ನೆಲದನಿ
ಮಾನವ ಜೀವ ವಿಕಾಸದ ಮಹಾ ಪ್ರಾಗ್ಕಥನ
ಭಾರತದ ಪ್ರಸಿದ್ಧ ಭೌತವಾದಿ ಚಿಂತಕ – ‘ಮಹಾಪಂಡಿತ’ ರಾಹುಲ ಸಾಂಕೃತ್ಯಾಯನ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ‘ವೋಲ್ಗಾ ಗಂಗಾ’ (1942) ಕೃತಿಯನ್ನು ಪರಿಚಯಿಸುತ್ತಿದ್ದೇನೆ.
ಕ್ರಿ.ಪೂ 6000 ದಿಂದ ಕ್ರಿ.ಶ.1942 ರ ತನಕ ಮಾನವ ಸಮಾಜದ ಐತಿಹಾಸಿಕ, ಆರ್ಥಿಕ, ರಾಜನೈತಿಕ ಪ್ರವಾಹಗಳ 20 ಕಥಾರೂಪದ ಚಿತ್ರಣವಾಗಿರುವ ಈ ಕೃತಿ, ಮಾನವ ಸಮಾಜವು ಜೀವವಿಕಾಸಗೊಂಡ ಸಂಘರ್ಷಗಳನ್ನು ಸೈದ್ಧಾಂತಿಕವಾಗಿ ವಿಶ್ಲೇಷಿಸಿರುವ ಅತ್ಯಂತ ಮಹತ್ವದ ಕೃತಿಯಾಗಿರುತ್ತದೆ. ಹಿಂದಿಯಿಂದ ಈ ಕೃತಿಯನ್ನು ಕನ್ನಡಕ್ಕೆ ಬಿ.ಎಂ.ಶರ್ಮಾ ಅನುವಾದಿಸಿಕೊಟ್ಟು ಕನ್ನಡ ಓದುಗರಿಗೆ ಬಲು ಅನುಕೂಲ ಮಾಡಿದ್ದಾರೆ.
ಮಾನವನ ಜೀವ ವಿಕಾಸದ ಕುರಿತಾಗಿ ಚಾರ್ಲ್ಸ್ ಡಾರ್ವಿನ್ The origin of species and the evolution of man (1859) ಕೃತಿಯ ಪ್ರಕಟಣೆಯೊಂದಿಗೆ ದೈವನಿಯಾಮಕವೆನ್ನಲಾದ ಮಾನವ ಸೃಷ್ಟಿಯ ಕುರಿತ ಪುರಾಣ ಕಥಾನಕಗಳು ವಿಜ್ಞಾನದ ಹೊಸ ಶೋಧದ ಬೆಳಕಿನಲ್ಲಿ ಪ್ರಶ್ನಿಸಲ್ಪಟ್ಟವು. ಇದೇ ಪ್ರಶ್ನಾತರ್ಕ ಭೂಮಿಕೆಯೇ ‘ವೋಲ್ಗಾ ಗಂಗಾ’ ಕೃತಿಯ ಹುಟ್ಟುವಳಿಗೆ ಕಾರಣವಾಗಿದೆ.
ಮಾನವ ಸಮಾಜದ ವಿಕಾಸವನ್ನು ವೈಜ್ಞಾನಿಕವಾಗಿ ಮತ್ತು ಸೈದ್ಧಾಂತಿಕವಾಗಿ ತಿಳಿಸುವ ಉದ್ದೇಶ ತಾಳಿದ ರಾಹುಲ ಸಾಂಕೃತ್ಯಾಯನ ಹಿಂದೀ – ಐರೋಪ್ಯ ಜನಾಂಗಗಳನ್ನೇ ವಸ್ತುವಾಗಿರಿಸಿಕೊಂಡು ಕಥನ ರೂಪದಲ್ಲಿ ಪ್ರಾಗೈತಿಹಾಸಿಕ, ಸಮಾಜೋಆರ್ಥಿಕ, ಧರ್ಮ ಮತ್ತು ರಾಜನೀತಿ ಮುಂತಾದ ಸಂಗತಿಗಳನ್ನು ವಿವೇಚಿಸಿದ್ದಾರೆ. ಹಾಗಾಗಿ ‘ವೋಲ್ಗಾ ಗಂಗಾ’ ಕೃತಿಯು “A narration of the historical, economic and political stream of human society from 6000 BC to 1942 AD in the form of stories”.ರಾಹುಲ ಸಾಂಕೃತ್ಯಾಯನರೇ ಹೇಳುವಂತೆ ಭಾರತೀಯರಿಗಿಂತಲೂ ಮಿಶ್ರೀ, ಸುರಿಯಾನೀ ಮುಂತಾದ ಕೆಲವು ಜನಾಂಗಗಳು ಸಹಸ್ರಾರು ಶತಮಾನಗಳ ಮೊದಲೇ ಮಾನವ ಜೀವವಿಕಾಸದ ದಾರಿಯಲ್ಲಿ ಮೊದಲಿಗರಾಗಿದ್ದಾರೆ.
ಬ್ರಾಹ್ಮಣರು ಬ್ರಹ್ಮನ ತಲೆಯಿಂದಲೂ ಕ್ಷತ್ರಿಯರು ಭುಜಗಳಿಂದಲೂ ವೈಶ್ಯರು ತೊಡೆಗಳಿಂದಲೂ ಶೂದ್ರರು ಪಾದಗಳಿಂದಲೂ ಹುಟ್ಟಿದರೆಂಬ ಅವೈಜ್ಞಾನಿಕ ಸೃಷ್ಟಿ ಪುರಾಣ ಸೃಷ್ಟಿಸಿರುವ ಗೊಡ್ಡು ಸನಾತವಾದಿಗಳ ಎಲ್ಲಾ ವಾದ ವಿತಂಡವಾದ – ತರ್ಕ ಕುತರ್ಕಗಳನ್ನು ಒಂದರ್ಥದಲ್ಲಿ ಈ ಕೃತಿ ಸುಟ್ಟು ಬೂದಿಮಾಡಿತು. ಆದರೂ ಭಾರತವನ್ನು ಸದಾ ಮೌಢ್ಯದಲ್ಲಿರಿಸಿ ಪರೋಪಜೀವನ ಸಾಗಿಸುವ ಠಕ್ಕ ಪುರೋಹಿತ ವರ್ಗದವರು ತಮ್ಮ ಗೊಡ್ಡು ಪುರಾಣಗಳನ್ನು ಬಿತ್ತರಿಸುತ್ತಲೇ ಬಂದಿದ್ದಾರೆ. ರಾಹುಲ ಸಾಂಕೃತ್ಯಾಯನ ಹೇಳುವಂತೆ ಸನಾತನವಾದಿಗಳ ನಿಂದನಾ ರೂಪದ ವಿತಂಡವಾದವನ್ನು ಎದುರಿಸಲು ಲೇಖಕನ ಲೇಖನಿ ಹಿಂಜರಿಯುವುದಿಲ್ಲ.”ಪ್ರಪಂಚದ ಅದೆಷ್ಟೋ ಭಾಷೆಗಳಲ್ಲಿ ಕಲ್ಲು ,ಮಣ್ಣು, ಹಿತ್ತಾಳೆ, ತಾಮ್ರ, ಕಬ್ಬಿಣ, ಉಕ್ಕು ಇತ್ಯಾದಿ ಪ್ರಾಕೃತಿಕ ವಸ್ತುಗಳಲ್ಲಿ ಸಾಂಕೇತಿಕ ಅಥವಾ ಲಿಖಿತ ಸಾಹಿತ್ಯ, ಅಲಿಖಿತ ಗ್ರಾಮೀಣ ಗೀತೆಗಳು, ಕತೆಗಳು, ರೀತಿ ನೀತಿಗಳು ಯುಗಯುಗಕ್ಕೂ ಸಂಬಂಧಿಸಿ ರಾಶಿಗಟ್ಟಲೆಯಾಗಿ ದೊರಕುತ್ತಿದ್ದು ಈ ಕೃತಿಯೊಂದು ಕಥೆಗೂ ಆಧಾರಭೂತವಾಗಿವೆ” ಹಾಗಾಗಿಯೇ ಈ ಕೃತಿ ಎಲ್ಲಾ ಭಾರತೀಯ ಭಾಷೆಗಳಲ್ಲಿಯೇ ಅದ್ವಿತೀಯವಾದುದು.
‘ವೋಲ್ಗಾ ಗಂಗಾ’ ಕೃತಿಯನ್ನು ನಾನು 1988 ರಿಂದ ಇಲ್ಲಿಯವರೆಗೆ ಹಲವಾರು ಸಲ ಓದಿದ್ದೇನೆ. ಕ್ರಿ.ಪೂ 6000 ದಿಂದ ಹಿಡಿದು ಕ್ರಿ.ಶ 1942 ರ ತನಕದ ಕಾಲಾವಧಿಯಲ್ಲಿ ರಷ್ಯಾದ ವೋಲ್ಗಾದಿಂದ ಭಾರತದ ಗಂಗಾನದಿಯ ಭೂವಿಸ್ತಾರದಲ್ಲಿ ನೆಲೆಸಿರುವ ಮಾನವನ ವಿಕಾಸದ ಸಂಘರ್ಷಗಳ ಕಥನದ ಎಂಟು ಸಾವಿರ ವರ್ಷಗಳ ಕಾಲವ್ಯಾಪ್ತಿಯುಳ್ಳ ಈ ಕೃತಿ ಇಂದಿಗೂ ಪ್ರಸ್ತುತವಾದುದಾಗಿದ್ದು ನಮ್ಮ ಅನೇಕ ಪ್ರಶ್ನೆಗಳಿಗೆ ಇದು ಉತ್ತರ ಒದಗಿಸಲು ನೆರವಾಗಬಲ್ಲದು.
-ಡಾ.ವಡ್ಡಗೆರೆ ನಾಗರಾಜಯ್ಯ
8722724174
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
- ರುದ್ರಪ್ಪ ಹನಗವಾಡಿ
ನಾನು ಮದುವೆಯಾದ ಮೇಲೆ ನಮ್ಮೂರಿನಲ್ಲಿಯೇ 3-4 ಅಂತರ್ಜಾತಿ ಮದುವೆಗಳಾದವು. ಮೈಸೂರಿನಲ್ಲಿ ನಮ್ಮ ಜೊತೆಗಿದ್ದ ಪ್ರೊ. ಗೊಟ್ಟಿಗೆರೆ ಶಿವರಾಜು ಚನ್ನರಾಯ ಪಟ್ಟಣದಲ್ಲಿ ರಾಜ್ಯಶಾಸ್ತçದ ಅಧ್ಯಾಪಕನಾಗಿದ್ದ. ಅವನ ಸಹೋದ್ಯೋಗಿಗಳಾಗಿದ್ದ ನರಸಿಂಹಾಚಾರ್ ಇಂಗ್ಲಿಷ್ ಅಧ್ಯಾಪಕ ಮತ್ತು ಪ್ರೊ. ಸುಮತಿ ಎನ್. ಗೌಡ ಅಧ್ಯಾಪಕರಾಗಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು.
ಅವರನ್ನು ನೇರ ಬಿಆರ್‌ಪಿಗೆ ಕರೆತಂದು, ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದನು. ನಾನು ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಕೃಷ್ಣಪ್ಪನವರಿಗೆ ಸುದ್ದಿ ಮುಟ್ಟಿಸಿ, ಮದುವೆಯ ಏರ್ಪಾಡು ಮಾಡಿದೆ. ಹುಡುಗಿ ಒಕ್ಕಲಿಗ ಜಾತಿ, ಹುಡುಗ ಬ್ರಾಹ್ಮಣನಾಗಿದ್ದ. ಸಹೋದ್ಯೋಗಿಗಳ ಪ್ರೀತಿಯ ಮದುವೆ ಮಾಡಿದ ಪ್ರೊ. ಜಿ.ಬಿ. ಶಿವರಾಜು ನಂತರ ದಿನಗಳಲ್ಲಿ ಗೌಡ ಜಾತಿಗೆ ಸೇರಿದ ಸಂಬಂಧಿಕರಿಂದ ಅನೇಕ ರೀತಿಯ ಕಿರುಕುಳಕ್ಕೂ ಒಳಗಾಗಬೇಕಾಯಿತು. ಆದರೆ ಈ ದಂಪತಿಗಳು ಶಿವರಾಜು ಪರ ಇರಬೇಕಾದವರು ನಂತರದ ದಿನಗಳಲ್ಲಿ ಇವರುಗಳಿಂದಲೇ ಕಿರುಕುಳ ಅನುಭವಿಸುವಂತೆ ಆದುದು ವಿಪರ್ಯಾಸವೇ ಸರಿ. ಮಾಡಿದ ಉಪಕಾರ ಸ್ಮರಣೆ ನಮ್ಮ ವ್ಯಕ್ತಿತ್ವದಲ್ಲಿ ಇರದಿದ್ದರೆ, ಮನುಷ್ಯನಿಂದ ಮತ್ತಿನ್ನೇನನ್ನು ಮಾಡಲು ಸಾಧ್ಯ?
ಈ ಸರಣಿಯಲ್ಲಿ ಇಲ್ಲಿಯೇ ಇನ್ನೊಬ್ಬನ ಕಥೆ ಹೇಳಿ ಮುಗಿಸುವೆ. ಬಳ್ಳಾರಿ ಮೂಲದ ಒಬ್ಬ ಡಾಕ್ಟರ್ ಮತ್ತು ಅವರ ಕೈಕೆಳಗೆ ಇದ್ದ ನರ್ಸ್ ಇಬ್ಬರೂ ಪ್ರೀತಿಸಿದ್ದು, ಮದುವೆಯಾಗುವ ತಯಾರಿಯಲ್ಲಿದ್ದರು. ಶಿವಮೊಗ್ಗದ ಕಡೆಯ ಗೆಳೆಯರೊಬ್ಬರ ಮೂಲಕ ನನ್ನಲ್ಲಿಗೆ ಬಂದರು. ಇಬ್ಬರೂ ಮದುವೆಗೆ ಅರ್ಹ ವಯಸ್ಸಿನವರಾಗಿದ್ದು, ಬೇರೆ ಬೇರೆ ಜಾತಿಯವರಾದ ಕಾರಣ, ಹುಡುಗಿಗೆ ನನ್ನದೇ ಮನೆ ವಿಳಾಸಕೊಟ್ಟು ಮದುವೆ ಮಾಡಿಸಿ ಕಳಿಸಿಕೊಟ್ಟೆವು. ನಾನಾಗ ಪ್ರೊಬೆಷನರಿ ತಹಸೀಲ್ದಾರ್‌ನಾಗಿ ತರೀಕೆರೆಯಲ್ಲಿದ್ದೆ. ಅಲ್ಲಿನ ಸಬ್ ರಿಜಿಸ್ಟ್ರಾರ್ ಚಳಗೇರಿ ಎನ್ನುವವರ ಜೊತೆ ಮಾತಾಡಿ ರಿಜಿಸ್ಟ್ರೇಷನ್ ಮುಗಿಸಿ ಕಳಿಸಿದೆ.
ಇದೆಲ್ಲ ಆಗಿ ಒಂದು ವಾರದಲ್ಲಿ ಹುಡುಗನ ಕಡೆಯ ನಿವೃತ್ತ ಸೇನಾ ಅಧಿಕಾರಿ ಬಂದು ಗಾಯತ್ರಿಯೊಬ್ಬಳೇ ಮನೆಯಲ್ಲಿದ್ದಾಗ ನನ್ನ ಬಗ್ಗೆ ಆಕ್ಷೇಪಿಸಿ ನಾನು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಸಂಬಂಧಿ, ನಿನ್ನ ಗಂಡನ ಕೆಲಸ ಕೂಡ ಕಳೆದುಕೊಳ್ಳುವಂತೆ ಮಾಡುತ್ತೇನೆ’ ಎಂದೆಲ್ಲ ಕೂಗಾಡಿ ಹೋಗಿದ್ದ. ನಾನು ತರೀಕೆರೆಯಿಂದ ಬಂದಾಕ್ಷಣ ಇವಳು ಆತಂಕದಿAದ `ನಾವೇನೋ ಮದುವೆಯಾಗಿದ್ದೇವೆ. ಬೇರೆಯವರ ಮದುವೆ ಮಾಡಲು ಹೋಗಿ ಯಾಕೆ ತೊಂದರೆಗೊಳಗಾಗಬೇಕೆಂದು’ ಅಲವತ್ತುಕೊಂಡಳು.
ನಾನು ಈ ರೀತಿ ಮದುವೆಗಳ ಬಗ್ಗೆ ಖಚಿತ ತಿಳುವಳಿಕೆಯುಳ್ಳವನಾಗಿದ್ದು, ಈ ಬಗ್ಗೆ ರಾಜ್ಯದಲ್ಲಿ ನಡೆದಿದ್ದ ಶಿವರಾಮ ಕಾರಂತ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್, ಕೃಷ್ಣಪ್ಪ, ಪ್ರೊ. ಎಂ. ನಂಜುಂಡಸ್ವಾಮಿ, ಪ್ರೊ. ರವಿವರ್ಮಕುಮಾರ್, ಹೀಗೆ ಮದುವೆಯಾದವರ ಬಗ್ಗೆ ಸಾಲು ಸಾಲು ಹೆಸರುಗಳನ್ನು ತಿಳಿಸಿ ಗಾಯತ್ರಿಗೆ ಸಮಾಧಾನ ಮಾಡುತ್ತಿದ್ದೆ.
ನಾವು ಮದುವೆಯಾಗಿ ಆರು ತಿಂಗಳು ಆಗಿರಲಿಲ್ಲ, ನಮ್ಮ ವಿದ್ಯಾರ್ಥಿಯೊಬ್ಬರ ಅಕ್ಕ ಪ್ಲಾರಿ ಬಿಆರ್‌ಪಿ ಹತ್ತಿರವಿರುವ ಜಂಕ್ಷನ್‌ನಿಂದ ಭದ್ರಾವತಿಗೆ ಸ್ಟೆಫೆಂಡಿಯರಿ ಗ್ರಾಜ್ಯುಯೇಟ್ ಸ್ಕೀಂನಲ್ಲಿ ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗ ಸಿದ್ದಯ್ಯ ಭದ್ರಾವತಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಬಿಆರ್‌ಪಿ ಹತ್ತಿರದ ಶಾಂತಿನಗರದಿಂದ ದಿನವೂ ಬಸ್‌ನಲ್ಲಿ ಓಡಾಡುತ್ತಿರುವಾಗ ಪರಿಚಯವಾಗಿ ಪ್ರೀತಿಯ ಸೆಳೆತದಲ್ಲಿದ್ದರು. ಒಂದು ದಿನ ಬೆಳಗಿನ ಜಾವ ಹುಡುಗನ ಅಣ್ಣ ಬಂದು ಅವರಿಬ್ಬರ ಪ್ರೀತಿಗೆ ತಮ್ಮ ಒಪ್ಪಿಗೆ ಇದ್ದು ಹುಡುಗಿ ಕಡೆಯವರು ಒಪ್ಪುವುದಿಲ್ಲ, ಮದುವೆ ಮಾಡಿಸಬೇಕಾಗಿ ಕೋರಿದ.
ಹುಡುಗಿಯ ತಮ್ಮ ನನ್ನ ವಿಭಾಗದಲ್ಲಿಯೇ ನೇರ ವಿದ್ಯಾರ್ಥಿಯಾಗಿದ್ದ. ಈಗಾಗಲೇ ನಮ್ಮ ವಿಭಾಗದಲ್ಲಿ ಇವರು ಬರೀ ಇಂತದೇ ಕೆಲಸ ಮಾಡುತ್ತಿರುತ್ತಾನೆಂದು ಅಪಪ್ರಚಾರ ಬೇರೆ ಮಾಡುತ್ತಿದ್ದರು. ಆದರೂ ಎಲ್ಲ ಸೇರಿಕೊಂಡು ಇಂದಿರಾ ಕೃಷ್ಣಪ್ಪನವರಿಗೆ ತಿಳಿಸಿ ಭದ್ರಾವತಿಯಲ್ಲಿ ಮದುವೆ ನಡೆಸಲಾಯಿತು. ಮದುವೆಯಾದ ನಂತರ ಹೆಣ್ಣಿನ ಕಡೆಯವರು ನನ್ನನ್ನು ಹೊಡೆಯಲು ಜಂಕ್ಷನ್ ಎಂಬಲ್ಲಿ ಕಾಯುತ್ತಿದ್ದಾರೆ, ಇಲ್ಲಿ ಕಾಯುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿದ್ದರು. ಆದರೆ ದಿನಗಳೆದಂತೆ ಹುಡುಗ-ಹುಡುಗಿಯ ಮದುವೆಯನ್ನು ಈರ್ವರ ಕಡೆಯವರು ಒಪ್ಪಿ ನಂತರ ನಮ್ಮ ಕಡೆಗೆ ದೂರುವುದನ್ನು ನಿಲ್ಲಿಸಿದರು. ಈಗ ಇಬ್ಬರೂ ತಮ್ಮ ವೃತ್ತಿಯಲ್ಲಿ ಮುಂದುವರಿದು ಮಕ್ಕಳೊಂದಿಗೆ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ.
ಹೀಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಕೃಷ್ಣಪ್ಪನವರು ಪ್ರಾರಂಭಿಸಿದ ಒಲವಿನ ಸರಳ ಮದುವೆಗಳು ಸಾಲು ಸಾಲಾಗಿ ನಡೆಯುತ್ತಾ, ಡಿ.ಎಸ್.ಎಸ್. ಮತ್ತು ರೈತ ಸಂಘದ ಅನೇಕ ಕಾರ್ಯಕರ್ತರು ತಮ್ಮ ಕಾರ್ಯಸೂಚಿಯಲ್ಲಿ ಕಾರ್ಯಗತ ಮಾಡಬೇಕಾದ ಜವಾಬ್ದಾರಿ ಎಂಬಂತೆ ಸರಳ ಅಂತರ್‌ಜಾತಿ ಮದುವೆಗಳನ್ನು ನಡೆಸುವಂತಾಯಿತು. ಅದು ಇಂದಿಗೂ ಕರ್ನಾಟಕದಲ್ಲಿ ನಡೆದುಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ನಮ್ಮ ಬಿಆರ್‌ಪಿ ಸ್ನಾತಕೋತ್ತರ ಕೇಂದ್ರ
- ರುದ್ರಪ್ಪ ಹನಗವಾಡಿ
ದಟ್ಟ ಮಲೆನಾಡಲ್ಲದಿದ್ದರೂ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದು ನಿಸರ್ಗ ಸೌಂದರ್ಯವನ್ನು ಹೆಚ್ಚಿಸುತ್ತಿತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಶಾಖೆಗಳಾಗಲೀ, ಒಂದು ಸ್ವತಂತ್ರ ವಿಶ್ವವಿದ್ಯಾಲಯವಾಗುವ ಯಾವ ತಯಾರಿಯೂ ಕಾಣುತ್ತಿರಲಿಲ್ಲ.
ಪ್ರಾರಂಭದಿಂದ ಇದ್ದ, ನಾಲ್ಕು ವಿಭಾಗಗಳು ಮತ್ತು 15-16ಜನ ಅಧ್ಯಾಪಕರುಗಳಾಗಿದ್ದನ್ನು ಬಿಟ್ಟರೆ ವಿಕಾಸದ ಯಾವ ಲಕ್ಷಣಗಳೂ ಇರಲಿಲ್ಲ. ನಾನು ಬಂದು ನಾಲ್ಕು ವರ್ಷಗಳಲ್ಲಿ ನನ್ನ ಜೀವನದಲ್ಲಿ ಮದುವೆ ಮತ್ತು ನಮಗೆ ಮಗುವಾದುದ್ದನ್ನು ಬಿಟ್ಟರೆ ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಯಲ್ಲಿ ಮತ್ತೇನೂ ಬೆಳವಣಿಗೆಗಳು ನಡೆಯಲಿಲ್ಲ.
ಸ್ವಂತ ವಿಷಯದಲ್ಲಿ ನಾನು ಆರ್ಥಿಕ ಸಂಕಷ್ಟಕ್ಕೆ ಬಿದ್ದಿದ್ದೆ. ಮದುವೆಯಾಗುವ ಯಾವ ಪೂರ್ವಭಾವಿ ತಯಾರಿ ಇಲ್ಲದೆ ತಕ್ಷಣ ಆಗಬೇಕಾದ ಕಾರಣ ಸುಮಾರು 15 ಸಾವಿರದಷ್ಟು ವಿಶ್ವಾಸಿಕ ಸ್ನೇಹಿತರಿಂದ ಸಾಲ ಮಾಡಿದ್ದೆ. ಹೊಸ ಸಂಸಾರ ಹೂಡಿಕೆಗೆ ಬೇಕಾದ ಕನಿಷ್ಠ ಸೌಕರ್ಯಗಳೂ ಇಲ್ಲದೆ ಇದ್ದರೂ ಸದ್ಯ ಪಿಡಬ್ಲೂಡಿ ಕ್ವಾಟ್ರಸ್ ಒಂದನ್ನು ಅಲಾಟ್‌ಮೆಂಟ್ ಮಾಡಿಸಿಕೊಂಡಿದ್ದೆ. ಹಾಗಾಗಿ ಮದುವೆಯಾದಾಕ್ಷಣ ಉಳಿದುಕೊಳ್ಳಲು ಅದು ಅನುಕೂಲವಾಗಿತ್ತು. ಪ್ರಭು ಮತ್ತು ರೈತಸಂಘದ ಮಂಜಪ್ಪ, ಸ್ಟೀಲ್ ಅಂಗಡಿ ಶಾಂತು ಎಲ್ಲ ಶಿವಮೊಗ್ಗದಲ್ಲಿ ಪ್ರಭುವಿನ ಸ್ನೇಹಿತರಾಗಿದ್ದರು. ಬೇಕಾದ ಕನಿಷ್ಠ ಪಾತ್ರೆಗಳನ್ನು ಅವನ ಸ್ನೇಹಿತನಿಂದಲೇ ಸಾಲವಾಗಿ ತಂದಿದ್ದೆ. ಉಳಿದಂತೆ ಅವಶ್ಯ ಬಿದ್ದಾಗ ನನ್ನ ಸ್ನೇಹಿತರಾಗಿದ್ದ ಪ್ರಭು, ಜಿಎನ್‌ಕೆ ಜೊತೆ ಸಾಲ ಮಾಡಿ ತೀರಿಸೋ ವ್ಯವಸ್ಥೆಯಲ್ಲಿ ದಿನಗಳು ಕಳೆಯುತ್ತಿದ್ದವು.
ಆರ್ಥಿಕ ಸಂಕಷ್ಟ ಬಿಟ್ಟರೆ ನಮ್ಮಿಬ್ಬರ ಹೊಂದಾಣಿಕೆ ಅನನ್ಯವಾಗಿತ್ತು. ಬೇಂದ್ರೆಯವರ ಕವನದ ಸಾಲಿನಂತೆ
‘ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು’ ಎಂಬಂತೆ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೆವು.
ರಜಾ ದಿನಗಳಲ್ಲಿ ಬಿಆರ್‌ಪಿಯಲ್ಲಿ ಇದ್ದ ಟೆಂಟ್ ಸಿನಿಮಾಕ್ಕೆ ಇಲ್ಲವೇ ಶಿವಮೊಗ್ಗಕ್ಕೆ ರಾಜಕುಮಾರ್ ಅವರ ಹೊಸ ಸಿನಿಮಾಗಳಿಗೆ ಹೋಗಿ ಬರುತ್ತಿದ್ದೆವು. ಇಂದಿರಾ ಕೃಷ್ಣಪ್ಪನವರ ಭದ್ರಾವತಿ ಮನೆಗೆ ರಜಾ ದಿನಗಳಲ್ಲಿ ಹೋಗಿ ಬರುತ್ತಿದ್ದೆವು. ಮದುವೆಯಾದಾಕ್ಷಣ ಎಲ್ಲೂ ‘ಹನಿಮೂನ್’ಗೆಂದು ತಿರುಗಾಡಲು ಹೋಗಲಿಲ್ಲ. ಇದ್ದ ಸ್ನೇಹಿತರ ಮನೆ ಕಡೆಗೆ ಹೋಗಿ ಕಾಲ ಕಳೆದು ಬರುತ್ತಿದ್ದೆವು. ಕುಮ್ಮೂರ ಬಸವಣ್ಯಪ್ಪ, ಉಮಾ ಚಿತ್ರದುರ್ಗದಲ್ಲಿ ಇಬ್ಬರೂ ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಮನೆಯಲ್ಲಿ ಉಳಿದು ಚಿತ್ರದುರ್ಗದ ಕೋಟೆಯನ್ನು ಇಬ್ಬರೇ ಸುತ್ತಿಕೊಂಡು ಬಂದು ಮಾರನೆ ದಿನ ಚಳ್ಳಕೆರೆಗೆ ಹೋಗಿದ್ದೆವು.
ಚಳ್ಳಕೆರೆಯಲ್ಲಿ ಗಾಯತ್ರಿಯ ಸೀನಿಯರ್ ಮತ್ತು ನನ್ನ ಹಳೇ ವಿದ್ಯಾರ್ಥಿನಿ ಶಾರದಾ, ಡಾ. ಚಂದ್ರಶೇಖರ್ ಎಂಬ ಅವರ ಸೋದರ ಮಾವನನ್ನು ಮದುವೆಯಾಗಿ ಅಲ್ಲಿನ ಪಿಹೆಚ್‌ಸಿಯಲ್ಲಿ ಡಾಕ್ಟರ್ ಆಗಿ ಕೆಲಸದಲ್ಲಿದ್ದರು. ನಾವಿದ್ದ ಎರಡೂ ದಿನಗಳಲ್ಲ್ಲಿ ಅಕ್ಕರೆಯಿಂದ ವಿಶೇಷ ಅಡುಗೆ ಮಾಡಿ ತುಂಬ ವಾತ್ಸಲ್ಯದಿಂದ ನಮ್ಮನ್ನು ಸತ್ಕರಿಸಿದ್ದಳು. ಅವರಿಬ್ಬರ ಅಕ್ಕರೆಯ ಆತಿಥ್ಯ ನಾವಿಬ್ಬರೂ ಎಂದೂ ಮರೆಯಲಾಗದ ನೆನಪಾಗಿ ಉಳಿದಿದೆ. ಆ ನಂತರದ ದಿನಗಳಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಶಾರದ ಎಲ್ಲಿದ್ದಾರೆ ಎಂಬುದು ತಿಳಿಯದೆ 40 ವರ್ಷಗಳೇ ಕಳೆದು ಹೋಗಿದ್ದವು.
ಈಗ್ಗೆ ಎರಡು ವರ್ಷಗಳಲ್ಲಿ ಯರ‍್ಯಾರನ್ನೋ ಕೇಳಿ, ಅವರ ವಿಳಾಸ ಪಡೆದು ನಾವಿಬ್ಬರು ನೆನಪು ಮಾಡಿ ಮಾತಾಡಿದೆವು. ಮನೆಗೆ ಆಹ್ವಾನಿಸಿದ ಮೇರೆಗೆ ಇತ್ತೀಚೆಗಷ್ಟೆ ಬಂದು ಹೋಗಿದ್ದಳು. ಹೀಗೆ ಬಂದು ಹೋಗಿ 3 ತಿಂಗಳಲ್ಲಿ ಹೃದಯಾಘಾತದಿಂದ ಶಾರದಾ ತೀರಿಕೊಂಡಳು. ಇಷ್ಟು ದೀರ್ಘ ಕಾಲದ ಅಜ್ಞಾತವಾಸದ ಕಾರಣ ತಿಳಿದು ಬೇಸರವಾಗಿತ್ತು. ಶಾರದಾ-ಚಂದ್ರಶೇಖರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಅಕಾಲಿಕ ಮರಣ ಹೊಂದಿದ್ದಳು.
ಇನ್ನೊಬ್ಬಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಗಂಡ ಡಾಕ್ಟರ್ ಆಗಿದ್ದರೂ ಮನೆಯಲ್ಲಿ ಒಂದು ಎಮ್ಮೆ ಸಾಕಿಕೊಂಡು ಮೇಯಿಸುತ್ತಾ ಗಂಡ ಮಕ್ಕಳಿಗೆ ಹಾಲು, ಮಜ್ಜಿಗೆ ಮಾಡಿ ಉಣಿಸುತ್ತಿದ್ದ ಶಾರದಾ ಅವರಿಗೆ ಬದುಕಿನಲ್ಲಿ ನೆಮ್ಮದಿಗಿಂತ ನೋವೇ ಜಾಸ್ತಿಯಾಗಿದ್ದೊಂದು ವಿಷಾದದ ಸಂಗತಿ. ಒಳ್ಳೆಯ ಮನಸ್ಸುಗಳಿಗೆ ನೋವುಗಳೇ ಹೆಚ್ಚೆಂಬುದು ಅವಳ ವಿಚಾರದಲ್ಲಿ ನಿಜವಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
- ರುದ್ರಪ್ಪ ಹನಗವಾಡಿ
ಇದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.
ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.
ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.
ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)
-
ದಿನದ ಸುದ್ದಿ5 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ4 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ5 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ3 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ4 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ4 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ3 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು