Connect with us

ದಿನದ ಸುದ್ದಿ

ಆರ್ಥಿಕ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಸರಕಾರದ ನೆರವು ; ನೈಜ ಫಲಾನುಭವಿಗಳಿಗೆ ಪರಿಹಾರಧನ ಸದುಪಯೋಗವಾಗಲಿ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ: ಕೋವಿಡ್ 2ನೇ ಅಲೆಯ ಲಾಕ್‍ಡೌನ್ ಪರಿಣಾಮ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿವಿಧ ವಲಯದ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರವು 2 ಸಾವಿರ ರೂ. ಆರ್ಥಿಕ ನೆರವು ಘೋಷಿಸಿದ್ದು ನೆರವು ಪಡೆಯಲು ಕಾರ್ಮಿಕ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದ್ದು, ಸಂಕಷ್ಟದಲ್ಲಿರುವ ನೈಜ ಫಲಾನುಭವಿಗಳು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರ ನೀಡುವ ಕುರಿತು ಪೂರ್ವಪರಿಶೀಲನಾ ಸಭೆಯಲ್ಲಿ ವಿವಿಧ ಅಸಂಘಟಿತ ವಲಯದ ಪದಾಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಅಗಸರು, ಕ್ಷೌರಿಕರು, ಟೈಲರ್‍ಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್ ಗಳು, ಕಮ್ಮಾರರು ಹಾಗೂ ಗೃಹ ಕಾರ್ಮಿಕರು ಈ 11 ವಲಯದ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ ಯೋಜನೆಯ ಮೂಲಕ ಒಂದು ಬಾರಿ ಪರಿಹಾರವಾಗಿ 2 ಸಾವಿರ ರೂ. ಗಳ ಆರ್ಥಿಕ ನೆರವನ್ನು ನೀಡಲಾಗುತ್ತದೆ ಎಂದರು.

2020 ನೇ ಸಾಲಿನ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಆರ್ಥಿಕ ನೆರವು ಪಡೆದ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಈ ಸಾಲಿನಲ್ಲಿ ನೆರವು ಪಡೆಯದ ಕುಟುಂಬದ ಓರ್ವ ಕಾರ್ಮಿಕ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ನೀಡಲು ಹಾಗೂ ಸಲ್ಲಿಸಲು ನಗರದಲ್ಲಿ ಪ್ರತ್ಯೇಕವಾಗಿ ವಿಶೇಷ ಕೌಂಟರ್ ಸ್ಥಾಪಿಸಬೇಕು ಹಾಗೂ ಅಗತ್ಯ ಸಿಬ್ಬಂದಿಗಳನ್ನು ಇದಕ್ಕಾಗಿಯೇ ನೇಮಿಸಿ, ಜನರಿಗೆ ತೊಂದರೆಯಾಗದಂತೆ ಉದ್ಯೋಗ ಪ್ರಮಾಣ ಪತ್ರ ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ.ಪಿ.ಮುದಜ್ಜಿ ಪ್ರತಿಕ್ರಿಯಿಸಿ, ನಗರದಲ್ಲಿ ಈಗಾಗಲೇ ಒಟ್ಟು ಮೂರು ಕಡೆ ವಿಶೇಷವಾಗಿ ಕೌಂಟರ್ ಸ್ಥಾಪಿಸಲಾಗಿದೆ. ರಾಜೀವ್ ಗಾಂಧಿ ನಗರ, ಮಹಾನಗರಪಾಲಿಕೆ ಕಾರ್ಯಲಯ ಹಾಗೂ ಶಾಮನೂರು ರಸ್ತೆಯಲ್ಲಿರುವ ಆಶ್ರಯ ರಸ್ತೆ ಪಕ್ಕದಲ್ಲಿ ಒಂದು ಕಚೇರಿಯನ್ನು ತೆರೆದಿದ್ದು ಈ ಮೂರು ಕಡೆ ಉದ್ಯೋಗ ಪ್ರಮಾಣ ಪತ್ರ ನೀಡಲಾಗುತ್ತಿದೆ. ಹಾಗೂ ಪ್ರತಿ ಕಚೇರಿಗೂ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಮಾತನಾಡಿ, ಈ ಮೂರು ವಿಶೇಷ ಕಾರ್ಯಾಲಯದ ಮುಂದೆ ಜನರಿಗೆ ತಿಳಿಯುವಂತೆ ಫ್ಲೆಕ್ಸ್ ಪ್ರದರ್ಶನ ಫಲಕ ಹಾಕಬೇಕು. ಮಹಾನಗರಪಾಲಿಕೆ ಕಾರ್ಯಾಲಯದಲ್ಲಿ ಸಿಬ್ಬಂದಿಗಳನ್ನು ನೇಮಿಸಬೇಕು. ಸಂಬಂಧಿಸಿದ ಎಲ್ಲ ಅಧಿಕಾರಿಗಳು ಒಂದು ಸಮಯವನ್ನು ನಿಗದಿಪಡಿಸಿಕೊಂಡು ಆ ನಿರ್ದಿಷ್ಟ ಸಮಯದಲ್ಲಿ ಸ್ಥಳದಲ್ಲಿ ಹಾಜರಿದ್ದು, ಅರ್ಜಿದಾರರಿಗೆ ಉದ್ಯೋಗ ಪ್ರಮಾಣ ಪತ್ರ ನೀಡಬೇಕು. ಜನರನ್ನು ವಿನಾಕಾರಣ ಸುಮ್ಮನೆ ಕಾಯಿಸುವುದಾಗಲೀ, ಅನಗತ್ಯವಾಗಿ ಕಚೇರಿಗೆ ಅಲೆದಾಡುವ ರೀತಿ ಮಾಡಬಾರದು. ವಿಶೇಷ ಅಭಿಯಾನದ ರೀತಿಯಲ್ಲಿ ಈ ಕೆಲಸ ಆಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಟ್ಟಡ ಕಾರ್ಮಿಕರಿಗೆ ಈ ಯೋಜನೆಯಡಿ ಅವಕಾಶ ಇರುವುದಿಲ್ಲ. ಅವರಿಗಾಗಿ ಪ್ರತ್ಯೇಕ ಯೋಜನೆ ಇದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ವೃತ್ತಿಯಲ್ಲಿ ತೊಡಗಿದಲ್ಲಿ ಒಬ್ಬರು ಮಾತ್ರ ಪರಿಹಾರ ಪಡೆಯಲು ಅರ್ಹರಿರುತ್ತಾರೆ. ಹಾಗೂ ಒಬ್ಬ ವ್ಯಕ್ತಿ ಅಗಸರು ಎಂದು ಅರ್ಜಿ ಸಲ್ಲಿಸಿ ತದನಂತರ ಅಕ್ಕಸಾಲಿಗ, ಹಮಾಲಿ ಎಂದೋ ಅರ್ಜಿ ಸಲ್ಲಿಸಲು ಬರುವುದಿಲ್ಲ. ಒಂದು ಬಿಪಿಎಲ್ ಕಾರ್ಡ್ ಗೆ ಒಬ್ಬರಿಗೆ ಮಾತ್ರ ಅವಕಾಶ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್ ಮಾತನಾಡಿ, ಜಿಲ್ಲೆಯಲ್ಲಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ಜೂ.08 ರವರೆಗೆ 7306 ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದು ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಅವರ ಖಾತೆಗೆ ನೇರವಾಗಿ ಪರಿಹಾರವನ್ನು ಜಮಾ ಮಾಡಲಾಗುತ್ತದೆ. ಸೇವಾ ಸಿಂಧು ಪೋರ್ಟಲ್‍ನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಜೂ.13 ರವರೆಗೆ 6452 ಅರ್ಜಿಗಳು ಸ್ವೀಕೃತಗೊಂಡಿರುತ್ತವೆ. 406 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು 35 ಅರ್ಜಿಗಳನ್ನು ವಿವಿಧ ಕಾರಣಗಳಿಗೆ ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯೋಜನೆಯಡಿ ಸರ್ಕಾರದ ನೆರವನ್ನು ಅರ್ಹರು ಮಾತ್ರ ಪಡೆದುಕೊಳ್ಳಬೇಕು. ಸುಳ್ಳು ಮಾಹಿತಿ ಅಥವಾ ದಾಖಲೆ ನೀಡಿ, ಯೋಜನೆ ದುರುಪಯೋಗ ಪಡಿಸಿಕೊಳ್ಳುವವರು ದಾಖಲೆ ಸಮೇತ ಸಿಕ್ಕಿಬಿದ್ದರೆ ಅಂತಹವರ ವಿರುದ್ಧÉ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲಿಸಿ ಕಾಯ್ದೆ ಐಪಿಸಿ 420 ರಡಿ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಅರ್ಜಿ ಸಲ್ಲಿಕೆಗೆ ಷರತ್ತುಗಳು

ಪರವಾನಿಗೆ ಪಡೆದಿರುವ ಸಂಸ್ಥೆಯಲ್ಲಿ 4 ಕ್ಕಿಂತ ಹೆಚ್ಚು ಕಾರ್ಮಿಕರು, ಪರವಾನಿಗೆಯನ್ನು ಪಡೆಯದೆ ಇರುವ ಸಂಸ್ಥೆಯಲ್ಲಿ 2ಕ್ಕಿಂತ ಹೆಚ್ಚು ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಲ್ಲಿ ತಪಾಸಣೆ ಕಡ್ಡಾಯವಾಗಿರುತ್ತದೆ. ಬೇರೆ ರಾಜ್ಯದ ಕಾರ್ಮಿಕರು ಸಹ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಅಂತಹ ಫಲಾನುಭವಿ ಕಾರ್ಮಿಕರು ಕರ್ನಾಟಕ ಸರ್ಕಾರವು ನೀಡುವ ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು. ಕುಟುಂಬದ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುವುದು. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರ ವಯೋಮಿತಿಯನ್ನು 18-65 ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಈ ಯೋಜನೆಯ ಸೌಲಭ್ಯವನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅರ್ಜಿ ಸಲ್ಲಿಸುವ ಕಾರ್ಮಿಕರು ವೃತ್ತಿ ನಿರ್ವಹಿಸುತ್ತಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಉದ್ಯೋಗ ಪ್ರಮಾಣ ಪತ್ರ ಪಡೆದಿರಬೇಕು.

ಉದ್ಯೋಗ ಧೃಡೀಕರಣ ನೀಡುವ ಅಧಿಕಾರಿಗಳು

ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರ ಸಭೆ, ಪುರ ಸಭೆ, ಪಟ್ಟಣ ಪಂಚಾಯ್ತಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ತಹಸಿಲ್ದಾರರು, ಉಪ ತಹಸಿಲ್ದಾರರು, ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಹಮಾಲಿ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರು ಮೇಲ್ಕಂಡ ಅಧಿಕಾರಿಗಳು ಅಥವಾ ತಾವು ಕೆಲಸ ನಿರ್ವಹಿಸುತ್ತಿರುವ ಇಲಾಖೆ, ಮಂಡಳಿ, ನಿಗಮದ ಅಧಿಕೃತ ಅಧಿಕಾರಿಗಳು, ಯಾವುದೇ ಇಲಾಖೆಯ ಪತ್ರಾಂಕಿತ ಅಧಿಕಾರಿಗಳಿಂದ ಉದ್ಯೋಗ ಪತ್ರ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಫಲಾನುಭವಿ ಕಾರ್ಮಿಕರು ಸೇವಾಸಿಂಧು ಪೋರ್ಟಲ್‍ನಲ್ಲಿ ಮಾತ್ರ ಅಗತ್ಯ ಮಾಹಿತಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ನಿಗಧಿ ಪಡಿಸಿದ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡುವುದು. ಆಧಾರ್ ಕಾರ್ಡ್, ವಿಳಾಸ ದೃಢಿಕರಣ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ಬಿಪಿಎಲ್ ಕಾರ್ಡ್, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಖಾತೆಯ ವಿವರ, ಸ್ವಯಂ ಘೋಷಣೆ, ಅರ್ಜಿದಾರರ ವೃತ್ತಿಯ ಕುರಿತು ಉದ್ಯೋಗ ಪ್ರಮಾಣ ಪತ್ರಗಳನ್ನು ಸೇವಾ ಸಿಂಧು ಪೋರ್ಟಲ್‍ನಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ.ಪಿ.ಮುದಜ್ಜಿ, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕಿ ನಜ್ಮ.ಜಿ., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮಾ.ಜಿ., ನಗರಸಭೆ ಪೌರಾಯುಕ್ತೆ ಲಕ್ಷ್ಮೀ.ಎಸ್., ಎಪಿಎಂಸಿ ಕಾರ್ಯದರ್ಶಿ ಕೆ.ಸಿ.ದೊರೆಸ್ವಾಮಿ, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಜೆ.ಪ್ರಭು ಸೇರಿದಂತೆ ವಿವಿಧ ವಲಯದ ಅಸಂಘಟಿತ ಕಾರ್ಮಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

Published

on

ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ದಾವಣಗೆರೆಯ ಬಾಷಾನಗರ,ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.

ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂಬ ಭರವಸೆಯನ್ನೂ ನೀಡಿದರು.

ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.

ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರಕಾರದ ದುರಾಡಳಿತ ಸಂಬಂಧ ಆರೋಪ ಪಟ್ಟಿ ಬಿಡುಗಡೆ ಮಾಡಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ 3 ವರ್ಷಗಳಲ್ಲಿ ಈ ಸರಕಾರ ಒಳ್ಳೆಯ ಕಾರಣಕ್ಕೆ ಯಾವಾಗ ಹೆಸರಾಗಿತ್ತು ಎಂದು ಹೇಳಲೂ ಸಿಗುವುದಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ದರೋಡೆ ಪ್ರಕರಣಗಳು ಸುದ್ದಿಯಾದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿವೆ. ಈ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ಕುರಿತ ಚಾರ್ಜ್ ಶೀಟನ್ನು ಇವತ್ತು ಬಿಡುಗಡೆ ಮಾಡಿದ್ದೇವೆ ಎಂದರು.

ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸುದ್ದಿಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಇದೆ. ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವಿನ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಗೆ ಈ ಸರಕಾರ ಸುದ್ದಿಯಲ್ಲಿತ್ತು. ಅಂಗನವಾಡಿ ಶಿಕ್ಷಕಿಯರ ಚಳವಳಿ, ಆಶಾ ಕಾರ್ಯಕರ್ತೆಯರ ಚಳವಳಿ, ಅತಿಥಿ ಉಪನ್ಯಾಸಕರಿಂದ ಸಂಬಳ ಸಿಗುತ್ತಿಲ್ಲವೆಂದು ಹೋರಾಟ, ಗುತ್ತಿಗೆ ನೌಕರರ ಹೋರಾಟ- ಹೀಗೆ ಚಳವಳಿಗಳ ಕಾಟಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ವ್ಯಂಗ್ಯವಾಡಿದರು.

ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ

ಕಳೆದ 3 ವರ್ಷದಲ್ಲಿ ಕೆಟ್ಟ ಕಾರಣಕ್ಕಾಗಿ ಈ ಸರಕಾರ ಸುದ್ದಿಯಲ್ಲಿದೆಯೇ ಹೊರತು ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ವಿಶ್ಲೇಷಿಸಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಲಿಯಾದವರು ನೂರಾರು ಜನ; ರಸ್ತೆ ಗುಂಡಿ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಹೀಗೆ ಪ್ರತಿನಿತ್ಯ ಸರಕಾರ ಸುದ್ದಿಯಲ್ಲಿ ಇರುವುದು ಕೇವಲ ಕೆಟ್ಟ ಕಾರಣಕ್ಕಾಗಿ ಎಂದು ಆರೋಪಿಸಿದರು. ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು.

ಮುಡಾ, ವಾಲ್ಮೀಕಿ ನಿಗಮದ ಹಗರಣ ಮಾನಗೆಟ್ಟ ಕೆಲಸವಲ್ಲವೇ?

ಮುಖ್ಯಮಂತ್ರಿಗಳು ಬಿಜೆಪಿಯವರು ಮಾನಗೆಟ್ಟವರು ಎಂದು ಭಾಷಣದಲ್ಲಿ ಹೇಳಿದ್ದಾರೆ. ಯಾರು ಮುಖ್ಯಮಂತ್ರಿಗಳೇ ಮಾನಗೆಟ್ಟವರು? ಮುಡಾ ಹಗರಣ ಯಾರ ಮೇಲೆ ಬಂತು? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ನಿಮ್ಮ ಸರಕಾರದ ಸಚಿವರೇ ರಾಜೀನಾಮೆ ಕೊಡಬೇಕಾಯಿತಲ್ಲವೇ? ಇದು ಮಾನಗೆಟ್ಟ ಕೆಲಸವಲ್ಲವೇ? ಎಂದು ಕೇಳಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣವನ್ನು ನಿಮ್ಮ ಒಬ್ಬ ಸಚಿವರು ಹೆಂಡತಿಗೆ ಒಡವೆ ಕೊಡಿಸಲು, ಚುನಾವಣೆಗೆ ಬಾರ್ ನಿಂದ ಎಣ್ಣೆ ಸರಬರಾಜು ಮಾಡಲು ಹಣ ಬಳಸಿದ್ದು ಮರ್ಯಾದೆ ಇದ್ದವರು ಮಾಡುವ ಕೆಲಸವೇ ಎಂದು ಕೇಳಿದರು.

ಮರ್ಯಾದೆ ಇದ್ದವರು ಅಧಿಕಾರಕ್ಕೆ ಅಂಟಿಕೊಳ್ಳುವರೇ?
ನೀವು ಬಿಜೆಪಿ ಮೇಲೆ ಶೇ 40 ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿದ್ದೀರಿ. ಗುತ್ತಿಗೆದಾರರು ಶೇ 60 ಕಮಿಷನ್‍ನ ಸರಕಾರ ಎಂದು ನಿಮ್ಮ ಸರಕಾರದ ಮೇಲೆ ಆರೋಪ ಮಾಡಿದ್ದಾರಲ್ಲವೇ? ಮರ್ಯಾದೆ ಇದ್ದವರು ಆ ಆರೋಪ ಕೇಳಿಯೂ ಅಧಿಕಾರಕ್ಕೆ ಅಂಟಿಕೊಳ್ಳುತ್ತಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಅಬಕಾರಿ ಸಚಿವರ ಮೇಲೆ ಬಾರ್ ಮಾಲೀಕರು ತಿಂಗಳ ಮಾಮೂಲಿ ಕೇಳುವ ಕುರಿತು ಆರೋಪ ಮಾಡಿದ್ದಾರಲ್ಲವೇ? ಇದು ಮರ್ಯಾದೆ ಇದ್ದವರು ಮಾಡುವ ಕೆಲಸವೇ? ಮಾನಗೆಟ್ಟವರು ಮಾಡುವ ಕೆಲಸವೇ ಎಂದು ಪ್ರಶ್ನೆ ಹಾಕಿದರು.

ಮುಖ್ಯಮಂತ್ರಿಗಳೇ, ಇಡೀ ಸಂಪುಟದಲ್ಲಿ ಮಾನಗೆಟ್ಟವರು ಇದ್ದಾರೆಯೇ ಹೊರತು ಮರ್ಯಾದೆ ಇದ್ದವರು ಯಾರಿದ್ದಾರೆ ಹೇಳಿ ಎಂದು ಕೇಳಿದರು. ಮಾನಗೆಟ್ಟ ಕೆಲಸ ಮಾಡುವವರನ್ನು ಸಚಿವರನ್ನಾಗಿ ಮಾಡಿಕೊಂಡು, ಶೇ 60ರ ಆರೋಪ ಹೊತ್ತುಕೊಂಡು ನೀವು ಬಿಜೆಪಿ ವಿರುದ್ಧ ಮಾನಗೆಟ್ಟ ಬಿಜೆಪಿ ಎಂದು ಆರೋಪ ಮಾಡುತ್ತೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ನಿಮ್ಮದು ದರೋಡೆಕೋರ ಸರಕಾರವಲ್ಲವೇ?

ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿಕೆಗಳಾಗಿವೆ. ನಿಮ್ಮ ಸರಕಾರವನ್ನು ದರೋಡೆಕೋರ ಸರಕಾರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ನಿಮ್ಮ ಸರಕಾರ ಯಾವ್ಯಾವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂಬ ಪಟ್ಟಿ ಕೊಡಲೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ..

ನಂದಿನಿ ಹಾಲಿನ ದರ ಏರಿಕೆ ಮಾಡಿದ್ದೀರಿ. ಪೆಟ್ರೋಲ್ ಮೇಲೆ 3 ರೂ. ಸೆಸ್, ಡೀಸೆಲ್ ಮೇಲೆ 5.08 ರೂ. ಸೆಸ್ ಹಾಕಿದ್ದೀರಿ. ಕೇಂದ್ರ ಸರಕಾರ ದರ ಇಳಸಿದರೆ ನೀವು ಸೆಸ್ ಹಾಕಿ ಅವರ ಲಾಭ ಜನರಿಗೆ ಸಿಗದಂತೆ ಮಾಡಿದ್ದೀರಿ ಎಂದು ಟೀಕಿಸಿದರು. ಬಸ್ ಪ್ರಯಾಣ ದರ ಶೇ 15, ಮೆಟ್ರೋ ದರ ಶೇ 50ರಷ್ಟು ಹೆಚ್ಚಿಸಿದ್ದೀರಿ. ಪ್ರತಿ ಯೂನಿಟ್ 4.50 ರೂ. ವಿದ್ಯುತ್ ದರವನ್ನು ರೂ 5.90 ಮಾಡಿದ್ದೀರಿ. ವಾಣಿಜ್ಯ ದರವನ್ನು 7 ರೂ.ಗೂ ಹೆಚ್ಚಳ ಮಾಡಲಾಗಿದೆ. ಅಬಕಾರಿ ಸುಂಕವನ್ನು ಶೇ 20ರಷ್ಟು ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದೀರಿ. 20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ. ಅದರ ಜಾಗಕ್ಕೆ 100, 200 ರೂ.ಗಳ ಸ್ಟಾಂಪ್ ಪೇಪರ್ ಖರೀದಿಸಬೇಕಾಗಿದೆ. ನಮ್ಮ ಚಿನ್ನ ನಾವು ಒತ್ತೆ ಇಡಲು 0.5ರಷ್ಟು ಸ್ಟಾಂಪ್ ಡ್ಯೂಟಿ ಕಟ್ಟಬೇಕಾಗಿದೆ ಎಂದು ಆಕ್ಷೇಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending