ದಿನದ ಸುದ್ದಿ
ಯಾರು ಪ್ರಗತಿಪರರು? : ದಿನೇಶ್ ಅಮಿನ್ ಮಟ್ಟು
ನಾನು ಮುಸುಕಿನ ಗುದ್ದಾಟ ನಡೆಸಲು ಹೋಗುವುದಿಲ್ಲ, ಯಾರದೋ ಹೆಗಲ ಮೇಲೆ ಬಂದೂಕು ಇಡುವುದೂ ಇಲ್ಲ, ನನ್ನ ಅಭಿಪ್ರಾಯ ಮಂಡಿಸಲು ಥಿಯರಿಗಳ ಮೂಟೆಗಳನ್ನು ಉರುಳಿಸಿ ಯಾರನ್ನೂ ಗೊಂದಲಕ್ಕೀಡುಮಾಡುವುದೂ ಇಲ್ಲ. ನೇರವಾಗಿ ವಿಷಯಕ್ಕೆ ಬರ್ತೇನೆ.
ಪ್ರಗತಿಪರರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಬೇಕಲ್ಲಾ? ಮುಸುಕು ತೆಗೆದಿದ್ದೇನೆ, ಹೆಸರು ಬರ್ಕೊಳ್ಳಿ: ದೊರೆಸ್ವಾಮಿ, ದೇವನೂರ,ಚಂಪಾ, ಸುಬ್ಬಯ್ಯ ಬರಗೂರು, ಮರುಳಸಿದ್ದಪ್ಪ, ಸಿದ್ದರಾಮಯ್ಯ,ಗೋವಿಂದರಾವ್, , ಬಿಳಿಮಲೆ, ಅಸ್ಸಾದಿ, ಚೆನ್ನಿ, ಸಿದ್ದಯ್ಯ, ಕಾಳೇಗೌಡ, ಇಂಧೂಧರ, ಬಂಜಗೆರೆ, ರಹಮತ್, ಹುಳಿಯಾರ್, ರವಿವರ್ಮಕುಮಾರ್, ಗಣೇಶ್ ದೇವಿ, ವಿಜಯಮ್ಮ, ಮಾಲಗತ್ತಿ…ಪಟ್ಟಿ ಉದ್ದ ಇದೆ.
ಇವರ ಜತೆ ಜನನುಡಿ, ಮೇ ಸಾಹಿತ್ಯಮೇಳ, ನಾವು ನಮ್ಮಲ್ಲಿ, ಉಡುಪಿ-ಗುಬ್ಬಿ-ಗುಡಿಬಂಡೆ ಚಲೋ, ದಿಡ್ಡಳ್ಳಿ ಚಲೋ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಕನಸುಕಂಗಳ ಸಾವಿರಾರು ಯುವಕ-ಯುವತಿಯರಿದ್ದಾರೆ. ಈ ಪಟ್ಟಿಯಲ್ಲಿ ಎಡಪಕ್ಷಗಳ ಸದಸ್ಯರಾಗಿರುವವರನ್ನು ನಾನು ಸೇರಿಸಿಲ್ಲ. ಸದ್ಯ ಇಷ್ಟಕ್ಕೆ ನಿಲ್ಲಿಸ್ತೇನೆ.
ಮೊದಲನೆಯದಾಗಿ, ಇವರು ಜಾತ್ಯತೀತತೆಯ ರಕ್ಷಣೆಯ ಸೈದ್ಧಾಂತಿಕ ಗುತ್ತಿಗೆಯನ್ನು ಪಡೆದಿರುವುದು ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಅವರಿಂದ ಹೊರತು ಕಾಂಗ್ರೆಸ್ ಪಕ್ಷದಿಂದ ಅಲ್ಲ.
ಇವರಲ್ಲಿ ಬಹುತೇಕ ಮಂದಿ 75-77ರ ಕಾಲದಲ್ಲಿ ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯನ್ನು ವಿರೋಧಿಸಿದವರು, 1989ರಲ್ಲಿ ರಾಜೀವ್ ಗಾಂಧಿಯವರ ವಿರುದ್ಧ ಸಿಡಿದೆದ್ದಿದ್ದ ಮತ್ತು ಮಂಡಲ್ ವರದಿ ಜಾರಿಗೆ ತಂದಿದ್ದ ವಿ.ಪಿ.ಸಿಂಗ್ ಪರವಾಗಿ ನಿಂತವರು. ಈ ಎರಡೂ ಸಂದರ್ಭಗಳಲ್ಲಿ ಜನಸಂಘ-ಬಿಜೆಪಿ ಕಾರ್ಯಕರ್ತರು ಇವರ ಜತೆಗಿದ್ದರು. ಆಗ ಯಾರೂ ಇವರಿಗೆ ಕೇಸರಿ ಬಣ್ಣ ಬಳಿಯಲಿಲ್ಲ, ಚಡ್ಡಿ ಹಾಕಲಿಲ್ಲ, ಗಂಜಿ ಗಿರಾಕಿ ಅನ್ನಲಿಲ್ಲ.
ಎರಡನೆಯದಾಗಿ, ಹಿಂದಿನ ಇತಿಹಾಸ ಬೇಡ, ಕಳೆದ ಐದು ವರ್ಷಗಳ ಅವಧಿಯಲ್ಲಿ ಇವರೆಲ್ಲರೂ ರಾಜ್ಯದಲ್ಲಿ ಕೋಮುವಾದದ ವಿರುದ್ಧದ ಮತ್ತು, ಜಾತ್ಯತೀತತೆಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬಿಜೆಪಿ ವಿರುದ್ಧ ಮಾತ್ರವಲ್ಲ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಮಾತನಾಡಿದ್ದಾರೆ. ಹೌದು, ಸಿದ್ದರಾಮಯ್ಯನವರ ವಿಷಯದಲ್ಲಿ ಸಕಾರಣವಾಗಿ ಮೆದುವಾಗಿದ್ದರು.
ಈ ಮೆದು ಧೋರಣೆಯಿಂದ ಇವರು ಪಡೆದ ಲಾಭಗಳೇನು? ಐದು ವರ್ಷಗಳ ಅವಧಿಯಲ್ಲಿ ಇವರಲ್ಲಿ ಎಷ್ಟು ಮಂದಿಯ ಆದಾಯ ದುಪ್ಪಟ್ಟಾಯಿತು? ಎಷ್ಟುಮಂದಿ ಸರ್ಕಾರಿ ಮನೆ-ಸೈಟು ತೆಗೆದುಕೊಂಡರು? ಎಷ್ಟುಮಂದಿ ವಿಧಾನಪರಿಷತ್ ಗೆ ನಾಮಕರಣಗೊಂಡರು? ಎಷ್ಟುಮಂದಿ ತಮ್ಮ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಸ್ಪರ್ಧೆಗೆ ಟಿಕೆಟ್ ಕೊಡಿಸಿದರು? ಇವರನ್ನು ಕಾಂಗ್ರೆಸ್ ಪಕ್ಷದ ಜತೆ ಜೋಡಿಸಿ ಗೇಲಿ ಮಾಡುತ್ತಿರುವವರು ದಯವಿಟ್ಟು ಇವರು ಸರ್ಕಾರದಿಂದ ಪಡೆದಿರುವ ಲಾಭಗಳೇನು ಎನ್ನುವುದನ್ನು ತಿಳಿಸಿ.
ತಮ್ಮ ವಯಸ್ಸು-ಆರೋಗ್ಯವನ್ನು ಮರೆತು ಕೋಮುವಾದದ ವಿರುದ್ಧ ಏಕಾಂಗಿಗಳಾಗಿ ಹೋರಾಟಕ್ಕಿಳಿದಿರುವ ಒಬ್ಬ ಶ್ರೀನಿವಾಸ ಕಾರ್ಕಳ, ಒಬ್ಬ ಸುರೇಶ್ ಭಟ್ ಬಾಕ್ರಬೈಲ್, ಒಬ್ಬ ಸನತ್ ಕುಮಾರ ಬೆಳಗಲಿ ಸರ್ಕಾರದಿಂದ ಪಡೆದ ಲಾಭಗಳೇನು? ತನ್ನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಪುರುಷೋತ್ತಮ ಬಿಳಿಮಲೆಯವರು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ದುಡ್ಡು ಬೇಡ ಎಂದವರು ಗೊತ್ತಾ?
ಹೌದು, ಇವರಲ್ಲಿ ಹೆಚ್ಚಿನವರು ಅಕಾಡೆಮಿ-ಪ್ರಾಧಿಕಾರದ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ವಿಶಾಲ ಅರ್ಥದಲ್ಲಿ ಸೈದ್ಧಾಂತಿಕ ಸಹಮತ ಹೊಂದಿರುವವರನ್ನು ಸಾಹಿತ್ಯ-ಸಾಂಸ್ಕೃತಿಕ ಸಂಘಟನೆಗಳಿಗೆ ನೇಮಕಮಾಡುತ್ತದೆ ಮತ್ತು ಆ ರೀತಿಯೇ ನೇಮಕ ಮಾಡಬೇಕು. ಇವರನ್ನು ಬಿಟ್ಟು ಭೈರಪ್ಪ, ಚಿದಾನಂದ ಮೂರ್ತಿ, ದೊಡ್ಡರಂಗೇಗೌಡರನ್ನು ನೇಮಕಮಾಡೋಕ್ಕಾಗುತ್ತಾ?
ಈ ರೀತಿ ನೇಮಕಗೊಂಡವರಲ್ಲಿ ಯಾರಾದರೂ ತಮ್ಮ ಸೈದ್ಧಾಂತಿಕ ಬದ್ದತೆಯಲ್ಲಿ ರಾಜಿ ಮಾಡಿಕೊಂಡ ಉದಾಹರಣೆಗಳಿದ್ದರೆ ತಿಳಿಸಿ. ಇವರಲ್ಲಿ ಯಾರಾದರೂ ತಮ್ಮ ಅರ್ಹತೆಯನ್ನು ಮೀರಿ ಸ್ಥಾನಮಾನ ಗಳಿಸಿದ್ದರೆ ಅದನ್ನೂ ತಿಳಿಸಿ.
ಪ್ರಗತಿಪರರು ಯಾರು ಎನ್ನುವ ವ್ಯಾಖ್ಯಾನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಸ್ವಾಮಿ. ಬಹಳ ಸರಳವಾಗಿದೆ. ಪ್ರಗತಿವಿರೋಧಿಗಳಲ್ಲದವರೆಲ್ಲರೂ ಪ್ರಗತಿಪರರೇ ಆಗಿರುತ್ತಾರೆ. ಪ್ರಗತಿ ಎಂದರೆ ಏನು ಎನ್ನುವ ಉಡಾಫೆ ಪ್ರಶ್ನೆ ಕೇಳಿದರೆ ಅದಕ್ಕೆ ನನ್ನ ಉತ್ತರ: ಬಸವ,ಗಾಂಧಿ,ಅಂಬೇಡ್ಕರ್, ಲೋಹಿಯಾ ಹೇಳಿರುವ ಪ್ರಗತಿ.
ಪ್ರಗತಿಪರರು ಪರಿಪೂರ್ಣರೇ? ಖಂಡಿತ ಅಲ್ಲ, ಮನುಷ್ಯ ಮಾತ್ರರಾದ ಅವರಲ್ಲಿಯೂ ಸಣ್ಣಪುಟ್ಟ ಆಸೆ, ಲೋಭ, ಸ್ವಾರ್ಥ, ಅಸೂಯೆಗಳಿರಬಹುದು. ಇವರ ನಡುವೆ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳೂ ಇರಬಹುದು. ಹೀಗಿದ್ದರೂ ಫ್ಯಾಸಿಸಮ್, ಸರ್ವಾಧಿಕಾರ ಮತ್ತು ಕೋಮುವಾದದ ಪ್ರಶ್ನೆಗಳು ಎದುರಾದಾಗ ಭಿನ್ನತೆಗಳನ್ನೆಲ್ಲವನ್ನೂ ಮರೆತು ಒಂದಾಗಿ ಇವರು ಕೈಕೈ ಹಿಡಿದು ಬೀದಿಗಿಳಿದಿದ್ದಾರೆ. ದೇಶ-ಕಾಲದ ಕರೆಗೆ ತಕ್ಕ ಹಾಗೆ ತಮ್ಮ ಶತ್ರುಗಳನ್ನು ಅವರು ಬದಲಾಯಿಸಿಕೊಂಡಿದ್ದಾರೆ, ಅಷ್ಟೆ.
ಕಾಲದ ಚಕ್ರ ಒಂದು ಸುತ್ತು ಮುಗಿಸಿದೆ. ಕಾಂಗ್ರೆಸ್ ಜಾಗದಲ್ಲಿ ಬಿಜೆಪಿ ಬಂದು ನಿಂತಿದೆ. ಹಳೆಯ ಸರ್ವಾಧಿಕಾರಿ ಇಂದಿರಾಗಾಂಧಿಯ ಸ್ಥಾನದಲ್ಲಿ ಕೋಮುವಾದದ ವಿಷಯೇರಿಸಿಕೊಂಡ ಹೊಸ ಸರ್ವಾಧಿಕಾರಿ ಅಬ್ಬರಿಸುತ್ತಿದ್ದಾರೆ.ಸರ್ವಾಧಿಕಾರಕ್ಕೆ ಬಲಿಯಾದವರೇ ಸರ್ವಾಧಿಕಾರಿಯ ಭಕ್ತರಾಗಿರುವ ವಿಚಿತ್ರ ಪರಿಸ್ಥಿತಿಯಲ್ಲಿ ‘’ಮೆದುಳು ತೊಳೆಯಲು’’ ನಮಗೆ ಇನ್ನಷ್ಟು ಸಂಖ್ಯೆಯ ಪ್ರಗತಿಪರರು ಬೇಕು. ಸಾಧ್ಯವಾದರೆ ಈ ಪ್ರಯತ್ನಕ್ಕೆ ಇದಕ್ಕೆ ಕೈಜೋಡಿಸಿ. ಅದು ಬಿಟ್ಟು ಅಡ್ಡಗೋಡೆಯ ಮೇಲೆ ಕೂತು ಅವರತ್ತ ಕಲ್ಲೆಸೆದು, ಅವರ ಬಗ್ಗೆ ಇನ್ನಷ್ಟು ಸಂಶಯಗಳನ್ನು ಹುಟ್ಟುಹಾಕಿ ನೈತಿಕವಾಗಿ ಅವರು ಕುಸಿಯುವಂತೆ ಮಾಡುವ ಜನದ್ರೋಹದ ಕೆಲಸ ಮಾಡಬೇಡಿ
ಪ್ರಗತಿಪರರನ್ನು ಹಂಗಿಸಿ, ನಿಂದಿಸಿ ಮೂಲೆಗೆ ತಳ್ಳುವ ಈ ಹುನ್ನಾರ ಪ್ರಾರಂಭಿಸಿದವರು ಬಲಪಂಥೀಯ ಪಡೆ. ಈಗ ನಮ್ಮವರೇ ಕೆಲವರು ಆ ಖೆಡ್ಡಾದಲ್ಲಿ ಬಿದ್ದಿದ್ದಾರೆ. ಅರಿವಿಲ್ಲದೆ ಖೆಡ್ಡಾದಲ್ಲಿ ಬಿದ್ದಿದ್ದರೆ ಅವರನ್ನೂ ಎತ್ತಿ ನಮ್ಮೊಂದಿಗೆ ಕರೆದೊಯ್ಯೋಣ. ಎಲ್ಲವೂ ಅರಿವಿದ್ದು ಆ ಕಡೆಯಿಂದ ಸುಫಾ ರಿ ಪಡೆದಿದ್ದರೆ ಅವರವರ ಕರ್ಮ ನಾವೇನು ಮಾಡಲಾಗದು. ನಾವು ಅಂಪೈರ್ ಗಳಲ್ಲ, ಆಟಗಾರರು. ಗೆಲುವು ನಮ್ಮದೇ.
(ಇಷ್ಟು ಬರೆಯಲು ಸ್ಪೂರ್ತಿ ನೀಡಿದ N A Mahamad Ismail ಪೋಸ್ಟ್ ಗೆ ಋಣಿಯಾಗಿದ್ದೇನೆ)
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


