ದಿನದ ಸುದ್ದಿ
ಸಂವಿಧಾನ ಸೃಷ್ಟಿಯ ಕತೆ..!
- ರಘೋತ್ತಮ ಹೊ.ಬ
Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು ಮೂವರು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಭಾರತಕ್ಕೆ ಕಳುಹಿಸಿದರು.
ಆ ಸಮಿತಿಯ ಹೆಸರು ‘ಕ್ಯಾಬಿನೆಟ್ ಮಿಷನ್ ಆಯೋಗ’. ಸದರಿ ಆಯೋಗವು 1946 ಮಾರ್ಚ್ 16 ರಂದು ‘ಭವಿಷ್ಯದ ಭಾರತದ ಸರ್ಕಾರಕ್ಕಾಗಿ ಒಂದು ಸಂವಿಧಾನ ರಚಿಸಲು ಸಂವಿಧಾನ ಸಭೆಯೊಂದನ್ನು ರಚಿಸುವ ಅಗತ್ಯವಿದೆ’ ಎಂದು ಘೋಷಿಸಿತು. ಅಂತೆಯೇ ಆ ಸಭೆ ಪ್ರಜಾಸತ್ತಾತ್ಮಕವಾಗಿರಬೇಕೆಂಬ ನಿಟ್ಟಿನಲ್ಲಿ ವಿವಿಧ ಪ್ರಾಂತ್ಯಗಳ ಅಸೆಂಬ್ಲಿಗಳ ಮೂಲಕ ಸದಸ್ಯರನ್ನು ಆರಿಸಲಾಯಿತು.
ಆ ಸಭೆಗೆ ಭಾರತದ ಪಶ್ಚಿಮದ ತುದಿ ಬಾಂಬೆ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಅಂಬೇಡ್ಕರರು ಅಂದಿನ ರಾಜಕೀಯ ಪಕ್ಷಗಳ ಅವಿಚ್ಛಿನ್ನ ವಿರೋಧದಿಂದ ಸೋಲಬೇಕಾಯಿತು. ಆದರೂ, ಎದೆಗುಂದದೆ ಪೂರ್ವದ ದೂರದ ಬಂಗಾಳದಿಂದ ಅಲ್ಲಿಯ ಪರಿಶಿಷ್ಟ ಜಾತಿಯ ನಾಯಕ ಜೋಗೇಂದ್ರನಾಥ ಮಂಡಲ್‍ರ ಬೆಂಬಲದ ಮೂಲಕ ಅವರು ಸಂವಿಧಾನ ಸಭೆಗೆ ಆರಿಸಿ ಬರುವಲ್ಲಿ ಸಫಲರಾರದು.
ಒಟ್ಟಾರೆ 296 ಸದಸ್ಯ ಬಲದ ಮೂಲಕ ಸಂವಿಧಾನ ಸಭೆ ತನ್ನ ಪ್ರಥಮ ಸಭೆಯನ್ನು 1946 ಡಿಸೆಂಬರ್ 6ರ ಬೆಳಿಗ್ಗೆ 11ಗಂಟೆಗೆ ನವದೆಹಲಿಯ ಕಾನ್‍ಸ್ಟಿಟ್ಯೂಶನ್ ಹಾಲ್‍ನಲ್ಲಿ ಆರಂಭಿಸಿತು.
ಸಭೆ ಆರಂಭವಾದಾಗ ಒಟ್ಟು 296 ಸದಸ್ಯರಲ್ಲಿ ಭಾಗವಹಿಸಿದ್ದು 207 ಮಂದಿಯಷ್ಟೆ. ಇನ್ನುಳಿದ ಮಂದಿ ಅಂದಿನ ಮುಸ್ಲಿಂಲೀಗ್‍ಗೆ ಸೇರಿದವರಾಗಿದ್ದು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ಅವರೆಲ್ಲ ಗೈರುಹಾಜರಾಗಿದ್ದರು. ಹೀಗಿದ್ದರೂ ಪಂಡಿತ್ ಜವಹರಲಾಲ್ ನೆಹರೂ “ಭಾರತ ಸಾರ್ವಭೌಮ ಸ್ವತಂತ್ರ ಗಣರಾಜ್ಯವಾಗಲು ತನ್ನ ಭವಿಷ್ಯದ ಸರ್ಕಾರಕ್ಕಾಗಿ ಅದು ತನ್ನದೇ ಆದಂತಹ ಸಂವಿಧಾನವೊಂದನ್ನು ಹೊಂದುವುದನ್ನು ಬಯಸುತ್ತದೆ” ಎಂದು ಗೊತ್ತುವಳಿಯೊಂದನ್ನು ಮಂಡಿಸಿದರು.
ಆದರೆ ಸದಸ್ಯರಾದ ಎಂ.ಆರ್.ಜಯಕರ್ “ಸಭೆಗೆ ಮುಸ್ಲಿಂ ಲೀಗ್ ಮತ್ತು ಇತರೆ ರಾಜ ಸಂಸ್ಥಾನಗಳ ಸದಸ್ಯರು ಗೈರುಹಾಜರಾಗಿರುವುದರಿಂದ ಅವರೆಲ್ಲ ಭಾಗವಹಿಸುವಂತಾಗಲು ಈ ಸಭೆಯನ್ನು ಮುಂದೂಡಬೇಕು” ಎಂದು ತಮ್ಮ ಆಕ್ಷೇಪವ್ಯಕ್ತಪಡಿಸಿದರು ಮತ್ತು ನೆಹರೂರವರು ಮಂಡಿಸಿದ್ದ ಆ ಗೊತ್ತುವಳಿಯ ಚರ್ಚೆಯನ್ನು ಮುಂದೂಡಲು ಸಭೆಯ ಕಲಾಪಕ್ಕೆ ತಿದ್ದುಪಡಿಯೊಂದನ್ನು ಮಂಡಿಸಿದರು.
ಗೌರವಾನ್ವಿತ ಸದಸ್ಯರ ಇಂತಹ ಆಕ್ಷೇಪ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಆಶ್ಚರ್ಯವೆಂದರೆ ಈ ಸಮಯದಲ್ಲಿ ಇಂತಹ ಅನಿರೀಕ್ಷಿತ ಕೋಲಾಹಲದ ನಡುವೆ ಮುಂದುವರಿದ ಸಭೆಯಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದ್‍ರವರು ಡಿಸೆಂಬರ್ 17 ರಂದು ಡಾ.ಅಂಬೇಡ್ಕರರನ್ನು ಸಭೆಯನ್ನುದೇಶಿಸಿ ಮಾತನಾಡಲು ಆಹ್ವಾನಿಸಿದರು.
ಸತ್ಯ ಹೇಳಬೇಕೆಂದರೆ ಯಾವ ಸಂವಿಧಾನ ಸಭೆ ನಿಂತುಹೋಗಬೇಕಿತ್ತೋ, ಅನಿರ್ದಿಷ್ಟ ಅವಧಿಗೆ ಮುಂದೂಡಬೇಕಾಗಿತ್ತೋ ಅದು ಮುಂದುವರಿಯಿತು! ಹೋಲಿಕೆ ಮಾಡುವುದಾದರೆ ಭಾರತದ ಸಂವಿಧಾನದ ಚಕ್ರ ಅಂಬೇಡ್ಕರರ ಮೂಲಕ ಉರುಳಲಾರಂಭಿಸಿತು! ಯಾಕೆಂದರೆ ತಮ್ಮ ಭಾಷಣದಲ್ಲಿ ಅಂಬೇಡ್ಕರರು ನೆಹರೂರವರು ಮಂಡಿಸಿದ್ದ ಗೊತ್ತುವಳಿಯ 8 ಅಂಶಗಳನ್ನು ಪದ ಪದವಾಗಿ, ಪದರು ಪದರಾಗಿ ಬಿಡಿಸಿ ಸಂವಿಧಾನ ಎತ್ತ ಸಾಗಬೇಕು, ಹೇಗಿರಬೇಕು ಎಂದು ವಿವಿಧ ರಾಷ್ಟ್ರಗಳ ಸಂವಿಧಾನಗಳನ್ನು ಉಲ್ಲೇಖಿಸುತ್ತಾ ಮಾರ್ಗ ತೋರಿಸಲಾಂಭಿಸಿ ಸಭೆಯನ್ನು ಗಂಭೀರತೆಯೆಡೆಗೆ ತಂದರು.
ಮುಸ್ಲಿಂಲೀಗ್ ಸದಸ್ಯರು ಗೈರಾಗಿದ್ದಕ್ಕೆ ಮುಂದಿನ ಸಭೆಯಲ್ಲಿ ಅವರು ಭಾಗವಹಿಸುತ್ತಾರೆ ಎಂಬ ಏಕತೆಯ ಆಶಾಭಾವ ವ್ಯಕ್ತಪಡಿಸುತ್ತಾ ಅಂಬೇಡ್ಕರರು “ವಿವಿಧ ಜಾತಿ-ಜನಾಂಗಗಳಾಗಿದ್ದಾಗ್ಯೂ ನಾವೆಲ್ಲಾ ಸದಾ ಒಂದಾಗಿರುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎಂದರು.
ಹೀಗೆ ತನ್ನ ಆರಂಭಿಕ ದಿನಗಳನ್ನು ಪ್ರಾರಂಭಿಸಿದ ಸಂವಿಧಾನಸಭೆ ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ 1947 ಜನವರಿ 24 ರಂದು ಅಂಬೇಡ್ಕರರನ್ನು ಒಳಗೊಂಡಂತೆ 50 ಜನ ಸದಸ್ಯರ ಸಲಹಾ ಸಮಿತಿಯೊಂದನ್ನು ನೇಮಿಸಿತು. ಆ ಸಮಿತಿ ಇತರೆ 4 ಪ್ರಮುಖ ಉಪಸಮಿತಿಗಳನ್ನು ನಿಯುಕ್ತಿಗೊಳಿಸಿತು. ಅವುಗಳಲ್ಲಿ ಬಹುಮುಖ್ಯದ್ದೆಂದರೆ ಮೂಲಭೂತ ಹಕ್ಕುಗಳ ಉಪಸಮಿತಿ ಮತ್ತು ಅಲ್ಪಸಂಖ್ಯಾತರ ಉಪಸಮಿತಿ.
ಅಂಬೇಡ್ಕರರು ಈ ಎರಡೂ ಪ್ರಮುಖ ಸಮಿತಿಗಳ ಸದಸ್ಯರಾದರು. ಮುಂದುವರಿದು ಸಭೆ ಇನ್ನೂ 3 ಕಾರ್ಯಾಚರಣಾ ಸಮಿತಿಗಳನ್ನು ರಚಿಸಿತು. ಅವುಗಳೆಂದರೆ ..
- ಕೇಂದ್ರ ಅಧಿಕಾರ ಸಮಿತಿ
- ಕೇಂದ್ರ ಸಂವಿಧಾನ ಸಮಿತಿ
- ಪ್ರಾಂತ್ಯಗಳ ಸಂವಿಧಾನ ಸಮಿತಿ
ಇಲ್ಲಿಯೂ ಅಷ್ಟೆ ಅಂಬೇಡ್ಕರ್ ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾದರು. ಹೀಗೆ ಅವರು ಪ್ರಮುಖ ಸಮಿತಿಗಳ ಸದಸ್ಯರಾಗುವುದಕ್ಕೆ ಕಾರಣವೂ ಇತ್ತು.
ಯಾಕೆಂದರೆ ಮುಂದೆ ಸಂವಿಧಾನ ಅರ್ಪಿಸುವ ಸಮಯದಲ್ಲಿ ಅವರೇ ಹೇಳಿಕೊಂಡಿರುವಂತೆ “ಪರಿಶಿಷ್ಟ ಜಾತಿಗಳ ಹಿತ ಕಾಯುವ ಮಹದಾಸೆ ಹೊತ್ತಷ್ಟೆ ತಾನು ಸಂವಿಧಾನ ಸಭೆಗೆ ಬಂದೆ…”. ಹೌದು, ಡಾ.ಅಂಬೇಡ್ಕರರು ಪರಿಶಿಷ್ಟರ ಹಿತ ಕಾಯುವ ನೆಪ ಮಾತ್ರಕ್ಕೆ ಬಂದರೂ ತಮಗರಿವಿಲ್ಲದಂತೆ ಅವರು ಇಡೀ ದೇಶದ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು! ಯಾವ ಪರಿ ಎಂದರೆ ಇಡೀ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯರಾಗುವ ಮಟ್ಟಿಗೆ. ಅದೂ ಅದೆಂತಹ ಸಕ್ರಿಯತೆಯೆಂದರೆ ಶತೃಗಳೂ ಮೆಚ್ಚಿ ಅಹುದಹುದು ಎನ್ನುವ ಮಟ್ಟಿಗೆ!
ಏಕೆಂದರೆ ಸಂವಿಧಾನ ರಚನೆಯ ಇಂತಹ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡು ಸ್ವಾತಂತ್ರ್ಯದ ಸಮಯದಲ್ಲಿ ದೇಶ ವಿಭಜನೆಯ ಸಂದರ್ಭ ಬಂದಾಗ ಅಂಬೇಡ್ಕರರು ಗೆದ್ದಿದ್ದ ಬಂಗಾಳದ ಕ್ಷೇತ್ರ ಕಾಂಗ್ರೆಸ್ಸಿಗರ ತಂತ್ರದಿಂದಾಗಿ ಪೂರ್ವ ಪಾಕಿಸ್ತಾನಕ್ಕೆ ಸೇರಲ್ಪಟ್ಟು ಅವರ ಸದಸ್ಯತ್ವ ರದ್ದಾಯಿತು. ಸೋಜಿಗವೆಂದರೆ ಈ ಸಮಯದಲ್ಲಿ ಅಂಬೇಡ್ಕರರ ಸಂವಿಧಾನ ರಚನಾ ಚಾಕಚಕ್ಯತೆ ಕೆಲಸ ಮಾಡಿತು.
ಹೇಗೆಂದರೆ ಸ್ವತಃ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದರು 1947 ಜೂನ್ 30 ರಂದು ಬಾಂಬೆ ಪ್ರಾಂತ್ಯದ ಅಂದಿನ ಪ್ರಧಾನಿ ಡಾ.ಬಿ.ಜಿ.ಖೇರ್ ರವರಿಗೆ ಪತ್ರ ಬರೆದು “ಬೇರೆ ವಿಷಯಗಳೇನೆ ಇರಲಿ, ಸಂವಿಧಾನ ಸಭೆ ಮತ್ತದರ ವಿವಿಧ ಉಪಸಮಿತಿಗಳಲ್ಲಿ ಅಂಬೇಡ್ಕರರ ಕಾರ್ಯ ಎಂತಹ ಮಟ್ಟದ್ದೆಂದರೆ, ಖಂಡಿತ ಅವರ ಸೇವೆಯನ್ನು ನಾವು ಕಳೆದುಕೊಳ್ಳಬಾರದು. ಅದಕ್ಕಾಗಿ ಜುಲೈ 14ರ ಮುಂದಿನ ಸಭೆಯೊಳಗೆ he should be relected”ಎಂದರು! (Dr.Ambedkar: The Principal Architect of The Constitution of India, Published by Government of India. Pp.26)
ಹೌದು, ಬಾಬಾಸಾಹೇಬರು ತಕ್ಷಣ ಮರು ಆಯ್ಕೆಯಾದರು. ಹಾಗೇ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಕೂಡ ಸಿಕ್ಕಿತು ಮತ್ತು ಅವರು ಸ್ವತಂತ್ರ ಭಾರತದಲ್ಲಿ ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಿ ಕೂಡ ನೇಮಕಗೊಂಡರು. ಅಂದಹಾಗೆ ಆಗಸ್ಟ್ 29ರಂದು ಮರುಸಮಾವೇಶಗೊಂಡ ಸಂವಿಧಾನಸಭೆ ಸಹಜವಾಗಿ ಕಾನೂನು ಸಚಿವರಾದ ಡಾ.ಅಂಬೇಡ್ಕರರನ್ನು “ಸಂವಿಧಾನ ಪ್ರತಿ ರಚಿಸುವ ಸಮಿತಿ (drafting committee)”ಯ ಅಧ್ಯಕ್ಷರನ್ನಾಗಿ ಆರಿಸಿತು. ಜೊತೆಗೆ ಆರು ಮಂದಿ ಸದಸ್ಯರ ತಂಡ. ಒಟ್ಟಾರೆ ಸಂವಿಧಾನ ಸಭೆಯ ಇಂತಹ ನಡಾವಳಿಗಳ ಮೂಲಕ ಭಾರತದ ಭವಿಷ್ಯ ಬರೆವ ಕೆಲಸ ಬಾಬಾಸಾಹೇಬರ ಮುಡಿಗೇರಿತು.
ಸಂವಿಧಾನ ರಚನೆಯ ಜವಾಬ್ದಾರಿಯೇನೋ ಅಂಬೇಡ್ಕರರ ಮುಡಿಗೇರಿತು. ಆದರೆ ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಪರಿ? ಖಂಡಿತ, ಅಂಬೇಡ್ಕರರು ಮತ್ತವರ ಸಂವಿಧಾನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಅವರು ಮತ್ತು ಇತರರು ಸಂವಿಧಾನ ಸಭೆಗಳಲ್ಲಿ ಮಾಡಿದ ಭಾಷಣಗಳಲ್ಲಿ ನಮಗೆ ಉಲ್ಲೇಖ ಸಿಗುತ್ತದೆ.
1949 ನವೆಂಬರ್ 25 ರಂದು ಡಾ.ಅಂಬೇಡ್ಕರರು ಸಂವಿಧಾನ ಸಮರ್ಪಿಸುತ್ತಾ ಮಾಡಿದ ಅಂತಿಮ ಭಾಷಣವನ್ನು ಉಲ್ಲೇಖಿಸುವುದಾದರೆ “ಮಾನ್ಯರೆ, ಸಂವಿಧಾನ ಸಭೆಯ ಕಾರ್ಯಕಲಾಪದ ಬಗ್ಗೆ ಹಿನ್ನೋಟ ನೋಡುವುದಾದರೆ 1946 ಡಿಸೆಂಬರ್ 9ರಿಂದ ಇಲ್ಲಿಯವರೆಗೆ ಸಂವಿಧಾನ ಸಭೆ ಸಮಾವೇಶಗೊಂಡು 2 ವರ್ಷ, 11 ತಿಂಗಳು, 17ದಿನಗಳು ಕಳೆಯುತ್ತಿವೆ. ಇದುವರೆಗೆ ಸಭೆ 11 ಸಮಾವೇಶಗಳನ್ನು ನಡೆಸಿದೆ.
ಈ 11 ಸಮಾವೇಶಗಳು 165 ದಿನಗಳನ್ನು ಬಳಸಿಕೊಂಡಿದೆ. ಈ 165 ದಿನಗಳಲ್ಲಿ 114 ದಿನಗಳನ್ನು ಸಭೆ ಕರಡು ಸಂವಿಧಾನವನ್ನು ಪರಿಗಣಿಸಲು ತೆಗೆದುಕೊಂಡಿದೆ. ಇನ್ನು ಕರಡು ಸಮಿತಿ ಅಥವಾ ಸಂವಿಧಾನ ರಚನಾ ಸಮಿತಿಯ ಬಗ್ಗೆ ಹೇಳುವುದಾದರೆ 1947 ಆಗಸ್ಟ್ 29 ರಂದು ಅದನ್ನು ಆಯ್ಕೆಮಾಡಲಾಯಿತು ಮತ್ತು ಅದು ತನ್ನ ಪ್ರಥಮ ಸಭೆಯನ್ನು 30ನೇ ಆಗಸ್ಟ್ ರಂದು ನಡೆಸಿತು. ಆಗಸ್ಟ್ 30 (1947) ರಿಂದ ಇಲ್ಲಿಯವರೆಗೆ ಸಮಿತಿ 141 ದಿನಗಳು ಸಭೆ ನಡೆಸಿ ಒಟ್ಟು ಈ ಅವಧಿಯನ್ನು ಕರಡು ಸಂವಿಧಾನವನ್ನು ತಯಾರಿಸಲು ಬಳಸಿಕೊಂಡಿದೆ” ಹೀಗೆ ವಿವರಿಸುತ್ತಾ ಹೋಗುತ್ತಾರೆ.
ಅಂದಹಾಗೆ ಬಾಬಾಸಾಹೇಬರ ನೇತೃತ್ವದ ಸಮಿತಿ ಸಿದ್ಧಪಡಿಸಿದ ಈ ಸಂವಿಧಾನ 1948 ಫೆಬ್ರವರಿ 26ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡಿತು ಮತ್ತು ಹಾಗೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನದ ಆ ಪ್ರತಿ ತನ್ನ ಆರಂಭದ ಪುಟದಲ್ಲಿ ರಚನಾ ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರು ಸಭೆಯ ಅಧ್ಯಕ್ಷರಿಗೆ ಬರೆದ ಪತ್ರವೊಂದನ್ನೂ ಕೂಡ ಒಳಗೊಂಡಿತ್ತು.
ಆ ಪತ್ರದ ಪ್ರಾರಂಭದ ಒಕ್ಕಣೆಯನ್ನು ಉಲ್ಲೇಖಿಸುವುದಾದರೆ “Dear Sir, On behalf of the Drafting Committee… I submit herewith the Draft of the new Constitution of India… I have been authorized to sign the Draft… Yours truly, B.R.AMBEDKAR”.
ಖಂಡಿತ, ಹೀಗೆ ಪ್ರತಿ ಅಕ್ಷರವನ್ನೂ ಉಲ್ಲೇಖಿಸುವ ಅಗತ್ಯವಿಲ್ಲ. ಆದರೂ ಕೆಲವು ಕೋಮುವಾದಿ ಕಿತಾಪತಿಗಳಿಸ್ಕೋರ ಇದನ್ನು ಉಲ್ಲೆಖಿಸಬೇಕಿದೆ. ಅಲ್ಲದೆ ಮತ್ತೊಂದು ಅಂಶವನ್ನು ಇಲ್ಲಿ ದಾಖಲಿಸಬೇಕಿದೆ. ಅದೆಂದರೆ ಫೆಬ್ರವರಿ 26, 1948 ರಂದು ಗೆಜೆಟ್‍ನಲ್ಲಿ ಪ್ರಕಟಗೊಂಡ ಭಾರತ ಸಂವಿಧಾನದ ಕರಡು ಪ್ರತಿ ಅಂಬೇಡ್ಕರರು ವಯಕ್ತಿಕವಾಗಿ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಸಮಿತಿಗೆ ತಮ್ಮ ಪಕ್ಷ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಪರವಾಗಿ ಮಾರ್ಚ್ 15, 1947 ರಂದು ಸಲ್ಲಿಸಿದ ಮನವಿಯ ಡಿಟೋ ಕಾಪಿಯಂತೇ ಇದೆ ಎಂಬುದು!
ಈ ನಿಟ್ಟಿನಲ್ಲಿ ಆಸಕ್ತರು ಅಂಬೇಡ್ಕರರ ಆ ಮನವಿಯನ್ನು ಅವರ ಬರಹಗಳು ಭಾಷಣಗಳ ಸಂಪುಟ 1ರಲ್ಲಿ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿರುವುದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಹೇಳಬಹುದು “ಭಾರತದ ಸಂವಿಧಾನ ಅಂಬೇಡ್ಕರರ ಮೆದುಳಿನ ಕೂಸು” ಎಂದು.
ಪ್ರಶ್ನೆಯೇನೆಂದರೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನ ಫೆಬ್ರವರಿ 26, 1948 ರಂದೇ ಜಾರಿಯಾಯಿತೇ? ಖಂಡಿತ ಇಲ್ಲ. ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಈ ದಿಸೆಯಲ್ಲಿ ಪ್ರಜೆಗಳ ಪ್ರತಿನಿಧಿಗಳ ನಡುವೆ ಅದು ಅಂದರೆ ಸಂವಿಧಾನ ಚರ್ಚೆಗೆ ಬರುವುದು ಬೇಡವೆ? ಹೌದು, 15 ನವೆಂಬರ್ 1948ರಲ್ಲಿ ಅನುಚ್ಛೇದ 1ರಿಂದ ಪ್ರಾರಂಭಿಸಿ 17 ಅಕ್ಟೋಬರ್ 1949ರವರೆಗೆ ಕೊನೆಯ ಅನುಚ್ಛೇದ ಅಂದರೆ ಅನುಚ್ಛೇದ 395ರವರೆಗೆ ಸಂವಿಧಾನ ಸಭೆ ಇಡೀ ಕರಡು ಸಂವಿಧಾನದ ಬಗ್ಗೆ ಭರಪೂರ ಚರ್ಚೆ ನಡೆಸಿತು.
ಆಶ್ಚರ್ಯ ಬೇಡ, ಈ ಇಷ್ಟೂ ದಿನಗಳಲ್ಲಿ ಪ್ರತಿಯೊಂದೂ ಅನುಚ್ಛೇದದ ಚರ್ಚೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಅಂಬೇಡ್ಕರರು ಗೌರವಾನ್ವಿತ ಸದಸ್ಯರ ಪ್ರತಿಯೊಂದು ಸಲಹೆಗೂ ಕಿವಿಯಾದರು ಮತ್ತು ಸಂಬಂಧಪಟ್ಟ ಅನುಚ್ಛೇದದ ಪದಪದದ ವಿವರಣೆ ನೀಡಿ ಸದಸ್ಯರ ಸಲಹೆಗಳನ್ನು ಗೌರವಯುತವಾಗಿ ಸ್ವೀಕರಿಸಿ ಅಗತ್ಯ ತಿದ್ದುಪಡಿಗಳನ್ನು ಅಂಗೀಕರಿಸಿದರು. ಈ ಸಂಬಂಧ ಅಂಬೇಡ್ಕರರು ನೀಡಿರುವ ಮಾಹಿತಿಯನ್ನೇ ದಾಖಲಿಸುವುದಾದರೆ “ಕರಡು ಸಂವಿಧಾನಕ್ಕೆ ಸೂಚಿಸಲಾದ ಒಟ್ಟು ತಿದ್ದುಪಡಿಗಳು 7635.
ಅವುಗಳಲ್ಲಿ ಅಂಗೀಕಾರಗೊಂಡಂತಹವು 2473”. ಒಟ್ಟಾರೆ ಇಂತೆಲ್ಲ ತಿದ್ದುಪಡಿಗಳ ನಂತರ 1949 ನವೆಂಬರ್ 17ರಂದು ಅಂತಿಮವಾಗಿ ಸಮಾವೇಶಗೊಂಡ ಸಂವಿಧಾನ ಸಭೆಯಲ್ಲಿ ಡಾ.ಅಂಬೇಡ್ಕರರು “ಅಧ್ಯಕ್ಷ ಮಹೋದಯರೇ, ಈ ಸಭೆ ಸ್ಥಿರೀಕರಿಸಿರುವ ಈ ಸಂವಿಧಾನವನ್ನು ಅಂಗೀಕರಿಸಬೇಕೆಂಬ ನಿರ್ಣಯವನ್ನು ನಾನು ಮಂಡಿಸುತ್ತೇನೆ” ಎನ್ನುತ್ತಿದ್ದಂತೆ ಇಡೀ ಸಭೆ ಹರ್ಷದ ಹೊನಲು ಹರಿಸಿ ಕರತಾಡನದೊಂದಿಗೆ ತನ್ನ ಒಪ್ಪಿಗೆ ಸೂಚಿಸಿತು. ಹಾಗೆಯೇ ಅಂಬೇಡ್ಕರರಿಗೆ ಅಭಿನಂದನೆಯ ಸುರಿಮಳೆಗಳು.
ಅವುಗಳಲ್ಲಿ ಒಂದಷ್ಟನ್ನು ದಾಖಲಿಸುವುದಾದರೆ ಮದ್ರಾಸಿನ ಮುನಿಸ್ವಾಮಿ ಪಿಳ್ಳೈ ಎಂಬುವವರು “ಪರಿಶಿಷ್ಟ ಜಾತಿಯು ನಂದನಾರ್, ತಿರುಪಳನಾಳ್ವರ್, ತಿರುವಳ್ಳುವರ್ ಹೀಗೆ ಶ್ರೇಷ್ಠ ಸಂತರನ್ನು, ಜ್ಞಾನಿಗಳನ್ನು ನೀಡಿದೆ. ನಿಸ್ಸಂಶಯವಾಗಿ ಡಾ.ಅಂಬೇಡ್ಕರರು ಅಂತಹವರ ಸಾಲಿಗೆ ಸೇರ್ಪಡೆಯಾಗುತ್ತಾರೆ. ಯಾಕೆಂದರೆ ಅವಕಾಶ ಸಿಕ್ಕರೆ ಪರಿಶಿಷ್ಟರು ಎಷ್ಟು ಎತ್ತರಕ್ಕೆ ಏರಬಲ್ಲರು ಎಂಬುದನ್ನು ಅಂಬೇಡ್ಕರರು (ತಮ್ಮ ಈ ಸಾಧನೆಯ ಮೂಲಕ) ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ”. ಇನ್ನು ಸೇಠ್ ಗೋವಿಂದದಾಸ್ ಎನ್ನುವವರು “ಡಾ.ಅಂಬೇಡ್ಕರರನ್ನು ‘ವರ್ತಮಾನ ಕಾಲದ ಮನು’ ಎನ್ನಬಹುದು” ಎನ್ನುತ್ತಾರೆ!
ಎಂ.ಅನಂತಶಯನಂ ಅಯ್ಯಂಗಾರ್ ಎನ್ನುವವರಂತೂ “ಯಾವ ವ್ಯಕ್ತಿ ನಮ್ಮನ್ನು ಟೀಕಿಸುವ ಮತ್ತು ಅನುಮಾನದಿಂದ ನೋಡುವ ಉದ್ದೇಶದಿಂದ ಸಭೆಗೆ ಬಂದರೋ, ಕಡೆಗೆ ಅವರೇ ಸಂವಿಧಾನದ ಹೊಣೆಹೊತ್ತುಕೊಂಡರು ಮತ್ತು ಅದನ್ನು ರಚಿಸಿದರು” ಎಂದರು! ಹಾಗೆ ಪಂಡಿತ್ ಠಾಕೂರ್ ದಾಸ್ ಭಾರ್ಗವ ಎಂಬುವವರು ಮಾತನಾಡುತ್ತಾ “ಡಾ.ಅಂಬೇಡ್ಕರರು ನಮ್ಮ ಹೃದಯಗಳಲ್ಲಿ ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ” ಎನ್ನುವ ಮೂಲಕ ತಮ್ಮ ಅಭೂತಪೂರ್ವ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರಿದು ಮತ್ತೋರ್ವ ಸದಸ್ಯರಾದ ಟಿ.ಪ್ರಕಾಶಂ‘”ತಮ್ಮ ಈ ಕಾರ್ಯದ ಮೂಲಕ ಡಾ.ಅಂಬೇಡ್ಕರರು ತಾವು ಗ್ರೇಟ್ ಬ್ರಿಟನ್ನಿನ ರಾಜನ ಸಲಹೆಗಾರನಾಗಿ ಅಲ್ಲಿಯ ಆಸ್ಥಾನ ವೂಲ್‍ಸ್ಯಾಕ್‍ನಲ್ಲಿ ಕುಳಿತುಕೊಳ್ಳುವಷ್ಟು ಸಮರ್ಥರು” ಎಂದು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಕಡೆಯದಾಗಿ ಶ್ರೀ ಹೆಚ್.ಜೆ.ಖಾಂಡೇಕರ್ ಎಂಬುವವರ ಹೇಳಿಕೆಯನ್ನು ದಾಖಲಿಸುವುದಾದರೆ “ಮಾನ್ಯರೆ, ನಾವು ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ.
ಹಾಗೆ ಈ ಕಾನೂನನ್ನು ನಾನು ಮಹಾರ್ ಕಾನೂನು ಎನ್ನಲಿಚ್ಚಿಸುತ್ತೇನೆ ಯಾಕೆಂದರೆ ಡಾ.ಅಂಬೇಡ್ಕರರು ಮಹಾರ್ ಸಮುದಾಯದವರು ಮತ್ತು ಮುಂದೆ 1950 ಜನವರಿ 26ರಂದು ಈ ಕಾನೂನು ಉದ್ಘಾಟನೆಗೊಂಡಾಗ ನಾವು ಮನುವಿನ ಕಾನೂನಿನ ಬದಲು ಮಹಾರರ ಕಾನೂನನ್ನು ಹೊಂದುತ್ತೇವೆ. ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ, ಆದರೆ ಮಹಾರರ ಕಾನೂನು, ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ… ನನಗೆ ಭರವಸೆ ಆ ಇದೆ”.
ಖಂಡಿತ, ಸಂವಿಧಾನ ದಿನಾಚರಣೆಯ ಈ ಶುಭ ದಿನದಂದು ಡಾ.ಖಾಂಡೇಕರರ ಭರವಸೆ ಎಲ್ಲರದ್ದಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿದ್ದಾರೆ.
ಎಸಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರೊಂದಿಗೆ ಐಮಂಗಲ ಸಮೀಪದ ಹರಳಯ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿಕ ಮಠಕ್ಕೆ ಶ್ರೀಗಳು ಬಂದಿದ್ದಾರೆಂದು ಭಾವಿಸಿ ಧೈರ್ಯ ಹೇಳಲು ಬಂದಿದ್ದೇನೆ. ಆದರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ಆರೋಗ್ಯ ಸ್ಥಿತಿ ಕುರಿತು ಕಳವಳ ವ್ಯಕ್ತವಾಗಿದೆ ಎಂದರು.
ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು ಎಲ್ಲ ಶೋಷಿತ, ದಲಿತ, ಹಿಂದುಳಿದ ವರ್ಗಗಳಿಗೆ ಧಾರ್ಮಿಕ ಸ್ಥಾನ ನೀಡಲು ಹಲವರಿಗೆ ದೀಕ್ಷೆ ನೀಡಿ, ಜಮೀನು ಸೇರಿ ಅಗತ್ಯ
ಸಹಕಾರ ನೀಡಿದ್ದು ಸ್ಮರಣೀಯ. ಆ ಸಂದರ್ಭದಲ್ಲಿ ಹರಳಯ್ಯ ಮಠ ಸ್ಥಾಪನೆಗಾಗಿ ಜಮೀನು ಖರೀದಿಸಲು ಹಣ ಕೊಟ್ಟಿದ್ದರು. ಆ ಹಣದಲ್ಲಿ ಭೂಮಿ ಖರೀದಿಸಿ ಮಠ, ಶಾಲೆ ನಿರ್ಮಿಸಲು ಬಸವ ಹರಳಯ್ಯ ಸ್ವಾಮೀಜಿ ಶ್ರಮಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಮಠ-ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಅತ್ಯಂತ ಶ್ರದ್ಧೆ, ಸವಾಲುಗಳ ಮಧ್ಯೆ, ಹಗಲು-ರಾತ್ರಿ ಶ್ರಮಪಟ್ಟು ಹರಳಯ್ಯ ಸ್ವಾಮೀಜಿ ಮಾಡಿದ್ದಾರೆ. ಸಮಾಜ ಕಲ್ಯಾಣ
ಸಚಿವನಾಗಿದ್ದ ವೇಳೆ 1 ಕೋಟಿ ರೂ. ಅನುದಾನ ಕೊಡಿದ್ದೇ. ಬಳಿಕ ಅಸ್ಥಿತ್ವಕ್ಕೆ ಬಂದ ಸರ್ಕಾರ ಹಾಗೂ ಭಕ್ತರು, ಜನರಿಗೆ ದೇಣಿಗೆ ಸಂಗ್ರಹಿಸಿ ಭವ್ಯವಾದ ಮಠ ನಿರ್ಮಿಸಿದ್ದಾರೆ.
ಸುತ್ತಮುತ್ತಲ ಬಡ ಮಕ್ಕಳಿಗಾಗಿ ಶಾಲೆ, ಸತ್ ಚಿಂತನೆ ಮೂಡಿಸಲು ಧಾರ್ಮಿಕ ಕಾರ್ಯಕ್ಕಾಗಿ ಸಭಾಂಗಣ ನಿರ್ಮಿಸಿದ್ದಾರೆ ಎಂದರು.
ಈ ಸಂದರ್ಭ ತಗ್ಗುಗುಂಡಿ ಆಗಿದ್ದ ಅನುಪಯುಕ್ತ ಎರಡು ಗುಂಟೆ ಜಮೀನು ಗೊಂದಲದಿಂದ ಒತ್ತುವರಿ ಆಗಿದೆ. ಈ ವಿಷಯಕ್ಕಾಗಿ ಹಲವು ಬಾರಿ ವ್ಯಕ್ತಿಯೊರ್ವ ಗಲಾಟೆ ಮಾಡಿದ್ದಾನೆ. ಗೊತ್ತಿಲ್ಲದೆ ಎರಡು ಗುಂಟೆ ಜಾಗ ಒತ್ತುವರಿ ಆಗಿದ್ದು, ತಪ್ಪು ನನ್ನಿಂದಲೇ ಆಗಿದೆಯೆಂದು ಶ್ರೀಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಜಾಗಕ್ಕೆ ಈಗಿನ ಮಾರುಕಟ್ಟೆ ಮೌಲ್ಯದಷ್ಟು ಹಣ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವ್ಯಕ್ತಿ ನಿರಾಕರಿಸಿದಾಗ ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡನ್ನು ಸ್ವಾಮೀಜಿ ಕೆಡವಿಸಿದ್ದಾರೆ. ಆದರೂ ಆ ವ್ಯಕ್ತಿ ದ್ವೇಷ ಮುಂದುವರಿಸಿದ್ದು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ
ಮಾರಾಣಾಂತಿಕ ಹಲ್ಲೆ ನಡೆಸಿದ್ದು, ದೂರು ಕೊಡಲು ಠಾಣೆಗೆ ತೆರಳಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಕಾಲಿನಿಂದ ಸ್ವಾಮೀಜಿ ಎದೆಗೆ ಒದ್ದಿದ್ದಾನೆ ಎಂದರು.
ಧಾರ್ಮಿಕ ನೇತಾರರನ್ನು ಗೌರವಿಸುವ ನಾಡು ಭಾರತ. ಇಂತಹ ಸಂದರ್ಭ ಖಾವಿಧಾರಿಯೊಬ್ಬರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂಧಿಸಿರುವುದು ಎಚ್ಚರಿಕೆ
ಗಂಟೆಯಾಗಿದೆ. ಈ ದುಷ್ಕೃತ್ಯವನ್ನು ನಾಡಿನ ಎಲ್ಲ ಮಠಾಧೀಶರು ಖಂಡಿಸಬೇಕು, ಸ್ವಾಮೀಜಿಗೆ ನೈತಿಕವಾಗಿ ಬೆಂಬಲಿಸಬೇಕು. ಇಲ್ಲದಿದ್ದರೇ ಇಂತಹ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದ ಮೂವರನ್ನು ಮಟ್ಟಹಾಕುವ ಶಕ್ತಿ ನಮ್ಮಲ್ಲೂ ಇದೆ. ಆದರೆ, ನಾವು ವಾಮಮಾರ್ಗದಲ್ಲಿ ಸಾಗುವವರಲ್ಲ, ಕಾನೂನು ಪರಿಪಾಲಕರು. ನಮ್ಮ ಹಕ್ಕೋತ್ತಾಯ ಬಸವ
ತತ್ವದಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ಭೀತಿ ಹುಟ್ಟಿಸುವಂತದ್ದಾಗಿದೆ. ಈ ಕುರಿತು ತಕ್ಷಣವೇ ಎಲ್ಲ ಮಠಾಧೀಶರು, ಧರ್ಮಗಳ ಪ್ರತಿಪಾದಕರು ಖಂಡಿಸಬೇಕು ಎಂದು ಕೋರಿದರು.
ಈಗ ಯಾವುದೇ ಕಾರಣಕ್ಕೂ ಸಂಧಾನ-ಚರ್ಚೆ ಅಗತ್ಯವಿಲ್ಲ. ಮಠದ ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾನೇ ಸ್ವಂತವಾಗಿ ಭರಿಸುತ್ತೇನೆ. ತಕ್ಷಣ ಅಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕೆಂದು ಆಂಜನೇಯ ಆಗ್ರಹಿಸಿದರಲ್ಲದೇ ಒಂದು ವೇಳೆ ಭೂಮಿ ಯಾರದ್ದಾಗಿದ್ದರೇ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ನೀಡಬಹುದು. ಈ ನಿಟ್ಟಿನಲ್ಲಿ ನಾನು ತಗಲುವ ಸಂಪೂರ್ಣ ವೆಚ್ಚ ಭರಿಸುವೆ ಎಂದು ತಿಳಿಸಿದರು.
ಐಮಂಗಲ ಸುತ್ತಮುತ್ತಲ ಗ್ರಾಮಗಳ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಅನಾಥಾಲಯ ಸ್ಥಾಪನೆಯ ಸದುದ್ದೇಶ ಹೊಂದಿರುವ ಶ್ರೀಗಳ ಮೇಲೆ ಹಲ್ಲೆ ಇಡೀ ಧಾರ್ಮಿಕ ಮುಖಂಡರಿಗೆ ಮಾಡಿರುವ ಅಪಮಾನ ಮತ್ತು ಅವರಲ್ಲಿ ಭೀತಿ ಸೃಷ್ಠಿಸುವಂತದ್ದಾಗಿದೆ. ಆದ್ದರಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣವೇ ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಜೊತೆಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸಿ ಕಾಂತರಾಜ್, ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಹಾಗೂ ಗ್ರಾಮದ ಹಿರಿಯರು
ಉಪಸ್ಥಿತರಿದ್ದರು.
*ಪೋಟೊ ಕ್ಯಾಪ್ಷನ್* ಐಮಂಗಲದ ಹರಳಯ್ಯ ಗುರುಪೀಠಕ್ಕೆ ಶುಕ್ರವಾರ ಸಂಜೆ ಮಾಜಿಸಚಿವ ಎಚ್.ಆಂಜನೇಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ದಿನದ ಸುದ್ದಿ
ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
ಮುಖ್ಯಾಂಶಗಳು
ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ
ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ
ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್
ಸುದ್ದಿದಿನ,ದಾವಣಗೆರೆ: ತಾಲೂಕು ಪಂಚಾಯಿತಿಯ 2022-23ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಖರೀದಿ ವ್ಯವಹಾರದಲ್ಲಿ ನಿಯಮ ಉಲ್ಲಂಘಿಸಿ, ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಬೆನ್ನತ್ತಿರುವ ಲೋಕಾಯುಕ್ತ ಸಂಸ್ಥೆಯು ತನಿಖೆಯನ್ನು ತೀವ್ರಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ಅಧಿಕಾರಿಗಳು ಜುಲೈ 7 ರಿಂದ 10 ರವರೆಗೆ ಜಿಲ್ಲೆಯಲ್ಲಿ ಬೀಡುಬಿಡಲಿದ್ದು, ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.
ನಿಯಮ ಗಾಳಿಗೆ: ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ– ಕರ್ನಾಟಕ’ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಓಬಳೇಶ್ ಅವರು 2025ರ ಜನೆವರಿ 21ರಂದು ಲೋಕಾಯುಕ್ತಕ್ಕೆ ಈ ಕುರಿತು ಅಧಿಕೃತ ದೂರು ನೀಡಿದ್ದರು. 2022-23ನೇ ಸಾಲಿನಲ್ಲಿ ದಾವಣಗೆರೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಖರೀದಿಸುವಾಗ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಅಧಿಕೃತ ಮಾರಾಟಗಾರರಿಂದ ದರಪಟ್ಟಿ (ಕೊಟೇಷನ್) ಪಡೆಯದೆ, ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ತನಿಖೆ ಎದುರಿಸುತ್ತಿರುವವರು
ಶ್ರೀ ಎನ್.ಜೆ. ಆನಂದ್, ಕಾರ್ಯನಿರ್ವಾಹಕ ಅಧಿಕಾರಿ (ಇಒ), ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ನಾಗರಾಜ್ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ಚನ್ನಪ್ಪ ಎ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಜಿಲ್ಲಾ ಪಂಚಾಯತ್, ದಾವಣಗೆರೆ.
ಕಚೇರಿಯಲ್ಲಿ ತಪಾಸಣೆ
ದೂರಿನ ಅನ್ವಯ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ತನಿಖಾಧಿಕಾರಿ ಟಿ.ಸಿ. ಜಯರಾಮಯ್ಯ ಅವರು ತನಿಖಾ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಜುಲೈ 7 ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತನಿಖಾ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 10 ರವರೆಗೆ ಸರಣಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸ್ಥಳ ತನಿಖೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಿದ್ದು, ಪೂರಕ ದಾಖಲೆಗಳೊಂದಿಗೆ ಸಹಕರಿಸುವಂತೆ ದೂರುದಾರರಿಗೂ ನೋಟಿಸ್ ನೀಡಲಾಗಿದೆ.
ಜಿಲ್ಲೆಯ ಪ್ರಭಾವಿ ಅಧಿಕಾರಿಗಳೇ ಲೋಕಾಯುಕ್ತ ತನಿಖೆಯ ಬಿಸಿಗೆ ಸಿಲುಕಿರುವುದು ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ತಿಳಿಸಿದರು.
ಅವರು ಸೋಮವಾರ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲೂ ಕೂಡ ಸಾಮೂಹಿಕವಾಗಿ ಫಾರಂ ವಿತರಣೆ ಮಾಡುತ್ತಿಲ್ಲ ಮತ್ತು ಮಾಡುವುದೂ ಇಲ್ಲ, ಕೆಲವು ಬೂತ್‌ಗಳಲ್ಲಿ ಸಾರ್ವಜನಿಕರೇ ಗುಂಪುಗೂಡಿ ಇಲ್ಲೇ ಫಾರಂ ನೀಡಿ ಎಂದು ಕೇಳಿರುವ ಉದಾಹರಣೆಗಳು ಇವೆಯೇ ಹೊರತು, ಇಲಾಖೆಯಿಂದ ಸಾಮೂಹಿಕ ವಿತರಣೆ ನಡೆದಿಲ್ಲ ಎಂದರು.
ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಲಿಖಿತ ಸೂಚನೆ ಹಾಗೂ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಅವರು ಕಡ್ಡಾಯವಾಗಿ ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡಿ ಫಾರಂಗಳನ್ನು ವಿತರಿಸುವರು. ಭೇಟಿ ನೀಡಿದ ನಂತರ ಮನೆಯ ಬಾಗಿಲಿನ ಮೇಲೆ ಕಡ್ಡಾಯವಾಗಿ ಸ್ಟಿಕ್ಕರ್ ಅಂಟಿಸಬೇಕೆಂದು ಆದೇಶಿಸಲಾಗಿದೆ. ಹಳ್ಳಿಗಳಲ್ಲಿ ಹಾಗೂ ಕೆಲವು ಕಡೆ ಸಾರ್ವಜನಿಕರು ತಮ್ಮ ಫಾರಂಗಳನ್ನು ಬೇಗ ಮಾಡಿಕೊಡಿ ಎಂದು ಬಿ.ಎಲ್.ಓಗಳ ಬಳಿ ಗುಂಪುಗೂಡುತ್ತಿರುವುದು ಕಂಡುಬಂದಿದೆ. ಆದರೆ, ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲು ನಮ್ಮ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಂಪೂರ್ಣ ತಂಡವು ಬಿ.ಎಲ್.ಓ.ಗಳಿಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 40 ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ನೇರವಾಗಿ ಈ ಸಹಾಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಫಾರಂಗಳನ್ನು ಭರ್ತಿ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಫಾರಂಗಳನ್ನು ಕಡ್ಡಾಯವಾಗಿ ಬಿ.ಎಲ್.ಓ.ಗಳಿಗೆ ಹಸ್ತಾಂತರಿಸಬೇಕು ಎಂದರು
ರಾಷ್ಟ್ರೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿ.ಎಲ್.ಎ (ಬೂತ್ ಮಟ್ಟದ ಏಜೆಂಟ್‌ಗಳು) ಸಾರ್ವಜನಿಕರಿಗೆ ಫಾರಂ ಭರ್ತಿ ಮಾಡಲು ಸಹಾಯ ಮಾಡಬಹುದು. ಅವರು ಮೊದಲ ಹಂತದಲ್ಲಿ ತಲಾ 50 ಫಾರಂಗಳನ್ನು ಸಂಗ್ರಹಿಸಿ, ಭರ್ತಿ ಮಾಡಿ ನಮ್ಮ ಬಿ.ಎಲ್.ಓ.ಗಳಿಗೆ ತಂದುಕೊಡಲು ಅವಕಾಶ ಕಲ್ಪಿಸಲಾಗಿದೆ. ಇದು ಗುಂಪಾಗಿ ಮಾಡುವುದಲ್ಲ, ಬದಲಿಗೆ ಮನೆ ಮನೆಗೆ ಹೋಗಿ ಬಿ.ಎಲ್.ಓಗಳ ಸಹಯೋಗದೊಂದಿಗೆ ಮಾಡುವ ಕಾರ್ಯವಾಗಿದೆ ಎಂದರು.
ಸಹಿ ಮಾಡುವ ಪ್ರಕ್ರಿಯೆಯು ಮತದಾರರದ್ದೇ ಆಗಿರುತ್ತದೆ. ಮೊಬೈಲ್ ಬಳಸಲು ಬಾರದ ಅನಕ್ಷರಸ್ಥರಿಗೆ ಅಥವಾ ತಾಂತ್ರಿಕ ತೊಂದರೆ ಇರುವವರಿಗೆ ಬಿ.ಎಲ್.ಓ ಹಾಗೂ ಬಿ.ಎಲ್.ಎ.ಗಳು ಸಹಾಯ ಮಾಡಲಿದ್ದಾರೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಅಡಿಯಲ್ಲೇ ನಮ್ಮ ಇಡೀ ತಂಡ ಕೆಲಸ ಮಾಡುತ್ತಿದೆ ಎಂದರು.
ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಶಿಫ್ಟ್ ಮಾಡಿಕೊಂಡಿರುವ ಮತದಾರರು, ತಮ್ಮ ಹೆಸರು ಕೈಬಿಟ್ಟು ಹೋಗುವ ಆತಂಕ ಪಡಬೇಕಾಗಿಲ್ಲ. ಅಂತಹ ಮತದಾರರು ‘ಫಾರಂ-8’ ಅನ್ನು ಸಲ್ಲಿಸುವ ಮೂಲಕ ತಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು ಎಂದರು.
ಈಗಾಗಲೇ ಮ್ಯಾಪಿಂಗ್ ಆಗಿರುವ ಮತದಾರರು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿರುವುದಿಲ್ಲ. ಒಂದು ವೇಳೆ ತಪ್ಪಾಗಿ ಮ್ಯಾಪಿಂಗ್ ಆಗಿದ್ದರೆ ಅಥವಾ ತಂದೆ-ತಾಯಿಯ ಹೆಸರುಗಳಲ್ಲಿ ತಪ್ಪುಗಳಾಗಿದ್ದರೆ, 2002ರ ಹಳೆಯ ವೋಟರ್ ಐಡಿ ವಿವರಗಳ ಆಧಾರದ ಮೇಲೆ ಬಿ.ಎಲ್.ಓ ಮೊಬೈಲ್ ಆಪ್ (BLO Mobile App) ಮೂಲಕ ತಿದ್ದುಪಡಿ ಹಾಗೂ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
18 ವರ್ಷ ತುಂಬಿರುವ ಅರ್ಹ ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದ ಫಾರಂಗಳನ್ನು ಪಡೆದು ಭರ್ತಿ ಮಾಡಬಹುದಾಗಿದೆ. ಇದಕ್ಕಾಗಿ ಸಾರ್ವಜನಿಕರು ಯಾರೂ ಮತಗಟ್ಟೆಗಳನ್ನಾಗಲಿ ಅಥವಾ ಬಿ.ಎಲ್.ಓಗಳನ್ನಾಗಲಿ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ, ನಾವೇ ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ ಎಂದು ತಿಳಿಸಿದರು.
ಅನಾಥಾಶ್ರಮಗಳಲ್ಲಿರುವ ಹಾಗೂ ತಂದೆ-ತಾಯಿಯರ ಮಾಹಿತಿ ಇಲ್ಲದವರಿಗೂ ಸಹ ಮತದಾನದ ಹಕ್ಕನ್ನು ಕಲ್ಪಿಸಲು ಚುನಾವಣಾ ಆಯೋಗವು ವಿಶೇಷ ಕ್ರಮ ಕೈಗೊಂಡಿದೆ. ಸರ್ಕಾರಿ ಅನಾಥಾಶ್ರಮವೊಂದರಲ್ಲಿರುವ 43 ಯುವಕರು 2025ನೇ ಇಸವಿಯಲ್ಲೂ ಮತದಾರರ ಪಟ್ಟಿಯಲ್ಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರವೇ ಅವರಿಗೆ ಪೋಷಕರಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರೆ ಅವರ ಅಧಿಕೃತ ಪೋಷಕರಾಗಿರುತ್ತಾರೆ ಎಂದರು.
ದೇವದಾಸಿಯರಂತಹ ಪ್ರಕರಣಗಳಲ್ಲಿ ತಂದೆಯ ವಿವರಗಳು ಲಭ್ಯವಿಲ್ಲದಿದ್ದರೆ, ತಾಯಿಯ ವಿವರಗಳನ್ನು ನೀಡಿ ಹೆಸರು ನಮೂದಿಸಲು ಅವಕಾಶವಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ತಂದೆ-ತಾಯಿ ಇಬ್ಬರೂ ಇಲ್ಲದಿದ್ದರೆ, ಅಂತವರು ತಮ್ಮ ಅಜ್ಜ ಅಥವಾ ಅಜ್ಜಿಯ ಹೆಸರನ್ನು ಸಂಬಂಧದ ಕಾಲಂನಲ್ಲಿ ನಮೂದಿಸಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗವು ಇಂತಹ ಎಲ್ಲಾ ಸವಾಲುಗಳಿಗೂ ಕಾನೂನಾತ್ಮಕವಾಗಿ ಹಾಗೂ ecinet ಮೊಬೈಲ್ ಆಪ್ ಮತ್ತು https://voters.eci.gov.in ಮೂಲಕ ಸೂಕ್ತ ಪರಿಹಾರವನ್ನು ಕಲ್ಪಿಸಿದೆ. ಹೀಗಾಗಿ ಯಾವುದೇ ಮತದಾರರು ಆತಂಕ ಪಡುವ ಅಗತ್ಯವಿಲ್ಲ. ಬಿ.ಎ.ಲ್.ಓ ಗಳು ಮನೆಗೆ ಬಂದಾಗ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸಾರ್ವಜನಿಕರು ಸ್ಪಂದಿಸಿ, ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಫಾರಂ ಹಂಚಿಕೆಯಲ್ಲಿ ರಾಜ್ಯದಲ್ಲೇ ದಾವಣಗೆರೆ ಜಿಲ್ಲೆಗೆ 2ನೇ ಸ್ಥಾನ; ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಪ್ರಗತಿಯಲ್ಲಿದ್ದು, ಜಿಲ್ಲಾದ್ಯಂತ ಒಟ್ಟಾರೆ ಶೇ. 94 ರಷ್ಟು ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಫಾರಂಗಳನ್ನು ಹಂಚಿಕೆ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದು ಅಭೂತಪೂರ್ವ ಸಾಧನೆ ಮಾಡಿದೆ. ಇದೇ ವೇಳೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಶೇ. 99.81 ರಷ್ಟು ದಾಖಲೆ ಪ್ರಮಾಣದ ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಪಾರಂಗಳನ್ನು ಅತ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಹಾಗೂ ಶೇ. 10.8 ರಷ್ಟು ಗಣಕೀಕರಣವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮನೆ ಮನೆ ಭೇಟಿ ಹಾಗೂ ಮಾಹಿತಿ ಸಂಗ್ರಹ ಪ್ರಗತಿಯಲ್ಲಿ
ದಾವಣಗೆರೆ ಜಿಲ್ಲೆಯಲ್ಲಿ ಜೂನ್ 16 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಇವರಿಗೆ ಸಂಬಂಧಿಸಿದ ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಮುದ್ರಿಸಿ ಬಿಎಲ್‌ಓಗಳಿಗೆ ವಿತರಿಸಲಾಗಿದೆ. ಜಿಲ್ಲಾದ್ಯಂತ ಜೂನ್ 06 ರಿಂದ ಜುಲೈ 29 ರ ಅವಧಿಯಲ್ಲಿ ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದು, ಇದೇ ಅವಧಿಯಲ್ಲಿ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಕಾರ್ಯವೂ ಪ್ರಗತಿಯಲ್ಲಿದೆ.
ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮತ್ತು ಪ್ರಗತಿ ವಿವರ
ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಬಿಎಲ್‌ಓಗಳು ಇದುವರೆಗೆ ಒಟ್ಟು 14,06,472 ಎನ್ಯುಮರೇಷನ್ ನಮೂನೆಗಳನ್ನು ವಿತರಿಸಿದ್ದು, 1,54,504 ನಮೂನೆಗಳನ್ನು ಗಣಕೀಕರಿಸಿದ್ದಾರೆ.
103-ಜಗಳೂರು: ಒಟ್ಟು 2,00,836 ಮತದಾರರಿದ್ದು, 1,88,446 ನಮೂನೆಗಳನ್ನು ವಿತರಿಸಲಾಗಿದ್ದು, 18,003 ನಮೂನೆಗಳನ್ನು ಗಣಕೀಕರಿಸಲಾಗಿದೆ. 105-ಹರಿಹರ: ಒಟ್ಟು 2,11,023 ಮತದಾರರಿದ್ದು, 2,06,550 ನಮೂನೆಗಳನ್ನು ವಿತರಿಸಲಾಗಿದ್ದು, 32,630 ನಮೂನೆಗಳನ್ನು ಗಣಕೀಕರಿಸಲಾಗಿದೆ. 106-ದಾವಣಗೆರೆ ಉತ್ತರ: ಒಟ್ಟು 2,58,718 ಮತದಾರರಿದ್ದು, 2,44,948 ನಮೂನೆಗಳನ್ನು ವಿತರಿಸಲಾಗಿದ್ದು, 7,120 ನಮೂನೆಗಳನ್ನು ಗಣಕೀಕರಿಸಲಾಗಿದೆ. 107-ದಾವಣಗೆರೆ ದಕ್ಷಿಣ : ಒಟ್ಟು 2,27,996 ಮತದಾರರಿದ್ದು, 194,785 ನಮೂನೆಗಳನ್ನು ವಿತರಿಸಲಾಗಿದ್ದು, 5,085 ನಮೂನೆಗಳನ್ನು ಗಣಕೀಕರಿಸಲಾಗಿದೆ. 108-ಮಾಯಕೊಂಡ: ಒಟ್ಟು 197,048 ಮತದಾರರಿದ್ದು, 196,486 ನಮೂನೆಗಳನ್ನು ವಿತರಿಸಲಾಗಿದ್ದು, 42,785 ನಮೂನೆಗಳನ್ನು ಗಣಕೀಕರಿಸಲಾಗಿದೆ. 109-ಚನ್ನಗಿರಿ ಒಟ್ಟು 2,03,628 ಮತದಾರರಿದ್ದು, 192,838 ನಮೂನೆಗಳನ್ನು ವಿತರಿಸಲಾಗಿದ್ದು, 36,531 ನಮೂನೆಗಳನ್ನು ಗಣಕೀಕರಿಸಲಾಗಿದೆ. 110- ಹೊನ್ನಾಳಿ ಒಟ್ಟು 2,00,033 ಮತದಾರರಿದ್ದು, 182,419 ನಮೂನೆಗಳನ್ನು ವಿತರಿಸಲಾಗಿದ್ದು, 12,350 ನಮೂನೆಗಳನ್ನು ಗಣಕೀಕರಿಸಲಾಗಿದೆ.
ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಮತದಾರರ ಗುರುತಿಸುವಿಕೆ ಪ್ರಗತಿ
ಜೂನ್ 6 ರಿಂದ ಜಿಲ್ಲೆಯಲ್ಲಿ ಮತದಾರರ ಎನ್ಯುಮರೇಷನ್ ಫಾರ್ಮ್ಸ್ ಹಂಚಿಕೆ ಹಾಗೂ ಮಾಹಿತಿ ಸಂಗ್ರಹಣೆಯ ವೇಳೆ ಒಟ್ಟು 1,707 ವಿವಿಧ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಟ್ಟು 30 ನಮೂನೆಗಳು ಸಂಗ್ರಹವಾಗದ/ಗೈರು ಹಾಜರಿ ಪ್ರಕರಣಗಳಾಗಿದ್ದು, 641 ಶಾಶ್ವತ ವಲಸೆ, 751 ಮರಣ ಹಾಗೂ 271 ದ್ವಿಪ್ರತಿ (Duplicate) ಪ್ರಕರಣಗಳಾಗಿವೆ.
ಜಗಳೂರು ಕ್ಷೇತ್ರದಲ್ಲಿ 122 ಪ್ರಕರಣಗಳನ್ನು ಗುರುತಿಸಲಾಗಿದ್ದು (2 ಗೈರು, 31 ಶಾಶ್ವತ ವಲಸೆ, 47 ಮರಣ, 40 ದ್ವಿಪ್ರತಿ, 2 ಇತರೆ), ಹರಿಹರ ಕ್ಷೇತ್ರದಲ್ಲಿ 149 ಪ್ರಕರಣಗಳು (2 ಗೈರು, 48 ಶಾಶ್ವತ ವಲಸೆ, 71 ಮರಣ, 26 ದ್ವಿಪ್ರತಿ, 2 ಇತರೆ), ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 246 ಪ್ರಕರಣಗಳು (5 ಗೈರು, 98 ಶಾಶ್ವತ ವಲಸೆ, 112 ಮರಣ, 31 ದ್ವಿಪ್ರತಿ), ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 235 ಪ್ರಕರಣಗಳು (6 ಗೈರು, 123 ಶಾಶ್ವತ ವಲಸೆ, 60 ಮರಣ, 44 ದ್ವಿಪ್ರತಿ, 2 ಇತರೆ), ಮಾಯಕೊಂಡ ಕ್ಷೇತ್ರದಲ್ಲಿ 337 ಪ್ರಕರಣಗಳು (4 ಗೈರು, 113 ಶಾಶ್ವತ ವಲಸೆ, 174 ಮರಣ, 45 ದ್ವಿಪ್ರತಿ,1 ಇತರೆ), ಚನ್ನಗಿರಿ ಕ್ಷೇತ್ರದಲ್ಲಿ 386 ಪ್ರಕರಣಗಳು (10 ಗೈರು, 139 ಶಾಶ್ವತ ವಲಸೆ, 167 ಮರಣ, 63 ದ್ವಿಪ್ರತಿ, 7 ಇತರೆ) ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 232 ಪ್ರಕರಣಗಳ (1 ಗೈರು, 89 ಶಾಶ್ವತ ವಲಸೆ, 120 ಮರಣ, 22 ದ್ವಿಪ್ರತಿ) ಗುರುತಿಸಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಗೂ ಮುನ್ನ ವಿವಿಧ ರಾಷ್ಟ್ರೀಯ ಪಕ್ಷಗಳೊಂದಿಗೆ ಸಭೆ ನಡೆಸಿದ್ದು, ರಾಷ್ಟ್ರೀಯ ಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಬಿ.ಎಲ್.ಎ ಗಳನ್ನು ನೇಮಕ ಮಾಡಿದ್ದು ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಪಾರಂಗಳನ್ನು ನಮೂದಿಸಿ ಬಿ.ಎಲ್.ಓ ಗಳಿಗೆ ನೀಡಲು ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಾರ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಉಪ ಕಾರ್ಯದರ್ಶಿ ಮಮತ ಹಸ ಗೌಡರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಪಾಲಿಕೆ ಆಯುಕ್ತ ಮಹಾಂತೇಶ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ7 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

