು ಮಲಗಿದಾಗ ದೇಹದ ಒತ್ತಡ ಕೆಚ್ಚಲಿನ ರಕ್ತ ನಾಳಗಳ ಮೇಲೆ ಬಿದ್ದಾಗ ರಕ್ತ ನಾಳಗಳು ಒಡೆದು ಹಾಲಿನಲ್ಲಿ ರಕ್ತ ಬರುತ್ತದೆ.
“ಕರುಹಾಕಿದ ಪ್ರಾರಂಭದಲ್ಲಿ ಕೆಲವೊಮ್ಮೆ ದೇಹದಲ್ಲಿ ಆಗುವ ಹಾರ‍್ಮೋನುಗಳ ವ್ಯತ್ಯಾಸದಿಂದ ಕೆಚ್ಚಲಿನ ರಕ್ತನಾಳಗಳು ಒಡೆದು ಹಾಲಿನಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಇದು ಸಹಜ ಕ್ರಿಯೆಯಾಗಿದ್ದು ನಾಲ್ಕೈದು ದಿನಗಳಲ್ಲಿ ಸರಿಯಾಗುತ್ತದೆ. ಆಗದಿದ್ದರೆ ತಜ್ಞ ಪಶುವೈದ್ಯರನ್ನು ಕರೆದು ಚಿಕಿತ್ಸೆ ಕೊಡಿಸಬೇಕು.
ಚಿಕಿತ್ಸೆ ಏನು? ಹೇಗೆ?
ಕೆಚ್ಚಲು ಬಾವಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ತಜ್ಞ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸುವುದು ಅತ್ಯಗತ್ಯ. ‘‘ಸಲೀಸಾಗಿ ಹಾಲು ಕೊಡುವ ಹಸುಗಳು ಹಾಲು ಕರೆಯುವಾಗ ನೋವಿನಿಂದ ಕಾಲು ಎತ್ತಿದರೆ, ಹಾಲಿನ ಬಣ್ಣ ಬದಲಾದರೆ ತಡಮಾಡುವುದಿಲ್ಲ.
ಸಂಪೂರ್ಣ ಹಾಲು ಕರೆದು ನಮ್ಮ ಮನೆಯಲ್ಲಿಯೇ ಇಟ್ಟುಕೊಂಡ ಮಲೆಗೇರಿಸುವ ಟ್ಯೂಬ್ ಏರಿಸಿ, ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುತ್ತೇವೆ. ಹಾಗಾಗಿ ಕೆಚ್ಚಲು ಬಾವು ಬೇಗ ವಾಸಿಯಾಗುತ್ತದೆ’’ ಎನ್ನುತ್ತಾರೆ 20 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ ಸೈದೂರಿನ ದಯಾನಂದರವರು.
ಈ ಕಾಯಿಲೆ ತಡೆಯುವ ಬಗೆ ಹೇಗೆ?
ಕೊಟ್ಟಿಗೆಯ ಸ್ವಚ್ಛತೆ, ಹಾಲು ಕರೆಯುವರ ಸ್ವಚ್ಚತೆ ಹಾಗೂ ಹಾಲುಕರೆಯುವ ಪಾತ್ರೆಗಳ ಸ್ವಚ್ಚತೆ ಕಾಪಾಡಿಕೊಳ್ಳುವುದು ಬಹು ಮುಖ್ಯ. ನಿಗಧಿಪಡಿಸಿದ ಕಾಲಕ್ಕೆ ಹಾಲು ಕರೆಯುವುದು ಹಾಗೂ ಕೊಟ್ಟಿಗೆ ಹಸಿ ಇರದಂತೆ ನೋಡಿಕೊಳ್ಳವುದು ಸಹ ಅಷ್ಟೇ ಮುಖ್ಯ.
“ನಾವು ಕೊಟ್ಟಿಗೆ ನೆಲ ಸ್ವಚ್ಚಗೊಳಿಸಲು ಹಾಗೂ ರಾಸುಗಳ ಮೈತೊಳೆಯಲು ಪ್ರೆಶರ್ ಪಂಪ ಬಳಸುತ್ತೇವೆ. ಹಾಗಾಗಿ ನಾಲ್ಕೈದು ವರ್ಷಗಳಿಂದ ನಮ್ಮ ರಾಸುಗಳಿಗೆ ಕೆಚ್ಚಲು ಬಾವು ಬಂದಿಲ್ಲ” ಎನ್ನುತ್ತಾರೆ ಹತ್ತಾರು ವರ್ಷಗಳಿಂದ ನೂರೆಂಟು ಹಸುಗಳನ್ನು ಸಾಕಿದ ಶಿರಸಿಯ ಶ್ರೀಮತಿ ವೇದಾವತಿ ಹೆಗಡೆಯವರು.
ಹಾಲು ಕರೆಯುವಾಗ ಉಗುರು ಬೆಚ್ಚಗಿನ ಶುದ್ಧ ನೀರಿನಲ್ಲಿ ಕೆಚ್ಚಲು ಹಾಗೂ ಮೊಲೆಗಳನ್ನು ತೊಳೆಯಬೇಕು. ಹಾಲು ಹಿಂಡಿದ ನಂತರ ಶುದ್ಧ ನೀರಿನಿಂದ ತೊಳೆದು ಕ್ರಿಮಿನಾಶಕ ಔಷಧಿಯಲ್ಲಿ ಮೊಲೆಗಳನ್ನು ಅದ್ದುವುದರಿಂದ ಕೆಚ್ಚಲು ಬಾವು ತಡೆಗಟ್ಟಬಹುದು. ಹಾಲು ಕರೆದಾದ ಒಂದರಿಂದರಿಂದ ಒಂದುವರೆ ಗಂಟೆಯ ಕಾಲ ಮೊಲೆತೊಟ್ಟುಗಳ ರಂದ್ರ ತೆರೆದಿರುತ್ತದೆ.
ಈ ಸಂದರ್ಭದಲ್ಲಿ ರಾಸುಗಳು ಮಲಗಿದರೆ ರೋಗಾಣುಗಳು ಮೊಲೆ ತೊಟ್ಟಗಳ ತೆರೆದ ರಂದ್ರಗಳ ಮೂಲಕ ಕೆಚ್ಚಲಿಗೆ ಪ್ರವೇಶ ಪಡೆಯುವುದರಿಂದ ಕೆಚ್ಚಲು ಬಾವು ಬರುತ್ತದೆ. ಕಾರಣ ರಾಸುಗಳು ತಕ್ಷಣ ಮಲಗದಂತೆ ತಡೆಯಲು ಹಾಲುಕರೆದ ನಂತರ ಮೇವು ಹಾಕುವುದು ಅಥವಾ ಓಡಾಡಲು ಕೊಟ್ಟಿಗೆಯ ಹೊರಗೆ ಬಿಡುವುದು ಒಳ್ಳೆಯದು.
ಮಶಿನಿನಿಂದ ಹಾಲು ಕರೆಯುವವರು ಇನ್ನೂ ಹುಶಾರಾಗಿರಬೇಕು, ಏಕೆಂದರೆ ಒಂದು ಹಸುವಿಗೆ ಬಂದ ಕೆಚ್ಚಲು ಬಾವು ಉಳಿದೆಲ್ಲಾ ಹಸುಗಳಿಗೆ ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ ಶ್ರೀ ಸೀತಾರಾಮ ಹೆಗಡೆ, ನೀರ್ನಳ್ಳಿ, ಸಿರಸಿ.
ಮಂದ ಸ್ವರೂಪದ ಕೆಚ್ಚಲು ಬಾವನ್ನು ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ಮಾಡಿ ಅದು ಬರದಂತೆ ಚಿಕಿತ್ಸೆ ಮಾಡಿದರೆ ಅದರಿಂದ ತೀವ್ರ ಸ್ವರೂಪದ ಕೆಚ್ಚಲು ಬಾವು ಬರುವುದಿಲ್ಲ.
ಕೆಚ್ಚಲು ಬಾವು ಬಂದು ಕೆಚ್ಚಲು ಗಟ್ಟಿಯಾದ ನಂತರ ಚಿಕಿತ್ಸೆಗೆ ಓಡಾಡುವ ಬದಲು ಮಂದ ಸ್ವರೂಪದ ಕೆಚ್ಚಲು ಬಾವನ್ನು ಸರಳವಾದ “ಸರ್ಫ಼್ ಕೆಚ್ಚಲು ಬಾವು ಪರೀಕ್ಷೆ”ಯಿಂದ ಮೊದಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡಿಸುವುದು ಕೆಚ್ಚಲುಬಾವು ತಡೆಯುವಲ್ಲಿ ಒಂದು ಮಹತ್ತರ ಹೆಜ್ಜೆಯಾಗಬಲ್ಲದು.
ಏನಿದು ಸರ್ಫ಼್ ಕೆಚ್ಚಲು ಬಾವು ಪರೀಕ್ಷೆ?
ಈ ವಿಧಾನ ರೈತರೇ ಸುಲಭವಾಗಿ ಅವರ ಮನೆಯಲ್ಲೇ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಮಂದ ಸ್ವರೂಪದ ಕೆಚ್ಚಲು ಬಾವನ್ನು ಪತ್ತೆ ಮಾಡಬಹುದು. ಅದಕ್ಕೆ ಬೇಕಾದ ಸಾಮಗ್ರಿಗಳು ಇಷ್ಟೆ. ರೂ: 2 ಕ್ಕೆ ಸಿಗುವ 12 ಗ್ರಾಂನ ಸರ್ಫ್ ಪೌಡರ್, 400 ಮಿಲಿ ನೀರು, ಒಂದು ಚಮಚ ಅಥವಾ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳ. ಮತ್ತೇನೂ ಇಲ್ಲ. ಈ ಕೆಚ್ಚಲು ಬಾವು ಪತ್ತೆಯ ವಿಧಾನ ಬಹಳ ಸುಲಭ. ಸರ್ಫ್ ಕೆಚ್ಚಲು ಬಾವು ಪತ್ತೆ ವಿಧಾನ ಹೀಗಿದೆ;
1) ಮೊದಲು ಶೇ 3 ರ ಸರ್ಫ್ ದ್ರಾವಣ ತಯಾರಿಸಿಕೊಳ್ಳಬೇಕು. ಇದನ್ನು ತಯಾರಿಸುವುದೂ ಸುಲಭ. ಅರ್ಧ ಲೀಟರ್ ನೀರಿನ ಬಾಟಲಿ ತೆಗೆದುಕೊಂಡು ಅದರಲ್ಲಿ ನೂರು ಮಿಲಿ ನೀರು ತೆಗೆದರೆ 400 ಮಿಲಿ ಆಗುತ್ತದೆ. ಇದರಲ್ಲಿ ರೂ: 2 ಕ್ಕೆ ಸಿಗುವ 12 ಗ್ರಾಂ ನ ಸರ್ಫ್ ಪೌಡರ್ ಅನ್ನು ಮಿಶ್ರಣ ಮಾಡಬೇಕು. ಈ ದ್ರಾವಣವನ್ನು ಸುಮಾರು 100 ಆಕಳುಗಳ ಕೆಚ್ಚಲು ಬಾವು ಪರೀಕ್ಷೆ ಮಾಡಲು 3 ತಿಂಗಳವರೆಗೆ ಬಳಸಬಹುದು.
2) ಆಕಳಿನಿಂದ 10-15 ಮಿಲಿ ಹಾಲನ್ನು ಕರೆದು ಬಾಟಲಿಯ ಮುಚ್ಚಳ ಅಥವಾ ಅಗಲವಾದ ಚಮಚದಲ್ಲಿ ಅಥವಾ ಟೀ ಕಪ್‍ನಲ್ಲಿ ಹಾಕಿಕೊಳ್ಳಬೇಕು.
3) ಇದಕ್ಕೆ ಸಮ ಪ್ರಮಾಣದಲ್ಲಿ (10-15 ಮಿಲಿ) ಸರ್ಫ್ ದ್ರಾವಣವನ್ನು ಹಾಕಬೇಕು. ನಂತರ 10-15 ಸೆಕೆಂಡ್‍ವರೆಗೆ ನಿಧಾನವಾಗಿ ಮಿಶ್ರಣ ಮಾಡಬೇಕು.
4) ನಂತರ ಮಿಶ್ರಣ ಮಡ್ಡಿಯಾದರೆ ಅಥವಾ ಲೋಳೆಯ ತರವಾದರೆ ಆ ಕೆಚ್ಚಲಿಗೆ ಕೆಚ್ಚಲು ಬಾವು ಇದೆ ಎಂದು ಅರ್ಥ. ಇಲ್ಲದೇ ಇದು ತಿಳಿಯಾಗಿದ್ದರೆ ಕೆಚ್ಚಲು ಬಾವು ಇಲ್ಲ ಎಂದರ್ಥ.
5) ಈ ಸುಲಭವಾದ ಪದ್ದತಿಯಿಂದ ರೈತರು ಕೆಚ್ಚಲು ಬಾವನ್ನು ಸುಲಭವಾಗಿ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಬಹುದು.
ಲೇಖನವನ್ನು ಈ ಕೆಳಗಿನಂತೆ ಸರಳೀಕರಿಸಬಹುದು.
ಕೆಚ್ಚಲು ಬಾವು ಮಹಾ ಮಾರಿ. ಇದನ್ನು ಬರದಂತೆ ತಡೆಯುವುದು ಬಹಳ ಮುಖ್ಯ.ಬಂದ ನಂತರ ಚಿಕಿತ್ಸೆ ಬಹಳ ಕಷ್ಟ.ಗೋವು ಅತ್ಯಂತ ನೋವಿನ ದಿನಗಳಲ್ಲಿ ಕಳೆಯುತ್ತದೆ. ಕೆಚ್ಚಲು ಬಾವನ್ನು ಸರಿಯಾಗಿ ನಿರ್ವಹಿಸದೇ ಗೋವು ನೋವು ಅನುಭವಿಸಿದರೆ ಇದನ್ನು “ಗೋಹಿಂಸೆ” ಎನ್ನಬಹುದು. ಕಾರಣ ಇದರಲ್ಲಿ ರಾಜಿ ಬೇಡವೇ ಬೇಡ.
ಹಾಲು ಕರೆದು ಆದ ಕೂಡಲೇ ಆಕಳನ್ನು 1-2 ಗಂಟೆ ಮಲಗಲು ಬಿಡಲೇ ಬಾರದು. ಈ ಸಂದರ್ಭದಲ್ಲಿ ಮೊಲೆಯ ರಂದ್ರಗಳು ಮುಚ್ಚುತ್ತಾ ಇರುತ್ತವೆ. ಹಾಲು ಕರೆದ ತಕ್ಷಣ ಹಸುವಿನ ಗಮನವನ್ನು ಬೇರೆಡೆ ಸೆಳೆಯಲು ಅದಕ್ಕೆ ಹಿಂಡಿ ಹುಲ್ಲು ನೀಡುವ ಅಭ್ಯಾಸ ಮಾಡಿದರೆ ಅದು ಮಲಗಲಾರದು. ಇದು ರಾತ್ರಿ ಮತ್ತು ಹಗಲು ಎರಡೂ ಹೊತ್ತು ಸಾಧ್ಯ.
ಹಾಲು ನಂತರ ಹಿಂಡಿ ಹುಲ್ಲು ಹಾಕಿದ 2-3ಗಂಟೆ ನಂತರ ಜಾನುವಾರನ್ನು ಸ್ವಲ್ಪ ಹೊತ್ತು ಹೊರಗೆ ಓಡಾಡಲು ಬಿಡಲೇ ಬೇಕು. ಮಲೆನಾಡಿನ ಭಾಗದ ರೈತರು ದನ ಓಡಾಡಲು ಪ್ರತಿ ದನಕ್ಕೆ ಕನೀಷ್ಟ200 ಚದರ ಅಡಿ ಸ್ಥಳ ಹೊಂದಿಸಿಕೊಳ್ಳಲೇಬೇಕು. ಜಾನುವಾರು ಯಾವಾಗಲೂ ಓಡಾಡಿಕೊಂಡಿರುವ ಪ್ರಾಣಿ. ಅದೂ ಓಡಾಡಿ ಕೊಂಡಿರಲಿ. ಸ್ಥಳ ಇಲ್ಲ ಎಂಬ ಸಬೂಬು ಬೇಡ. ಸ್ಥಳ ಇಲ್ಲದಿದ್ದರೆ ಜಾನುವಾರು ಸಾಕಲು ಪ್ರಶಸ್ಥವಲ್ಲ ಎಂಬುದು ಅರಿಯಿರಿ.
ಕೊಟ್ಟಿಗೆಯಲ್ಲಿ ಸ್ವಚ್ಚತೆ ಕಾಪಾಡಿ. ರಬ್ಬರ್ ಮ್ಯಾಟ್ ಬಳಸಿ. ಹಾಲು ಕರೆದ ನಂತ ಪೊಟ್ಯಾಸಿಯಂ ಪರಮ್ಯಾಂಗನೇಟ್ ದ್ರಾವಣ,ಡೆಟ್ಟಾಲ್,ಲೈಫ಼್ ಬಾಯ್ ಅಥವಾ ಇನ್ಯಾವುದೇ ಕ್ರಿಮಿನಾಶಕದ ದ್ರಾವಣ ಬಳಸಿ ಕೆಚ್ಚಲುಗಳ ಸ್ವಚ್ಚತೆ ಕಾಪಾಡಿ.
ಆಕಳಿಗೆ ನಿಯಮಿತವಾಗಿ ಉತ್ತಮ ಗುಣಮಟ್ಟದ ಖನಿಜ ಮಿಶ್ರಣ, ಹಾಲಿನ ಇಳುವರಿಗೆ ಅನುಸಾರವಾಗಿ ಸಮತೋಲಿತ ಪಶುಅಹಾರ, ನೀಡಿ.
ಪ್ರತಿ15ದಿನಕ್ಕೊಮ್ಮೆ ಸುಲಭವಾದ “ಸರ್ಫ಼್ ಕೆಚ್ಚಲು ಬಾವು ಪರೀಕ್ಷೆ” ಯನ್ನು ಮಾಡಿ,ಮಂದ ಸ್ವರೂಪದ ಕೆಚ್ಚಲು ಬಾವು ಪತ್ತೆಯಾದರೆ ಅದನ್ನು ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಮಾಡಿಸಿ.
ಹೀಗಿದ್ದಲ್ಲಿ ಮಾತ್ರ ಕೆಚ್ಚಲು ಬಾವೆಂಬ ಮಹಾಮಾರಿಯಿಂದ ಹೈನುರಾಸುಗಳನ್ನು ಬಚಾವು ಮಾಡಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ2 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ2 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ



