Connect with us

ದಿನದ ಸುದ್ದಿ

ನ್ಯಾಯಮೂರ್ತಿ ಅರಳಿ ನಾಗರಾಜ್ ಸರ್ ರವರ ಚಿತ್ತ ಜಾಗೃತ ಭಾರತದತ್ತ..!

Published

on

  • ಕೆ.ಶ್ರೀಧರ್ (ಕೆ.ಸಿರಿ)

“ಸಮಾಜದ ಋಣ ತೀರಿಸಲು ಆದರ್ಶ ನಾಗರೀಕರಾಗೋಣ;” ಎಂಬ ಅದ್ಭುತ ಸಂದೇಶ ಸಾರುವ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಸರ್ ರವರು ಕಂಡ ಭವ್ಯ ಭಾರತದ ಕನಸು.

ನಿಜಕ್ಕೂ ನಮ್ಮಂತಹ ಯುವಕರನ್ನು ಕೂಡಾ ನಾಚಿಸುವಂತದ್ದು “ದೇಶದ ಚಿತ್ತ ಯುವಜನರತ್ತ” ಎಂಬ ಪುಸ್ತಕವನ್ನು ಶ್ರೀಯುತ ಅರಳಿ ನಾಗರಾಜ ಸರ್ ರವರು ದಿನಾಂಕ 21/08/20201 ರಂದು ನಮ್ಮ ಮನೆಗೆ ಬಂದಾಗ ಶುಭಾಶಯಗಳೊಂದಿಗೆ ನೀಡಿದ್ದರು ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ದೇಶದ ಯುವ ಸಮುದಾಯಕ್ಕೆ ಸ್ಪಷ್ಟವಾದ ಸಂದೇಶ ನೀಡಿವ ಪುಸ್ತಕವಿದು.

ಯಶಸ್ಸಿನೆಡೆಗೆ ನಮ್ಮ ನಡಿಗೆ ಇಂದ ಆರಂಭವಾಗುವ ಈ ಪುಸ್ತಕ ನಮಗೆ ಆದರ್ಶ ಯಾರು? ಎಂಬ ಉಪ ಶೀರ್ಷಿಕೆಯೊಂದಿಗೆ ಮುಕ್ತಾಯವಾಗುತ್ತದೆ. ಬದುಕು ಎಂದರೆ ಬರಿ ಬದುಕುವುದಲ್ಲ ಸ್ಪಷ್ಟ ಗುರಿ, ಸಾಧಿಸುವ ಛಲ,ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಅಚಲವಾದ ಆತ್ಮವಿಶ್ವಾಸ,ಸಮಯದ ಸಾರ್ಥಕ ಬಳಕೆ ಈ ಸಪ್ತ ಸೂತ್ರಗಳು ಮಾತ್ರ ಗೆಲುವು ತಂದುಕೊಡಲು ಸಾಧ್ಯ.

ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರವರು ಹೇಳುವಂತೆ ಸೆಳೆತಗಳನ್ನು ಮೀರಿ ನಿಲ್ಲುವ ವ್ಯಕ್ತಿ ಮಾತ್ರ ಗುರಿಯನ್ನು ಸಾಧಿಸಬಲ್ಲ, ದೌರ್ಬಲ್ಯಗಳನ್ನು ಮೀರುವವರೆಗೂ ವ್ಯಕ್ತಿ ಪ್ರಬಲನಾಗುವುದಿಲ್ಲ. ಈ ಮಾತು ಅಕ್ಷರಶಃ ಸತ್ಯ ಯಾವುದೋ ಒಂದು ಸೆಳೆತಕ್ಕೆ ನಾವು ಒಳಗಾದರೆ ಬಂಧನಕ್ಕೊಳಗಾದಂತೆ.

ಪರಿಶ್ರಮ ಮೆಟ್ಟಿಲಿಂತೆ ಅದೃಷ್ಟ ಲಿಪ್ಟಿನಂತೆ ಲಿಫ್ಟ್ (ಅದೃಷ್ಟ) ಕೈಕೊಡಬಹುದು ಆದರೆ ಪರಿಶ್ರಮ (ಮೆಟ್ಟಿಲು) ಎಂದಿಗೂ ಕೈ ಕೊಡದು ತಾವು ಬದುಕಿದ ಆಧಾರದ ಮೇಲೆ ಶ್ರೀಯುತರು ಹೇಳಿದ್ದಾರೆ. ಬಸವಣ್ಣನವರ ವಚನಗಳ ಮೂಲಕ ಶರಣರ ತತ್ವಗಳನ್ನು ಪ್ರತಿಪಾದಿಸುವ ಮೂಲಕ ನಮ್ಮಲ್ಲಿರುವ ಸೋಮಾರಿತನವನ್ನು ಬಡಿದೆಬ್ಬಿಸುವಂತಿವೆ ಒಂದೊಂದು ಸಾಲುಗಳು.

ಯಶಸ್ಸಿನೆಡೆಗೆ ನಮ್ಮ ನಡಿಗೆ ಹಾಗೂ ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲ್ಯದಲ್ಲಿ ಸಕಾರಾತ್ಮಕ ಗುಣವಿಶೇಷಗಳು ಹಾಗೂ ನಕಾರಾತ್ಮಕ ಗುಣವಿಶೇಷಗಳು ಎರಡನ್ನೂ ತಮ್ಮದೇ ಆದ ದೃಷ್ಟಿಕೋನದಲ್ಲಿ ಚಿಂತಿಸಿದ ವಿವಿಧ ಮಜಲುಗಳನ್ನು ಓದುತ್ತಾ ಕುಳಿತರೆ ಶ್ರೀಯುತರ ಶಿಕ್ಷಣ ತಜ್ಞರಂತೆ ಕಾಣುತ್ತಾರೆ ನಿಜಕ್ಕೂ ಈ ಎಲ್ಲಾ ಅಂಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಮಕ್ಕಳ ಮನಸ್ಸಿನಲ್ಲಿಇಂತಹ ಗುಣಗಳನ್ನು ಬಿತ್ತಬೇಕು.

ಮುಂದುವರೆದು ಹೇಳುತ್ತಾ ಬರಿ ಅಂಶಗಳಿದ್ದರೆ ಸಾಲದು ಸಂವಹನ ಕೌಶಲ್ಯವೂ ಮುಖ್ಯ. ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ 62 ವರ್ಷ ಪೂರ್ಣಗೊಂಡ ನಂತರ ನಿವೃತ್ತನಾಗಬೇಕಿತ್ತು ಆದರೆ 61 ವರ್ಷ ಮುಗಿಯಲು ಒಂದೆರಡು ತಿಂಗಳು ಇರುವಾಗಲೆ ಸ್ವಯಂ ನಿವೃತ್ತಿ ಪಡೆದು ಅಂದಿನಿಂದಲೇ ರಾಜ್ಯಾದ್ಯಂತ ಸ್ವಂತ ಖರ್ಚಿನಲ್ಲಿ (ನನ್ನ ನಿವೃತ್ತಿ ವೇತನದಲ್ಲಿ) ಸಂಚರಿಸುತ್ತಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಯುವಜನರೊಂದಿಗೆ ಸಂವಾದಿಸುತ್ತಾ “ಯುವ ಜನರ ಚಿತ್ತವನ್ನು ದೇಶದತ್ತ ಹೊರಳಿಸುವ ಪ್ರಯತ್ನದಲ್ಲಿದ್ದೇನೆಂದು” ಮೃತ್ಯು ನಮ್ಮನ್ನಪ್ಪುವ ಮೊದಲೆ ಸಮಾಜದ ಋಣ ತೀರಿಸಬೇಕು ಎಂದು ಬರೆದಿರುವ ಶ್ರೀಯುತರ ಸಾಲುಗಳೇ ಹೇಳುತ್ತವೆ.

ಇವರ ಮನದಲ್ಲಿ ಜಾಗೃತ ಭಾರತವನ್ನು ಕಟ್ಟುವ ಇಂಗಿತವನ್ನು ಇದು ಕೇವಲ ಬರಹಕ್ಕೆ ಸೀಮಿತವಾಗದೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ನಾಡಿನಾದ್ಯಂತ ಸಂಚರಿಸಿ ತಮ್ಮ 70 ರ ಹರೆಯದಲ್ಲೂ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ ನಿಮಗೆ ಸಾವಿರದ ಶರಣು ಸರ್ ನಿವೃತ್ತಿಯಾಗುವವರೆಗೂ ಸಂಬಳ ಪಡೆದು ನಿವೃತ್ತಿ ವೇತನ ಪಡೆದು ಮೊಮ್ಮಕ್ಕಳ ಜೊತೆ ಕಾಲ ಕಳೆದು ಇಹಲೋಕ ತ್ಯಜಿಸುವವರ ಮಧ್ಯೆ ದೇಶದ ಯುವ ಸಮುದಾಯವನ್ನು ದೇಶಕಟ್ಟಬೇಕೆಂದು ಹುರಿದುಂಬಿಸುವ ಈ ಧೈರ್ಯ ಎಲ್ಲರಲ್ಲಿಯೂ ಬರುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ರಾಜಕಾರಣ ಮತ್ತು ಧರ್ಮ ರಾಜಕಾರಣ ಬಲು ಮುನ್ನಲೆಯಲ್ಲಿರುವ ವಿಷಯಗಳಾಗಿದ್ದು ಶ್ರೀಯುತರು ನಮ್ಮನ್ನ ಸ್ವಾತಂತ್ರ್ಯ ಪೂರ್ವ ಭಾರತದ ಸ್ಥಿತಿ ಗತಿಗಳು ಸ್ವಾತಂತ್ರ್ಯಾನಂತರದ ಭಾರತದ ಪರಿಸ್ಥಿತಿಯ ಬಗ್ಗೆ ಕನ್ನಡಿ ಹಿಡಿದಂತಿದೆ.

ಹಿಂದೆ ರಾಜಪ್ರಭುತ್ವದಲ್ಲಿ “ಯಥಾ ತಥಾ ಪ್ರಜಾ” ಎಂಬ ವಾಡಿಕೆಯಿತ್ತು ಆದರೆ ಅರಳಿ ನಾಗರಾಜ ಸರ್ ರವರ ಕನಸ್ಸಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ “ಯಥಾ ಮತದಾರ ತಥಾ ಜನ ಪ್ರತಿನಿಧಿ” ಅಂದರೆ “ಮತದಾರರಂತೆ ಜನಪ್ರತಿನಿಧಿಗಳು” ನಮಗೆ ಆದರ್ಶಪ್ರಾಯರಾದ ಜನಪ್ರತಿನಿಧಿಗಳು ನಾಯಕರು ಬೇಕೆಂದಾದಲ್ಲಿ ಮೊದಲು ನಾವು ಆದರ್ಶಪ್ರಾಯ ನಾಗರೀಕರಾಗಬೇಕು.

ಅದರಲ್ಲೂ ಗ್ರಾಮ, ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಆಡಳಿತ ನಡೆಸುವ ನಮ್ಮ ಜನಪ್ರತಿನಿಧಿಗಳು ‘ಎಂಥವರಾಗಬೇಕು?’ ಎಂಬುದನ್ನು ನಿರ್ಧರಿಸುವ ಅಂಶ ನಿಂತಿರುವುದು _”ಮತದಾನದ ಮಾರಾಟದಿಂದಲ್ಲ ನಮ್ಮ ಮತವನ್ನು ಮೌಲ್ಯಯುತ ದೇಶಾಭಿಮಾನದ ರಾಜಕಾರಣಿಗೆ ದಾನ ಮಾಡುವುರ”_ ನಿಂತಿದೆ.

ಸ್ವಾತಂತ್ರ್ಯ ಬಂದು 75 ದಶಕಗಳೆ ಕಳೆದರೂ ಭ್ರಷ್ಟಾಚಾರ, ಜಾತೀಯತೆ, ಅಪರಾಧ, ಅನೈತಿಕತೆ ಮುಂತಾದ ಅಪಮೌಲ್ಯಗಳೇ ಮೌಲ್ಯಗಳಾಗಿ ವಿಜೃಂಭಿಸುತ್ತಿವೆ ಎಂದು ತುಂಬಾ ನೋವಿನಿಂದ ಹೇಳಿದ್ದಾರೆ. ಎಲ್ಲಾ ಹಂತದ ಚುನಾವಣೆಗಳಲ್ಲೂ ಹಣಬಲ,ತೋಳ್ಬಲ,ಜಾತಿ ಬಲ,ಅಧಿಕವಾಗುತ್ತಾ ಬಂದು ಜನಪ್ರತಿನಿಧಿಗಳಾಗಲು ಯಾವುದೇ ಅರ್ಹತೆಗಳು ಇಲ್ಲದವರು ಕಾಳಧನ ಸಂಪತ್ತು ಹೊಂದಿರುವವರು ಜಾತಿವಾದಿಗಳು ಅಪರಾಧದ ಹಿನ್ನೆಲೆ ಇರುವವರು ಚುನಾಯಿತರಾಗುತ್ತಿರುವುದಕ್ಕೆ ದೇಶದಲ್ಲಿ ನೈತಿಕತೆ ಅಧಃಪತನಕ್ಕೆ ಹೋಗಿದೆ ಎಂಬ ನೋವಿನ ಸಂಗತಿಯನ್ನು ನೊಂದುಕೊಂಡು ಪುಸ್ತಕದಲ್ಲಿ ಬರೆದಿದ್ದಾರೆ.

ದೇಶಪ್ರೇಮಿ ಮತ್ತು ದೇಶದ್ರೋಹಿ ಇವರಿಬ್ಬರ ನಡುವಿನ ವ್ಯತ್ಯಾಸವನ್ನು ವಿಜಯ ಮಲ್ಯ ರವರ ಪ್ರಕರಣದ ಮೂಲಕ ವಾಸ್ತವತೆಯ ಕದ ತಟ್ಟಿದ್ದಾರೆ ಶ್ರೀಯುತ ಅರಳಿ ನಾಗರಾಜ್ ಸರ್ ನಮ್ಮ ದೇಶದ ಬ್ಯಾಂಕುಗಳಿಂದ ಹತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಸಾಲ ಪಡೆದು ಮರುಪಾವತಿ ಮಾಡುಲಾಗದೆ ವಂಚಿಸಿ ವಿದೇಶಕ್ಕೆ ಹಾರಿಹೋಗಿ ಆ ವಿದೇಶಿ ನ್ಯಾಯಾಲಯದಲ್ಲಿ ಆತ “ನನ್ನನ್ನು ಭಾರತಕ್ಕೆ ಒಪ್ಪಿಸಬೇಡಿ ಅಲ್ಲಿ ನನ್ನನ್ನು ಸುರಕ್ಷಿತವಾಗಿ ಇರಿಸುವ ಜೈಲು ಇಲ್ಲ” ಎಂಬುದಾಗಿ ಹೇಳಿಕೆ ಕೊಟ್ಟಂತಹ ಆ ವಿಜಯ ಮಲ್ಯ ಶ್ರೀಮತ ಉದ್ಯಮಿಯನ್ನು ನಮ್ಮ ಕರ್ನಾಟಕದ ಶಾಸಕರು ನಮ್ಮ ರಾಷ್ಟ್ರದ ಸಂಸತ್ತಿನ “ಹಿರಿಯರ ಮನೆ” ಆಗಿರುವ ರಾಜ್ಯಸಭೆಯ ಸದಸ್ಯನನ್ನಾಗಿ ಆರಿಸಿ ಕಳಿಸಿದ್ದರು.

ಆತನಲ್ಲಿ ವಾಮಮಾರ್ಗದಿಂದ ಸಂಪಾದಿಸಿದ ಸಂಪತ್ತು ಬಿಟ್ಟರೆ ಹೇಳಿಕೊಳ್ಳುವಂತಹ ಯಾವ ನೈತಿಕತೆ ಅವರಲ್ಲಿರಲಿಲ್ಲ. ಜವಾಬ್ದಾರಿ ಸ್ಥಾನಕ್ಕೆ ಜವಾಬ್ದಾರಿಕೆ ಹೊಂದಿದ್ದ ಶಾಸಕರಿಂದ ಆಯ್ಕೆಯಾದ ವ್ಯಕ್ತಿ ‘ದೇಶದ್ರೋಹಿ’ ಆಗುತ್ತಾನೆಂದರೆ ಇದು ನಮ್ಮ ದೇಶದ ದುರ್ದೈವ ಮತ್ತು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಪಹಾಸ್ಯ,ಅಣಕ ಎಂದು ಬಹು ನೋವಿನಿಂದ ನಮ್ಮ ನಿವೃತ್ತ ನ್ಯಾಯಮೂರ್ತಿಗಳು ಬರೆದಿದ್ದಾರೆ.

ತಮಗೆ ಹಕ್ಕಿಲ್ಲದಿದ್ದರೂ ಪಾಂಡವರ ಸಮಸ್ತ ರಾಜ್ಯಕ್ಕೂ ತಾನೇ ಒಡೆಯನಾಗಬೇಕೆಂಬ ದುರ್ವ್ಯಸನ ದುರ್ಯೋಧನಿಗೆ ಇದ್ದರೆ ದ್ಯೂತ (ಜೂಜು) ಆಡುವ ದುರ್ವ್ಯಸನ ಧರ್ಮರಾಯನಿಗೆ ಇದ್ದುದ್ದರಿಂದ ‘ಕುರುಕ್ಷೇತ್ರ’ ನಡೆಯಿತು‌.

ತಮ್ಮದೇಯಾದ ಕಾರಣಗಳಿಗಾಗಿ ದುರ್ಯೋಧನನಿಗೆ ಋಣಿಯಾದ್ದರಿಂದ ಭೀಷ್ಮ,ದ್ರೋಣರು,ಕೃಪಚಾರ್ಯರು, ಅಶ್ವತ್ಥಾಮ,ಕರ್ಣ ಅಧರ್ಮದ ಪರವಾಗಿ ಧರ್ಮದ ವಿರುದ್ಧವಾಗಿ ಕುರುಕ್ಷೇತ್ರ ಯುದ್ದದಲ್ಲಿ ಪಾಲ್ಗೊಂಡಿದ್ದರು ನಮ್ಮ ದೇಶದಲ್ಲಿ ಪ್ರಸ್ತುತ ರಾಜಕಾರಣದಲ್ಲೂ ನಡೆಯುತ್ತಿರುವುದು ಇದೇ ಎಂದು ಇಂಥವರೂ ಯುವಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ಆತಂಕವನ್ನು ಕುರುಕ್ಷೇತ್ರದ ಮೂಲಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ರಾಜಕಾರಣದಲ್ಲಿ ರಾಜಕಾರಣಿಗಳಲ್ಲಿರುವ ಆಂಗ್ಲ ಭಾಷೆಯ ಮೂರು C ಗಳು ಅಂದರೆ 1-corruption
2-casteism
3crime

ಇವುಗಳನ್ನು ಬಿಟ್ಟು ಐದು C ಸೂತ್ರ ನೀಡಿದ್ದಾರೆ ನಮ್ಮ ನಿವೃತ್ತ ನ್ಯಾಯಮೂರ್ತಿಗಳು.
1-competency
2-charactesr
3-commitment
4-courage
5-compassion

ಈ ಐದು ಅಂಶಗಳು ಪ್ರಸ್ತುತ ರಾಜಕಾರಣದಲ್ಲಿ ಈ ಪುಸ್ತಕದ ಲೇಖಕರು ಹೇಳುವ ಹಾಗೆ ಹಗಲು ಹೊತ್ತಿನಲ್ಲಿ ಹೆಗಲ ಮೇಲೆ ದೀಪವಿಡಿದು ನೋಡಿದರೆ ಒಬ್ಬರೂ ಸಿಗುವುದಿಲ್ಲ.

ಒಬ್ಬ ಪೊಲೀಸ್ ಪೇದೆಯಾಗಲು ಕನಿಷ್ಠ ವಿದ್ಯಾರ್ಹತೆ ಬೇಕು, ದೈಹಿಕ ಸಾಮರ್ಥ್ಯ ಬೇಕು ಆದರೆ ಇಂಥ ಪೇದೇಯಾಗಲು ಅರ್ಹತೆ ಇಲ್ಲವೆಂದು ತಿರಸ್ಕೃತಗೊಂಡ ವ್ಯಕ್ತಿ ಚುನಾವಣೆಯಲ್ಲಿ ಆಯ್ಕೆಯಾಗಿ ಪೊಲೀಸ್ ಇಲಾಖೆಯನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವ ‘ಗೃಹಮಂತ್ರಿ’ ಆಗಬಹುದು ಬರೆಯುತ್ತಾ ಹೋದರೆ ಇಂಥವರ ಪಟ್ಟಿ ಜಾಸ್ತಿಯಾಗುತ್ತದೆ ‘ಆಗಬಹುದು’ ಅಂದರೆ ಇಲ್ಲಿಯವರೆಗೆ ಆಗಿಲ್ಲ’ ಎಂದರ್ಥವಲ್ಲ ವ್ಯಕ್ತಿಗಳ ವಿವರಣೆ ಅಗತ್ಯವಿಲ್ಲ ಎಂದು ಹೇಳುವಲ್ಲಿ ಎಂತಹಾ ಕರಾಳ ಸತ್ಯ ಅಪಮೌಲ್ಯದ ವಿಜೃಂಭಣೆ ಇದೆ ಎಂದು ಓದುಗರು + ಭ್ರಷ್ಟ ಮತದಾರ ಪ್ರಭುಗಳಾದ ನಾವುಗಳು ಅರಿತುಕೊಳ್ಳಬೇಕು.

68 ವರ್ಷಗಳನ್ನು ಪೂರೈಸಿರುವ ನ್ಯಾಯಮೂರ್ತಿಗಳು ವಯಸ್ಕರಾಗಲು ಬೇಕಿದ್ದ 18 ವರ್ಷಗಳನ್ನು ಅದರಲ್ಲೇ ಕಳೆದರೆ “ನನ್ನ ದೇಶದ ದೇಶದ ಆಗು ಹೋಗುಗಳ ಸಂಬಂಧದ ನನ್ನ ಅನುಭವಕ್ಕೆ 50 ವರ್ಷಗಳ ವಯಸ್ಸಾಗಿದೆ” ಅಭಿವೃದ್ಧಿಯ ಮೌಲ್ಯಗಳಿಗಿಂತ ಅಪಮೌಲ್ಯಗಳೇ ಹೆಚ್ಚಿನ ವೇಗದಿಂದ ವೃದ್ದಿಯಾಗುತ್ತಾ ಬಂದಿದೆ ಎಂದು ಹೇಳುವಲ್ಲಿ ರಾಜಕೀಯ ಭ್ರಷ್ಟಾಚಾರ ಅನೈತಿಕತೆಯ ಕ್ರೂರತೆಯನ್ನು ತಮ್ಮ ಮನದ ನೋವನ್ನು ಈ ಪುಸ್ತಕದಲ್ಲಿ ಶ್ರೀಯುತ ನಿವೃತ್ತ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದಾರೆ.

ಇಂತಹ ನೋವುಗಳನ್ನು ಹೇಳುತ್ತಲೆ ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್,ಬಿಪಿನ್ ಚಂದ್ರಪಾಲ್,ದಾದಾಬಾಯಿ ನವರೋಜಿ,ಮದನಮೋಹನ ಮಾಲವೀಯ, ಗೋಪಾಲಕೃಷ್ಣ ಗೋಖಲೆ, ಶ್ರಿ ಅರವಿಂದರು, ಮಹಾತ್ಮ ಗಾಂಧೀಜಿ,ಸರೋಜಿನಿ ನಾಯ್ಡು, ಗೋವಿಂದ ವಲ್ಲಭ ಪಂತ್, ಲಾಲ್ ಬಹದ್ದೂರ್ ಶಾಸ್ತ್ರಿ ವೀರ ಸಾವಕರ, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಅಜಾದ್, ಹುತಾತ್ಮ ಭಗತ್ ಸಿಂಗ್, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರಂತವರು ಯುವ ಜನತೆಗೆ ಆದರ್ಶರಾಗಬೇಕೆಂದು “ದೇಶದ ಚಿತ್ತ ಯುವಜನರತ್ತ ಎಂಬ ಪುಸ್ತಕದ ಮೂಲಕ ಜಾಗೃತ ಭಾರತಕ್ಕೆ ಕರೆ ನೀಡಿ ಅವಿರತವಾಗಿ ಶ್ರಮಿಸುತ್ತಿರುವ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಸರ್ ರವರ ಈ ಕಾರ್ಯವನ್ನು ಸರ್ಕಾರವು ಪರಿಗಣಿಸಿ ಒಂದು ಜಾಗೃತ ಭಾರತಕ್ಕೆ ಶ್ರೀಯುತ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ್ ಸರ್ ರವರ ಕನಸ್ಸನ್ನು ಸಾಕಾರಗೊಳಿಸಲು ಗಮನಹರಿಸಬೇಕು ನಮ್ಮಂತಹ ಯುವ ಸಮುದಾಯ ಈ ಪುಸ್ತಕವನ್ನು ಓದಿದರೆ ದೇಶದ ಆಡಳಿತ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಯಾಗಿ ಯುವ ಜನತೆಯ ಚಿತ್ತ ಸದಾ ದೇಶತ್ತ ಸೆಳೆಯಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending