Connect with us

ಅಂತರಂಗ

ಧರ್ಮ ಮರ್ಮ-02 : ದೈವಿಕತೆಯ ಸೃಷ್ಟಿ

Published

on

  • ಯೋಗೇಶ್ ಮಾಸ್ಟರ್

ನಾಸ್ತಿಕ ಧೋರಣೆಯ ಧರ್ಮಗಳಿದ್ದರೂ ಅದಕ್ಕಿಂತ ಪುರಾತನವಾದ ಧರ್ಮಗಳಲ್ಲಿ ದೇವರೇ ಧಾರ್ಮಿಕ ಕೇಂದ್ರ. ಅವನ ಶಕ್ತಿ, ಅವನ ಸೃಷ್ಟಿ, ಅವನ ಒಲವು, ಅವನ ನಿಲುವು, ಅವನ ಕೋಪ, ಕಟ್ಟಕಡೆಗೆ ಮನುಷ್ಯನ ಮೇಲೆ ಅವನ ಪ್ರಭಾವ ಮತ್ತು ನಿಯಂತ್ರಣವೇ ಧಾರ್ಮಿಕತೆಯ ಪ್ರಾರಂಭ. ಬೌದ್ಧ ಧರ್ಮವೂ ಸೇರಿದಂತೆ ಹಲವಾರು ನಿರೀಶ್ವರವಾದದ ಅಂದರೆ ದೇವರನ್ನು ಕೇಂದ್ರವಾಗಿಟ್ಟುಕೊಳ್ಳದ ಧರ್ಮಗಳಿವೆ.

ಆದರೆ ಧಾರ್ಮಿಕತೆ ಎಂದಕೂಡಲೇ ದೇವರನ್ನು ಕೇಂದ್ರವಾಗಿರಿಸಿಕೊಳ್ಳುವುದು ರೂಢಿಯಾಗಿದೆ. ಅಬ್ರಹಾಮನ ಧರ್ಮವೇ ಮೊದಲಾಗಿ 1844ರಲ್ಲಿ ಹುಟ್ಟಿರುವ ಬಹಾಯಿಯವರೆಗೂ ಹಲವು ಧರ್ಮದವರೆಗೂ ದೇವರೇ ಕೇಂದ್ರ.

ಆದಿಮ ಕಾಲದಲ್ಲಿ ಯಾವ ಧರ್ಮಗಳೂ ಇರಲಿಲ್ಲ. ಬೇಟೆಯಾಡುತ್ತಿದ್ದ ಅಲೆಮಾರಿ ಗುಂಪುಗಳ, ಹಣ್ಣು ಕಾಯಿಗಳನ್ನು ಆಯುವ ಬುಡಕಟ್ಟುಗಳು, ನಂತರ ಕೃಷಿಯನ್ನು ಪ್ರಾರಂಭಿಸಿ ಮನುಷ್ಯ ನೆಲೆ ನಿಲ್ಲಲು ಪ್ರಾರಂಭಿಸಿದ ಮೇಲೂ ಧರ್ಮಗಳ ಕಲ್ಪನೆಗಳೇ ಇರಲಿಲ್ಲ. ಆದರೆ ದೇವರ ಪರಿಕಲ್ಪನೆ ಹುಟ್ಟಿತ್ತು. ಧರ್ಮಕ್ಕಿಂತ ದೇವರು ಹಳತು ಎಂಬುದು ನಿಜ.

ಧರ್ಮದ ಕೇಂದ್ರವನ್ನಾಗಿ ದೇವರನ್ನು ಹೊಂದಿದ್ದರೂ ದೇವರಿಗಾಗಿ ಧರ್ಮವು ಹುಟ್ಟಿದ್ದಲ್ಲ. ಈಗ ನಾವು ನೋಡುತ್ತಿರುವ ಎಲ್ಲಾ ಸ್ಥಾಪಿತ ಧರ್ಮಗಳೂ ಕೂಡ ಆಯಾ ಕಾಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘರ್ಷಗಳ ಫಲವೇ ಆಗಿವೆ. ಹಿಂದೂ ಧರ್ಮ ಮಾತ್ರ ಈ ಪಟ್ಟಿಗೆ ಸೇರುವುದಿಲ್ಲ. ಏಕೆಂದರೆ ಹಿಂದೂ ಧರ್ಮವು ಸ್ಥಾಪಿತ ಧರ್ಮವಲ್ಲ. ಅದೊಂದು ವಿಕಸಿತ ಧರ್ಮ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ವಿಕಾಸವಾಗುತ್ತಾ ಬಂದ ಜೀವನ ಪದ್ಧತಿಯು ಆಧ್ಯಾತ್ಮವೇ ಮೊದಲಾದ ಅನೇಕ ಅಂಶಗಳನ್ನು ತನ್ನದಾಗಿಸಿಕೊಂಡು ಧರ್ಮವೆಂದು ಕರೆಯಿಸಿಕೊಳ್ಳಲ್ಪಟ್ಟಿತು. ಇದರ ವಿಕಾಸದ ಪ್ರಕ್ರಿಯೆಯ ಬಗ್ಗೆ ಮುಂದೆ ವಿವರವಾಗಿ ನೋಡುತ್ತೇವೆ. ಈಗ ಸಧ್ಯಕ್ಕೆ ದೇವರ ಕಡೆ ತಿರುಗೋಣ.

ಆದಿ ದೇವರು

ಬೈಬಲ್ಲಿನ ಆದಿಕಾಂಡ ದೇವರು ತನ್ನ ರೂಪದಂತೆ ಪ್ರತಿರೂಪವಾಗಿ ಮನುಷ್ಯನನ್ನು ಸೃಷ್ಟಿ ಮಾಡಿದ ಎಂದು ಹೇಳುತ್ತದೆ. ಅದು ಬ್ಯಾಬಿಲೋನದ ಮಿಥಾಲಜಿಯಿಂದ ಎರವಲು ಪಡೆದಿರುವ ಕತೆ. ಅದೇನೇ ಇರಲಿ, ವಾಸ್ತವವೆಂದರೆ ಮನುಷ್ಯ ತನ್ನ ರೂಪದ ಪ್ರತಿರೂಪವಾಗಿ ದೇವರನ್ನು ಸೃಷ್ಟಿಸಿದ್ದು. ದೇವರು ಎನ್ನುವ ಪರಿಕಲ್ಪನೆಯೇ ಒಂದು ಬಗೆಯ ಭಾವುಕತೆಯಿಂದ ಅಥವಾ ಭಾವಾವೇಶದಿಂದ ಉಂಟಾಗಿರುವ ಮಾನವ ಸೃಷ್ಟಿಯೇ ಹೊರತು ಪ್ರಾಕೃತಿಕವಾಗಿಯಾಗಲಿ, ವೈಜ್ಞಾನಿಕವಾಗಿಯಾಗಲಿ ಎಂದಿಗೂ ಪ್ರಕಟಗೊಂಡಿರುವಂತಹ ಒಂದು ಪ್ರಾಯೋಗಿಕ ಸತ್ಯವೇನಲ್ಲ.

ಆದರೆ, ಯಾರಿಂದಲೇ ಆಗಲಿ, ಹೇಗೇ ಆಗಲಿ, ಆಗ ಸೃಷ್ಟಿಯಾದ ಈ ಪರಿಕಲ್ಪನೆಯು ಇಷ್ಟು ಬೃಹದ್ರೂಪ ತಾಳುವುದೆಂದು ಯಾರಿಗಾದರೂ ಕಲ್ಪನೆ ಇರಲಿಲ್ಲ. ಕೆಲವರಲ್ಲಿ ಅದೊಂದು ಮುಗ್ಧತೆಯ ಭಾವುಕ ಅಭಿವ್ಯಕ್ತತೆಯಾದರೆ ಮತ್ತೂ ಕೆಲವರಲ್ಲಿ ದಡ್ಡತನದ ವಿತಂಡವಾದದ ಪ್ರಕಟಣೆ ಮತ್ತು ಹಟಸಾಧನೆ.
ದೇವರೆಂಬ ಪರಿಕಲ್ಪನೆಯು ಹುಟ್ಟುವ ಮೂಲವೂ ಒಂದೇ ಏನು ಆಗಿರಲಿಲ್ಲ. ವಿವಿಧ ಸ್ಥಳಗಳಲ್ಲಿ, ವಿವಿಧ ಪ್ರೇರಣೆಗಳಿಂದ, ವಿವಿಧ ರೀತಿಯ ಅತಿಮಾನುಷವಾದಂತಹ ಪರಿಕಲ್ಪನೆಗಳಿಂದ ಮೊಳೆದವು.

ಪ್ರಕೃತಿಯ ವಿಸ್ಮಯಗಳಿಗೆ ಬೆರಗಾಗಿ, ಅಥವಾ ಪ್ರಕೃತಿಯ ರುದ್ರ ಸ್ವಭಾವಕ್ಕೆ ಹೆದರಿ ಅತಿಮಾನುಷಶಕ್ತಿಯೆಂದು ಗುರುತಿಸಿ ಹೆದರಿದರೆ ಅಥವಾ ಗೌರವಿಸಿದರೆ, ಸೃಷ್ಟಿಯಲ್ಲಿ ಹುಟ್ಟುವ ಪ್ರಕ್ರಿಯೆ ಮತ್ತು ಸಾಯುವ ಅನಿವಾರ್ಯತೆಗಳನ್ನು ಗಮನಿಸುತ್ತಾ ಅವುಗಳ ಬೇಧಿಸಲಾಗದ ರಹಸ್ಯಗಳನ್ನು ಅನುಸರಿಸಲು ಯತ್ನಿಸುತ್ತಾ ದೈವತ್ವದ ಪರಿಕಲ್ಪನೆಗೆ ತಗುಲಿಕೊಂಡರು.

ಕೆಲವೊಂದು ಸಂಸ್ಕೃತಿಗಳಲ್ಲಂತೂ ಸತ್ತ ಪಿತೃಗಳ ಆರಾಧನೆಯೇ ಕ್ರಮೇಣ ದೇವರ ಪರಿಕಲ್ಪನೆ ಗಟ್ಟಿಗೊಳ್ಳಲು ಸಾಧ್ಯವಾಯಿತು. ಅವುಗಳೆಲ್ಲಾ ನಂತರದ ದಿನಗಳಲ್ಲಿ ವಿವಿಧ ಸಂಸ್ಕೃತಿಗಳು ಪರಸ್ಪರ ಪರಿಚಯವಾದಂತೆಲ್ಲಾ ತಮ್ಮ ಪರಿಕಲ್ಪನೆಗೂ ಮತ್ತು ಇತರರ ಪರಿಕಲ್ಪನೆಗೂ ಸಾಮ್ಯತೆಗಳನ್ನು ಗುರುತಿಸಿಕೊಳ್ಳುತ್ತಾ ಅದನ್ನು ಏಕರೂಪದಲ್ಲಿ ಗ್ರಹಿಸಲಾರಂಭಿಸಿದರು. ಅದನ್ನೇ ಈಗ ನಾವು ಒಟ್ಟಾರೆ ದೇವರೆನ್ನಲು ಸಾಧ್ಯವಾಗುತ್ತಿದೆ.

ಆರ್ಯರಲ್ಲಿ ದೇವರ ಕಲ್ಪನೆಗಳ ಸಾಧ್ಯತೆ

ಅಲೆಮಾರಿಗಳಾಗಿದ್ದ ಆರ್ಯ ಬುಡಕಟ್ಟುಗಳು ಸ್ಥಳದಿಂದ ಸ್ಥಳಕ್ಕೆ ಚಲಿಸುವಾಗ ಅವರ ಮುಖ್ಯ ಗಮನಕ್ಕೆ ಮತ್ತು ಗೌರವಕ್ಕೆ ಬರುತ್ತಿದ್ದದ್ದು ಪ್ರಕೃತಿಯ ನೇರ ಕೊಡುಗೆಗಳು. ಭೂಮಿ, ಸೂರ್ಯ, ಚಂದ್ರ, ಗಾಳಿ, ನೀರು, ಅಗ್ನಿ ಇತ್ಯಾದಿ ಪ್ರಕೃತಿಯ ಕೊಡುಗೆಗಳ ಉಪಯುಕ್ತತೆಗೆ ಪ್ರಶಂಸಾರೂಪವಾಗಿ ಸ್ತುತಿಗಳನ್ನು ಮಾಡುತ್ತಾ, ಆರ್ಯ ಕವಿಗಳು ಅವುಗಳನ್ನು ಪ್ರತಿಮಾರೂಪದಲ್ಲಿಯೂ ಕೂಡ ಕಾಣುತ್ತಾ ಸಂವಹನ ನಡೆಸಲು ಯತ್ನಿಸಿದರು.

ಇವುಗಳೆಲ್ಲವೂ ರೂಪಕಗಳೇ ಹೊರತು, ಅವರಿಗೂ ಇವನ್ನು ಅದಕ್ಕಿಂತ ಹೆಚ್ಚಾಗಿ ಅರ್ಥೈಸಲು ಸಾಧ್ಯವಿರಲಿಲ್ಲ. ಅವರಿಗಿರುವ ಅನೇಕ ನಂಬುಗೆಗಳಂತೆ, ಆಕಾಶವೆಂಬುದು ಮೊಗಚಿ ಹಾಕಿದ ಬುಟ್ಟಿಯಂತೆ ಭೂಮಿಯ ಮೇಲಿದೆ, ಭೂಮಿಯು ಚಪ್ಪಟೆಯಾಗಿದೆ ಎಂದು ನಂಬುವಂತೆ, ಜೊತೆಗೆ ಪಿತು ಎಂಬ ಆಹಾರದ ದೇವನನ್ನು ಕಂಡುಕೊಂಡಿದ್ದಂತೆ, ಅನೇಕ ಇತರ ಅಗತ್ಯ ವಸ್ತುಗಳಿಗೆ ಮತ್ತು ಗುಣಗಳಿಗೆ ದೈವತ್ವವನ್ನು ಆರೋಪಿಸುತ್ತಿದ್ದದ್ದು ಗೌರವದಿಂದಲೇ ಹೊರತು, ಅದಕ್ಕೂ ತಮ್ಮಂತೆ ಮನಸ್ಸು, ಭಾವನೆ, ಕ್ರೋಧಾ, ಒಲವು ಇತ್ಯಾದಿ ಮಾನವ ರೀತಿಯ ಗುಣಗಳಿವೆ ಎಂತಲ್ಲ.

ಆದರೆ, ಆರ್ಯರು ಒಂದೆಡೆ ನೆಲೆ ನಿಲ್ಲಲು ಯತ್ನಿಸುತ್ತಿದ್ದಂತೆ, ಕೊಂಚ ಮಟ್ಟಿಗೆ ಅಲೆದಾಟದ ಪಾಡು ಕ್ಷೀಣಿಸುತ್ತಿದ್ದಂತೆ, ತಮ್ಮ ಪರಿಕಲ್ಪನೆಗಳನ್ನು ಮತ್ತಷ್ಟು ಬಲಗೊಳಿಸತೊಡಗಿದ್ದರು. ಯಾವುದೇ ಪರಿಕಲ್ಪನೆಯ ಜನಕರು ತಮಗಿಂತ ಬುದ್ಧಿಮತ್ತೆಯಲ್ಲಿ, ವೈಚಾರಿಕ ಶಕ್ತಿಯಲ್ಲಿ ಕಡಿಮೆಯಿರುವವರಿಗೆ ತಮ್ಮ ವಿಚಾರವನ್ನು ತಲುಪಿಸಲು ಹೋದಾಗ, ಅವರಿಗಾಗುವ ಅರ್ಥಗ್ರಹಣವಾಗಲಿ, ರಸಾನುಭವವಾಗಲಿ ಪೂರ್ಣವಾಗಿ ಆಗುವುದಿಲ್ಲ.

ತಮಗೆ ಅಷ್ಟು ಮೇದಾವಂತಿಕೆ ಇಲ್ಲವೆಂದು ಒಪ್ಪಿಕೊಳ್ಳುವ ಮುಗ್ಧರು ನೇರವಾಗಿ, ಅಕ್ಷರಶಃ ಬುದ್ಧಿವಂತರ ಅಥವಾ ಪರಿಕಲ್ಪನೆಯ ಹರಿಕಾರರ ವಿಷಯವನ್ನು ಒಪ್ಪಿಕೊಳ್ಳುತ್ತಾರೆ. ಅವರ ಸ್ವೀಕೃತಿಯು ಆ ಪರಿಕಲ್ಪನೆಯ ಸಾಕಾರಭಾವವನ್ನೇ ಹೊಂದಿರುತ್ತದೆ. ಅದಕ್ಕಿಂತ ಆಚೆಗೆ ಆಲೋಚಿಸಲು ಅವರಿಗೆ ಬಹುಶಃ ಸಾಧ್ಯವಿರುವುದಿಲ್ಲ. ಅಂಥ ಮುಗ್ಧರು ಒಂದು ಬಗೆಯಲ್ಲಿ ಇಂತಹ ಪರಿಕಲ್ಪನೆಗಳನ್ನು ಕೊಂಡೊಯ್ಯುತ್ತಿದ್ದರೆ, ಮೂರ್ಖರು ಅಥವಾ ಕಿಲಾಡಿ ಬುದ್ಧಿವಂತರು ಅದೇ ಪರಿಕಲ್ಪನೆಗಳನ್ನು ಮತ್ತೊಂದು ಬಗೆಯಲ್ಲಿ ಸಾಮಾನ್ಯರಲ್ಲಿ ಹರಡುವರು.

ಅದೇನೇ ಇರಲಿ, ಪ್ರಕೃತಿಯ ಅದ್ಭುತಗಳನ್ನು ಕಂಡ, ಅದರ ಅಪ್ರತಿಮವಾದ ವರದಾನಗಳನ್ನು ಮನಗಂಡ ಆರ್ಯ ದಾರ್ಶನಿಕರು ಮತ್ತು ಕವಿಗಳು ತಮ್ಮ ಕೃತಿಗಳಲ್ಲಿ ಅವನ್ನು ರೂಪಿಸಿದರು. ಈ ಎಲ್ಲಾ ಪ್ರಾಕೃತಿಕ ಅದ್ಭುತಗಳು ಶಕ್ತಿಗಳೆಂದೂ ಮತ್ತು ಶಕ್ತಿಗಳಿಂದ ಹೊರಡುವ ರಸಭಾವಗಳೆಂದೂ ಮನಗಂಡಿದ್ದರು. ಶಕ್ತಿಗಳ ಸ್ವರೂಪವನ್ನು ಮತ್ತು ರಸಗುಣವನ್ನು ಇತರೇ ವಸ್ತುಗಳಲ್ಲಿ ಅಥವಾ ವ್ಯಕ್ತಿಗಳಲ್ಲೂ ಹುಡುಕುವ ಅಥವಾ ಆಕಸ್ಮಿಕವಾಗಿ ಕಾಣುವ ಅಥವಾ ಗುರುತಿಸುವ ಶೋಧನೆಗಳೂ, ಜಿಜ್ಞಾಸುಪೂರ್ಣವಾದ ಅನ್ವೇಷಣೆಯನ್ನೂ ಮಾಡುತ್ತಿದ್ದರು.

ಆಗಲೇ ಅವರು ಕಂಡುಕೊಂಡ ಒಂದು ಅದ್ಭುತ ವಿಷಯವೆಂದರೆ, ವ್ಯಕ್ತಿಯಲ್ಲಿಯೂ ಒಂದು ಪ್ರಮಾಣದಲ್ಲಿ ಪ್ರಕೃತಿಯ ಶಕ್ತಿಯು ಅಂಶವಿದ್ದು ಅಥವಾ ಗ್ರಹಿಕೆಯಿದ್ದು, ಅವು ಕಾಲದೊಂದಿಗೆ ಹೆಚ್ಚುವುದು, ಅಥವಾ ಗಮನಿಸುವಂತಹ (ಧ್ಯಾನ) ಕ್ರಿಯೆಯಿಂದ ಅವುಗಳ ಗುಣಶಕ್ತಿಯು ಪ್ರಕಟವಾಗುವುದು ಎಂಬುದು. ಈ ಅರಿವೇ ವ್ಯಕ್ತಿಯನ್ನು ದೇವರನ್ನಾಗಿಸುವ ಪ್ರಕ್ರಿಯೆಗೆ, ಯೋಗ, ಧಾರಣ ಇತ್ಯಾದಿಗಳಾದ ತಂತ್ರ ಸಾಧನೆಗಳಿಗೂ ಪ್ರೇರಣೆಯಾಯಿತು.

ರಸವಿದ್ಯೆ ಮತ್ತು ದೇವವಿದ್ಯೆ

ಸಾಧಾರಣವಾದ ಲೋಹವನ್ನು ಚಿನ್ನವನ್ನಾಗಿಸುವ ರಸವಿದ್ಯೆಯನ್ನು ನೆನೆಪಿಸಿಕೊಂಡರೆ, ಮನುಷ್ಯನಿಗೂ ಅವನಿಗಿರುವ ಗುಣಶಕ್ತಿಯನ್ನು ಆಧರಿಸಿ ದೈವತ್ವಕ್ಕೇರಿಸುವ ಪ್ರಕ್ರಿಯೆ ಅಥವಾ ಆ ಬಗೆಯ ಆಲೋಚನೆಗಳು, ಪರಿಕಲ್ಪನೆಗಳು ಅರ್ಥವಾಗುತ್ತದೆ.

ಇದೇ ಮುಂದುವರಿದಂತೆ ತನ್ನನ್ನು ತಾನು ಹಾಗೆ ಪ್ರಕೃತಿಯ ಶಕ್ತಿಗಳಿಗೆ ಗುರುತಿಸಿಕೊಂಡವನು ಅಥವಾ ಗುರುತಿಸಲ್ಪಟ್ಟಂತಹ ಮಾನವನು ವಿಶೇಷವೆಂದು ಮಾನ್ಯವಾಗಿದ್ದೇ ಅಲ್ಲದೇ ಅವನ ವೈಯಕ್ತಿಕ ಗುಣಸ್ವಾಭಾವಗಳ ಮುಖೇನ ಇತರರೊಂದಿಗೆ ವ್ಯವಹರಿಸಬಹುದಾದ ಸಂಗತಿಗಳನ್ನು ಸಾಕ್ಷೀಕರಿಸಿದವರು ಅವನ್ನೂ ದಾಖಲು ಮಾಡತೊಡಗಿರುವ ಸಾಧ್ಯತೆಗಳು ಉಂಟು. ಹಾಗೆಯೇ ಅಲ್ಪಪ್ರಮಾಣಗಳಲ್ಲಿ ಗುರುತಿಸಲ್ಪಟ್ಟ ಅಂತಹ ಗುಣಸ್ವಭಾವಗಳು ಮತ್ತಷ್ಟು ಶಕ್ತಿಶಾಲಿಯಾಗಲೆಂದು ಯಾಗ ಯಜ್ಞ, ಮಂತ್ರ-ತಂತ್ರಗಳ ಮೂಲಕ ಉದ್ದೀಪನಗೊಳಿಸುವ ಯತ್ನಗಳೂ ಕೂಡ ನಡೆಯತೊಡಗಿದವು.

ತಾಂತ್ರಿಕತೆಯಲ್ಲಿ ಶಕ್ತಿಯ ಉದ್ದೀಪನಕ್ಕೆ ಗಮನೀಯವಾದ ಸ್ಥಾನವಿದೆ. ಅಂತಹ ಸೈದ್ಧಾಂತಿಕ ವಿಚಾರಗಳಿಂದ ಮತ್ತು ತಾಂತ್ರಿಕ ಆಚರಣೆಗಳಿಂದ ಮುಂದೆ ಪುರೋಹಿತರು, ತಾವದನ್ನು ನಂಬಲಿ ಬಿಡಲಿ, ಇತರರ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಬಳಸಿದರು.

ಆಚಾರಗಳು ವಿಚಾರಗಳನ್ನು ಗೌರವಿಸುವ ಸಂಕೇತಗಳಾಗಿ ಮುಂದುವರಿದವು. ಹಾಗೂ ನಂಬುಗೆಗಳು ಪರಿಕಲ್ಪನೆಗಳನ್ನು ನಿಜವಾಗಿಸುವ ಪ್ರಯತ್ನಗಳು ಅಥವಾ ಗೌರವಿಸುವ ಸಂಕೇತಗಳು. ಹಾಗಾಗಿ ಸೌಜನ್ಯದ ನೆಲೆಯಿಂದ ಒಪ್ಪಿಕೊಂಡಂತಹ ಅನೇಕ ವಿಚಾರಗಳು ಇಂದು ಬೃಹದಾಕಾರವಾಗಿ ಬೆಳೆದು ಮೂಲ ಭಾವನೆಗಳನ್ನೇ ಕದಡಿಬಿಟ್ಟಿವೆ.

ಆರ್ಯ ಮತ್ತು ದ್ರಾವಿಡ ದೇವರುಗಳು

ಭಾರತದಲ್ಲಿ ದ್ರಾವಿಡರೇ ಮೊದಲಾದ ಮೂಲನಿವಾಸಿಗಳು ಪ್ರಕೃತಿಯ ಆರಾಧಕರಾಗಿದ್ದು, ನಿಸರ್ಗದ ಮಕ್ಕಳಾಗಿದ್ದ ಅರಣ್ಯಕರು ಮತ್ತು ರೈತರು ಶವಸಂಸ್ಕಾರವನ್ನು ಭೂಮಿಯಲ್ಲಿ ಮಾಡುತ್ತಿದ್ದರು. ಅವರ ಮೃತ ಹಿರಿಯರ ಅಥವಾ ಇತರರ ಮರಣಾನಂತರದ ಅತಿಭೌತಿಕ ಶಕ್ತಿಯನ್ನು ಕಲ್ಪಿಸಿಕೊಂಡವರು ತಮ್ಮ ಪಿತೃಗಳನ್ನು ಗೌರವಿಸುತ್ತಿದ್ದರು. ತಮ್ಮ ಮೇಲಿನ ಪ್ರೇಮ ಮತ್ತು ಅನುರಾಗ ಅಥವಾ ಸೆಳೆತದಿಂದಾಗಿ ಮೃತರು ದೈಹಿಕವಾಗಿ ದೂರಾದರೂ, ಭಾವನಾತ್ಮಕವಾಗಿ, ಮಾನಸಿಕವಾಗಿ, ಚೇತನಾರೂಪದಲ್ಲಿ ತಮ್ಮನ್ನು ಸಮೀಪಿಸುತ್ತಾರೆ ಅಥವಾ ತಮ್ಮೊಡನೆ ಇರುತ್ತಾರೆ ಎಂದು ನಂಬಲು ಭಾವನಾತ್ಮಕವಾದ ನಿಲುವೇ ಕಾರಣವಾಗಿತ್ತು.

ಹಾಗಾಗಿ ತಮ್ಮ ಪರಿಕಲ್ಪನೆಯ ದೈವಗಳಿಗೆ, ಶಕ್ತಿಗಳಿಗೆ ತಾವು ಕಂಡಿದ್ದ ಮೃತರ ಕೋಪ, ಒಲವು, ಆಸೆ, ಅಸೂಯೆ, ಅನುರಾಗ ಇತ್ಯಾದಿ ಗುಣಗಳನ್ನೂ ಆರೋಪಿಸುತ್ತಿದ್ದರು.

ದೇವರ ಬಗೆಗಿನ ದ್ರಾವಿಡರ ಮತ್ತು ಆರ್ಯರ ಎರಡೂ ಬಗೆಯ ಪರಿಕಲ್ಪನೆಗಳು ಸಂಸ್ಕೃತಿಗಳು ಮತ್ತು ಜೀವನ ಶೈಲಿಗಳು ವಿಲೀನವಾದ ರೀತಿಯಲ್ಲಿಯೇ ವಿಲೀನವಾಗಿ ಇಂದು ನಾವು ಕ್ರೋಧಾವಿಷ್ಟವಾಗಿ ಶಾಪ ಕೊಡುವ ದೇವರನ್ನೂ, ಸ್ತುತಿಗೆ ಒಲಿದು, ಒಲವಿಗೆ ಮಣಿದು ವರ ಕೊಡುವಂತಹ ದೇವರನ್ನೂ ಕಾಣುತ್ತಿದ್ದೇವೆ. ಆದರೆ ಆರ್ಯರ ಅಥವಾ ದ್ರಾವಿಡ ಪರಿಕಲ್ಪನೆಯ ದೇವರ ವಿಚಾರದಲ್ಲಿ ಗಮನಿಸುವಾಗ ಮೂಲದಲ್ಲಿ ಗೋಚರವಾಗುವುದು ಮಾನವಾತೀತವಾದ ‘ಚೈತನ್ಯ’ ಎಂಬ ಅರ್ಥೈಸುವಿಕೆ.

ಮಾನವಾತೀತವಾಗಿರುವ ಕಾರಣದಿಂದ ಮಾನವರೂಪಕ್ಕೆ ಇಳಿಯುವ ಸಾಧ್ಯತೆಯೂ ಕೂಡ ತೀರಾ ಸಹಜ. ಇರಲಿ, ಚೈತನ್ಯ ಎಂಬ ಅಂಶದ ಮುಖೇನ ನೋಡಿದರೆ, ದೇವರೆನ್ನುವ ಪರಿಕಲ್ಪನೆಯು ಶಾಪ ಕೊಡುವಷ್ಟು ಕ್ರೂರ ಕಲ್ಪನೆಯಿಂದಲೂ, ವರ ಕೊಡುವಷ್ಟು ಅಹಂಕಾರದ ಕಲ್ಪನೆಯಿಂದಲೂ ದೂರವಾಗುತ್ತದೆ. ವಾಸ್ತವವಾಗಿ ಅದು ಮನುಷ್ಯ ಸಹಜವಾದ ಮೋಹ, ಕ್ರೋಧಾದಿ ವಿಷಯಗಳಿಗೆ ಅತೀತವಾದ ನಿರ್ಮನಸ್ಸಿನ ಸ್ಥಿತಿ, ನಿರ್ಭಾವದ ಸ್ಥಿತಿಯಾದ ಪ್ರಕೃತಿಯ ಶಕ್ತಿಗೆ ತೆರೆದುಕೊಳ್ಳುತ್ತದೆ.
ಗಮನಿಸಿ, ಸೂರ್ಯನ ಬೆಳಕು ಪಸರಿಸುತ್ತದೆ. ಅದಕ್ಕೆ ಎಲ್ಲೆಲ್ಲಿ ಅವಕಾಶಗಳಿರುತ್ತದೆಯೋ ಅಲ್ಲೆಲ್ಲಾ ತನ್ನ ಕಿರಣಗಳನ್ನು ಬೀರುತ್ತದೆ.

ಅದಕ್ಕೆ ಇದು ಸುಂದರವಾದ ವಸ್ತು, ಇದನ್ನು ಚೆನ್ನಾಗಿ ಬೆಳಗಿಸಬೇಕೆಂದೋ ಅಥವಾ ಇದು ಕುರೂಪವಾದ ವಸ್ತು ಇದನ್ನು ಕಾಣಿಸುವುದು ಬೇಡವೆಂದೋ ಆಲೋಚನೆಗಳನ್ನು ಮಾಡದೇ ಅವಕಾಶಾನುಗುಣವಾಗಿ ತನ್ನ ಪ್ರಕಾಶವನ್ನು ಚೆಲ್ಲುತ್ತದೆ. ಹಾಗೆಯೇ ಮಳೆಯೂ ಕೂಡ ಸುಂದರವಾದ ಹೂಗಳನ್ನು ನೀಡುವ ಎಂದು ಹೂಗಿಡಗಳ ಮೇಲೆ ಮಾತ್ರ ಸುರಿದು, ಮುಳ್ಳುಗಳು ಇರುವಂತಹ ಗಿಡಗಳ ಮೇಲೆ ಸುರಿಯದೇ ಇರುವುದಿಲ್ಲ. ಅಂದರೆ, ಚೈತನ್ಯವೆನ್ನುವುದು ನಿಷ್ಪಕ್ಷಪಾತವಾದ, ನಿರ್ಭಾವುಕವಾದ, ನಿರ್ವ್ಯಾಮೋಹಿಯಾದ ಗುಣವೆನ್ನುವುದು ಸ್ಪಷ್ಟವಾಗುವುದು.

ಹಾಗಾದರೆ, ದೇವರೆಂಬ ಶಕ್ತಿ, ಚೈತನ್ಯಕ್ಕೆ ಶಾಪ ಕೊಡುವ, ವರ ಕೊಡುವ, ಮುನಿಯುವ, ಒಲಿಯುವ, ನಲಿಯುವ ಗುಣಗಳು ಹೇಗೆ ಬಂತೆಂದು ಮೇಲೆ ವಿಚಾರ ಮಾಡಿದ ರೀತಿಯನ್ನು ಗಮನಿಸಿದರೆ ತಿಳಿಯುವುದು.

ದೇವರು ಎಂದು ಹಿಂದೂ ಧರ್ಮದಲ್ಲಿ ಯಾರನ್ನೆಲ್ಲಾ ಕರೆಯುವರೋ ಹಾಗೆ ಹಿಂದೆ ವೈದಿಕರಲ್ಲೇ ಕರೆಯುತ್ತಿರಲಿಲ್ಲ. ಅವರ ದೇವರುಗಳೇ ಬೇರೆ ಇದ್ದರು. ಹಾಗೆಯೇ ಯಹೂದಿ, ಕ್ರೈಸ್ತ, ಇಸ್ಲಾಂ ರೀತಿಯ ಏಕದೇವೋಪಾಸನೆಯ ದೇವರು ಹಿಂದೂ ಧರ್ಮದ ದೇವರುಗಳ ರೀತಿಯಲ್ಲ. ಹಾಗಾಗಿ ಹಿಂದೂ ಧರ್ಮದಲ್ಲಿ ದೇವರುಗಳ ಕುರಿತಾಗಿ ಹಲವಾರು ಪೌರಾಣಿಕ ಕತೆಗಳಿರುತ್ತವೆ. ಆದರೆ ದೇವರನ್ನು ಮಾನವ ರೂಪದಲ್ಲಿ ನೋಡದ ಕ್ರೈಸ್ತ ಮತ್ತು ಇಸ್ಲಾಂ ಧರ್ಮದಂತಹ ಏಕ ದೇವೋಪಾಸನೆಯ ಧರ್ಮಗಳಲ್ಲಿ ದೇವರಿಗೆ ಮಡದಿ ಮಕ್ಕಳು ಸಂಸಾರಗಳು ಇರುವುದಿಲ್ಲ.

ಅವರಲ್ಲಿ ಮಿಥ್ ಇಲ್ಲವೆಂದೇನಿಲ್ಲ. ಅಗಾಧವಾಗಿಯೇ ಇವೆ. ಆದರೆ ಈ ಮಾದರಿಯದಲ್ಲ. ಯೆಹೂದರ ದೇವರಿಗೂ ಹಿಂದೂ ಧರ್ಮದ ದೇವರಿಗೆ ಬಂದಂತೆ ಕೋಪ ಬರುತ್ತದೆ, ಖುಷಿಯಾಗುತ್ತದೆ. ಆದರೆ ಹೆಂಡತಿ ಮಕ್ಕಳು ಇರುವುದಿಲ್ಲ ಅಷ್ಟೇ. ದೇವರ ಪ್ರೊಜೆಕ್ಷನ್ ಬೇರೆ ರೀತಿಯದ್ದಾಗಿರುತ್ತದೆ. ಏನೇ ಆಗಲಿ, ಧರ್ಮವನ್ನು ತಿಳಿಯಬೇಕಾದರೆ ದೇವರ ಉಗಮದ ಬಗ್ಗೆ ಕಿಂಚಿತ್ತು ಪರಿಚಯ ಇರಬೇಕು.

(ಮುಂದುವರಿಯುತ್ತದೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending