ದಿನದ ಸುದ್ದಿ
ಬಾಣಲೆಯಿಂದ ಬೆಂಕಿಗೆ : ಕೊರೊನಾ ರಣವೈದ್ಯ ಬೆಳಕಿಗೆ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/05/adani_-mining_Suddidina_corona.jpg&description=ಬಾಣಲೆಯಿಂದ ಬೆಂಕಿಗೆ : ಕೊರೊನಾ ರಣವೈದ್ಯ ಬೆಳಕಿಗೆ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/05/adani_-mining_Suddidina_corona.jpg&description=ಬಾಣಲೆಯಿಂದ ಬೆಂಕಿಗೆ : ಕೊರೊನಾ ರಣವೈದ್ಯ ಬೆಳಕಿಗೆ', 'pinterestShare', 'width=750,height=350'); return false;" title="Pin This Post">
- ನಾಗೇಶ್ ಹೆಗಡೆ
ಕೊರೊನಾಮಾರಿ ಬರುವ ಮೊದಲು ಭಾರತದ ನದಿಗಳೆಲ್ಲ ಕೊಳಕು ಕೂಪಗಳಾಗಿದ್ದವು. ವಾಯುಮಾಲಿನ್ಯ ದಟ್ಟವಾಗಿತ್ತು. ಟ್ರಾಫಿಕ್ ಗದ್ದಲ ಅತಿಯಾಗಿತ್ತು. ಕಾರ್ಖಾನೆಗಳು, ಗಣಿಗಳು ಲಂಗುಲಗಾಮಿಲ್ಲದೇ ನಿಸರ್ಗ ಸಂಪತ್ತನ್ನು, ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದವು. ಕೊರೊನಾ ಬಂದಮೇಲೆ ಎಲ್ಲಕಡೆ ಶಾಂತಿ ನೆಲೆಸಿತ್ತು. ಲಾಕ್ಡೌನ್ ಎಂಬ ಹಠಾತ್ ಎಡವಟ್ಟಿನಿಂದಾಗಿ ಅದೆಷ್ಟೊ ಲಕ್ಷ ಕಾರ್ಮಿಕರು ನೆಲೆತಪ್ಪಿ ಗುಳೆ ಹೊರಟು, ಘನಘೋರ ಸಂಕಷ್ಟಗಳಿಗೆ ತುತ್ತಾಗಿದ್ದನ್ನು ಬಿಟ್ಟರೆ , ಅಭಿವೃದ್ಧಿಯ ಭರಾಟೆಯಿಂದ ನಲುಗಿದ್ದ ನೆಲ-ನೀರು-ಗಾಳಿ-ವನ್ಯಜೀವ ಎಲ್ಲವೂ ತುಸು ಉಸಿರಾಡತೊಡಗಿದವು.
ಕೊರೊನಾ ನಂತರ ಹೊಸ ಭಾರತ ಉದಯಿಸಲಿದೆ ಎಂದು ನಮ್ಮಲ್ಲಿ ಅನೇಕರು ಸಣ್ಣ ಆಸೆಯನ್ನಿಟ್ಟುಕೊಂಡಿದ್ದರು. ಆದರೆ ಈಗಿನ ಸರಕಾರ ರಣವೈದ್ಯದ ವೈಖರಿ ನೋಡಿದರೆ, ಕಾಯಿಲೆಯ ನೆಪದಲ್ಲಿ ದುರ್ಬಲರನ್ನು (ಅಂದರೆ ಉದ್ಯೋಗ ಕಳಕೊಂಡವರನ್ನು, ನಡೆನಡೆದು ಸುಸ್ತಾದವರನ್ನು, ಹಸಿದವರನ್ನು) ಕಂದಕಕ್ಕೆ ದೂಡಿ ಮಣ್ಣು ಮುಚ್ಚಲು ಹೊರಟಂತೆ ಕಾಣುತ್ತದೆ. ನಮ್ಮಲ್ಲಿ ಹಕ್ಕಿಜ್ವರ ಬಂತೆಂದು ಹ್ಯಾಚರಿಯ ಸಾವಿರಾರು ಕೋಳಿಗಳನ್ನು ಕಂದಕಕ್ಕೆ ಹಾಕಿ ಮಣ್ಣು ಮುಚ್ಚಿದ ಹಾಗೆ.
(ಇಲ್ಲೊಂದು ಕ್ರೂರ ವ್ಯಂಗವಿದೆ: ಪ್ರಧಾನಿ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿಯಲ್ಲಿ ಯಾವಯಾವ ಬಾಬ್ತಿಗೆ ಎಷ್ಟೆಷ್ಟು ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಲ್ಕು ಟ್ರಾಂಚ್ (tranche)ಗಳಲ್ಲಿ ಹಂಚಿದ್ದಾರೆ. ನಾಲ್ಕನೆಯ ಕಂತಿನಲ್ಲಂತೂ ಗಣಿಗಾರಿಕೆ ವಿಸ್ತರಣೆಗೆ, ರಕ್ಷಣಾ ಉತ್ಪಾದನೆ, ವಿಮಾನಯಾನ, ಬಾಹ್ಯಾಕಾಶ ಸಾಹಸಕ್ಕೆ ಇತ್ಯಾದಿಯಂತೆ.
ಟ್ರಾಂಚ್ ಎಂದರೆ ಹೋಳು ಅಥವಾ ಭಾಗ. ಆದರೆ ನೀವು ಗೂಗಲ್ ಕನ್ನಡ ನಿಘಂಟಿನಲ್ಲಿ ಅದರ ಅರ್ಥವನ್ನು ಹುಡುಕಿದರೆ ಟ್ರಾಂಚ್ ಎಂದರೆ ‘ಕಂದಕ’ trench ಎಂಬ ತಪ್ಪು ಅರ್ಥವಿದೆ, ಬೇಕಿದ್ದರೆ ನೋಡಿ. ನಿಜಕ್ಕೂ 40 ಕೋಟಿ ಜನರನ್ನು ಕಂದಕಕ್ಕೆ ಬೀಳಿಸಿ ತಪ್ಪನ್ನೇ ಸರಿಯೆಂದು, trancheನ್ನೇ trench ಎಂದು ತೋರಿಸುವ ಹುನ್ನಾರವೆ?.)
ಹಳ್ಳಿಯ ಜನರು ಹಳ್ಳಿಗೇ ಮರಳಿ ವಲಸೆ ಬಂದಾಗ ಎಷ್ಟೊಂದು ವಿಧಗಳಲ್ಲಿ ಅವರಿಗೆ ನೆರವಾಗಲು ಸಾಧ್ಯವಿತ್ತು. ಅದರ ಕೆಲವು ಯಶಸ್ವೀ ಉದಾಹರಣೆಗಳು ನಮ್ಮಲ್ಲಿವೆ: ಮಹಾರಾಷ್ಟ್ರದಲ್ಲಿ ಹೀವ್ಡೆ ಬಝಾರ್ ಎಂಬ ಗ್ರಾಮವಿದೆ. ನಮ್ಮ ಕೋಲಾರದ ಯಾವುದೇ ಊರಿನ ಹಾಗೆ ಬರೀ 430 ಮಿ.ಮೀ. ಮಳೆ ಬೀಳುವ ಹಳ್ಳಿ.
1980ರ ದಶಕದಲ್ಲಿ ಬಹಳಷ್ಟು ಜನ ದಿಕ್ಕೆಟ್ಟು ಉದ್ಯೋಗ ಹುಡುಕಿ ಮುಂಬೈಗೋ ಪುಣೆಗೋ ಹೋದರು. ಆ ಊರಿನ ಪುಣ್ಯಾತ್ಮನೊಬ್ಬ ಸರಪಂಚನೆಂದು ಆಯ್ಕೆಯಾದ. ಮಳೆಕೊಯ್ಲು ಮಾಡಿಸಿದ. ಗಿಡಮರ ನೆಡಿಸಿದ. ಅಂತರ್ಜಲ ಹೆಚ್ಚಿತು. ಊರು ನಳನಳಿಸಿತು. ಕೃಷಿ, ಕುರಿಸಾಕಣೆ, ಡೇರಿ ಎಲ್ಲಕ್ಕೂ ಚೈತನ್ಯ ಬಂತು.
ಗುಳೆ ಹೋದವರು ಮರಳಿ ಬಂದರು. ಇಂದು ಆ ಊರಲ್ಲಿ (ನಂಬಿ ಇದನ್ನು) ಬಡತನದ ರೇಖೆಗಿಂತ ಕೆಳಗಿದ್ದ 135 ಕುಟುಂಬಗಳು ಮೇಲೆದ್ದು ಬಂದಿವೆ, 60 ಜನರು ದಶಲಕ್ಷಾಧೀಶರಾಗಿದ್ದಾರೆ. ಸರಕಾರಿ ಇಲಾಖೆಗಳ ಅಧಿಕಾರಿಗಳಿಗೆ ಈ ಊರೇ ಈಗ ಪ್ರವಾಸೀ ತಾಣವಾಗಿದೆ. ಬೇಕಿದ್ದರೆ Hewre Bazar ಎಂದು ಅಂತರಜಾಲದಲ್ಲಿ ಹುಡುಕಿ ನೋಡಿ.
ನಗರಮುಖೀ ವಲಸೆಯನ್ನು ಹೀಗೆ ಹಿಮ್ಮೊಗ ತಿರುಗಿಸಲು ಸಾಧ್ಯವೆಂದು ಮೊದಲು ತೋರಿಸಿದವರು ಅಣ್ಣಾ ಹಜಾರೆ ಮತ್ತು ರಾಜೇಂದ್ರ ಸಿಂಗ್.
ತಮ್ಮ ಊರಿನ ನೀರು, ನೆಲ, ಗಾಳಿ, ಬೆಳಕನ್ನೇ ಸಂಪತ್ತನ್ನಾಗಿ ಬಳಸಿಕೊಂಡು ಗ್ರಾಮದ ಸಮೃದ್ಧಿಗೆ ಕಾರಣರಾದ ಬೇರೆ ನೂರಾರು ಜನರ ಉದಾಹರಣೆಗಳು ನಮ್ಮಲ್ಲಿವೆ. ಕೊಯಮತ್ತೂರಿನ ಸಮೀಪದ ಒಡಂತ್ತುರೈ ಗ್ರಾಮ ತನ್ನ ಬಿಸಿಲಿನಿಂದ ಬರುವ ವಿದ್ಯುತ್ತನ್ನೇ ಮಾರಾಟ ಮಾಡುತ್ತ ಗ್ರಾಮಪಂಚಾಯತನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಆಮಿರ್ ಖಾನ್ ಆರಂಭಿಸಿದ ವಾಟರ್ ಕಪ್ ಮಳೆಕೊಯ್ಲಿನ ಸ್ಪರ್ಧೆಯಿಂದಾಗಿ ಮಹಾರಾಷ್ಟ್ರದಲ್ಲಿ ಅನೇಕ ಹಳ್ಳಿಗಳಲ್ಲಿ ಜಲ ಸಂವರ್ಧನೆ ಆಗಿದ್ದು, ಊರು ಬಿಟ್ಟು ಹೋದವರು ಮರಳಿ ಬರುತ್ತಿದ್ದಾರೆ. ಟ್ಯಾಂಕರ್ ನೀರನ್ನೇ ಆಧರಿಸಿದ್ದ ಬರಪೀಡಿತ ಹಳ್ಳಿಗಳು ಈಗ ತಮ್ಮ ಬಳಿಯ ಹೆಚ್ಚುವರಿ ನೀರನ್ನು ನಗರಕ್ಕೂ ಪೂರೈಸಲು ಮುಂದಾಗಿವೆ. ಇಂಧನ ವನಗಳನ್ನು ಸೃಷ್ಟಿಸಿ ನಗರಗಳಿಗೆ ಬಯೊಡೀಸೆಲ್ಲನ್ನೂ ಒದಗಿಸುವ ಕನಸು ಕಾಣುತ್ತಿದ್ದಾರೆ.
ಇಂಥ ಸ್ವಾವಲಂಬಿ ಗ್ರಾಮಗಳ ಒಂದು ಉದಾಹರಣೆಯೂ ಸರಕಾರದ ಗಮನಕ್ಕೆ ಬರಲೇ ಇಲ್ಲವೆ? ಗ್ರಾಮೀಣ ಜಲಸಂಪತ್ತನ್ನು ಹೆಚ್ಚಿಸುವ ಸರಳ ವಿಧಾನ ಅದಕ್ಕೆ ಗೊತ್ತೇ ಇಲ್ಲವೆ?
ಸರಕಾರ ಮನಸ್ಸು ಮಾಡಿದರೆ, ತಾಲ್ಲೂಕು ಮಟ್ಟದಲ್ಲೇ ಉತ್ತಮ ಗುಣಮಟ್ಟದ ಸಾಬೂನು, ಟೂಥ್ಪೇಸ್ಟ್, ಸೊಳ್ಳೆಪರದೆ, ಸೊಳ್ಳೆಬತ್ತಿ, ಶಾಂಪೂ, ಸುಗಂಧ ತೈಲ, ಪೇಯ, ಪ್ಯಾರಾಸಿಟೆಮಾಲ್, ಆಯುರ್ವೇದ ಔಷಧಗಳು, ಅಷ್ಟೇಕೆ ಗ್ರಾಮಗಳಿಗೆ ಬೇಕಾದ ಪ್ಲಾಸ್ಟಿಕ್ ಚಪ್ಪಲಿಗಳಿಂದ ಹಿಡಿದು ಕೃಷಿ ಸಲಕರಣೆ, ರಸಗೊಬ್ಬರಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಬಹುದಿತ್ತು.
ಇವನ್ನೆಲ್ಲ ಬೃಹತ್, ನಗರಕೇಂದ್ರಿತ ಉದ್ಯಮಗಳ ಮುಷ್ಟಿಯಿಂದ ತಪ್ಪಿಸಿ ತಾಲ್ಲೂಕು ಮಟ್ಟಕ್ಕೆ ತಂದು ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಿ, ವಾಣಿಜ್ಯ ರಂಗದ ಅಸಲೀ ಸ್ವಾವಲಂಬನೆ ಸಾಧಿಸಬಹುದಿತ್ತು. ಅದರ ಬದಲಿಗೆ ಖನಿಜ ಮತ್ತು ಕಲ್ಲಿದ್ದಲ ಗಣಿಗಾರಿಕೆಗೆ ಹೆಬ್ಬಾಗಿಲು ತೆರೆಯಲಿದೆ.
ಕಲ್ಲಿದ್ದಲು ಎಂಬುದೇ ಮಹಾ ವಿಷವೃತ್ತ. ನಮ್ಮ ಎಲ್ಲ ಕಲ್ಲಿದ್ದಲ ನಿಕ್ಷೇಪಗಳೂ ಛತ್ತೀಸಗಢ, ಝಾರ್ಖಂಡ್, ಬಿಹಾರ್‌ನ ದಟ್ಟ ಅರಣ್ಯಗಳಲ್ಲಿವೆ. ಅಲ್ಲಿ ಆದಿವಾಸಿಗಳೂ ಮೂಲನಿವಾಸಿಗಳೂ ಇದ್ದಾರೆ. ಅವರನ್ನೆಲ್ಲ ಗುಡಿಸಿ ಒತ್ತಿ, ಜೀವಲೋಕವನ್ನು ಧ್ವಂಸ ಮಾಡಿ, ತೆರೆದ ಗಣಿಗಳ ಮೂಲಕ ಕಲ್ಲಿದ್ದಲನ್ನು ಸ್ಫೋಟಿಸಿ, (ಚಿತ್ರವನ್ನು ಗಮನಿಸಿ) ನೂರಾರು ಉಷ್ಣವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿದರೆ ಹೊಮ್ಮುವ ಕಾರ್ಬನ್ ಡೈಆಕ್ಸೈಡ್ ಇಡೀ ಜಗತ್ತಿಗೇ ಮಾರಕ.
ಹಾರುಬೂದಿ, ಸೆಕೆ ಹೆಚ್ಚಳ, ಜಲಮಾಲಿನ್ಯ ಒಂದಲ್ಲ, ಎರಡಲ್ಲ. ಅಲ್ಲಿಂದ ಪಡೆದ ವಿದ್ಯುತ್ತು ನಗರಗಳ ಮಾಲ್‌ಗಳಿಗೆ.ಮತ್ತು ತರಾವರಿ ಯಂತ್ರಗಳಿಗೆ, ಕೊಳ್ಳುಬಾಕ ಶೋಕಿ ವಸ್ತುಗಳ ಉತ್ಪಾದನೆಗೆ ಹೋಗುತ್ತದೆ. ಅದರ ಲಾಭವೆಲ್ಲ ತಿರ್ಗಾ ಕೋಟ್ಯಧೀಶ ಉದ್ಯಮಿಗಳಿಗೆ.
ನಿಸರ್ಗ ಸಂಪತ್ತನ್ನು ಹೀಗೆ ಲೂಟಿ ಮಾಡಲು ದೊಡ್ಡ ಕಂಪನಿಗಳಿಗೆ ಅನುವು ಮಾಡಿಕೊಡಲೆಂದೇ ತೆರಿಗೆದಾರರ 50 ಸಾವಿರ ಕೋಟಿ ಮೀಸಲಿಡುವುದಾಗಿ ಸರಕಾರ ಘೋಷಿಸಿದೆ. ಅದಕ್ಕೆಂದು ಪರಿಸರ ಸಂರಕ್ಷಣೆಯ ಬಿಗಿ ಕಾನೂನುಗಳನ್ನು ಸಡಿಲ ಮಾಡುವ ಸಿದ್ಧತೆ ಆಗಲೇ ನಡೆದಿದೆ.
ನಿಸರ್ಗದ ದುರಂತ ಕತೆ ಹೀಗೆ. ಹಾಗಿದ್ದರೆ ಮನುಷ್ಯರ ಕತೆ? ಈ ರಣವೈದ್ಯ ಮಾಡಿದರೆ 40 ಕೋಟಿ ಬಡ, ಕಡುಬಡವರ ಹಾಗು ಆದಿವಾಸಿಗಳ ಸ್ಥಿತಿಗತಿ ಉತ್ತಮಗೊಂಡೀತೆ? ಅದೂ ಇಲ್ಲ.
ಮೂಲ ನಿವಾಸಿಗಳಿಗೆ ಅರಣ್ಯಾಧಾರಿತ ಉದ್ಯೋಗ ಕೊಡಲೆಂದು 6000 ಕೋಟಿ ಮೀಸಲಿದೆಯಂತೆ. ಅದರ ಕತೆ ಕೇಳಿ. ಅದು ಖಾಸಗಿಯ ಕಂಪನಿಗಳ ಜಂಟಿ ಯೋಜನೆಯಂತೆ. ಅಂದರೆ ಅರಣ್ಯಗಳಿಗೂ ಕೋಟ್ಯಧೀಶರು ಲಗ್ಗೆ ಇಡಲಿದ್ದಾರೆ. ಮೂಲನಿವಾಸಿಗಳ ಜಮೀನನ್ನು ಮುಗಿಸಿದ ನಂತರ ಮುಂದೇನು ಆದೀತೆಂದು ನಾವು ಊಹಿಸಬಹುದು.
ಆದಿವಾಸಿಗಳ ಕಲ್ಯಾಣವೇ ಮುಖ್ಯ ಗುರಿಯಾಗಿದ್ದಿದ್ದರೆ ಈಗಿರುವ ನರೇಗಾ ಸ್ಕೀಮನ್ನೇ ಸುಧಾರಿಸಿ ಅವರಿಗೂ ವಿಸ್ತರಿಸಬಹುದಿತ್ತು. ಗಿಡ ನೆಡುವ, ಬೇಲಿ ಕಂದಕಗಳಂಥ ಭದ್ರತಾ ಕೆಲಸವನ್ನು ಅವರೇ ಮಾಡಬಹುದಿತ್ತು. ಹಳ್ಳಿಗಳಲ್ಲೂ ನರೇಗಾ ದುಡಿಮೆಯ ಅವಧಿಯನ್ನು ಈಗಿನ 100 ದಿನಗಳ ಬದಲು 200-300 ಅಥವಾ ಅಗತ್ಯವಿದ್ದಷ್ಟು ದಿನಗಳಿಗೆ ವಿಸ್ತರಿಬಹುದಿತ್ತು. ಅದರತ್ತ ಆದ್ಯತೆಯೇ ಇಲ್ಲ.
ಅಷ್ಟೊಂದು ಜನರು ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಅವರಿಂದ ಎಷ್ಟೊಂದು ಗ್ರಾಮೀಣ ಅಭಿವೃದ್ಧಿಯ ಕೆಲಸ ಮಾಡಿಸಬಹುದಿತ್ತು. ಹಳ್ಳಿಗಳಿಗೆ ಹಿಂದಿರುಗಿದ ಆ ನತದೃಷ್ಟರಿಗೆ ಯಾವ ನೆರವೂ ಇಲ್ಲ. ನಗರ ನಿರ್ಮಾಣದಲ್ಲಿ ತೊಡಗಿದ್ದ ಅವರಲ್ಲಿ ಅನೇಕರು ಹಿಂದೆಲ್ಲ ಚುನಾವಣೆ ಬಂದಾಗ ತಮ್ಮದೇ ಖರ್ಚಿನಲ್ಲಿ ಊರಿಗೆ ಹೋಗಿ ಮತ ಹಾಕಿ ಈ ಸರಕಾರವನ್ನು ನಿಲ್ಲಿಸಿದವರು. ಪ್ರಧಾನಿಯವರ ಒಂದು ಅವಸರದ ಲಾಕ್‌ಡೌನ್ ಘೋಷಣೆಯಿಂದಾಗಿ ಇಡೀ ಜಗತ್ತೇ ಕಂಬನಿ ಮಿಡಿಯುವಂಥ ದುರ್ದೆಸೆಗೆ ಈಡಾದವರು. ಅವರ ಕೈ ಹಿಡಿಯುವ ಬದಲು ಬಹುಕೋಟ್ಯಧೀಶರ ಕೈ ಹಿಡಿಯಲು ಸರಕಾರ ಹೊರಟಿದೆ.
ದೇಶದ 20 ಕೋಟಿ ಮಹಿಳೆಯರ ಜನ್‌ಧನ್ ಖಾತೆಗೆ ತಿಂಗಳಿಗೆ 500 ರೂ. ಜೊತೆಗೆ 80 ಕೋಟಿ ಜನರಿಗೆ 6 ಕಿಲೊ ಧಾನ್ಯವನ್ನು ಮೂರು ತಿಂಗಳ ಅವಧಿಗೆ ಕೊಡುವುದಾಗಿ ಸರಕಾರ ಮಾರ್ಚ್‌ನಲ್ಲಿ ಹೇಳಿತ್ತು. ಅದನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸಬಹುದಿತ್ತು. ಈ ತೀರಾ ಜುಜುಬಿ ಸಹಾಯದ ಮೊತ್ತವನ್ನು ಹೆಚ್ಚಿಸಬಹುದಿತ್ತು. ಹೆಚ್ಚಿಸುವುದು ಹಾಗಿರಲಿ, ಸರಕಾರದ್ದೇ ದಾಖಲೆಗಳ ಪ್ರಕಾರ ಈ ನೆರವೂ ಶೇ. 25ರಷ್ಟು ಜನರಿಗೆ ಮಾತ್ರ ತಲುಪಿದೆ. ಕೇವಲ 110 ಲಕ್ಷ ಟನ್ ಧಾನ್ಯ ಮಾತ್ರ ವಿತರಣೆಯಾಗಿದೆ.
ಹಾಗೆಂದು ನಮ್ಮ ದೇಶ ಅಷ್ಟೊಂದು ದರಿದ್ರ ಸ್ಥಿತಿಯಲ್ಲೇನೂ ಇಲ್ಲ. ತಜ್ಞರ ಲೆಕ್ಕಾಚಾರದ ಪ್ರಕಾರ ಕೆಲಸ ಕಳೆದುಕೊಂಡವರಿಗೆ ತಿಂಗಳಿಗೆ 7 ಸಾವಿರ ನಗದು ಮತ್ತು ದೇಶದ ಶೇ. 80ರಷ್ಟು ಜನಕ್ಕೆ ತಿಂಗಳಿಗೆ ಹತ್ತು ಕಿಲೊ ಧಾನ್ಯದಂತೆ ಆರು ತಿಂಗಳವರೆಗೆ ಉಚಿತವಾಗಿ ಕೊಟ್ಟಿದ್ದರೂ ನಮ್ಮ ಜಿಡಿಪಿಯ ಕೇವಲ 3%ರಷ್ಟು ವೆಚ್ಚವಾಗುತ್ತಿತ್ತು. ಅದನ್ನಂತೂ ಮಾಡಲಿಲ್ಲ. ತನ್ನ ಬಹುತೇಕ ವೈಫಲ್ಯಗಳಿಗೆ ರಾಜ್ಯಗಳನ್ನು ದೂರುವುದನ್ನು ಬಿಟ್ಟು ಸರಕಾರ ಏನನ್ನೂ ಮಾಡಲಿಲ್ಲ. ರಾಜ್ಯಗಳಿಗೂ ಸಿಗಬೇಕಾದ ಧನಸಹಾಯವನ್ನು ಪೂರ್ತಿ ನೀಡಲಿಲ್ಲ.
ಈಗ ಟ್ರಾಂಚ್ 3ರ ಕತೆ ಕೇಳಿ.
ಸಣ್ಣ ಮತ್ತು ಮಧ್ಯಮ ಉದ್ಯಮ(MSME)ಗಳು ಚೇತರಿಸಿಕೊಳ್ಳಲೆಂದು 3.7 ಲಕ್ಷ ಕೋಟಿ ಸಾಲ ಕೊಡುವುದಾಗಿ ಸರಕಾರ ಹೇಳಿದೆ. ಅದು ಆಮೇಲಾಗಲಿ, ಈವರೆಗೆ ಸಂದಾಯವಾಗಬೇಕಿದ್ದ 5 ಲಕ್ಷ ಕೋಟಿ ಬಾಕಿ ಹಣವನ್ನು ಮೊದಲು ಕೊಡ್ರಪ್ಪಾ ಎಂದು MSME ಗಳು ಕೇಳುತ್ತಿವೆ. ಅದಂತೂ ಬಾಕಿ ಇದೆ. ಈ ಹೊಸ ಸಾಲವನ್ನು ಪಡೆದು ಉತ್ಪಾದನೆ ಆರಂಭಿಸೋಣವೆಂದರೆ ಕಾರ್ಮಿಕರು ಎಲ್ಲಿದ್ದಾರೆ? ಅಂದಾಜು 12 ಕೋಟಿ ಕಾರ್ಮಿಕರು ಕೆಲಸ ಕಳೆದುಕೊಂಡು ತಂತಮ್ಮ ಹಳ್ಳಿಗಳಿಗೆ ಹೋಗಿದ್ದಾರೆ.
ಅವರು ಮರಳಿ ಬಾರದಂತೆ ಮಾಡಲು ಹೊಸ ಕಾರ್ಮಿಕ ನೀತಿಗಳನ್ನು ಜಾರಿಗೆ ತರಲು ಸರಕಾರ ಹೊರಟಿದೆ. ಕೆಲಸಗಾರರ ಹಕ್ಕುಗಳನ್ನೇ ಮೊಟಕುಗೊಳಿಸಿ ಅವರ ದುಡಿಮೆಯ ಅವಧಿಯನ್ನು 50% ಜಾಸ್ತಿ ಮಾಡುತ್ತಾರಂತೆ. ಸರಿ, ಕಾರ್ಮಿಕರು ಹೇಗೋ ಬಂದು ಉತ್ಪಾದನೆ ಆರಂಭಿಸಿದರೂ ಫ್ಯಾಕ್ಟರಿಯ ಉತ್ಪನ್ನಗಳನ್ನು ಖರೀದಿಸಲು ಜನರ ಬಳಿ ಹಣ ಎಲ್ಲಿದೆ? ಅದಕ್ಕೆ ಈಗ ಟ್ರಾಂಚ್ 4ನ್ನು ಹಣಕಾಸು ಸಚಿವೆ ಘೋಷಣೆ ಮಾಡಿದೆ.
ಹಣದ ಚಲಾವಣೆ ಹೆಚ್ಚಿಸಲೆಂದೇ ಎಗ್ಗಿಲ್ಲದ ಗಣಿಗಾರಿಕೆ, ಹೊಸ ವಿಮಾನ ನಿಲ್ದಾಣ ನಿರ್ಮಾಣ, ರಕ್ಷಣಾ ಸಾಮಗ್ರಿ ಉತ್ಪಾದನೆ, ಬಾಹ್ಯಾಕಾಶ ಎಲ್ಲವನ್ನೂ ಖಾಸಗಿ ಕಂಪನಿಗಳಿಗೆ ವಹಿಸುತ್ತಾರಂತೆ. ಲಾಕ್‌ಡೌನ್ ಸಡಿಲವಾಗುವ ಮೊದಲೇ ದೇಶದ ಹಿತಾಸಕ್ತಿಯನ್ನು ಕಾಯಬೇಕಿದ್ದ ನಿಯಮಗಳನ್ನೇ ಸಡಿಲ ಮಾಡಲಾಗುತ್ತಿದೆ.
ಅದಕ್ಕೇ, ‘ವಲಸಿಗರಿಗೆ ಮನೆ ತಲುಪಲು ಸಾಧ್ಯವಾಗುತ್ತಿಲ್ಲ; ಬಾಹ್ಯಾಕಾಶಕ್ಕೆ ಹೋಗಲು ಧನಿಕರಿಗೆ ಅನುಕೂಲ ಮಾಡುತ್ತಾರಂತೆ’ ಎಂದು ಜೈರಾಮ್ ರಮೇಶ್ ಕುಟುಕಿದ್ದಾರೆ. ಯಾರೆಷ್ಟೇ ಕುಟಕಿದರೂ ಪ್ರಭುತ್ವಕ್ಕೆ ವಂದಿಮಾಗಧರ ಮತ್ತು ಬಹುಕೋಟ್ಯಧೀಶರ ಭೋಪರಾಕ್ ಮಾತ್ರ ಕೇಳಿಸುತ್ತದೆ. ಕಂದಕಕ್ಕೆ ಕುಸಿದವರ ಆಕ್ರಂದನ ಮಾತ್ರ ಕೇಳಿಸುತ್ತಿಲ್ಲ.
ಅರಣ್ಯವಾಸಿಗಳನ್ನು ಹೊರಗಟ್ಟುವ ಗಣಿಗುತ್ತಿಗೆದಾರರ ಷಡ್ಯಂತ್ರದ ವಿರುದ್ಧ ಆದಿವಾಸಿಗಳ ಒಂದು ಸೊಗಸಾದ ಪ್ರತಿಭಟನಾ ಲಾವಣಿಯನ್ನು ಈ ಕೊಂಡಿಯಲ್ಲಿದೆ: ಕ್ಲಿಕ್ ಮಾಡಿ ನೋನೋಡಿ
https://www.youtube.com/watch?v=sFmsl7KrZn8
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ
ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆಯ ಬಾಷಾನಗರ,ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.
ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂಬ ಭರವಸೆಯನ್ನೂ ನೀಡಿದರು.
ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.
ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರಕಾರದ ದುರಾಡಳಿತ ಸಂಬಂಧ ಆರೋಪ ಪಟ್ಟಿ ಬಿಡುಗಡೆ ಮಾಡಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ 3 ವರ್ಷಗಳಲ್ಲಿ ಈ ಸರಕಾರ ಒಳ್ಳೆಯ ಕಾರಣಕ್ಕೆ ಯಾವಾಗ ಹೆಸರಾಗಿತ್ತು ಎಂದು ಹೇಳಲೂ ಸಿಗುವುದಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ದರೋಡೆ ಪ್ರಕರಣಗಳು ಸುದ್ದಿಯಾದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿವೆ. ಈ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ಕುರಿತ ಚಾರ್ಜ್ ಶೀಟನ್ನು ಇವತ್ತು ಬಿಡುಗಡೆ ಮಾಡಿದ್ದೇವೆ ಎಂದರು.
ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸುದ್ದಿಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಇದೆ. ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವಿನ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಗೆ ಈ ಸರಕಾರ ಸುದ್ದಿಯಲ್ಲಿತ್ತು. ಅಂಗನವಾಡಿ ಶಿಕ್ಷಕಿಯರ ಚಳವಳಿ, ಆಶಾ ಕಾರ್ಯಕರ್ತೆಯರ ಚಳವಳಿ, ಅತಿಥಿ ಉಪನ್ಯಾಸಕರಿಂದ ಸಂಬಳ ಸಿಗುತ್ತಿಲ್ಲವೆಂದು ಹೋರಾಟ, ಗುತ್ತಿಗೆ ನೌಕರರ ಹೋರಾಟ- ಹೀಗೆ ಚಳವಳಿಗಳ ಕಾಟಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ವ್ಯಂಗ್ಯವಾಡಿದರು.
ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ…
ಕಳೆದ 3 ವರ್ಷದಲ್ಲಿ ಕೆಟ್ಟ ಕಾರಣಕ್ಕಾಗಿ ಈ ಸರಕಾರ ಸುದ್ದಿಯಲ್ಲಿದೆಯೇ ಹೊರತು ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ವಿಶ್ಲೇಷಿಸಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಲಿಯಾದವರು ನೂರಾರು ಜನ; ರಸ್ತೆ ಗುಂಡಿ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಹೀಗೆ ಪ್ರತಿನಿತ್ಯ ಸರಕಾರ ಸುದ್ದಿಯಲ್ಲಿ ಇರುವುದು ಕೇವಲ ಕೆಟ್ಟ ಕಾರಣಕ್ಕಾಗಿ ಎಂದು ಆರೋಪಿಸಿದರು. ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು.
ಮುಡಾ, ವಾಲ್ಮೀಕಿ ನಿಗಮದ ಹಗರಣ ಮಾನಗೆಟ್ಟ ಕೆಲಸವಲ್ಲವೇ?
ಮುಖ್ಯಮಂತ್ರಿಗಳು ಬಿಜೆಪಿಯವರು ಮಾನಗೆಟ್ಟವರು ಎಂದು ಭಾಷಣದಲ್ಲಿ ಹೇಳಿದ್ದಾರೆ. ಯಾರು ಮುಖ್ಯಮಂತ್ರಿಗಳೇ ಮಾನಗೆಟ್ಟವರು? ಮುಡಾ ಹಗರಣ ಯಾರ ಮೇಲೆ ಬಂತು? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ನಿಮ್ಮ ಸರಕಾರದ ಸಚಿವರೇ ರಾಜೀನಾಮೆ ಕೊಡಬೇಕಾಯಿತಲ್ಲವೇ? ಇದು ಮಾನಗೆಟ್ಟ ಕೆಲಸವಲ್ಲವೇ? ಎಂದು ಕೇಳಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣವನ್ನು ನಿಮ್ಮ ಒಬ್ಬ ಸಚಿವರು ಹೆಂಡತಿಗೆ ಒಡವೆ ಕೊಡಿಸಲು, ಚುನಾವಣೆಗೆ ಬಾರ್ ನಿಂದ ಎಣ್ಣೆ ಸರಬರಾಜು ಮಾಡಲು ಹಣ ಬಳಸಿದ್ದು ಮರ್ಯಾದೆ ಇದ್ದವರು ಮಾಡುವ ಕೆಲಸವೇ ಎಂದು ಕೇಳಿದರು.
ಮರ್ಯಾದೆ ಇದ್ದವರು ಅಧಿಕಾರಕ್ಕೆ ಅಂಟಿಕೊಳ್ಳುವರೇ?
ನೀವು ಬಿಜೆಪಿ ಮೇಲೆ ಶೇ 40 ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿದ್ದೀರಿ. ಗುತ್ತಿಗೆದಾರರು ಶೇ 60 ಕಮಿಷನ್‍ನ ಸರಕಾರ ಎಂದು ನಿಮ್ಮ ಸರಕಾರದ ಮೇಲೆ ಆರೋಪ ಮಾಡಿದ್ದಾರಲ್ಲವೇ? ಮರ್ಯಾದೆ ಇದ್ದವರು ಆ ಆರೋಪ ಕೇಳಿಯೂ ಅಧಿಕಾರಕ್ಕೆ ಅಂಟಿಕೊಳ್ಳುತ್ತಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಅಬಕಾರಿ ಸಚಿವರ ಮೇಲೆ ಬಾರ್ ಮಾಲೀಕರು ತಿಂಗಳ ಮಾಮೂಲಿ ಕೇಳುವ ಕುರಿತು ಆರೋಪ ಮಾಡಿದ್ದಾರಲ್ಲವೇ? ಇದು ಮರ್ಯಾದೆ ಇದ್ದವರು ಮಾಡುವ ಕೆಲಸವೇ? ಮಾನಗೆಟ್ಟವರು ಮಾಡುವ ಕೆಲಸವೇ ಎಂದು ಪ್ರಶ್ನೆ ಹಾಕಿದರು.
ಮುಖ್ಯಮಂತ್ರಿಗಳೇ, ಇಡೀ ಸಂಪುಟದಲ್ಲಿ ಮಾನಗೆಟ್ಟವರು ಇದ್ದಾರೆಯೇ ಹೊರತು ಮರ್ಯಾದೆ ಇದ್ದವರು ಯಾರಿದ್ದಾರೆ ಹೇಳಿ ಎಂದು ಕೇಳಿದರು. ಮಾನಗೆಟ್ಟ ಕೆಲಸ ಮಾಡುವವರನ್ನು ಸಚಿವರನ್ನಾಗಿ ಮಾಡಿಕೊಂಡು, ಶೇ 60ರ ಆರೋಪ ಹೊತ್ತುಕೊಂಡು ನೀವು ಬಿಜೆಪಿ ವಿರುದ್ಧ ಮಾನಗೆಟ್ಟ ಬಿಜೆಪಿ ಎಂದು ಆರೋಪ ಮಾಡುತ್ತೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಿಮ್ಮದು ದರೋಡೆಕೋರ ಸರಕಾರವಲ್ಲವೇ?
ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿಕೆಗಳಾಗಿವೆ. ನಿಮ್ಮ ಸರಕಾರವನ್ನು ದರೋಡೆಕೋರ ಸರಕಾರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ನಿಮ್ಮ ಸರಕಾರ ಯಾವ್ಯಾವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂಬ ಪಟ್ಟಿ ಕೊಡಲೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ..
ನಂದಿನಿ ಹಾಲಿನ ದರ ಏರಿಕೆ ಮಾಡಿದ್ದೀರಿ. ಪೆಟ್ರೋಲ್ ಮೇಲೆ 3 ರೂ. ಸೆಸ್, ಡೀಸೆಲ್ ಮೇಲೆ 5.08 ರೂ. ಸೆಸ್ ಹಾಕಿದ್ದೀರಿ. ಕೇಂದ್ರ ಸರಕಾರ ದರ ಇಳಸಿದರೆ ನೀವು ಸೆಸ್ ಹಾಕಿ ಅವರ ಲಾಭ ಜನರಿಗೆ ಸಿಗದಂತೆ ಮಾಡಿದ್ದೀರಿ ಎಂದು ಟೀಕಿಸಿದರು. ಬಸ್ ಪ್ರಯಾಣ ದರ ಶೇ 15, ಮೆಟ್ರೋ ದರ ಶೇ 50ರಷ್ಟು ಹೆಚ್ಚಿಸಿದ್ದೀರಿ. ಪ್ರತಿ ಯೂನಿಟ್ 4.50 ರೂ. ವಿದ್ಯುತ್ ದರವನ್ನು ರೂ 5.90 ಮಾಡಿದ್ದೀರಿ. ವಾಣಿಜ್ಯ ದರವನ್ನು 7 ರೂ.ಗೂ ಹೆಚ್ಚಳ ಮಾಡಲಾಗಿದೆ. ಅಬಕಾರಿ ಸುಂಕವನ್ನು ಶೇ 20ರಷ್ಟು ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದೀರಿ. 20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ. ಅದರ ಜಾಗಕ್ಕೆ 100, 200 ರೂ.ಗಳ ಸ್ಟಾಂಪ್ ಪೇಪರ್ ಖರೀದಿಸಬೇಕಾಗಿದೆ. ನಮ್ಮ ಚಿನ್ನ ನಾವು ಒತ್ತೆ ಇಡಲು 0.5ರಷ್ಟು ಸ್ಟಾಂಪ್ ಡ್ಯೂಟಿ ಕಟ್ಟಬೇಕಾಗಿದೆ ಎಂದು ಆಕ್ಷೇಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ4 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ4 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ಅಂಕಣ3 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ3 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ4 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

