ನೆಲದನಿ
ನುಡಿಯ ಒಡಲು -19 | ನಾಡು-ನುಡಿ: ಅಂಬೇಡ್ಕರ್ ಅವರ ಚಿಂತನೆಗಳ ಪ್ರಸ್ತುತತೆ
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರ ‘ಭಾಷಾವಾರು ರಾಜ್ಯಗಳ ಸಮಸ್ಯೆಗಳು’ ಎನ್ನುವ ಬರಹವು ಇಂದಿಗೂ ಹಲವು ನೆಲೆಗಳಿಂದ ಅತ್ಯಂತ ಕುತೂಹಲಕಾರಿ ಮತ್ತು ವಿಶಿಷ್ಟವಾಗಿದೆ. 1956ರ ರಾಜ್ಯಗಳ ಪುನರ್ರಚನೆಯ ಕಾಯ್ದೆಯನ್ನು ಕುರಿತು ವಿಮರ್ಶಿಸುತ್ತ, “ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡಲು ಏಕಭಾಷಿಕ ರಾಜ್ಯಗಳಕ್ಕಿಂತ ಬಹುಭಾಷಿಕ ರಾಜ್ಯಗಳನ್ನು ಹೊಂದುವುದು ಹೆಚ್ಚು ಪ್ರಯೋಜನಕಾರಿ ಆಗುತ್ತದೆ” ಎಂದು ತಮ್ಮ ಅಭಿಪ್ರಾಯಗಳನ್ನು ಅಂಬೇಡ್ಕರ್ ಹೀಗೆ ದಾಖಲಿಸುತ್ತಾರೆ.
ಸಂಯುಕ್ತ ಭಾರತ ಎನ್ನುವ ಕಲ್ಪನೆಯೇ ಮರಣಗಂಟೆಯ ಸೂಚಕವಾಗಿದೆ ಎಂದು ಅವರು ಬಲವಾಗಿ ನಂಬಿದ್ದರು. ರಾಜ್ಯಗಳ ಮರುರಚನೆಯಲ್ಲಿ ಜನಸಂಖ್ಯೆಯ ಗಾತ್ರ ಮತ್ತು ಪ್ರಮಾಣವನ್ನು ರೂಪಿಸುವಲ್ಲಿ ಸಂವಿಧಾನ ಸೋಲುತ್ತದೆ ಎನ್ನುವ ಬೇಸರವನ್ನೂ ಇವರು ವ್ಯಕ್ತಪಡಿಸಿದ್ದರು. ಪ್ರಜೆಗಳ ಸಮಾನ ಪ್ರತಿನಿಧೀಕರಣವನ್ನು ಕಾಯ್ದುಕೊಳ್ಳುವುದು ಕೂಡ ಅತ್ಯಂತ ದುಸ್ತರವಾಗುತ್ತದೆ ಎಂಬ ನಿಲುವು ಇವರದಾಗಿತ್ತು.
ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ, 1956ರ ರಾಜ್ಯಗಳ ಪುನರ್ರಚನೆಯ ಕಾಯಿದೆಯು ಉತ್ತರದ ರಾಜ್ಯಗಳನ್ನು ಬಲಪಡಿಸುವ ಹಾಗೂ ದಕ್ಷಿಣದ ರಾಜ್ಯಗಳನ್ನು ಬಾಲ್ಕನೈಸ್ ಮಾಡುವ ನಿಲುವುಗಳನ್ನು ಕಾಣುತ್ತಾರೆ. ಪರಿಣಾಮವಾಗಿ ದಕ್ಷಿಣದಲ್ಲಿ ಚಿಕ್ಕ ಚಿಕ್ಕ ರಾಜ್ಯಗಳು ತಲೆಯೆತ್ತಿದರೆ, ಮುಂಬೈ, ಪಂಜಾಬ್, ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಂತಹ ದೊಡ್ಡ ಪ್ರದೇಶಗಳು ಹಾಗೇ ಅಸ್ತಿತ್ವದಲ್ಲಿ ಉಳಿಯುತ್ತವೆ.
ಆದರೆ, ಈ ಎಲ್ಲಾ ರಾಜ್ಯಗಳು ಕೂಡ ಈ ಹೊತ್ತಿಗೆ ಮರುವಿಂಗಡಣೆಯಾಗಿರುತ್ತವೆ ಎಂಬ ಭವಿಷ್ಯವನ್ನೂ ಇವರು ನುಡದಿದ್ದರು. ಅಂಬೇಡ್ಕರ್ ಅವರ ಪ್ರಮುಖ ಆದ್ಯತೆ ಏನಾಗಿತ್ತೆಂದರೆ, ಒಂದೇ ಭಾಷೆಯನ್ನು ಮಾತ್ನಾಡುವ ಜನರು ಅನೇಕ ರಾಜ್ಯಗಳಲ್ಲಿ ವರ್ಗೀಕರಿಸಿರಬಹುದಿತ್ತು. ಏಕೆಂದರೆ, ಪತ್ರಿಯೊಂದು ರಾಜ್ಯವು ಕೂಡ ಒಂದೊಂದು ಭಾಷೆಯನ್ನು ಮಾತ್ನಾಡುವ ಜನರ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ.
ಇನ್ನೂ ಮುಂದುವರೆದು ಇವರು ಹೇಳುವುದೇನೆಂದರೆ, ‘ಒಂದು ಭಾಷೆ ಒಂದು ರಾಜ್ಯ’ ಎಂಬ ಸೂತ್ರವಿರಕೂಡದು. ಬದಲಾಗಿ, ‘ಒಂದು ರಾಜ್ಯ ಒಂದು ಭಾಷೆ’ ಎಂಬ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಈ ಸೂತ್ರದ ಜೊತೆಗೆ ಒಂದು ಭಾಷೆ ಒಂದು ರಾಜ್ಯ ಎಂಬ ಸೂತ್ರವನ್ನು ತಳಕುಹಾಕಿ ಗೊಂದಲವನ್ನುಂಟು ಮಾಡಬಾರದು. ಇಲ್ಲಿ ಅಂಬೇಡ್ಕರ್ ಅವರ ಒಟ್ಟು ತಾತ್ವಿಕತೆ ಏನನ್ನು ಪ್ರಸ್ತಾಪ ಮಾಡುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರೂಪಿಸಿದವರು, ಸಾಮಾಜಿಕ ನ್ಯಾಯದ ಆದ್ಯಪ್ರವರ್ತಕ, ಪ್ರಜಾಪ್ರಭುತ್ವವು ಸಾಕಾರಗೊಳ್ಳಲು, ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಎಷ್ಟೊಂದು ಮುಖ್ಯ ಎಂಬುದನ್ನು ಚಿಂತಿಸಿದವರು. ಆದ್ದರಿಂದ ಇವರು ಪ್ರಸ್ತಾಪಿಸುತ್ತಿರುವ ‘ಒಂದು ರಾಜ್ಯ ಒಂದು ಭಾಷೆ’ ಎಂಬೀ ಸೂತ್ರದ ಹಿಂದಿನ ತಾತ್ವಿಕತೆಯು ಕೂಡ ಅತ್ಯಂತ ಪ್ರಜಾಸತ್ತಾತ್ಮಕವಾದ್ದು.
ಅಂದರೆ ಅಂಬೇಡ್ಕರ್ ಅವರು ಚಿಂತಿಸುತ್ತಿದ್ದ ಒಂದು ಬಹುಮುಖ್ಯ ವಿನ್ಯಾಸ ಯಾವುದೆಂದರೆ, ಎಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ, ಭಾಷಿಕ ಹಾಗೂ ಧಾರ್ಮಕ ವಿನ್ಯಾಸಗಳನ್ನೂ ಕೂಡ ಸಂವಿಧಾನದ ಪ್ರಜಾಸತ್ತಾತ್ಮಕ ನೀತಿಗಳನ್ನಾಗಿ ರೂಪಿಸುತ್ತಿದ್ದರು. ಹಾಗಾಗಿ ಇವರು ಪ್ರಸ್ತಾಪಿಸಿದ ಈ ಮೇಲಿನ ಸೂತ್ರವು ಇಂತಹದೇ ಒಂದು ವಿನ್ಯಾಸವಾಗಿದೆ. ಕೇವಲ ರಾಜಕೀಯ ಕಣ್ನೋಟದಿಂದ ಈ ಸೂತ್ರವನ್ನು ವಿಶ್ಲೇಷಣೆ ಮಾಡಿದರೆ ಇದರಲ್ಲಿ ಹಲವು ಬಗೆಯ ಕೊರತೆಗಳು ಕಾಣುತ್ತವೆ.
ಈ ರಾಜಕೀಯ ಕಣ್ನೋಟವೆನ್ನುವುದು ಕೇವಲ ರಾಜಕೀಯ ನಿಲುವುಗಳಿಂದ ಇಲ್ಲವೇ ನೀತಿಗಳಿಂದ ಕೂಡಿರುವ ಅಗತ್ಯವಿಲ್ಲ. ಇದು ಸಾಮಾಜಿಕ ಭಾಷಾಶಾಸ್ತ್ರೀಯ ಕಣ್ನೋಟವು ಆಗಿರಬಹುದು ಅಥವಾ ಯಾವುದೇ ಸಾಮಾಜಿಕ ಮೀಮಾಂಸೆಯ ನಿಲುವುಗಳಿಂದ ಪ್ರೇರಿತವಾದ ಕಣ್ನೋಟವು ಆಗಿರಬಹುದು. ಆದರೆ ಈ ಎಲ್ಲ ನಿಲುವುಗಳು ಬೈನರಿ ಇಲ್ಲವೇ ಡೈಕಾಟಮಿಗಳನ್ನು ಮುಂದಿಟ್ಟುಕೊಂಡು ವಿಶ್ಲೇಷಣೆ ಮಾಡುತ್ತವೆ. ಸಹಜವಾಗಿ, ಅಧಿಕಾರ ಸಂಬಂಧ ಇಲ್ಲವೇ ಯಜಮಾನಿಕೆ ವಿನ್ಯಾಸಗಳು ಇಲ್ಲಿ ಗೋಚರಿಸುತ್ತವೆ.
ಈ ವಿನ್ಯಾಸಗಳನ್ನೇ ಅಂಬೇಡ್ಕರ್ ಅವರ ‘ಒಂದು ರಾಜ್ಯ ಒಂದು ಭಾಷೆ’ಎಂಬೀ ಸೂತ್ರಕ್ಕೂ ಅನ್ವಯಿಸುವ ಅಪಾಯಗಳಿವೆ. ಇದು ಆಗಕೂಡದು ಎಂಬುದು ನನ್ನ ಬಯಕೆ. ಮತ್ತೊಂದು ಮಹತ್ವದ ಸಂಗತಿಯನ್ನು ಇಲ್ಲಿ ಉಲ್ಲೇಖಿಸಲೇ ಬೇಕು, ಅದೇನೆಂದರೆ ಅಂಬೇಡ್ಕರ್ ಅವರ ವಿಚಾರಗಳನ್ನು ಮತ್ತು ತಾತ್ವಿಕ ವಿನ್ಯಾಸಗಳನ್ನು ವಿಶ್ಲೇಷಿಸುವುದಕ್ಕೆ ನಾವು ಹೊಸ ನೋಟಕ್ರಮ ಹಾಗೂ ವಿಶ್ಲೇಷಣಾ ಪರಿಕರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.
ಅಂಬೇಡ್ಕರ್ ಅವರು ಕೇವಲ ಸಾಮಾಜಿಕ, ಸಾಂಸ್ಕ್ರುತಿಕ, ರಾಜಕೀಯ ಹಾಗೂ ಧಾರ್ಮಿಕ ಸಂಗತಿಗಳಲ್ಲಿ ಹುದುಗಿರುವ ಏರುಪೇರುಗಳನ್ನು ಮಾತ್ರ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಿಲ್ಲ. ಬದಲಾಗಿ ‘ಹೊಸ ಪ್ರಜಾಪ್ರಭುತ್ವ’ದ ವಿನ್ಯಾಸಗಳನ್ನು ನೆಲೆಗೊಳಿಸುವ ಚಿಂತನೆಗಳನ್ನು ರೂಪಿಸುತ್ತಿದ್ದರು. ಒಟ್ಟಿನಲ್ಲಿ ‘ವಿಚಾರ ಕ್ರಾಂತಿ ಮತ್ತು ಅರಿವಿನ ಪಲ್ಲಟ’ಗಳನ್ನು ಒಂದೇ ತಾತ್ವಿಕ ಚೌಕಟ್ಟಿನಲ್ಲಿ ರೂಪಿಸುವ ಇರಾದೆಯನ್ನು ಇವರು ಹೊಂದಿದ್ದರು.
ಭಾರತದ ಸಂವಿಧಾನದ ಪೀಠಿಕೆಯಲ್ಲಿ ಭಾರತವನ್ನು ‘ರಾಜ್ಯಗಳ ಒಕ್ಕೂಟ’ (ಸ್ಟೇಟ್ಸ್ ಆಫ್ ಯ್ಯೂನಿಯನ್ಸ್) ಎಂದು ಉಲ್ಲೇಖಿಸಲಾಗಿದೆ. ಅಂಬೇಡ್ಕರ್ ಅವರ ಸಾಮಾಜಿಕ ತತ್ವಶಾಸ್ತ್ರಕ್ಕೂ ಮತ್ತು ರಾಜ್ಯಗಳ ಒಕ್ಕೂಟದ ಕಲ್ಪನೆಯ ನಡುವೆ ಅತರ್ಸಂಬಂಧಗಳಿವೆ. ಭಾರತ ಎನ್ನುವುದು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದರೆ, ಅದು ಖಂಡಿತವಾಗಿಯೂ ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯ ಎಂಬ ಈ ಮೂರು ಪರಿಕಲ್ಪನೆಗಳನ್ನು ತನ್ನ ಗುರಿಗಳನ್ನಾಗಿ ರೂಪಿಸಿಕೊಳ್ಳಬೇಕು.
ಹಲವು ರಾಜ್ಯಗಳು ಒಂದು ಒಕ್ಕೂಟವಾಗಿ ನೆಲೆಗೊಳ್ಳಬೇಕೆಂದರೆ ಈ ಗುರಿಗಳು ಅವಶ್ಯವಾಗಿ ಬೇಕಾಗುತ್ತವೆ. ಅಂಬೇಡ್ಕರ್ ಅವರ ಚಿಂತನೆಗಳ ಆಶಯವಿರುವುದು ಭಾರತವನ್ನು ಕೇವಲ ಬಹುಭಾಷಿಕ, ಬಹುಸಾಂಸ್ಕ್ರುತಿಕ, ಬಹುಧರ್ಮೀಯ ಹಾಗೂ ಬಹುಜಾತಿಗಳಿಂದ ಕೂಡಿದ ರಾಷ್ಟ್ರವನ್ನಾಗಿ ನೋಡುವುದಾಗಿರಲಿಲ್ಲ.
ಬದಲಾಗಿ ಈ ಎಲ್ಲ ಭಿನ್ನ-ಅಸ್ಮಿತೆಗಳ ಅಚೆಗೂ ಭಾರತವು ಒಂದು ಒಕ್ಕೂಟವಾಗಿ ರೂಪುಗೊಳ್ಳಬೇಕು ಹಾಗೂ ಈ ಒಕ್ಕೂಟದೊಳಗೆ ನೆಲೆಗೊಳ್ಳುವ ಎಲ್ಲ ಸಮೂಹಗಳು ತಮ್ಮ ವೈಶಿಷ್ಟ್ಯತೆಗಳನ್ನು ಗುರುತಿಸಿಕೊಂಡರೂ, ಅವುಗಳು ಭೇದದ ಬೇರುಗಳಾಗದೇ, ಸಾಮಾಜಿಕ-ರಾಜಕೀಯ ಗಡಿಗಳನ್ನು ನಿರ್ಮಿಸದೇ, ಹೂದೋಟದ (ಫ್ಲಾವರ್ಸ್ ಪಾಟ್) ಸ್ವರೂಪದಲ್ಲಿ ನೆಲೆಗೊಳ್ಳಬೇಕು ಎಂಬುದು ಇವರ ಉದ್ದೇಶವಾಗಿತ್ತು.
ಯಾವತ್ತಿಗೂ ಭಾರತವನ್ನು ಒಂದು ಮೆಲ್ಟಿಂಗ್ ಪಾಟ್‍ನ್ನಾಗಿ ರೂಪಿಸುವ ಕನಸು ಕಂಡವರಲ್ಲ ಇವರು. ಆದರೆ, ಧಾರ್ಮಿಕ ಕುರುಡತನದಿಂದ ರಾಜ್ಯಭಾರವನ್ನು ಮಾಡುವರು ರಾಜ್ಯಗಳ ಒಕ್ಕೂಟವೆಂದರೆ, ಅದೊಂದು ಮೆಲ್ಟಿಂಗ್ ಪಾಟ್‍ನ ಸ್ವರೂಪದಲ್ಲಿ ದೇಶವನ್ನು ಕಟ್ಟುವುದು ಎಂದು ತಿಳಿದುಕೊಂಡಿದ್ದಾರೆ. ಈ ಎಲ್ಲ ಅಪಚಾರಗಳಿಂದ ವಿಮೋಚನೆಗೊಳಿಸಿ, ಒಂದು ಅಪ್ಪಟ ವೈಚಾರಿಕ, ಪ್ರಜಾಸತ್ತಾತ್ಮಕ ಹಾಗೂ ಸಾಮಾಜಿಕ ಐಕ್ಯತೆಯಿಂದ ಕೂಡಿಬಾಳುವ ಒಕ್ಕೂಟವನ್ನಾಗಿ ರೂಪಿಸುವ ಕನಸನ್ನು ಅಂಬೇಡ್ಕರ್ ಅವರು ಕಂಡಿದ್ದರು.
ದೇಶ, ರಾಷ್ಟ್ರ, ಒಕ್ಕೂಟ ಹಾಗೂ ರಾಜ್ಯ ಎಂಬಿತ್ಯಾದಿ ಕಲ್ಪನೆಗಳ ನಡುವಣ ಅತರ್ಸಂಬಂಧ ಹಾಗೂ ತಾತ್ವಿಕತೆಯನ್ನು ಅರಿಯದೇ ಹೋದದ್ದರಿಂದ, ಇವತ್ತು ಹಲವು ಬಗೆಯ ಸವಾಲುಗಳನ್ನು ಎದುರಿಸುವ ಇಕ್ಕಟ್ಟಿಗೆ ನಾವು ಸಿಲುಕಿದ್ದೇವೆ. ಪರಿಣಾಮವಾಗಿ ಭಾರತ (ಇಂಡಿಯಾ) ಹಾಗೂ ಭಾರತೀಯ (ಇಂಡಿಯನ್) ಎಂಬೀ ನಾಮಪದ ಮತ್ತು ನಾಮವಿಶೇಷಣಗಳ ನಡುವಣ ನಂಟು ಕಳಿಚಿಹೋಗಿ, ಇವುಗಳು ಪರಸ್ಪರ ವಿರೋಧಿಗಳಾಗಿ ವರ್ತಿಸುತ್ತವೆ. ಅಂದರೆ, ಭಾರತ ಒಂದು ರಚನಾತ್ಮಕ ನೆಲೆಯಾದರೆ, ಭಾರತೀಯ ಎಂಬುದು ಈ ರಚನೆಯನ್ನು ವಿವರಿಸುವ ಬಗೆಯಾಗಿದೆ.
ಆದರೆ ಇವತ್ತು ಭಾರತದ ರಚನೆಯೊಳಗೆ ಇರುವವನು/ಳು ಭಾರತೀಯನಾಗಿಯೇ ಕಾಣುವುದಿಲ್ಲ. ಏಕೆಂದರೆ, ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ಹಿಂದೂ ಧರ್ಮದ ವಕ್ತಾರರು ಮಂಡಿಸುವ ಎಲ್ಲ ಬಗೆಯ ನಿಲುವುಗಳನ್ನು ಒಪ್ಪಿದರೇ ಮಾತ್ರ ಅವನು/ಳು ಭಾರತೀಯನಾಗಿ ಒಪ್ಪಿಗೆಯನ್ನು ಪಡೆಯುತ್ತಾರೆ. ಯಾವುದೇ ಒಂದು ದೇಶದ ರಚನೆ ಅದು ಕೇವಲ ಯಾವುದೇ ಒಂದು ಧರ್ಮದ ವಿನ್ಯಾಸಕ್ಕೆ ಮಾತ್ರ ಸೀಮಿತಗೊಂಡರೆ, ಇಂತಹ ಅಪಾಯಗಳು ಎದುರಾಗುತ್ತವೆ.
ಇಂತಹ ಅಪಾಯಗಳನ್ನು ಗ್ರಹಿಸಿದ ಅಂಬೇಡ್ಕರ್ ಅವರು, ಯಾವುದೇ ಒಂದು ಭಾಷೆಯನ್ನು ಮಾತ್ನಾಡುವ ಜನರು ಒಂದು ನಿರ್ದಿಷ್ಟ ರಾಜ್ಯದೊಳಗೆ ನೆಲೆಗೊಂಡರೆ, ಅದು ಜಾತಿ, ಧರ್ಮದ ಕೋಮು ಸ್ವರೂಪವನ್ನು ಪಡೆದುಕೊಳ್ಳುತ್ತದೆ ಹಾಗೂ ಒಕ್ಕೂಟದ ತಾತ್ವಿಕತೆಗೆ ಎದುರಾಗಿ, ತಮ್ಮದೇ ಆಶೋತ್ತರಗಳನ್ನು ರೂಪಿಸಿಕೊಳ್ಳುತ್ತರೆ. ಪರಿಣಾಮವಾಗಿ ಸಾಮಾಜಿಕ, ರಾಜಕೀಯ ಹಾಗೂ ಭಾಷಿಕ ಅಂತರಗಳು ಮತ್ತಷ್ಟು ಬಿಗಡಾಯಿಸುವುದಕ್ಕೆ ಪೂರಕವಾಗಿ ವರ್ತಿಸುತ್ತಾರೆ ಎಂಬುದನ್ನು ಮನಗಂಡಿದ್ದರು. ಅದಕ್ಕಾಗಿಯೇ ರಾಜ್ಯಗಳ ಒಕ್ಕೂಟ ಮತ್ತು ಒಂದು ರಾಜ್ಯ ಒಂದು ಭಾಷೆ ಎಂಬ ಸೂತ್ರವನ್ನು ಅವರು ಪ್ರಸ್ತಾಪ ಮಾಡಿದ್ದು.
ಈ ಮೇಲಿನ ಚರ್ಚೆಗಳು ಸೂಕ್ಷ್ಮವಾಗಿ ಪ್ರಸ್ತಾಪಿಸುವ ಎಲ್ಲ ಬಗೆಯ ಅಪಾಯಗಳನ್ನು ನಾವು ಇವತ್ತು ಭಾರತದಲ್ಲಿ ನೋಡುತ್ತಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಹಲವು ದಶಕಗಳ ನಂತರವೂ ಕೂಡ ನಮ್ಮ ಭಾರತ ರಾಜ್ಯಗಳ ಒಕ್ಕೂಟದಂತೆ ಕೆಲಸವನ್ನು ಮಾಡದೇ, ಹಲವು ರಾಜ್ಯಗಳು ಹಲವು ಕಾರಣಗಳಿಗಾಗಿ ಶತ್ರು ಪಾಳ್ಯಗಳಂತೆ ವರ್ತಿಸುತ್ತವೆ. ಈ ಎಲ್ಲ ಶತ್ರುಗಳನ್ನು ಗಾಳಗಳನ್ನಾಗಿ ಬಳಸುವ ಕುತಂತ್ರದಂತೆ, ಕೇಂದ್ರ ಸರಕಾರ ಕೆಲಸವನ್ನು ನಿರ್ವಹಿಸುತ್ತಿದೆ.
ಗಡಿ, ನೀರು, ನೈಸರ್ಗಿಕ ಸಂಪತ್ತು, ಭಾಷೆ ಮೊದಲಾದ ಹಲವು ನೆಪಗಳನ್ನು ಮುಂದಿಟ್ಟುಕೊಂಡು ರಾಜ್ಯ ರಾಜ್ಯಗಳ ನಡುವೆ ಜಗಳಗಳು ಏರ್ಪಡುತ್ತವೆ. ಇಂತಹ ಜಗಳಗಳನ್ನು ರಾಜಕೀಯ ಲಾಭಕ್ಕಾಗಿಯೇ ಕೇಂದ್ರ ಸರಕಾರ ತನ್ನ ಪಕ್ಷಪಾತಿ ಗುಣವನ್ನು ನಿರಂತರವಾಗಿ ಪ್ರದರ್ಶಿಸುತ್ತ ಬಂದಿದೆ. ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯದಂತಹ ಮೌಲ್ಯಗಳು ಇವತ್ತು ಕೇವಲ ಘೋಷಣೆಗಳಾಗಿ ಮಾತ್ರ ಅಸ್ತಿತ್ವದಲ್ಲಿವೆ.
ಈ ಎಲ್ಲ ಚರ್ಚೆಗಳು ನಮಗೆ ಖಾತ್ರಿಪಡಿಸುವುದೇನೆಂದರೆ, ರಾಜ್ಯಗಳ ಪುನರ್ರಚನೆಯ ಆಸಕ್ತಿಗಳು ಬಹುತೇಕವಾಗಿ ರಾಜಕೀಯ ಪ್ರೇರಿತವಾಗಿವೆ. ಹಾಗಾಗಿಯೇ, ಇವುಗಳನ್ನು ವಿರೋಧಿಸುವ ಚರ್ಚೆಗಳು ಎಷ್ಟೇ ತೀವ್ರವಾಗಿ ಮುಂಚೂಣೆಗೆ ಬಂದರೂ ಅವುಗಳನ್ನು ಮೌನಗೊಳಿಸುವ ಹುನ್ನಾರವನ್ನು ಮಾಡಲಾಯಿತು. ಸಾಮಾನ್ಯವಾಗಿ, ಪ್ರಿನ್ಸ್ಲಿ ಸ್ಟೇಟ್‍ಗಳನ್ನು ಏಕತ್ರಗೊಳಿಸುವ ಹಾಗೂ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ‘ವಿಶೇಷ ಸ್ಥಾನ’ವನ್ನು ಕಲ್ಪಿಸುವುದಕ್ಕೆ ವಿಶೇಷ ಗಮನವನ್ನು ನೀಡಲಾಯಿತು ಎಂದೂ ರಾಜ್ಯಗಳ ಪುನರ್ರಚನೆಯ ಹಿಂದಿನ ಉದ್ದೇಶಗಳನ್ನು ವ್ಯಾಖ್ಯಾನಿಸಲಾಗುತ್ತದೆ.
ಇರಲಿ, 2000ನೇ ಇಸ್ವಿಯಲ್ಲಿ ಛತ್ತೀಸ್ಘಡ್, ಜಾರ್ಖಂಡ್ ಹಾಗೂ ಉತ್ತರಾಂಚಲ್ ಹಾಗೂ ಈಚೆಗೆ ತೆಲಾಂಗಣ ಎಂಬೆಲ್ಲ ರಾಜ್ಯಗಳನ್ನು ಪುನರ್ರಚಿಸಲಾಯಿತು. ಈ ಎಲ್ಲ ರಾಜ್ಯಗಳನ್ನು ಭಾಷೆಯೇತರ ನೆಲೆಯಲ್ಲಿ ವ್ಯಾಖ್ಯಾನ ಮಾಡಲಾಗಿದೆ. ಇಲ್ಲಿ ಅತ್ಯಂತ ಸ್ಪಷ್ಟವಾಗಿರುವ ಅಂಶ ಏನೆಂದರೆ, ರಾಜ್ಯಗಳ ರಚನೆಯ ರಾಜಕಾರಣಕ್ಕೆ ಒತ್ತಾಸೆಯಾಗಿ ಈ ಎಲ್ಲ ಹೊಸ ರಾಜ್ಯಗಳು ಮೈದೆರದವು. ಆದರೆ ಉತ್ತಮ ಆಡಳಿತವನ್ನು ನೀಡುವ ಕಾರಣವನ್ನು ಮುಂದಿಟ್ಟುಕೊಂಡು ಏನೇ ವಾದವನ್ನು ಮಾಡಿದರೂ, ಇದರ ಹಿಂದಿನ ರಾಜಕೀಯ ನಿಲುವುಗಳು ಮಾತ್ರ ಕಣ್ಣಿಗೆ ರಾಚುತ್ತವೆ.
ಜೊತೆಗೆ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಣ ನಂಟಸ್ತಿಕೆ, ಕೇಂದ್ರ-ರಾಜ್ಯಗಳ ಸಂಬಂಧ ಹಾಗೂ ಸಾಮಾಜಿಕ ಅಸ್ಮಿತೆಯ ಪ್ರಶ್ನೆಗಳು ನಿರಂತರವಾಗಿ ರಾಜಕೀಯ ಸಂಕಥನದ ಭಾಗಗಳಾಗಿಯೇ ಚರ್ಚೆಗೆ ಒಳಪಡುತ್ತವೆ. ಹೊರತು ಸಮೂಹಗಳ ಏಳ್ಗೆಯ ಪ್ರಶ್ನೆಗಳನ್ನಾಗಿ ಅವುಗಳನ್ನು ಚರ್ಚಿಸುವುದಿಲ್ಲ. ವಿಭಜನೆಯ ನಂತರದ ಭಾರತದಲ್ಲಿ, ರಾಷ್ಟ್ರೀಯ ಐಕ್ಯತೆಯ ಪ್ರಶ್ನೆಗಳು ಒಂದುಕಡೆ ಹಾಗೂ ಸಾಂಸ್ಕ್ರುತಿಕ ಭಿನ್ನತೆಗಳನ್ನು ಗುರುತಿಸುವ ತುಡಿತಗಳು ಮತ್ತೊಂದು ಕಡೆ ತೀವ್ರವಾಗಿ ನಮ್ಮನ್ನು ಕಾಡುತ್ತಿದ್ದರು, ನಾವು ಅವುಗಳನ್ನು ಭಾರತೀಯ-ರಾಷ್ಟ್ರೀಯ ಚೌಕಟ್ಟಿಗೆ ಸೀಮಿತಗೊಳಿಸಿ ನೋಡುವ ಪ್ರಯತ್ನವನ್ನೇ ಮಾಡುತ್ತ ಬಂದಿದ್ದೇವೆ. ರಾಜ್ಯಗಳ ಸ್ವಾಯತ್ತತೆಯ ಪ್ರಶ್ನೆಗಳನ್ನೂ ಕೂಡ ಇದೇ ಚೌಕಟ್ಟಿಗೆ ಒಳಪಡಿಸಿದ್ದು ಮಾತ್ರ ವಿಪರ್ಯಾಸ. ಜನಾಂಗ-ಪ್ರಾದೇಶಿಕ ಅಸ್ಮಿತೆ ಹಾಗೂ ಉತ್ತಮ ಆಡಳಿತದ ನಡುವಣ ಸಂಬಂಧಗಳನ್ನು ಕುರಿತು ಮಾತ್ರ ಚಿಂತಿಸುವ ಕಡೆಗೆ ಇವತ್ತಿನ ಬೆಳವಣಿಗೆಗಳು ನಮ್ಮನ್ನು ಒತ್ತಾಯಿಸುತ್ತವೆ.
ಭಾಷಾವಾರು ಪ್ರಾಂತಗಳ ಪುನರ್ರಚನೆಯನ್ನು ಕುರಿತ ಅಂಬೇಡ್ಕರ್ ಅವರ ವಿಶ್ಲೇಷಣೆಗಳಿಗೆ ಚಾರಿತ್ರಿಕ ಸನ್ನಿವೇಶವಿದೆ. ಈ ಚಾರಿತ್ರಿಕ ಸನ್ನಿವೇಶದಿಂದ ಹೊರಗಿಟ್ಟು ನೋಡಿದರೂ ಇವತ್ತಿಗೂ ಈ ವಿಶ್ಲೇಷಣೆಗಳು ನಮ್ಮ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳನ್ನು ಅರಿಯಲು ಒತ್ತಾಸೆಯಾಗುತ್ತವೆ. ರಾಜ್ಯಾಡಳಿತವನ್ನು ಪ್ರಾದೇಶೀಕರಣಗೊಳಿಸುವ ಇರಾದೆಯಿಂದ ರಾಜ್ಯಗಳ ಪುನರ್ರಚನೆಯನ್ನು ಕೈಗೊಳ್ಳಲಾಗಿದೆ. ಪ್ರಾದೇಶಿಕ ಅಸ್ಮಿತೆಯನ್ನು ಹೊಂದುವ ತುಡಿತಕ್ಕೆ ಮುಖ್ಯವಾಗಿ ಈ ಮೂರು ಕಾರಣಗಳನ್ನು ಇಲ್ಲಿ ಗುರುತಿಸಬಹುದು.
ಮತದಾರರ ಪ್ರಾತಿನಿದ್ಯದಲ್ಲಿ ಬದಲಾವಣೆಯನ್ನು ತರುವ ಮೂಲಕ ಈಗಾಗಲೇ ರಾಜಕೀಯವಾಗಿ ನಿಶ್ಕ್ರಿಯಗೊಂಡಿದ್ದ ಇಲ್ಲವೇ ಆಯಾ ಪ್ರದೇಶದ ಜನರಲ್ಲಿ ಸುಪ್ತವಾಗಿದ್ದ ಪ್ರಾದೇಶಿಕತೆಯ ಹಪಾಹಪಿತನವನ್ನು ಪುನರುಜ್ಜೀವನಗೊಳಿಸುವುದಾಗಿತ್ತು. ಜಾತಿ, ಜನಾಂಗ, ಭಾಷೆಗಳನ್ನೇ ನೆಲೆಯಾಗಿಸಿಕೊಂಡ ರಾಜಕೀಯ ಪ್ರೇರಿತ ಅಭಿವ್ಯಕ್ತಿಯನ್ನು ಸಜ್ಜುಗೊಳಿಸುವ ಮೂಲಕ ಹೊಸದಾಗಿ ಮೈಪಡೆದ ರಾಜ್ಯಗಳು, ಸಾಮಾಜಿಕ ಒಡಕುಗಳಿಗೆ ನಾಂದಿ ಹಾಡಿದವು. ಪ್ರಾದೇಶಿಕ ಇಲ್ಲವೇ ರಾಷ್ಟ್ರೀಯ ಪಕ್ಷಗಳೆಂಬ ಯಾವುದೇ ಭೇದಗಳನ್ನು ಹೊಂದದೆ ಪ್ರಾದೇಶಿಕ ಕೇಂದ್ರಿತವಾದ ಚುನಾವಣೆಯ ಪ್ರಚಾರ ಮತ್ತು ನೀತಿಗಳನ್ನು ಹುಟ್ಟು ಹಾಕಲಾಗುತ್ತದೆ.
ಆದಾಯ ಮತ್ತು ಬಳಕೆಯ ವಿನ್ಯಾಸದಲ್ಲಿ ಪ್ರಾದೇಶಿಕ ಅಸಮಾನತೆಯ ಪ್ರಮಾಣವು ದಿನದಿಂದ ದಿನಕ್ಕೆ ತಲೆದೊರುತ್ತಿದೆ. ಪರಿಣಾಮವಾಗಿ ಸುಧಾರಣೋತ್ತರ ಕಾಲದಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯ ಧೋರಣೆಗಳು ಉಲ್ಬಣಿಸುತ್ತಿವೆ ಎಂಬ ಗ್ರಹಿಕೆಗೆ ಇದು ಇಂಬು ನೀಡುತ್ತಿದೆ. ಕರಾವಳಿ ಮತ್ತು ಇತರೆ ಅಭಿವ್ರುದ್ಧಿ ಹೊಂದಿದ ಪ್ರದೇಶಗಳು ನಿಸ್ಸಂಶಯವಾಗಿ, ನಿರಂತರವಾಗಿ ಸಮಗ್ರ ಬೆಳವಣಿಗೆಯನ್ನು ಹೊಂದುತ್ತಿವೆ. ಹಾಗೂ ಇಂತಹ ಅವಕಶಾಗಳಿಂದ ವಂಚಿತವಾಗಿರುವ ಇನ್ನಿತರೆ ಪ್ರಾದೇಶಿಕ ಹೊರ ವಲಯಗಳಿಗೆ ಹೋಲಿಸಿದರೆ ಖಾಸಗಿ ಬಂಡವಾಳದ ಅಪಾರ ಹೂಡುವಿಕೆಯಿಂದಲೂ ಅಭಿವ್ರುದ್ಧಿ ಹೊಂದಿದ ಈ ಪ್ರದೇಶಗಳೇ ಮತ್ತೆ ಮತ್ತೆ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಿವೆ.
ಆದರೆ ಈ ಪ್ರಾದೇಶಿಕ ಅಭಿವ್ರುದ್ಧಿಯಿಂದ ಹೊರಗುಳಿದ ಪ್ರಾದೇಶಿಕ ವಲಯಗಳು ಕಾನೂನು ಮತ್ತು ಸುವ್ಯವಸ್ಥೆಯಿಂದಲೂ ಬಾಧಿಸಲ್ಪಟ್ಟಿವೆ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಮೂಲಭೂತ ಸೌಕರ್ಯಗಳ ಕೊರತೆಯಿಂದಲೂ ಬಳಲುತ್ತಿವೆ.
ಸಂವಿಧಾನ ರಾಜ್ಯಗಳೊಳಗೆಯೇ ಸಂಪತ್ಭರಿತ ಪ್ರದೇಶಗಳು ಇದ್ದು, ಅಗಾಧ ಪ್ರಮಾಣದಲ್ಲಿ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದು ಮತ್ತು ಪರಿಣಾಮಕಾರಿ ಬೆಳವಣಿಗೆಯನ್ನು ಹೊಂದುತ್ತಿದ್ದಾಗಲೂ, ಈ ಪ್ರದೇಶಗಳ ಮೇಲೆ ನಿರಂತರವಾಗಿ ಅವಲಂಭಿತವಾಗಿದ್ದ ಇತರೆ ಹಿಂದೂಳಿದ ಪ್ರದೇಶಗಳಿಗೆ ಯಾವುದೇ ಬಗೆಯ ಆದಾಯವನ್ನು ವರ್ಗಾಯಿಸುವುದನ್ನು ಈ ಸಂಪತ್ಭರಿತ ಪ್ರದೇಶಗಳು ನಿರಾಕರಿಸುತ್ತವೆ.
ಈ ಧೋರಣೆಗಳನ್ನು ವ್ಯಂಗವಾಗಿ ‘ಶ್ರೀಮಂತಿಕೆಯನ್ನು ಹಿಂಪಡೆಯುವ’ ಬಗೆಯನ್ನಾಗಿ ಇಲ್ಲಿ ನೋಡುತ್ತೇವೆ. ಇಲ್ಲಿಯ ಸ್ಥಳೀಯ ಮೇಲ್ವರ್ಗಗಳ ಆರೋಪ ಏನೆಂದರೆ, ರಾಜಕೀಯವಾಗಿ ಪ್ರಾಬಲ್ಯವನ್ನು ಹೊಂದಿರುವ ಇತರೆ ಪ್ರದೇಶದ ಮೇಲ್ವರ್ಗಗಳು ಆರ್ಥಿಕವಾಗಿ, ಆಡಳಿತಾತ್ಮಕವಾಗಿ ತಾರತಮ್ಯ ಧೋರಣೆಗಳನ್ನು ಹೊಂದುತ್ತವೆ ಎಂಬುದಾಗಿದೆ.
ಈ ಮೇಲಿನ ಪ್ರಕ್ರಿಯೆಯ ಪರಿಣಾಮವಾಗಿ ಭಾರತದ ಫೆಡರಲ್ ತಾತ್ವಿಕತೆಯಲ್ಲಿ ಗಮನಾರ್ಹವಾದ ಪಲ್ಲಟಗಳು ಏರ್ಪಟ್ಟಿರುತ್ತವೆ. ಈ ಪಲ್ಲಟಗಳು ಹಲವು ಸ್ವರೂಪದಲ್ಲಿ ಪ್ರತಿಫಲಿಸಿರುವುದನ್ನು ಈ ಮುಂದಿನ ಬೆಳವಣಿಗೆಗಳ ಮೂಲಕ ನೋಡುತ್ತೇವೆ. ಅಂದರೆ;
ಪ್ರಾದೇಶಿಕ ಅಸ್ಮಿತೆ, ಸಂಸ್ಕ್ರುತಿ ಹಾಗೂ ಭೌಗೋಳಿಕ ಭಿನ್ನತೆಗಳು, ರಾಜಕೀಯ ಪ್ರಾತಿನಿಧ್ಯ ಹಾಗೂ ಆಡಳಿತಾತ್ಮಕ ವಲಯಗಳನ್ನಾಗಿ ರೂಪಿಸುವುದಕ್ಕೆ ಇವುಗಳು ಮಹತ್ವದ ಮಾನದಂಡಗಳಾಗಿರುತ್ತವೆ.
ಪ್ರತ್ಯೇಕ ರಾಜ್ಯಗಳ ಕೋರಿ ನಡೆಸುವ ಚಳವಳಿಗಳು ಇವತ್ತು ಯಾವುದೇ ಬಗೆಯ ಭಾಷಾ ದುರಾಭಿಮಾನ ಇಲ್ಲವೇ ಪ್ರಾಂತೀಯ ಕಳಂಕಗಳನ್ನಾಗಿ ನೋಡುವ ಕಾಲವಲ್ಲವಿದು. ದಿಟ, ಹಿಂದೊಂದು ಕಾಲದಲ್ಲಿ ಇದನ್ನು ರಾಷ್ಟ್ರ ವಿರೋಧಿ ನಿಲುವನ್ನಾಗಿ ನೋಡುವ ಕ್ರಮವೊಂದಿತ್ತು.
ಇವತ್ತು ಹೊಸ ರಾಜ್ಯಗಳ ಪ್ರಸ್ತಾಪವು ಭಾಷಾ ತತ್ವಗಳ ಆಧಾರದ ಮೇಲೆ ಆಗುತ್ತಿಲ್ಲ. ಬದಲಾಗಿ ಅಭಿವ್ರುದ್ಧಿ ಮತ್ತು ಉತ್ತಮ ಆಡಳಿತವನ್ನು ಕೊಡುವ ನೆಪದಲ್ಲಿ ಮುಂಚೂಣೆಗೆ ಬರುತ್ತಿವೆ. ಅದರೆ ಮೊದಲ ಹಂತದ ರಾಜ್ಯಗಳ ಪುನರ್ರಚನೆಯು ಭಾಷೆಗಳನ್ನೇ ಆಧಾರವಾಗಿಟ್ಟುಕೊಂಡು ನಡೆದಿತ್ತು ಎಂಬುದು ಗಮನಾರ್ಹ.
ಆದರೆ ವೈರುಧ್ಯವೇನಂದರೆ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ಪ್ರದೇಶಗಳಲ್ಲಿ ನೆಲೆಗೊಂಡಿದ್ದ ಬೇರೆ ಬೇರೆ ಒಳನುಡಿಗಳು ತಮ್ಮದೆಯಾದ ತಾಯ್ನೆಲವನ್ನು ಹೊಂದುವ ಇರಾದೆಯನ್ನೂ ತಾಳಿದ್ದವು. ಬುಂದೆಲ್ಖಂಡ, ರುಹೆಲ್ಖಂಡ ಹಾಗೂ ಮಿಥಿಲಾಂಚಲ್ ಪ್ರದೇಶಗಳು ತಮ್ಮ ಒಳನುಡಿಗಳಲ್ಲಿ ಹುದುಗಿರುವ ಸಂಸ್ಕ್ರುತಿ ಹಾಗೂ ಸಾಹಿತ್ಯದ ವೈಶಿಷ್ಟ್ಯ ಮತ್ತು ಶ್ರೀಮಂತಿಕೆಯನ್ನು ಕಂಡರಿಸುವ ಹಂಬಲವೂ ಇಂತಹ ಇರಾದೆಗಳಲ್ಲಿ ಅಡಕವಾಗಿದ್ದವು. ಕಳೆದ ದಶಕದಲ್ಲಿ ಅಂದರೆ ನವೆಂಬರ್ 2000ನೇ ಇಸ್ವಿಯಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಂದ ಛತ್ತೀಸ್ಘಡ್, ಉತ್ತರಾಂಚಲ್ ಹಾಗೂ ಜಾರ್ಖಂಡ್ ಎಂಬ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು.
ಈ ಮೂರು ರಾಜ್ಯಗಳು ಮೈದಾಳಲು ಕಾರಣ, ಫೆಡರಲ್ ಚಿಂತನೆಯಲ್ಲಿ ಏರ್ಪಟ್ಟ ಸಾಂಸ್ಕ್ರುತಿಕ-ರಾಜಕೀಯ ಪಲ್ಲಟಗಳೇ ಎಂದು ಹೇಳಬೇಕು. ಈ ಹೊಸ ರಾಜ್ಯಗಳ ಪುನರ್ರಚನೆಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲಿಸಿರುವುದನ್ನು ಮುಖ್ಯವಾಗಿ ಇಲ್ಲಿ ನೋಡಬಹುದು. ರಾಷ್ಟ್ರೀಯ ಪಕ್ಷಗಳ ಏಕಮುಖಿ ನಿಲುವುಗಳಿಂದ ಹಾಗೂ ತೀವ್ರವಾಗಿ ಬೆಳೆಯುತ್ತಿರುವ ರಾಜಕೀಯ ಸ್ಪರ್ಧಾತ್ಮಕ ವಾತಾವರಣದಿಂದ ತಪ್ಪಿಸಿಕೊಳ್ಳುವ ತಂತ್ರಗಳನ್ನೂ ಇಲ್ಲಿ ಕಾಣಬಹುದು. ಅಂದರೆ ಯಾವುದೇ ಒಂದು ರಾಷ್ಟ್ರೀಯ ಪಕ್ಷವು ಕೇಂದ್ರದಲ್ಲಿ ಅಧಿಕಾರವನ್ನು ಪಡೆಯುವುದರಿಂದ, ಪ್ರಾದೇಶಿಕ ಕಾಳಜಿಗಳನ್ನು ಈ ರಾಷ್ಟ್ರೀಯ ಪಕ್ಷಗಳು ಹೊಂದಿರಲಾರವು ಎಂಬ ಅನುಮಾನವೂ ಇಲ್ಲಿದೆ.
2009 ಡಿಸೆಂಬರ್‍ನಲ್ಲಿ ಪ್ರತ್ಯೇಕ ತೆಲೆಂಗಾಣ ರಾಜ್ಯದ ಹೊಸ ಬೇಡಿಕೆಯು ತೀವ್ರ ಸ್ವರೂಪವನ್ನು ಪಡೆದುಕೊಂಡಾಗ, ಕೇಂದ್ರ ಸರಕಾರವು ಈ ಬೇಡಿಕೆಯನ್ನು ಪರಿಗಣಿಸುವಾಗ, ಇನ್ನೂ ಹಲವಾರು ಹೊಸ ಮತ್ತು ಹಳೆ ಬೇಡಿಕೆಗಳು ಮುಂಚೂಣೆಗೆ ಬಂದವು. ಉದಾ.ಗೆ ಕರ್ನಾಟಕದಲ್ಲಿ ಕೂರ್ಗ್, ಬಿಹಾರದಲ್ಲಿ ಮಿಥಿಲಾಂಚಲ್, ಗುಜರಾತಿನಲ್ಲಿ ಸೌರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಗೋರ್ಖಲ್ಯಾಂಡ್ ಹಾಗೂ ಕಾಮ್ಟಪೂರ್ ಮತ್ತು ಮಹಾರಾಷ್ಟ್ರದಲ್ಲಿ ವಿದರ್ಭ ಮೊದಲಾದ ಪ್ರದೇಶಗಳು ಪ್ರತ್ಯೇಕ ರಾಜ್ಯಗಳ ಬೇಡಿಕೆಗಳನ್ನು ಮುಂದಿಟ್ಟಿರುವುದು ಈಗ ಇತಿಹಾಸ. ತಮ್ಮ ತಾಯ್ನೆಲದಿಂದ ಪ್ರತ್ಯೇಕತೆಯನ್ನು ಬಯಸುವುದರ ಹಿಂದೆ ಕೇವಲ ಭಾಷಿಕ ಕಟ್ಟಾಭಿಮಾನ ಮಾತ್ರ ಇರಲಾರದು ಎಂಬುದು ಇಲ್ಲಿ ಅತ್ಯಂತ ನಿಚ್ಚಳವಾಗಿದೆ.
ಭಾರತವನ್ನು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವೆಂದು ಈಗಾಗಲೇ ಪರಿಗಣಿಸಿದ್ದರೂ, ಆಳವಾಗಿ ವಿಶ್ಲೇಷಿಸಿ ನೋಡಿದಾಗ ಈ ನೆಲೆ ಇನ್ನೂ ಭ್ರೂಣಾವಸ್ಥೆಯಲ್ಲಿಯೇ ಇರುವುದನ್ನು ನಾವು ಯಾರಾದರೂ ಮನಗಾಣುತ್ತೇವೆ. ಪ್ರಜಾಸತ್ತಾತ್ಮಕ ಅರಿವು ಮತ್ತು ಕ್ರಿಯೆಗಳು ಇನ್ನೂ ಪಕ್ವಗೊಳ್ಳುವ ಜರೂರಿದೆ. ಭಾಷೆಗಳ ಬಗೆಗೆ ಭಾರತವು ತಾಳಿರುವ ನಿಲುವುಗಳೇ ಇದಕ್ಕೆ ಸ್ಪಷ್ಟ ನಿದರ್ಶನ.
ಹಾಗಾಗಿ ಭಾರತದ ಇವತ್ತಿನ ಭಾಷಿಕ ಸನ್ನಿವೇಶವನ್ನು ಅರಿಯಲು, ಅಂಬೇಡ್ಕರ್ ಅವರ ಭಾಷಿಕ ಚಿಂತನೆಗಳನ್ನು ಮರುಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ. ಭಾರತದ ಭಾಷಾ ನೀತಿಗಳು ಹಲವು ಬಗೆಯ ಬದಲಾವಣೆಗೆ ಒಳಪಟ್ಟಿವೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯೇ ಇದಕ್ಕೆ ಅತ್ಯಂತ ಮಹತ್ವದ ಸಾಕ್ಷಿಯಾಗಿದೆ. ಭಾರತವು ಒಂದು ಅಪ್ಪಟ ಬಹುಭಾಷಿಕ ದೇಶವಾಗಿದೆ. ಈ ದಿಟ ಬಹುಭಾಷಿಕತೆಯನ್ನು ಅರಿಯಲು ಸಾಕಷ್ಟು ಚಿಂತಕರು ತಮ್ಮ ಚಿಂತನೆಗಳನ್ನು ಬೆಳೆಸಿದ್ದಾರೆ.
ಇಂತಹ ಪ್ರಖ್ಯಾತ ಚಿಂತಕರು ಮತ್ತು ನೀತಿ ನಿರೂಪಕರನ್ನು ಬದಿಗಿಟ್ಟು, ಹೊಸ ಬಗೆಯ ಬಹುಭಾಷಿಕತೆಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಏಕೆಂದರೆ ಭಾಷಾವಾರು ಪ್ರಾಂತಗಳ ಪುನರ್ರಚನೆಯ ಬಗೆಗೆ ಈ ಚಿಂತಕರ ನಿಲುವುಗಳು ಅತ್ಯಂತ ವ್ಯತರಿಕ್ತವಾಗಿದ್ದವು.
ಅಂಬೇಡ್ಕರ್ ಅವರು ಭಾಷಾವಾರು ರಾಜ್ಯಗಳ ರಚನೆಯ ಮುಖ್ಯ ಪ್ರತಿಪಾದಕರು. ಆದರೆ ಈ ಭಾಷಾವಾರು ರಾಜ್ಯಗಳು ತಮ್ಮ ತಮ್ಮ ರಾಜ್ಯ ಭಾಷೆಗಳಿಗೆ (ಉದಾ.ಗೆ ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು ಮತ್ತು ಆಂದ್ರಪ್ರದೇಶ ಹಾಗೂ ತೆಲಾಂಗಣದಲ್ಲಿ ತೆಲುಗು ಇತ್ಯಾದಿ…) ಬದಲಾಗಿ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಬಳಸಬೇಕು ಎಂಬ ನಿಲುವನ್ನು ಹೊಂದಿದ್ದರು.
ಭಾರತವು ಮಧ್ಯಕಾಲೀನ ಭಾರತದ ಮರುರೂಪವನ್ನು ಪಡೆಯುವ ಅಪಾಯದಿಂದ ತಪ್ಪಿಸಲು, ಅಂಬೇಡ್ಕರ್ ಅವರು ಈ ನಿಲುವನ್ನು ತಾಳುತ್ತಾರೆ. ಏಕೆಂದರೆ, “ನಮ್ಮ ಭಾರತ ಆಧುನಿಕ ಭಾರತವಾಗಿ ಉಳಿಯದೇ ಪರಸ್ಪರ ವೈರತ್ವ ಮತ್ತು ಯುದ್ಧಗಳಲ್ಲಿ ಮುಳುಗಿರುವ ಅನೇಕ ದೇಶಗಳನ್ನೊಳಗೊಂಡ ಮಧ್ಯಕಾಲೀನ ಭಾರತವಾಗಿ ಅದು ಪರಿಣಮಿಸುತ್ತದೆ”. ಎಂಬ ಅಭಿಪ್ರಾಯ ಅವರದಾಗಿತ್ತು. ಮತ್ತು ಈ ಅಭಿಪ್ರಾಯವು ಇವತ್ತು ನಾವು ಭಾಷಿಕವಾಗಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ವಿಶ್ಲೇಷಿಸಿ ನೋಡುವಂತೆ ನಮ್ಮನ್ನು ಒತ್ತಾಯಿಸುತ್ತದೆ.
ಹೌದು, ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿಯೇ ರಚನೆಗೊಂಡ ಭಾರತದ ಸಂವಿಧಾನವು, ಅವರೇ ಊಹಿಸಿದ ಆತಂಕವನ್ನೂ ಲೆಕ್ಕಿಸದೇ ಇವತ್ತು ಸಂವಿಧಾನವು ಆಯಾ ರಾಜ್ಯಗಳ ಭಾಷೆಯನ್ನೇ ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಅವಕಾಶವನ್ನು ನಮಗೆ ಒದಗಿಸಿದೆ.
ಭಾಷಾವಾರು ರಾಜ್ಯಗಳನ್ನು ರಚಿಸುವ ಪ್ರಕ್ರಿಯೆಯಲ್ಲಿಯೇ ಅಪಾಯಗಳು ಅಡಗಿರುತ್ತವೆ ಎಂಬ ಈ ವಿಚಾರವು ಎಷ್ಟೊಂದು ಸುಸ್ಪಷ್ಟವಾದುದೋ, ನಾವು ಭಾಷಾವಾರು ರಾಜ್ಯಗಳನ್ನು ರಚಿಸದಿದ್ದರೂ ಅದಕ್ಕಿಂತ ಹೆಚ್ಚಿನ ಅಪಾಯಕ್ಕೆ ಈಡಾಗುತ್ತೇವೆ ಎಂಬುದು ಕೂಡ ಅಷ್ಟೇ ನಿಖರವಾದ ನಿಲುವಾಗಿದೆ. ಈ ವಿಶ್ಲೇಷಣೆಗಳನ್ನು ಅಂಬೇಡ್ಕರ್ ಅವರು ತಮ್ಮ ಭಾಷಾವಾರು ರಾಜ್ಯಗಳನ್ನು ಕುರಿತ ಚಿಂತನೆಗಳು (1955) ಅನ್ನುವ ಬರಹದಲ್ಲಿ ಮಂಡಿಸುತ್ತಾರೆ.
ಭಾಷಾವಾರು ಪ್ರಾಂತಗಳ ಪುನರ್ರಚನೆಯಿಂದ ಏರ್ಪಡುವ ಪರಿಣಾಮಗಳನ್ನು ಒಂದಿಲ್ಲ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗಬಹುದು. ಆದರೆ ಈ ಭಾಷಾವಾರು ಪ್ರಾಂತಗಳನ್ನು ರಚಿಸದ ಕಾರಣ ಎದುರಾಗುವ ಬಿಕ್ಕಟ್ಟುಗಳನ್ನು ನಿರ್ವವಹಿಸುವುದು ಅತ್ಯಂತ ದುಸ್ತರ ಎಂಬ ಅಭಿಪ್ರಾಯವನ್ನೂ ಇವರು ವ್ಯಕ್ತಪಡಿಸುತ್ತಾರೆ. ಇನ್ನೂ ಮುಂದುವರೆದು ಅಂಬೇಡ್ಕರ್ ಅವರು ಹೇಳುವುದೇನೆಂದರೆ, “ವಿವೇಕಶೀಲನೂ ದ್ರುಢ ಮನೋಭಾವದವನೂ ಅದ ಯಾವುದೇ ಮುತ್ಸದ್ದಿ ರಾಜಕಾರಣಿ (ಸ್ಟೇಟ್ಸ್‍ಮನ್)ಯು ಭಾಷಾವಾರು ಪ್ರಾಂತಗಳ ಪುನರ್ರಚನೆಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಬಲ್ಲನು.
ಆದರೆ ಈ ಭಾಷಾವಾರು ವಿಂಗಡಣೆಗೆ ಒಳಗಾಗದ ಸಂಕೀರ್ಣ ಭಾರತದಲ್ಲಿ ತಲೆದೊರುವ ಅಪಾಯಗಳು, ಎಷ್ಟೇ ಮುತ್ಸದ್ದಿ ರಜಕಾರಣಿಯಾಗಿದ್ದರೂ ಅವನ ನಿಯಂತ್ರಕ್ಕೆ ಈ ಅಪಾಯಗಳು ಸಿಗಲಾರವು” ಎಂಬ ಕಟು ಸತ್ಯವನ್ನು ಅಂಬೇಡ್ಕರ್ ಅವರು ನಮಗೆ ಇಲ್ಲಿ ಮನವರಿಕೆ ಮಾಡುತ್ತಾರೆ. ನಮ್ಮ ಗ್ರಹಿಕೆಗೆ ಹೊರತಾದ ಬಿಕ್ಕಟ್ಟುಗಳು ಸಂಕೀರ್ಣ ಬಹುಭಾಷಿಕ ಸನ್ನಿವೇಶದಲ್ಲಿ (ಮಧ್ಯಕಾಲೀನ ಭಾರತ) ಹುದುಗಿರುತ್ತವೆ ಎಂಬ ಕಟು ವಾಸ್ತವವನ್ನು ಅರಿಯುವುದರ ಜೊತೆಗೆ, ಪ್ರಜಾಪ್ರಭುತ್ವ (ಬಹುಭಾಷಿಕ) ಭಾರತದಲ್ಲಿ ಎದುರಾಗುವ ಭಾಷಿಕ ಬಿಕ್ಕಟ್ಟುಗಳನ್ನು ನಿರ್ವಹಿಸುವ ಕಾರ್ಯಯೋಜನೆಗಳನ್ನು ನೆಲೆಗೊಳಿಸುವ ಅಗತ್ಯವಿದೆ ಎಂಬ ಅನಿವಾರ್ಯತೆಯನ್ನೂ ಮನಗಾಣುತ್ತೇವೆ.
‘ಯಾವುದೇ ಭಾಷಾವಾರು ರಾಜ್ಯ ತನ್ನ ಪ್ರಾದೇಶಿಕ ಭಾಷೆಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಹೊಂದುವ ಮೂಲಕ ಸ್ವತಂತ್ರ ರಾಷ್ಟ್ರವಾಗಿ ಬೆಳೆಯಬಹುದು. ಸ್ವತಂತ್ರ ರಾಜ್ಯ ಮತ್ತು ಸ್ವತಂತ್ರ ರಾಷ್ಟ್ರಗಳ ನಡುವಣ ದಾರಿ ಅತ್ಯಂತ ಕಿರಿದಾದುದು. ಒಂದು ವೇಳೆ ಹೀಗಾದರೆ, ನಮ್ಮ ಭಾರತವು ಆಧುನಿಕ ಭಾರತವಾಗಿ ಉಳಿಯದೇ, ಹಲವು ದೇಶಗಳನ್ನೊಳಗೊಂಡು ನಿರಂತರವಾಗಿ ಪರಸ್ಪರ ವೈರತ್ವ ಮತ್ತು ಯುದ್ಧದಲ್ಲಿ ಮುಳುಗಿರುವ ಮಧ್ಯಕಾಲೀನ ಭಾರತವಾಗಿ ಮೈದಾಳುತ್ತದೆ’.
ಭಾಷಾವಾರು ಪ್ರಾಂತಗಳ ಪುನರ್ರಚನೆಯ ಸಾಧಕ ಮತ್ತು ಬಾಧಕಗಳನ್ನು ಪರಿಶೀಲಿಸುವ ದಾರಿಗಳನ್ನು ಅಂಬೇಡ್ಕರ್ ಅವರು ಅತ್ಯಂತ ಖಚಿತವಾಗಿ ಇಲ್ಲಿ ತೋರಿಸಿರುತ್ತಾರೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯನ್ನು ಕೇವಲ ಭಾವನಾತ್ಮಕ ವಿದ್ಯಮಾನವನ್ನಾಗಿ ಪರಿಗಣಿಸದೇ ಅದನ್ನೊಂದು ವೈಜ್ಞಾನಿಕ ಮತ್ತು ತಾತ್ವಿಕ ನಿಲುವನ್ನಾಗಿ ನೋಡಿದರೆ, ಅಂಬೇಡ್ಕರ್ ಈ ಕುರಿತು ಏನನ್ನು ಸೂಚಿಸುತ್ತಿದ್ದಾರೆ, ಯಾಕೇ ಇವರ ವಿಶ್ಲೇಷಣೆಗಳು ನಮಗೆ ಇವತ್ತು ವ್ಯತರಿಕ್ತವಾಗಿ ಕಾಣುತ್ತವೆ ಎಂಬುದನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯ ಪ್ರಕ್ರಿಯೆಯಲ್ಲಿ ಅಪಾಯಗಳು ಇರುವಂತೆ, ಭಾಷಾವಾರು ಪ್ರಾಂತಗಳನ್ನು ಪುನರ್ರಚಿಸದೇ ಹೋದರು ಅಪಾಯಗಳು ಹೇಗೆ ಅಡಕವಾಗಿರುತ್ತವೆ ಎಂಬ ವೈಜ್ಞಾನಿಕ ದಿಟವನ್ನು ಇಲ್ಲಿ ಮನಗಾಣುತ್ತೇವೆ.
ಹಾಗಾದರೆ ಅಂಬೇಡ್ಕರ್ ಅವರು ಏನನ್ನು ಹೇಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಇವರ ವಿಶ್ಲೇಷಣೆಗಳು ಅತ್ಯಂತ ನಿಚ್ಚಳವಾಗಿರುತ್ತವೆ. ಅಂದರೆ ಬಹುಭಾಷಿಕ ಸನ್ನಿವೇಶವನ್ನು ನಿಭಾಯಿಸುವ ದಾರಿಗಳನ್ನು ತೋರಿಸುವ ಜೊತೆಗೆ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ವಿನ್ಯಾಸಗಳನ್ನು ಮರುರೂಪಿಸಿಕೊಳ್ಳುವ ಬಗೆಗಳನ್ನೂ ಇಲ್ಲಿ ಕಂಡರಿಸುತ್ತಾರೆ. ಹಾಗಾಗಿ ಮಧ್ಯಕಾಲೀನ ಭಾರತದ ಸಂದರ್ಭಕ್ಕೆ ಈಡಾಗುವ ಅಪಾಯವನ್ನು ತಪ್ಪಿಸುವ ತಂತ್ರಗಳನ್ನು ಅಂಬೇಡ್ಕರ್ ಚಿಂತನೆಗಳಲ್ಲಿ ಕಾಣುತ್ತೇವೆ.
ಹಾಗಾಗಿ ಪುನರ್ರಚಿತ ರಾಜ್ಯಗಳಲ್ಲಿ ಎದುರಾಗುವ ಭಾಷಿಕ ಅಪಾಯಗಳಿಂದ ತಪ್ಪಿಸಲು, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೇ ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಬದಲಾಗಿ ಹಿಂದಿ ಇಲ್ಲವೇ ಇಂಗ್ಲಿಶು ಭಾಷೆಗಳನ್ನು ಬಳಸುವ ಪ್ರಸ್ತಾವನೆಯನ್ನು ಅಂಬೇಡ್ಕರ್ ಮಂಡಿಸುತ್ತಾರೆ. ಅಂದರೆ, “ಈ ಅಪಾಯಗಳನ್ನು ಬಗೆಹರಿಸುವುದು ಹೇಗೆ? ಇಂತಹ ಅಪಾಯಗಳನ್ನು ಬಗೆಹರಿಸಲು ಈ ಸದ್ಯ ನನಗೆ ಅನ್ನಿಸುವ ಏಕೈಕ ಉಪಾಯವೇನೆಂದರೆ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಅವಕಾಶವನ್ನು ಸಂವಿಧಾನದಲ್ಲಿಯೇ ಒದಗಿಸಕೂಡದು.
ರಾಜ್ಯದ ಅಧಿಕ್ರುತ ಭಾಷೆಯನ್ನಾಗಿ ಹಿಂದಿಯನ್ನು ಬಳಸಬೇಕು. ಭಾರತವು ಈ ನಿಲುವಿಗೆ ಹೊಂದಿಕೊಳ್ಳುವರಿಗೆ ಇಂಗ್ಲಿಶನ್ನು ಈ ಉದ್ದೇಶಕ್ಕಾಗಿ ಬಳಸಬೇಕು. ಭಾರತೀಯರು ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವವರೇ? ಒಂದುಪಕ್ಷ ಇಲ್ಲವಾದಲ್ಲಿ, ಭಾಷಾವಾರು ರಾಜ್ಯಗಳು ಸಹಜವಾಗಿಯೇ ಅಪಾಯಕ್ಕೆ ಈಡಾಗುತ್ತವೆ”. ಹಾಗಾದರೆ ಅಂಬೇಡ್ಕರ್ ಅವರ ಈ ಮಾತುಗಳು ಏನನ್ನು ಸಾಬೀತಪಡಿಸುತ್ತವೆ ಎಂಬ ಅನುಮಾನವು ನಮ್ಮಲ್ಲಿ ಉಂಟಾಗದೇ ಇರಲಾರದು. ಸಮಾನತೆ, ಸ್ವಾತಂತ್ರ ಮತ್ತು ಬಾಂಧವ್ಯ ಎಂಬೀ ತ್ರಿವಳಿ ತತ್ವಗಳನ್ನು ಮಂಡಿಸುವ ಅಂಬೇಡ್ಕರ್ ಹಾಗೂ ಹಿಂದಿಯನ್ನು ರಾಜ್ಯದ ಅಧಿಕ್ರುತ ಭಾಷೆಯನ್ನಾಗಿ ಪ್ರಸ್ತಾಪಿಸುವ ಅಂಬೇಡ್ಕರ್ ಅವರ ನಿಲುವುಗಳ ನಡುವೇ ಯಾವುದೇ ಹೊಂದಾಣಿಕೆ ಕಾಣಿಸುತ್ತಿಲ್ಲ. ಇಲ್ಲಿ ಕೇವಲ ಏರುಪೇರುಗಳು ಇಲ್ಲವೇ ವಿರೋಧಭಾಸಗಳು ಇರುವಂತೆ ಭಾಸವಾಗುತ್ತದೆ.
ಮೂಲಭೂತ ಹಕ್ಕುಗಳು (ಫಂಡಾಮೆಂಟಲ್ ರೈಟ್ಸ್) ಮತ್ತು ರಾಜ್ಯ ನಿರ್ದೇಶಕ ತತ್ವಗಳ (ಸ್ಟೇಟ್ ಡಿರೆಕ್ಟಿವ್ ಪ್ರಿನ್ಸಿಪಲ್ಸ್) ನಡುವೆ ತಾತ್ವಿಕ ಹಾಗೂ ಪ್ರ್ಯಾಗ್ಮಾಟಿಕ್ (ಪ್ರಯೋಜನಕಾರಿ ತತ್ವ) ನಂಟನ್ನು ಕಲ್ಪಿಸಿರುವ ಅಂಬೇಡ್ಕರ್ ಅವರಿಗೆ, ಹಿಂದಿಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಂಡರೆ ಏನೆಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಬಿಕ್ಕಟ್ಟುಗಳು ಎದುರಾಗುತ್ತವೆ ಎಂಬ ವಾಸ್ತವ ಗೊತ್ತಿರಲಿಲ್ಲವೇ? ದಿಟ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೇ ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಂಡಿದ್ದರಿಂದ, ಯಾವುದೇ ವ್ಯತ್ಯಾಸವನ್ನು ನಾವು ಇವತ್ತು ಕಾಣುತ್ತಿಲ್ಲ. ಅಂದರೆ ಕಲ್ಯಾಣ ರಾಜ್ಯಗಳನ್ನು ಕಟ್ಟುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಲಾರೆ.
ಹಾಗಾದರೆ, ಅಂಬೇಡ್ಕರ್ ಅವರ ನಿಲುವುಗಳನ್ನು ಹೇಗೆ ವಿಶ್ಲೇಷಿಸಬೇಕು? ಯಾವ ತಾತ್ವಿಕ ವಿನ್ಯಾಸವನ್ನು ನೆಲೆಯಾಗಿಸಿಕೊಂಡು ಇವರ ಈ ನಿಲುವನ್ನು ಬಿಡಿಸಿ ನೋಡಬೇಕು? ಹಿಂದು ಧರ್ಮ ಮತ್ತು ಶಾಸ್ತ್ರಗಳಲ್ಲಿ ಹುದುಗಿರುವ ಜೀವವಿರೋಧಿ ಧೋರಣೆಗಳ ವಿರುದ್ಧ ತಮ್ಮ ಬದುಕಿನ ಉದ್ದಕ್ಕೂ ಹೋರಾಡಿದ ಅಂಬೇಡ್ಕರ್ ಅವರಿಗೆ, ಹಿಂದಿಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಳ್ಳುವುದರಿಂದ, ಏನೆಲ್ಲ ಸಾಮಾಜಿಕ ಭಾಷಾಶಾಸ್ತ್ರೀಯ ಅಪಾಯಗಳು (ಸೋಶಿಯೋಲಿಂಗ್ವಿಸ್ಟಿಕ್ ಥ್ರೆಟ್ಸ್) ಎದುರಾಗುತ್ತವೆ ಎಂಬ ಕಟು ವಾಸ್ತವ ಅಂಬೇಡ್ಕರ್ ಅವರಿಗೆ ಗೋಚರಿಸಲಿಲ್ಲವೇ? ನಿಶ್ಚಿತವಾಗಿಯೂ ನಾನು ಇಲ್ಲವೆಂದು ಹೇಳಲಾರೆ. ಅಂಬೇಡ್ಕರ್ ಅವರ ಕಣ್ನೋಟದಲ್ಲಿ ಅಧಿಕ್ರುತ ರಾಜ್ಯ ಭಾಷೆಯೆಂಬುದು ಅದೊಂದು ಸಂವಿಧಾನಾತ್ಮಕ ಕಾಯಿದೆ.
ಕಾಯಿದೆಯ ಕಣ್ಣಲ್ಲಿ ಎಲ್ಲರೂ ಸಮಾನರೇ ಹಾಗಾಗಿ ಅಧಿಕ್ರುತ ರಾಜ್ಯ ಭಾಷೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಅಡಕಗೊಳಿಸಿದರೆ ಮಾತ್ರ ಸಾಲದು. ಬದಲಾಗಿ ಅದನ್ನೊಂದು ಸಾಮಾಜಿಕ ತತ್ವಶಾಸ್ತ್ರೀಯ ಚೌಕಟ್ಟನ್ನಾಗಿ ಗ್ರಹಿಸಬೇಕು. ಆದ್ದರಿಂದ ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯವನ್ನು ಸಾಮಾಜಿಕ ತತ್ವಶಾಸ್ತ್ರೀಯ ವಿನ್ಯಾಸಗಳನ್ನಾಗಿ ಮಂಡಿಸಿದರು. ಜೊತೆಗೆ ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯಗಳ ನಡುವಣ ನಂಟಸ್ತಿಕೆ ಹೇಗಿರಬೇಕು ಮತ್ತು ಅಂತಹದೊಂದು ನಂಟಸ್ತಿಕೆಯನ್ನು ತರುವ ಮೂಲಕ ಮಾತ್ರ ಸಮಾನ ಸಮಾಜಗಳನ್ನು ಕಟ್ಟುವುದಕ್ಕೆ ಸಾಧ್ಯವೆಂಬ ತತ್ವವನ್ನು ಅತ್ಯಂತ ಖಚಿತವಾಗಿ ಮಂಡಿಸಿರುವುದಕ್ಕೂ ಇವರ ಈ ನಿಲುವೇ ಕಾರಣವಾಗಿದೆ.
ಹೌದು ಈ ಎಲ್ಲ ಚರ್ಚೆಗಳು ಹಾಗೂ ಅಂಬೇಡ್ಕರ್ ಅವರು ಮಂಡಿಸಿದ ಪ್ರಸ್ತಾವನೆಯನ್ನೂ ಮೀರಿ ಇವತ್ತು ಭಾರತದ ರಾಜ್ಯಗಳು ತಮ್ಮ ಪ್ರಾದೇಶಿಕ ಭಾಷೆಗಳನ್ನೇ ಅಧಿಕ್ರುತ ಭಾಷೆಗಳನ್ನಾಗಿ ಬಳಸುತ್ತಿವೆ. ಅಂದರೆ ಕರ್ನಾಟಕದಲ್ಲಿ ಕನ್ನಡ, ಆಂದ್ರಪ್ರದೇಶ ಮತ್ತು ತೆಲಾಂಗಣದಲ್ಲಿ ತೆಲುಗು ಹಾಗೂ ತಮಿಳುನಾಡಿನಲ್ಲಿ ತಮಿಳು ಭಾಷೆಗಳನ್ನು ತಮ್ಮ ಅಧಿಕ್ರುತ ರಾಜ್ಯ ಭಾಷೆಗಳನ್ನಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ ಈ ಯಾವ ರಾಜ್ಯಗಳಲ್ಲಿಯೂ ಕೂಡ ಇವತ್ತು ರಾಷ್ಟ್ರೀಯ ಅಪಐಕ್ಯತೆಯನ್ನಾಗಲೀ ಇಲ್ಲವೇ ಮಧ್ಯಕಾಲೀನ ಪರಿಸ್ಥಿತಿಯನ್ನು ಉಂಟು ಮಾಡುವ ಯಾವುದೇ ಅಪಾಯಗಳು ನಮಗೆ ಗೋಚರಿಸುತ್ತಿಲ್ಲ ಎಂಬ ವಾದಗಳೂ ಇವತ್ತು ಮುಂಚೂಣೆಯಲ್ಲಿವೆ.
ಹೌದು ರಾಜಕೀಯವಾಗಿ ಮಾತ್ನಾಡುವಾಗ ಈ ವಾದವು ಸರಿಯಾಗಿಯೇ ಕಾಣುತ್ತದೆ. ಆದರೆ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ದಿನದಿಂದ ದಿನಕ್ಕೆ ತಲೆದೊರುತ್ತಿರುವ ಅಸಮಾನತೆಯ ಸವಾಲುಗಳನ್ನು ಪರಿಶೀಲಿಸಿ ನೋಡಿದಾಗ, ಅಪಐಕ್ಯತೆಯ ಸ್ವರೂಪ ಮತ್ತು ಮಧ್ಯಕಾಲೀನ ಸಾಮಾಜಿಕ-ರಾಜಕೀಯ ಸನ್ನಿವೇಶದ ವಿನ್ಯಾಸಗಳು ನಿಚ್ಚಳಗೊಳ್ಳುತ್ತವೆ. ಮಧ್ಯಕಾಲೀನ ಸನ್ನಿವೇಶವನ್ನು ಕೇವಲ ಪರಸ್ಪರ ಯುದ್ಧ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸುವುದಲ್ಲ. ಇವತ್ತು ನಡೆಯುತ್ತಿರುವ ಧಾರ್ಮಿಕ ಸಾಮಾಜಿಕ ಸಂಘರ್ಷ ಹಾಗೂ ಅಸಹನೆಯ ವಿನ್ಯಾಸಗಳನ್ನು ಗಮನಿಸಿದಾಗ ನಮ್ಮ ಪ್ರಸ್ತುತ ಭಾರತವು ದಿಟವಾಗಿಯೂ ಆಧುನಿಕಗೊಂಡದೆಯೇ ಇಲ್ಲವೇ ಮಧ್ಯಕಾಲೀನ ಭಾರತವಾಗಿಯೇ ಇನ್ನೂ ಉಳದಿದೆ ಎನ್ನುವುದನ್ನು ಪತ್ತೆಹಚ್ಚಿ ನೋಡಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ3 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ1 day agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ1 day agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

