ದಿನದ ಸುದ್ದಿ
25 ವರ್ಷಗಳ ನಂತರ ಸಾಕಾರಗೊಂಡ ಡಾ. ಬಿ.ಆರ್.ಅಂಬೇಡ್ಕರ್ ಭವನ ; ಅನುದಾನದ ಕೊರತೆ ಇಲ್ಲ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ ಅನೇಕ ಕಡೆ ಡಾ; ಬಿ.ಆರ್.ಅಂಬೇಡ್ಕರ್ ಭವನಗಳಿದ್ದರೂ ಜಿಲ್ಲಾ ಮಟ್ಟದಲ್ಲಿ ಭವನ ನಿರ್ಮಾಣ ಮಾಡಲು 25 ವರ್ಷಗಳ ಹಿಂದೆ ಪ್ರಯತ್ನಿಸಿದರೂ ಸಾಕಾರಗೊಂಡಿರಲಿಲ್ಲ. ಇದು ಡಾ;ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿ ಸಂದರ್ಭದಲ್ಲಿ ಸಾಕಾರಗೊಂಡಿದ್ದು ಸುಸಜ್ಜಿತ ಭವನ ನಿರ್ಮಾಣವಾಗಿ ಎಲ್ಲರಿಗೂ ಇಲ್ಲಿ ಕಾರ್ಯಕ್ರಮ ಮಾಡಲು ಅವಕಾಶಗಳು ಸಿಗುವಂತಾಗಬೇಕೆಂದು ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಸೋಮವಾರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಕ್ರ್ಯೂಟ್‍ಹೌಸ್ ಪಕ್ಕದಲ್ಲಿ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಡಾ;ಬಿ.ಆರ್.ಅಂಬೇಡ್ಕರ್ ರವರ ಭವನ ನಿರ್ಮಾಣ ಮಾಡುವುದು ಬಹಳ ದಿನಗಳ ಬೇಡಿಕೆಯಾಗಿತ್ತು. ಮುಖಂಡರ ಒಮ್ಮತದ ನಿರ್ಣಯದ ಕೊರತೆಯಿಂದ ಭವನ ನಿರ್ಮಾಣ 2000 ಇಸವಿಯಿಂದಲೂ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ಇದಕ್ಕೆ ಕಾಲಕೂಡಿಬಂದಿತು. ಸಕ್ರ್ಯೂಟ್‍ಹೌಸ್ ಪಕ್ಕದಲ್ಲಿ ಡಿಸಿಸಿ ಬ್ಯಾಂಕ್‍ಗೆ ಹಂಚಿಕೆಯಾದ 20 ಗುಂಟೆ ಜಾಗವನ್ನು ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ದೊರಕಿಸಿ, ಈ ಜಾಗಕ್ಕಾಗಿ ಡಿಸಿಸಿ ಬ್ಯಾಂಕ್ ನಿಂದ ಭರಿಸಲಾಗಿದ್ದ 78 ಲಕ್ಷವನ್ನು ವಾಪಸ್ ಮಾಡಿಸುವ ಮೂಲಕ ಡಿಸಿಸಿ ಬ್ಯಾಂಕ್‍ಗೆ ಎಪಿಎಂಸಿ ಆವರಣದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ ಎಂದರು.
ಸರ್ಕಾರವು ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ರೂ.5 ಕೋಟಿಗೆ ಮಂಜೂರಾತಿ ನೀಡಿ ರೂ.1.5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ ಈ ಅನುದಾನ ಸಾಕಾಗದಿರುವುದರಿಂದ, ಇನ್ನೂ ಹೆಚ್ಚಿನ ಅನುದಾನ ತಂದು ಅತ್ಯಾಧುನಿಕ ಸೌಲಭ್ಯವುಳ್ಳ ಭವನ ನಿರ್ಮಾಣ ಮಾಡುವ ಮೂಲಕ, ಎಲ್ಲರೂ ಇಲ್ಲಿ ಕಾರ್ಯಕ್ರಮ ಮಾಡುವ ನಿಟ್ಟಿನಲ್ಲಿ ಭವನ ನಿರ್ಮಾಣ ಮಾಡಲಾಗುತ್ತದೆ ಎಂದರು.
ಈ ಹಿಂದೆ ಶಾಮನೂರು, ಬೇತೂರಿನಲ್ಲಿ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. ಅಲ್ಲಿ ಎಲ್ಲಾ ಸಮುದಾಯದವರು ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಈ ನಿಟ್ಟಿನಲ್ಲಿ ಭವನಗಳು ಉಪಯುತ್ತವಾಗಿದೆ. ಆದರೆ ನಗರದಲ್ಲಿನ ಬಾಬು ಜಗಜೀವನ್ ರಾಂ ಭವನ ಉಪಯೋಗಿಸಲು ಸಾಧ್ಯವಾಗದಿರುವುದರಿಂದ ಇಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಆರಂಭಿಸಬೇಕೆಂದು ತಿಳಿಸಿದರು.
ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಬಹು ದಿನಗಳ ಬೇಡಿಕೆಯಾಗಿದ್ದ ಡಾ; ಬಿ.ಆರ್.ಅಂಬೇಡ್ಕರ್ ಭವನ ಆದಷ್ಟು ಬೇಗ ನಿರ್ಮಾಣವಾಗಬೇಕು. ಬೆಂಗಳೂರಿನ ವಸಂತ ನಗರದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನದಂತೆ ಈ ಭವನ ನಿರ್ಮಾಣವಾಗಬೇಕು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾಗುವುದರಿಂದ ಸರ್ವಋತು ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತೆ ರೇಣುಕಾ, ಮುಖಂಡರಾದ ಡಿ.ಬಸವರಾಜು, ಸಿ.ಉಮೇಶ್, ಮಲ್ಲೇಶಪ್ಪ, ಮಂಜುನಾಥ್, ರವಿನಾರಾಯಣ್, ಅಣ್ಣಪ್ಪ, ಹಾಲೇಶಪ್ಪ, ಎಂ.ನೀಲಗಿರಿಯಪ್ಪ, ಹನುಮಂತಪ್ಪ, ದುಗ್ಗಪ್ಪ, ಹೆಚ್.ಸಿ.ಮಲ್ಲಪ್ಪ, ಹೆಗ್ಗೆರೆ ರಂಗಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಕೆ ಸ್ವಾಗತಿಸಿದರು. ಕೌಶಲ್ಯಾಭಿವೃದ್ದಿ ಅಧಿಕಾರಿ ಶಿವಕುಮಾರ್ ವಂದಿಸಿದರು. ರವಿಚಂದ್ರ ನಿರೂಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್‌ಕಿಟ್‌ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


