ಬಹಿರಂಗ
ಡಾಕಿನಿ ಎಂದರೆ ಬೌದ್ಧ ಭಿಕ್ಕುಣಿ / ಬೌದ್ಧ ಯೋಗಿಣಿ
- ಪರಶುರಾಮ್. ಎ
ಭಾರತದ ಬಹುಭಾಗ ಇತಿಹಾಸ, ಇತಿಹಾಸವೇ ಅಲ್ಲ. ಹಾಗೆಂದರೆ ಭಾರತಕ್ಕೆ ಇತಿಹಾಸವಿಲ್ಲ ಎಂದಲ್ಲ. ಭಾರತದ ಪ್ರಾಚೀನ ಇತಿಹಾಸವನ್ನು ಬೇಕೆಂದೆ ಮನುವಾದಿಗಳು ತಿರುಚಿದ್ದಾರೆ. ಬುದ್ಧ ಮತ್ತು ಆರ್ಯರ ನಡುವೆ ನಡೆದ ಈ ಇತಿಹಾಸವನ್ನು ಬೇಕೆಂದೆ ಮರೆಮಾಚಿದ್ದಾರೆ. ಹಾಗೂ ಮಕ್ಕಳಿಗೆ ಮಹಿಳೆಯರಿಗೆ ಮನೋರಂಜನಾ ಕಥೆಗಳನ್ನಾಗಿ ಮಾಡಿದ್ದಾರೆ ಎಂದು ಡಾ.ಬಿ.ಆರ್ ಅಂಬೇಡ್ಕರರು ಹೇಳಿರುವುದು ಎಷ್ಟು ಸತ್ಯವೆಂಬುದನ್ನು ನಾವು ಈಗ ಗಮನಿಸೋಣ.
ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ ಒಂದು ಕಾಲದಲ್ಲಿ ಪ್ರಚಲಿತವಿದ್ದ ಬುದ್ಧ ಧರ್ಮವನ್ನು ಇತಿಹಾಸಕಾರರು ಬೇಕೆಂದೆ ನಿರ್ಲಕ್ಷಿಸಿದ್ದಾರೆ. ಮತ್ತು ತಿರಸ್ಕರಿಸಿದ್ದಾರೆ. ಇಂತಹ ಅದೆಷ್ಟೋ ನಿರ್ಲಕ್ಷಿತಗೊಂಡ ಬೌದ್ಧ ಇತಿಹಾಸವನ್ನು ಡಾ.ಬಿ.ಅಂಬೇಡ್ಕರರು ತಮ್ಮ ಅಪೂರ್ವ ಜ್ಞಾನ ಸಂಪತ್ತಿನಿಂದಾಗಿ ಬಯಲಿಗೆ ಎಳೆದಿದ್ದಾರೆ. ಅವರ ಪುಸ್ತಕ ಓದಿನ ದಾಹ ಇಂತಹ ಅಪೂರ್ವ ಇತಿಹಾಸದ ಮೇಲೆ ಬೆಳಕು ಚೆಲ್ಲಿದೆ. ಹಾಗೂ ಇತ್ತೀಚಿನ ಕೆಲವು ಸಂಶೋಧಕರು ಕೂಡಾ ಬೌದ್ಧ ಧರ್ಮಾವಲಂಬಿಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಬೆಳಕು ಚೆಲ್ಲಿದ್ದಾರೆ.
ಭಾರತದಲ್ಲಿ ಹುಟ್ಟಿದ ಬುದ್ಧ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ವಿದೇಶಿ ಬ್ರಾಹ್ಮಣ ಆರ್ಯರು ಬೇಕುಂತಲೇ ತುಚ್ಛೀಕರಿಸಿ, ದುಷ್ಟೀಕರಿಸಿ, ಭಯ ಮತ್ತು ಕ್ಷುದ್ರರೆಂಬಂತೆ ಬಿಂಬಿಸಿದ್ದಾರೆ. “ಭಾರತದ ದಾರ್ಶನಿಕ ಚರ್ಚೆಗಳಲ್ಲಿ ದರ್ಶನವು ಇನ್ನೊಂದರ ಬಗ್ಗೆ ತಾತ್ವಿಕ ಭಿನ್ನಮತಗಳು ಸೂಚಿಸುವುದು ಸಾಮಾನ್ಯ. ಈ ಭಿನ್ನಮತಗಳು ಕೆಲವೊಮ್ಮೆ ಯುದ್ಧರೂಪಿಯಾಗಿ ಇರುತ್ತವೆ. ತಾತ್ವಿಕ ಭಿನ್ನಮತವು ತಾನಾಗಿಯೇ 1 ದೊಡ್ಡ ಸಮಸ್ಯೆಯಲ್ಲ. ಆದರೆ ತಾನು ಒಪ್ಪದ ವಿಚಾರಧಾರೆಯಯೂ ಇರಬಾರದು ಎಂಬ ಹಗೆತನದಲ್ಲಿ ಮತ್ತೊಂದನ್ನು ದುಷ್ಟೀಕರಿಸುವುದು ಸಮಸ್ಯೆ.
ಆಧುನಿಕ ರಾಜಕಾರಣದಲ್ಲಿ ಸೈದ್ಧಾಂತಿಕ ಗುಂಪುಗಳು ಹಗೆಗಳಾಗಿ ಕಾದಾಟ ಮಾಡುವಂತೆ ಚರಿತ್ರೆಯಲ್ಲಿ ಪಂಥಗಳು ಪರಸ್ಪರ ಸಂಘರ್ಷ ಮಾಡಿಸಿ ಭಾರತದ “ಅವೈದಿಕ” ಎನ್ನಲಾಗುವ ದಾರ್ಶನಿಕ ಧಾರೆ ಹಾಗೂ ಪಂಥಗಳನ್ನು ಏಕಕಾಲಕ್ಕೆ ವಿಶಾಲ ಸಮುದಾಯಗಳಿಂದ ಸ್ವೀಕಾರವನ್ನು ಸ್ಥಾಪಿತ ವರ್ಗದಿಂದ ವಿರೋಧವನ್ನು ಪಡೆದಿದ್ದವು. ವೈದಿಕ ಪುರಾಣಗಳು ತಮ್ಮ ವಿರೋಧಿಗಳನ್ನು ರಾಕ್ಷಸರನ್ನಾಗಿ ಚಿತ್ರಿಸುವಂತೆ ವೈದಿಕರು ದಾರ್ಶನಿಕರು ಕೂಡಾ “ಅವೈದಿಕ” ಭೌತವಾದಿ ದರ್ಶನ ಹಾಗೂ ಪಂಥಗಳನ್ನು ವಿಕೃತವಾಗಿ ಚಿತ್ರಿಸಲು ಇದನ್ನು ದಾರ್ಶನಿಕ ಅಮಾನುಷೀಕರಣ ಅಥವಾ ದುಷ್ಟೀಕರಣ ಎನ್ನಬಹುದು”. (ಕರ್ನಾಟಕ ನಾಥಪಂಥ- ರಹಮತ್ ತರೀಕೆರೆ. ಪುಟ 7).
ಹೀಗೇ ವಿರೋಧಿಗಳನ್ನು ವಿರೋಧಿಸುವ ಭರದಲ್ಲಿ ಉಪದ್ರವಿಗಳು, ರಾಕ್ಷಸರೆಂಬಂತೆ ಬಿಂಬಿತರಾದವರ ಸಾಲಿನಲ್ಲಿ ಬಹುತೇಕ ಬೌದ್ಧ ಅರಸರು, ಭಿಕ್ಕುಗಳು, ಭಿಕ್ಕುಣಿಗಳನ್ನು ಕಾಣಬಹುದು. ಈ ವೈದಿಕ ಧರ್ಮ ಕೇವಲ ದುಷ್ಟೀಕರಣವನ್ನು ಮಾತ್ರ ಮಾಡಿಲ್ಲ. ತಮ್ಮ ನಿಲುವುಗಳಿಗೆ ಹಿತಾಸಕ್ತಿ ಸ್ಥಾಪನೆಗೆ ಸಹಕರಿಸಿದ ವ್ಯಕ್ತಿಗಳು, ರಾಜರು, ಇತರರನ್ನು ದೈವತ್ವ ಮಟ್ಟಕ್ಕೆ ಸಹ ಏರಿಸಿದೆ. ಅದಕ್ಕೊಂದು ಉದಾಹರಣೆ “ಮಹಿಷಾಸುರ” ಒಂದು ಕಾಲದಲ್ಲಿ ಮಹಿಷನೂರು ಈಗ ಮೈಸೂರು ಆಗಿದೆ. ರಾಜನಾಗಿ ಆಳ್ವಿಕೆ ಮಾಡುತ್ತಿದ್ದ ಮಹಿಷಾಸುರನನ್ನು ವೈದಿಕರು ಉಪದೃವಿ ಕೇಡುಂಟು ಮಾಡುವ ರಾಕ್ಷಸನಂತೆ ಚಿತ್ರಿಸಿದ್ದಾರೆ.
ಮಹಿಷಾಸುರ ರಾಕ್ಷಸನಲ್ಲ ಈ ಭಾಗದ ಜನಪ್ರಿಯ ಜನಾನುರಾಗಿ ರಾಜ ಆತನೊಬ್ಬ ಬೌದ್ಧ ಧರ್ಮ ಪ್ರಚಾರಕನೂ ಕೂಡಾ ಹೌದು. ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಅತ್ಯಂತ ವಿಶಾಲವಾಗಿ ನಿರ್ಮಿಸಿ ನಿಲ್ಲಿಸಿರುವ ಮಹಿಷಾಸುರನ ಪ್ರತಿಮೆ ಈತನದ್ದೇ ಆಗಿದೆ. ಅವನು ನಿಜವಾಗಿ ದುಷ್ಟನಾಗಿದ್ದರೆ, ಮೈಸೂರಿನಂಥ ಸುಂದರ ನಗರಕ್ಕೆ ಅವನ ಹೆಸರು ಇಡಲು ಸಾಧ್ಯವಾಗುತ್ತಿತ್ತೆ? ಅತ್ಯಂತ ಕ್ರೂರಿಯಾದ ವ್ಯಕ್ತಿಯ ಹೆಸರನ್ನು ನರನಿಗಾಗಲಿ ಸ್ಥಳಕ್ಕಾಗಲಿ ಇಟ್ಟಿರುವ ನಿದರ್ಶನ ಎಲ್ಲಿಯಾದರೂ ಉಂಟೆ? ಬದಲಿಗೆ ಮಹಿಷ ಜನಾನುರಾಗಿ ಆದ್ದರಿಂದ, ಜನೋದ್ದಾರಕ ಕೆಲಸ ಮಾಡಿದ್ದರಿಂದ ಅವನ ಹೆಸರನ್ನು ಮೈಸೂರಿಗೆ ಕೃತಜ್ಞಾಪೂರ್ವಕವಾಗಿ ಇಡಲಾಗಿದೆ.
ಇದು ಎಂಥವರಿಗಾದರೂ ಹೊಳೆಯುವ ಸಾಮಾನ್ಯ ವಿಷಯ.
ಮಹಿಷಾಸುರ ರಾಕ್ಷಸನಲ್ಲ, ಅವನು ಬೌದ್ಧ ಭಿಕ್ಕು. ಅವನ ನಿಜವಾದ ಹೆಸರು ಮಹಾದೇವ. ಸಾಮ್ರಾಟ್ ಅಶೋಕನ ಕಾಲದಲ್ಲಿ, ಬೌದ್ಧ ಗುರು ಮೊಗ್ಗಲಿತಿಸ್ಸನ ಬುದ್ಧಧಮ್ಮ ಪ್ರಚಾರಕ್ಕಾಗಿ ತೇರಾ ಮಹಾದೇವನನ್ನು ಮಹಿಷಮಂಡಲಕ್ಕೂ, ತೇರಾ ರಕ್ಕಿತ ಎಂಬುವವನನ್ನು ಬನವಾಸಿಗೂ ಕಳುಹಿಸಿದ. (ನೋಡಿ; ಸಿದ್ಧಸ್ವಾಮಿಯವರ ಅಪರೂಪ ಮಾಹಿತಿಯುಳ್ಳ ಸಂಶೋಧನಾ ಕೃತಿ – ಪ್ರಾಚೀನ ಅಸುರ ರಾಷ್ಟ್ರ 2016. ಪುಟ. 27ಮತ್ತು 81-116)
ಮಹಿಷನಿಗೆ ಅಸುರ ಎಂಬ ಹೆಸರನ್ನು ಕಿತ್ತುಹಾಕಿ ಮಹಿಷ ಬೌದ್ಧ. ಮಹಿಷ ಗೌತಮ ಅಥವಾ ಭಿಕ್ಕು ಮಹಾದೇವ ಎಂಬ ಹೆಸರನ್ನು ಇಡಬೇಕು. ಅಸುರ ಎಂಬುದು ಆರೋಪಿತ ಹೆಸರು. ಬೈಗುಳ ಅದು – ಹೆಂಡ ಕುಡುಕ ಎಂದು! ಅಸುರ ಎಂದರೆ ಸುರೆಯನ್ನು ಕುಡಿಯದವನು ಎಂದು ಅರ್ಥ.
ಇಲ್ಲಿ ಕುಡಿಯುವವರಿಗೇ ಗೌರವ! ಕುಡಿಯದವರಿಗೆ ಅವಮಾನ! ಎಂಥ ಅದ್ಭುತ ವ್ಯವಸ್ಥೆ ಬ್ರಾಹ್ಮಣ ಧರ್ಮದ್ದು ಭಲೇ! ಜನರ ಏಳಿಗೆಗೆ ಹೋರಾಡಿ ಚಾತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿದ ಪ್ರಜಾಪ್ರೇಮಿಗಳನ್ನು ರಾಕ್ಷಸರೆಂದು ತೀರಾ ಕ್ರೂರಿಗಳನ್ನಾಗಿ ಪುರಾಣಗಳಲ್ಲಿ ಹಾರುವರು ಚಿತ್ರಿಸಿರುವುದು ಹಾರುವರೆಷ್ಟು ಮಹಾರಕ್ಕಸರೆಂದು ನಿಜಕ್ಕೂ ತಿಳಿಯುತ್ತದೆ.(ಹೆಚ್ಚಿನ ಓದಿಗಾಗಿ ಸಿದ್ಧಸ್ವಾಮಿಯವರ ಬೌದ್ಧ ರಾಜ ಮಹಿಷಾಸುರ ಪುಸ್ತಕ ಓದಿ). ಎಂದು ಕೆ.ಎಸ್ ಭಗವಾನ್‌ರವರು ರಾಮಮಂದಿರ ಏಕೆಬೇಡ? ಎಂಬ ತಮ್ಮ ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೆ ಜಮ್ನಾದಾಸ್ ಎಂಬುವವರು ತಿರುಪತಿಯ ವೆಂಕಟೇಶ್ವರ ಒಂದು ಬೌದ್ಧ ದೇವಾಲಯವೆಂದು ಸಂಶೋಧನಾ ಪುಸ್ತಕವನ್ನೇ ರಚಿಸಿದ್ದಾರೆ. ಇದು ಕನ್ನಡಕ್ಕೇ ಸಹ ಅನುವಾದಗೊಂಡಿದೆ.
ಇದೇ ರೀತಿಯಲ್ಲಿ ಇಲ್ಲಿನ ಸ್ಥಳೀಯ ದೇವತೆಗಳ ಹೆಸರುಗಳನ್ನು ಸಹ ಒಂದು ಕಾಲದಲ್ಲಿ ತಮ್ಮ ಮಕ್ಕಳಿಗೆ ಇಡುವ ಪದ್ಧತಿಯಿತ್ತು. ಆದರೆ ಅವುಗಳನ್ನು ಮನುಸ್ಮೃತಿಯಲ್ಲಿ ಭೀಕರ ಅಪಾಯವುಂಟುಮಾಡುವ ಕೆಡುಕನ್ನು ತರುವ ಹೆಸರುಗಳೆಂದು ಪಟ್ಟಿ ಮಾಡಿ ಅಂತಹ ಹೆಸರುಗಳನ್ನು ದುಷ್ಟರು ಎಂಬಂತೆ ಬಿಂಬಿಸ ತೊಡಗಿದರು. ಅಲ್ಲದೇ ಭೀಷಣವಾದ ಹೆಸರುಳ್ಳ ಹೆಣ್ಣುಗಳನ್ನು ಮದುವೆಯಾಗಬಾರದು ಎಂದಿದೆ ಮನುಸ್ಮೃತಿ.
ಮನುಸ್ಮೃತಿಯ 3ನೇ ಅಧ್ಯಾಯದ 9ನೇ ಸೂತ್ರವು ‘ನಕ್ಷತ್ರಗಳ, ವೃಕ್ಷಗಳ, ನದಿಗಳ, ಕಿರಾತ ಜಾತಿಗಳು ವಾಸಿಸುವ ಬೆಟ್ಟಗಳ, ಪಕ್ಷಿಗಳ, ಹಾವುಗಳ, ದಸ್ಯುಗಳ ಹೆಸರುಗಳನ್ನು ಹೊಂದಿದ ಹಾಗೂ ಕ್ರೂರವಾದ ಭೀಷಣ ಹೆಸರುಗಳುಳ್ಳ ಹೆಣ್ಣನ್ನು ಮದುವೆಯಾಗಬಾರದು’ ಎಂದಿದೆ. ಅಂದರೆ ಮನುಸ್ಮೃತಿಯ ಕಾಲದಲ್ಲಿ ಹಾಗೂ ಅದಕ್ಕೂ ಮೊದಲು ವಿವಿಧ ಬೌದ್ಧ ಭಿಕ್ಕುಗಳ-ಭಿಕ್ಕುಣಿಯರ, ನದಿ, ಪರ್ವತ, ಪಕ್ಷಿಗಳ ದೇವತೆಗಳ ಅಥವಾ ಕ್ಷುದ್ರ ರೆಂದು ವೈದಿಕರು ಬಗೆದ ವ್ಯಕ್ತಿಗಳ ಹೆಸರನ್ನು ಇಡುವ ಸಂಪ್ರದಾಯವೊಂದಿತ್ತು ಎಂಬುದು ಗಮನಿಸಬೇಕಾದ ವಿಚಾರವಾಗಿದೆ.
ಬುದ್ಧನ ಕಾಲದಲ್ಲಿ ಬೌದ್ಧ ಸಂನ್ಯಾಸಿ, ಭಿಕ್ಕು -ಭಿಕ್ಕುಣಿಯಾಗಿದ್ದವರನ್ನು ಮುಂದೆ ಅವರನ್ನು ರಾಕ್ಷಸ- ರಾಕ್ಷಸಿ ಉಪದ್ರವಿಗಳೆಂಬಂತೆ ಬಿಂಬಿತರಾದವರಲ್ಲಿ ‘ಡಾಕಿನಿ’ ಎಂಬ ಬೌದ್ಧ ಭಿಕ್ಕುಣಿಯು ಸಹ ಒಬ್ಬಳು. 2020ರ ಅಕ್ಟೋಬರ್ ಸಂವಾದ ಮಾಸಪತ್ರಿಕೆಯಲ್ಲಿ ಪ್ರೊ. ಶಿವಗಂಗಾ ರುಮ್ಮಾ ಎಂಬುವವರು “ಡಾಕಿಣಿ ಬೌದ್ಧ ಯೋಗಿಣಿ” ಎಂಬ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಈ ಪ್ರಬಂಧದ ಉದ್ದಕ್ಕೂ ‘ಡಾಕಿನಿ’ ಎಂಬ ಬೌದ್ಧ ಬಿಕ್ಕುಣಿ ಹೇಗೆ ಪಿಶಾಚಿ, ರಾಕ್ಷಸಿ ರೂಪ ಪಡೆದು ನಂತರದ ಕಾಲದಲ್ಲಿ ಉಪದ್ರವಿ ಎಂಬಂತೆ ಚಿತ್ರಿತವಾದಳು ಎಂದು ನಿರೂಪಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ನಿಘಂಟು ಡಾಕಿನಿಯು ಹೆಣ್ಣು ದೆವ್ವಗಳಲ್ಲಿ ಒಂದು ಬಗೆಯ ಹೆಣ್ಣು ಪಿಶಾಚಿ ಎಂದು ಹೇಳುತ್ತದೆ. ಡಾಕಿನಿ ಎಂದರೆ ರಕ್ಕಸಿಯ ಖಡ್ಗ ಕಾಳಿ ದೇವಿಯ ಪರಿಚಾರಿಕೆಯರ ಒಂದು ವರ್ಗಕ್ಕೆ ಸೇರಿದವಳೆಂದೆ ಹೇಳುತ್ತದೆ. ಸುರಂಗ ಕವಿಯ ವೀರಭದ್ರ ಲೀಲಾರತ್ನ ಕೃತಿಯಲ್ಲಿ ಡಾಕಿನಿಯ ಉಲ್ಲೇಖ ಹೀಗೆ ಇದೆ;
ಅಗ್ಗದ ಯೋಗಿಣಿ ಚಂಡಿ ಭೈರವಿ
ಕಾಳಿ ದುರ್ಗಿ ಡಾಕಿನಿ ಪ್ರೇತಶ್ವಿನಿಯು
ಉಗ್ರದ ಹ್ರೂಂಕಾರಿ ಮಹಾಭೂತವೇತಾಳರೊಗ್ಗಿದಲುಋಬಿ ಕಾಳಗಕೆ” ಸುಮಾರು 16ನೇಯ ಶತಮಾನಕ್ಕಾಗಲೇ ಈ ಎಲ್ಲಾ ಹೆಣ್ಣು ದೈವಗಳು ಕೀಳು ದೈವಗಳಾಗಿ ಪರಿವರ್ತಿತವಾದವು.
ಡಾಕಿನಿ ಕೂಡಾ ಇಲ್ಲಿ ಅಗ್ಗದ ಮತ್ತು ಉಗ್ರ ಕೀಳು ದೈವಗಳಾಗಿದ್ದಾಳೆ. ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಕೂಡಾ ಸುಧನ್ವ ಹಾಗೂ ಅರ್ಜುನನ ನಡುವೆ ನಡೆದ ಕಾಳಗದಲ್ಲಿ ರಣರಂಗದಲ್ಲಿ ಭೀಕರ ದೃಶ್ಯವನ್ನು ಲಕ್ಷ್ಮೀಶನಹೀಗೆ ಚಿತ್ರಿಸುತ್ತಾನೆ.
“ಕಾಕ ಬಕ ಗೋಮಯ ಸಂತತಿಗಳಿಂ
ಡಾಕಿನಿ ಪಿಶಾಚಿ ವೇತಾಳ ಭೂತಂಗಳಿಂ ಭೀಕರದೊಳಂ ಜನಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು” ಹೀಗೆ ಡಾಕಿನಿಯು ಇಲ್ಲಿಯೂ ಕೂಡಾ ಕ್ಷುದ್ರ ದೇವತೆಯಾಗಿ ಭೀಭತ್ಸ ರೂಪದಲ್ಲಿ ಚಿತ್ರಿತಗೊಂಡಿದ್ದಾಳೆ.
ಮರಾಠಿಯಲ್ಲಿ ಡಾಕಿನಿಗೆ ಡಂಕಿಣಿ ಎನ್ನುತ್ತಾರೆ. ಡಾಳಕಿ ಎಂಬ ಇನ್ನೊಂದು ಪದವು ಕೂಡಾ ಡಾಕಿನಿಯಿಂದಲೇ ಬಂದಿದೆ. ಡಾಳಕಿ ಎಂದರೆ ಗಯ್ಯಾಳಿ, ಮೋಸಗಾತಿ, ಎಂಬ ಅರ್ಥಗಳಿವೆ. ‘ಸಗ್ಗಂಬಡೆದು ಬಂದ ಪ್ರತ್ಯಕ್ಷಮಿಲ್ಲೆನಬಹುದು ಈ ಡಾಳಕಿ’. ಇಲ್ಲಿ ಮೋಸಗಾತಿ ಎಂಬ ಅರ್ಥವೇ ಇದೆ. ಹೀಗೆ ಡಾಕಿನಿ ಪದವು ಕೀಳು, ಕ್ಷುದ್ರ, ಉಗ್ರ, ರುದ್ರ, ಋಣಾತ್ಮಕ ವ್ಯಕ್ತಿತ್ವವಾಗಿಯೇ ಕನ್ನಡ ಸಾಹಿತ್ಯದಲ್ಲಿ ಚಿತ್ರಿತಗೊಂಡಿದೆ.
ಇನ್ನೂ ವಿಚಿತ್ರವೆಂದರೆ ಗ್ರಾಮದೇವತೆಯ ಮೇಲೆ ವಿಶೇಷ ಅಧ್ಯಯನವನ್ನು ನಡೆಸಿದ ಸಿದ್ಧಲಿಂಗಯ್ಯನವರ “ಗ್ರಾಮದೇವತೆಗಳು” ಪುಸ್ತಕವು ಈ ನೆಲದ ಎಲ್ಲಾ ತಳಸಮುದಾಯದ ದೇವತೆಗಳನ್ನು ಕುರಿತು ಹೇಳುತ್ತವೆಯಾದರೂ ಅಲ್ಲೆಲ್ಲಿಯೂ ಈ ಡಾಕಿನಿಯೆಂಬ ದೇವತೆಯ ಅಸ್ತಿತ್ವವಿಲ್ಲವೆಂದೇ ಹೇಳಬೇಕಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕ ಜನಪದ ಸ್ತ್ರೀ ದೈವಗಳೂ ಸಾಂಸ್ಕೃತಿಕ ಪದಕೋಶದಲ್ಲಿಯೂ ಈ ಡಾಕಿನಿಯ ಪ್ರಸ್ತಾಪವಿಲ್ಲ.
ಇಷ್ಟೆಲ್ಲಾ ಹೇಳುವ ಕಾರಣವೇನೆಂದರೆ ಒಂದು ಕಾಲದಲ್ಲಿ ಬೌದ್ಧ ಯೋಗಿನಿಯಾಗಿ ಪೂಜೆಗೊಂಡ ಡಾಕಿನಿಯು ನಂತರದ ಕಾಲಘಟ್ಟದಲ್ಲಿ ಇಂತಹ ಕ್ಷುದ್ರ ದೇವತೆಯಾಗಿ ಅವಗಣನೆಗೆ ಅಪಹಾಸ್ಯಕ್ಕೆ ಒಳಗಾದಳು. ಎಂಬುದು ತುಂಬಾ ಕುತೂಹಲಕರವಾದ ಸಂಗತಿಯಾಗಿದೆ. ವೈದಿಕರು ಬೌದ್ಧ ವ್ಯಕ್ತಿಗಳನ್ನು ಇತಿಹಾಸದಲ್ಲಿ ಚಿತ್ರಿಸುವಾಗ ಚಾರಿತ್ರಿಕ ಹಂತಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನಲು ಇದಕ್ಕಿಂತ ಸಾಕ್ಷಿ ಬೇಕೆ?!
ಈ ಮೇಲಿನದು ಒಂದು ಸಾಕ್ಷಿಯಾದರೆ25 ನೇ ಡಿಸೆಂಬರ್ 1954ರಲ್ಲಿ ಪೂನಾದ ಹತ್ತಿರ ದೇಹು ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ ಬುದ್ಧ ವಿಹಾರದಲ್ಲಿ ಸ್ಥಾಪಿಸಿರುವ ಒಂದು ಬುದ್ಧ ಪ್ರತಿಮೆಯನ್ನು ಅನಾವರಣಗೊಳಿಸುತ್ತಾ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರರು ಅಲ್ಲಿದ್ದ ಸಭಿಕರಿಗೆ, “ಪಂಡರಾಪುರದಲ್ಲಿರುವ ವಿಠೋಬಾ ನಿಜಕ್ಕೂ ಬುದ್ಧನ ವಿಗ್ರಹವೇ ಆಗಿದೆ. ಪಾಂಡುರಂಗ ಎಂಬ ಹೆಸರು ಪುಂಡಲೀಕ ಶಬ್ದದ ನಿಷ್ಪತ್ತಿಯಾಗಿದೆ ಎನ್ನುತ್ತಾ.
ಪುಂಡಲೀಕ ಅಂದರೆ ಕಮಲ ಮತ್ತು ಪಾಳಿ ಭಾಷೆಯಲ್ಲಿ ಕಮಲವನ್ನು ಪಾಂಡುರಂಗ ಎನ್ನುತ್ತಾರೆ ಆದ್ದರಿಂದ ಪಾಂಡುರಂಗ ಎಂದರೆ ಬುದ್ಧನಲ್ಲದೇ ಬೇರೆ ಯಾರೂ ಅಲ್ಲ. ಬುದ್ಧನೇ ಆಗಿದ್ದಾನೆ. ಪಂಡರಾಪುರದ ಪಂಢರಿನಾಥನ ಬಗ್ಗೆ ಸಂಶೋಧನೆ ನಡೆದಿದೆ. ಪಂಡರಿನಾಥ ದೇವಾಲಯ ಬುದ್ಧನ ದೇವಾಲಯವೆಂದು ನಾನು ಸಿದ್ಧ ಮಾಡಿಕೊಡುವೆ ಎಂದರು.
ಪುಂಡಲೀಕ ಶಬ್ದವೇ ಪಾಂಡುರಂಗವೆಂದು ಪರಿವರ್ತಿತ ಹೊಂದಿದೆ. ಪುಂಡಲೀಕ ಎಂದರೆ ಕಮಲ. ಬುದ್ಧರಲ್ಲಿ ಮೂರ್ತಿ ಪೂಜೆ ಇಲ್ಲ. ಪಾಲಿ ಭಾಷೆಯಲ್ಲಿ ಕಮಲಕ್ಕೆ ಪಾಂಡುರಂಗವೆಂದು ಹೇಳುತ್ತಾರೆ. ಜನರಿಗೆ ಮೋಸ ಮಾಡಲು ಬುದ್ಧನ ಹೆಸರು ತಪ್ಪಿಸಲಾಯಿತು”. ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಬಹುಶಃ ಡಾ.ಅಂಬೇಡ್ಕರರು ಆರೋಗ್ಯ ಸರಿಯಿದ್ದು ಇನ್ನಷ್ಟು ವರ್ಷಗಳು ಕಾಲ ಜೀವಿಸಿದ್ದರೆ ಈ ದೇಶದಲ್ಲಿನ ದೇವಾಲಯದಲ್ಲಿರುವ ಬೌದ್ಧ ಇತಿಹಾಸವನ್ನು ಹಾಗೂ ದೇವರೆಂದು, ರಾಕ್ಷಸರೆಂದು ಪರಿಗಣಿಸಲ್ಪಟ್ಟ ಬೌದ್ಧ ಭಿಕ್ಕು, ಭಿಕ್ಕುಣಿಯರ ಹೆಸರುಗಳನ್ನು ಬಯಲಿಗೆ ಎಳೆಯುತ್ತಿದ್ದರು. ಈ ಕಾರ್ಯ ಮಾಡುವ ಮೊದಲೇ ಅವರು ಅಸ್ತಂತಗರಾದರು.
ಒಟ್ಟಾರೆ ಭಾರತದಲ್ಲಿ ದೇವರೆಂದು ಪೂಜಿಸಲ್ಪಟ್ಟಿದ್ದ ಕೆಲವು ದೆವ್ವ, ಪಿಶಾಚಿ, ರಾಕ್ಷಸರೆಂಬಂತೆ ದುಷ್ಟೀಕರಿಸಲ್ಪಟ್ಟವರು ಬೌದ್ಧ ಭಿಕ್ಕುಗಳು- ಭಿಕ್ಕುಣಿಯರು ಆಗಿದ್ದರೆಂಬುದನ್ನು ಅರಿಯಬಹುದು. ಹಾಗೂ ವೈದಿಕರು ಬೇಕೆಂದೆ ಇವರುಗಳನ್ನು ದುಷ್ಟೀಕರಿಸಿ, ರೌದ್ರಾವತಾರಿಗಳನ್ನಾಗಿ ಮಾಡಿರುವುದು ಸಾಬೀತಾಗುತ್ತದೆ.
ಒಂದು ಕಾಲದಲ್ಲಿ ರಾಜರು ಬೌದ್ಧ ಭಿಕ್ಕು ಭಿಕ್ಕುಣಿಯರಾಗಿದ್ದ ಅದೆಷ್ಟೊ ವ್ಯಕ್ತಿಗಳು ನಮ್ಮ ಕಣ್ಣ ಮುಂದೆಯೇ ದೈಹಿಕವಾಗಿ ವಿರೂಪಗೊಳಿಸಿ, ಚಾರಿತ್ರಿಕವಾಗಿ ಖಳರನ್ನಾಗಿಸಿ, ಕ್ರೂರ, ಕೇಡುಂಟು ಮಾಡುವ ವಿಕೃತರನ್ನಾಗಿಸಿ ದೆವ್ವ ಪಿಶಾಚಿಗಳೆಂಬಂತೆ ಬಿಂಬಿಸಲಾಗಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಇಂತಹ ವ್ಯಕ್ತಿಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಸುವುದು ಅವಶ್ಯಕವಿದೆ. ಇನ್ನಾದರೂ ಎಚ್ಚೆತ್ತುಕೊಂಡು ಬಹುಜನರು ಜಾಗೃತರಾಗಲಿ. ವೈದಿಕರ ಕಟ್ಟುಕತೆಗಳನ್ನು ನಂಬದೇ ಸಂಶೋಧಾನಾತ್ಮಕ ದೃಷ್ಟಿಯಿಂದ ಮುಂದುವರೆಯಲಿ ಎಂದು ಆಶೀಸುತ್ತೇನೆ.
ಆಕರ ಗ್ರಂಥಗಳು
- ಸಂವಾದ. ಮಾಸ ಪತ್ರಿಕೆ. ಅಕ್ಟೋಬರ್. 2020.
- ರಾಮಂದಿರ ಏಕೆ ಬೇಡ?. ಲೇಖಕರು; ಕೆ.ಎಸ್.ಭಗವಾನ್. ಪುಟ 18-19.
- ಕರ್ನಾಟಕ ನಾಥ ಪಂಥ. ಲೇಖಕರು; ರಹಮತ್ ತರೀಕೆರೆ. ಪುಟ-7.
- ಡಾ.ಬಿ.ಆರ್ ಅಂಬೇಡ್ಕರ್ ಭಾಷಣ ಬರಹ. ಸಂಪುಟ–7. ಪುಟ 18.
- ವಿಜಯಕ್ಕನ ವಿಚಾರ ಲಹರಿ. ಲೇಖಕಿ; ಶ್ರೀಮತಿ,ವಿಜಯಾ ಮಹೇಶ್. ಪ್ರಬುದ್ದ ಪ್ರಕಾಶನ 2017.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.
ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.
ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ
ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.
ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.
ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.
1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.
ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.
ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’
ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.
ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.
ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.
ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.
ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.
ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.
ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.
ಭವಿಷ್ಯದ ರಾಜಕೀಯ ಪಾತ್ರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.
ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ3 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ5 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ1 day agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ6 hours agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ


