Connect with us

ಅಂತರಂಗ

ಅರಿಮೆಯ ಅರಿವಿರಲಿ-33 : ಭೂತಬಾಧೆ

Published

on

  • ಯೋಗೇಶ್ ಮಾಸ್ಟರ್

ಒಬ್ಬ ವ್ಯಕ್ತಿ ಮತ್ತು ಹಲವು ವ್ಯಕ್ತಿಗಳಿಂದ ರಚಿತವಾಗಿರುವ ಸಮಾಜ; ಈ ಎರಡೂ ಸಂತೋಷವಾಗಿರಲು ಸಹಕರಿಸಲಾಗದ ಯಾವುದೇ ಪರಿಕಲ್ಪನೆಗಳಾದರೂ ಏಕೆ ಬೇಕು? ಧರ್ಮ, ಸಂಸ್ಕೃತಿ, ಆಚಾರ, ವಿಚಾರ, ರಾಜಕೀಯ, ಸಾಹಿತ್ಯ, ಕಲೆ; ಹೀಗೆ ಯಾವುದನ್ನೇ ತೆಗೆದುಕೊಳ್ಳಿ. ವ್ಯಕ್ತಿ ಮತ್ತು ಸಮಾಜವು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಬೇಕು. ಬೌದ್ಧಿಕವಾಗಿ ಪ್ರಬುದ್ಧವಾಗಿರಬೇಕು. ಆಗ ಸಹಜವಾಗಿ ತನ್ನ ಜೀವನ ಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಸಾಧ್ಯ. ಮನಶಾಸ್ತ್ರ, ಇತರೇ ವಿಜ್ಞಾನ, ಧರ್ಮ, ಸಂಸ್ಕೃತಿ, ರಾಜಕಾರಣ; ಈ ಎಲ್ಲವೂ ಪರಸ್ಪರ ಪೂರಕವೂ ಆಗಿರುವುದಲ್ಲದೇ ಒಂದರಲ್ಲೊಂದು ಹೆಣೆದುಕೊಂಡಿವೆ.

ಕಾರಣ ಎಲ್ಲದರ ಕೇಂದ್ರ ಮನುಷ್ಯ. ಎಲ್ಲವೂ ಅವನ ಒಳಿತಿಗೆ, ಅವನ ಶೇಯಸ್ಸಿಗೆ, ಅವನ ಆನಂದಕ್ಕೆ ಮತ್ತು ಅವನ ಉಳಿವಿಗೆ. ಹೀಗಿರುವಾಗ ಅವನಿಗಾಗಿ ಮತ್ತು ಅವನಿಂದ ಗಮನಿಸಲ್ಪಡುವ ಎಲ್ಲಾ ವಿಷಯಗಳನ್ನೂ ಸಮಗ್ರವಾಗಿ ಮತ್ತು ಪೂರಕವಾಗಿಯೇ ನೋಡುವಂತ ಮತ್ತು ಪರಿಗಣಿಸುವಂತಹ ಕೆಲಸವಾಗಬೇಕು.
ವಿಷಯಗಳೆಲ್ಲವೂ ಒಂದಕ್ಕೊಂದು ಪೂರಕವಾಗಿವೆ ಮತ್ತು ಹೆಣೆದುಕೊಂಡಿವೆ ಎಂಬುದನ್ನು ಬಿಟ್ಟು ಎಲ್ಲವನ್ನೂ ಪ್ರತ್ಯೇಕವಾಗಿಯೇ ಉಪಚರಿಸುವ ರೀತಿ ಬಹಳಷ್ಟು ತೊಂದರೆಗಳನ್ನು ಒಡ್ಡಿವೆ.

ಹೆಣಿಗೆ ಬಿಟ್ಟ ನಡಿಗೆ

ಮಕ್ಕಳು ಶಾಲೆಯಲ್ಲಿ ಪಡೆಯುವ ಶಿಕ್ಷಣ ಮತ್ತು ಅನೌಪಚಾರಿಕವಾಗಿ ಸಮಾಜದಲ್ಲಿ ಪಡೆಯುವ ಶಿಕ್ಷಣವು ಅವರಲ್ಲಿ ದ್ವಂದ್ವಗಳನ್ನು ಹುಟ್ಟಿಹಾಕುತ್ತವೆ. ಹಾಗೆಯೇ ವ್ಯಕ್ತಿಗಳ ಸಂಬಂಧಗಳಲ್ಲಿಯೂ ಕೂಡಾ ಭಿನ್ನ ನಿಲುವುಗಳು ಮತ್ತು ಭಿನ್ನ ರೂಢಿಗಳು ತಲೆದೋರುವುದರಿಂದ ಮಾನಸಿಕವಾದ ಒತ್ತಡಗಳು ಉಂಟಾಗುತ್ತವೆ. ಪರಸ್ಪರ ಬೆಸೆದುಕೊಂಡಿರುವ ವಿಷಯಗಳನ್ನು ಗಮನಿಸದೇ ಅವುಗಳ ಜಾಡುಗಳನ್ನು ಪ್ರತ್ಯೇಕವಾಗಿ ನೋಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.

ವ್ಯಕ್ತಿಯೊಬ್ಬನು ತಾನು ಅಪಮಾನಕ್ಕೆ ಒಳಗಾಗುವಂತೆ ಭಾವಿಸುವುದು, ಅಸಹಾಯಕ ಸ್ಥಿತಿಯನ್ನು ಎದುರಿಸುವುದು, ಭಾವೋದ್ರೇಕಕ್ಕೆ ಒಳಗಾಗುವುದು, ಒಳಗೊಳಗೇ ಉದ್ಭವಿಸುವ ವಿಚಾರಗಳು, ಕಾರ್ಯರೂಪಕ್ಕೆ ತರಲಾಗದ ಇದ್ದಕ್ಕಿದ್ದಂತೆ ಮೂಡುವ ಆಲೋಚನೆಗಳು, ತಿರಸ್ಕಾರಕ್ಕೆ ಒಳಗಾದ ಭಾವ, ಕೆಲವು ವಸ್ತುಗಳ, ಸ್ಥಳಗಳ ಮತ್ತು ವ್ಯಕ್ತಿಗಳ ಬಗ್ಗೆ ಇರುವಂತಹ ಭಯಗಳು, ಕೆಲವು ವ್ಯಕ್ತಿಗಳ ಬಗ್ಗೆ ತಳೆದಿರುವ ನಕಾರಾತ್ಮಕ ಭಾವನೆಗಳು, ಆತ್ಮಹತ್ಯೆಯ ಆಲೋಚನೆಗಳು, ಹತ್ಯೆ ಮಾಡುವಂತಹ ಬಯಕೆ ಮತ್ತು ಮಾಡಿಬಿಡುತ್ತೇನೆ ಎಂಬ ವಿಚಾರಗಳು; ಇಂತವೆಲ್ಲಾ posttraumatic disorders (PTED)ಸಾಲಿಗೇ ಬಂದು ಸೇರಿಬಿಡುತ್ತವೆ.

ಸಾಮಾನ್ಯವಾಗಿ ಈ ಸಮಸ್ಯೆ ಇರುವವರು ತಮಗೆ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ನಿರಾಕರಿಸುತ್ತಾರೆ. ಚಿಕಿತ್ಸೆಯ ನಿರಾಕರಣೆಯ ಮುಖ್ಯ ಕಾರಣವೆಂದರೆ, ಸಮಸ್ಯೆಯ ಮೂಲ ಹೊರಗಿನ ವ್ಯಕ್ತಿ, ಸನ್ನಿವೇಶ, ಸ್ಥಳ ಅಥವಾ ಘಟನೆಯಿಂದ ಆಗಿರುವುದೆಂದೂ, ಅದು ಸರಿ ಹೋದರೆ ತನ್ನಲ್ಲಿ ಸಮಸ್ಯೆ ಇರುವುದಿಲ್ಲವೆಂದು ನಂಬುತ್ತಾರೆ. ಇದರಿಂದ ಸಮಸ್ಯೆಯ ಮೂಲ ತಾವು ಎಂಬುದನ್ನು ಅವರು ಒಪ್ಪುವುದಿಲ್ಲ.

ಗಂಡ ಹೆಂಡತಿಯರ ನಡುವೆ ಜಗಳವಾಗಿದೆ ಎಂದಿಟ್ಟುಕೊಳ್ಳಿ. ಗಂಡನ ಒರಟು ವರ್ತನೆ ಮತ್ತು ದಾಳಿಯಿಂದ ಹೆಂಡತಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನೋವಾಗಿದೆ. ಭಾವನಾತ್ಮಕವಾಗಿ ಕುಸಿದಿದ್ದು, ಜರ್ಜರಿತಳಾಗಿದ್ದಾಳೆ. ಅವಳಿಗೆ ‘ಈಗ ನಿನಗೆ posttraumatic disorders (PTED)ಇದೆ. ನಿನಗೆ ಸಮಾಲೋಚನೆ ಮತ್ತು ಚಿಕಿತ್ಸೆ ಬೇಕು” ಎಂದು ಹೇಳಿದರೆ ಆಕೆ ಅದನ್ನು ಕೇಳಲು ತಯಾರಿರುವುದಿಲ್ಲ. ಅವಳ ಪ್ರಕಾರ ಗಂಡನ ಒರಟುತನ ಮತ್ತು ಹಲ್ಲೆ ಮಾಡುವ ಗುಣದಿಂದಾಗಿ ನನ್ನ ದೇಹ ಮತ್ತು ಮನಸ್ಸಿಗೆ ನೋವಾಗಿದೆ. ಅವನು ಒರಟುತನ ಬಿಟ್ಟರೆ ಮತ್ತು ಉತ್ತಮ ರೀತಿಯಲ್ಲಿ ನಡೆದುಕೊಂಡರೆ ತಾನೂ ಸರಿ ಹೋಗುತ್ತೇನೆ ಎಂದು ನಂಬುತ್ತಾಳೆ. ಆದರೆ, ಅವನ ದಾಳಿಗೆ ಸಿಕ್ಕಿರುವ ಕಾರಣದಿಂದಲೇ ಅವಳಿಗೂ ಸಮಸ್ಯೆ ಇದೆ ಎನ್ನುವುದು ಅವಳಿಗೆ ಗೊತ್ತಾಗುವುದಿಲ್ಲ.

ಟ್ರೊಮಾ ಎಂದರೇನು?

ಗಂಡ ಹೊಡೆದ. ಹೆಂಡತಿಯ ಕೈಗೆ ಗಾಯವಾಯಿತು ಎಂದಿಟ್ಟುಕೊಳ್ಳಿ. ಈಗ ಹೊಡೆತಕ್ಕೆ ಸಿಕ್ಕು ಘಾಸಿತವಾಗಿರುವ ಕೈಗೆ ಉಪಚರಿಸಬೇಕು. ರಕ್ತಸ್ರಾವ ನಿಲ್ಲಿಸಬೇಕು. ಗಾಯ ಆಳವಾಗಿದ್ದರೆ ಹೊಲಿಗೆ ಹಾಕಿಸಬೇಕು. ಬ್ಯಾಂಡೇಜ್ ಕಟ್ಟಬೇಕು, ಇತ್ಯಾದಿ ಚಿಕಿತ್ಸೆ ನೀಡಬೇಕು. ಹೊಡೆಯುವ ಗಂಡ ತನ್ನ ತಪ್ಪನ್ನು ತಿಳಿದು ಮರುಗಿದರೆ, ಕ್ಷಮೆ ಕೇಳಿದರೆ ಗಾಯಗೊಂಡ ಕೈ ಸರಿ ಹೋಗುವುದಿಲ್ಲ. ಅದೇ ರೀತಿ ಮನಸ್ಸಿಗೆ ಆಗುವ ಗಾಯವೂ ಸಹ. ಒಮ್ಮೆ ಮನಸ್ಸು ಗಾಯಗೊಂಡರೆ ಅದಕ್ಕೊಂದು ಸಮಸ್ಯೆ ವಕ್ಕರಿಸಿತು ಎಂದೇ ಅರ್ಥ. ಅದು ಯಾವುದೋ ಒಂದು ರೀತಿಯಲ್ಲಿ ತನ್ನ ಪ್ರಭಾವವನ್ನು ಬೀರಿರಬಹುದು. ಸಂಬಂಧಗಳಲ್ಲಿ ಜಗಳ ಮುಗಿದು ಸರಿಹೋಗಿದ್ದರೂ, ನ್ಯಾಯ ಪಂಚಾಯತಿ ಮಾಡಿ ರಾಜಿಯಾಗಿದ್ದರೂ, ಪರಿಹಾರ ಸಿಕ್ಕಿದ್ದರೂ ಅಲ್ಲಿಗೆ ಮನಸ್ಸು ಸರಿ ಹೋಗಿದೆ ಎಂದಲ್ಲ.

ಟ್ರೋಮಾ ಎಂದರೇನೇ ಉಳಿದಿರುವ ನೋವು ಅಥವಾ ಅಡಗಿರುವ ಬಾಧೆ. ಅದು ದೈಹಿಕವಾಗಿಯಾದರೂ ಸರಿಯೇ, ಮಾನಸಿಕವಾಗಿಯಾದರೂ ಸರಿಯೇ.ಸಮಾಲೋಚನೆಗಳ ಮೂಲಕ, ಆತ್ಮಾವಲೋಕನದ ಮೂಲಕ, ತನ್ನ ಬದಲಾಗಿರುವ ವರ್ತನೆ, ಆಲೋಚನೆ ಮತ್ತು ಧೋರಣೆಗಳನ್ನು ಗಮನಿಸಿಕೊಳ್ಳುವ ಮೂಲಕ ತಮ್ಮಲ್ಲಿ ತಲೆದೋರಿರುವ ಸಮಸ್ಯೆಯನ್ನು ಗುರುತಿಸಿಕೊಳ್ಳಬೇಕು. ಮನಶಾಸ್ತ್ರಜ್ಞರು ಸಮಾಲೋಚನೆಗಳಾ ಮೂಲಕ ಇದನ್ನು ಗುರುತಿಸಿಕೊಳ್ಳಲು ಮತ್ತು ಅದರಿಂದ ಹೊರಗೆ ಬರಲು ಸಹಾಯ ಮಾಡುತ್ತಾರೆ.

ಮಗುವೊಂದು ಏನೋ ಬೇಕೆಂದು ಗಲಾಟೆ ಮಾಡಿ ಅಳುತ್ತದೆ. ನೀವು ಕೊಡಿಸುವುದಿಲ್ಲ. ಬೈಯುತ್ತೀರಿ. ಹಟ ಅತಿರೇಕಕ್ಕೆ ಹೋಗಿದೆ ಎಂದು ನಾಲ್ಕು ಬಿಗಿಯುತ್ತೀರಿ. ಆಮೇಲೆ ನಿಮಗೇ ಅಯ್ಯೋ ಪಾಪ ಎನಿಸುತ್ತದೆ. ನಂತರ ಕೊಡಿಸುತ್ತೀರಿ. ಮಗು ಅಳು ನಿಲ್ಲಿಸುತ್ತದೆ. ನಗುತ್ತದೆ. ನಿಮ್ಮ ಜೊತೆಗೆ ಎಂದಿನಂತೆ ಇರುತ್ತದೆ. ಇಷ್ಟಕ್ಕೆ ಮಗುವು ಸರಿ ಹೋಯಿತೆಂದು ತಿಳಿಯಬೇಡಿ. ನಿಮ್ಮ ಮತ್ತು ಮಗುವಿನ ಸಂಘರ್ಷದ ಸಮಯದಲ್ಲಿ ಮಗುವಿನ ಮನಸ್ಸಿನಲ್ಲಿ ಉಂಟಾದ ಏರುಪೇರು ಅಲ್ಲಿಗೆ ಸರಿ ಹೋಗಿದೆ ಎಂದು ಖಂಡಿತ ಅಲ್ಲ. ಹೊರಗಿನ ಸಂಘರ್ಷ ಕೊನೆಗೊಂಡಿತು ಅಷ್ಟೇ. ಒಳಗೆ ಅದರ ಪ್ರಭಾವ ಜೀವಂತವಾಗಿರುತ್ತದೆ. ಭೂತಕಾಲದ ಅಂತಹ ಪಳೆಯುಳಿಕೆಗಳೆಲ್ಲಾ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿಯೂ ಕಾಡುತ್ತದೆ ಅದನ್ನು ಗುರುತಿಸಿ ಚಿಕಿತ್ಸೆ ನೀಡದಿದ್ದ ಪಕ್ಷದಲ್ಲಿ. ಇದನ್ನೇ ಭೂತಬಾಧೆ ಎಂದು ಹೇಳಬಹುದು.

ನೋವಿನ ಪಳೆಯುಳಿಕೆಗಳು

ಅಪಘಾತವಾದ ಮೇಲೆ, ಯಾವುದೋ ಶಸ್ತ್ರಕ್ರಿಯೆ ನಡೆದ ಮೇಲೆ, ಮಾನಸಿಕವಾಗಿ ದಾಳಿಯಾದ ಮೇಲೆ, ಭಾವನಾತ್ಮಕವಾಗಿ ಕ್ಷೋಭೆಗೊಂಡಿದ್ದ ಮೇಲೆ, ಯಾವುದೋ ಅಹಿತಕರ ಘಟನೆಗಳು ನಡೆದ ಮೇಲೆ, ಸಂಘರ್ಷ, ನಿರಾಸೆ, ನಷ್ಟ, ನೋವು, ಸಾವು, ವಂಚನೆ, ಆಕ್ರಮಣ, ಅತ್ಯಾಚಾರದಂತಹ ಘಟನೆಗಳು ಸಂಭವಿಸಿದ ಮೇಲೆ; ಹೊರ ನೋಟಕ್ಕೆ ಸರಿಹೋದಂತೆ ಕಂಡರೂ ನೋವಿನ ಪಳೆಯುಳಿಕೆಗಳು ಜೀವಂತವಾಗಿರುತ್ತವೆ. ಅವುಗಳೇ ಟ್ರೋಮಾ. ಅವುಗಳನ್ನು ಬುಡಸಹಿತ ಇಲ್ಲವಾಗಿಸುವುದು ಕಷ್ಟವಾದರೂ ಸೂಕ್ತವಾದ ಸಮಾಲೋಚನೆ ಮತ್ತು ಚಿಕಿತ್ಸೆ ಬೇಕೇಬೇಕು.

ಒಂದು ಮನೆಯಲ್ಲಿ ಸಾವಾದರೂ ಬೇಕು, ವ್ಯಾಪಾರದಲ್ಲಿ ನಷ್ಟವಾದರೂ ಬೇಕು, ಪ್ರೇಮಿಗಳು ಬ್ರೇಕ್ ಅಪ್ ಆದರೂ ಬೇಕು, ಒಂದು ಮಗುವಿನ ಗೊಂಬೆ ಮುರಿದು ಹೋದರೂ ಬೇಕು. ಅವುಗಳ ಗಂಭೀರ ಪರಿಣಾಮದ ಅನುಗುಣವಾಗಿ ಸಮಯ ಮತ್ತು ವಿಧಾನಗಳನ್ನು ಕೂಡಾ ಪರಿಗಣಿಸಬೇಕು. ನಮ್ಮ ಭಾರತದಲ್ಲಂತೂ, “ಹೋಗಲಿ ಬಿಡು” ಎಂಬ ದಿವ್ಯಮಂತ್ರವನ್ನು ಸಾಂತ್ವಾನವಾಗಿ ನೀಡಿ ಸುಮ್ಮನಾಗಿರುತ್ತಾರೆ. ಎರಡನೆಯ ಮತ್ತು ಮೂರನೆಯ ವ್ಯಕ್ತಿಗೆ “ಹೋಗಲಿ ಬಿಡು” ಎನ್ನುವುದು ಸುಲಭ.

ತಾಯಿ ಸತ್ತ ಮಗನಿಗೆ, ಗಂಡನಿಂದ ಹೊಡೆಸಿಕೊಂಡಿರುವ ಹೆಂಡತಿಗೆ, ಹೆಂಡತಿಯಿಂದ ನೋವುಂಡ ಗಂಡನಿಗೆ, ಗೊಂಬೆಯನ್ನು ಕಳೆದುಕೊಂಡಿರುವ ಮಗುವಿಗೆ, ಪರೀಕ್ಷೆಯಲ್ಲಿ ನಪಾಸಾದ ವಿದ್ಯಾರ್ಥಿಗೆ; ಸಮಾಧಾನಿಸಲು “ಹೋಗಲಿ ಬಿಡು” ಎಂದು ಮೂರನೆಯ ವ್ಯಕ್ತಿ ಎನ್ನಬಹುದು. ಆದರೆ ನಷ್ಟವನ್ನು ಹೊಂದಿರುವ, ನೋವಿನಲ್ಲಿರುವ ಅವರಿಗೆ ಈ ಪದ ಏನೂ ಸಾಂತ್ವಾನ ನೀಡದು. ತಮ್ಮದಲ್ಲದ ನಷ್ಟಕ್ಕೆ ಯಾರಾದರೂ ಹೋಗಲಿಬಿಡು ಮಂತ್ರ ಧಾರಾಳವಾಗಿ ಹೇಳಬಹುದಲ್ಲವೇ? ವಾಸ್ತವವಾಗಿ ಅವರಿಗೆ ಬೇರೆ ಏನು ಹೇಳುವುದು ಎಂದು ತಿಳಿಯದೇ ಇದನ್ನು ಹೇಳುವುದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ.

ಇರಲಿ, ಗಂಡನ ಜೊತೆಗೆ ರಾಜಿಯಾಗಿರುವ ಹೆಂಡತಿ, ತಾಯಿಯೊಂದಿಗೆ ಮತ್ತೆ ಮೊದಲಿನಂತೆ ಇರುವ ಮಗು; ಇವರ ಮನಸ್ಸಿನಲ್ಲಿ ಪಟ್ಟ ನೋವಿನ ಪಳೆಯುಳಿಕೆಗಳು ಆಲೋಚನೆಗಳಾಗಿಯೋ, ಅಭಿಪ್ರಾಯವಾಗಿಯೋ, ನಿರ್ಣಯವಾಗಿಯೋ, ಒಟ್ಟು ಸೂಕ್ಷ್ಮಸ್ತರದಲ್ಲಿ ರೂಪುಗೊಂಡಿರುತ್ತದೆ. ಅದು ವರ್ತನೆಗಳಲ್ಲಿ, ಧೋರಣೆಗಳಲ್ಲಿ ಮತ್ತು ಪ್ರತಿಕ್ರಿಯೆಗಳಲ್ಲಿ ವ್ಯಕ್ತಗೊಳ್ಳುತ್ತಿರುತ್ತವೆ. ಹುಲ್ಲುಮಾಳದಲ್ಲಿ ಒಣಗಿದ ಹುಲ್ಲು ಸುಟ್ಟು ಹೋಗಿ ಅಲ್ಲಿ ಹುಲ್ಲೇನೂ ಕಾಣದಿದ್ದರೂ, ಮಳೆ ಬಂದಾಗ ಸುಟ್ಟ ಬೂದಿಯಿಂದ ಬೀಜಗಳು ಮೊಳೆತು ಬಂದಂತೆ.

ಭರವಸೆ ಹುಟ್ಟಿಸುವಂತಹ ಚಿಕಿತ್ಸೆ ಎಂದರೆ ಅವು ಆಪ್ತ ಸಮಾಲೋಚನೆಗಳು. ಈ ಆಪ್ತ ಸಮಾಲೋಚನೆಯಲ್ಲಿ ವ್ಯಕ್ತಿಯು ತನ್ನ ಪ್ರಸ್ತುತ ಮಾನಸಿಕ ಸ್ಥಿತಿಯನ್ನು ಅವಲೋಕಿಸುವುದು, ಅದರಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಗ್ರಹಿಸುವುದು, ತನ್ನಲ್ಲಿ ಉಂಟಾಗಿರುವ ಭಾವನೆಗಳ ಸಾಂದ್ರತೆಯನ್ನು ಗುರುತಿಸುವುದು, ಅವುಗಳನ್ನು ವಿವೇಚಿಸುವುದು, ಅವುಗಳು ಉಂಟು ಮಾಡುತ್ತಿರುವ ಪರಿಣಾಮಗಳನ್ನು ಗುರುತಿಸುವುದು, ಅವುಗಳು ಎಷ್ಟರಮಟ್ಟಿಗೆ ಮೌಲ್ಯವನ್ನು ಹೊಂದಿವೆ ಎಂದು ವಿಚಾರ ಮಾಡುವುದು, ಬಹುಕಾಲಕ್ಕೆ ಬೇಕಾದ ಅಥವಾ ತಾಳಿಕೆ ಮತ್ತು ಬಾಳಿಕೆ ಬರುವಂತಹ ವಿಚಾರಗಳನ್ನು ಮಾಡುವುದು; ಇವೆಲ್ಲಾ ಆಗಬಹುದು, ಆಗಬೇಕು. ಆಗ ವ್ಯಕ್ತಿಯು ತನ್ನ ನೋವು ಮತ್ತು ಸಂಕಟಗಳ ಭೂತಬಾಧೆಯಿಂದ ಮುಕ್ತವಾಗಿ ಸೇಡಿನ ಮನೋಭಾವನ್ನು ಹೊಂದದೇ ಇರಲು ಸಾಧ್ಯ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending