Connect with us

ಬಹಿರಂಗ

ನಿಷ್ಕ್ರಿಯತೆ ಉನ್ಮಾದದ ನಡುವೆ ಪ್ರಜಾಸತ್ತೆಯ ರಕ್ಷಣೆಗಾಗಿ

Published

on

  • ನಾ ದಿವಾಕರ

ಪ್ರಜಾಪ್ರಭುತ್ವ ಎಂದರೆ ಅದು ಕೇವಲ ಒಂದು ಆಡಳಿತ ವ್ಯವಸ್ಥೆ ಅಲ್ಲ, ಒಂದು ನಾಗರಿಕ ಸಮಾಜವನ್ನು ಮಾನವೀಯ ಮೌಲ್ಯಗಳ ಚೌಕಟ್ಟಿನಲ್ಲಿ ಬಂಧಿಸುವ ಒಂದು ಸಂವೇದನಾಶೀಲ ತತ್ವ . ಈ ಸಂವೇದನೆಯನ್ನು ಕಳೆದುಕೊಂಡ ಯಾವುದೇ ಸಮಾಜ ಸುಲಭವಾಗಿ ಸರ್ವಾಧಿಕಾರದತ್ತ ಹೊರಳಿಬಿಡುತ್ತದೆ. ತನ್ನೊಳಗಿನ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡ ಮನುಷ್ಯ ತನ್ನ ಸುತ್ತಲಿನ ಶೋಷಣೆಗೆ, ಹಿಂಸೆಗೆ, ಅನ್ಯಾಯಗಳಿಗೆ ಕುರುಡಾಗಿಬಿಡುತ್ತಾನೆ.

ಸ್ವಾಭಾವಿಕವಾಗಿಯೇ ಒಂದು ಸಮಾಜವೂ ಇದೇ ಸನ್ನಿವೇಶವನ್ನು ಎದುರಿಸುತ್ತದೆ. ರಾಜಕೀಯವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಳ್ಳುವ ಒಂದು ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ನೆಲೆಗಟ್ಟಿನಲ್ಲೂ ಪ್ರಜಾಪ್ರಭುತ್ವ ಸ್ಥಾಪಿತವಾದಲ್ಲಿ ಮಾತ್ರ ಒಂದು ಸಮ ಸಮಾಜದ ನಿರ್ಮಾಣ ಸಾಧ್ಯ ಎಂದು ಡಾ ಬಿ ಆರ್ ಅಂಬೇಡ್ಕರ್ ಪ್ರತಿಪಾದಿಸುತ್ತಾರೆ.

ಆತ್ಮನಿರ್ಭರ ಭಾರತದ ಇಂದಿನ ಪರಿಸ್ಥಿತಿಯನ್ನು ನೋಡಿದರೆ ಈ ದಾರ್ಶನಿಕ ದೃಷ್ಟಿಕೋನ ಎಷ್ಟು ವಾಸ್ತವತೆಯಿಂದ ಕೂಡಿತ್ತು ಎನಿಸುತ್ತದೆ. ಇಂದು ರಾಜಕೀಯ ನೆಲೆಯಲ್ಲಿ ಭಾರತ ಪ್ರಜಾಪ್ರಭುತ್ವದ ತಳಹದಿಯನ್ನೇ ಕಳೆದುಕೊಳ್ಳುತ್ತಿದೆ. ಗ್ರಾಂಥಿಕವಾಗಿ ಭಾರತದ ಶ್ರೇಷ್ಠ ಸಂವಿಧಾನ ಸುರಕ್ಷಿತವಾಗಿಯೇ ಇದ್ದರೂ, ಮೌಲಿಕವಾಗಿ ಸಂವಿಧಾನದ ಒಂದೊಂದೇ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ದಿನಬೆಳಗಾದರೆ ಸಂವಿಧಾನದ ಧ್ಯಾನ ಮಾಡುವ ಅಸಂಖ್ಯಾತ ಜನಪ್ರತಿನಿಧಿಗಳು ಮೌನವಾಗಿಯೇ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ಉನ್ಮತ್ತ ಮನಸ್ಥಿತಿ ತಲುಪಿರುವ ನಾಗರಿಕ ಸಮಾಜದ ಬೃಹತ್ ವರ್ಗ ಸಂಪೂರ್ಣ ನಿಷ್ಕ್ರಿಯವಾಗಿದೆ.

ಅಸಮಾನತೆ, ಅಸಹಿಷ್ಣುತೆ ಮತ್ತು ಶ್ರೇಷ್ಠತೆಯ ವ್ಯಸನದೊಂದಿಗೇ ಶತಮಾನಗಳನ್ನು ಕಳೆದಿರುವ ಭಾರತೀಯ ಸಮಾಜ ತನ್ನ ಸಾಂಪ್ರದಾಯಿಕ ಪೊರೆಯನ್ನು ಇನ್ನೂ ಸಂಪೂರ್ಣವಾಗಿ ಕಳಚಿಹಾಕಿಲ್ಲ ಎನ್ನುವುದು ಕಳೆದ ಹಲವು ವರ್ಷಗಳಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ. ಅನ್ಯಾಯಗಳನ್ನು ಸಹಿಸಿಕೊಳ್ಳುವುದನ್ನು ಸಹಿಷ್ಣುತೆ ಎನ್ನುವುದಾದರೆ ಭಾರತ ಸಹಿಷ್ಣುತೆಯ ಕರ್ಮಭೂಮಿ ಎಂದೇ ಹೇಳಬಹುದು. ಇದು ವಾಸ್ತವವೂ ಹೌದು.

ಇಲ್ಲಿ ನ್ಯಾಯಾನ್ಯಾಯಗಳ ನಿಷ್ಕರ್ಷೆಯಾಗುವುದು ಮನುಜ ಭೂಮಿಕೆಯ ಮೇಲಲ್ಲ. ಜಾತಿ-ಧರ್ಮ-ಸಮುದಾಯದ ಅಸ್ಮಿತೆಗಳ ಭೂಮಿಕೆಯ ಮೇಲೆ. ಅನ್ಯಾಯಕ್ಕೊಳಗಾದವರ, ದೌರ್ಜನ್ಯಕ್ಕೊಳಗಾದವರ ಸಮಾಜೋ ಸಾಂಸ್ಕೃತಿಕ ಅಸ್ಮಿತೆಗಳು ನ್ಯಾಯದ ಪರಾಮರ್ಶೆಗೆ ವೇದಿಕೆಯಾಗುತ್ತವೆ. ಭಾರತದ ಸಾಂಪ್ರದಾಯಿಕ ಸಮಾಜ ಎಷ್ಟು ಬಲಿಷ್ಠವಾಗಿದೆ ಎಂದರೆ ತುಳಿತಕ್ಕೊಳಗಾದ ಸಮುದಾಯದಿಂದಲೇ ಬೆಳೆದು ನಿಂತವರೂ ಸಹ ತಮ್ಮೆದುರಿನ ದೌರ್ಜನ್ಯಕ್ಕೆ ಕುರುಡಾಗಿಬಿಡುತ್ತಾರೆ. ಇದು ನಮ್ಮ ದೇಶದ ಸಾಂಸ್ಕೃತಿಕ ನಾಗರಿಕತೆ ಶತಮಾನಗಳಿಂದ ಸೃಷ್ಟಿಸಿರುವ ವಿಕೃತ ವಾತಾವರಣದ ಫಲ.

ತಮ್ಮ ಅಧಿಕಾರ, ಅಸ್ತಿತ್ವ ಮತ್ತು ರಾಜಕೀಯ ಪ್ರಾಬಲ್ಯ ಕಾಪಾಡಿಕೊಳ್ಳಲು ದೇಶಾದ್ಯಂತ ನೂರಾರು ಮಸಣಗಳನ್ನು ಸೃಷ್ಟಿಸಿ, ಸಾವಿರಾರು ಜನರ ಹತ್ಯೆಗೈದಿರುವ ಒಂದು ರಾಜಕೀಯ ಆಡಳಿತ ವ್ಯವಸ್ಥೆಯಲ್ಲಿ , ಜನಸಾಮಾನ್ಯರ ಶವಸಂಸ್ಕಾರಕ್ಕೆ ಸೂಕ್ತವಾದ ಸ್ಮಶಾನ ಇಲ್ಲದಿರುವುದನ್ನು ನೋಡಿದರೆ ನಾವು ಎಷ್ಟು ಅಸೂಕ್ಷ್ಮರಾಗಿದ್ದೇವೆ ಎಂದು ಅರಿವಾಗುತ್ತದೆ. ಇದು ಕೇವಲ ಒಂದು ಕೊರಟಗೆರೆಯ ಪ್ರಶ್ನೆಯಲ್ಲ.

ತುಮಕೂರು ಬಳಿ ಇರುವ ಕೊರಟಗೆರೆಯಲ್ಲಿ ದಲಿತ ಕುಟುಂಬದ ಒಂದು ಹಸುಳೆಯ ಶವಕ್ಕೆ ಮಣ್ಣುಮಾಡಲು ಅವಕಾಶವೀಯದೆ, ಹೂತ ಶವವನ್ನು ಹೊರಕ್ಕೆ ತೆಗೆಸುವಷ್ಟು ಕ್ರೌರ್ಯ ನಮ್ಮ ನಡುವೆ ಇದೆ. ಈ ಘಟನೆಗೆ ಕಾರಣವಾದವರ ವಿಕೃತಿ, ಕ್ರೌರ್ಯ ಜಾತಿ ಪೀಡಿತ ಸಮಾಜದ ಒಂದು ಆಯಾಮವನ್ನು ತೋರಿಸಿದರೆ, ಈ ಘಟನೆಯ ಬಗ್ಗೆ ಪ್ರತಿಕ್ರಯಿಸಲೂ ಮುಂದಾಗದೆ ನಿಷ್ಕ್ರಿಯ ಮೌನ ವಹಿಸಿರುವ ಚುನಾಯಿತ ಪ್ರತಿನಿಧಿಗಳು, ಮಾಧ್ಯಮಗಳು ಮತ್ತು ನಾಗರಿಕ ಸಮಾಜ ಈ ಸಮಾಜದ ನಿರ್ಲಜ್ಜತೆಯನ್ನು ಹೊರಗೆಡಹಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ, 21ನೆಯ ಶತಮಾನದ ಮೂರನೆಯ ದಶಕದಲ್ಲೂ ಸಹ, ನಾವು ಹಲವಾರು ಕೊರಟಗೆರೆಗಳನ್ನು ಕಂಡಿದ್ದೇವೆ. ಒಂದೆಡೆ ಶವಸಂಸ್ಕಾರಕ್ಕೆ ಜಾಗ ನೀಡಲು ನಿರಾಕರಿಸುವ ಸಮಾಜವೇ ಮತ್ತೊಂದೆಡೆ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಸಂತ್ರಸ್ತೆಯೊಬ್ಬಳ ಶವಸಂಸ್ಕಾರವನ್ನು ರಾತ್ರೋರಾತ್ರಿ ನಡೆಸುತ್ತದೆ.. ಇಲ್ಲಿ ಹೂಳಲಾಗಿದ್ದ ಶವವನ್ನು ಹೊರಗೆಳೆಯಲಾಗುತ್ತದೆ ಅಲ್ಲಿ ಶವದ ಸುಳಿವು ಸಿಗದಂತೆ ಸುಟ್ಟುಹಾಕಲಾಗುತ್ತದೆ.

ಎರಡೂ ಶವಗಳು ಸಾಂಪ್ರದಾಯಿಕ ಭಾರತದ ದೃಷ್ಟಿಯಲ್ಲಿ ಬಹಿಷ್ಕೃತವೇ ಆಗಿರುವುದು ಕಾಕತಾಳೀಯವೇನಲ್ಲ. ಈ ಎರಡು ವೈಪರೀತ್ಯಗಳ ನಡುವೆ ಒಂದು ನಾಗರಿಕತೆಯ ಎಳೆಯನ್ನು ಶೋಧಿಸಲು ಈ ದೇಶದ ಕೆಲವೇ ಕೆಲವು ಮನಸುಗಳು ಹಾತೊರೆಯುತ್ತಿವೆ. ಮತ್ತೊಂದೆಡೆ ನಾಗರಿಕ ಸಮಾಜದ ಒಂದು ವರ್ಗ ನಿಷ್ಕ್ರಿಯ ಮೌನ ವಹಿಸುತ್ತದೆ.

ಹುಟ್ಟಿನಿಂದ ಸಾಯುವವರೆಗೂ ಜಾತಿಯ ಚೌಕಟ್ಟಿನಲ್ಲೇ ಬದುಕು ಸವೆಸುವ ಭಾರತೀಯ ಸಮಾಜ ಮಸಣದಲ್ಲೂ ಜಾತಿ ಸೂಚಕಗಳನ್ನು ಹುಡುಕುವುದು ದುರಂತ ಅಲ್ಲವೇ ? ಹೂಳುವವರಿಗೆ ಅಸ್ಮಿತೆಯ ಪ್ರಶ್ನೆ ಕಾಡುವುದು ಸಹಜ ಆದರೆ ಹೂತು ಹೋಗುವ ಜೀವಕ್ಕೆ ಯಾವ ಅಸ್ಮಿತೆ ಇರಲು ಸಾಧ್ಯ ? ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ಜಾತಿಯಿಂದಲೇ ಗುರುತಿಸಿಕೊಳ್ಳುತ್ತಾನೆ ಎಂದು ಅಂಬೇಡ್ಕರ್ ಹೇಳಿದ್ದುದು ಎಷ್ಟು ಮಾರ್ಮಿಕ ಅಲ್ಲವೇ ?

ಸಾವಿನ ನಂತರವೂ ಜಾತಿಯ ಭೂತ ನಮ್ಮ ಬೆನ್ನೇರಿರುತ್ತದೆ, ನಾವು ಜಾತಿಯ ಬೆನ್ನಟ್ಟಿ ನಡೆದಿರುತ್ತೇವೆ. ನಮ್ಮ ಅಂತರ್ ಪ್ರಜ್ಞೆಯನ್ನು ಪ್ರಕ್ಷುಬ್ಧಗೊಳಿಸುವ ಕೊರಟಗೆರೆಯಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ, ನಾವು ಸಂವಿಧಾನದ ರಕ್ಷಣೆಗೆ ಪಣ ತೊಡುತ್ತಲೇ ಇದ್ದೇವೆ.

70 ವರ್ಷಗಳ ನಂತರವೂ ಅಂಬೇಡ್ಕರ್ ಕನಸಿನ ಸಾಮಾಜಿಕ ಪ್ರಜಾಪ್ರಭುತ್ವವನ್ನು , ಗಾಂಧಿ ಕನಸಿನ ನಿರ್ಭೀತ ಪ್ರಾಮಾಣಿಕ ಸಮಾಜವನ್ನು ಸಾಧಿಸಲು ಸಾಧ್ಯವಾಗದ ಭಾರತ ಈಗ ರಾಜಕೀಯ ಪ್ರಜಾಪ್ರಭುತ್ವವನ್ನೂ ಕಳೆದುಕೊಳ್ಳುತ್ತಿದೆ. ಆರ್ಥಿಕವಾಗಿ ಭಾರತದ ಬಹುಸಂಖ್ಯೆಯ ಜನರು ಈಗಾಗಲೇ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ.

ತಾವೇ ಕಟ್ಟಿ ಬೆಳೆಸಿದ ಬೃಹತ್ ಸಾರ್ವಜನಿಕ ಉದ್ದಿಮೆಗಳು, ಸಂಸ್ಥೆಗಳು ತಮ್ಮ ಕಣ್ಣೆದುರಿನಲ್ಲೇ ಖಾಸಗಿ ಬಂಡವಾಳಿಗರ ಪಾಲಾಗುತ್ತಿರುವುದನ್ನು ಸಂಭ್ರಮಿಸುವ ಮಧ್ಯಮ ವರ್ಗದ ಉನ್ಮತ್ತರ ನಡುವೆಯೇ ಅಸಹಾಯಕರಂತೆ ಕಾಣುವ ಒಂದು ವರ್ಗವೂ ನಮ್ಮ ನಡುವೆ ಇದೆ. 136 ಕೋಟಿ ಜನಸಂಖ್ಯೆಗೆ ಅನ್ನ ಬೆಳೆಯುವ ರೈತ ಸಮುದಾಯ ತನ್ನ ನೆಲೆಯನ್ನು ಉಳಿಸಿಕೊಳ್ಳಲು 119 ದಿನಗಳಿಂದಲೂ ಹೋರಾಡುತ್ತಿದೆ.

ಮುಂಬರುವ ದಿನಗಳಲ್ಲಿ ಈ ರೈತಾಪಿಯೊಡನೆ ಕಾರ್ಮಿಕ ವರ್ಗವೂ ಸೇರಿಕೊಳ್ಳುತ್ತದೆ. ಸಂಘಟಿತ/ಅಸಂಘಟಿತ ಕಾರ್ಮಿಕ ವಲಯ ದಿನದಿಂದ ದಿನಕ್ಕೆ ಅನಿಶ್ಚಿತತೆಯನ್ನೇ ಎದುರಿಸುತ್ತಿದ್ದು ದೇಶದ ಸಕಲ ಸಂಪನ್ಮೂಲಗಳೂ ಖಾಸಗಿ ಕಾರ್ಪೋರೇಟ್ ಬಂಡವಾಳಿಗರ ಪಾಲಾಗುತ್ತಿರುವ ಸಂದರ್ಭದಲ್ಲಿ ದುಡಿಯುವ ವರ್ಗಗಳ ನಾಳಿನ ಪ್ರಶ್ನೆ ಜಟಿಲವಾಗುತ್ತಿದೆ. ಏಪ್ರಿಲ್ 1 ರಿಂದ ಜಾರಿಯಾಗಲಿರುವ ಹೊಸ ಕಾರ್ಮಿಕ ಸಂಹಿತೆಗಳು ಶ್ರಮಜೀವಿಗಳ ಬದುಕುವ ಹಕ್ಕನ್ನೂ ಕಸಿದುಕೊಳ್ಳುವ ಕರಾಳ ಅಧ್ಯಾಯವನ್ನು ತೆರೆಯಲಿವೆ.

ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಜೀವನೋಪಾಯದ ರಕ್ಷಣೆಗಾಗಿ ಉದ್ಯಮಗಳನ್ನು ಕಳೆದುಕೊಳ್ಳುವ ಸ್ವಾವಲಂಬಿ ಭಾರತ ಸತ್ತುಹೋಗಿದೆ. ಇಂದು ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ನಮ್ಮ ರಾಜಕೀಯ ವ್ಯವಸ್ಥೆ ಕಾರ್ಮಿಕರ ಹಿತಾಸಕ್ತಿಗಳನ್ನು ಬಲಿಕೊಡಲು ಸಿದ್ಧವಾಗಿದೆ. ಅಳಿವು ಉಳಿವಿನ ಪ್ರಶ್ನೆ ಎದುರಾದಾಗ ಸಹಜವಾಗಿಯೇ ಕಾರ್ಮಿಕರು ಇದ್ದುದರಲ್ಲಿ ತೃಪ್ತಿಪಟ್ಟುಕೊಳ್ಳುವ ಸಾಂಪ್ರದಾಯಿಕ ಬದುಕನ್ನು ಅಪ್ಪಿಕೊಂಡುಬಿಡುತ್ತಾರೆ.

ಈ ಜಟಿಲ ಸವಾಲುಗಳ ನಡುವೆಯೇ ಭಾರತದ “ ಪ್ರಗತಿಪರ-ಜನಪರ ” ಹೋರಾಟಗಳು, ಸಂಘರ್ಷದ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಮೂಲತಃ ಊಳಿಗಮಾನ್ಯ ಧೋರಣೆಯನ್ನೇ ಪ್ರತಿಪಾದಿಸುವ ರೈತ ಸಂಘಟನೆಗಳು ಒಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಹೊಸ ಆಯಾಮವನ್ನು ನೀಡಿರುವುದು ವಿಡಂಬನೆ ಎನಿಸಿದರೂ, ಚಾರಿತ್ರಿಕವೂ ಆಗಿದೆ. ಮುಂಬರುವ ದಿನಗಳ ಕಾರ್ಮಿಕ ಸಂಘರ್ಷಗಳಿಗೆ ಈ ರೈತ ಮುಷ್ಕರ ಸ್ಫೂರ್ತಿಯಾಗಲಿಕ್ಕೂ ಸಾಕು.

ಈ ಹೋರಾಟದ ಗರ್ಭದಲ್ಲೇ ನೂರಾರು ಜೀವನ್ಮುಖಿ ಸಂಘರ್ಷಗಳು ಅಡಗಿರುವುದನ್ನು ಗಮನಿಸುವುದು ಸಮಾಜೋ ಆರ್ಥಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವಕ್ಕಾಗಿ ಹಂಬಲಿಸುವ ಮನಸುಗಳ ಆದ್ಯತೆಯೂ ಆಗಬೇಕಿದೆ. ಏಕೆಂದರೆ ರೈತರ ಇಂದಿನ ಹೋರಾಟ ಸಮಸ್ತ ಜನತೆಯ ಹೋರಾಟವೂ ಆಗಿದೆ.

ಈ ನಡುವೆಯೇ ನಮ್ಮ ರಾಜಕೀಯ ಪ್ರಜಾಪ್ರಭುತ್ವದ ಸ್ಥಾವರಗಳು, ಸ್ತಂಭಗಳು ಕುಸಿಯುತ್ತಿವೆ. ಪ್ರಜಾತಂತ್ರದ ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮಗಳು ಈಗಾಗಲೇ ಕುಸಿದು ಭೂತಳಕ್ಕೆ ಸೇರಿರುವುದರಿಂದ ಉಳಿದ ಸ್ಥಾವರ-ಸ್ತಂಭಗಳನ್ನಾದರೂ ಉಳಿಸಿಕೊಳ್ಳುವ, ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ. ಈ ಸಾಂಸ್ಥಿಕ ಪ್ರಜಾಪ್ರಭುತ್ವದ ತಳಹದಿ ಭಾರತದ ಒಕ್ಕೂಟ ವ್ಯವಸ್ಥೆ. ಇಂದು ಒಕ್ಕೂಟ ವ್ಯವಸ್ಥೆಯೇ ಅಪಾಯದ ಅಂಚಿನಲ್ಲಿರುವುದನ್ನು ದೆಹಲಿ ಸರ್ಕಾರದ ಸುತ್ತಲಿನ ಬೆಳವಣಿಗೆಗಳಲ್ಲಿ ಕಾಣುತ್ತಿದ್ದೇವೆ.

ಸಂವಿಧಾನ ವಿಧಿ 370ನ್ನು ರದ್ದುಪಡಿಸಿ, ಜಮ್ಮು ಕಾಶ್ಮೀರ ರಾಜ್ಯದ ಭಾಗವಾಗಿದ್ದ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದಾಗಲೇ, ಭಾರತದ ಒಕ್ಕೂಟ ವ್ಯವಸ್ಥೆಗೆ ಸಂಚಕಾರ ಎದುರಾಗುವ ಸೂಚನೆಗಳು ದೊರೆತಿದ್ದವು. ಈಗ ದೇಶದ ರಾಜಧಾನಿಯಿಂದಲೇ ಈ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಿರುವ ದೆಹಲಿಯ “ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ” 2021 ಜಾರಿಯಾದರೆ ಬಹುಶಃ ಮುಂಬರುವ ದಿನಗಳಲ್ಲಿ ದೆಹಲಿಯ ಜನತೆ ಮತಗಟ್ಟೆಗಳಿಂದ ಶಾಶ್ವತವಾಗಿ ದೂರ ಉಳಿಯಬಹುದು. ಏಕೆಂದರೆ ದೆಹಲಿಯ ಪ್ರಜೆಗಳು ಚುನಾಯಿಸುವ ಸರ್ಕಾರದ ಯಾವುದೇ ನಿರ್ಧಾರಗಳು ಊರ್ಜಿತವಾಗಬೇಕಾದರೆ ಲೆಫ್ಟಿನೆಂಟ್ ಜನರಲ್ ಸಮ್ಮತಿ ಪಡೆಯಬೇಕಾಗುತ್ತದೆ.

ದೆಹಲಿಯ ವಿಧಾನಸಭೆ ಅಂಗೀಕರಿಸುವ ಯಾವುದೇ ಕಾಯ್ದೆಯಲ್ಲಿ ಉಲ್ಲೇಖವಾಗುವ ‘ಸರಕಾರ’ ಎನ್ನುವ ಪದವನ್ನು ‘ಲೆಫ್ಟಿನೆಂಟ್ ಗವರ್ನರ್’ ಎಂದೇ ಪರಿಭಾವಿಸಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಅಂದರೆ ದೆಹಲಿ ಸರ್ಕಾರ ಅನುಮೋದಿಸುವ ಯಾವುದೇ ಮಸೂದೆಗೆ ಅಂಗೀಕಾರ ನೀಡಲು ಲೆಫ್ಟಿನೆಂಟ್ ಗವರ್ನರ್ ನಿರಾಕರಿಸಬಹುದು ಅಥವಾ ರಾಷ್ಟ್ರಪತಿ ಕಚೇರಿಗೆ ರವಾನಿಸಬಹುದು. ಇನ್ನೂ ಆತಂಕಕಾರಿ ಅಂಶ ಎಂದರೆ ದೆಹಲಿಯ ಕಾರ್ಯಾಂಗ ಯಾವುದೇ ಕಾರ್ಯವನ್ನು ಕೈಗೊಳ್ಳುವ ಮುನ್ನ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಪಡೆಯಬೇಕಾಗುತ್ತದೆ.

ಕೇಂದ್ರಾಡಳಿತ ದೆಹಲಿಗೆ ವಿಶೇಷ ಸ್ಥಾನಮಾನ ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ಅನುಚ್ಚೇದ 293(ಎಎ)ನ್ನು ಆಧರಿಸಿ ತೀರ್ಪು ನೀಡಿತ್ತು. ಈ ಅನುಚ್ಚೇದವನ್ನು ಈವರೆಗೂ ತಿದ್ದುಪಡಿ ಮಾಡಲಾಗಿಲ್ಲ. ಹಾಗಾಗಿ ಇದರ ಅನ್ವಯ ರೂಪಿಸಲಾಗಿರುವ ದೆಹಲಿಯ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಯಾವುದೇ ಮಸೂದೆ ಅಸಾಂವಿಧಾನಿಕ ಮತ್ತು ಕಾನೂನುಬಾಹಿರವಾಗುತ್ತವೆ. ಕೇಂದ್ರ ಸರ್ಕಾರ ಈ ದುಸ್ಸಾಹಸಕ್ಕೆ ಕೈಹಾಕಿದೆ.

ಈ ತೀರ್ಪಿನ ಅನುಸಾರ ದೆಹಲಿ ಸರ್ಕಾರ ಜಾರಿಗೊಳಿಸುವ ಯಾವುದೇ ಕಾನೂನು ಕಾಯ್ದೆಗಳ ಬಗ್ಗೆ ಲೆಫ್ಟಿನೆಂಟ್ ಗವರ್ನರ್‍ಗೆ ಮಾಹಿತಿ ನೀಡಬೇಕಾಗುತ್ತದೆ. ಒಂದು ವೇಳೆ ಭಿನ್ನಾಭಿಪ್ರಾಯ ತಲೆದೋರಿದರೆ ಅದನ್ನು ರಾಷ್ಟ್ರಪತಿಯವರ ಸಮ್ಮತಿಗೆ ಕಳುಹಿಸುವ ಅವಕಾಶವೂ ಇರುತ್ತದೆ. ಆದರೆ ರಾಷ್ಟ್ರಪತಿಯವರ ಸಮ್ಮತಿ ಪಡೆಯುವುದು ಕೇವಲ ಅಪವಾದವಾಗಿರಬೇಕಷ್ಟೇ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಚುನಾಯಿತ ಜನಪ್ರತಿನಿಧಿಗಳು ಮತದಾರರಿಗೆ ಮತ್ತು ಸಾರ್ವಭೌಮ ಪ್ರಜೆಗಳಿಗೆ ಉತ್ತರದಾಯಿತ್ವ ಹೊಂದಿರುವುದು ಪ್ರಜಾತಂತ್ರದ ಲಕ್ಷಣವಾಗಿದ್ದು ಸರ್ಕಾರದ ಯಾವುದೇ ಯೋಜನೆ, ಕಾಯ್ದೆ ಕಾನೂನುಗಳನ್ನು ಜನರಿಂದ ಚುನಾಯಿತರಾದ ಪ್ರತಿನಿಧಿಗಳೇ ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಆದರೆ ಒಂದೆಡೆ ಸಂವಿಧಾನವನ್ನೂ ಮತ್ತೊಂದೆಡೆ ದೇಶದ ಸರ್ವೋಚ್ಚ ನ್ಯಾಯಾಲಯವನ್ನೂ ಧಿಕ್ಕರಿಸಿ ಕೇಂದ್ರ ಸರ್ಕಾರ ಹೊಸ ಮಸೂದೆಗೆ ಅಂಗೀಕಾರ ನೀಡಿದೆ.

ಕಳೆದ ಹಲವು ವರ್ಷಗಳಿಂದಲೂ ದೆಹಲಿಯಲ್ಲಿ ಅಧಿಕಾರ ಹಿಡಿಯಲು ಹೆಣಗಾಡುತ್ತಿರುವ ಬಿಜೆಪಿ ಈ ರೀತಿಯ ವಾಮಮಾರ್ಗದಿಂದ ತನ್ನ ಅಧಿಪತ್ಯ ಸಾಧಿಸಲು ಲೆಫ್ಟಿನೆಂಟ್ ಗವರ್ನರ್ ಕಚೇರಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಈ ಮಸೂದೆಯ ಬಗ್ಗೆ ಸಹಜವಾಗಿಯೇ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಇದು ಕೇವಲ ಒಂದು ಭೂ ಪ್ರದೇಶದ, ಪ್ರಾಂತ್ಯದ , ರಾಜ್ಯದ ಪ್ರಶ್ನೆಯಲ್ಲ. ಇದು ಭಾರತದ ಗಣತಂತ್ರ ವ್ಯವಸ್ಥೆಯ, ಒಕ್ಕೂಟ ವ್ಯವಸ್ಥೆಯ ಮತ್ತು ಸಾಂವಿಧಾನಿಕ ನಿಯಮಗಳ ಪ್ರಶ್ನೆ. ಇಂದು ದೆಹಲಿಯಲ್ಲಾದುದೇ ನಾಳೆ ಪಾಂಡಿಚೆರಿಯಲ್ಲಿ ಆಗಬಹುದು. ಅಲ್ಲಿಯೂ ಚುನಾವಣೆ ನಡೆಯಲಿದೆ, ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗದೆ ಹೋದರೆ ಅಲ್ಲಿಯೂ ಲೆಫ್ಟಿನೆಂಟ್ ಗವರ್ನರ್ ಆಳಲು ಅವಕಾಶ ಕಲ್ಪಿಸಬಹುದು. ಡಿಯು ಮತ್ತು ಡಮನ್, ಅಂಡಮಾನ್ ಮತ್ತು ನಿಕೋಬಾರ್, ಲಡಾಖ್ ಹೀಗೆ ಎಲ್ಲ ಕೇಂದ್ರಾಡಳಿತ ಪ್ರದೇಶಗಳೂ ವಸ್ತುಶಃ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಧಿಪತ್ಯಕ್ಕೆ ಒಳಪಡುವ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಮಸೂದೆಯನ್ನು ಆಡಳಿತ ಪಕ್ಷದಲ್ಲಿರುವ ಎಲ್ಲ ಸಂವಿಧಾನ ಪ್ರೇಮಿಗಳೂ ವಿರೋಧಿಸಬೇಕಿತ್ತಲ್ಲವೇ ? ಡಾ ಅಂಬೇಡ್ಕರ್ ಅವರ ಸಾಂವಿಧಾನಿಕ ಚಿಂತನಾ ವಾಹಿನಿಯಲ್ಲಿ ಪ್ರಮುಖವಾದ ತೊರೆಗಳೆಂದರೆ ಈ ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಹಾಗೂ ಇದಕ್ಕೆ ಪೂರಕವಾದ ಮೂಲಭೂತ ಹಕ್ಕುಗಳು. ತಮ್ಮ ಪಕ್ಷಕ್ಕೆ ನಿಷ್ಠೆಯಿಂದಿರಬೇಕು ಎನ್ನುವುದು ಎಲ್ಲ ರಾಜಕಾರಣಿಗಳ ಮೂಲ ಮಂತ್ರ , ಇದು ಸಹಜ. ಆದರೆ ಸಂವಿಧಾನವನ್ನೇ ಅಪಮೌಲ್ಯಗೊಳಿಸುವ ಕಾಯ್ದೆ ಕಾನೂನುಗಳನ್ನು ಜಾರಿಗೊಳಿಸಿದಾಗಲೂ ಸ್ವಾಮಿನಿಷ್ಠೆಯಿಂದಿರುವುದು ಅಧಿಕಾರ ದಾಹದ ದ್ಯೋತಕವಾಗಷ್ಟೇ ಕಾಣುತ್ತದೆ.

ಮುಂದೊಂದು ದಿನ ಬೆಳಗಾವಿ ವಿವಾದ ರಾಜಕೀಯ ಲಾಭ ನಷ್ಟಗಳ ಕೇಂದ್ರ ಬಿಂದುವಾದರೆ, ಬೆಳಗಾವಿ ಸುತ್ತಲಿನ ವಿವಾದಿತ ಪ್ರದೇಶಗಳನ್ನೂ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ, ಇದೇ ನಿಯಮವನ್ನು ಜಾರಿಗೊಳಿಸಬಹುದಲ್ಲವೇ ? ಒಂದು ರಾಜ್ಯದ ಭಾಗವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವ ಪರಂಪರೆಗೆ ಲಡಾಖ್ ನಾಂದಿ ಹಾಡಿದೆ ಅಲ್ಲವೇ ?

ಸಂವಿಧಾನ ಶಿಲ್ಪಿಗಳ ಸಾಮಾಜಿಕ ಪ್ರಜಾಪ್ರಭುತ್ವದ ಕನಸು ಕನಸಾಗಿಯೇ ಉಳಿದಿದೆ, ಈಗ ರಾಜಕೀಯ ಪ್ರಜಾಪ್ರಭುತ್ವದ ಕನಸೂ ಮಣ್ಣುಪಾಲಾಗುತ್ತಿದೆ. ಆರ್ಥಿಕ ಪ್ರಜಾಪ್ರಭುತ್ವದ ಕನಸು ಹಂತಹಂತವಾಗಿ ಅವಸಾನ ಕಾಣುತ್ತಿದೆ. ಈ ಹೊತ್ತಿನಲ್ಲೂ ದೇಶದ ಸುಶಿಕ್ಷಿತ ಹಿತವಲಯದ ವರ್ಗ ಉನ್ಮಾದದಿಂದ ಹೊರಬರದೆ ಇರುವುದು ಅಚ್ಚರಿ ಮೂಡಿಸುತ್ತದೆ. ಭಾರತ ಖಂಡಿತವಾಗಿಯೂ ಹೀಗಿರಲಿಲ್ಲ. “ ನಾನು ಅಂಬೇಡ್ಕರ್ ಅವರನ್ನೇ ಅನುಸರಿಸುತ್ತೇನೆ, ಅಂಬೇಡ್ಕರ್ ಹೊರತು ಮತ್ತಾರನ್ನೂ ಅನುಸರಿಸುವುದಿಲ್ಲ, ಅಂಬೇಡ್ಕರ್ ಹೇಳಿರುವುದೇ ಸತ್ಯ , ಸಂವಿಧಾನದ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದಾಗಿ ಪ್ರಮಾಣೀಕರಿಸುತ್ತೇನೆ ” ಎಂದು ನಿತ್ಯ ಭಜನೆ ಮಾಡುವ ನಮ್ಮ ಎಲ್ಲ ಜನಪ್ರತಿನಿಧಿಗಳು ತಮಗೆ ಸಂವಿಧಾನದ ಪರಿಜ್ಞಾನ ಇಲ್ಲ ಎಂದು ಒಪ್ಪಿಕೊಳ್ಳಲಿ ಅಥವಾ ಸಂವಿಧಾನದ ಬಗ್ಗೆ ಕೊಂಚಮಟ್ಟಿಗೆ ಅರಿವು ಇದ್ದರೂ ಇಂತಹ ಪ್ರಜಾತಂತ್ರ ವಿರೋಧಿ ಕಾನೂನು, ಕಾಯ್ದೆ, ಮಸೂದೆಗಳನ್ನು ವಿರೋಧಿಸಿ ದನಿ ಎತ್ತಲಿ. ಒಂದೆರಡು ಅವಧಿಯ ಅಧಿಕಾರದ ಸವಿಯುಂಡು ಜನಪ್ರತಿನಿಧಿಗಳು ಶಾಶ್ವತವಾಗಿ ಮಣ್ಣಾಗಿ ಹೋಗುತ್ತಾರೆ. ಇಂದಿನ ಪೀಳಿಗೆ ಮುಂದೊಂದು ದಿನ ಇಲ್ಲವಾಗುತ್ತದೆ.

ಆದರೆ ಪ್ರಜಾಸತ್ತಾತ್ಮಕ ಭಾರತ ಶಾಶ್ವತವಾಗಿ ಉಳಿದಿರಬೇಕಲ್ಲವೇ ? ಇಂದು ದೇಶದ ಸಾರ್ವಭೌಮ ಪ್ರಜೆಗಳು ವಿಶ್ವಾಸಪೂರ್ವಕವಾಗಿ ತಮ್ಮ ಪ್ರತಿನಿಧಿಗಳನ್ನು ಸಂಸತ್ತಿಗೆ, ವಿಧಾನಸಭೆಗಳಿಗೆ ಆಯ್ಕೆ ಮಾಡಿ ಕಳಿಸಿರುವುದು “ ಈ ದೇಶದ ಸಂವಿಧಾನ ಬಯಸುವಂತಹ ಪ್ರಜಾಪ್ರಭುತ್ವವನ್ನು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ” ಸಂರಕ್ಷಿಸಲೆಂದೇ ಅಲ್ಲವೇ ? ತಾವು ಅಲಂಕರಿಸಿರುವ ಅಧಿಕಾರಪೀಠಗಳು, ಸವಿಯುತ್ತಿರುವ ಸವಲತ್ತು ಸೌಲಭ್ಯಗಳು ಈ ದೇಶದ ಪ್ರತಿಯೊಬ್ಬ ಸಾರ್ವಭೌಮ ಪ್ರಜೆಯ ಆಸ್ತಿ ಎಂಬ ಪರಿವೆ ಜನಪ್ರತಿನಿಧಿಗಳಲ್ಲಿರಬೇಕಲ್ಲವೇ ? ಈ ಪರಿವೆ ಇಲ್ಲದಿರುವುದರಿಂದಲೇ ಭಾರತ ಅನಾಹುತಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇತ್ತ ಸಾಮಾಜಿಕ ಪ್ರಜಾಪ್ರಭುತ್ವವೂ ಇಲ್ಲದೆ ರಾಜಕೀಯ ಪ್ರಜಾಪ್ರಭುತ್ವವೂ ಇಲ್ಲದೆ ಸೊರಗುವಂತಾಗಿದೆ.

ಜನಪ್ರತಿನಿಧಿಗಳ ಮೇಲಿರುವಷ್ಟೇ ನೈತಿಕ, ಸಾಂವಿಧಾನಿಕ ಹೊಣೆ ಜನತೆಯ ಮೇಲೆಯೂ ಇರುತ್ತದೆ. ಕಳೆದ ಒಂದು ದಶಕದ ಉನ್ಮತ್ತ ರಾಜಕಾರಣಕ್ಕೆ ಬಲಿಯಾಗಿ ತಮ್ಮ ಸ್ವಪ್ರಜ್ಞೆಯನ್ನೇ ಕಳೆದುಕೊಂಡಂತಿರುವ ಒಂದು ಬೃಹತ್ ಮಧ್ಯಮ ವರ್ಗ ಮತ್ತು ಯುವ ಪೀಳಿಗೆ ತಮ್ಮ ಕಣ್ಣೆದುರಿನ ಅಪಾಯಗಳನ್ನು ಅರಿತುಕೊಳ್ಳಬೇಕಿದೆ. ಇವರ ಕಣ್ಣುಗಳಿಗೆ ಕವಿದಿರುವ ಪೊರೆಯನ್ನು ಕಳಚಿಹಾಕಲು ಜಾಗೃತಿ ಮೂಡಿಸುವ ಹೊಣೆಗಾರಿಕೆ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಸಕ್ರಿಯವಾಗಿರುವ ಸಂಘಟನೆಗಳ ಮೇಲೆಯೂ ಇದೆ. ಸಾಹಿತಿ ಕಲಾವಿದರು, ವಿಜ್ಞಾನಿಗಳು, ವಿದ್ಯಾರ್ಥಿ ಯುವಜನತೆ, ವೈದ್ಯಕೀಯ ಲೋಕ ಮತ್ತು ಮಣ್ಣ ಋಣಕ್ಕೆ ಬದ್ಧರಾದ ಪ್ರತಿಯೊಬ್ಬ ಪ್ರಜೆಯಲ್ಲೂ ಈ ಜಾಗೃತಿ ಮೂಡದೆ ಹೋದರೆ ಬಹುಶಃ ಭಾರತೀಯ ಪ್ರಜಾಪ್ರಭುತ್ವ ಎನ್ನುವ ಕಲ್ಪನೆಯೇ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾದ ಪಳೆಯುಳಿಕೆಯಾಗಿಬಿಡುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ

Published

on

~ಗೋವರ್ಧನ ನವಿಲೇಹಾಳು

ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ  ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.

ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು  ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ  ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ;  ಎಚ್ಚರಿಕೆಯೂ ಹೌದು.

ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.

ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.

ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.

ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.

ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.

ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ

ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.

ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.

ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.

ಸುದ್ದಿದಿನ | ವಾಟ್ಸಾಪ್ | 9980346243

Continue Reading

ದಿನದ ಸುದ್ದಿ

ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ

Published

on

ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು  ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.

ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

Continue Reading

Trending