ದಿನದ ಸುದ್ದಿ
ಸಂಧಿವಾತ ಕೀಲುನೋವಿಗೆ ಪರಿಣಾಮಕಾರಿ ಚಿಕಿತ್ಸೆ
ಇಂದಿನ ಆಧುನಿಕ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ರೋಗಗಳು ಕಾಡುತ್ತಲೇ ಇವೆ. ಇಂದು ನಮ್ಮ ದೇಶದಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೀಗೆ ಅನೇಕ ಚಿಕಿತ್ಸಾ ಪದ್ದತಿಗಳು ಜಾರಿಯಲ್ಲಿವೆ.
ಯಾವ ಚಿಕಿತ್ಸೆ ಪಡೆದರೆ ಸಂಪೂರ್ಣ ವಾಸಿಯಾಗುತ್ತದೆ? ಯಾವ ಚಿಕಿತ್ಸೆ ಶ್ರೇಷ್ಟ? ಯಾವ ಔಷಧಿ ಶ್ರೇಷ್ಣ? ಎಂದು ಯಾವ ರೋಗಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಇದರಿಂದ ಜನರಲ್ಲಿ ಅನೇಕ ಗೊಂದಲಗಳುಂಟಾಗುತ್ತಿವೆ. ಅನೇಕರು ತಮ್ಮ ಒಂದೇ ಕಾಯಿಲೆಗೆ ವೈದ್ಯರಿಂದ ವೈದ್ಯರಲ್ಲಿಗೆ ಅಲೆದಾಡುತ್ತಿರುತ್ತಾರೆ. ಅಲೋಪತಿ ಔಷಧಿ ಪಡೆದು ಗುಣಮುಖವಾಗದಿದ್ದರೆ, ಆಯುರ್ವೇದ ವೈದ್ಯರಲ್ಲಿ ಓಡುತ್ತಾರೆ. ಅಲ್ಲಿ ಗುಣಮುಖವಾಗದಿದ್ದರೆ ಯುನಾನಿ, ನಾಟಿ ವೈದ್ಯರನ್ನು ಕಾಣಲು ಓಡುತ್ತಾರೆ. ವೈದ್ಯರಿಂದ ವೈದ್ಯರಲ್ಲಿಗೆ ಅಲೆದು, ಅವರು ಕೊಡುವ ವಿವಿಧ ಔಷಧಿಗಳನ್ನು ಸೇವಿಸುತ್ತಾ, ವಿವಿಧ ಔಷಧಿಗಳ ಅಡ್ಡಪರಿಣಾಮದಿಂದ ದೇಹದ ಅನೇಕ ಅಂಗಗಳು ಡ್ಯಾಮೇಜ್ ಆಗಿ ಗುಣಪಡಿಸಲಾಗದಂತಹ ಸ್ಥಿತಿಗೆ ರೋಗಿ ತಲುಪುತ್ತಿದ್ದಾನೆ.
ಹೀಗಾಗಿಯೇ ನಮ್ಮ ದೇಶದಲ್ಲಿ ಬಿಪಿ, ಶುಗರ್, ಕೀಲು ನೋವಿನಿಂದ ಬಳಲುತ್ತಿರುವ ರೋಗಿಗಳು ಪ್ರತಿ ಮನೆಯಲ್ಲಿ ಒಬ್ಬರು ಇಬ್ಬರು ಕಾಣಸಿಗುತ್ತಾರೆ ಮತ್ತು ಈ ಸಂಖ್ಯೆ ಪ್ರತೀ ವರ್ಷ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಹುಡುಕಿದಾಗ ವೈದ್ಯರಲ್ಲಿ ದೋಷವಿಲ್ಲ. ವೈದ್ಯ ಪದ್ಧತಿಯಲ್ಲಿ ದೋಷವಿಲ್ಲ. ಒಬ್ಬ ರೋಗಿ ಅಲೋಪತಿಯಲ್ಲಿ ಸಂಪೂರ್ಣ ಗುಣಮುಖ ಹೊಂದಿದರೆ, ಮತ್ತೊಬ್ಬರು ಆಯುರ್ವೇದದಲ್ಲಿ ಗುಣಮುಖ ಹೊಂದಿರುತ್ತಾರೆ. ಇನ್ನೂ ಕೆಲವರು ನಾಟಿ ಔಷಧಿಯಿಂದ ಗುಣಮುಖ ಹೊಂದುತ್ತಾರೆ. ಅಲೋಪತಿಯಲ್ಲಿ, ಆಯುರ್ವೇದಲ್ಲಿ ಇತರೆ ಯಾವುದೇ ವೈದ್ಯ ಪದ್ಧತಿಯಲ್ಲಿ ದೋಷವಿಲ್ಲ. ದೋಷವಿರುವುದು ಜನರ ಆಹಾರ ಕ್ರಮದಲ್ಲಿ ಮತ್ತು ಜೀವನ ಶೈಲಿಯಲ್ಲಿ. ಆಹಾರ ಕ್ರಮ ಮತ್ತು ಜೀವನ ಶೈಲಿಯನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಯಾವುದೇ ವೈದ್ಯ, ಪದ್ಧತಿ ಅನುಸರಿಸಿದರೂ ಕಾಯಿಲೆ ವಾಸಿಯಾಗುವುದು 100% ಸತ್ಯ.
ಇಂದು ಬಿಪಿ ಶುಗರ್ನಂತೆ ಬಹಳಷ್ಟು ಜನರು ಸಂಧಿವಾತದ ತೊಂದರೆಯಿಂದ ಬಳಲುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಕಾಲುನೋವು, ಮೈ ಕೈ ನೋವು ಬೆನ್ನು ನೋವು ಎಂದು ಬಳಲುತ್ತಿರುತ್ತಾರೆ. ಅದರಲ್ಲೂ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಪುರುಷರಲ್ಲೂ 30 ವರ್ಷ ವಯಸ್ಸಿನ ನಂತರ ಸಂಧಿವಾತದಿಂದ ಬಳಲುವವರು ಹೆಚ್ಚಾಗುತ್ತಿದ್ದಾರೆ. ಕುಳಿತುಕೊಳ್ಳಲು, ಮೇಲೇಳಲು, ನಡೆದಾಡಲು, ಮೆಟ್ಟಿಲು ಹತ್ತಲು ತುಂಬಾ ಕಷ್ಟವನ್ನನುಭವಿಸುತ್ತಿದ್ದಾರೆ.
ಸಂಧಿವಾತ ಎಂದರೇನು?
ನಮ್ಮ ಶರೀರದಲ್ಲಿ ನೋವು ಬರಲು ಪ್ರಮುಖ ಕಾರಣ ಅಧಿಕ ವಾತ ಅಥವಾ ವಾಯು. ನಾವು ಒಂದೇ ಬಾರಿಗೆ ಅತಿ ಆಹಾರ ಸೇವಿಸಿದಾಗ, ಹಸಿವೆಯಾಗದೆ ಆಹಾರ ಸೇವಿಸಿದಾಗ, ಪದೇ ಪದೇ ಆಹಾರ ಸೇವಿಸಿದಾಗ ಮತ್ತು ಎಣ್ಣೆಯಲ್ಲಿ ಕರಿದ ಉರಿದ ಆಹಾರ ಸೇವಿಸಿದಾಗ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಕೊಳೆಯಲು ಪ್ರಾರಂಭವಾಗುತ್ತದೆ. ಈ ಕೊಳೆತ ಆಹಾರ ಸಣ್ಣ ಕರುಳು ದೊಡ್ಡ ಕರುಳಿನಲ್ಲಿ ಗಟ್ಟಿಯಾಗಿ ಕುಳಿತು ಸಮಯಕ್ಕೆ ಸರಿಯಾಗಿ ವಿಸರ್ಜನೆ ಆಗದೆ ವಾತ ಅಥವಾ ವಾಯು ಹೆಚ್ಚಳವಾಗುತ್ತದೆ. ಈ ಹೆಚ್ಚಾದ ವಾತವು ಶರೀರದ ಮೂಳೆಗಳ ಸಂಧಿಗಳಲ್ಲಿ ಸಂಗ್ರಹಗೊಗೊಂಡು ಅಲ್ಲಿನ ಮೃದುವಾದ ನೀರಿನಂಶ ಇರುವ ಭಾಗವನ್ನು ಒಣಗಿಸುತ್ತದೆ. ಇದರಿಂದ ಪ್ರಮುಖವಾಗಿ ಕೈ ಕಾಲು ಬೆರಳುಗಳ ಸಂಧಿಗಳಲ್ಲಿ ನೋವು ಹೆಚ್ಚಾಗಿ, ವ್ಯಕ್ತಿ ನಡೆಯಲು, ನಿಲ್ಲಲು, ಕುಳಿತುಕೊಳ್ಳಲು, ಮೆಟ್ಟಿಲು ಹತ್ತಲು, ದಿನನಿತ್ಯದ ಕೆಲಸಗಳನ್ನು ಮಾಡಲು ಅಸಮರ್ಥನಾಗುತ್ತಾನೆ. ಈ ರೀತಿ ವಾತ ಹೆಚ್ಚಳದಿಂದ ಶರೀರದ ಕೀಲುಗಳ ಸಂಧಿಗಳಲ್ಲಿ ನೋವು ಬರುತ್ತಿದ್ದಲ್ಲಿ ಅದನ್ನು ಸಂಧಿವಾತ, ವಾತರೋಗ, ಕೀಲು ನೋವು ಎಂದು ವಿವಿಧ ಹೆಸರುಗಳಿಂದ ಕರೆಯುತ್ತೇವೆ. ವಾತರೋಗದಲ್ಲಿ ನೂರಕ್ಕೂ ಹೆಚ್ಚು ವಿಧಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಆಸ್ಟಿಯೋ ಆರ್ಥರೈಟಿಸ್, ರುಮಟಾಯ್ಡ್ ಆರ್ಥರೈಟಿಸ್ ಅತಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ.
ಸಂಧಿವಾತಕ್ಕೆ ಪ್ರಾಕೃತಿ ಚಿಕಿತ್ಸೆ
ನಮ್ಮ ಶರೀರದ ಎಲ್ಲಾ ನೋವುಗಳಿಗೂ ವಾತ ಅಥವಾ ವಾಯು ಪ್ರಮುಖ ಕಾರಣವಾಗಿದೆ. ಹಾಗೆಯೇ ಸಂಧಿವಾತದ ಎಲ್ಲಾ ವಿವಿಧ ರೀತಿಯ ಕಾಯಿಲೆಗಳಿಗೂ ಒಂದೇ ರೀತಿಯ ಎಲ್ಲರು ಸರಳವಾಗಿ ಅನುಸರಿಸುವಂತಹ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಮತ್ತು ಸೂಕ್ತ ಚಿಕಿತ್ಸಾ ಪದ್ದತಿಯನ್ನು ಅನುಸರಿಸಬಹುದಾಗಿದೆ. ಈ ಚಿಕಿತ್ಸಾ ಪದ್ದತಿಯನ್ನು ಅನುಸರಿಸುವ ಮೂಲಕ ನಿಮ್ಮ ಸಂಧಿವಾತ ರೋಗವನ್ನು ಶೇ.100 ರಷ್ಟು ನಿಯಂತ್ರಣಕ್ಕೆ ತರಬಹುದಾಗಿದೆ. ಆ ಮೂಲಕ ಸಾಮಾನ್ಯ ಜೀವನ ನಡೆಸಲು ನಿಮಗೆ ಸಾಧ್ಯವಾಗುತ್ತದೆ. ಸಂಪೂರ್ಣ ಆರೋಗ್ಯಕರ ಜೀವನ ನಡೆಸಬಹುದಾಗಿದೆ.
ಸಂಧಿವಾತಕ್ಕೆ ಅನುಸರಿಸಬೇಕಾದ ಆಹಾರ ಕ್ರಮ
• ಪ್ರತೀ ಬಾರಿ ಬಿಸಿ ಇರುವ ತಾಜಾ ಆಹಾರವನ್ನು ಸೇವಿಸಬೇಕು.
• ಯೂರಿಕ್ ಆಸಿಡ್ ಹೆಚ್ಚಿಸುವ ಆಹಾರವನ್ನು ಸಂಪೂರ್ಣ ಬಿಡಬೇಕು. ಮಾಂಸಹಾರ, ಬೇಕರಿ ಉತ್ಪನ್ನಗಳು, ಪ್ರೊಸೆಸ್ಡ್ ಪ್ಯಾಕ್ಡ್ ಫುಡ್, ಮಸಾಲೆ ಪದಾರ್ಥಗಳು, ಟೀ ಕಾಫಿ, ಸಕ್ಕರೆ, ಸಿಹಿ ಪದಾರ್ಥಗಳು, ದ್ವಿದಳ ಧಾನ್ಯಗಳು, ಮೈದಾ, ಎಣ್ಣೆಯಲ್ಲಿ ಕರಿದ ಹುರಿದ ಎಲ್ಲಾ ಆಹಾರಗಳು ಶರೀರದಲ್ಲಿ ಯೂರಿಕ್ ಆಸಿಡ್ ಹೆಚ್ಚಿಸುತ್ತವೆ.
• ಅತೀ ಹುಳಿಯಾಗಿರುವ ಯಾವುದೇ ಆಹಾರ ಮತ್ತು ಹಣ್ಣುಗಳನ್ನು ಸೇವಿಸಬಾರದು.
• ಪೊಟ್ಯಾಷಿಯಂ ಅಧಿಕವಿರುವ ಆಹಾರ ಸೇವಿಸಬಾರದು. ಅಧಿಕ ಪೊಟ್ಯಾಸಿಯಮ್ನಿಂದ ರಕ್ತದಲ್ಲಿ ಕಲ್ಮಷ ಹೆಚ್ಚಳವಾಗುತ್ತದೆ. ಅಧಿಕ ಪೊಟ್ಯಾಸಿಯಮ್ ಇರುವ ಬಾಳೆಹಣ್ಣು, ಎಳೆನೀರು, ಕಿತ್ತಳೆ ಹಣ್ಣು, ಗೆಣಸು, ಕ್ಯಾರೆಟ್, ಮೂಲಂಗಿ, ಬೀಟ್ರೂಟ್, ಪಾಲಕ್, ಟೊಮೇಟೊ, ಬೆಂಡೆಕಾಯಿ, ಬದನೆಕಾಯಿ, ಇವುಗಳನ್ನು ಬಿಟ್ಟು ಉಳಿದ ಎಲ್ಲಾ ತರಕಾರಿಗಳನ್ನು ಮಿತ ಪ್ರಮಾಣದಲ್ಲಿ ಸೇವಿಸಬಹುದು.. ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲೂ ಅಧಿಕ ಪೊಟ್ಯಾಸಿಯಮ್ ಇರುತ್ತದೆ. ಮಿತ ಪ್ರಮಾಣದಲ್ಲಿ ಸೇವಿಸಬಹುದು.
• ಗೋದಿಯಿಂದ ತಯಾರಿಸಿದ ಚಪಾತಿ ಮತ್ತು ಉಪ್ಪಿಟ್ಟನ್ನು ಮಿತವಾಗಿ ಸೇವಿಸಬೇಕು. ಗೋಧಿಯಲ್ಲಿ ಗ್ಲುಟೆನ್ ಇರುತ್ತದೆ. ಕೆಲವರಿಗೆ ಗ್ಲುಟೆನ್ ಉಳ್ಳ ಆಹಾರಗಳು ಅಲರ್ಜಿಯನ್ನುಂಟು ಮಾಡುತ್ತವೆ. ಗ್ಲುಟೆನ್ ತಿಂದರೆ ಕೆಲವರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
• ಹಣ್ಣು ತರಕಾರಿ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಬೇಕು. ಹಸಿ ತರಕಾರಿ ಅಜೀರ್ಣವನ್ನುಂಟುಮಾಡುತ್ತವೆ. ಬೇಯಿಸಿ ರುಚಿಕರವಾದ ಪಲ್ಯ ಸಾಂಬಾರ್ ಮಾಡಿ ಸೇವಿಸಬಹುದು..
• ವಾತ ಹೆಚ್ಚಿಸುವ ಬೇಳೆ ಕಾಳು ಮತ್ತು ಸಿರಿಧಾನ್ಯಗಳನ್ನು ಸಂಪೂರ್ಣ ಬಿಡಬೇಕು. ತೊಗರಿ ಬೇಳೆ, ಕಡಲೆ ಬೇಳೆ, ಹೆಸರುಬೇಳೆ, ಬಟಾಣಿ, ಶೇಂಗ ಇತ್ಯಾದಿ ಧಾನ್ಯಗಳೆಲ್ಲವೂ ವಾತ ಅಥವಾ ವಾಯು ಪ್ರಕೋಪವನ್ನುಂಟು ಮಾಡುತ್ತವೆ.
ಸಂಧಿವಾತ ಕಾಯಿಲೆ ಇರುವವರಿಗಾಗಿ ವಿಶೇಷ 5 ಜೀವನ ಸೂತ್ರಗಳು
• ಹಸಿವಾದಾಗ ಮಾತ್ರ ಊಟ ಮಾಡಬೇಕು.
• ಪ್ರತಿ ದಿನ ಎರಡು ಬಾರಿ ಮಾತ್ರ ಊಟ ಮಾಡಬೇಕು. ಒಂದು ಒಂದು ಊಟವನ್ನು ತ್ಯಾಜಿಸಿ ಉಪವಾಸ ಮಾಡಬೇಕು.
• ಪ್ರತಿದಿನ 30 ನಿಮಿಷ ಸೂರ್ಯನ ಬಿಸಿಲಲ್ಲಿ ಕುಳಿತುಕೊಳ್ಳಬೇಕು.
• ಪ್ರತಿದಿನ 20 ನಿಮಿಷ ವಾಕಿಂಗ್ ಮಾಡಬೇಕು.
• ಪ್ರತಿ ದಿನ ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು.
ಸಂಧಿವಾತ ಕೀಲುನೋವಿಗೆ ಅತ್ಯಂತ ಶ್ರೇಷ್ಠ ಪರಿಣಾಮಕಾರಿ ಔಷಧ Stomach Kare ಮತ್ತು Othro Care!
ನಿಮ್ಮ ಸಂಧಿವಾತ ಕೀಲುನೋವು ಯಾವುದೇ ಹಂತದಲ್ಲಿರಲಿ. ಮೇಲಿನ ಆಹಾರ ಪದ್ಧತಿಯೊಂದಿಗೆ ಅಲ್ಪ ಪ್ರಮಾಣದಲ್ಲಿ ಪರಿಣಾಮಕಾರಿ ಔಷದ ಸೇವಿಸಿದಲ್ಲಿ ಕೆಲವೇ ದಿನಗಳಲ್ಲಿ ನಿಮ್ಮ ಸಂಧಿವಾತ ಕೀಲುನೋವು ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಸಂಧಿವಾತ ಕೀಲುನೋವಿಗೆ Stomach Kare ಮತ್ತು Othro Care ಎಂಬ ಔಷಧವು ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಕ್ರಮಬದ್ಧ ಸೇವನೆಯಿಂದ ಕೆಲವೇ ದಿನಗಳಲ್ಲಿ ನಿಮ್ಮ ಸಂಧಿವಾತ ಕೀಲುನೋವು ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಮಾತ್ರವಲ್ಲ. ಇತರೆ ಕಾಯಿಲೆಗಳಾದ ಗ್ಯಾಸ್, ಅಸಿಡಿಟಿ, ಮಲಬದ್ಧತೆ, ಅಲ್ಸರ್, ಹೈಬಿಪಿ, ಹೃದಯ ರೋಗ, ಚರ್ಮರೋಗ, ಕಿಡ್ನಿ ಲಿವರ್ ಕಾಯಿಲೆಗಳಲ್ಲೂ ಈ ಔಷಧ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಔಷಧವನ್ನು ಭೂಲೋಕದ ಸಂಜೀವಿನಿ ಎಂದೇ ಹೇಳಬಹುದು.(ಬರಹ – ಸೂರ್ಯಕಾಂತ ಸಜ್ಜನ್)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್‍ಒಗಳ ಭೇಟಿ ಪ್ರಾರಂಭ
ಸುದ್ದಿದಿನ,ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಾದ್ಯಂತ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಸ್.ಐ.ಆರ್. ಪ್ರಕ್ರಿಯೆ ಅತ್ಯಂತ ಚುರುಕಿನಿಂದ ಸಾಗುತ್ತಿದೆ. ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೂನ್ 30 ರಿಂದಲೇ ಬೂತ್ ಮಟ್ಟದ ಅಧಿಕಾರಿಗಳು ಎನುಮೆರೇಷನ್ ನಮೂನೆಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಜೂನ್ 16ರ ವರೆಗಿನ ಅಂಕಿ-ಅಂಶಗಳಂತೆ ಜಿಲ್ಲೆಯಲ್ಲಿ ಒಟ್ಟು 14,99,282 ಮತದಾರರಿದ್ದಾರೆ. ಮತದಾರರ ನಿಖರ ಮಾಹಿತಿ ಪಡೆಯಲು ಈಗಾಗಲೇ 8,99,435 ಎನುಮೆರೇಷನ್ ನಮೂನೆಗಳನ್ನು ಬಿಎಲ್‍ಒಗಳ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗಿದ್ದು, ಈ ಪೈಕಿ 38,003 ನಮೂನೆಗಳ ಗಣಕೀಕರಣ ಪ್ರಕ್ರಿಯೆಯೂ ಪೂರ್ಣಗೊಂಡಿದೆ.
ಕ್ಷೇತ್ರವಾರು ಮಾಹಿತಿ ಮತ್ತು ಪ್ರಗತಿ ವಿವರ
ಜಗಳೂರು: 2,00,836 ಒಟ್ಟು ಮತದಾರರಿದ್ದು, 1,27,608 ನಮೂನೆಗಳನ್ನು ವಿತರಿಸಲಾಗಿದೆ. ಹರಿಹರ: 2,11,023 ಮತದಾರರಿದ್ದು, 1,55,143 ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ. ದಾವಣಗೆರೆ ಉತ್ತರ: 2,58,718 ಮತದಾರರ ಪೈಕಿ 69,881 ನಮೂನೆಗಳನ್ನು ವಿತರಿಸಲಾಗಿದೆ. ದಾವಣಗೆರೆ ದಕ್ಷಿಣ: 2,27,996 ಮತದಾರರಿದ್ದು, 79,365 ನಮೂನೆಗಳನ್ನು ಹಂಚಲಾಗಿದೆ. ಮಾಯಕೊಂಡ: 1,97,048 ಮತದಾರರಿದ್ದು, 1,66,618 ನಮೂನೆ ವಿತರಣೆಯಾಗಿದೆ. ಚನ್ನಗಿರಿ: 2,03,628 ಮತದಾರರ ಪೈಕಿ 1,64,380 ನಮೂನೆಗಳನ್ನು ತಲುಪಿಸಲಾಗಿದೆ. ಹೊನ್ನಾಳಿ: 2,00,033 ಒಟ್ಟು ಮತದಾರರಿದ್ದು, 1,36,440 ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ.
ಸ್ಥಳಾಂತರ, ವಲಸೆ ಹಾಗೂ ಮರಣ ಪ್ರಕರಣಗಳ ಪತ್ತೆ: ಮನೆ ಮನೆ ಭೇಟಿಯ ಸಂದರ್ಭದಲ್ಲಿ ಬಿಎಲ್‍ಒಗಳು ಮತದಾರರ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಜುಲೈ 1ರ ವರೆಗಿನ ವರದಿಯ ಪ್ರಕಾರ, ಜಿಲ್ಲಾದ್ಯಂತ ಒಟ್ಟು 421 ವಿಶೇಷ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 188 ಮರಣ ಹೊಂದಿದ ಪ್ರಕರಣಗಳು, 153 ಶಾಶ್ವತವಾಗಿ ವಲಸೆ ಹೋದವರು, 71 ದ್ವಿಪ್ರತಿ ಮತದಾರರು ಹಾಗೂ 5 ಅಪೂರ್ಣ ಮಾಹಿತಿ ಇರುವ ಪ್ರಕರಣಗಳು ಸೇರಿವೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಗರಿಷ್ಠ 110 ಹಾಗೂ ಮಾಯಕೊಂಡದಲ್ಲಿ 93 ಇಂತಹ ಪ್ರಕರಣಗಳು ಪತ್ತೆಯಾಗಿವೆ. ಈ ಮನೆ ಮನೆ ಭೇಟಿ ಹಾಗೂ ನಮೂನೆಗಳ ಸಂಗ್ರಹಣೆ ಮತ್ತು ಗಣಕೀಕರಣ ಪ್ರಕ್ರಿಯೆಯು ಜುಲೈ 29, 2026 ರವರೆಗೆ ಮುಂದುವರಿಯಲಿದ್ದು, ಸಾರ್ವಜನಿಕರು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಜಿಲ್ಲಾಡಳಿತ ಕೋರಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾದಿಂದ ನಿರ್ಮಾಣ ಮಾಡಲು ಹೊರಟಿರುವ ವಸತಿ(ಹೊಸ ಲೇ ಔಟ್) ಯೋಜನೆಯನ್ನ ಈ ಕೂಡಲೇ ಕೈ ಬಿಡಬೇಕು ಎಂದು ರೈತರು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯನವರಿಗೆ ಹಾಗೂ ದೂಡಾ ಆಯುಕ್ತೆ ರೇಣುಕ ಇವರಿಗೆ ಮನವಿ ಸಲ್ಲಿಸಿದರು.
ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಮನವಿ ಸಲ್ಲಿಸಿದ ಹಳೇ ಕುಂದುವಾಡ ರೈತರು, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ರಿ. ಸರ್ವೆ ನಂಬರ್ 125ರಿಂದ 142ರಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿತ್ತು, ಆದರೆ ರೈತರು ಪ್ರಾಧಿಕಾರದ ಮಧ್ಯೆ ಒಡಂಬಡಿಕೆ ಆಗದ ಕಾರಣ ಪ್ರಕ್ರಿಯೆ ಕೈ ಬಿಟ್ಟಿತ್ತು. ಪ್ರಾಧಿಕಾರವು ಸಹ ಈ ಜಮೀನುಗಳ ದರ ಹೆಚ್ಚಿದ್ದು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಎಂದು ಸಹ ಹೇಳಿತ್ತು, ಅದರಂತೆ 19-02-2024 ರಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಸದರಿ ವಸತಿ ಯೋಜನೆ ಕೈ ಬಿಡಲು ಸಭೆ ತೀರ್ಮಾನಿಸಿ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿತ್ತು, ಆದರೆ ಇದುವರೆಗೂ ನಗರಾಭಿವೃದ್ಧಿ ಇಲಾಖೆ ಈ ಬಗ್ಗೆ ಕ್ರಮ ವಹಿಸಿಲ್ಲ, ಆರೇಳು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ಇದರಿಂದ ರೈತರು ತುಂಬಾ ತೊಂದರೆಯಲ್ಲಿ ಸಿಲುಕಿದ್ದಾರೆ, ಕುರುಬ, ಮಡಿವಾಳ, ಉಪ್ಪಾರ ಜನಾಂಗ ಸೇರಿದಂತೆ ಬಹುತೇಕರು ಹಿಂದುಳಿದ ವರ್ಗದ ಸಣ್ಣ ಹಿಡುವಳಿದಾರರು ಇಲ್ಲಿದ್ದಾರೆ, ಸಾಲದ ಹೊರೆ ಜಾಸ್ತಿ ಆದ ಹಿನ್ನಲೆ ಹಲವರಿಗೆ ತೊಂದರೆ ಆಗಿದೆ, ಈ ವಸತಿ ಯೋಜನೆಯಲ್ಲಿ ಯಾವುದೇ ರೀತಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿರುವುದಿಲ್ಲ, ಯಾವುದೇ ಅಧಿಸೂಚನೆ (NOTIFICATION) ಆಗಿರುವುದಿಲ್ಲ. ಈ ಹಿಂದೆ ಸಚಿವರಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಮಿ ದರ ಹೆಚ್ಚಾಗಿದ್ದು, ಈ ಹಿನ್ನಲೆ ಸದರಿ ಯೋಜನೆ ಕೈ ಬಿಡುವಂತೆ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿದೆ, ಹೀಗಿದ್ದರು ನಮ್ಮಗಳ ಜಮೀನಿನ ಮೇಲೆ ದೂಡಾ ಹಕ್ಕು ಚಲಾಯಿಸಲು ಮುಂದಾಗಿ ಅಗ್ರಿಮೆಂಟ್, ರಿಜಿಸ್ಟ್ಟೇಷನ್, ಪೋಡು ಪ್ರಕ್ರಿಯೆ ಸೇರಿದಂತೆ ಇನ್ನಿತರೆ ಹಕ್ಕುಗಳನ್ನ ಚಲಾಯಿಸದಂತೆ ದಾವಣಗೆರೆ ಸಬ್ ರಿಜಿಸ್ಟ್ರಾರ್ ಗೆ ಪತ್ರ ಬರೆದು ಅಡ್ಡಿಪಡಿಸಿದೆ, ಈ ಹಿನ್ನಲೆ ನಗರಾಭಿವೃದ್ಧಿ ಇಲಾಖೆಯಿಂದ ದಯಮಾಡಿ ಈ ವಸತಿ ಯೋಜನೆ ಕೈ ಬಿಡಲು ಅನುಮತಿ ನೀಡುವಂತೆ ಹಾಗೂ ದಾವಣಗೆರೆ ಪ್ರಾಧೀಕಾರದ ಇಂದಿನ ಸಭೆಯಲ್ಲಿಯಲ್ಲಿಯೇ ಈ ಯೋಜನೆ ಕೈ ಬಿಡುವಂತೆ ಆದೇಶ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತರಿಗೆ ಭರವಸೆ ನೀಡಿದ ಯತೀಂದ್ರ ಅವರು, ಯಾವುದೇ ನೋಟಿಫಿಕೇಶನ್ ಆಗಿಲ್ಲ ಅನ್ನುವುದಾದರೇ ಬಲವಂತದಿಂದ ರೈತರ ಭೂಮಿ ಕಿತ್ತುಕೊಳ್ಳುವುದು ಸರಿಯಲ್ಲ, ಈ ಬಗ್ಗೆ ಮಾಹಿತಿಯೊಂದಿಗೆ ಇಲಾಖೆಗೆ ಪತ್ರ ಬರೆಯಿರಿ, ಇಲಾಖೆಯಿಂದ ಯೋಜನೆ ಕೈ ಬಿಡುವ ಬಗ್ಗೆ ತೀರ್ಮಾನಿಸುತ್ತೇವೆ, ಬೇರೆ ಕಡೆಗಳಲ್ಲಿ ಜಾಗ ಗುರುತಿಸಿದ್ದು, ಅಲ್ಲಿ ವಸತಿ ಯೋಜನೆ ಮುಂದುವರೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ನರಸಪ್ಪರ ಶಿವಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ರೇವಣಪ್ಪ, ದೇವರಾಜ್, ಸಣ್ಣಿಂಗಪ್ಪ, ಮಧುನಾಗರಾಜ್, ಗೋಣೆಪ್ಪ, ರಾಮಣ್ಣ, ಹನುಮಂತಪ್ಪ, ಈಶಪ್ಪ, ಆನಂದಪ್ಪ, ಗುಡ್ಡಪ್ಪ, ರಮೇಶ್, ನಾಗರಾಜ್, ಹನುಮಂತ್ ಸೇರಿದಂತೆ ಮತ್ತಿತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’
-
ದಿನದ ಸುದ್ದಿ7 days agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ7 days agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ3 days agoಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ
-
ದಿನದ ಸುದ್ದಿ2 days agoದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್‍ಒಗಳ ಭೇಟಿ ಪ್ರಾರಂಭ
-
ಅಂಕಣ2 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ



