ದಿನದ ಸುದ್ದಿ
ಪಾತಾಳ ಮುಟ್ಟಿರುವ ಆರ್ಥಿಕ ಸ್ಥಿತಿ ಮೇಲೆತ್ತುವ ಇಚ್ಛಾಶಕ್ತಿ ಕೇಂದ್ರ ವಿತ್ತ ಸಚಿವರಿಗಿಲ್ಲ : ಸಿದ್ದರಾಮಯ್ಯ
ಸುದ್ದಿದಿನ,ಬೆಂಗಳೂರು : ಕಳೆದ ಬಾರಿಯ ಕೇಂದ್ರದ ಬಜೆಟ್ ಗಾತ್ರ ರೂ.27 ಲಕ್ಷ ಕೋಟಿಗಳಿತ್ತು, ಈ ಬಾರಿ ರೂ.30 ಲಕ್ಷದ 42 ಸಾವಿರ ಕೋಟಿಗೆ ಏರಿಕೆ ಕಂಡಿದೆ. ನೇರ ತೆರಿಗೆ ಸಂಗ್ರಹ ಕಡಿಮೆಯಾದ ಕಾರಣ ಕಳೆದ ಬಾರಿ ಸುಮಾರು ಎರಡು ಲಕ್ಷ ಕೋಟಿ ಹಣ ಕೊರತೆಯಾಗಿತ್ತು. ಕೇಲವ ರೂ.25 ಲಕ್ಷ ಕೋಟಿಗಳಷ್ಟು ಮಾತ್ರ ಖರ್ಚು ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರುು.
ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಮಂಡಿಸಿದ ಬಜೆಟ್ ಉದ್ದೇಶಿಸಿ ಮಾತನಾಡಿದ ಅವರು, ಎರಡನೇ ಬಾರಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದ ಆದಾಯವನ್ನು 5 ಟ್ರಿಲಿಯನ್ ಡಾಲರ್‌ಗೆ ಏರಿಸುವುದಾಗಿ ಭರವಸೆ ನೀಡಿದ್ದರು. ಇಂದು ದೇಶದ ಜಿಡಿಪಿ 2.5 ರಷ್ಟಿದೆ, ಈ ಪರಿಸ್ಥಿತಿಯಲ್ಲಿ ಮೋದಿಯವರ ಭರವಸೆ ಈಡೇರುವುದು ಕನಸಿನ ಮಾತು.
ಪ್ರಸಕ್ತ ಬಜೆಟ್‌ನಲ್ಲಿ ದೇಶದ ಜಿಡಿಪಿಯನ್ನು 6% ಗೆ ಏರಿಸುವ ಕುರಿತು ವ್ಯಾಖ್ಯಾನಿಸಲಾಗಿದ್ದರೂ, ಅದರ ಈಡೇರಿಕೆಗೆ ಬೇಕಾದಂತಹ ಪರಿಣಾಮಕಾರಿ ಕಾರ್ಯಸೂಚಿಗಳೇನು ಕಂಡುಬರುತ್ತಿಲ್ಲ. ಹಾಗಾಗಿ ಇದೂ ಕೂಡ ಭರವಸೆಯಾಗಿಯೇ ಉಳಿಯಲಿದೆ. ಪಾತಾಳ ಮುಟ್ಟಿರುವ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಬೇಕಾದ ಇಚ್ಛಾಶಕ್ತಿ ಕೇಂದ್ರ ವಿತ್ತ ಸಚಿವರಲ್ಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಣಕಾಸು ಸಚಿವರು ಕೃಷಿ ಕ್ಷೇತ್ರದ ಅಭಿವೃದ್ದಿಗೆ 16 ಅಂಶಗಳ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಇದರಲ್ಲಿ 9 ಅಂಶಗಳು ರೈತರ ಜಮೀನನ್ನು ಖಾಸಗಿ ಕಂಪೆನಿಗಳ ಸುಪರ್ದಿಗೆ ಒಳಪಡಿಸುವಂತಿವೆ. ಉದಾಹರಣೆಗೆ ‘ಕೃಷಿ ಉಡಾನ್’ ಯೋಜನೆ ಸಣ್ಣಪುಟ್ಟ ರೈತರಿಗಿಂತ ಕಾರ್ಪೊರೇಟ್ ಕಂಪೆನಿಗಳಿಗೆ ಹೆಚ್ಚು ಲಾಭದಾಯಕವಾಗುವಂತಿದೆ. 16 ಅಂಶಗಳ ಕಾರ್ಯಕ್ರಮಗಳಲ್ಲಿ 9 ಅಂಶಗಳು ‘ಕಾರ್ಪೊರೇಟ್ ಫಾರ್ಮಿಂಗ್’ ಕಡೆಗೆ ಒತ್ತು ನೀಡುತ್ತಿವೆ. ಒಟ್ಟಾರೆ ಕೃಷಿಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ಉದ್ದೇಶ ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಕಿಡಿಕಾರಿದರು.
16 ಅಂಶಗಳ ಬಹುತೇಕ ಕಾರ್ಯಕ್ರಮಗಳು ಸಾಮಾನ್ಯ ರೈತರಿಗೆ ಸಂಬಂಧಿಸಿದ್ದಲ್ಲ. 162 MT ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್‌ಗಳ ಮ್ಯಾಪಿಂಗ್ ಮತ್ತು ಜಿಯೊಟ್ಯಾಗಿಂಗ್ ಇದರಿಂದ ಬಡರೈತನಿಗೆ ಏನು ಲಾಭ? ರೆಫ್ರಿಜರೇಟೇಡ್ ರೈಲುಗಳು, ಕೃಷಿ ಉಡಾನ್ ವಿಮಾನಗಳು ಯಾವ ರೈತರ ಅನುಕೂಲಕ್ಕಾಗಿ ತಿಳಿಯುತ್ತಿಲ್ಲ. 2022ರ ವೇಳೆಗೆ ದೇಶದ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಪ್ರಧಾನಿ ಹೇಳಿದ್ದರು. ಕಳೆದ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರ ಶೇಕಡಾ 2.5ರಷ್ಟು ಬೆಳವಣಿಗೆ ಕಂಡಿದೆ. ರೈತರ ಆದಾಯ ದುಪ್ಪಟ್ಟು ಆಗಬೇಕಾದರೆ ಕೃಷಿ ಕ್ಷೇತ್ರ ಕನಿಷ್ಠ 10ರಿಂದ 15% ದರದಲ್ಲಿ ಬೆಳವಣಿಗೆ ಆಗಬೇಕು. ಸದ್ಯಕ್ಕೆ ಇದೂ ಕೂಡ ಅಸಾಧ್ಯದ ಮಾತು ಎಂದು ನುಡಿದರು.
ಕೇಂದ್ರ ಪ್ರಸ್ತಾಪಿಸಿರುವ 3 ಮಾದರಿ ಕಾಯ್ದೆಗಳಾದ ಭೂಮಿ ಗುತ್ತಿಗೆ ಕಾಯ್ದೆ, ಎಪಿಎಂಸಿ ಕಾಯ್ದೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಹೊಸ ಮಾರ್ಕೆಟಿಂಗ್ ಕಾಯ್ದೆ ಮತ್ತು ಕಾಂಟ್ರಾಕ್ಟ್ ಫಾರ್ಮಿಂಗ್ (ಕಾರ್ಪೋರೇಟ್ ಫಾರ್ಮಿಂಗ್) ಕಾಯ್ದೆಗಳನ್ನು ರಾಜ್ಯ ಸರ್ಕಾರಗಳು ಒಪ್ಪಿಕೊಳ್ಳಲೇಬೇಕು ಎಂದು ಕೇಂದ್ರ ಹೇಳುತ್ತಿದೆ.
ಇದು ತುಂಬಾ ಅಪಾಯಕಾರಿ. ಇಡೀ ದೇಶದ ರೈತರು ಸಾಲದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ನರಳಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕೆಂಬುದು ನಮ್ಮದು ಹಳೆಯ ಬೇಡಿಕೆ. ಕಳೆದ ಆರು ವರ್ಷಗಳಿಂದ ಇದನ್ನು ಕೇಳುತ್ತಾ ಬಂದಿದ್ದೇವೆ. ಈ ಬಜೆಟ್ ನಲ್ಲಿಯೂ ಆ ಬಗ್ಗೆ ಉತ್ತರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿಯ ಬಜೆಟ್‌ನಲ್ಲಿ ಸಾರ್ವಜನಿಕ ವಲಯಗಳಿಗೆ ಒಟ್ಟು ಬಜೆಟ್ ಗಾತ್ರದ 0.90% ರಷ್ಟು ಅನುದಾನ ವಿನಿಯೋಗಿಸಲಾಗಿತ್ತು, ಈ ಬಾರಿ ಅದು 0.96% ಗೆ ಏರಿಕೆ ಕಂಡಿದೆ. ಗ್ರಾಮೀಣಾಭಿವೃದ್ಧಿಗೆ ಕಳೆದ ಬಾರಿ 1.21% ಅನುದಾನ ಮೀಸಲಿತ್ತು, ಈ ಬಾರಿ 1.23% ಗೆ ಹೆಚ್ಚಿಸಲಾಗಿದೆ.
ಈ ಬಜೆಟ್‌ನಲ್ಲಿ ಕೃಷಿಗೆ ಅತ್ಯಧಿಕ ಮಹತ್ವ ನೀಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದರೂ ಕೂಡ ಕೃಷಿಗೆ ಒಟ್ಟು ಬಜೆಟ್ ಅನುದಾನದಲ್ಲಿ ಮೀಸಲಾದ ಪಾಲು ಕೇವಲ 1.50% ಮಾತ್ರ. ಕಳೆದ ಬಾರಿ ಇದು 1.46% ಇತ್ತು. ಈ ಬಾರಿಯೂ ಕೃಷಿ ಕಡೆಗಣಿಸಲ್ಪಟ್ಟಿರುವುದು ದುರದೃಷ್ಟಕರ.
ಗ್ರಾಮೀಣ ಭಾಗದ ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನರೇಗಾ ಯೋಜನೆಗೆ ರೂ.10 ಸಾವಿರ ಕೋಟಿ ಹಣ ಕಡಿತಗೊಳಿಸಲಾಗಿದೆ. ಕಳೆದ ವರ್ಷ ರೂ.71,000 ಕೋಟಿ ನೀಡಿದ್ದರೆ, ಈ ಬಾರಿ ರೂ.61,000 ಕೋಟಿ ನಿಗದಿಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಭಾರತ ಇನ್ನಷ್ಟು ಸೊರಗಿಹೋಗಲಿದೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ನಗರದ ಉಪನಗರ ರೈಲು ಯೋಜನೆ ಬಗ್ಗೆ ಕಳೆದ ಬಜೆಟ್‌ನಲ್ಲಿಯೇ ಪ್ರಸ್ತಾಪವಿದ್ದರೂ ಈವರೆಗೂ ಒಂದು ಸ್ಟೇಷನ್ ಆಗಲಿ, ಹಳಿ ನಿರ್ಮಾಣ ಕಾರ್ಯವಾಗಲಿ ಆಗಿಲ್ಲ. ಮತ್ತೆ ಈ ಬಾರಿಯೂ ಅದೇ ರಾಗ, ಅದೇ ಹಾಡು. ಈ ಬಜೆಟ್‌ನಲ್ಲಿ ಕೂಡ ಅನುದಾನವನ್ನು ಮೀಸಲಿಟ್ಟಿಲ್ಲ ಜೊತೆಗೆ ಅನುದಾನದ ಬಗ್ಗೆ ಸ್ಪಷ್ಟತೆ ಕೂಡ ಇಲ್ಲ.
ದೇಶದ ಅಭಿವೃದ್ಧಿಯ ದರ 42 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ತೆರಿಗೆ ಸಂಗ್ರಹ ಎರಡು ಲಕ್ಷ ಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ. ಕಾರ್ಪೋರೇಟ್ ತೆರಿಗೆ ಶೇಕಡಾ 15ರಷ್ಟು ಕಡಿಮೆಯಾಗಿದೆ. ಸಂಪನ್ಮೂಲ ಸಂಗ್ರಹದ ಯಾವ ಹೊಸ ಮಾರ್ಗಗಳ ಬಗ್ಗೆಯೂ ಬಜೆಟ್ ನಲ್ಲಿಯೂ ಪ್ರಸ್ತಾಪ ಇಲ್ಲ ಎಂದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಸಕ್ತ ಬಜೆಟ್‌ನಲ್ಲಿ ಎಲ್‌ಐಸಿ ಶೇರುಗಳನ್ನು ಸಹ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದೊಂದು ರೀತಿ ಕುತ್ತಿಗೆಯಲ್ಲಿರುವ ತಾಳಿ ಮಾರಾಟಕ್ಕಿಟ್ಟ ಪರಿಸ್ಥಿತಿ. ದೇಶದ ಸದ್ಯದ ಆರ್ಥಿಕ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದುಕ್ಕೆ ಸರ್ಕಾರದ ಈ ನಿರ್ಧಾರ ಸಾಕ್ಷಿ.
ವಿತ್ತೀಯ ಶಿಸ್ತು ಕಳೆದ ಬಾರಿ ಬಜೆಟ್‌ನಲ್ಲಿ 3.3 ಎಂದು ನಿಗದಿಪಡಿಸಲಾಗಿತ್ತು. ವರ್ಷಾಂತ್ಯದ ವೇಳೆಗೆ ಇದು 3.6 ತಲುಪಿತ್ತು. ಬರುವ ವರ್ಷಕ್ಕೆ ಸರ್ಕಾರವೇ 3.5 ಎಂದು ಗುರಿ ಇಟ್ಟುಕೊಂಡಿದೆ. ಅಂದರೆ ಈಗಿರುವ ಸಾಲದ ಜೊತೆಗೆ ಇನ್ನಷ್ಟು ಸಾಲ ಮಾಡಿ ದೇಶವನ್ನು ದಿವಾಳಿ ಮಾಡಲು ಸರ್ಕಾರ ನಿರ್ಧರಿಸಿದಂತಿದೆ ಎಂದು ಕೆಂಡಾಮಂಡಲರಾದರು.
ಒಟ್ಟಿನಲ್ಲಿ ಇದು ದೇಶದ ಮುನ್ನಡೆಗೆ ಬೇಕಾದ ಯಾವ ಮುನ್ನೋಟವೂ ಇಲ್ಲದ, ಭವಿಷ್ಯದ ಮೇಲಿನ ಭರವಸೆಯನ್ನು ಕಳೆದುಕೊಂಡಿರುವ ಸಾಮಾನ್ಯ ಜನರು, ರೈತರು, ಯುವಜನರು, ಉದ್ಯಮಿಗಳು ಹೀಗೆ ಯಾವ ಜನ ಸಮುದಾಯದಲ್ಲಿಯೂ ವಿಶ್ವಾಸ-ಭರವಸೆಯನ್ನು ಹುಟ್ಟಿಸದ ನಿರಾಶದಾಯಕ ಬಜೆಟ್ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.
ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ3 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ5 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ3 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

