Connect with us

ಅಂತರಂಗ

ಅರಿಮೆಯ ಅರಿವಿರಲಿ – 59 : ಶಿಶುಗಣ್ಣಿನ ಒಳಗಣ್ಣು

Published

on

  • ಯೋಗೇಶ್ ಮಾಸ್ಟರ್

ಮಗುವನ್ನು ಮನೆಯಲ್ಲಿ ಪೋಷಿಸುವುದಾಗಲಿ, ಶಾಲೆಯಲ್ಲಿ ಶಿಕ್ಷಣ ನೀಡುವುದಾಗಲಿ ಅಥವಾ ಇನ್ನಾವುದೇ ಕಾರಣ ಮತ್ತು ತರಬೇತಿಗಳಿಗೆ ಮಗುವಿನ ಸಂಪರ್ಕದಲ್ಲಿ ವ್ಯವಹರಿಸುವವರಾಗಲಿ ಎರಡು ಸಾಮರ್ಥ್ಯವಿರಬೇಕು. ಒಂದು ಶಿಶುವಿನ ದೃಷ್ಟಿಯಲ್ಲಿ ನಾವು ಮತ್ತು ನಮ್ಮ ಕೆಲಸ ಹೇಗೆ ಕಾಣುತ್ತಿದೆ ಎಂದು ಗ್ರಹಿಸಲು ಸಾಧ್ಯವಾಗಬೇಕು.

ಹಾಗೆಯೇ ಮತ್ತೊಂದು ಸಾಮರ್ಥ್ಯ ಮಗುವಿಗೆ ದಾಟಿಸಬೇಕಾದ ವಿಷಯವನ್ನು ಅದು ಮೆಚ್ಚುವ ಹಾಗೆ ಮತ್ತು ಆನಂದಿಸುವ ಹಾಗೆ ರೂಪಿಸುವುದು.
ಮಗುವಿನ ವಯಸ್ಸು, ಮನಸ್ಸು, ಹಿನ್ನೆಲೆ, ನೈಸರ್ಗಿಕವಾಗಿ ಇರುವ ಸಾಮರ್ಥ್ಯ ಮತ್ತು ಗಳಿಸಿಕೊಂಡಿರುವ ಸಾಮರ್ಥ್ಯದ ಆಧಾರದ ಮೇಲೆ ನೀಡುವ ಸಂದೇಶವಾಗಲಿ, ಶಿಕ್ಷಣವಾಗಲಿ, ತರಬೇತಿಯಾಗಲಿ ಯೋಜಿತಗೊಳ್ಳಬೇಕು.

ಕಲಿಕೆಯೆಂಬ ಪ್ರಕ್ರಿಯೆ ನಿರಂತರವಾಗಿರುವ ಕಾರಣದಿಂದಾಗಿ, ಹಾಗೂ ಮಗುವಿನ ಬದುಕಿನುದ್ದಕ್ಕೂ ವಿಷಯಗಳು ಮತ್ತು ಕೌಶಲ್ಯಗಳು ಪರಸ್ಪರ ಬೆಸೆದುಕೊಂಡಿರುವ ಕೊಂಡಿಗಳಂತಿರುವ ಕಾರಣದಿಂದ ಅವರೇ ಅದನ್ನು ಗ್ರಹಿಸಿ, ಪ್ರಶಂಸಿಸಿ, ಆನಂದಿಸಿ ತಮ್ಮದಾಗಿಸಿಕೊಳ್ಳುವ ರೀತಿಯಲ್ಲಿ ನಾವು ಅವರಿಗೆ ಮುಟ್ಟಿಸುವ ವಿಷಯಗಳನ್ನು ರಚಿಸಿಕೊಳ್ಳಬೇಕು.

ಒಟ್ಟಾರೆ ಹೇಳುವುದಾದರೆ ಶಿಶುಗಣ್ಣು ನಮಗಿರಬೇಕು. ಶಿಶುವಿನ ಕಣ್ಣಲ್ಲಿ ನಮ್ಮ ಚಿತ್ರಣವು ಹೇಗಿರುತ್ತದೆ ಎಂಬ ಪರಿಕಲ್ಪನೆ ನಮಗೆ ಸ್ಪಷ್ಟವಾಗಿರಬೇಕು.

ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದುವ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ತರಬೇತಿ ಕೇಂದ್ರಗಳೆಲ್ಲವೂ ಶಿಶುವಿಹಾರಗಳಾಗಬೇಕು. ಹಾಗೂ ಮಕ್ಕಳೊಡನೆ ನಡೆಸುವ ವ್ಯವಹಾರಗಳಲ್ಲಿ ಯಾವುದೇ ರೀತಿ ಭಾಗಿಯಾಗುವ ಹಿರಿಯರಲ್ಲಿ ಈ ಶಿಶುಗಣ್ಣು ಅತ್ಯಂತ ನಿಚ್ಚಳವಾಗಿ ತೆರೆದಿರಬೇಕು. ಏಕೆಂದರೆ ಮಕ್ಕಳು ತಮ್ಮ ಎಳೆಗಣ್ಣಲ್ಲಿ ಗ್ರಹಿಸಿದ್ದು ಅವರ ವ್ಯಕ್ತಿತ್ವದ ಭಾಗವಾಗಿ, ಕೌಶಲ್ಯದ ಬುನಾದಿಯಾಗಿ, ಮನೋಭಾವದ ನೆಲೆಯಾಗಿ ಬೇರೂರುತ್ತದೆ. ಅವರ ವ್ಯಕ್ತಿತ್ವ ವಿಕಸನವೂ ಕೂಡಾ ಅದರಿಂದಲೇ ಆಗುತ್ತದೆ.

ವಸ್ತುಗಳನ್ನು, ವಿಷಯಗಳನ್ನು ಮತ್ತು ವ್ಯಕ್ತಿಗಳನ್ನು ನೋಡುವ ಬಗೆ ಎಂಬುದು ಸಾಧಾರಣ ವಿಚಾರವಲ್ಲ. ಬಹಳ ಮಹತ್ವದ್ದು ಮಾತ್ರವಲ್ಲದೇ ಅದು ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ, ಜೀವನ ಕ್ರಮಗಳನ್ನು ರೂಢಿಸಿಕೊಳ್ಳುವಲ್ಲಿ, ಸಂಕಲ್ಪಗಳನ್ನು ಮಾಡುವಲ್ಲಿ, ವಿವೇಚನೆಯಿಂದ ವಿಷಯಗಳನ್ನು ಸ್ವೀಕರಿಸುವಲ್ಲಿ ಅಥವಾ ತಿರಸ್ಕರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನೋಡುವ ಬಗೆಯ ತರಬೇತಿ ಕೂಡಾ ಶಿಶುಗಣ್ಣಿಗೆ ಬೇಕು. ಏಕೆಂದರೆ ಅವರದು ಕಾಮಾಲೆ ಕಣ್ಣಾಗಬಾರದಲ್ಲ!

ಶಿಶುಮತಿ

ಮನಸ್ಸನ್ನು ಹದಗೊಳಿಸಬೇಕು, ಮತಿಗೆ ತಿದಿಯೊತ್ತಬೇಕು. ಮಗುವಿನ ಮನಸ್ಸು ಮತ್ತು ಮತಿಗಳ ವಿಷಯದಲ್ಲಿಯೂ ಕೂಡಾ ಅದೇ ಮಾಡಬೇಕಾಗಿರುವುದು. ಅದರ ಮನಸ್ಸಿಗೆ ಅಗತ್ಯದ ಭಾವನೆಗಳು ಹುಟ್ಟುವಂತೆ, ಅನುಭವಗಳು ದಕ್ಕುವಂತೆ, ದೃಷ್ಟಿಗಳು ಮೂಡುವಂತೆ, ಕನಸುಗಳು ಕಟ್ಟುವಂತೆ ಮಾಡಿದರೆ, ಅವುಗಳನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ನಿರ್ವಹಿಸಲು ಬುದ್ಧಿಗೆ ತರಬೇತಿಯನ್ನು ನೀಡಬೇಕು. ಮನಕ್ಕೆ ಮತಿಯೊಂದು ಉಪಕರಣ. ಮತಿಯೆಂದರೆ ಬುದ್ಧಿಯೆಂಬ ಅರ್ಥದಲ್ಲಿ ಇಲ್ಲಿ ಬಳಸುತ್ತಿದ್ದೇನೆ.

ಮನಸ್ಸು ಉದಾತ್ತವಾದಂತೆ, ನೈತಿಕತೆಯನ್ನು ನೆಚ್ಚಿಕೊಂಡಂತೆ, ತನ್ನ ತಾನು ತಿಳಿದ ಮೇಲೆ, ತನ್ನ ಸಾಮರ್ಥ್ಯವನ್ನು ಸಾಕ್ಷಾತ್ಕರಿಸಿಕೊಂಡ ಮೇಲೆ ಬುದ್ಧಿಯನ್ನು ಸಾಣೆ ಹಿಡಿಯುವ ಕೆಲಸವನ್ನು ಮಾಡಬೇಕು. ಈ ಕೆಲಸವಾಗುವುದು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ. ಶಿಸ್ತುಗಳನ್ನು ಅನುಸರಿಸುವುದರ ಮೂಲಕ. ಮಾಡುವ ಕೆಲಸಗಳಲ್ಲಿ ಕ್ರಮಗಳನ್ನು ಕಂಡುಕೊಳ್ಳುವುದರ ಮೂಲಕ, ಮೆದುಳಿಗೆ ಸಾಕಷ್ಟು ಕಸರತ್ತುಗಳನ್ನು ನೀಡಿ ಅದನ್ನು ಚುರುಕಾಗಿರಿಸಿಕೊಳ್ಳುವುದರ ಮೂಲಕ.

ಅಧ್ಯಯನದಲ್ಲಿ ಆಸಕ್ತಿ, ಕೌಶಲ್ಯಗಳಲ್ಲಿ ತರಬೇತಿ, ಜೀವನ ಕ್ರಮಗಳಲ್ಲಿ ಶಿಸ್ತು ಮತ್ತು ಕಲಿಕೆಯ ಪ್ರಕ್ರಿಯೆಗಳಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಮಕ್ಕಳ ವೈಚಾರಿಕತೆಗೆ ಮತ್ತು ವೈಜ್ಞಾನಿಕ ಧೋರಣೆಗಳಿಗೆ ವಸ್ತುನಿಷ್ಟ ಮೌಲ್ಯಗಳನ್ನು ನೀಡಲು ಸಾಧ್ಯವಾಗುವುದು.

ಯಾವುದೇ ಸನ್ನಿವೇಶಗಳಲ್ಲಿ ಭಾವೋದ್ರೇಕಕ್ಕೆ ಒಳಗಾಗಿ ಬುದ್ಧಿಯನ್ನು ಬಲಿಗೊಡದೇ ಕೌಶಲ್ಯದಿಂದ ಅದನ್ನು ಸಮಚಿತ್ತದಿಂದ ಗಮನಿಸಿ ವರ್ತಿಸಲು, ಪ್ರವರ್ತಿಸಲು ಸಾಧ್ಯವಾಗುತ್ತದೆ. ಈ ಭಾವುಕತೆಯ ನಿರ್ವಹಣೆಯ ಕೌಶಲ್ಯವೂ ಕೂಡಾ ಜೀವನ ಕೌಶಲ್ಯದಂತೆ ತರಬೇತಿಯಿಂದ ಪಡೆಯಲು ಸಾಧ್ಯ. ಮನಸ್ಸಿನ ಮತ್ತು ದೇಹದ ಜಡತ್ವವನ್ನು ನೀಗಲು ಶಿಸ್ತು ಮತ್ತು ತರಬೇತಿ ಬೇಕು.

ಪ್ರತಿಭೆ, ಸಾಮರ್ಥ್ಯ, ತಿಳುವಳಿಕೆ, ಅಧ್ಯಯನ; ಇವೆಲ್ಲಾ ಇದ್ದರೂ ಕೂಡಾ ಕೌಶಲ್ಯವು ಇಲ್ಲದಿರುವ ಕಾರಣದಿಂದ ಎಷ್ಟೋ ಬಾರಿ ವ್ಯಕ್ತಿಗಳು ಅವುಗಳನ್ನು ಸಮರ್ಪಕವಾಗಿ ಬಳಸಲು, ಉಪಯುಕ್ತವನ್ನಾಗಿಸಿಕೊಳ್ಳಲು ಬರುವುದಿಲ್ಲ. ಇದಕ್ಕೆ ಬೇಕಾಗಿರುವುದು ಸೂಕ್ತ ತರಬೇತಿ. ತೊಡಕಾಗಿರುವಂತಹ ಅರಿಮೆಗಳನ್ನು ನಿವಾರಿಸಿಕೊಂಡು, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು, ಇತಿಮಿತಿಯನ್ನು ತಿಳಿದುಕೊಂಡು ಅದನ್ನು ದಾಟಿ ಗುರಿ ತಲುಪಲು ಬೇಕಾದ ಜಾಣ್ಮೆಯನ್ನು ಪಡೆದುಕೊಳ್ಳಲು ಮಕ್ಕಳಿಗೆ ತರಬೇತಿಯನ್ನು ನೀಡುವುದು ಮನೆಯಲ್ಲಿ ಪೋಷಕರದು, ಶಾಲೆಯಲ್ಲಿ ಶಿಕ್ಷಕರದು ಮತ್ತು ಇನ್ನುಳಿದಂತೆ ಸಮಾಜದಲ್ಲಿ ಎಲ್ಲಾ ಹಿರಿಯ ಸದಸ್ಯರದು.

ಶಿಶುಗಲಿಕೆ

ಶಿಕ್ಷಣ ಶಿಶುವಿಗೆ ಅಗತ್ಯ ಎಂದು ತಾತ್ವಿಕವಾಗಿ ನಂಬುವುದೇನೂ ನಮಗೆ ಸಾಲದು. ಏಕೆಂದರೆ ತಾಂತ್ರಿಕವಾಗಿ ಅದನ್ನು ಮಕ್ಕಳಿಗೆ ಮುಟ್ಟಿಸದಿದ್ದರೆ ಇಡೀ ಶಿಕ್ಷಣ ವ್ಯವಸ್ಥೆಯೇ ಕುಸಿಯುತ್ತದೆ. ಅನುಚಿತ ಮತ್ತು ಸಮರ್ಪಕ ಶಿಕ್ಷಣದ ವ್ಯವಸ್ಥೆಯಿಂದಾಗಿ ಸಮಾಜವು ಟೊಳ್ಳಾಗುತ್ತದೆ. ಈ ಎಚ್ಚರಿಕೆ ನಮಗಿರಬೇಕು.

ಕುಣಿಯಲಾರದವರು ನೆಲ ಡೊಂಕು ಅಂದಂತೆ ಶಿಕ್ಷಕರು ಮತ್ತು ಪೋಷಕರು ಸಾಮಾನ್ಯವಾಗಿ ಮಗುವಿಗೆ ಅದೆಷ್ಟು ಹೇಳಿಕೊಟ್ಟರೂ ಕಲಿಯಲಿಲ್ಲ ಗ್ರಹಿಸುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಆದರೆ ಮಕ್ಕಳು ಯಂತ್ರಗಳ ಉತ್ಪಾದನೆಗಳಲ್ಲದ ಕಾರಣ ಅವರಿಗೆ ಬೋಧನಾ ಕ್ರಮಗಳಗಲ್ಲಿ, ಕಲಿಸುವ ತಂತ್ರಗಳಲ್ಲಿ ಸೂಕ್ತವಾದ ಮತ್ತು ಸಾಕಷ್ಟು ಬದಲಾವಣೆಗಳನ್ನು ತಂದುಕೊಳ್ಳುವುದು ಶಿಕ್ಷಕರ ಸಾಮರ್ಥ್ಯ.

ಕಲಿಯುವ ಮತ್ತು ಕಲಿಸುವ ವಿಧಾನಗಳಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ. ಅವುಗಳನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳದೇ ಹೋದರೆ ಪೆÇಳ್ಳು ವ್ಯಕ್ತಿತ್ವದ ಮತ್ತು ಟೊಳ್ಳು ವೃತ್ತಿಪರತೆಯ ವ್ಯಕ್ತಿಗಳನ್ನು ಮುಂದೆ ಕಾಣುತ್ತೇವೆ. ಜೊತೆಗೆ ಗಟ್ಟಿಯಾದ ಸಂಪನ್ಮೂಲ ವ್ಯಕ್ತಿಗಳನ್ನೇ ಕಾಣಲಾಗದಷ್ಟು ಅಪಾಯವನ್ನು ಎದುರಿಸಬೇಕಾಗುತ್ತದೆ.

ತಮ್ಮ ವಿಷಯದಲ್ಲಿ ತಾವೇ ಸ್ಪಷ್ಟತೆಯನ್ನು ಮತ್ತು ಸಾಮರ್ಥ್ಯವನ್ನು ಹೊಂದಿಲ್ಲದಂತ ಟೊಳ್ಳು ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಕ್ಷಕರು ಕ್ಷೇತ್ರದಲ್ಲಿ ಕೆಲಸಕ್ಕೆ ಇಳಿದರೆ, ಅವರಿಂದ ಕಲಿಕೆಯನ್ನು ಪಡೆಯುವವರೂ ಕೂಡಾ ಟೊಳ್ಳಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮಕ್ಕಳ ಕಲಿಕೆಯ ವಿಷಯದಲ್ಲಿ ಸೂಕ್ತವಾದ ತಂತ್ರಗಳನ್ನು ಬಳಸುವ ವಿಷಯದಲ್ಲಿ ಪೋಷಕರೂ, ಶಿಕ್ಷಕರೂ ಮತ್ತು ಇತರ ತರಬೇತುದಾರರು ಪಳಗಬೇಕು. ಮಗುವಿಗೆ ಕಲಿಸುವುದು ಎಂದರೆ ಪಠ್ಯ ಮಾತ್ರವಲ್ಲದೆ, ನೈತಿಕತೆ, ಆರ್ಥಿಕ ಪ್ರಜ್ಞೆ, ಜೀವನ ಕೌಶಲ್ಯ, ಕಲೆ ಮತ್ತು ಸಾಂಸ್ಕೃತಿಕ ತರಬೇತಿ, ಸೃಜನಶೀಲತೆ; ಇತ್ಯಾದಿಗಳೆಲ್ಲಾ ಅಡಕವಾಗಿರುತ್ತದೆ.

ಅವೆಲ್ಲವೂ ಕೂಡಾ ಜೀವನದ ಸಾರ ಗ್ರಹಿಕೆಗೆ ಮತ್ತು ಬದುಕನ್ನು ಆನಂದಿಸಲು ಬೇಕಾದ ವಿಷಯಗಳೇ ಆಗಿರುತ್ತವೆ. ಹಾಗಾಗಿ ಮಕ್ಕಳಿಗೆ ಅವುಗಳಲ್ಲಿ ಆಸಕ್ತಿ ಕಳೆಯದಂತೆ, ಕಲಿಸುವವರ ದೌರ್ಬಲ್ಯದಿಂದ ಮತ್ತು ವೃತ್ತಿಪರತೆಯ ಕೊರತೆಯಿಂದ ಮಕ್ಕಳು ಆ ವಿಷಯಗಳಿಂದ ವಂಚಿತರಾಗರಂತೆ ನೋಡಿಕೊಳ್ಳುವ ಜವಾಬ್ದಾರಿ ಕುಟುಂಬದ್ದು, ಶಿಕ್ಷಣ ಸಂಸ್ಥೆಗಳದ್ದು ಮತ್ತು ಶಿಕ್ಷಣ ವ್ಯವಸ್ಥೆಯದ್ದು.

ಶಿಶುಪಾಲ

ಮಗುವಿನ ಲಾಲನೆ ಪಾಲನೆ ಮಕ್ಕಳಾಟವಲ್ಲ. ಅವರು ನೈಸರ್ಗಿಕವಾಗಿ ಪಶುವಿನಂತಿದ್ದು ಅವರನ್ನು ಮನುಷ್ಯನ ಸಾಮಾಜಿಕ ಜೀವನಕ್ಕೆ ಅಣಿ ಮಾಡುವ ಗುರುತರವಾದಂತಹ ಹೊಣೆಗಾರಿಕೆ ಹಿರಿಯರದು. ಅದರಲ್ಲೂ ಶಾರೀರಿಕ ಬೆಳವಣಿಗೆ, ಮಾನಸಿಕ ವಿಕಸನ, ಭಾವನಾತ್ಮಕ ಬೆಸುಗೆ, ಸಾಮಾಜಿಕ ಹೊಣೆಗಾರಿಕೆ, ನೈತಿಕ ಬದ್ಧತೆ, ಶೈಕ್ಷಣಿಕ ಪ್ರಗತಿ, ಬೌದ್ಧಿಕ ವಿಕಾಸ, ಜೀವನ ನಿರ್ವಹಣೆ; ಹೀಗೆ ಹಲವಾರು ಆಯಾಮಗಳಿಂದ ಮಗುವನ್ನು ಗಮನಿಸಿಕೊಂಡು ಸರ್ವತೋಮುಖ ಅಭಿವೃದ್ಧಿಗೆ ನಾವು ವಿವಿಧೋದ್ದೇಶ ಯೋಜನೆಗಳನ್ನೇ ಹಾಕಿಕೊಳ್ಳಬೇಕು.

ಸಾಮಾನ್ಯವಾಗಿ ಇವುಗಳಲ್ಲಿ ಯಾವುದೇ ಕೊರತೆಯಾದರೂ ಮಗುವು ವ್ಯಕ್ತಿಯಾಗಿ ರೂಪುಗೊಂಡಮೇಲೆ ಅಲ್ಪಮಟ್ಟಿಗಿನ ಎಡರುತೊಡರುಗಳನ್ನು ಎದುರಿಸುತ್ತದೆ. ಆಗ ಕುಟುಂಬವನ್ನು ದೂರುವುದು, ಶಿಕ್ಷಕರನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ದೂರುವುದು, ಮನೆಯವರು ತಮ್ಮ ಆರ್ಥಿಕತೆಯ ಅಥವಾ ಮತ್ತೇನೋ ಸಮಸ್ಯೆಯ ಕಾರಣಗಳನ್ನು ಹೇಳುವುದು. ನಮಗೆ ಆಗ ಅದು ಸರಿ ಇದ್ದಿದ್ದರೆ ಈಗ ನಾವು ಹೀಗೆ ಇರಬೇಕಿರಲಿಲ್ಲ ಎಂದು ವಯಸ್ಕರು ತಮ್ಮ ಮುಂದಿನ ಹೊಸ ಪೀಳಿಗೆಯ ಮುಂದೆ ಅವಲತ್ತುಕೊಳ್ಳುವುದು; ಹೀಗೆ ನಡೆಯುತ್ತಿರುತ್ತದೆ.

ಯಾವುದೇ ರಾಷ್ಟ್ರವಾಗಲಿ, ಸಮಾಜವಾಗಲಿ ಸಶಕ್ತವಾಗಿ ನಿರ್ಮಾಣವಾಗಬೇಕಾದಲ್ಲಿ ಆ ಹೊತ್ತಿನ ಸಮಸ್ಯೆಗಳಿಗೆ ಪರಿಹಾರ ಮತ್ತು ಅಗತ್ಯಗಳಿಗೆ ಸ್ಪಂದಿಸುವುದು ಎಷ್ಟು ಮುಖ್ಯವೋ, ಕನಿಷ್ಟಪಕ್ಷ ಮುಂದಿನ ಹದಿನೈದರಿಂದ ಇಪ್ಪತ್ತು ವರ್ಷಗಳಷ್ಟು ದೂರದೃಷ್ಟಿಯನ್ನು ಹೊಂದಿದ್ದು ಅದರ ಸಲುವಾಗಿ ದುಡಿಯಲು ಮತ್ತು ರಚನಾತ್ಮಕವಾಗಿ ತೊಡಗಲು ಪ್ರಸ್ತುತದಿನದಲ್ಲಿ ಕಾಲವನ್ನು ಮೀಸಲಿಡಬೇಕು. ಆಗ ಸಮಾಜವಾಗಲಿ, ದೇಶವಾಗಲಿ ಸಮರ್ಥವಾಗಿ ಮತ್ತು ಪ್ರಗತಿ ಹೊಂದಿರುವಂತಹ ಸ್ಥಿತಿಯನ್ನು ಕಾಣಲು ಸಾಧ್ಯ. ಆ ಹೊತ್ತಿನ ಊಟಕ್ಕೆ ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಹೇಳಿಕೊಡುವುದರಲ್ಲಿ ಮಗುವಿನ ಭವಿಷ್ಯದ ದೂರದೃಷ್ಟಿ ಇರುತ್ತದೆ.

ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಕುಟುಂಬ, ಸಾಮಾಜಿಕ ವ್ಯವಸ್ಥೆ ಮತ್ತು ಸರ್ಕಾರಗಳೆಲ್ಲವೂ ಒಟ್ಟಾಗಿ ದುಡಿದರೇನೇ ಈಗಿನ ಮತ್ತು ಮುಂದಿನ ಸಶಕ್ತ ಮತ್ತು ಸುಭದ್ರ ಬದುಕನ್ನು ವೈಯಕ್ತಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಹೊಂದಲು ಸಾಧ್ಯ. ಸಧ್ಯದ ಆಗುಹೋಗುಗಳಷ್ಟೇ ಜೀವಪರ ಮತ್ತು ಸಮಾಜಮುಖಿಗಳಾಗಿರುವವರ ಕಾಳಜಿಯಲ್ಲ. ಅವರು ಮಕ್ಕಳ ಸಮಗ್ರ ಪಾಲನೆ ಪೋಷಣೆ ಮಾಡುವ ಮೂಲಕ ತಮ್ಮಂತೆಯೇ ಮುಂದೆ ಬರುವವರ ಬದುಕಿಗೆ ಜೀವನ ಕ್ಷೇತ್ರವನ್ನು ಹಸನು ಮಾಡಿಟ್ಟಿರಬೇಕು.

(ಮುಂದುವರೆಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮೆಚ್ಚುಗೆ ಪಡೆದ ಕವಿತೆ | ಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತು

Published

on

ಸಂತೆಬೆನ್ನೂರು  ಫೈಜ್ನಟ್ರಾಜ್

ಆಲಿಸು, ಎದೆಗೆ ನುಗ್ಗುವ ಗಾಳಿ ಹೇಳುತಿದೆ ಏನೇನೊ

ನನ್ನದಲ್ಲದ ಮಾತುಗಳು ಯಾರವವೊ

–ದೇವನೂರು ಮಹಾದೇವ

 

ತಿಂದಿರೋದು ಎಲ್ಡೆಯ ತಕ ಇದೊಂದು ಅಂತ

ಅವ್ವ ಕೊಟ್ಟ ರೊಟ್ಟಿ ನಾಲ್ಕನೆಯದು

ರೊಟ್ಟಿ ತುಂಬಾ ಅವ್ವನ ಬೆರಳುಗಳೇ ಅಕ್ಷರಗಳು

ಕಲಾಯಿ ತೆಗೆದು ಹಂಡೆ ಹೊಳೆಯುವಂತೆ ಮಾಡಿದ

ಅಪ್ಪ, ಅದರ ಮೇಲೆ ಕುಟ್ಟಿದ ಚಿತ್ತಾರ

ಅವನ ಬೆವರ ಚುಕ್ಕಿ ಮತ್ತು ಮಗ್ಗಿ ಸಾಲುಗಳು

ನಮ್ಮವರೆಲ್ಲಿ ಕಲಿತಾರೆ ಅಂದ ಅಜ್ಜ ಮಣ್ಣಲ್ಲಿ ಮೂಳೆ ಸಮೇತ ಮಾಯ

ಹಿತ್ತಲ ತುಂಬಾ ಗಿಡ ಬೆಳೆಸಿ ಕಾಗೆ ಗುಬ್ಬಿಗಳಿಗೆ ಕಾಳಿಕ್ಕಿ

ಅಂಗಳದ ನಾಯಿ, ಕಟ್ಟೆಯ ಬೆಕ್ಕಿಗೂ ಹಾಲಿಕ್ಕುವ ಅಜ್ಜಿ ಅಕ್ಷರ ಕಲಿಯದೇ

ಎದೆಯ ಹೊಲ ಹಸನು ಮಾಡಿ ಹೋದಳು

ಎಲ್ಲಾ ಹೋದರು, ಯಾರೋ ಏನೋ ಹೇಳುವ ದನಿ ಎಲ್ಲೋ

ದೂರದಿ ಕಳಿಸುತ್ತಿದೆ ಆಲಿಸಬೇಕು

ಸತ್ತವರ ಜೊತೆಯಲ್ಲಿ ಯಾರು ಸಾಯುತ್ತಾರೆ ಉಳ್ಳವರ ಮನೆಗಳ ಹೊಸ್ತಿಲ

ರಂಗೋಲಿ ನಮ್ಮಂಗಳಕ್ಕೆ ಈಗೀಗ ಬಂದಿದೆ ; ಸ್ಲೇಟಿನ ಅ,ಆ,ಇ,ಈ ಕಂಡಂತೆ

ನನ್ನೊಳಗೂ ನೂರು ಮಾತುಗಳಿವೆ

ಸುಡುವ, ಧಿಕ್ಕರಿಸುವ ಮತ್ತು ಜಗತ್ತನ್ನು

ಅಮ್ಮನಂತೆಯೇ ಪ್ರೀತಿಸುವ ಮಾತುಗಳು

ನೀವು ಹಾಡಿಬಿಟ್ಟ ಹಳೆಯ ಹಾಡು ಮತ್ತು ಅರ್ಧ ಕವಿತೆ ತುಟಿ

ತುದಿಯಲ್ಲಿದೆ ದುರ್ಗಮ್ಮನ ಗುಡಿ ಕಟ್ಟೆಯ ಮೇಲೆ

ತಲೆಗೆ ಟೋಪಿ ಹಾಕಿಯೇ ಕೂರುತ್ತೇನೆ

ಅಂಗೈ ಒಡ್ಡಿ ಪ್ರಸಾದ ಕಣ್ಣಿಗೊತ್ತಿಕೊಳ್ಳುತ್ತೇನೆ

ಎಲ್ಲರ ಮಾತು ಎದೆಗಿಳಿಸಿ ಅಲ್ಲಾ ಹು..ದನಿ ಕೇಳಿ ಹೊರಡುತ್ತೇನೆ ;

ಅಪ್ಪ ಕಲಿಸಿದ ಪಾಠ, ಅಮ್ಮನ ಬೆರಳು ಮೂಡಿದ ರೊಟ್ಟಿ, ಅಜ್ಜಿಯ ಬುದ್ಧ ಚರಿತೆ

ಶಾಲೆಯ ಪುಸ್ತಕದ ಒಳಗೆ ಪಾಠವಾಗಲೆಂದು ನಿಟ್ಟುಸಿರಿಡುತ್ತೇನೆ

ನನ್ನೊಳಗಿನ ಮಾತುಗಳಿಗೆ

ಅವ್ವನ ರೊಟ್ಟಿ,  ಅಪ್ಪನ ಬೆವರ ಹನಿ ಮತ್ತು

ಕಲಿತ ಅಗಣಿತ ಅಕ್ಷರಗಳು ಸಾಕ್ಷಿ

ಎರಡಲ್ಲದ ಒಂದಕೆಳೆಸುವ ಬುದ್ಧ,ಬಸವ,ಬಾಪೂಗಳು

ನಮ್ಮೂರ ಬೀದಿಯಲ್ಲಿ ಅಡ್ಡಾಡಿದ್ದು

ಅವ್ವನೋ, ಅಜ್ಜಿಯೋ ಅಕ್ಕರ ಕಲಿಸಿದ ಮಾಸ್ತರೋ…ಗೊತ್ತಿಲ್ಲ

ಕಲಿಯದ ಅವ್ವ-ಅಪ್ಪ ಕಲಿಸಿ ಹೋದರು

ಕಲಿತ ನಾನು ಎದೆಯ ದನಿಗೆ ಮೂಕನಾಗಿ

ನನ್ನದಲ್ಲದ ಮಾತುಗಳಿಗೆ ಗೋಣಾಡಿಸುತ್ತಿದ್ದೇನೆ ;

ಮತ್ತೆಲ್ಲಿ ಬಂದಾನು ಬುದ್ಧ, ಬಿಡಿ!

 

ಸಂತೆಬೆನ್ನೂರು  ಫೈಜ್ನಟ್ರಾಜ್, 9902935999

Continue Reading

ಅಂತರಂಗ

ಮೆಚ್ಚುಗೆ ಪಡೆದ ಕತೆ |  ಸಮಾಧಿ

Published

on

~ಟಿ.ಆರ್. ಪ್ರಕಾಶ ಭಾಗವತ, ಶಿರಸಿ

ಬರೋಬ್ಬರಿ ನಾಲ್ಕು ಎಕರೆ ಅಡಿಕೆ ತೋಟ ಸಮಾಧಿಯಾಗಿತ್ತು! ಆ ವರ್ಷದ ಮಳೆಗೆ ಅದೇನು ಆವೇಶ ಬಂದಿತ್ತೋ… ಕೇರಳ ರಾಜ್ಯದ ಕೆಲವೆಡೆ ಭಯಂಕರ ಭೂಕುಸಿತವಾದ ಸುದ್ದಿಯಾಗಿ ವಾರ ಕಳೆದಿರಲಿಲ್ಲ; ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಉತ್ತರಕನ್ನಡ, ಶಿಕಾರಿಪುರ ಹೀಗೆ ಕೆಲವೆಡೆಯೂ ಭೂಕುಸಿತದ ಭಯಾನಕ ಸುದ್ದಿಗಳು ಬರತೊಡಗಿತ್ತು. ಸುದ್ದಿ ವಾಹಿನಿಗಳು “ತಾವೇ ಮೊದಲು… ತಮ್ಮಲ್ಲೇ ಮೊದಲು” ಅನ್ನುತ್ತ ಗ್ರೌಂಡ್ ಝೀರೋದ ರಿಪೋರ್ಟ ಕೊಡುವಾಗ ಒಂದಷ್ಟು ಘಟನೆಯ ವಿಡಿಯೋಗಳು ಇನ್ನಷ್ಟು ಗ್ರಾಫಿಕ್ಸ್ ಗಳನ್ನು ಸೇರಿಸಿ ಸುದ್ದಿಯ ಭಯಾನಕತೆಯನ್ನು ಉಲ್ಬಣಿಸುತ್ತ ಉಣಿಸುತ್ತಿದ್ದರೆ, ಗುಡ್ಡಗಳ ಕಣಿವೆ ಕಿಬ್ಬುಗಳಲ್ಲಿ ಲಾಗಾಯ್ತಿನಿಂದ ಬದುಕು ಕಟ್ಟಿಕೊಂಡವರಿಗೆ ದಿನೇ ದಿನೇ ಅಷ್ಟಷ್ಟೇ ಉಸಿರುಗಟ್ಟತೊಡಗಿತ್ತು!

ತಿಂಗಳು ಕಳೆದರೂ ಬಾನ ಬೆಳಕು ಬಿಟ್ಟುಕೊಡದ ಕಾರ್ಮೋಡ ಸುರಿಸಿದ ಮಳೆ ಹಿಂದಿನೆಲ್ಲ ದಾಖಲೆಗಳನ್ನು ಮುರಿದಿತ್ತು. ಮುರಿದುಕೊಂಡು ಬಿದ್ದ ಮಳೆಗೆ ಮುರಿದ ಮನೆಗಳು, ಮನಸ್ಸುಗಳು ಕೊನೆಗೆ ಬದುಕೂ ಕೂಡ ಕೋಡಿಬಿದ್ದು, ಧುಮ್ಮಿಕ್ಕಿ ಬಂದ ಕೆನ್ನೀರಿಗೆ ಕೊಚ್ಚಿಹೋಗುತ್ತಿತ್ತು. ಅನಾಮತ್ತಾಗಿ ಸರಿದ ಗುಡ್ಡಗಳು, ಅದೆಷ್ಟು ಜನರ ಉಸಿರುಗಟ್ಟಿಸಿತ್ತೋ..! ವಾರ್ತೆ ನೋಡಿದವ ಅದೇ ಗುಂಗಿನಲ್ಲಿ ರಾತ್ರಿ ಮಲಗಿದ್ದ ಅಪ್ಪ. ನಡುರಾತ್ರಿ ಸರಿದೆರಡು ತಾಸು ಕಳೆದಿರಬಹುದು, ದಿಂಬಿನಡಿ ಭೂಮಿ ಬಿರಿದ ಶಬ್ಧವಾಯ್ತು ಅನ್ನುತ್ತ ತಡಬಡಿಸಿ ಎದ್ದವ, ನಮ್ಮನ್ನೆಲ್ಲ ಕೂಗಿ ಕರೆಯುತ್ತ ಅಂಗಳಕ್ಕೋಡಿಸಿದ. ಗಾಢ ನಿದ್ರೆಯಲ್ಲಿದ್ದ ಅಮ್ಮ, “ಅಷ್ಟು ಲಾಯ್ಕ್ ನಿದ್ರೆ ಬಂದಾಗ ಸತ್ರೂ ಗೊತ್ತಾಗದಿಲ್ಯಾಗಿತ್ತು… ಅದೆಂತಾ ನಮ್ನಿ ಕೂಗಿ ಎಬ್ಬಿಸಿದ್ರಪಾ…”ಅನ್ನುತ್ತ ಕಣ್ಣುಜ್ಜಿಕೊಂಡು ಹೆಜ್ಜೆ ಕಿತ್ತಿಡುತ್ತ ಅಂಗಳಕ್ಕೋಡಿ ಕಟ್ಟೆಯ ಮೇಲೆ ಕುಂತಳು. ಧಾರಾಕಾರ ಸುರಿಯುತ್ತಿದ್ದ ಮಳೆ ತುಸು ಬಿಡುವು ಕೊಟ್ಟಿತ್ತು. ತೆಂಗು, ಅಡಿಕೆ ಮರಗಳಿಂದ ಬುಡದ ಬಾಳೆ ಎಲೆಗಳ ಮೇಲೆ ಬೀಳುತ್ತಿದ್ದ ಹನಿಗಳ ತಾಳಕ್ಕೆ, ಜೀರುಂಡೆಗಳ ಸಂವಾದಿನಿ ನಮ್ಮನ್ನು ಅಣಕಿಸುವಂತಿತ್ತು. ಜೊತೆಗೆ, ಆ ನಡುರಾತ್ರಿ ಅಪ್ಪನ ಆತಂಕದ ಸುತ್ತ ಕವಿದ ಭಯಾನಕ ಕತ್ತಲು ನಮ್ಮಲ್ಲಿ ಇನ್ನಷ್ಟು ಭೀತಿಯನ್ನು ಉಂಟುಮಾಡಿತ್ತು!

“ಸುತ್ತಮುತ್ತ  ಎಲ್ಲೋ.. ಭೂಮಿ ಬಾಯಿಬಿಟ್ದಂತೂ ಖರೆ…” ಅಪ್ಪ ಅವನಷ್ಟಕ್ಕೆ ಹಲುಬಿದ. “ನಿಮಗೆ ವಾರ್ತೆ ನೋಡಿದ್ದು ಹೆಚ್ಚಾಗಿಪ್ಪು… ಕಾಡಲ್ಲಿ ಎಲ್ಲೊ ದೊಡ್ಡ ಮರ ಮುರದು ಬಿದ್ದಿಪ್ಪು… ಅಷ್ಟೆಯಾ” ಅನ್ನುತ್ತಿದ್ದಂತೆ ಅಮ್ಮನತ್ತ ಕೈ ತೋರಿ ತಡೆದ ಅಪ್ಪ, ತೋಟದ ಕಡೆ ಕಿವಿ ಕೊಟ್ಟು ಆಲಿಸತೊಡಗಿದ. ಕೆಲ ಸಮಯ ಹಾಗೇ ನಿಂತಿದ್ದ ಅಪ್ಪನಲ್ಲಿ “ಮತ್ತೆ ಬ್ಯಾಟ್ರಿ ತಗಂಡು ತೋಟಕ್ಕೆ ಹೋಪುದ್ ಬ್ಯಾಡ ಈಗ! ಎಂತಾ ಆಯ್ದಿಲ್ಲೆ… ಬೆಳಗೆ ನೋಡುವ” ಅಂದ ಅಮ್ಮ ಬಿರಿಬಿರಿನೆ ಮನೆ ಹೊಕ್ಕೇ ಬಿಟ್ಟಳು. ಆ ರಾತ್ರಿ ಅಪ್ಪನ ನಿದ್ರೆ ಹಾರಿಹೋಗಿತ್ತು. ಬೆಳಗಾಗುವ ತನಕ ಒಂದಾದ ಮೇಲೊಂದು ಕವಳ ಜಗಿಯುತ್ತಲೇ ಕುಳಿತಿದ್ದವ ನಸುಕು ಇಣುಕುತ್ತಿದ್ದಂತೇ ತೋಟದೆಡೆ ಧಾವಿಸಿದ್ದ.

ಅಷ್ಟು ಹೊತ್ತಾದರೂ ಮರಳಿ ಬರಲೆ ಇಲ್ಲ ಅಪ್ಪ. ಆತಂಕದಿಂದಲೆ ಅಮ್ಮ ತೋಟದೆಡೆ ಓಡಿದ್ದಳು. ದೂರದಲ್ಲಿ ಅಪ್ಪ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದ. ಅಮ್ಮ ಧಾವಿಸಿ ಅಪ್ಪನ ಬೆನ್ನು ಸವರಿದಳು. ಎದುರು ಬಟಾ ಬಯಲಾದಂತೆ! ಬಾನು ಕಾಣತೊಡಗಿತ್ತು! ತಲೆ ಎತ್ತಿ ನೋಡಿದ ಅಮ್ಮ, “ರೀ… ನಮ್ಮ ತೋಟ ಎಲ್ರೀ..!?” ಅನ್ನುತ್ತಲೇ ಎದುರಿನ ದೃಶ್ಯ ಕಂಡು ಎದೆ ಹಿಡಿದುಕೊಂಡು “ಅಯ್ಯೋ ಭಗವಂತ…!!” ಕಿರುಚಿಕೊಂಡಳು! ಮುಂದಿನ ತಗ್ಗಿನಲ್ಲಿ ನಾಲ್ಕು ಎಕರೆ ಫಲ ಭರಿತ ಅಡಿಕೆ ತೋಟ ಸಂಪೂರ್ಣ ಮಾಯವಾಗಿತ್ತು. ಇವರಿದ್ದ ದಿಬ್ಬದ ಇನ್ನೊಂದೆಡೆಯ ಕಾಡಿನ ಗರ್ಭವೇ ಪಾತವಾದ ಹಾಗೆ ಕೆಂಜವಳು ಕಾರಿದ ಮಣ್ಣು ಜಾರುತ್ತ, ಕದಡುತ್ತ, ಆ ಪ್ರದೇಶವನ್ನೆಲ್ಲ ಆಪೋಶನ ಮಾಡಿತ್ತು. ಬಾನೆತ್ತರಕೂ ನಿಂತು ಬಿಸಿಲಿಗೆ ತಡೆಗೋಡೆಯಂತಿದ್ದ ಆ ಕಾಡು, ಕದಡಿದ ಪರಿ ಭೀಭತ್ಸವಾಗಿತ್ತು! ಪ್ರಕೃತಿಯ ಕ್ರೌರ್ಯದ ಕೆಂಜರುಗಿನಿಂದ ಒಂದೊಂದು ಅಡಿಕೆ ಮರ,ಗಿಡಗಳನ್ನೂ ಹೊಸಕಿ ಕೊಂದ ಗುಡ್ಡದ ಮಣ್ಣು ರಕ್ತದಲ್ಲಿ ಕಲಸಿದಂತಾಗಿತ್ತು!! ತಮ್ಮ ಹರಯವನ್ನೆಲ್ಲ ಎರೆದು ನೆಟ್ಟು ಬೆವರುಣಿಸಿ ಬೆಳೆಸಿದ ಅಡಿಕೆ ತೋಟವೆ ಅವರ ಬದುಕು! ಅವರ ಸಾಧನೆ! ಒಂದಿರುಳು ಕಳೆಯುವದರೊಳಗೆ  ಬಯಲಾದ ದಿಗ್ಭ್ರಮೆ ಅವರನ್ನು ಆವರಿಸಿತ್ತು. ಉಸಿರಾಟವನ್ನೂ ಮರೆತವರಂತೆ ಶೂನ್ಯದ ವಶವಾಗಿಹೋಗಿದ್ದರು!!

ಕಾಲಡಿಯ ನೆಲ ಕುಸಿಯುವುದೆಂದರೆ… ನಂಬಿದ ನೆಲವೇ ಬದುಕನ್ನು ಕಸಿದುಕೊಳ್ಳುವುದೆಂದೇ ಅರ್ಥ? ಅಪ್ಪ ಹೇಳುತ್ತಿದ್ದ; “ಅಡಿಕೆ ಮರಗಳೂ ಕೂಡ ನಮ್ಮ ಬದುಕಿನ ಆಸರೆಯೆ…, ಹಾಗಾಗಿ ಅವೂ ನಮ್ಮ ಮಕ್ಕಳಂತೆಯೇ..!” ಎಸ್ಎಸ್ಎಲ್ಸಿ ಪರೀಕ್ಷೆಗೂ ಮುನ್ನ ತಂದೆಯನ್ನು ಕಳಕೊಂಡಾಗ ಒಟ್ಟಿಗೇ ಶಿಕ್ಷಣಕ್ಕೂ ಎಳ್ಳು ನೀರು ಬಿಟ್ಟವ ಅಪ್ಪ. ಅಜ್ಜ ಮಾಡಿದ ಭೂಮಿಯನ್ನು ನೆಚ್ಚಿಕೊಂಡ. ಕರೆದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತ, ಹೋದಲ್ಲಿ ಬೇಡಿ ಪಡೆದ ಅಡಿಕೆಗಳನ್ನು ನಾಟಿಮಾಡಿ ಗಿಡವಾಗಿಸುತ್ತ… ನೋಡ ನೋಡುತ್ತ ನಾಲ್ಕು ಎಕರೆಗೂ ತೋಟ ಮಾಡಿಬಿಟ್ಟಿದ್ದ. ಹೊಸದಾಗಿ ಫಸಲು ಕಾಣಿಸುವ ಹೊತ್ತಿಗೆ, ಸೋದರ ಸಂಬಂಧಿ ನೆಂಟಸ್ತಿಕೆ ಕುದುರಿಸಿ ಲಗ್ನ ಮಾಡಿಸಿದ್ದ. ಹಿಂಗಾರದ ಹೊಡೆಯುಬ್ಬಿ ಅರಳುವ ಹೊತ್ತಿಗೆ ಅಮ್ಮ ಹೊಟ್ಟೆಯೊಳಗೆ ನನ್ನಿಟ್ಟುಕೊಂಡು ಸಂಭ್ರಮಿಸಿದ್ದಳು. ಅಪ್ಪನ ಬದುಕು ಸುಂದರ ಚಿತ್ರವಾಗಿ ಬಣ್ಣ ತುಂಬಿಕೊಳ್ಳತೊಡಗಿತ್ತು.

*

ಹಲವು ಪತ್ರಿಕೆಗಳು ಭೂಕುಸಿತದ ಸಚಿತ್ರ ವರದಿ ಪ್ರಕಟಿಸಿದವು. ಸರಕಾರಿ ವಾಹನಗಳು ಓಡಾಡಿದವು. ಅಧಿಕಾರಿಗಳು ನಷ್ಟವನ್ನು ಅಂದಾಜಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಯಥೇಚ್ಛವಾಗಿ ಸಾಂತ್ವನವನ್ನು ಹೇಳಿದರು. ಪರಿಹಾರದ ಭರವಸೆ ನೀಡಿ ಹೋದರು. ನೆಂಟರಿಷ್ಟರು ಧಾವಿಸಿ ಮೈಮುಟ್ಟಿ “ ಹೋಗಿದ್ದು ತೋಟ ಮಾರಾಯ… ಅಂಥ ತೋಟ ಇನ್ನೂ ನಾಲ್ಕು ಮಾಡ್ಲಕ್ಕು.. ಕೊಡಗಿನ ಹಾಗೆ ಮನೆ ಮೇಲೆ ಗುಡ್ಡ ಬಂದಿದ್ರೆ…!?” ಪರಿಶ್ರಮವನ್ನೆ ತಪವಾಗಿಸಿಕೊಂಡವನ ಸ್ಥೈರ್ಯವನ್ನೂ ಸಹ ಜನರ ಹಗುರವಾದ ಮಾತುಗಳ ಜರುಗು ಅಡಗಿಸತೊಡಗಿತ್ತು!. ಅಂತೂ ಇದೇ ರೀತಿ ತಿಂಗಳು ದಾಟಿತ್ತು.

ಅಪ್ಪ, ತಹಶೀಲ್ದಾರರ ಕಛೇರಿಗೆ ಅಲೆದಾಡುತ್ತಿದ್ದ. ಅಂದಾಜು ಪತ್ರಿಕೆಯಲ್ಲಿ ಮಾರುಕಟ್ಟೆ ಮೌಲ್ಯದಂತೆ ಮೂರು ಕೋಟಿಯ ನಷ್ಟ! ಕನಿಷ್ಟ ಎರಡು ಕೋಟಿಯಾದರೂ ಪರಿಹಾರ ಬಂದೇ ಬರುತ್ತದೆ ಎನ್ನುವ ಆಶ್ವಾಸನೆ! ತಹಶೀಲ್ದಾರು ತುಂಬಾ ಬ್ಯೂಸಿ. ಎಲ್ಲ ಕಡೆ ಒಂದಿಲ್ಲೊಂದು ಪ್ರಕೃತಿ ವಿಕೋಪ. ಪ್ರವಾಹ. ಮಳೆಗಾಲದಲ್ಲಿ ಅಧಿಕಾರಿಗಳನ್ನು ಭೇಟಿಮಾಡುವುದೇ ಹರ ಸಾಹಸ. ಪಟ್ಟು ಬಿಡದ ಅಪ್ಪ, ಪರಿಹಾರ ಕಾಣುವ ಹಠತೊಟ್ಟಿದ್ದ. ಆ ದಿನ ಅಂತೂ ತಹಶೀಲ್ದಾರರ ಭೇಟಿಯಾಗಿತ್ತು. “ಮುಖ್ಯಮಂತ್ರಿಗಳ ಪೃಕೃತಿ ವಿಕೋಪ ನಿಧಿ” ಅಲ್ಲಿ ಮೊತ್ತ ಹೆಚ್ಚೋದಿಲ್ಲ… ಫಲಾನುಭವಿಗಳು ಹೆಚ್ಚಾದಷ್ಟೂ ಬರುವ ಪರಿಹಾರ ಕಡಿಮೆಯೇ ಆಗೋದು…. ನೋಡೋಣ ನಿಮ್ಮದನ್ನ ಸ್ಪೆಶಲ್ ಕೇಸ್ ಅಂತ ಕನ್ಸಿಡರ್ ಮಾಡಿ ಕಳಿಸಿದ್ದೀನಿ…. ಎರಡು ಕೋಟಿಯಾದರೂ ಬರಬೇಕು” ಅಂದು ಕಳುಹಿಸಿದ್ದರು. ಆ ದಿನ ಅಪ್ಪ ಕೊಂಚ ಸಮಾಧಾನದಲ್ಲಿದ್ದ. ಆದರೆ, ಆಗಲೇ ಊರು ಬಿಡುವ ನಿರ್ಣಯ ಮಾಡಿದ್ದ!

“ಗುಡ್ಡದ ಕೃಷಿ ಮಾಡಿದವರಿಗೆ ಕಣಿವೆಯ ಕೃಷಿ ಸಾಧ್ಯವಿಲ್ಲ…. ಬಯಲು ಕೃಷಿಮಾಡಿದವರಿಗೆ ಗುಡ್ಡವು, ಕಣಿವೆಯೂ ಒಗ್ಗೋದಿಲ್ಲ” ಅನ್ನುವುದು ಅವರವರ ಕೃಷಿ ಬದುಕಿನ ಪಾಠ. ಹೀಗಾಗಿ, ಉಳಿದ ಯಾವ ಉದ್ಯೋಗವನ್ನೂ ತಿಳಿಯದ ಅಪ್ಪ, ಮತ್ತೆ ತೋಟವನ್ನೇ ಮಾಡುವುದಕ್ಕೆ ಯೋಚಿಸತೊಡಗಿದ್ದ. ವೃದ್ದಾಪ್ಯದ ಬಾಲ್ಯಾವಸ್ಥೆಯಲ್ಲಿದ್ದ ಅಪ್ಪನಿಗೆ ಆ ಧೈರ್ಯ ಹೇಗೆ ಬರತೊಡಗಿತು? ಶ್ರಮವೇ ಜೀವನವಾದವನ ಸ್ಥೈರ್ಯವನ್ನು ಸಮಾಧಿ ಮಾಡುವುದಕ್ಕೆ ಇಂತಹ ಭೂಕುಸಿತದಿಂದಲೂ ಸಾಧ್ಯವಾಗಲಿಲ್ಲ! ಮತ್ತೊಮ್ಮೆ ತೋಟ ಮಾಡುವ ನಿರ್ಧಾರ, ಆಘಾತವನ್ನು ಮರೆಸುವ ಪ್ರಯತ್ನವೂ ಆದೀತು! “ಇನ್ನು ಈ ವಯಸ್ಸಿಗೆ ತೋಟ ಗೀಟ ಬ್ಯಾಡ… ಪರಿಹಾರ ಬಂದರೆ ಬಡ್ಡಿಗಿಟ್ಟು ಜೀವನ ಮಾಡುವ…ಸಾಕು” ಅಮ್ಮ ಅಭಿಪ್ರಾಯಿಸಿದ್ದಳು.

*

ಫಸ್ಟ್ ಪಿಯುಸಿಯಲ್ಲಿ 97% ಮಾಡಿದ್ದ ನನ್ನನ್ನು ಅಪ್ಪ ಪುಟ್ಟ ಮಗುವಿನಂತೆ ಮುದ್ದಾಡಿದ್ದ. ನನ್ನ ಓದಿನ‌ ಬಗ್ಗೆ ಅಮ್ಮ ಅಷ್ಟು ಆಸಕ್ತಿ ತೋರಿಸುತ್ತಿರಲಿಲ್ಲ. ಮನೆ, ಹೊಲ ನೋಡಿಕೊಂಡು ಮಗ ಜೊತೆಗಿರಲಿ ಅನ್ನೋದು ಅವಳ ಆಸೆ. ಆದರೆ ಅಪ್ಪ, ಸರ್ವಸ್ವವನ್ನೂ ಧಾರೆ ಎರೆಯಲು ಸಿದ್ಧವಾಗಿದ್ದ. ತನ್ನ ಹಾಗೆ ಕೃಷಿ ನಂಬಿ, ಆರಕ್ಕೇರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿ ಮಗನಿಗೆ ಬೇಡ ಅನ್ನುತ್ತಿದ್ದ. ಕೃಷಿಯನ್ನು ನಂಬಿದ ತನಗೆ ಈ ನಾಲ್ಕು ಎಕರೆಯೇ ಆಸ್ತಿ; ಉನ್ನತವಾಗಿ ಓದಿದವನಿಗೆ ಇಡೀ ಪ್ರಪಂಚವೇ ಆಸ್ತಿ: ಅನ್ನುತ್ತಿದ್ದ. ಅಪ್ಪ ಆಡುತ್ತಿದ್ದ ಮಾತುಗಳೇ ಹಾಗೆ; ನಾನು ಇನ್ನಷ್ಟು ಮೋಟಿವೇಟ್ ಆಗುತ್ತಿದ್ದೆ. ಆದರೆ, ಸೆಕೆಂಡ್ ಪಿಯು ಆರಂಭವಾಗಿ ಇನ್ನೂ ನಾಲ್ಕು ತಿಂಗಳು ಕಳೆದಿರಲಿಲ್ಲ…, ಕುಟುಂಬ ತಲ್ಲಣಿಸಿಹೋಗಿತ್ತು!

ಅಪ್ಪ, ಆದಾಯವೇ ಇಲ್ಲದ ಕುಟುಂಬದ ಯಜಮಾನನಾಗಿದ್ದ. ಕೂಡಿಟ್ಟ ಹಣ ದಿನೇ ದಿನೇ ಕರಗುತ್ತಿತ್ತು. ನನ್ನ ಓದಿಗೆ ಲ್ಯಾಪ್ಟಾಪ್ ಬೇಕಿತ್ತು. ಆದರೆ, ಅಪ್ಪನ ಪರಿಸ್ಥಿತಿ ಕಣ್ಣೆದುರಿತ್ತು; ಕೇಳುವ ಧೈರ್ಯವಾಗುತ್ತಿರಲಿಲ್ಲ. ಅಪ್ಪ, ದಿನ‌ಬೆಳಗಾದರೆ ಪರಿಹಾರಕ್ಕಾಗಿ ಅಲೆದಾಡುತ್ತಿದ್ದ. ಮನೆಗೆ ಮರಳುವಾಗ ಅಪ್ಪನ ಮುಖ ಬಾಡಿರುತ್ತಿತ್ತು. ನನ್ನ ಕರುಳು ಚುರ್ ಅನ್ನುತ್ತಿತ್ತು. ಆದರೆ, ಕೇಳುವುದೇನನ್ನು? ಎಲ್ಲವೂ ತಿಳಿದ ಸಂಗತಿಯೆ. ಮನೆಯಲ್ಲಿ ಮಾತು ಕಡಿಮೆಯಾಗತೊಡಗಿತ್ತು. ನಿಟ್ಟುಸಿರು ಹೆಚ್ಚಾಗುತ್ತಿತ್ತು. ಹಸಿದು ಬಂದ ಅಪ್ಪನಿಗೆ ಊಟ ಬಡಿಸುವಾಗ ಅಮ್ಮ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಿದ್ದುದನ್ನು ಅದೆಷ್ಟು ಬಾರಿ ನೋಡಿದ್ದೆನೋ! ಮಾತನಾಡಲು ಬಾಯ್ತೆರೆದರೆ, ಮೊದಲಾಗಿ ಕಣ್ಣೀರು ಇಳಿಯುವುದನ್ನು ಅದೆಷ್ಟು ಸಲ ಕಂಡಿದ್ದೆನೋ! ಇಪ್ಪತ್ತು ವರ್ಷ ಅಮ್ಮನ ಕಣ್ಣಲ್ಲಿ ನೀರೂರದಂತೆ ನೋಡಿಕೊಂಡ ಅಪ್ಪನೆದುರು ಅಳು ನುಂಗಿ ನಡೆವ ಅಮ್ಮ, ಮರೆಯಲ್ಲಿ ಮುಖಕ್ಕೆ ಸೆರಗೊತ್ತಿ ಬಿಕ್ಕುತ್ತಿದ್ದಳು. ಅಪ್ಪನ ಸ್ಥಿತಿಯೂ ಅದಕ್ಕೆ ಹೊರತಾಗಿರಲಿಲ್ಲ! ಸದಾ ಪ್ರೀತಿ ವಿಶ್ವಾಸದ ಮಾತುಗಳೇ ಮುಂದಾಗಿದ್ದ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಅಂತಹ ಸ್ಥಿತಿಯಲ್ಲಿ ಓದುವುದಕ್ಕಿಂತ ಎಲ್ಲಿಯಾದರೂ ಕೆಲಸ ಹುಡುಕಿ ಅಪ್ಪನಿಗೆ ನೆರವಾಗುವ ಯೋಚನೆಯಾಗುತ್ತಿತ್ತು.

ಭೂಕುಸಿತವಾಗಿ ಆರು ತಿಂಗಳಾದರೂ ಪರಿಹಾರ ಕೈ ಸೇರಲಿಲ್ಲ. ನನ್ನ ಮೊದಲ ಸೆಮಿಸ್ಟರ್ ರಿಸಲ್ಟ್ ಬಂದಿತ್ತು. ಅಪ್ಪ ವಿಚಾರಿಸಿದ. ಮಾರ್ಕ್ಸ್ಕಾರ್ಡ ತೋರಿಸಿದೆ. ನೋಡಿದವ ಒಂದೂ ಮಾತನಾಡದೆ ನಿರ್ಭಾವದಿಂದ ನನ್ನ ಮುಖ ನೋಡಿ ನಿಟ್ಟುಸಿರಿಟ್ಟ. “ಅಪ್ಪ, ಏನಾದ್ರೂ ಹೇಳು” ಅಂದೆ. “ಹೇಳೋದೇನು ಮಗನೆ… ನೀನೂ ಮನೆ ಸದಸ್ಯ. ನಡೆದ ಘಟನೆ ನಿನ್ನ ಮನಸ್ಸನ್ನೂ ಹಾಳು ಮಾಡಿದ್ದು ಸಹಜ…” ಅನ್ನುತ್ತ ಕಣ್ಣೊರೆಸಿಕೊಂಡ. “ಅಪ್ಪ, ಎಲ್ಲಾದ್ರೂ ಕೆಲಸಕ್ಕೆ ಸೇರ್ತೆ” ಅಂದೆ. ಅಪ್ಪನ ಗಂಟಲುಬ್ಬಿತು. ತುಟಿ ಅದುರತೊಡಗಿತು. “ಮಗಾ, ಒಂದು ಆಸ್ತಿ ಮಣ್ಣಾತು… ನಮಗಿರೋ ಇನ್ನೊಂದು ಆಸ್ತಿ ನೀನು. ನಿನ್ನ ಭವಿಷ್ಯಕ್ಕೆ ಮಣ್ಣು ಮುಚ್ಚದೆ ಇರಲಿ” ಗದ್ಗದಿಸಿದ. ಆ ಕ್ಷಣಕ್ಕೆ ಅಪ್ಪನನ್ನು ತಬ್ಬಿ ಸಂತೈಸಿದ್ದೆ. ಅಪ್ಪ ಮಗನಾಗಿದ್ದ!

ತುಂಬಿನಿಂತ ಕಣ್ಣುಗಳಿಂದ ಅಪ್ಪನ ಅಂಜಲಿಯನ್ನು ಅಮ್ಮ ತನ್ನ ಒಡವೆಗಳಿಂದ ತುಂಬಿಸಿದ್ದಳು. ಹೇಗೂ ಎರಡು ಕೋಟಿ ಪರಿಹಾರ ಬಂದೇ ಬರುತ್ತದೆ ಅನ್ನುವ ವಿಶ್ವಾಸ ಅಪ್ಪನಿಗಿತ್ತು. “ಜೀವ ಉಳಿದ್ರೆ ಜೀವನ; ಜಾರೋ ಗುಡ್ಡ, ಮನೆ ಮೇಲೆ ಬರೋತನ್ಕ ಕಾಯೋದ್ ಹ್ಯಾಗೆ?” ಅನ್ನುತ್ತಿದ್ದವ ಬೇರೆಡೆ ಜಮೀನು ಮನೆ ಖರೀದಿಸಿಯೇ ಬಿಟ್ಟ! ಅಪ್ಪ, ಮೊದಲ ಸಲ ಸಾಲಗಾರನಾದ. ನಾನು ಸಿಇಟಿ ಬರೆದು ಎಜ್ಯುಕೇಶನ್ ಲೋನ್ ದೊರೆತು ಎಂಜಿನೀಯರಿಂಗ್ ಸೇರಿಕೊಂಡೆ.

ಗುರುತು ಪರಿಚಯವಿಲ್ಲದ ಊರ ಹೊಸ ಜಮೀನಿನ ಒಂದೆಕರೆ ಅಡಿಕೆ ಕೊಯ್ಲು ಮಾಡಿದ್ದ ಅಪ್ಪ. ಬಂದ ಆದಾಯದಲ್ಲಿ ಬಹುಪಾಲು ಸಾಲಕ್ಕೆ ಹೋಗಿತ್ತು. ಇನ್ನು ತೋಟ ಗೇಯಿಸೋದು ಹೇಗೆ…, ಸಂಸಾರ ಮತ್ತವನ ಅಲೆದಾಟಗಳ ಖರ್ಚು ನಿಭಾಯಿಸೋದು ಹೇಗೆ? ಅಮ್ಮನಿಗೂ ಗುಟ್ಟು ಕೊಡದ ಅಪ್ಪ, ಕರೆದಲ್ಲಿ ಕೂಲಿ ಕೆಲಸಕ್ಕೆ ಹೋಗತೊಡಗಿದ್ದ. ಆಘಾತಕ್ಕೆ ಜಗ್ಗಲಿಲ್ಲ.., ಕಷ್ಟಕ್ಕೆ ಬಗ್ಗಲಿಲ್ಲ.. ಅಪ್ಪ, ಎಂದೂ ಬದುಕಿಗೆ ಬೆನ್ನು ತೋರಿದವನೇ ಅಲ್ಲ…! ಆದರೆ, ನಾನು ಡಾಕ್ಟರ್ ಆಗಬೇಕೆಂದು ಕನಸುಕಂಡಿದ್ದ; ಅದು ನನ್ನಿಂದಾಗಲಿಲ್ಲ, ನೀಟ್ ಅಂಕ ಬರಲಿಲ್ಲ. ಡೊನೇಶನ್ ಸೀಟ್ ಸಾಧ್ಯವೇ ಇರಲಿಲ್ಲ, ಬೇಡವೆಂದೆ. ಅಪ್ಪ ಅದೆಲ್ಲವನ್ನೂ ತನ್ನ ಹೆಗಲಿಗೇರಿಸಿಕೊಂಡು ಖಿನ್ನನಾದ.

ಭೂಕುಸಿತವಾಗಿ ವರ್ಷ ಕಳೆದರೂ ಪರಿಹಾರವಿಲ್ಲ. ಅಪ್ಪ ಸೋಲತೊಡಗಿದ್ದು ಅವನ ನಡುಗುವ ಧ್ವನಿಯಿಂದ ಅರ್ಥವಾಗುತ್ತಿತ್ತು. ದೂರದಿಂದಲೆ ಧೈರ್ಯ ತುಂಬುತ್ತಿದ್ದೆ. ಮೊದಮೊದಲು ಪ್ರತಿದಿನ‌ ಫೋನಿಗೆ ಬರುತ್ತಿದ್ದ ಅಪ್ಪ, ಕೊನೆ ಕೊನೆಗೆ ವಾರಕ್ಕೊಮ್ಮೆಯೂ ಮಾತನಾಡದವನಾದ. ಅಪ್ಪ ಖಿನ್ನತೆಗೆ ಜಾರುತ್ತಿರುವುದನ್ನು ಅಮ್ಮನಲ್ಲಿ ಹೇಳಿದಾಗಲೆಲ್ಲ ಅವಳು ಅಳುತ್ತಿದ್ದಳು. “ಅಪ್ಪ, ಇನ್ನು ಕೇವಲ ಮೂರು ವರ್ಷ… ಹೇಗಾದ್ರೂ ಸಹಿಸು” ಅಂದಿದ್ದೆ. “ಹುಂ..” ಅನ್ನುವಾಗ ಕಣ್ಣೀರು ಅಪ್ಪನ ಗಂಟಲು ಕಟ್ಟಿತ್ತು.

ಆ ದಿನ, “ಮಗಾ, ಪರಿಹಾರ ಬಂತೂ ಅಂತಾತು. ಏಳು ದಿನದೊಳಗೆ ಬ್ಯಾಂಕ್ ಡಿಟೇಲ್ಸ್ ಕೊಡುಲೆ ನೋಟೀಸ್ ಮಾಡಿದ್ದ” ಅಪ್ಪ ಅವನಾಗಿ ಖುಷಿಯಿಂದ ಫೋನ್ ಮಾಡಿದ್ದ. ಲ್ಯಾಬ್ ನಲ್ಲಿದ್ದ ನನ್ನ ಸಂತೋಷಕ್ಕೆ ಪಾರವಿರಲಿಲ್ಲ. ಸಂಜೆ ತುಂಬ ಹೊತ್ತು ಅಪ್ಪನೊಂದಿಗೆ ಮಾತನಾಡಿದ್ದೆ. ಇನ್ನು ಕಷ್ಟದ ದಿನಗಳು ಕಳೆಯಿತು ಅಂದುಕೊಂಡೆವು. ಅಮ್ಮನ ಒಡವೆ ಬಿಡಿಸಿಕೊಳ್ಳುವುದು, ಇರುವಲ್ಲಿಯೇ ಪುಟ್ಟದೊಂದು ಮನೆ ಕಟ್ಟುವುದು, ನನ್ನ ಮದುವೆ ಮಾಡುವ ತನಕದ ಆಸೆಗಳನ್ನೆಲ್ಲ ಅಪ್ಪ ಹೇಳಿಕೊಂಡ. ಪರಿಹಾರದ ಮೊತ್ತದ ಮೇಲೆ ನನಗೆ ಅನುಮಾನವಿದ್ದರೂ ಅಪ್ಪ ಸಂತೋಷದಿಂದ ಮಾತನಾಡಲಿ ಎಂದು ಕೇಳಿಸಿಕೊಂಡೆ. ಮಾರನೆಯ ದಿನವೇ ಅಪ್ಪ ಬ್ಯಾಂಕ್ ಡಿಟೇಲ್ಸ್ ಕೊಟ್ಟು ಬಂದಿದ್ದ.

ತಿಂಗಳಾಗಿತ್ತು. ತುಂಬ ಗಾಬರಿಗೊಂಡು ಅಮ್ಮ ಫೋನ್ ಮಾಡಿದ್ದಳು. ಎಕರೆಗೆ ಹತ್ತು ಲಕ್ಷದಂತೆ ಪರಿಹಾರ ಜಮಾ ಆಗಿದ್ದನ್ನು ತಿಳಿದ ಅಪ್ಪ ತಹಶೀಲ್ದಾರರೆದುರು ಆವೇಶಗೊಂಡು ಮಾತನಾಡಿದ್ದಕ್ಕೆ ಆತಂಕಿತಳಾಗಿದ್ದಳು. ತಹಶೀಲ್ದಾರರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರೂ ಅಪ್ಪನ ಆವೇಶ ಇಳಿಯದೆ ಅಲ್ಲೇ ಕುಸಿದು ಬಿದ್ದು, ಸಧ್ಯ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ ಎಂದೂ‌ ಅಮ್ಮ ತಿಳಿಸಿದ್ದಳು. ನನ್ನ ಊಹೆ ತಪ್ಪಾಗಲಿಲ್ಲ. ಅಪ್ಪ ಕನಸು ಕಾಣುತ್ತಿರುವುದನ್ನು ಅಂದೇ ಎಚ್ಚರಿಸಬೇಕಿತ್ತು ಅನ್ನಿಸಿತು. ಇನ್ನೇನೋ.. ಅನ್ನುವ ಗಾಬರಿಯಲ್ಲಿ ಬಸ್ ಬುಕ್ ಮಾಡಿ ಮನೆಗೆ ಹೊರಟಿದ್ದೆ.

ಕತ್ತಲು ಹರಿಯುವ ಮುನ್ನವೆ ಮನೆಯಲ್ಲಿದ್ದೆ. ಅಪ್ಪ ಮಲಗಿದ್ದ. ಪಕ್ಕ ಕುಳಿತು ಕೈ ಹಿಡಿದುಕೊಂಡೆ. ನಿಧಾನವಾಗಿ ಕಣ್ತೆರೆದ ಅಪ್ಪ ನನ್ನತ್ತ ನೋಡಿದ. ಕ್ಷಣವೆ ಕಣ್ಣಾಲಿಗಳು ತುಂಬಿ ಉರುಳಿದ ಎರಡು ಹನಿಗಳನ್ನು ದಿಂಬು ನುಂಗಿತು. ಎದೆ ಬಿಗಿದಂತಾಯಿತು. ಸಂಕಟ. ಕುಳಿತುಕೊಳ್ಳುವ ಪ್ರಯತ್ನಮಾಡಿದ ಅಪ್ಪನ ಬೆನ್ನಿಗೆ ಕೈ ಇಟ್ಟೆ. ಆ ಕ್ಷಣದಲ್ಲಿ ಅಪ್ಪನಿಗೆ ಧೈರ್ಯತುಂಬುವ ಅಗತ್ಯವಿತ್ತು. ಆದರೆ, ಅಪ್ಪ ಆಗಲೆ ಎಲ್ಲವನ್ನೂ ಯೋಚಿಸಿಯಾಗಿತ್ತು. ಹೇಳಿದ: “ಮಗಾ, ಇನ್ನು ಮೈಮೇಲೆ ಸಾಲ ಇಟ್ಗಂಬಲಾಗ… ಮುಕ್ತಿ ಪಡೀತೆ”

ಅಪ್ಪ ಸುಧಾರಿಸಿಕೊಳ್ಳುತ್ತಿದ್ದ. ತಿಂಗಳು ಕಳೆದೊಂದುದಿನ ಅಪ್ಪ ಫೋನ್ ಮಾಡಿ, “ಮಗಾ, ಋಣಮುಕ್ತನಾದೆ” ಅಂದ. ಪರಿಹಾರದ ಮೊತ್ತವನ್ನೆಲ್ಲ ಜಮೀನು ಖರೀದಿಸಿದ ಸಾಲಕ್ಕೆ ಜಮಾ ಕೊಟ್ಟಿದ್ದ. ಅಮ್ಮನ ಒಡವೆ ಬಿಡಿಸಿಕೊಳ್ಳೋದು ಬಾಕಿ ಇದೆ ಅಂದಿದ್ದ. ಅದಕ್ಕೆ ಐದು ಲಕ್ಷ ಬೇಕಿತ್ತು. ಆ ಬಗ್ಗೆ ಚಿಂತಿಸೋದು ಬೇಡ.. ಅದು ನನ್ನ ಹೆಗಲಿಗಿರಲಿ ಅಂತ ವಿಶ್ವಾಸ ತೋರಿದ್ದೆ. ಮೂರು ವರ್ಷ ಹೇಗೋ ಬಡ್ಡಿ ಕಟ್ಟಿಕೊಂಡರಾಯ್ತು ಅಂದಿದ್ದೆ. “ಆ ಭಾರ ನಿನ್ನದಲ್ಲ ಮಗಾ..” ಅಂದವ ಫೋನ್ ಕಟ್ ಮಾಡಿದ್ದ.

ಅಷ್ಟೆ. ಸೆಕೆಂಡ್ ಸೆಮಿಸ್ಟರ್ ಎಕ್ಸಾಮ್ ಮುಗಿಸಿ ಹಾಸ್ಟೆಲ್ಲಿಗೆ ಬಂದು ರಿಲ್ಯಾಕ್ಸ್ ಆಗಿದ್ದೆ. ಅನ್ನೌನ್ ನಂಬರಿನ ಕಾಲ್ ರಿಂಗುಣಿಸಿತು. ರಿಸೀವ್ ಮಾಡಿದರೆ, ಎದೆಯೊಡೆದ ಸುದ್ದಿ! ಅಪ್ಪ ಇನ್ನಿಲ್ಲ! ಆತ್ಮಹತ್ಯೆ ಮಾಡಕೊಂಡಿದ್ದ!! ನಂಬಲಾಗಲಿಲ್ಲ.., ವಿಚಾರಿಸಿದರೆ ಫೋನ್ ಮಾಡಿದವ ದೂರದ ಸಂಬಂಧಿ. ಅಮ್ಮ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ! ಗುಡ್ಡದ ಮಣ್ಣೊಳಗೆ ಸಿಲುಕಿ ಉಸಿರುಗಟ್ಟಿದಂತಾಗಿತ್ತು. ಅಪ್ಪ ಅನುಭವಿಸಿದ ಅಂಥದೇ ಶೂನ್ಯದ ವಶವಗಾಗಿ ಹೋಗಿದ್ದೆ!!

ಕ್ಷಣವೂ ತಡಮಾಡದೆ ಉಟ್ಟ ಬಟ್ಟೆಯಲ್ಲಿ ಬಸ್ ಹತ್ತಿದೆ. ಅಂತರಂಗ ವಿಹ್ವಲಗೊಂಡಿತ್ತು. ಆಳದಲ್ಲಿ ತಡೆಯಲಾಗದ ಸಂಕಟ! ಅದೆಷ್ಟು ಆಲೋಚನೆಗಳು..! ಪ್ರಾರ್ಥನೆಗಳು..! ಉಮ್ಮಳಿಸುವ ದುಃಖಕ್ಕೆ ಸುತ್ತ ಮುತ್ತಲ ಪ್ರಪಂಚವೇ ಕಾಣುತ್ತಿರಲಿಲ್ಲ!! ಕ್ಷಣ ಕ್ಷಣಕ್ಕೂ ಹೆತ್ತವರಿಂದ ಅದೆಷ್ಟು ದೂರವಿದ್ದೇನೆ ಅನ್ನುವ ಅನುಭವ, ಸಾಗದ ದಾರಿ! ಅಂತೂ ಬಸ್ ಇಳಿದವನೇ.. ದಾರಿಯನ್ನೇ ನೋಡದೆ ಮನೆಯತ್ತ ಓಡಿದೆ. ನಿಶ್ಚಲ ಅಪ್ಪನ ಪಕ್ಕ ನಿರ್ಭಾವುಕಳಾಗಿ ಕುಳಿತಿದ್ದ ಅಮ್ಮ ನನ್ನ ಕಂಡೊಡನೆ ಓಡಿ ಬಂದು ಬಿಗಿದಪ್ಪಿ ಕಣ್ಣೀರಿನ ಪ್ರವಾಹದಲ್ಲಿ ತೊಯಿಸಿಬಿಟ್ಟಿದ್ದಳು!

ಎಲ್ಲ ಮುಗಿಯಿತೆನ್ನುವ ಭಾವದಲ್ಲಿದ್ದಾಗಲೆ, ಐಓ ಬಂದು ಅಪ್ಪನ ಕಿಸೆಯಲ್ಲಿದ್ದ ಮುಚ್ಚಿದ ಲಕೋಟೆಯನ್ನು ನನಗೆ ಕೊಟ್ಟು, ನೋಡೋದಕ್ಕೆ ಹೇಳಿದರು. ಲಕೋಟೆಯ ಮೇಲೆ ನನ್ನ ಹೆಸರಿತ್ತು ಮತ್ತು ನಾನೇ ನೋಡಬೇಕೆನ್ನುವ ಅಪೇಕ್ಷೆ ಇತ್ತು. ನುಗ್ಗಿ ಬಂದ ಶೋಕವನ್ನು ತಡೆದು ಓಪನ್ ಮಾಡಿದೆ. ನನಗಾಗಿ ಬರೆದ ಪತ್ರ. ಅದು ಡೆತ್ ನೋಟ್ ಕೂಡ ಆಗಿತ್ತು. ಕೆಲವೇ ಶಬ್ದಗಳ ಬರಹವಿತ್ತು.

ಮಗನೆ,

ನನ್ನ ಸಾವಿಗೆ ನಾನು ಕಾರಣನಲ್ಲ; ಸರ್ಕಾರ ಕಾರಣ! ನೆಲವನ್ನು ನಂಬಿ ನಿಂತ ನಮ್ಮ ತೋಟವನ್ನ ನೆಲವೇ ನುಂಗಿತು… ಪರಿಹಾರದ ಭರವಸೆಯಲ್ಲಿ ಸರ್ಕಾರವನ್ನು ನಂಬಿದ್ದ ನನ್ನನ್ನು ಸರ್ಕಾರವೇ ನುಂಗಿತು.

ನನ್ನ ಬದುಕಿಗೆದುರಾದ ಆಘಾತಗಳನ್ನು ಎದುರಿಸಿ ನಿಲ್ಲುವಷ್ಟು ನನ್ನ ಜೀವನವಿರಲಿಲ್ಲ.. ಸೋತೆ! ನನ್ನಂತೆ ನೀನಾಗಬೇಡ. ಎದುರಾಗುವ ಸಮಸ್ಯೆಗಳಿಗಿಂತ ಬದುಕನ್ನು ದೊಡ್ಡದಾಗಿ ನೀನೇ ರೂಪಿಸಿಕೊಳ್ಳಬೇಕು.

ಅಂತಹ ವಿಕೋಪಕ್ಕೆ ಸಿಗದ ಪರಿಹಾರ ರೈತನ ಆತ್ಮಹತ್ಯೆಗೆ ಸಿಗುತ್ತದೆ. ನನ್ನ ಸಾವಿಗೆ ಸರ್ಕಾರ ಐದು ಲಕ್ಷ ಕೊಡಬಹುದು. ಕೊಟ್ಟಲ್ಲಿ ಅಮ್ಮನ ಒಡವೆಗಳನ್ನು ಬಿಡಿಸು. ನನಗಾಗಿ ವ್ಯಥೆ ಬೇಡ. ನಿನ್ನಮ್ಮನಿಗೆ ನೀನೇ ಆಸರೆ.

ವಿದಾಯ….

*
ಮೂರು ವರ್ಷ ಕಳೆದಿದೆ. ತೋಟದ ಮಧ್ಯದಲ್ಲಿ ಅಪ್ಪನ ನೆನಪಿನ ಸಮಾಧಿ ಕಟ್ಟೆಯ ಮೇಲೆ ನನ್ನ ಮೊದಲ ಸ್ಯಾಲರಿಯಿಡುತ್ತಿದ್ದಂತೆ ನೆನಪುಗಳು ದಟ್ಟೈಸಿತ್ತು. ಹಾಗೆ… ಕಟ್ಟೆಯ ಮೇಲೆ ಕೈ ಇಟ್ಟು ತಲೆಯಾನಿಸಿದೆ. ಅಪ್ಪನ ಮಡಿಲ ಅನುಭವ!
***

-ಟಿ.ಆರ್. ಪ್ರಕಾಶ ಭಾಗವತ, ಶಿರಸಿ. 9902720407, 7019360579

Continue Reading

ಅಂತರಂಗ

ದೇವನಗರಿ ಸುದ್ದಿದಿನ ವಿಶೇಷಾಂಕ; ಗೋವರ್ಧನರ ಆಸಕ್ತಿ ಹಾಗು ಅಕ್ಷರ ಪ್ರೀತಿಯ ಪ್ರತಿಬಿಂಬ

Published

on

ಸುದ್ದಿದಿನ ಪತ್ರಿಕೆ ಗೋವರ್ಧನರಿಗೆ ಪ್ರೀತಿಯ ಮಗು. ಅದಕ್ಕೀಗ ಐದು ವರ್ಷ. ಅನ್ನುವ ಭಾವದಲ್ಲಿ ನನಗೆ ಅನ್ನಿಸಿದ್ದನ್ನು ಹೇಳಬೇಕಾದ ಒಂದು ವಾಕ್ಯ; “ಹೆತ್ತಪ್ಪನ ಖುಶಿ, ಪತ್ರಿಕೆಯ ವಿಶೇಷಾಂಕದ ತುಂಬ ಬೆಳಕಿನ ಬೀಜ ಬಿತ್ತಿದೆ.”

ಅಕ್ಷರ ಕೃಷಿ ಕೂಡ ಸುಲಭದ್ದಲ್ಲ. ಅದರಲ್ಲಿಯೂ “ಬೆಳೆಯಬೇಕು” ಮತ್ತು “ಬೆಳೆಸಬೇಕು” ಅನ್ನುವ ಹೃದಯವಂತಿಕೆ ಕಾಣಸಿಗುವುದು ಅಪರೂಪ. ಜಿಲ್ಲಾ ಮಟ್ಟದ ಪತ್ರಿಕೆ ರಾಜ್ಯ ಸ್ತರೀಯ ದೀಪಾವಳಿ ವಿಶೇಷಾಂಕ ಪ್ರಕಟಿಸುವ ಮತ್ತು ಕಥೆ-ಕವಿತೆಗಳಿಗೆ ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸಿ ನಿರ್ವಹಿಸಿದ್ದು ಕೂಡ ಅಷ್ಟೇ ಅಪರೂಪ.

ಪತ್ರಿಕೋದ್ಯಮವೆಂದರೆ, ಮೈಮೇಲೆ ಚೇಳುಗಳನ್ನು ಬಿಟ್ಟುಕೊಳ್ಳುವ ವ್ಯಸನ! ಆಗಾಗ ಕುಟುಕುವ ನಂಜುಣ್ಣುತ್ತಲೆ ವಿಷಕಂಠನಂತೆ ಸ್ಥಿತಪ್ರಜ್ಞನಾಗಿ ದುಡಿಯುವ ಸಂಪಾದಕನ ಹೊಣೆ ಸಣ್ಣದಲ್ಲ! ಬೆರಳ ತುದಿಯಿಂದ ಜಗವ ತೆರೆಯುವ ಈ ಕಾಲದಲ್ಲಿ ದಿನ ಪತ್ರಿಕೆ ನಡೆಸುವುದು ತುಂಬ ಸಾಹಸದ ಕೆಲಸ. ಅದನ್ನು ತಪವೆಂದುಕೊಂಡರೂ ಪರಿತಾಪ ತಪ್ಪಿದ್ದಲ್ಲ! ಹೀಗಿರುವಾಗ, ಜಿಲ್ಲಾ ಪತ್ರಿಕೆಯೊಂದು ತನ್ನ ಐದನೇ ವರ್ಷದಲ್ಲಿ ಇಂಥದೊಂದು ಜಿಗಿತ ಪ್ರದರ್ಶಿಸುತ್ತಿರುವುದು ಅಸಾಮಾನ್ಯ ಸಂಗತಿ! ಸಂಪಾದಕರ ಎದೆಗಾರಿಕೆಗೆ ಮೆಚ್ಚಲೇ ಬೇಕು!

ಉತ್ತರಕನ್ನಡ ಜಿಲ್ಲೆಯಲ್ಲಿ “ಸುದ್ದಿದಿನ” ಸುದ್ದಿಮಾಡಿದ್ದು ಪ್ರಾಯಶಹ ಈ ಕಥಾ ಸ್ಪರ್ಧೆಯಿಂದಲೇ. ರಾಜ್ಯ ಮಟ್ಟದಲ್ಲಿ ಕೂಡ ಪತ್ರಿಕೆಯ ಹೆಸರು ಪ್ರಚಲಿತವಾಗಿದೆ ಅನ್ನುವುದು ನನ್ನ ಭಾವನೆ. ಕಥಾ ಸ್ಪರ್ಧೆಗೆ ಕಥೆ ಕಳುಹಿಸಿದ್ದ ನನಗೆ ನಾಲ್ಕನೆಯ ಬಹುಮಾನ ಬಂತು. ಅದು ನನಗೂ ಸಮಾಧಾನಕರವೆನ್ನಿಸಿದ್ದು, ತೀರ್ಪುಗಾರರ ಮೊದಲ ಮೂರು ಕಥೆಗಳನ್ನು ಓದಿದಾಗ! ಬಹುಶಹ ಕವಿತೆಗಳನ್ನು ಕಳುಹಿದವರ ಅನುಭವವೂ ಹೀಗೆಯೇ ಇರಬೇಕು. ಆಯ್ಕೆಯಾದ ಕವಿತೆಗಳಲ್ಲಿ ಹೊಸತನವಿದೆ, ಚಿಂತನೆ ಇದೆ. ಇಲ್ಲಿ ಸ್ಪರ್ಧೆ ಯುದ್ಧವಾಗಿಲ್ಲ ಅನ್ನುವುದು ಸ್ಪಷ್ಟ! ಈ ನೆಲೆಯಲ್ಲಿ ತೀರ್ಪುಗಾರರೂ ಕೂಡ ಅಭಿನಂದನಾರ್ಹರು. ಅನೇಕ ಸಂದರ್ಭಗಳಲ್ಲಿ ಇದಕ್ಕೆ ವ್ಯತಿರಿಕ್ತ ಅನುಭವವಾಗುವುದಿದೆ. ತತ್ವ ಮತ್ತು ಸತ್ವಾಧಾರಿತ ನಿಲುಮೆಯ ಸಂಪಾದಕರಿದ್ದರೆ ಮಾತ್ರವೇ ಸ್ಪರ್ಧೆಗಳು ನ್ಯಾಯಯುತವಾಗಿರುತ್ತವೆ. ಇಲ್ಲಿ ಅಂತಹ ಸುಹೃದ ಅನುಭವ ನನಗಂತೂ ಆಗಿದೆ.

ವಿಶೇಷಾಂಕ ಕೈಸೇರಿದ ದಿನದಿಂದ ಮೂರ್ನಾಲ್ಕು ದಿನ ಅದರಲ್ಲಿಯೇ ಮುಳುಗಿದ್ದೆ. ಅಷ್ಟರ ಮಟ್ಟಿಗೆ ಅದು ನನ್ನನ್ನು ಹಿಡಿದಿಟ್ಟುಕೊಂಡಿತು. ವರ್ತಮಾನದ ಓದುಗ ವಲಯ ಇಷ್ಟಪಡುವಂತಹ ಸಂಗತಿಗಳನ್ನೇ ಪಾಕಗೊಳಿಸಿ ಬಡಿಸಿದ ಮೃಷ್ಟಾನ್ನದಂತೆ ಲೇಖನಗಳು, ಸಂದರ್ಶನಗಳು, ವ್ಯಕ್ತಿ ಪರಿಚಯಗಳು, ವೈಚಾರಿಕ ಪ್ರಬಂಧಗಳು ನಡುನಡುವೆ ಕವಿತೆಗಳು ಎಲ್ಲವೂ ಮುದನೀಡುವಂತಿದ್ದರೆ ಇಡೀ ವಿಶೇಷಾಂಕದ ಮುನ್ನುಡಿಯಂತಿರುವ ಸಂಪಾದಕೀಯ ಒಂದಂಗುಲ ಮೇಲೆನ್ನಿಸಿ ಆಪ್ತವೆನ್ನಿಸಿತು.

ಗೋವರ್ಧನ ಗಿರಿಯವರ ಆಸಕ್ತಿ ಮತ್ತು ಧೋರಣೆಯಲ್ಲಿ ಸ್ಪಷ್ಟತೆಯಿದೆ. ಅವುಗಳ ನಿರ್ವಹಣೆ ಉತ್ತುಂಗವಾಗಿದೆ. ಸಂಪಾದಕರ ಅಂತರಂಗವನ್ನು ಬಹಿರಂಗಗೊಳಿಸಿದ ಭಾವಕ್ಕೆ ತಲೆ ತೂಗಿದೆ. ಅವರ ಕ್ಷಮತೆ, ಹೊತ್ತ ಹೊಣೆಗಾರಿಕೆ, ಸಂಚಿಕೆಯ ಪ್ರತಿ ಪುಟಗಳಲ್ಲಿ ಪ್ರತಿ ಅಕ್ಷರಗಳಲ್ಲಿಯೂ ಕಾಣಿಸಿದೆ. ಪತ್ರಿಕೋದ್ಯಮದೆಡೆ ಅವರಿಗೆ ಗಂಭೀರತೆ ಇದೆ. “ದೇವನಗರಿ ಸುದ್ದಿದಿನ” ಪತ್ರಿಕೆ, ಸಮಾಜದೆದುರಿನ ಕನ್ನಡಿಯಾಗಬೇಕು ಅನ್ನುವ ಅವರ ಹಂಬಲದಲ್ಲಿ ಪ್ರಾಮಾಣಿಕತೆಯಿದೆ. ಆ ನೆಲೆಯಲ್ಲಿಯೇ ವಿಶೇಷಾಂಕದ ಒಂದೊಂದೂ ಪುಟವನ್ನೂ ಅವರು ಅಳೆದು ತೂಗಿ ಕಾಳಜಿಯಿಂದ ಓದುಗರಿಗೊಪ್ಪಿಸಿದ್ದಾರೆ. ಅವರವರ ಆಸಕ್ತಿಗಳಿಗೆ ಒಂದಿಲ್ಲೊಂದು ಓದಿನ ಸಖ್ಯವನ್ನು ಹೊತ್ತಿಗೆ ಒದಗಿಸಿದೆ.

ಇನ್ನು, ಕಿರೀಟದೊಳಗಿನ ಮುತ್ತುಗಳಂತೆ ಪ್ರಕಾಶಿಸುವ ಚಿತ್ರಗಳು ಸಂಚಿಕೆಗೆ ಇನ್ನಷ್ಟು ಮೆರಗು ನೀಡಿವೆ. ಮುಖಪುಟದ ರೂಪದರ್ಶಿಯ ಸಹಜ ಸೌಂದರ್ಯ ಕಣ್ಣೆಳೆಯುವಂತೆ, ವಿಶೇಷಾಂಕ ಇಡೀಯಾಗಿ ಮನಸ್ಸನ್ನು ಮುಟ್ಟಿದೆ ಅನ್ನುವಲ್ಲಿ ಅನುಮಾನವಿಲ್ಲ. ಒಟ್ಟಾರೆಯಾಗಿ ಗೋವರ್ಧನರ ಶ್ರಮ ಮತ್ತು ಸಮಯ ಇಲ್ಲಿ ಸಾರ್ಥಕವಾಗಿದೆ.

ಅಭಿನಂದನೆಗಳು ಗೋವರ್ಧನ ಗಿರಿ ಹಾಗೂ ಅವರ ತಂಡಕ್ಕೆ.

–ಟಿ.ಆರ್. ಪ್ರಕಾಶ ಭಾಗವತ, ಶಿರಸಿ. 9902720407, 7019360579

Continue Reading

Trending