ಅಂತರಂಗ
ಅರಿಮೆಯ ಅರಿವಿರಲಿ -60: ಮಾನಸ ಸರೋವರದಲ್ಲಿ ಶಿಶುವಿಹಾರ
- ಯೋಗೇಶ್ ಮಾಸ್ಟರ್
ಮಾನವ ಸಮಾಜವು ತನ್ನ ನೈಸರ್ಗಿಕವಾದ ಪಶುಪ್ರವೃತ್ತಿಯನ್ನು ತೊರೆದು ಸಂಘಜೀವಿಯಾಗಿ ಸಾಮುದಾಯಿಕವಾಗಿ ಬಾಳಿ ಬದುಕಲು ಕಂಡುಕೊಂಡ ಹಲವು ಮಾರ್ಗಗಳಲ್ಲಿ ಧರ್ಮವೂ ಒಂದು. ಮನುಷ್ಯ ತನ್ನೆಲ್ಲಾ ದುರ್ಗುಣ, ಗುಣದೋಷಗಳಿಂದ ಮುಕ್ತವಾಗಿ, ಪರಸ್ಪರ ಸಾಮರಸ್ಯದಿಂದ ಮೌಲ್ಯವೆಂದು, ಸದ್ಗುಣಗಳೆಂದು ಕರೆಯಲಾಗುವ ಒಪ್ಪಿತ ಗುಣಗಳನ್ನು ಅಳವಡಿಸಿಕೊಂಡು ಬದುಕಲು ಅದು ನೈತಿಕ ಚೌಕಟ್ಟನ್ನು ಕಟ್ಟಿಕೊಟ್ಟಿತು.
ಬೇರೆ ಬೇರೆ ಕಡೆಗಳಲ್ಲಿ ಅಲ್ಲಿನ ಪ್ರಾದೇಶಿಕ ಭಿನ್ನತೆಗಳಿಗೆ, ಸಾಂಸ್ಕೃತಿಕ ಹಿನ್ನೆಲೆಗಳಿಗೆ, ಸಾಮಾಜಿಕ ವ್ಯವಸ್ಥೆಗಳಿಗೆ, ಎದುರಿಸುತ್ತಿದ್ದಂತ ಸಮಸ್ಯೆಗಳಿಗೆ, ಎದೆಗೊಡಬೇಕಾಗಿದ್ದ ಸಂಘರ್ಷಗಳಿಗೆ ತಕ್ಕಂತೆ ಧರ್ಮಗಳು ರೂಪುಗೊಂಡವು. ಈ ಎಲ್ಲಾ ಭಿನ್ನತೆಯ ಹಿನ್ನೆಲೆಗಳನ್ನು ಹೊಂದಿದ್ದ ಧರ್ಮಗಳನ್ನು ಅನುಸರಿಸುವವರು ಆ ಪ್ರದೇಶದಲ್ಲಷ್ಟೇ ಅಲ್ಲದೇ ಇತರ ಕಡೆಗಳಿಗೂ ಕ್ರಮೇಣ ಚದುರಿದರು.
ಹಾಗಾಗಿ ಅವರ ಧಾರ್ಮಿಕತೆಯು ವಿಧಿಸಿದ ನೈತಿಕ ಚೌಕಟ್ಟುಗಳು ಭಿನ್ನ ಪ್ರದೇಶಗಳಿಗೆ ಒಂದಷ್ಟು ಒಗ್ಗುತ್ತಿದ್ದವು, ಮತ್ತೊಂದಷ್ಟು ಒಗ್ಗುತ್ತಿರಲಿಲ್ಲ. ಆದರೆ ಅವರೆಲ್ಲರೂ ಮೂಲಭೂತವಾಗಿ ಹೋಮೋ ಸೇಪಿಯನ್ಸ್ ತಳಿಯವರೇ ಆದ್ದರಿಂದ ಮೂಲಭೂತವಾಗಿ ಅನೇಕಾನೇಕ ವಿಷಯಗಳು ತಾಳೆಯಾಗುತ್ತವೆ. ರೂಢಿಗಳಲ್ಲಷ್ಟೇ ಬೇಧಗಳಿರುತ್ತವೆ.
ಆದರೆ ತಾವೇ ಮನುಷ್ಯರಾಗಿರುವ ಅಂಶವಾಗಲಿ, ತಮ್ಮ ಜೈವಿಕ ಸಂತಾನವನ್ನು ಮುಂದುವರಿಸುವ ಮಕ್ಕಳ ವಿಷಯವಾಗಲಿ, ಪರಸ್ಪರ ಗೌರವ, ಪ್ರೀತಿ, ದಯೆಯೇ ಮೊದಲಾದ ಅಮೂರ್ತ ಮೂಲಭೂತ ಪರಿಕಲ್ಪನೆಗಳಲ್ಲಾಗಲಿ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ. ಎಲ್ಲಾ ಧರ್ಮದ, ಸಂಸ್ಕೃತಿಗಳ ರೂಢಿಯಿರುವವರನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಅಗತ್ಯಗಳು ಬೆಸೆಯುವಂತೆ ಮಾಡಿವೆ.
ವ್ಯಾಣಿಜ್ಯದಲ್ಲಿ, ವ್ಯಾವಹಾರಿಕವಾಗಿ ಮತ್ತು ರಾಜನೈತಿಕವಾಗಿ ಬೆರೆಯಲು ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳು ಕೊಂಡಿಗಳಾಗಿ ಕೆಲಸ ಮಾಡಿದರೂ ಮಾನುಷ ಸಂಬಂಧ ಮತ್ತು ಜೀವಪರ ಕಾಳಜಿಯು ಎಲ್ಲರಲ್ಲಿ ಸಾಮಾನ್ಯವಾಗಿಸಲು ಇರುವ ಒಂದು ಪ್ರತಿನಿಧಿಯೆಂದರೆ ಅದು ಮಗು.
ಶಿಶುಧರ್ಮ
ಮಗುವಿನ ಮಗುತನವು ಧರ್ಮಾತೀತವಾದದ್ದು. ಅದರ ಮೂಲಭೂತ ಅಗತ್ಯಗಳು ಸಾರ್ವತ್ರಿಕವಾದುದು. ಅದರ ಸಮಸ್ಯೆಗಳು ಸಾಮಾಜಿಕವಾದದ್ದು. ಹಾಗಾಗಿ, ಧರ್ಮದ ನೆಲೆಗಳಿಂದಲೂ ಮತ್ತು ಮಗುವಿನ ಮನೋವೈಜ್ಞಾನಿಕ ನೆಲೆಗಟ್ಟಿನಿಂದಲೂ ಸಮಾಜದ ಹಿರಿಯ ಸದಸ್ಯರು ಎಚ್ಚರಗೊಳ್ಳಬೇಕಿದೆ. ನಮ್ಮ ಯಾವುದೇ ಕಾರಣದ ಇಂದಿನ ಸಂಘರ್ಷಗಳು ಅವರಿಗೆ ನೆಮ್ಮದಿಯ ನಾಳೆ ನೀಡುವುದಿಲ್ಲವಲ್ಲ!
ಎಲ್ಲರೂ ನೆಮ್ಮದಿ ಮತ್ತು ಶಾಂತಿಯಿಂದ ಇರುವಂತಹ ಆದರ್ಶ ಸಮಾಜದ ಪರಿಕಲ್ಪನೆ ಬಹಳ ಹಳೆಯದು. ಹಲವಾರು ಸಾಮಾಜಿಕ ಸುಧಾರಕರು, ನಾಯಕರು ಮತ್ತು ನವಸಮಾಜದ ಹರಿಕಾರರು ನಾನಾ ಪ್ರಯೋಗಗಳನ್ನು ಮಾಡಿಕೊಂಡು ಬಂದಿದ್ದಾರೆ. ಸಾಮಾಜಿಕ ಸಂರಚನೆಯಲ್ಲಿ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಆಂದೋಲನಗಳು ನಡೆದಿವೆ ಮತ್ತು ಮಾದರಿಗಳನ್ನು ನಿರ್ಮಿಸಿವೆ. ಆದರೆ ಅವ್ಯಾವುವೂ ನಮ್ಮ ನೆಮ್ಮದಿಯ ಸಮಾಜವನ್ನು ಕಟ್ಟಿಕೊಡುವಲ್ಲಿ ಸಂಪೂರ್ಣ ಯಶಸ್ಸನ್ನು ಕಾಣಲಿಲ್ಲ.
ಈಗ ನಮ್ಮ ಈಗಿನ ಮತ್ತು ಮುಂದಿನ ಪೀಳಿಗೆಗಳು ನೆಮ್ಮದಿಯ ಬದುಕನ್ನು ಕಾಣಬೇಕಾದರೆ ಯಾವುದು ನಮ್ಮ ಸಮಾಜದ ಕೇಂದ್ರವಾಗಬೇಕು ಎಂಬ ಪ್ರಶ್ನೆಗೆ ಪ್ರಯೋಗಕ್ಕೆ ಸಾಧ್ಯತೆಗಳಿರುವ ಉತ್ತರವಿದೆ. ಅದು ಶಿಶು ಕೇಂದ್ರಿತ ಸಮಾಜ. ಶಿಶು ಕೇಂದ್ರಿತ ಸಮಾಜದ ಚಟುವಟಿಕೆಗಳು ಒಂದೊಂದು ಕುಟುಂಬವನ್ನೂ, ಒಟ್ಟಾರೆ ಸಮಾಜವನ್ನೂ ಮತ್ತು ಇಡೀ ರಾಷ್ಟ್ರವನ್ನು ನೆಮ್ಮದಿಯಿಂದಿಡಲು ಸಾಧ್ಯ. ನಮ್ಮ ಹಿರಿಯರ ಆದರ್ಶ ಸಮಾಜವನ್ನು ಕಟ್ಟುವ ಕನಸನ್ನು ಶಿಶುಪ್ರಧಾನ ಸಮಾಜ ಪ್ರಯೋಗವು ಒಂದಿಷ್ಟಾದರೂ ಯಶಸ್ವಿಗೊಳಿಸುವುದೇನೋ!
ಶಿಶುವರಳಿ ಹರೆಯವಾಗಿ
ಮಕ್ಕಳ ಮನಸ್ಸು ಮತ್ತು ಅವರ ಒಟ್ಟಾರೆ ಇರುವಿಕೆಯೇ ಬಹಳ ಸೂಕ್ಷ್ಮ ಮತ್ತು ಶಕ್ತಿಶಾಲಿಯಾದದ್ದು. ಪೋಷಕರಿಗೆ ಮತ್ತು ಶಿಕ್ಷಕರಿಗೆ ಮಕ್ಕಳ ಮನಸಿನ ಸೂಕ್ಷ್ಮತೆಯ ಮತ್ತು ಶಕ್ತಿಯ ಅರಿವಿದ್ದರೆ ಎಷ್ಟೋ ಅನಾಹುತಗಳನ್ನು ತಡೆಗಟ್ಟಬಹುದು. ಮಗುವಿನ ವ್ಯಕ್ತಿತ್ವದ ವಿಕಾಸಕ್ಕೆ ಮಹತ್ವಪೂರ್ಣವಾದ ಕಾಣ್ಕೆಗಳನ್ನು ಕೊಡಬಹುದು.
ಪೋಷಕರ ಮತ್ತು ಶಿಕ್ಷಕರ ತಪ್ಪು ನಿರ್ವಹಣೆಯಿಂದಾಗಿ ಮಕ್ಕಳು ಮುಂದೆ ವಯಸ್ಕರಾದಾಗ ಎಷ್ಟೋ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಪೋಷಕರು ನಮ್ಮ ಮಗುವನ್ನು ಬೆಳೆಸುವಲ್ಲಿ ನಾವೆಲ್ಲಿ ಎಡವಿದ್ದೇವೆ ಎಂದು ತಿಳಿಯದೇ ತಳಮಳಿಸುವಂತಾಗುತ್ತದೆ.
ಮೊಳಕೆಯಲ್ಲಿಯೇ ಬೆಳೆಯುವ ಪೈರಿನ ಜೋಪಾನ ಮಾಡುವ ಜಾಗೃತಿ ನಮ್ಮ ಪೋಷಕರಿಗೆ ಬೇಕಿದೆ. ಮಕ್ಕಳ ಪೋಷಣೆ ಮಕ್ಕಳಾಟವಲ್ಲ. ಇಂದಿನ ಪುಟ್ಟ ಮತ್ತು ಅಸಹಾಯಕ ಮುದ್ದು ಮಕ್ಕಳು ನಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರ; ಈ ಎಲ್ಲದರ ಬಹುಮುಖ್ಯವಾದ ಭಾಗವಾಗಿರುತ್ತಾರೆ. ಯಾವುದೇ ವಯಸ್ಕರ ಸಾಧನೆ, ವೇದನೆ, ಸಂವೇದನೆಗಳ ಮೂಲ ಅವರ ಬಾಲ್ಯದಲ್ಲಿ ಪಡೆದ ಅನುಭವಗಳು, ಗ್ರಹಿಕೆಗಳು, ಪ್ರಭಾವಗಳಲ್ಲಿರುತ್ತವೆ.
ಅತ್ಲಾಗೆ ಮಕ್ಕಳೂ ಅಲ್ಲ, ಇತ್ಲಾಗೆ ದೊಡ್ಡವರೂ ಅಲ್ಲ
ಮಗುತನ ಜತನದ ಬಾಧ್ಯತೆ ಮಕ್ಕಳು ಬೆಳೆದಂತೆ ಅವರು ಹದಿಹರೆಯಕ್ಕೆ ಬಂದಾಗಲೂ ಮುಂದುವರೆದಿರುತ್ತದೆ. ಈಗ ಅವರಲ್ಲಿ ದೈಹಿಕ, ಮಾನಸಿಕ ಮತ್ತು ಹಾರ್ಮೋನುಗಳ ಬದಲಾವಣೆಯೂ ಆಗಿದ್ದು, ಬಾಲ್ಯದಲ್ಲಿ ಕಾಣದಿದ್ದ ಎಷ್ಟೋ ವಿಷಯಗಳು ಹದಿಹರೆಯದಲ್ಲಿ ತೋರುತ್ತಾರೆ. ಎಷ್ಟೋ ಮಾನಸಿಕ ಸಮಸ್ಯೆಗಳು ಬಾಲ್ಯದಲ್ಲೇ ಇದ್ದರೂ ಕೂಡ ಮಗುತನದ ಮಿತಿಯಲ್ಲಿ ಅದರ ಸ್ವರೂಪವು ಎಷ್ಟೋ ಬಾರಿ ಹೊರನೋಟದಲ್ಲಿ ಗುರುತಿಸಲಾರದಷ್ಟು ಸೂಕ್ಷ್ಮವಾಗಿರುತ್ತವೆ. ಹಿಂದೆಂದಿಗಿಂತಲೂ ಅವರಿಗೆ ಆಪ್ತತೆ ಮತ್ತು ಮುಕ್ತತೆಯ ಅವಶ್ಯಕತೆ ಇರುತ್ತದೆ.
ಹದಿಹರೆಯದವರ ಸಮಸ್ಯೆ ಎಂದರೆ ಅವರು ಯೌವನಾವಸ್ಥೆಗೆ ಸಂಪೂರ್ಣ ಪ್ರಬುದ್ಧರಾಗಿಯೂ ಇರುವುದಿಲ್ಲ, ಮಕ್ಕಳಾಗಿಯೂ ಉಳಿದಿರುವುದಿಲ್ಲ. ಸಣ್ಣವರೂ ಅಲ್ಲದ, ದೊಡ್ಡವರೂ ಅಲ್ಲದ ಶಾರೀರಿಕ ಸ್ಥಿತಿ ಮಾತ್ರವಲ್ಲದೇ ಮಾನಸಿಕ ಸ್ಥಿತಿಗಳನ್ನೂ ಕೂಡಾ ಹಾಗೆಯೇ ಹದವಾಗಿ ಮತ್ತು ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ.
ಹೊಸ ಕನಸುಗಳು, ಹೊಸ ಯೋಜನೆಗಳು ಮತ್ತು ಹೊಸ ಸಹವಾಸಗಳು ಅವರ ಎಷ್ಟೋ ಹಳೆಯ ಆಸೆಗಳನ್ನು ಅಥವಾ ಸುಪ್ತ ಬಯಕೆಗಳನ್ನು ನೆರವೇರಿಸಿಕೊಳ್ಳುವ ಸಾಧ್ಯತೆಗಳನ್ನು ಹುಡುಕಿಕೊಳ್ಳುವ ವಯಸ್ಸಿನಲ್ಲಿ ಕುಟುಂಬದವರು ಮತ್ತು ಸಮಾಜದ ಇತರ ಹಿರಿಯ ಸದಸ್ಯರು ಬಹಳ ಎಚ್ಚರಿಕೆಯಿಂದಲೂ ಮತ್ತು ಆಪ್ತವಾಗಿಯೂ ವರ್ತಿಸುವ ಅಗತ್ಯವಿರುತ್ತದೆ.
ಅವರೊಂದಿಗೆ ವರ್ತಿಸುವಾಗ, ಅವರತನದಲ್ಲಿ ಇಣುಕುವ ದೊಡ್ಡತನವನ್ನು ಮನ್ನಿಸುತ್ತಲೇ ಅವರು ಚಿಕ್ಕವರು ಎಂಬ ಅರಿವು ಇರಬೇಕು. ಹಾಗಾಗಿ ಅವರ ಕ್ರಿಯೆಗೆ ಪ್ರತಿಕ್ರಿಯೆ ನೀಡುವ ವಿಷಯದಲ್ಲಿ, ಅವರ ಹೊಸ ವರ್ತನೆಗೆ ನಮ್ಮ ಪ್ರತಿವರ್ತನೆಗಳನ್ನು ತೋರುವ ವಿಷಯದಲ್ಲಿ ಸಮತೋಲಿತ ಮನಸ್ಥಿತಿ ಹಿರಿಯರಿಗಿರಬೇಕು.
ಮಕ್ಕಳಾಗಿದ್ದಾಗ ಮುದ್ದಿಸುವ ಎಷ್ಟೋ ಹಿರಿಯರು ಅವರು ದೊಡ್ಡವರಾಗುತ್ತಾ ಬಂದಂತೆ ಮುದ್ದಿಸುವುದನ್ನು, ಅಪ್ಪುವುದನ್ನು, ಚುಂಬಿಸುವುದನ್ನು ನಿಲ್ಲಿಸಿಬಿಡುತ್ತಾರೆ.ಈಗಲೂ ನೀನೇನೂ ಮಗುವಾ ಮುದ್ದು ಮಾಡಲು? ಎಂಬ ಮಾತವರದು. ಆದರೆ ಮುದ್ದು ಮಾಡುವುದು ಮಕ್ಕಳಿಗೆ ಮಾತ್ರವೇ ಎಂಬ ಮಿಥ್ ಅನ್ನು ಸೃಷ್ಟಿಸಿದ್ದು ಯಾರೋ ಗೊತ್ತಿಲ್ಲ. ಮುದ್ದು ಮಾಡುವುದು, ಲಲ್ಲೆಗರೆಯುವುದು ಮನುಷ್ಯನಿಗೆ ಆಪ್ತತೆಯನ್ನು ನೀಡುವುದಲ್ಲದೇ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಭದ್ರತೆಯನ್ನು ಒದಗಿಸುತ್ತದೆ. ಅದು ಹದಿಹರೆಯದ ಮಕ್ಕಳಿಗೆ ಖಂಡಿತ ಬೇಕು.
ಯಾರೂ ಹುಟ್ಟಾ ಅಪರಾಧಿಗಳಲ್ಲ
ವಯಸ್ಕರ ವರ್ತನೆಗಳ ಸಮಸ್ಯೆ, ವೈವಾಹಿಕ ಜೀವನದಲ್ಲಿ ಕಾಣುವಂತಹ ಸಮಸ್ಯೆ, ಸಂಬಂಧಗಳಲ್ಲಿ ತೊಡಕುಗಳು, ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳು, ಭ್ರಷ್ಟಾಚಾರ, ಕೊಲೆ, ಸುಲಿಗೆ ಮತ್ತು ಅತ್ಯಾಚಾರಗಳಂತಹ ಅಪರಾಧಗಳು, ಸಮಾಜ ವಿದ್ರೋಹಿ ಚಟುವಟಿಕೆಗಳು, ಗುಂಪು ಘರ್ಷಣೆ, ಭೂಗತದ ಪಾತಕ ಕೃತ್ಯಗಳು, ವಿಕೃತ ಮತ್ತು ವಿಲಕ್ಷಣ ವರ್ತನೆಗಳು; ಇಂತವೆಲ್ಲಾ ಒಮ್ಮಿಂದೊಮ್ಮೆಲೆ ತಲೆದೋರುವುದಲ್ಲ. ಬಾಲ್ಯದಲ್ಲಿ ಗುರುತಿಸದೇ ಹೋದಂತಹ ಶಿಶುಮನದ ಮಹಾಮಾರಿಗಳು ವಯಸ್ಕರಾದಾಗ ತಮ್ಮ ರುದ್ರ ಪ್ರತಾಪವನ್ನು ತೋರುವಂತಹುದು.
ಎಳೆವಯದಲ್ಲೇ ಮಾನಸಿಕ ಸಮಸ್ಯೆಗಳ ಮೂಲವನ್ನು ಗುರುತಿಸಲು ಸಾಧ್ಯ. ಪೋಷಕರು ಮತ್ತು ಶಿಕ್ಷಕರು ಜಾಗೃತರಾದರೆ ನಾಳಿನ ಎಷ್ಟೋ ಸಮಸ್ಯೆಗಳನ್ನು ಇಂದಿಗೇ ಕೊನೆಗಾಣಿಸಬಹುದು. ಮಕ್ಕಳು ಮುಗ್ಧರು ಹಟ ಮಾಡುತ್ತಾರೆ, ಸುಳ್ಳು ಹೇಳುತ್ತಾರೆ, ಹೈಪರ್ ಆ್ಯಕ್ಟೀವ್ ಇದ್ದಾರೆ, ಹಿಡಿಯಲಾಗುವುದಿಲ್ಲ; ಆದರೆ ದೊಡ್ಡವರಾಗುತ್ತಾ ಸರಿ ಹೋಗುತ್ತಾರೆ ಎಂಬುದು ಭ್ರಮೆ. ಗಿಡವಾಗಿ ಬಗ್ಗದ್ದು ಮರವಾದಾಗ ಬಗ್ಗದು. ಮಾನಸಿಕ ಸಮಸ್ಯೆಗಳನ್ನು ಗುರುತಿಸಬೇಕು. ಅದರಿಂದ ಮಕ್ಕಳನ್ನು ಪಾರು ಮಾಡಬೇಕು. ಅವರದನ್ನು ಗುರುತಿಸುವಾಗ ನಮ್ಮದೂ ನಮಗೆ ಗುರುತು ಹತ್ತುತ್ತದೆ. ಹೂವೂ ನಾರೂ ಎರಡೂ ಸ್ವರ್ಗ ಕಾಣಲಿ.
ಭೂತಬಾಧೆ ಇರದ ಮಕ್ಕಳು
ಶಿಶುವೆಂಬ ಚಿಗುರುತ್ತಿರುವ ಸಸಿಗೆ ಭೂತದ ಬಾಧೆಯಿಲ್ಲ ಭವಿಷ್ಯದ ಭ್ರಮೆಯಿರುವುದಿಲ್ಲ. ಅದು ಸದಾ ಹಿತವನ್ನು ಮತ್ತು ಮುದವನ್ನು ಬಯಸುತ್ತಿರುತ್ತದೆ. ತನಗೆ ದೊರಕುವ ಆಪ್ತತೆ ಮತ್ತು ಸಂತೋಷದ ಆಧಾರದಲ್ಲಿ ತಾನಿರುವ ಪರಿಸರವನ್ನು ಮತ್ತು ತನ್ನೊಡನೆ ಇರುವ ಜನರನ್ನು ಅಳೆಯುತ್ತದೆ. ಸಾಮಾನ್ಯವಾಗಿ ಅದರ ಮನಸ್ಸಿನಲ್ಲಿ ಖಿನ್ನತೆಗಳಿರುವುದಿಲ್ಲ, ಹೃದಯದಲ್ಲಿ ಭಾರವಿರುವುದಿಲ್ಲ. ಹಾಗಾಗಿ ಅದು ಹಗುರ ಹಾಗೂ ಮುಕ್ತ. ಅದರ ಮನಸ್ಸನ್ನು ಖಿನ್ನತೆಗೆ ದೂಡದೇ, ಹೃದಯಕ್ಕೆ ಭಾರವೆನಿಸುವಂತೆ ಮಾಡದೇ ಹಿರಿಯರು ಮಗುವಿರುವ ವಾತಾವರಣವನ್ನು ರೂಪಿಸಬೇಕು.
ಆ ವಾತಾವರಣದಲ್ಲಿ ಅವರು ವಿಹರಿಸಬೇಕು. ತಾವು ತಮ್ಮ ವಿಚಾರ, ಧೋರಣೆ, ದೃಷ್ಟಿ, ನಿರೀಕ್ಷೆಗಳನ್ನು ಅವರ ಮೇಲೆ ಹೇರಿ ಅವರ ಮನಸ್ಸನ್ನು, ಹೃದಯವನ್ನು ಭಾರಗೊಳಿಸದಿರುವಂತಹ ಎಚ್ಚರಿಕೆಯನ್ನು ಹಿರಿಯರಾದವರು ವಹಿಸಲೇ ಬೇಕು. ಶಿಶುವು ಎಲ್ಲೆಲ್ಲಿ ಇರುವುದೋ ಅಲ್ಲೆಲ್ಲಾ ಅದು ವಿಹರಿಸುವಂತಾದರೆ ಆ ವಾತಾವರಣದಲ್ಲಿರುವ ಹಿರಿಯಲೆಲ್ಲರೂ ತಮ್ಮ ಜೈವಿಕ ಮತ್ತು ಭಾವನಾತ್ಮಕ ಚೈತನ್ಯವನ್ನು ಪಡೆದುಕೊಳ್ಳುವರು. ಅವರ ಮಾನಸಿಕ ಆರೋಗ್ಯವು ವೃದ್ಧಿಸುವುದು.
ಹೊರತಾಗಿ ಹಾರಾಡಬಹುದಾದ ಹಕ್ಕಿಯ ರೆಕ್ಕೆಗಳನ್ನು ಕಟ್ಟಿ ಬಂಧಿಸಿಟ್ಟರೆ ಅದರ ಬಂಧನದ ಆಕ್ರಂದನ ಇಡೀ ವಾತಾವರಣವನ್ನು ಸೂತಕದ ಗಾಢತೆಗೆ ಒಳಮಾಡುತ್ತದೆ. ಮಕ್ಕಳು ಕಲಿಯುವ ಎಡೆಯಲ್ಲಾಗಲಿ, ನಲಿಯುವ ಕಡೆಯಾಗಲಿ, ನುಡಿಯುವಲ್ಲಿ, ನಡೆಯುವಲ್ಲಿ, ಕಲಿಯುವಲ್ಲಿ, ಬೆಳೆಯುವಲ್ಲಿ ಅವರು ವಿಹರಿಸುವಂತಹ ಶಿಶುಸ್ನೇಹಿ ಪರಿಸರವಿದ್ದಲ್ಲಿ ವರ್ತಮಾನ ಮತ್ತು ಭವಿಷ್ಯದ ಸಂಗತಿಗಳು ಪ್ರಫುಲ್ಲವಾಗಿರುತ್ತವೆ.
ಮಕ್ಕಳಿರುವ ಮನೆ, ಕಲಿಯುವ ಶಾಲೆ, ಆಡುವ ಅಂಗಳ ಎಲ್ಲವೂ ಶಿಶುವಿಹಾರವಾಗಿರಬೇಕು. ಮಕ್ಕಳು ವಿಹರಿಸುವ ಯಾವುದೇ ಜಾಗಗಳಲ್ಲಿ ಹಿರಿಯರು ಒತ್ತಾಸೆ ನೀಡುವ ಅಂಶಗಳೇ ಹೊರತು, ಮಕ್ಕಳ ಇರುವಿಕೆಯೊಂದು ಹಿರಿಯರಿರುವ ಎಡೆಯ ಸಣ್ಣ ಪ್ರಮಾಣದ ಭಾಗವಲ್ಲ.
ಶಿಶುತನದ ಮುಗ್ಧತೆಯ ಸ್ವಭಾವ ವ್ಯಕ್ತಿಯ ಮನದ ಸರಳತೆಯಾದರೆ ಆತನೂ ಕೂಡಾ ಶಿಶುವಿನಂತೆ ಈ ಲೋಕದಲ್ಲಿ ನಲಿಯಬಲ್ಲ. ತನ್ನದೇ ಆದ ಮಾನಸ ಸರೋವರದಲ್ಲಿ ವಿಹರಿಸಬಲ್ಲ. ಶಿಶುವೊಂದು ನಿರ್ಭಯವಾಗಿ, ಸುಖವಾಗಿ, ಹಿತವಾಗಿ, ಆರೋಗ್ಯವಾಗಿ, ಆನಂದವಾಗಿ ವಿಹರಿಸುವಂತಹ ಎಡೆಯಾಗಲಿ ಈ ಜಗ. ಆ ಕಂದಮ್ಮಗಳ ಆನಂದದ ಕಾರುಣ್ಯದಲ್ಲಿ ಹಿರಿಯರೆಲ್ಲರಿಗೂ ನೆಮ್ಮದಿಯಾಗಲಿ. ಲೋಕವೆಲ್ಲವೂ ಹಿತವಾಗಿರಲಿ.
(ಮುಗಿಯಿತು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ4 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ5 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ1 day agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ1 day agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ17 hours agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ1 day agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ
-
ದಿನದ ಸುದ್ದಿ2 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!

