Connect with us

ದಿನದ ಸುದ್ದಿ

ಮಾಧ್ಯಮ ಸ್ವಾತಂತ್ರ್ಯದ ಗುಂಗಿನಲ್ಲಿ

Published

on

  • ನಾ ದಿವಾಕರ

ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ಹಿಂಜರಿಯುವಷ್ಟು ಮಟ್ಟಿಗೆ ಸುದ್ದಿ ಮಾಧ್ಯಮಗಳು ತಮ್ಮ ಬೌದ್ಧಿಕ ನೆಲೆಯನ್ನು ಕಳೆದುಕೊಂಡಿವೆ. ಯಾವುದೇ ಸಂದರ್ಭದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲದೆ , ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಎಲ್ಲ ದೌರ್ಜನ್ಯಗಳಿಗೂ ವಿಮುಖರಾಗಿ, ಸದಾ ಆಳುವ ವರ್ಗಗಳ ಭಜನೆ ಮಾಡುತ್ತಾ, ಜನಸಾಮಾನ್ಯರ ನೋವು ಸಂಕಷ್ಟಗಳಿಗೆ ಬೆನ್ನು ತೋರಿಸಿ, ಪ್ರಭುತ್ವದ ಪಾದಾರವಿಂದಗಳಿಗೆ ತಮ್ಮನ್ನು ತಾವೇ ಅರ್ಪಿಸಿಕೊಂಡಿರುವ ಸುದ್ದಿಮನೆಗಳಿಗೆ ಯಡಿಯೂರಪ್ಪನವರ ಸರ್ಕಾರ ಸ್ಪಷ್ಟ ಸಂದೇಶ ನೀಡಿದೆ.

ಪವರ್ ಟಿವಿ ವಾಹಿನಿಯ ಪ್ರಸಾರಕ್ಕೆ ತಡೆಯೊಡ್ಡುವ ಮೂಲಕ ರಾಜ್ಯ ಸರ್ಕಾರ ಮುಂಬರುವ ದಿನಗಳ ಮುನ್ಸೂಚನೆಯನ್ನೂ ನೀಡಿದೆ. ಬೆಂಗಳೂರಿನಲ್ಲಿ ಎನ್ ಐ ಎ ಕಚೇರಿಯನ್ನು ತೆರೆಯುವ ನಿರ್ಧಾರದ ಹಿಂದೆ ಗುಪ್ತ ಕಾರ್ಯಸೂಚಿ ಅಡಗಿರುವುದನ್ನು ಗಮನಿಸದೆ ಹೋದರೆ ಪವರ್ ಟಿವಿ-ರೆಹಮಾನ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.

ಇದು ಕೇವಲ ಸರ್ವಾಧಿಕಾರದ ಪ್ರಶ್ನೆಯಲ್ಲ. ಆಳುವ ವರ್ಗಗಳನ್ನು ಪ್ರಶ್ನಿಸುವ, ಖಂಡಿಸುವ, ಸರಕಾರಗಳ ತಪ್ಪುಗಳನ್ನು ಎತ್ತಿ ತೋರುವ ಯಾವುದೇ ಅಭಿವ್ಯಕ್ತಿಯನ್ನು ಸಹಿಸಲಾಗುವುದಿಲ್ಲ ಎಂಬ ಸೂಚನೆಯನ್ನು ಪವರ್ ಟಿವಿ ಪ್ರಕರಣದಲ್ಲಿ ಕಾಣಬಹುದು. ಇತರ ಸುದ್ದಿಮನೆಗಳು, ಮಾಧ್ಯಮಗಳು ಮೌನವಾಗಿರುವುದನ್ನು ನೋಡಿದರೆ ವಿದ್ಯುನ್ಮಾನ ಮಾಧ್ಯಮ ಲೋಕದ ನಿಷ್ಕ್ರಿಯತೆಯನ್ನೂ ಗ್ರಹಿಸಬಹುದು.

ಈಗ ಮಾಧ್ಯಮಗಳಿಗೆ, ಅದರಲ್ಲೂ ಸುದ್ದಿಮನೆಗಳಿಗೆ ಮಾಧ್ಯಮ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ , ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ವಿಶೇಷ ಒಲವು ಮೂಡಿದರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ ನೈತಿಕತೆಯನ್ನು ಎಂದೋ ಕಳೆದುಕೊಂಡುಬಿಟ್ಟಿವೆ.

ನಾವುಗಳು ಇರುವುದು ಪ್ರಜೆಗಳಿಗಾಗಿ ಎನ್ನುವ ಪ್ರಜ್ಞೆಯನ್ನೇ ಕಳೆದುಕೊಂಡು ಆಳುವವರ ಭಟ್ಟಂಗಿಗಳಾಗಿರುವ ಮಾಧ್ಯಮಗಳು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನೂ ಪ್ರತಿಭಟಿಸಲಾಗದಷ್ಟು ಮಟ್ಟಿಗೆ ಸ್ವಂತಿಕೆ ಕಳೆದುಕೊಂಡಿವೆ. ಪವರ್ ಟಿವಿ ಅಥವಾ ರೆಹಮಾನ್ ಇಂದು ಅನಾಥ ಪ್ರಜ್ಞೆಯಿಂದ ನಲುಗುತ್ತಿದ್ದರೆ ಅದಕ್ಕೆ ಸ್ವತಃ ತಾವೇ ಕಾರಣರು, ತಮ್ಮ ಮಾಧ್ಯಮ ಬಂಧುಗಳೇ ಕಾರಣ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮ ಲೋಕ ಆಳುವವರ ಸ್ವಯಂ ನಿರ್ಮಿತ ದೇಗುಲದ ಮುಂದೆ ಗರುಡಗಂಭಗಳಂತೆ ನಿಂತರೆ ಹೀಗೇ ಆಗುವುದು. ದೊರೆಗಳಿಗೆ ಪರಾಕು ಹಾಡುವ ಮಧ್ಯಕಾಲೀನ ಪರಂಪರೆಗೆ ಜಾರಿರುವ ಸುದ್ದಿಮನೆಗಳು ಮತ್ತು ಕುಂತಲ್ಲಿ ಕೂರಲಾಗದೆ ನಾಟ್ಯ ಭಂಗಿಗಳಲ್ಲಿ ಸುದ್ದಿ ನೀಡುವ ಸಂಪಾದಕರು, ಸೂರು ಕಿತ್ತುಹೋಗುವಂತೆ ಏರುದನಿಯಲ್ಲಿ ಸುದ್ದಿ ಹರಡುವ ಕೂಗುಮಾರಿ ನಿರೂಪಕರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ತಮ್ಮ ವೃತ್ತಿಧರ್ಮವನ್ನು ( ಏನಾದರೂ ಉಳಿದಿದ್ದರೆ) ಪಾಲಿಸುವತ್ತ ಗಮನ ಹರಿಸಲು ಇದು ಸಕಾಲ.

ರಾಜ್ಯ ಸರ್ಕಾರದ ಫ್ಯಾಸಿಸ್ಟ್ ಧೋರಣೆಯನ್ನು ಖಂಡಿಸಬೇಕಾದ್ದು ನಾಗರಿಕ ಸಮಾಜದ ಕರ್ತವ್ಯ. ಸಮೂಹ ಸನ್ನಿಗೊಳಗಾಗಿರುವ ಮಧ್ಯಮ ವರ್ಗದ ಸಾರ್ವಭೌಮ ಪ್ರಜೆಗಳಿಗೆ ಇದು ಸ್ವಾಗತಾರ್ಹ ಬೆಳವಣಿಗೆ ಎನಿಸುತ್ತದೆ. ಆದರೆ ನಾಗರಿಕ ಪ್ರಜ್ಞೆ ಇರುವ ಯಾವುದೇ ಪ್ರಜೆಗೆ ಇದು ಆತಂಕಕಾರಿ ಬೆಳವಣಿಗೆಯಾಗಿ ಕಾಣುತ್ತದೆ.

ಈ ಪ್ರಜೆಗಳ ಸಹಾನುಭೂತಿ ಮತ್ತು ಅನುಕಂಪವನ್ನು ನಾವೇಕೆ ಕಳೆದುಕೊಂಡಿದ್ದೇವೆ ಎಂದು ಮಾಧ್ಯಮಗಳು ಯೋಚಿಸಬೇಕಿದೆ. ಆತ್ಮ ಸಾಕ್ಷಿ ಬದುಕಿದ್ದರೆ ಆತ್ಮಾವಲೋಕನ ಮಾಡಿಕೊಳ್ಳಲಿ. ಮಾಧ್ಯಮಗಳು ಇನ್ನೂ ಬದಲಾಗದಿದ್ದರೆ ಸಜೀವ ಸಮಾಧಿಯಾಗುವುದು ಒಳಿತು. ನೈತಿಕತೆ ಇಲ್ಲದೆ ಹೋದಮೇಲೆ ಉಳಿಯುವ ನೈತಿಕ ಹಕ್ಕು ಸಹ ಇಲ್ಲವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆಯುರ್ವೇದ ಆರೋಗ್ಯಕರ ಜೀವನ ಶೈಲಿ

Published

on

ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.

ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.

ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.

ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.

ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.

ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಯೋಜನೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.

ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending