ದಿನದ ಸುದ್ದಿ
ಕಾರ್ಪೋರೇಟ್ ಬಾಹುಗಳಲ್ಲಿ ಭಾರತದ ದುಡಿಯುವ ವರ್ಗ
ಭವಿಷ್ಯದ ಬದುಕು ಮಸುಕಾಗುತ್ತಿದ್ದರೂ ಉನ್ಮಾದದಲ್ಲಿ ಮೈಮರೆಯುತ್ತಿರುವ ಶ್ರಮಜೀವಿಗಳ ನಡುವೆ
- ನಾ ದಿವಾಕರ
ಭಾರತ ಇಂದು ಮತ್ತು ನಾಳೆ ಮತ್ತೊಂದು ಮುಷ್ಕರಕ್ಕೆ ಮುಖಾಮುಖಿಯಾಗಲಿದೆ. ಮಾರ್ಚ್ 28-29ರ ಎರಡು ದಿನಗಳ ಸಾರ್ವತ್ರಿಕ ಮುಷ್ಕರದಲ್ಲಿ ದೇಶದ ಕೋಟ್ಯಂತರ ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ನವ ಉದಾರವಾದ, ಜಾಗತೀಕರಣ, ಖಾಸಗೀಕರಣ, ಉದ್ಯಮಗಳ ಕಾರ್ಪೋರೇಟೀಕರಣ ಮತ್ತು ಸಾರ್ವಜನಿಕ ಸ್ವತ್ತುಗಳ ಹರಾಜು ಪ್ರಕ್ರಿಯೆಯ ವಿರುದ್ಧ ದೇಶದ 56 ಕೋಟಿ ಶ್ರಮಜೀವಿಗಳ ಪೈಕಿ ಕನಿಷ್ಟ 20 ಕೋಟಿ ಜನರು ಈ ಎರಡು ದಿನಗಳ ಮುಷ್ಕರದಲ್ಲಿ ತಮ್ಮ ಪ್ರತಿರೋಧವನ್ನು ದಾಖಲಿಸಲಿದ್ದಾರೆ.
ಭಾರತ ಜಾಗತೀಕರಣ ನೀತಿಗಳನ್ನು ಒಪ್ಪಿಕೊಂಡ ದಿನದಿಂದ, ಕಳೆದ ಮೂರು ದಶಕಗಳಿಂದ, ಪ್ರತಿವರ್ಷ ನಡೆಯುತ್ತಿರುವ ಕಾರ್ಮಿಕರ ಸಾರ್ವತ್ರಿಕ ಮುಷ್ಕರ, ಡಿಜಿಟಲೀಕರಣ ಯುಗದಲ್ಲಿ ಮತ್ತಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ.
ಉದ್ಯೋಗದಲ್ಲಿರುವವರನ್ನು ಕಾಡುವಷ್ಟೇ ಅನಿಶ್ಚಿತತೆ, ಅಭದ್ರತೆ ಉದ್ಯೋಗಾಕಾಂಕ್ಷಿಗಳನ್ನೂ ಕಾಡುತ್ತಿರುವ ಈ ಸಂದರ್ಭದಲ್ಲಿ, ಕಾರ್ಮಿಕ ಸಮುದಾಯ ಏಕೆ ಬೀದಿಗಿಳಿದು ಹೋರಾಡುತ್ತಿದೆ ಎಂದು ಯೋಚಿಸುವ ವಿವೇಚನೆ, ವಿವೇಕವನ್ನೂ ಕಳೆದುಕೊಂಡಿರುವ ಈ ದೇಶದ ಹಿತವಲಯದ ಸುಶಿಕ್ಷಿತ ಸಮುದಾಯ, ಮತೀಯವಾದದ ಉನ್ಮಾದಕ್ಕೆ ಬಲಿಯಾಗಿ, “ಹಸಿದ ಹೊಟ್ಟೆಯಿಂದ ಅನ್ನ ಕಸಿಯುವ ” ಮತಾಂಧರ ಅಭಿಯಾನಕ್ಕೆ ಕೈಜೋಡಿಸುತ್ತಿದೆ.
ಈ ಅವನತಿಯ ವಾತಾವರಣದಲ್ಲೇ, ಅವಸಾನ ಹೊಂದುತ್ತಿರುವ ಸಾಮಾಜಿಕ ಪ್ರಜ್ಞೆ ಮತ್ತು ನಶಿಸಿಹೋಗುತ್ತಿರುವ ಮಾನವೀಯ ಸಂವೇದನೆಗಳನ್ನರಸುತ್ತಾ, ಈ ದೇಶದ ಕೋಟ್ಯಂತರ ಕಾರ್ಮಿಕರು ತಮ್ಮ ಇಂದಿನ ಮತ್ತು ಭವಿಷ್ಯದ ಹಾದಿಗಳತ್ತ ಕಣ್ಣಗಲಿಸಿ ನೋಡುತ್ತಿದ್ದಾರೆ.
ಬದುಕು ಕಟ್ಟಿಕೊಳ್ಳಲು ಲಭ್ಯವಿರುವ ಅವಕಾಶಗಳನ್ನೂ ಸಹ ಮತೀಯ ದ್ವೇಷದ ಜ್ವಾಲೆ ದಹಿಸುತ್ತಿರುವ ಸಂದರ್ಭದಲ್ಲಿ, ಮಲ್ಲಿಗೆ ಹೂ ಮಾರುವವರಿಂದ ಷಾಪಿಂಗ್ ಮಾಲ್ ಮಾಲೀಕರವರೆಗೆ ವ್ಯಾಪಿಸಿರುವ ದ್ವೇಷ ರಾಜಕಾರಣದ ವಿಷಜ್ವಾಲೆ, ಭಾರತೀಯ ಸಮಾಜದ ಅಂತಃಸತ್ವವನ್ನೇ ಭಸ್ಮ ಮಾಡುವ ನಿಟ್ಟಿನಲ್ಲಿ ಮುಂದುವರೆಯುತ್ತಿದೆ. ದುಡಿಯುವ ವರ್ಗಗಳಿಗೆ ತಮ್ಮ ನಿತ್ಯ ಬದುಕಿನ ಅನಿಶ್ಚಿತತೆಗಳು ಕಾಡುತ್ತಿರುವ ಸಂದರ್ಭದಲ್ಲೇ, ಸಣ್ಣ ಪುಟ್ಟ ಬೀದಿ ಬದಿ ವ್ಯಾಪಾರಿಗಳಿಗೆ, ಅವರ ಮತನಿಷ್ಠೆಯ ಕಾರಣಕ್ಕಾಗಿ, ಭವಿಷ್ಯದ ಹಾದಿಯನ್ನು ಮುಚ್ಚಲಾಗುತ್ತಿದೆ.
ಸಾಂಸ್ಕೃತಿಕ ರಾಷ್ಟ್ರೀಯತೆ, ಮತೀಯ ರಾಜಕಾರಣ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಹಿತಾಸಕ್ತಿಗಳು ಒಂದಾಗುತ್ತಿರುವ ಸಂದರ್ಭದಲ್ಲೇ ಭಾರತದ ಕೋಟ್ಯಂತರ ಶ್ರಮಜೀವಿಗಳು ತಮ್ಮನ್ನು ಆವರಿಸಿರುವ ಅಸ್ಮಿತೆಗಳ ಶೃಂಖಲೆಗಳಿಂದ ಮುಕ್ತಿ ಪಡೆಯಬೇಕಿದೆ. ಮಂದಿರ ಮಸೀದಿಯಿಂದ ಆರಂಭವಾದ ಕೋಮುವಾದ-ಮತಾಂಧತೆಯ ದಳ್ಳುರಿ ಇಂದು ಶಾಲಾ ಕಾಲೇಜುಗಳನ್ನು ದಾಟಿ, ಸಂತೆ ಮಾಳಕ್ಕೆ ಬಂದು ನಿಂತಿದೆ.
ಈ ವಿಷಪಂಜುಗಳು ಇಡೀ ವಾತಾವರಣವನ್ನು ಅತ್ಯುಷ್ಣವಲಯವನ್ನಾಗಿ ಮಾಡುತ್ತಿರುವ ಸಂದರ್ಭದಲ್ಲೇ, ಭಾರತದ 20 ಕೋಟಿ ಕಾರ್ಮಿಕರು ಕೆಂಬಾವುಟಗಳನ್ನು ಹಿಡಿದು ತಮ್ಮ ಭವಿಷ್ಯದ ಬೆಳಕು ಕಾಣಲು ತವಕಿಸುತ್ತಿದ್ದಾರೆ. ಇಂದು ಕೆಂಬಾವುಟಗಳನ್ನು ಹಿಡಿದು ಜಿಂದಾಬಾದ್ ಕೂಗುವ ಧ್ವನಿಗಳೇ ನಾಳೆ ಯಾವುದೋ ಒಂದು ಜಾತ್ರೆಯಲ್ಲಿ, ಸಂತೆ ಮಾಳದಲ್ಲಿ ಮುಸಲ್ಮಾನನೊಬ್ಬನ ಅಂಗಡಿಯನ್ನು ಧ್ವಂಸ ಮಾಡುವ ಕಾಲಾಳು ಆಗುವ ದುರಂತವನ್ನು ನಾವು ಎದುರಿಸುತ್ತಿದ್ದೇವೆ.
ಈ ದುರಂತದ ನಡುವೆಯೇ ಎರಡು ದಿನಗಳ ಸಾರ್ವತ್ರಿಕ ಮುಷ್ಕರದ ಕಾರಣಗಳನ್ನೂ ತಿಳಿದುಕೊಳ್ಳಬೇಕಿದೆ. ಜಾತಿ-ಮತದ ಅಸ್ಮಿತೆಗಳು, ಧಾರ್ಮಿಕ ಶ್ರದ್ಧೆ ನಂಬಿಕೆಗಳು ಒದಗಿಸುವ ಒಂದು ಭೌತಿಕ ಭೂಮಿಕೆಯ ಮೇಲೆ ಸ್ಥಿರವಾಗಿ ನಿಲ್ಲಬೇಕಾದರೆ, ಶಾರೀರಿಕ ಸ್ವಾಸ್ಥ್ಯ ಮತ್ತು ಸಾಮಥ್ರ್ಯಗಳೂ ಬೇಕು ಎನ್ನುವ ವಾಸ್ತವವನ್ನು ಇಂದಿನ ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕಿದೆ. ಈ ಸ್ವಾಸ್ಥ್ಯ ಮತ್ತು ಆತ್ಮ ಸ್ಥೈರ್ಯವನ್ನು ಗಳಿಸಲು ಒಂದು ಸುಭದ್ರ, ಸುರಕ್ಷಿತ ಆರ್ಥಿಕ ಬುನಾದಿಯೂ ಅತ್ಯಗತ್ಯ.
75 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತ ಈ ಬುನಾದಿಯನ್ನು ಒದಗಿಸಿದೆ. ಇಂದು ಎತ್ತರದ ವೇದಿಕೆಗಳಲ್ಲಿ ನಿಂತು ಸಮಾಜವಾದಿ ಆರ್ಥಿಕ ನೀತಿ ಮತ್ತು ಸಮ ಸಮಾಜದ ಪರಿಕಲ್ಪನೆಗಳನ್ನು ಅಪಹಾಸ್ಯ ಮಾಡುತ್ತಿರುವ ಕಾರ್ಪೋರೇಟ್ ಪೂಜಾರಿಗಳು ಇದೇ ಸಮಾಜವಾದಿ ಆರ್ಥಿಕ ನೀತಿಗಳ ಫಲಾನುಭವಿಗಳು ಅಲ್ಲವೇ ? ಏಳು ದಶಕಗಳ ಕಾಲ ಕೋಟ್ಯಂತರ ಶ್ರಮಜೀವಿಗಳು ಕಟ್ಟಿದ ಸುಭದ್ರ ಸೌಧಗಳನ್ನು ಹಂತಹಂತವಾಗಿ ಶಿಥಿಲಗೊಳಿಸುತ್ತಿರುವ ನರೇಂದ್ರ ಮೋದಿ ಸರ್ಕಾರ ಈಗ ಭಾರತದ ಸಮಸ್ತ ಸಂಪತ್ತು ಮತ್ತು ಸಂಪನ್ಮೂಲಗಳನ್ನೇ ಹರಾಜು ಮಾಡಲು ಸಜ್ಜಾಗುತ್ತಿದೆ. ಪ್ರಜಾತಂತ್ರ ಭಾರತದ ಪ್ರಬುದ್ಧ (?) ಮತದಾರರು ಈ ಹರಾಜು ಪ್ರಕ್ರಿಯೆಯನ್ನು ಅನುಮೋದಿಸುತ್ತಲೇ ಬಂದಿದ್ದಾರೆ.
ಈ ದೇಶದ ಭೌತಿಕ ಸಂಪತ್ತು ಇಲ್ಲಿನ ಶ್ರಮಜೀವಿಗಳ ದುಡಿಮೆಯ ಫಲ. ಇದು ಭಾರತದ ನಾಗರಿಕರ ಆಸ್ತಿ. ಬ್ರಿಟೀಷರಿಂದ ವಿಮೋಚನೆ ಪಡೆದ ಭಾರತ ಏಕ ಕಾಲಕ್ಕೆ ಅಂತಾರಾಷ್ಟ್ರೀಯ ಬಂಡವಾಳಶಾಹಿಯಿಂದಲೂ ಮುಕ್ತಿ ಪಡೆಯಲಿಲ್ಲವಾದರೂ, ಮಿಶ್ರ ಆರ್ಥಿಕ ನೀತಿಗಳನ್ನು ಅನುಸರಿಸುತ್ತಲೇ ಸಾರ್ವಜನಿಕ ಉದ್ದಿಮೆಗಳನ್ನು ಪೋಷಿಸಿ ಬೆಳೆಸಲಾಯಿತು.
ಔದ್ಯೋಗಿಕ ಕ್ಷೇತ್ರದಲ್ಲಿ, ಸೇವಾ ವಲಯದಲ್ಲಿ, ಹಣಕಾಸು ವಲಯದಲ್ಲಿ ಎಪ್ಪತ್ತು ವರ್ಷಗಳ ಭಾರತ ಸೃಷ್ಟಿಸಿದ ಬ್ಯಾಂಕ್, ವಿಮೆ, ಸಾರಿಗೆ, ಕೈಗಾರಿಕೆ ಮತ್ತು ತಯಾರಿಕಾ ವಲಯಗಳು ಇಂದು ಮುಕ್ತ ಮಾರುಕಟ್ಟೆಯಲ್ಲಿ ಹರಾಜಾಗುತ್ತಿವೆ. ಲಕ್ಷಾಂತರ ಕುಟುಂಬಗಳಿಗೆ ಜೀವನಾಡಿಯಾಗಿರುವ ರೈಲ್ವೆಯಂತಹ ಸಾರಿಗೆ ವ್ಯವಸ್ಥೆಯನ್ನೂ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುವ ಮೂಲಕ, ಕೋಟ್ಯಂತರ ಶ್ರಮಜೀವಿಗಳನ್ನು ಬೀದಿಪಾಲು ಮಾಡಲಾಗುತ್ತದೆ.
50 ವರ್ಷಗಳ ಕಾಲ ದೇಶದ ಮೂಲೆ ಮೂಲೆಗಳನ್ನು ತಲುಪಿ, ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಮೂಲಕ ತಳಮಟ್ಟದ ಜನಸಮುದಾಯಗಳಿಗೂ ಆರ್ಥಿಕ ಸ್ಥಿರತೆಯನ್ನು ತಂದು ಕೊಟ್ಟ ಸಾರ್ವಜನಿಕ ಬ್ಯಾಂಕುಗಳು, ತಮ್ಮ ಭವಿಷ್ಯದ ಬದುಕನ್ನು ನೆಮ್ಮದಿಯಿಂದ ಕಳೆಯಲು ಜನಸಾಮಾನ್ಯರಿಗೆ ನೆರವಾದ ಜೀವ ವಿಮಾ ನಿಗಮ ಇಂದು ಔದ್ಯಮಿಕ ಮೊಸಳೆಗಳಿಗೆ ಆಹಾರವಾಗಲಿವೆ.
ಮೂರು ಪೀಳಿಗೆಗಳನ್ನು ಸಲಹಿ, ಲಕ್ಷಾಂತರ ಜನರ ಬದುಕಿಗೆ ಸುಸ್ಥಿರತೆಯನ್ನು ತಂದುಕೊಟ್ಟ ಸಾರ್ವಜನಿಕ ಉದ್ದಿಮೆಗಳು ಒಂದೊಂದಾಗಿ ಅವಸಾನ ಹೊಂದುತ್ತಿವೆ. ಬಿಇಎಂಎಲ್, ಬಿಹೆಚ್‍ಇಎಲ್, ಹೆಚ್‍ಎಲ್, ಬಿಇಎಲ್, ಹೆಚ್‍ಎಂಟಿ, ನೌಕಾ ಸಾರಿಗೆಯ ಉದ್ದಿಮೆಗಳು, ಕಲ್ಲಿದ್ದಲು ಗಣಿಗಳು ಇಂದು ಜಾಗತಿಕ ಬಂಡವಾಳಶಾಹಿಗೆ ಬಲಿಯಾಗುತ್ತಿವೆ.
ತಮ್ಮ ಮತೀಯ ಅಸ್ಮಿತೆಯಿಂದಲೇ ವ್ಯಾಪಾರ ಮಾಡುವ ಅವಕಾಶಗಳನ್ನೂ ಕಳೆದುಕೊಳ್ಳುವ ದುರಂತ ಸನ್ನಿವೇಶವನ್ನು ಮುಸ್ಲಿಂ ವ್ಯಾಪಾರಿಗಳು ಎದುರಿಸುತ್ತಿರುವಾಗಲೇ, ವಾಲ್‍ಮಾರ್ಟ್‍ನಂತಹ ತಿಮಿಂಗಿಲಗಳು ಭಾರತದ ಮೂಲೆ ಮೂಲೆಗಳನ್ನೂ ತಲುಪುತ್ತಿದ್ದು, ಜನಸಾಮಾನ್ಯರ ದುಸ್ತರ ಬದುಕಿಗೆ ಸುಲಭವಾಗಿ ನಿಲುಕುವ ಕಿರಾಣಿ ಅಂಗಡಿಗಳನ್ನು ನುಂಗಿಹಾಕಲು ಬರುತ್ತಿದೆ.
ಜಾತ್ರೆಯಲ್ಲಿನ ಮುಸಲ್ಮಾನನೊಬ್ಬನ ಅಂಗಡಿಯನ್ನು ಎತ್ತಂಗಡಿ ಮಾಡುವ ಸಂಭ್ರಮದಲ್ಲಿರುವ ಹಿಂದೂ ವರ್ತಕನಿಗೆ ತನ್ನ ಅಡಿಪಾಯವೂ ಅಲುಗಾಡುತ್ತಿದೆ ಎಂಬ ಪ್ರಜ್ಞೆಯೇ ಇಲ್ಲದ ರೀತಿಯಲ್ಲಿ ಮತಾಂಧತೆಯ ಉನ್ಮಾದವನ್ನು ಹರಡಲಾಗುತ್ತಿದೆ. ಬಂಡವಾಳಶಾಹಿ ಪೋಷಿಸುವ ಮತ್ತು ಸಲಹುವ ವ್ಯಾಪಾರಿ ಧರ್ಮ ಸಣ್ಣ ಮೀನುಗಳನ್ನು ನಿರ್ದಾಕ್ಷಿಣ್ಯವಾಗಿ ನುಂಗಿನೀರುಕುಡಿಯುವ ತಿಮಿಂಗಿಲದಂತೆ ಎಲ್ಲರನ್ನೂ ಆವರಿಸುತ್ತಿದೆ. ಆದರೂ ಮತೀಯ ಉನ್ಮಾದಕ್ಕೆ ಬಲಿಯಾಗಿರುವ ಸುಶಿಕ್ಷಿತ ಸಮಾಜವೂ ಈ ಅಪಾಯವನ್ನು ನಿರ್ಲಕ್ಷಿಸುತ್ತಿದೆ.
ಯುವ ಪೀಳಿಗೆಯಲ್ಲಿ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಉದ್ಯೋಗ ಮಾರುಕಟ್ಟೆಯ ಸರಕುಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿರುವ ಒಕ್ಕೂಟ ಸರ್ಕಾರ, ಬೃಹತ್ ಸಂಖ್ಯೆಯ ಯುವ ಸಮುದಾಯ ತನ್ನ ನಾಳಿನ ಚಿಂತೆಗಳಲ್ಲಿ ಬಸವಳಿಯುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸುತ್ತಿದೆ. ಈಗಾಗಲೇ ಸುಭದ್ರ ನೌಕರಿ, ಸವಲತ್ತು, ಸೌಲಭ್ಯ ಮತ್ತು ಸುರಕ್ಷತೆಯ ವಾತಾವರಣದಲ್ಲಿ ದುಡಿಯುತ್ತಿರುವ ಸಂಘಟಿತ ವಲಯದ ಕಾರ್ಮಿಕರು, ತಮ್ಮ ಹಿಂದೆ ನಾಳಿನ ಚಿಂತೆಗಳ ಹೊತ್ತು ಸಾಲುಗಟ್ಟಿ ನಿಂತಿರುವ ಲಕ್ಷಾಂತರ ಯುವಕರತ್ತ ನೋಡದೆ ಹೋದರೆ, ಅವರು ಎತ್ತಿಹಿಡಿಯುವ ಕೆಂಬಾವುಟ ಮತ್ತು ಕಾರ್ಮಿಕ ಐಕ್ಯತೆಯ ಘೋಷಣೆಗಳು ವ್ಯರ್ಥಾಲಾಪವಾಗುತ್ತದೆ.
ವರ್ಗ ಪ್ರಜ್ಞೆಯನ್ನು ಬೆಳೆಸಿಕೊಳ್ಳದೆ ಕೇವಲ ಅರ್ಥಪ್ರಜ್ಞೆಯಲ್ಲೇ ತಮ್ಮ ಜೀವನವಿಡೀ ಕಳೆಯುವ ಸಂಘಟಿತ ಕಾರ್ಮಿಕರಲ್ಲಿ ಇನ್ನಾದರೂ ಹೊಸ ಪ್ರಜ್ಞೆ ಮೂಡಬೇಕಿದೆ. ತಾವು ಬದುಕುವ ಹಿತವಲಯದಿಂದಾಚೆಗೆ ಇರುವ ಒಂದು ಪ್ರಪಂಚ ಸಾಂಸ್ಕØತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ದುರಂತ ಅವಸಾನದತ್ತ ಸಾಗುತ್ತಿದೆ ಎನ್ನುವ ಸುಡುವಾಸ್ತವವನ್ನು ಕಾರ್ಮಿಕರು ಅರ್ಥಮಾಡಿಕೊಳ್ಳಬೇಕಿದೆ.
ಜಾತಿ, ಮತ, ಧರ್ಮ ಮತ್ತು ಮತೀಯ ಅಸ್ಮಿತೆಗಳ ಸಂಕೋಲೆಗಳಿಂದ ತಮ್ಮ ಭೌತಿಕ ಮತ್ತು ಬೌದ್ಧಿಕ ಪ್ರಜ್ಞೆಯನ್ನು ಶೋಷಕ ವರ್ಗಗಳಿಗೆ ಒತ್ತೆ ಇಟ್ಟಿರುವ ಹಿತವಲಯದ ಕಾರ್ಮಿಕ ಸಮುದಾಯ, ತಾವು ದಶಕಗಳ ಕಾಲ ಪೋಷಿಸಿ ಬೆಳೆಸಿರುವ ಬೃಹತ್ ಉದ್ದಿಮೆಗಳು, ಸಂಸ್ಥೆಗಳು ಕಾರ್ಪೋರೇಟ್ ತೋಳಗಳಿಗೆ ಆಹಾರವಾಗುತ್ತಿರುವುದನ್ನು ಗಮನಿಸಬೇಕಿದೆ.
ಈ ಕಾರ್ಪೋರೇಟ್ ತೋಳಗಳು ಕೃತಕ ಬುದ್ಧಿಮತ್ತೆಯ ಹೊಸ ಪ್ರಪಂಚವನ್ನೇ ನಿರ್ಮಿಸಿ “ಶ್ರಮಿಕ ರಹಿತ” ಅರ್ಥವ್ಯವಸ್ಥೆಯೊಂದನ್ನು ನಿರ್ಮಿಸಲು ಸಜ್ಜಾಗುತ್ತಿದೆ. ಡಿಜಿಟಲೀಕರಣದ ಆಕರ್ಷಣೆ ಮತ್ತು ಅಲಂಕಾರಿಕ ಅನುಕೂಲತೆಗಳಿಂದ ತಮ್ಮ ದೂರದೃಷ್ಟಿಯನ್ನೇ ಕಳೆದುಕೊಂಡಿರುವ ಒಂದು ಇಡೀ ಪೀಳಿಗೆ, ಈ ಕಾರ್ಪೋರೇಟ್ ತೋಳಗಳ ಗುಲಾಮಗಿರಿಗೊಳಪಟ್ಟು ಅನಿಶ್ಚಿತ ಬದುಕನ್ನೇ ಸ್ವೀಕರಿಸಬೇಕಿದೆ. ಈ ದುರಂತ ಭವಿಷ್ಯದ ಮುನ್ನೋಟದೊಂದಿಗೇ, ಇಂದಿನ “ಆತ್ಮನಿರ್ಭರ” ಭಾರತವನ್ನು ಕಾಡುತ್ತಿರುವ ನಿರುದ್ಯೋಗ ಮತ್ತು ಬಡತನವನ್ನೂ ಗಮನಿಸಬೇಕಿದೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ ಎಂದು ಬಿಂಬಿಸಲು ಹರಸಾಹಸ ಮಾಡುತ್ತಿರುವ ವಂದಿಮಾಗಧ ಮಾಧ್ಯಮ ಸಮೂಹಗಳು ಮತ್ತು ಮತಿಹೀನ ರಾಜಕೀಯ ನಾಯಕರುಗಳಿಗೆ ಢಾಳಾಗಿ ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳ ಸಾಲುಗಳು ಏಕೆ ಕಾಣುತ್ತಿಲ್ಲ ಎಂದು ಆಲೋಚನೆ ಮಾಡುವ ಕನಿಷ್ಠ ವಿವೇಕವಾದರೂ ಯುವಪೀಳಿಗೆಗೆ ಇರಬೇಕಲ್ಲವೇ ? ಕೆಲವು ಉದಾಹರಣೆಗಳನ್ನು ನೋಡೋಣ.
“ ಹಿಮಾಚಲ ಪ್ರದೇಶ ಸರ್ಕಾರ ಸೆಪ್ಟಂಬರ್ 2021ರಲ್ಲಿ ನಾಲ್ಕನೆ ದರ್ಜೆಯ 42 ಹುದ್ದೆಗಳಿಗೆ(ತೋಟದ ಮಾಲಿ, ಜವಾನ ಮತ್ತು ಅಡುಗೆ ಕೆಲಸ) ಅರ್ಜಿ ಆಹ್ವಾನಿಸಿದಾಗ ಸಲ್ಲಿಸಲಾದ ಅರ್ಜಿಗಳು 18 ಸಾವಿರ. ಇವರ ಪೈಕಿ ನೂರಾರು ಅರ್ಜಿದಾರರು ಸ್ನಾತಕೋತ್ತರ ಪದವೀಧರರು. ಪಾನಿಪಟ್‍ನ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇದ್ದ 13 ಕೆಳಹಂತದ ಹುದ್ದೆಗಳಿಗೆ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 27 ಸಾವಿರ, ಇವರಲ್ಲಿ ಬಹುತೇಕ ಅಭ್ಯರ್ಥಿಗಳು ಪದವೀಧರರು.
2018ರ ಆಗಸ್ಟ್‍ನಲ್ಲಿ ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ 62 ಸಂದೇಶವಾಹಕರ ಹುದ್ದೆಗೆ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 93 ಸಾವಿರ. ಇವರ ಪೈಕಿ 3700 ಪಿಹೆಚ್‍ಡಿ ಹೊಂದಿದವರು, 50 ಸಾವಿರ ಪದವೀಧರರು. ಇತ್ತೀಚೆಗೆ ರೈಲ್ವೆ ಇಲಾಖೆಯ ಕೆಳಹಂತದ 35 ಸಾವಿರ ಹುದ್ದೆಗಳಿಗೆ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 1 ಕೋಟಿ 25 ಲಕ್ಷ. ಇವರ ಪೈಕಿ ಬಹುಪಾಲು ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದವರು. ”
ಇದು ಏನನ್ನು ಸೂಚಿಸುತ್ತದೆ ? ಉನ್ನತ ವ್ಯಾಸಂಗ ಮಾಡಿದವರೂ, ಪದವಿ ಗಳಿಸಿದವರೂ, ಹಿತವಲಯದ ಯುವಕರೂ, ಕೌಶಲ್ಯದ ಅವಶ್ಯಕತೆ ಇಲ್ಲದ ಹುದ್ದೆಗಳ ಆಕಾಂಕ್ಷಿಗಳಾಗಿದ್ದಾರೆ. ಅಂದರೆ, ಈ ಕೆಳಹಂತದ ಹುದ್ದೆಗಳಿಗಾಗಿ ಹಂಬಲಿಸುವ ಅರೆ ಶಿಕ್ಷಿತ, ಅಶಿಕ್ಷಿತ ಗ್ರಾಮೀಣ ಯುವ ಪೀಳಿಗೆ ಕಲಿತವರೊಡನೆ ಪೈಪೋಟಿ ನಡೆಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕಾಗಿದೆ.
ಐದನೆಯ ತರಗತಿಯ ವಿದ್ಯಾರ್ಹತೆ ಸಾಕು ಎನಿಸುವಂತಹ ಉದ್ಯೋಗಗಳಿಗೆ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸುವ ಒಂದು ವಿಷಮ ಪರಿಸ್ಥಿತಿಯನ್ನು ಭಾರತ ಎದುರಿಸುತ್ತಿರುವುದು ಸುಡುವಾಸ್ತವ. ಈ ನಡುವೆ ಈಗಾಗಲೇ ಸುಸ್ಥಿರ ನೌಕರಿ ಹೊಂದಿರುವ ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕಿಂಗ್, ವಿಮೆ, ದೂರ ಸಂಪರ್ಕ ಮತ್ತು ಸಾರಿಗೆ ವಲಯದ ಲಕ್ಷಾಂತರ ಕಾರ್ಮಿಕರು ತಮ್ಮ ನಾಳೆಗಳ ಬಗ್ಗೆ ಆತಂಕದ ಕ್ಷಣಗಳನ್ನು ಎಣಿಸುವಂತಾಗಿದೆ. ಏತನ್ಮಧ್ಯೆ ಕೃಷಿ, ಗಣಿಗಾರಿಕೆ ಮತ್ತು ಅರಣ್ಯೋದ್ಯಮವನ್ನೂ ಸೇರಿದಂತೆ ನೈಸರ್ಗಿಕ ಸಂಪತ್ತಿನ ಮೇಲೆ ಕಾರ್ಪೋರೇಟ್ ಸಾಮ್ರಾಜ್ಯದ ಹಿಡಿತವನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ “ ಆತ್ಮನಿರ್ಭರಭಾರತದ” ಆರ್ಥಿಕ ನೀತಿಗಳು ದಾಪುಗಾಲು ಹಾಕುತ್ತಿವೆ.
ಈ ಅಪಾಯಗಳನ್ನು ಎದುರಿಸುತ್ತಲೇ ಭಾರತದ ಸಮಸ್ತ ಕಾರ್ಮಿಕ ವರ್ಗ ತಮ್ಮ ಹಕ್ಕೊತ್ತಾಯಗಳಿಗಾಗಿ ಮುಷ್ಕರ ನಡೆಸುತ್ತಿದೆ. ಒಂದು ತುಂಡು ವಸ್ತ್ರದ ಕಾರಣ ಹೆಣ್ಣುಮಕ್ಕಳ ಕತ್ತು ಹಿಸುಕುತ್ತಿರುವ ಕ್ರೂರ ಆಡಳಿತ ನೀತಿಯ ನಡುವೆಯೇ, ಒಂದು ಧರ್ಮವನ್ನವಲಂಬಿಸಿದ ಕಾರಣಕ್ಕೇ ತಮ್ಮ ಆದಾಯ ಮೂಲವನ್ನು ಕಳೆದುಕೊಳ್ಳುತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ಬದುಕಿನ ನಾಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಕಾರ್ಖಾನೆಗಳ ಗೇಟುಗಳ ಮುಂದೆ ನೌಕರಿಗಾಗಿ ಅಂಗಲಾಚುತ್ತಿರುವ ಲಕ್ಷಾಂತರ ಕಾರ್ಮಿಕರು, ತಾವು ಬೆಳೆದ ಫಸಲಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸುತ್ತಲೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವ ಲಕ್ಷಾಂತರ ರೈತರು, ತಾವು ಧರಿಸುವ ಒಂದು ತುಂಡುವಸ್ತ್ರದ ನಿಮಿತ್ತ ಶಾಲೆ ಪ್ರವೇಶಿಸಲಾಗದ ಸಾವಿರಾರು ಹೆಣ್ಣುಮಕ್ಕಳು, ತಮ್ಮ ಮತಶ್ರದ್ಧೆಯ ಕಾರಣಕ್ಕಾಗಿಯೇ ಸ್ವಂತ ದುಡಿಮೆಯ ನೆಲೆಯನ್ನು ಕಳೆದುಕೊಳ್ಳುತ್ತಿರುವ ಅಲ್ಪಸಂಖ್ಯಾತರು, ಭವಿಷ್ಯದ ಬದುಕಿಗಾಗಿ ಅರ್ಜಿಗಳನ್ನು ಕೈಯ್ಯಲ್ಲಿ ಹಿಡಿದು ನೌಕರಿಗಾಗಿ ಅಂಡಲೆಯುತ್ತಿರುವ ಕೋಟ್ಯಂತರ ಸಂಖ್ಯೆಯ ಯುವಸಮೂಹ ಈ ಹೊತ್ತಿನ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಇವರೆಲ್ಲರನ್ನೂ ಮತಾಂಧತೆಯ ಅಸ್ಮಿತೆಗಳಲ್ಲಿ ಬಂಧಿಸುವ ಮೂಲಕ ಸಂವೇದನೆಯನ್ನೇ ಕೊಲ್ಲುತ್ತಿರುವ ಮತಾಂಧ ಶಕ್ತಿಗಳು ನಿರ್ಭೀತಿಯಿಂದ ತಮ್ಮದೇ ಆದ ಸಾಮ್ರಾಜ್ಯವನ್ನು ನಿರ್ಮಿಸುತ್ತಿರುವ ಸಂದರ್ಭದಲ್ಲಿ, ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯನ್ನೂ, ನೈತಿಕ ಜವಾಬ್ದಾರಿಯನ್ನೂ ಮರೆತಂತೆ ವರ್ತಿಸುತ್ತಿರುವ ಜನಪ್ರತಿನಿಧಿಗಳು ಭಾರತವನ್ನು “ಅಮೃತ ಮಹೋತ್ಸವದ” ಹೊಳೆಯಲ್ಲಿ ತೇಲಿಸಲು ಯತ್ನಿಸುತ್ತಿದ್ದಾರೆ.
ಈ ಹೊಳೆಯಲ್ಲಿ ಮುಳುಗುತ್ತಾ ಉಸಿರುಗಟ್ಟುತ್ತಿರುವ ಕೋಟ್ಯಂತರ ಜನರ ಕೈಗಳಲ್ಲಿರುವ ಕೆಂಬಾವುಟಗಳು ಹೊಳೆ ನೀರಿನ ಮೇಲ್ಭಾಗದಲ್ಲಿ ಪಟಪಟನೆ ಹಾರಾಡುತ್ತಿರುವುದನ್ನು ಈ ಎರಡು ದಿನಗಳಲ್ಲಿ ಕಾಣಬಹುದು. ಪಟಪಟಿಸುವ ಈ ಬಾವುಟಗಳು ಮತ್ತು ಕಿವಿಗಡಚಿಕ್ಕುವ ಘೋಷಣೆಗಳು ಜನಜಾಗೃತಿಯನ್ನು ಮೂಡಿಸುವ ವಾಹಿನಿಗಳಾಗಿ ಪರಿವರ್ತನೆಯಾಗುವುದರಲ್ಲಿ ಈ ಮುಷ್ಕರದ ಯಶಸ್ಸನ್ನು ಕಾಣಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ5 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ2 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

