ದಿನದ ಸುದ್ದಿ
ಬುದ್ದನ ಬಗ್ಗೆ ಸತ್ಯಗೊತ್ತಿದ್ದರೂ ಎಲ್ಲಿಯವರೆಗೂ ಸುಳ್ಳನ್ನ ಓದುವಿರಿ..?
ಬುದ್ದ ಎಂದಾಕ್ಷಣ ನೆನಪಿಗೆ ಬರುವುದು ನಾಲ್ಕು ಸನ್ನಿವೇಶಗಳನ್ನು ಮುದುಕ, ರೋಗಿ, ಸನ್ಯಾಸಿ ಮತ್ತು ಶವಗಳನ್ನು ನೋಡಿ ರಾಜ್ಯ ತ್ಯಜಿಸಿದ, ಹೆಂಡತಿ ಮತ್ತು ಮಗು ರಾಹುಲನನ್ನು ರಾತ್ರಿಯೇ ಬಿಟ್ಟು ಹೋಗಿ ಸನ್ಯಾಸಿಯಾದ ಎಂದು ಇಲ್ಲಿಯವರೆಗೂ ಓದಿದ್ದೇವೆ ಅಥವಾ ಓದುತ್ತಿದ್ದೇವೆ ಇದು ಅಶ್ವಘೋಷನ ‘ಬುದ್ದ ಚರಿತೆ” ಕೃತಿ ಆಧರಿತವಾಗಿದೆ.
ಆದರೆ ಇತಿಹಾಸಕಾರನು ಪೂರ್ವಾಗ್ರಹಕ್ಕೆ ಒಳಗಾಗದೇ, ವಸ್ತುನಿಷ್ಠ ದೃಷ್ಟಿಕೋನದಲ್ಲಿ ನೋಡುವ ಮೂಲಕ ಸತ್ಯಾಸತ್ಯತೆಗಳನ್ನು ಪರಮರ್ಶನೆ ಮಾಡುತ್ತಾ ಸಂಶೋಧನಾತ್ಮಕ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಾಗ ಮಾತ್ರ ನೈಜ ಇತಿಹಾಸದ ಮೇಲೆ ಸತ್ಯದ ಬೆಳಕನ್ನು ಚೆಲ್ಲುವುದು.
ಈ ನಿಟ್ಟಿನಲ್ಲಿ ಭಾರತದ ಶ್ರೇಷ್ಠ ಇತಿಹಾಸಕಾರರಲ್ಲಿ ಒಬ್ಬರಾದ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸತತ ಏಳೆಂಟು ವರ್ಷಗಳ ಗಂಭೀರ ಅಧ್ಯಯನ, ಸಂಶೋಧನೆ ಮೂಲಕ ಪಾಲಿ, ಪ್ರಾಕೃತ ಮತ್ತು ಸಂಸ್ಕøತ ಗ್ರಂಥಗಳನ್ನು ಜಾಲಾಡಿ ಬರೆದ ಕೃತಿಯಾದ “ಬುದ್ಧ ಅಂಡ್ ಹಿಸ್ ಧಮ್ಮ” ಎಂಬ ಕೃತಿಯು ಬುದ್ಧನು ಈ ಜಗತ್ತು ಕಂಡ ಅತಿ ಶ್ರೇಷ್ಠ ದಾರ್ಶನಿಕ ಎಂದು ವಿವರಿಸುವ ಮೂಲಕ ತಮ್ಮ ಸಂಶೋಧನಾತ್ಮಕ ಕೃತಿಯಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ.
ಸಿದ್ಧಾರ್ಥ ಸನ್ಯಾಸತ್ವ ಸ್ವೀಕರಿಸಿದ್ದು 29ನೇ ವಯಸ್ಸಿನಲ್ಲಿ ಅಲ್ಲಿಯವರೆಗೂ ಮುದುಕ, ರೋಗಿ, ಸನ್ಯಾಸಿ ಮತ್ತು ಶವವನ್ನು ನೋಡಿರಲಿಲ್ಲವೇ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ನಾವುಗಳು. ಸಿದ್ಧಾರ್ಥ ತನ್ನ ಮಡದಿ ಮತ್ತು ಮಕ್ಕಳನ್ನ ನಡುರಾತ್ರಿಯಲ್ಲಿ ಬಿಟ್ಟುಹೋಗಲಿಲ್ಲ. ಇಡೀ ಜಗತ್ತು ಗೌತಮನನ್ನು ಗೌರವಯುತವಾಗಿ ನೋಡುವಂತೆ ಇತಿಹಾಸವಿದೆ.
ಕ್ರಿ.ಪೂ. ಆರನೆಯ ಶತಮಾನದ ಪೂರ್ವಕ್ಕೂ ಭಾರತ ದೇಶವು ಅನೇಕ ರಾಜ್ಯಗಳಾಗಿ ವಿಂಗಡಿಸಿ ಹೋಗಿತ್ತು. ಅವುಗಳಲ್ಲಿ ಸಣ್ಣ ಮತ್ತು ದೊಡ್ಡ ರಾಜ್ಯಗಳು ಸಹ ಅಸ್ತಿತ್ವದಲ್ಲಿದ್ದವು. ಕೆಲವು ರಾಜ್ಯಗಳು ಪ್ರಭುತ್ವಕ್ಕೆ ಒಳಪಟ್ಟಿದ್ದರೆ, ಇನ್ನು ಕೆಲವು ಒಳಪಟ್ಟಿರಲಿಲ್ಲ. ಒಳಪಟ್ಟವುಗಳೆಂದರೆ-(16) ಅಂಗ, ಮಗಧ ಕಾಶಿ, ಕೋಸಲ, ವ್ರಜ, ಮಲ್ಲ, ಛೇದಿ, ವತ್ಸ, ಕುರು, ಪಾಂಚಾಲ, ಮತ್ಸ್ಯ, ಶೌರಸೇನ, ಅಸ್ಸಾಕ, ಅವಂತಿ, ಗಾಂಧಾರ, ಕಾಂಭೋಜ.
ರಾಜಪ್ರಭುತ್ವ ವ್ಯವಸ್ಥೆಗೆ ಹೊರತಾಗಿ ಕಪಿಲವಸ್ತುವಿನ ಶಾಕ್ಯರು, ಪವದ ಮಲ್ಲರು, ಕುಶಿನಾರರು, ವೈಶಾಲಿಯ ಲಿಚ್ಛವಿಗಳು, ಮಿಥಿಲೆಯ ವಿದೇಹಿಗರು, ರಾಮಗಾಮದ ಕೊಲಿಯರು, ಅಲ್ಲಕಪದ ಬುಲಿಗಳು, ರೇಸಪುಟ್ಟದ ಕಳಿಂಗರು, ಪಿಪ್ಪಲವದ ಮೌರ್ಯರು ಹಾಗೂ ಭಗ್ಗರು ಮುಖ್ಯರಾಗಿದ್ದರು.
ಶಾಕ್ಯರಲ್ಲಿ ಆಡಳಿತ ನಡೆಸುತ್ತಿದ್ದ ಅನೇಕ ಕುಟುಂಬಗಳು ಸರದಿಯ ಮೇಲೆ ರಾಜರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಗೌತಮಬುದ್ಧನು ಸಿದ್ಧಾರ್ಥನಾಗಿ ಜನಿಸಿದ ಪೂರ್ವದಲ್ಲಿ ಅವನ ತಂದೆ ಶಾಕ್ಯರ ಗಣರಾಜ್ಯವಾದ ಕಪಿಲ ವಸ್ತುವಿನ ರಾಜನಾಗಿ ಕಾರ್ಯನಿರ್ವಸುತ್ತಿದ್ದನು. ಶುದ್ಧೋಧನನಿಗೆ ಮಹಾಮಯೆ ಎಂಬುವರೊಡನೆ ವಿವಾಹವಾಯಿತು.
ಮಹಾಮಯೆಯು ಅಂಜನ ಮತ್ತು ಸುಲಕ್ಷಣಾ ಎಂಬ ದಂಪತಿಗಳ ಪುತ್ರಿಯಾಗಿದ್ದಳು. ಶುದ್ಧೋಧನನು ಮಹಾಪರಾಕ್ರಮಿಯಾಗಿದ್ದನ್ನು ಹಾಗೂ ಬಹುದೊಡ್ಡ ಸೈನ್ಯದ ಒಡೆಯನಾಗಿದ್ದನು. ತನ್ನ ಶೌರ್ಯ ಸಾಹಸಗಳಿಂದಾಗಿ ಎರಡನೆಯ ವಿವಾಹದ ಅನುಮತಿಯು ದೊರೆಯಿತು. ಹೀಗಾಗಿ ತನ್ನ ಪತ್ನಿ ಮಹಾಮಾಯೆಯ ಹಿರಿಯ ಸಹೋದರಿಯಾದ ಮಹಾಪ್ರಜಾಪತಿ ಎಂಬಾಕೆಯನ್ನು ವಿವಾಹವಾದನು.
ಕ್ರಿ.ಪೂ. 563 ನೇ ವರ್ಷದ ವೈಶಾಖ ಪೂರ್ಣಿಮೆಯ ದಿನದಂದು ಮಹಾಮಾಯೆಗೆ ಗಂಡುಮಗುವಿಗೆ ಜನ್ಮ ನೀಡಿದ್ದಳು. ಆ ಸಂದರ್ಭದಲ್ಲಿ ‘ಅಸಿತ’ ಎಂಬ ಮಹನ್ ಋಷಿಯು ತನ್ನ ಸೋದರಳಿಯನಾದ ನರದತ್ತನೊಂದಿಗೆ ಹಿಮಾಲಯದಿಂದ ಹೊರಟು ಕಪಿಲವಸ್ತು ಅರಮನೆಗೆ ಬಂದು ಮಗುವನ್ನು ಕೂಲಂಕುಷವಾಗಿ ಪರೀಕ್ಷಿಸಿ, ಮಹಾಪುರುಷನಿಗಿರಬೇಕಾದ ಮೂವತ್ತೆರಡು ಲಕ್ಷಣಗಳು ಮತ್ತು ಎಂಬತ್ತು ಉಪಲಕ್ಷಣಗಳನ್ನು ಮಗು ಪಡೆದಿರುವುದು.
ಹಾಗೂ ಶುಕ್ರಬ್ರಹ್ಮರ ಶರೀರಕ್ಕಿಂತಲ್ಲೂ ಶ್ರೇಷ್ಠವಿದ್ದು, ಅವರಿಗಿಂತಲೂ ಕೋಟ್ಯಂತರ ಹೆಚ್ಚು ದಿವ್ಯಪ್ರಭೆಯನ್ನು ಹೊಂದಿದೆ ಎಂದು ತಮ್ಮ ದಿವ್ಯದೃಷ್ಟಿಯಿಂದ ಕಂಡುಕೊಂಡರು. “ಇದು ಈ ಜಗತ್ತಿನಲ್ಲಿ ಅಪರೂಪಕ್ಕೆ ಜನಿಸಿದ ಒಂದು ಅದ್ಭುತ ಶಿಶು” ಎಂದು ಹೇಳಿದರು. ಮೇಲೆದ್ದು ಮಗು ಸುತ್ತ ಪ್ರದರ್ಶನ ಮಾಡಿ, ಅದರ ಪಾದಕ್ಕೆ ನಮಿಸಿದನು. ಶುದ್ಧೋಧನನ ಕೈಯಿಂದ ಮಗುವನ್ನು ಎತ್ತಿಕೊಂಡು ಧ್ಯಾನಾಸಕ್ತನಾಗಿ “ಇವನು ಭವಿಷ್ಯದಲ್ಲಿ ಗೃಹಸ್ಥನಾದರೆ ಈ ಲೋಕದ ಚಕ್ರಾಧಿಪತಿ ಆಗುತ್ತಾನೆ.
ಅಕಸ್ಮಾತ್ ಗೃಹಸ್ಥ ಜೀವನವನ್ನು ತ್ಯಾಗ ಮಾಡಿ ಸನ್ಯಾಸಿಯಾದರೆ ಬೋಧಿಸತ್ವನಾದ ಪೂರ್ಣ ಬುದ್ಧನಾಗುತ್ತಾನೆ” ಎಂಬ ಮನದಟ್ಟಾಯಿತು. ಆದರೆ ಮುಂದೆ ಗೃಹಸ್ಥನಾಗಿ ಜೀವಿಸಲಾರ ಎಂಬುದು ಮನಗಂಡರು. ಸ್ವಲ್ಪ ಸಮಯದ ನಂತರ ಅಸಿತ ಮುನಿ ಕಣೀರಿಟ್ಟನ್ನು ಇದನ್ನು ನೋಡಿ ಶುದ್ಧೋಧನ ಗಾಬತಿಯಾದನು.
ಆಗ ಮುನಿಗಳು “ಓ ರಾಜನೇ ಈ ಮಗುವಿಗೆ ಭವಿಷ್ಯದಲ್ಲಿ ಭಯವಿಲ್ಲ. ಆದರೆ ನಾನು ನನಗಾಗಿ ಕಣ್ಣೀರಿಡುತ್ತಿದ್ದೇನೆ” ಎಂದು ಹೇಳಿದರು. ಏಕೆ ಸ್ವಾಮಿ ಎಂದು ಶುದ್ಧೋಧನ ಪ್ರಶ್ನಿಸಿದಾಗ, ಅಸಿತ ಮುನಿಗಳು “ನಾನು ವೃದ್ಧನಾಗಿದ್ದೇನೆ.
ಈ ಬಾಲಕಮುಂದೆ ಬುದ್ಧನಾಗಿ ಈ ಜಗತ್ತಿನ ಪರಿಪೂರ್ಣ ಜ್ಞಾನಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಮುಂದೆ ಲೋಕಜ್ಞಾನಿಯಾಗುವ ಇವನು ಜಗತ್ತಿನಲ್ಲಿ ಈ ಹಿಂದೆ ಯಾರೊಬ್ಬ ಮಾನವರು ಮಾಡಿರದ ರೀತಿಯಲ್ಲಿ ತಾನು ಮನಗಂಡ ಸತ್ಯ ಮತ್ತು ಸಿದ್ಧಾಂತಗಳನ್ನು ಬೋಧನೆಯ ಮಾರ್ಗದ ಮೂಲಕ ಮಾಡುತ್ತಾ ಬದುಕಿನ ಪೂರ್ಣಚಕ್ರವನ್ನು ತಿರುಗಿಸುತ್ತಾನೆ. ಅವನ ಜ್ಞಾನದಿಂದಲೇ ಅಸಂಖ್ಯಾತ ಜನರನ್ನು ದುಃಖಸಾಗರದಿಂದ ಪಾರುಮಾಡಿ ಅವರನ್ನು ಸುಖಿಗಳನ್ನಾಗಿ ಮಾಡುತ್ತಾನೆ. ನಾನು ಈ ಬುದ್ಧನನ್ನು ನೋಡಲಾರೆನು.
ಆದ್ದರಿಂದ ಅವನನ್ನು ಪೂಜಿಸಲಾರೆನಲ್ಲಾ ಎಂಬ ದುಃಖದಿಂದ ನಿಟ್ಟುಸಿರುಬಿಟ್ಟು ಕಣ್ಣೀರು ಹಾಕುತ್ತಿದ್ದೇನೆ” ಎಂದು ಆಸಿತ ಮುನಿಗಳು ನುಡಿದರು. ನಂತರ ಶುದ್ಧೋಧನನ ಆತಿಥ್ಯ ಸ್ವೀಕತಿಸಿ ನಿರ್ಗಮಿಸಿದರು. ಮಗು ಜನಿಸಿದ ಐದನೆಯ ದಿನ ‘ಸಿದ್ಧಾರ್ಥ’ ಎಂಬ ಹೆಸರಿಡಲಾಯಿತು. ಶುದ್ಧೋಧನನ ಗೋತ್ರದ ಹೆಸರು ಗೌತಮ ಎಂಬುದಾಗಿತ್ತು. ಆದ್ದರಿಂದ ‘ಸಿದ್ಧಾರ್ಥ ಗೌತಮ’ ಎಂದು ಕರೆಯಲಾಯಿತು.
ತಾಯಿ ಮಹಾಮಾಯೆಯು ಏಳನೆ ದಿನದಲ್ಲಿ ಅನಾರೋಗ್ಯ ಕಾರಣ ಸಿದ್ಧಾರ್ಥನನ್ನು ಪ್ರತಾಪತಿಗೆ ವಶಕ್ಕೊಪ್ಪಿಸಿ ಚಿರನಿದ್ರೆಗೆ ಜಾರಿದಳು. ಸಿದ್ಧಾರ್ಥನಿಗೆ ‘ನಂದ’ ಎಂಬ ಕಿರಿಯ ಸಹೋದರನೂ ಇದ್ದನು (ಶುದ್ಧೋಧನ ಮತ್ತು ಪ್ರಜಾಪತಿಯ ಪುತ್ರ). ಚಿಕ್ಕಪ್ಪ ಶುಕ್ಲೋಧರನ ಮಕ್ಕಳಾದ ಮಹಾನಾಮ (ಸಿದ್ಧಾರ್ಥನಿಗಿಂತ ಹಿರಿಯ) ಮತ್ತು ಅನುರುದ್ಧ. ಮತ್ತೊಬ್ಬ ಚಿಕ್ಕಪ್ಪನಾದ ಅಮಿತೋಧನ ಮಗನಾದ ಆನಂದ, ಚಿಕ್ಕಮ್ಮನ ಮಗನಾದ ದೇವದತ್ತ ಮತ್ತು ಅಮಿತಾ ಎಂಬುವರಾಗಿದ್ದರು. ಸಿದ್ಧಾರ್ಥನು ಇವರುಗಳ ಸಹವಾಸದಲ್ಲಿಯೇ ಬೆಳೆದನು.
ಸಿದ್ಧಾರ್ಥನು ಎಂಟನೇ ವಯಸ್ಸಿನಲ್ಲಿ ಅರಮನೆಯ ಶಿಕ್ಷಣ ಆರಂಭಿಸಿದನು. ಎಂಟು ಬ್ರಾಹ್ಮಣರು ಪ್ರಥಮ ಗುರುಗಳಾಗಿದ್ದರು. ಸಬ್ಬಮಿತ್ತನು ಎರಡನೆಯ ಗುರುವಾಗಿದ್ದನು. ಅಲಾರಕಮನ ಮುನಿಯ ಶಿಷ್ಯನಾದ ಭಾರದ್ವಾಜ ಎಂಬಾತನಿಂದ ಸಿದ್ಧಾರ್ಥನು ಏಕಾಗ್ರತೆ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿದನು.
ಸಿದ್ಧಾರ್ಥನು ಮೂಲತಃ ಮೃದು ಸ್ವಭಾವದನಾಗಿದ್ದು, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಶೋಷಿಸುವುದನ್ನು ಸಹಿಸುತ್ತಿರಲಿಲ್ಲ. ಒಮ್ಮೆ ಕಾರ್ಮಿಕನು ದುಡಿಯುವುದನ್ನು ನೋಡಿ “ಕಾರ್ಮಿಕರು ದುಡಿಯಬೇಕು; ಯಜಮಾನ ಮಾತ್ರ ಅದರ ಶ್ರಮದ ಫಲವನ್ನು ಅನುಭವಿಸಬೇಕು ಎಂಬುದು ಎಂತಹ ನ್ಯಾಯ” ಎಂದು ಪ್ರಶ್ನಿಸಿದನು.
ಸಿದ್ಧಾರ್ಥನು ಬೇಟೆಯಾಡುವುದನ್ನು ಸಹಿಸುತ್ತಿರಲಿಲ್ಲ. ಏಕೆಂದರೆ ಮನುಷ್ಯ ಮನುಷ್ಯನನ್ನು ಕೊಲ್ಲುವುದು ಮತ್ತು ಪ್ರಾಣಿಗಳನ್ನು ಕೊಲ್ಲುವುದು ತರವಲ್ಲ, ಎಂದು ಬೇಟೆಯಾಡುವುದನ್ನು ನಿರಾಕರಿಸಿದ್ದನು.
ಕ್ಷತ್ರಿಯನಾಗಿ ಇದೆಲ್ಲ ಕಲಿಯಬೇಕು ಎಂದು ಪ್ರಜಾಪತಿ ಮತ್ತು ಶುದ್ಧೋಧನನ ಬಯಕೆಯೆಯಾಗಿತ್ತು. ಆದರೆ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು ಸಿದ್ಧಾರ್ಥನ ಇಚ್ಚೆಯಾಗುತ್ತಿತ್ತು. ಧ್ಯಾನಕ್ಕೆ ಸ್ನೇಹಿತರನ್ನು ಪ್ರೇರೇಪಿಸುತ್ತಿದ್ದನು. ಸೂಕ್ತ ಆಸನಗಳನ್ನು ಕಲಿಸುವುದರ ಜೊತೆಗೆ “ನನಗೆ ಸುಖ ದೊರೆಯಲಿ, ನನ್ನ ಬಂಧು-ಬಾಂಧವರೆಲ್ಲರೂ ಸುಖವಾಗಿರಲಿ, ಜಗತ್ತಿನ ಎಲ್ಲಾ ಜೀವರಾಶಿಗಳು ಸುಖವಾಗಿರಲಿ” ಎಂಬ ವಿಷಯಗಳನ್ನು ಕುರಿತು ಧ್ಯಾನಿಸುವಂತೆ ಸ್ನೇಹಿತರಿಗೆ ಸಲಹೆ ನೀಡುತ್ತ ಪಾಲಿಸುತ್ತಿದ್ದನು. ಆದರೆ ಸ್ನೇಹಿತರು ಗಂಭೀರವಾಗಿ ಪಾಲಿಸುತ್ತಿರಲಿಲ್ಲ.
ದಂಡಪಾಣಿ ಎಂಬ ಶಾಕ್ಯನ 16 ವರ್ಷದ ಮಗಳಾದ ಯಶೋಧರೆಯನ್ನ 18 ವರ್ಷದ ಸಿದ್ಧಾರ್ಥನು ವಿವಾಹವಾದನು. ಹಲವು ವರ್ಷಗಳ ನಂತರ ರಾಹುಲ ಎಂಬ ಗಂಡು ಮಗುವಿಗೆ ಜನ್ಮ ನೀಡಿದಳು.
ಆಗಾಗ ಶೂದ್ಧೋಧನನಿಗೆ ಅಸಿತ ಮುನಿಗಳು ಹೇಳಿದ ಮಾತು ನೆನಪಾಗುತ್ತಿತ್ತು. ಸಿದ್ಧಾರ್ಥನು ಸನ್ಯಾಸಿಗಿಂತಲು ಚಕ್ರವರ್ತಿಯಾಗಿ ನೋಡುವುದು ಇಷ್ಟವಾಗುತ್ತಿತ್ತು. ಆದ್ದರಿಂದ ಸಿದ್ಧಾರ್ಥನ ಭೋಗ ಜೀವನಕ್ಕೆ ಋತುಮಾನಗಳಿಗೆ ಅನುಸಾರ ಚಳಿಗಾಲ, ಬೇಸಿಗೆ ಮತ್ತು ಮಳೆಗಾಲಕ್ಕೆ ತಕ್ಕಂತೆ ಮೂರು ಅರಮನೆಗಳನ್ನು ಕಟ್ಟಿ ಸುಂದರ ಯುವತಿಯರನ್ನ ಅಂತಃಪುರದಲ್ಲಿ ಇಟ್ಟಿದ್ದನು. ಆ ಮೋಹಕ ತಾರೆಯರು ಸಿದ್ಧಾರ್ಥನ ಮುಂದೆ ಸೋತೋದರು.
ಶಾಕ್ಯ ಜನಾಂಗದ ನಿಯಮದ ಪ್ರಕಾರ ಇಪ್ಪತ್ತು ವರ್ಷ ತುಂಬಿದ ಪ್ರತಿಯೊಬ್ಬ ಶಾಕ್ಯ ಯುವಕನೂ ಶಾಕ್ಯರ ಸಂಘದ ಸದಸ್ಯನಾಗಬೇಕಿತ್ತು. ಸಂಘದ ನಿಯಮಗಳಿಗೆ ಬದ್ಧನಾಗಿರಬೇಕಿತ್ತು. ಅದರಂತೆ ಸಿದ್ಧಾರ್ಥನು ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಶಾಕ್ಯರ ಸಂಘದ ಸದಸ್ಯತ್ವವನ್ನು ಸ್ವೀಕರಿಸಿದನು. ನಂತರ ಎಂಟು ವರ್ಷಗಳ ಕಾಲ ಯಾವುದೇ ಗಂಭೀರ ಸಮಸ್ಯೆಯು ಬರಲಿಲ್ಲ ಎಂಟು ವರ್ಷಗಳು ಕಳೆದ ನಂತರ ಅಂದರೆ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಕಪಿಲವಸ್ತು ನಗರದ ಮಗ್ಗುಲಲ್ಲಿ ಹರಿಯುತ್ತಿದ್ದ ‘ರೋಹಿಣಿ’ ಎಂಬ ನದೀ ನೀರಿನ ಹಂಚಿಕೆಯ ವಿಚಾರವಾಗಿ ‘ಶಾಕ್ಯರಿಗೂ’ ಹಾಗೂ ಪಕ್ಕದ ಗಣರಾಜ್ಯವಾದ ‘ಕೋಲಿಯ’ ಎಂಬ ಸಮುದಾಯ ನಡುವೆ ಘರ್ಷಣೆ ಏರ್ಪಟ್ಟಿತು.
ಈ ಕುರಿತು ಶಾಕ್ಯರ ಸಂಘದ ಅಧಿವೇಶನದಲ್ಲಿ ಚರ್ಚೆನಡೆಯಿತು. ಪದೇ ಪದೇ ಜಗಳವಾಡುವ ಕೋಲಿಯರಿಗೆ ಬುದ್ದಿ ಕಲಿಸುವ ಉದ್ದೇಶದಿಂದ ಅವರ ಮೇಲೆ ಯುದ್ಧ ಮಾಡಬೇಕೆಂದು ಸಂಘ ತೀರ್ಮಾನ ತೆಗೆದುಕೊಂಡಿತು. ಈ ತೀರ್ಮಾನವನ್ನು ಮತಕ್ಕೆ ಹಾಕಿದಾಗ ಸಿದ್ಧಾರ್ಥನು ಎದ್ದು ನಿಂತು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬಹುದಾದ ನೀರಿನ ವಿಷಯದಲ್ಲಿ ನಮ್ಮ ಸಹೋದರರಂತೆ ಇರುವ ಕೋಲಿಯರ ಮೇಲೆ ಯುದ್ಧ ಬೇಡವೆಂದು ತನ್ನ ಅಭಿಪ್ರಾಯವನ್ನು ಮಂಡಿಸಿದರು.
ಸಿದ್ಧಾರ್ಥನ ಅಭಿಪ್ರಾಯಕ್ಕೆ ಬಹುಮತಬಾರದೇ ಬಿದ್ದು ಹೋಯಿತು. ಆ ಸಂದರ್ಭದಲ್ಲಿ ತನ್ನ ನಿಲುವಿಗೆ ಅಂಟಿಕೊಂಡ ಸಿದ್ಧಾರ್ಥನು ನಾನು ಯುದ್ಧ ಮತ್ತು ಹಿಂಸೆಯ ವಿರೋಧಿ. ಹಾಗಾಗಿ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದನು. ಏಕೆಂದರೆ ಯುದ್ಧ ಮಾಡುವುದರಿಂದ ನಮ್ಮ ಉದ್ದೇಶಗಳನ್ನು ಈಡೇರುವುದಿಲ್ಲ. ಬದಲಾಗಿ ಮತ್ತೊಂದು ಯುದ್ಧಕ್ಕೆ ಬೀಜವನ್ನು ಬಿತ್ತುತ್ತವೆ. ಎಂಬುದು ಸಿದ್ಧಾರ್ಥನ ಚಿಂತೆನೆಯಾಗಿತ್ತು.
ಶಾಕ್ಯರ ನಿಯಮದ ಪ್ರಕಾರ ಸಂಘದ ಸದಸ್ಯನಾದವನು ಮೂರು ನಿಯಮಗಳಲ್ಲಿ ಒಂದನ್ನು ಕಡ್ಡಾಯವಾಗಿ ಪಾಲಿಸ ಬೇಕಿತ್ತು. ಅವುಗಳೆಂದರೆ- ಒಂದು ಯುದ್ಧ ಮಾಡುವುದು ಎರಡು ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗುವುದು. ಮೂರು ಗಡಿಪಾರು ಶಿಕ್ಷೆಗೆ ಗುರಿಯಾಗಿ ದೇಶಭ್ರಷ್ಟನಾಗಿ ರಾಜ್ಯದಿಂದ ಹೊರ ಹೋಗುವುದು. ಈ ಮೂರು ಅವಕಾಶಗಳಲ್ಲಿ ಸಿದ್ಧಾರ್ಥನು ಯುದ್ಧ ಮತ್ತು ಹಿಂಸೆಯನ್ನು ವಿರೋಧಿಸಿ, ಗಡಿಪಾರಿನ ಶಿಕ್ಷೆಯನ್ನು ಆಯ್ಕೆ ಮಾಡಿಕೊಂಡನು.
ಇದಾದ ನಂತರ ತನ್ನ ಅರಮನೆಗೆ ತಲುಪುವ ಮೊದಲೇ ಆತನ ತಂದೆ-ತಾಯಿಯರಿಗೆ ವಿಷಯ ತಿಳಿದು ತೀವ್ರ ದುಃಖತಪ್ತರಾಗಿದ್ದರು. “ನೀನೇ ಇಲ್ಲದಿರುವಾಗ ನಮಗೆ ಈ ಭೂಮಿಯಿಂದ ಪ್ರಯೋಜನವಾದರೂ ಏನು?” ಎಂದು ಶುದ್ಧೋಧನ ಕಣ್ಣೀರಿಟ್ಟನು. ಪ್ರಜಾಪತಿ ಗೌತಮಿಯು ಶುದ್ಧೋಧನ ಮಾತಿಗೆ ಧ್ವನಿಗೂಡಿಸಿ “ನಾನು ಸಹ ಅವರ ಮಾತನ್ನು ಒಪ್ಪುತ್ತೇನೆ. ನಮ್ಮನೆಲ್ಲ ತೊರೆದು ನೀನು ಏಕಾಂಗಿಯಾಗಿ ಹೇಗೆ ಹೋಗಬಲ್ಲೆ?” ಎಂದು ಮಗನನ್ನು ಪ್ರಶ್ನಿಸಿದಳು.
ಸಿದ್ಧಾರ್ಥನು ತನ್ನ ತಾಯಿಯನ್ನು ಸಂತೈಸುತ್ತಾ, “ಅಮ್ಮಾ, ನೀನು ಕ್ಷತ್ರಿಯನ ತಾಯಿಯೆಂದು ಯಾವಾಗಲೂ ಹೇಳಿಕೊಳ್ಳುತ್ತಿರಲಿಲ್ಲವೇ? ಆದ್ದರಿಂದ ನೀನು ಈಗ ಒಬ್ಬ ಧೀರ ತಾಯಿಯಂತೆ ವರ್ತಿಸಬೇಕು. ಈ ರೀತಿ ದುಃಖಿಸುವುದು ನಿನ್ನಂತಹವಳಿಗೆ ಶೋಭೆ ತರುವುದಿಲ್ಲ. ನಾನು ಯುದ್ಧರಂಗಕ್ಕೆ ಹೋಗಿ ಮರಣ ಹೊಂದಿದ್ದರೆ ಏನು ಮಾಡುತ್ತಿದ್ದೇ? ಆಗಲೂ ನೀನು ಈ ರೀತಿ ದುಃಖಿಸುತ್ತಿದ್ದೆಯಾ?” ಎಂದು ಪ್ರಶ್ನಿಸಿದನು.
ಆಗ ಪ್ರಜಾತಿಯು “ಯುದ್ಧರಂಗದಲ್ಲಿ ಅಂತಹ ಸಾವು ಕ್ಷತ್ರಿಯನಿಗೆ ಶೋಭೆ ತರುವುದು. ಆದರೆ, ನೀನು ನಿರ್ಜನ ಅರಣ್ಯಕ್ಕೆ ತೆರಳಿ ಜನಸಮೂಹದಿಂದ ದೂರವಿದ್ದು ಬದುಕಲು ಹೊರಟಿದ್ದೀಯ!. ನಾವು ಇಲ್ಲಿ ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ? ನಮ್ಮನ್ನೂ ನಿನ್ನ ಜೊತೆ ಕರೆದುಕೊಂಡು ಹೋಗು ಎಂದು ಹೇಳುತ್ತಿದ್ದೇನೆ” ಎಂದಂಳು.
“ಅಮ್ಮಾ ನೀನು ದಯವಿಟ್ಟು ನನ್ನ ದಾರಿಗೆ ಅಡ್ಡ ಬರಬೇಡ. ನನಗೆ ಅನುಮತಿಯಿತ್ತು, ಆಶೀರ್ವದಿಸು. ಈಗ ನಡೆಯುತ್ತಿರುವುದೆಲ್ಲವೂ ಒಳ್ಳೆಯದಕ್ಕೆ ಎಂದು ಭಾವಿಸು” ಎಂದು ಸಿದ್ಧಾರ್ಥನು ಒತ್ತಾಯಿಸಿದನು. ಗೌತಮಿ ಮತ್ತು ಶುದ್ಧೋಧನ ಮೌನಕ್ಕೆ ಶರಣಾದರು.
ನಂತರ ಸಿದ್ಧಾರ್ಥನು ಪತ್ನಿ ಯಶೋಧರೆ ವಾಸಗೃಹದತ್ತ ನೆಡೆದನು. ವಿಷಯ ಹೇಳಿ ಹೇಗೆ ಒಪ್ಪಿಸಲಿ ಎಂದು ಮೌನವಾಗಿ ಯಶೋಧರೆ ಮುಂದೆ ನಿಂತನು. ಆಗ ಯಶೋಧರೆ “ಕಪಿಲವಸ್ತುವಿನ ಸಂಘದ ಸಭೆಯಲ್ಲಿ ನಡೆದ ಸಂಗತಿಯೆಲ್ಲ ನನಗೆ ಗೊತ್ತಿದೆ” ಎಂದಳು. ಹಾಗಾದರೆ ‘ಪರಿವ್ರಾಜಕನಾಗಬೇಕೆಂಬ ನನ್ನ ನಿರ್ಣಯವ ಬಗ್ಗೆ ನಿನ್ನ ಅಭಿಪ್ರಾಯವೇನು?’ ಎಂದು ಕೇಳಿದನು.
ಯಶೋಧರೆಯು “ನಿನ್ನ ಸ್ಥಾನದಲ್ಲಿ ನಾನಿದ್ದರೂ ಇದನ್ನೇ ಮಾಡಬೇಕಿತ್ತು. ಇದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯವಿತ್ತು? ಕೋಲಿಯರ ಮೇಲಿನ ಯುದ್ಧದಲ್ಲಿ ಭಾಗವಹಿಸಲು ನಾನು ಒಪ್ಪುತ್ತಿರಲಿಲ್ಲ. ನಿಮ್ಮ ತೀರ್ಮಾನ ಸರಿಯಾಗಿದೆ. ಇದಕ್ಕೆ ನನ್ನ ಸಂಪೂರ್ಣ ಸಮ್ಮತಿಯಿದೆ ಜೊತೆಗೆ ಸಹಕಾರವೂ ಇದೆ. ನಾನು ನಿಮ್ಮೊಂದಿಗೆ ಪರಿವ್ರಾಜಕತ್ವವನ್ನು ಸ್ವೀಕರಸಬಹುದಿತ್ತು. ಆದರೆ, ರಾಹುಲನನ್ನು ನೋಡಿಕೊಳ್ಳಬೇಕಾಗಿರುವುದರಿಂದ ನಾನು ಹಾಗೆ ಮಾಡಲಾರೆ.
ನೀವು ನಿಮ್ಮ ತಂದೆ ತಾಯಿ ಮತ್ತು ಮಗುವಿನ ವಿಚಾರದಲ್ಲಿ ಆತಂಕ ಪಡಬೇಡಿ. ನನ್ನ ಕೊನೆಯ ಉಸಿರು ಇರುವ ವರೆಗೂ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ. ನೀವು ನಿಮ್ಮ ಬಂಧುಬಾಂಧವರನ್ನೆಲ್ಲ ತ್ಯಜಿಸಿ ಪರಿವ್ರಾಜಕ ದೀಕ್ಷೆಯನ್ನು ಸ್ವೀಕರಿಸುತ್ತಿರುವದರಿಂದ ನಿಮ್ಮ ಜೀವನದ ಹೊಸಪಥದ ಅನ್ವೇಷಣೆಯಲ್ಲಿ ಮನುಕುಲಕ್ಕೆ ಶ್ರೇಯಸ್ಸು ಸಿಗುವಂತಾಗಲಿ ಎಂದು ಹಾರೈಸುತ್ತೇನೆ” ಎಂದು ಉತ್ತರಿಸಿದಳು.
ಯಶೋಧರೆಯ ಮಾತನ್ನು ಕೇಳಿ ಸಿದ್ಧಾರ್ಥನು ತುಂಬಾ ಪ್ರಭಾವಿತನಾದನು. ಯಶೋಧರೆಯು ಎಂತಹ ಉದಾರಶೀಲಳು, ಶೌರ್ಯಸಂಪನ್ನಳು, ದೃಢಚಿತ್ತಳು ಎಂಬುದು ಅವನಿಗೆ ಮನದಟ್ಟಾಯಿತು. ತಾನು ಎಂಹತ ಅದೃಷ್ಟಶಾಲಿ. ಆದರೆ, ವಿಧಿ ತಮ್ಮಿಬ್ಬರನ್ನೂ ಬೇರ್ಪಡಿಸುತ್ತಿದೆ ಎಂದುಕೊಂಡನು. ಅನಂತರ ರಾಹುಲನನ್ನು ಕರೆತರುವಂತೆ ಆಕೆಗೆ ತಿಳಿಸಿದನು. ಪಿತೃವಾತ್ಸಲ್ಯ ತುಂಬಿದ ನೋಟದಿಂದ ಮಗುವನ್ನು ಒಮ್ಮೆ ನೋಡಿ ಅಲ್ಲಿಂದ ನಿರ್ಗಮಿಸಿದನು.
ಹೀಗೆ ತಂದೆ ತಾಯಿ ಪತ್ನಿ ಯಶೋಧರೆಗೆ ತಾನು ಪಾರಿವ್ರಾಜಕ ಪಡೆಯುವುದಾಗಿ ಒಪ್ಪಿಗೆಯನ್ನು ಪಡೆದನು. ಮರುದಿನ ಪ್ರೀತಿಯ ಕುದುರೆ ಕಂಥಕವನ್ನು ಏರಿ, ಸೇವಕನಾದ ಚನ್ನನ ಜೊತೆ ಕಪಿಲವಸ್ತು ಸಮೀಪವಿದ್ದ ಭಾರಧ್ವಜ ಎಂಬ ಮುನಿಯ ಆಶ್ರಮದತ್ತ ನಡೆದರು. ತಾನು ಧರಿಸಿದ್ದ ವಸ್ತ್ರಾಭರಣಗಳನ್ನು ಕಳಚಿ ಚನ್ನನಿಗೆ ನೀಡಿ ತಲೆ ಕೂದಲನ್ನು ತೆಗೆಸಿ, ಬಿಕ್ಷೆ ಪಾತ್ರೆಯನ್ನು ಹಿಡಿದು ಪಾರಿವ್ರಾಜಕವನ್ನು ತನ್ನ 29 ವಯಸ್ಸಿನಲ್ಲಿ ಸ್ವೀಕರಿಸಿದನು.
ಮುಂದೊಂದು ಕೆಲವು ದಿನಗಳ ನಂತರ ಐದು ಜನ ಪರಿವ್ರಾಜಕ ಪಡೆದ ಬಿಕ್ಕುಗಳು ಗೌತಮನ ಕುಟಿರವ ಬಳಿ ತಮ್ಮ ಕುಟಿರವನ್ನು ನಿರ್ಮಿಸಿಕೊಳ್ಳಲು ಬಂದಾಗ, ಸಿದ್ಧಾರ್ಥನ ಪರಿವ್ರಾಜಕದ ಹಿನ್ನೆಲೆ ತಿಳಿದು. ನೀವು ಕಪಿಲವಸ್ತುವನ್ನು ತ್ಯಜಿಸಿ ಬಂದಾಗ ಶಾಕ್ಯರು ಕೋಲಿಯರ ವಿರುದ್ಧ ಯುದ್ಧ ಮಾಡಬಾರದೆಂದು ದೊಡ್ಡ ಚಳುವಳಿಯೇ ನಡೆಯಿತು.
“ಕೋಲಿಯರು ನಮ್ಮ ಸಹೋದರರು, ಸಹೋದರರಾದವರು ಪರಸ್ಪರ ಕಾದಾಡುವುದು ತಪ್ಪು, ಸಿದ್ಧಾರ್ಥ ಗೌತಮನ ದೇಶತ್ಯಾಗವನ್ನು ಮರೆಯಬೇಡಿ” ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿ ಶಾಂತಿಯುತವಾಗಿ ‘ರೋಹಿಣಿ’ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಂಡರು. ನೀವು ಪರಿವ್ರಾಜಕ ಬಿಟ್ಟು ನಿಮ್ಮ ಕುಟುಂಬವನ್ನು ಸೇರಬಹುದಲ್ಲ ಎಂದರು.
ಅದಕ್ಕೆ ಸಿದ್ಧಾರ್ಥನು ಈ ಶುಭಾವಾರ್ತೆಯನ್ನು ತಿಳಿಸಿದ್ದು ನನಗೆ ಸಂತೊಷವಾಗಿದೆ ಇದು ನನಗಾದ ಗೆಲುವು ನಿಜ. ಆದರೆ ನಾನು ಹಿಂದಿರುಗಲಾರೆ. ನಾನು ಪರಿವ್ರಾಜಕವನ್ನು ಮುಂದುವರೆಸುವೆ. ಎಂದು ಮುಂದೆ ದೀರ್ಘ ತಪಸ್ಸಿನಿಂದ ಸಿದ್ಧಾರ್ಥ ಗೌತಮ ಬದಲಾಗಿ ಗೌತಮ ಬುದ್ದನಾಗುತ್ತಾನೆ.
ಇದಾದ ಏಳು ವರ್ಷಗಳ ನಂತರ ತಂದೆ ತಾಯಿ ಶುದ್ಧೋದನ (ಕೊನೆಯ ಭೇಟಿ), ಪ್ರಜಾಪತಿ ಗೌತಮಿ, ಪತ್ನಿ ಯಶೋಧರೆ ಮತ್ತು ಮಗ ರಾಹುಲನನ್ನು ಭೇಟಿ ಮಾಡುತ್ತಾನೆ.
ಬುದ್ಧನಿಗೆ ಎಂಬತ್ತು ವರ್ಷದ ವಯಸ್ಸಿನಲ್ಲಿ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿದನು. ಕೊನೆಯಲ್ಲಿ ಮಗನನ್ನು ಭೇಟಿ ಮಾಡಿ ಉಪದೇಶವನ್ನು ಹೇಳಿದನು.ಬುದ್ಧನ ಕೊನೆಯ ದಿನಗಳೆಂದರೆ ಕ್ರಿ.ಪೂ. 482 ನೇ ವೈಶಾಖ ಪೌರ್ಣಿಮೆಯ ನಡುರಾತ್ರಿಯಲ್ಲಿ ಬುದ್ಧನು ಅಸುನೀಗಿದನು.
ಪಠ್ಯಪುಸ್ತಕಗಳಲ್ಲಿ ವಿಷಯಗಳನ್ನು ಸೇರಿಸುವಾಗ ಸತ್ಯಾಸತ್ಯತೆಗಳನ್ನು ಪರಮರ್ಶನ ಮಾಡಬೇಕು.
ಇತಿಹಾಸಕಾರರು ಇತಿಹಾಸವನ್ನು ವ್ಯಕ್ತಿನಿಷ್ಟತೆಗೆ ಅಥವಾ ವಸ್ತುನಿಷ್ಟತೆಗ ಆಧ್ಯತೆ ನೀಡಿರುವರೆ ಎಂಬುದನ್ನು ವಿಮರ್ಶೆಗೆ ಒಳಪಡಿಸಿದಾಗ ನೈಜ ಇತಿಹಾಸ ಅನಾವರಣಗೊಳ್ಳುವುದು. ಈ ಪ್ರಯತ್ನ ಪಠ್ಯಕ್ರಮ ರಚನೆಕಾರರು ಮಾಡಬೇಕು. ಶಿಕ್ಷಕರು ವಿಮರ್ಶಿಸಿ ವಿದ್ಯಾರ್ಥಿಗಳಿಗೆ ಹೇಳಿದಾಗ ಮಾತ್ರ ವಿದ್ಯಾರ್ಥಿಗಳು ಸತ್ಯಾಸತ್ಯತೆಗಳನ್ನು ಪರಮರ್ಶನೆ ಮಾಡುವ ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಲು ಸಾಧ್ಯ. ಈ ರೀತಿ ವಿದ್ಯಾರ್ಥಿಗಳು ಸತ್ಯಾನ್ವೇಷಣೆ ಮೂಲಕ ಸಂಶೋಧನಾ ಪ್ರವೃತ್ತಿಗಳು ಬೆಳೆಸಿಕೊಳ್ಳುವರು.
ಕೃತಿ : “ಬುದ್ಧ ಅಂಡ್ ಹಿಸ್ ಧಮ್ಮ” – ಡಾ.ಬಿ.ಆರ್. ಅಂಬೇಡ್ಕರ್
-ಸಂಪಾದನೆ
ವೆಂಕಟೇಶ್ ಎಸ್
ಸಹಾಯಕ ಪ್ರಾಧ್ಯಾಪಕರು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


