Connect with us

ಅಂತರಂಗ

ಅರಿಮೆಯ ಅರಿವಿರಲಿ-43 : ನಿನ್ನ ಸಹವಾಸ ಸಾಕು

Published

on

  • ಯೋಗೇಶ್ ಮಾಸ್ಟರ್

ನಾನು’ – ದ ಫಸ್ಟ್ ಪರ್ಸನ್ – ಏಕವಚನದ ವ್ಯಕ್ತಿಯಾದ ನಾನು ನನ್ನ ಜೊತೆಗೆ ಜೀವಿಸುತ್ತಿರುವವರನ್ನು ಅರಿಮೆಯಿಂದ ಮುಕ್ತರನ್ನಾಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾದರೆ ಮೊದಲು ನನ್ನ ಅರಿಮೆಯನ್ನು ಅರಿಯಬೇಕು. ಅದನ್ನು ಒಪ್ಪಿಕೊಳ್ಳಲು ನನ್ನ ಅಹಂಕಾರ ಅಡ್ಡ ಬರಬಾರದು. ಎರಡನೆಯದು ಅದರ ಬಗ್ಗೆ ಸದಾ ಜಾಗರೂಕತೆಯಿಂದ ನನ್ನ ನಾನು ಗಮನಿಸಿಕೊಳ್ಳಬೇಕು. ಎಲ್ಲೆಲ್ಲಿ ಅದು ತನ್ನ ತಲೆ ಎತ್ತುವ ಸಾಧ್ಯತೆಗಳನ್ನು ಕಂಡುಕೊಳ್ಳುತ್ತೇನೋ ಅಲ್ಲಿ ಅದನ್ನು ಮಣಿಸುವಂತೆ ವರ್ತನೆಯನ್ನು ತೋರಬೇಕು.

ಉದಾಹರಣೆಗೆ ಆತ್ಮರತಿ ಅಥವಾ ನಾರ್ಸಿಸಂ ಗಮನಕ್ಕೆ ಬಂದ ಕೂಡಲೇ ಉದ್ದೇಶಪೂರ್ವಕವಾಗಿ ವಿನಯವನ್ನು ಅಭ್ಯಾಸ ಮಾಡಬೇಕು. ನಾನು ವಿನಯದ ವರ್ತನೆಯನ್ನು ತೋರಿದರೆ ನಾನು ಸೋತಂತೆ ನನ್ನ ಎದುರಾಳಿಗೆ ಗೆಲ್ಲುವುದಕ್ಕೆ ಬಿಟ್ಟಂತೆ ಎಂಬಂತಹ ಆಲೋಚನೆ ಬರಬಾರದು. ಬಂದರೂ ಪರವಾಗಿಲ್ಲ. ನನ್ನ ದೌರ್ಬಲ್ಯವನ್ನು ನಾನು ಗೆಲ್ಲುವುದು ಅತ್ಯಂತ ಮುಖ್ಯ ಎಂಬ ಮನವರಿಕೆಯಿಂದ ವರ್ತಿಸಬೇಕು. ಸಾಮಾನ್ಯವಾಗಿ ನನ್ನ ಎದುರಾಳಿಯು ನನ್ನ ವಿನಯವನ್ನು ನನ್ನ ಹೇಡಿತನವೆಂದು, ಅಸಹಾಯಕತೆ ಎಂದು ಭಾವಿಸುತ್ತಾನೆ. ಇದರಿಂದ ನನಗೆ ಅವಮಾನವಾಗುತ್ತದೆ ಎಂಬ ಭಾವ ಪದೇ ಪದೇ ಮೂಡುತ್ತಿರುತ್ತದೆ.

ಆದರೆ ಅದು ಭ್ರಮೆ. ಅವರು ಯಾರೂ ಏನೂ ನಮ್ಮ ಬಗ್ಗೆ ಹಾಗೆ ಅಂದುಕೊಳ್ಳುವುದಿಲ್ಲ. ಸರಿ, ಒಂದು ವೇಳೆ ಅಂದುಕೊಂಡರೆ, ಅಂದುಕೊಳ್ಳಲಿ ಪರವಾಗಿಲ್ಲ. ನನಗೆ ನಾನು ನನ್ನ ಅರಿಮೆಯಿಂದ ಮುಕ್ತವಾಗಬೇಕು ಎನ್ನುವ ಆಲೋಚನೆಯನ್ನು ಉದ್ದೇಶಪೂರ್ವಕವಾಗಿ ಮಾಡಬೇಕು. ಅದೇ ಪ್ರಜ್ಞೆಯಿಂದ ಅದನ್ನು ಬಲಗೊಳಿಸಿಕೊಳ್ಳಬೇಕು.

ಇನ್ನು ಮೂರನೆಯದಾಗಿ, ಯಾರಲ್ಲೇ ಯಾವುದೇ ಬಗೆಯ ಅರಿಮೆಯನ್ನಾಗಲಿ ಅಥವಾ ಮಾನಸಿಕ ಸಮಸ್ಯೆಯಾಗಲಿ ಕಂಡರೆ ಅವರ ಬಗ್ಗೆ ಅನುಕಂಪವನ್ನು ಹೊಂದಬೇಕು.ಅವರು ವ್ಯತ್ಯಾಸವಾಗಿ ವರ್ತಿಸಿದರೂ ‘ತಿಕ್ಕಲು ತಿಕ್ಕಲಾಗಿ ಆಡಬೇಡ’ ಎಂದೋ, ‘ಯೂ ಆರ್ ವಿಯರ್ಡ್’ ಅಂದರೆ ವಿಲಕ್ಷಣವಾಗಿ ಅಥವಾ ವಿಚಿತ್ರವಾಗಿ ಆಡುತ್ತಿದ್ದೀಯ ಎಂದೋ ಅನ್ನಬಾರದು. ಹೇ, ಯಾಕೆ ಹೇಗೇಗೋ ಒಳ್ಳೆ ದೆವ್ವ ಹಿಡದಂಗೆ, ದೇವರು ಮೈ ಮೇಲೆ ಬಂದಂಗೆ ಆಡ್ತಿದ್ದೀಯಾ, ಹುಚ್ಚು ಹಿಡಿದಿದೆಯಾ? ಪಿತ್ತ ನೆತ್ತಿಗೇರಿದೆಯಾ? ಇತ್ಯಾದಿ ಮಾತುಗಳನ್ನು ರೂಢಿಯಲ್ಲಿ ಆಡುತ್ತಾರೆ. ಅದರಲ್ಲೂ “ನಿನ್ನ ಸಹವಾಸ ಸಾಕಪ್ಪಾ” ಎಂದಂತೂ ಖಂಡಿತ ಅನ್ನಬಾರದು. ಅರಿಮೆಗಳ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ಅರಿವು ಇಲ್ಲದವರ ಮಾತುಗಳು ಇವು.

ವೈದ್ಯನು ರೋಗಿಯನ್ನು ದ್ವೇಷಿಸುವುದು ನೈತಿಕವೇ?

ಯಾವ ವ್ಯಕ್ತಿಯೂ ತನ್ನ ಸಂಬಂಧಗಳನ್ನು ಹಾಳು ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ. ಅವನಿಗೆ ಆನಂದವೇ ಬೇಕಾಗಿರುವುದು. ತಾನೂ ಮತ್ತು ತನ್ನ ಜೊತೆಗಾರರೆಲ್ಲವೂ ಆನಂದವಾಗಿರಬೇಕೆಂದೇ ಬಯಸುವವನು. ಆದರೆ ಆನಂದ ಪಡೆಯುವ ಅಥವಾ ನೀಡುವ ಬದಲು ತನ್ನ ಮತ್ತು ಇತರರ ಸಂತೋಷವನ್ನು ಹಾಳುಮಾಡುವಂತಹ ಯಾವುದೇ ವರ್ತನೆಯನ್ನು ತೋರಿದರೂ, ಅಲ್ಲಿ ತಿಳಿದುಕೊಳ್ಳಿ, ಆತನಲ್ಲಿ ಅಥವಾ ಆಕೆಯಲ್ಲಿ ಸಮಸ್ಯೆ ಇದೆ ಎಂದು ಸ್ಪಷ್ಟವಾದ ಅರ್ಥ. ಆ ಸಮಸ್ಯೆಯನ್ನು ತಂದುಕೊಂಡಿರುವುದು ಅವರ ತಪ್ಪಲ್ಲ ಅಥವಾ ಅಪರಾಧವಲ್ಲ. ಏಕೆಂದರೆ ಮಾನಸಿಕ ಸಮಸ್ಯೆಗಳು ಅವರಿಗೆ ಅರಿವಿಲ್ಲದಂತೆಯೇ ಅವರಲ್ಲಿ ಇನ್‍ಸ್ಟಾಲ್ ಆಗಿರುತ್ತದೆ.

ಹಾಗೂ ಅವರಂತೂ ಖಂಡಿತ ಕಾರಣರಲ್ಲ. ಅವರಿಗೆ ಸಮಸ್ಯೆ ಇದೆ ಎಂದೇ ಗೊತ್ತಿರುವುದಿಲ್ಲ. ಎಷ್ಟೋ ಬಾರಿ ಅವರ ಸಮಸ್ಯೆಗಳನ್ನು ಅವರ ಸಾಮರ್ಥ್ಯ ಎಂದುಕೊಂಡಿರುತ್ತಾರೆ. ಅವರ ದೌರ್ಬಲ್ಯಗಳನ್ನು ಅವರ ಬಲ ಎಂದುಕೊಂಡಿರುತ್ತಾರೆ. ಹಾಗಾಗಿಯೇ ಅವರು ತಮ್ಮ ಸಮಸ್ಯೆಗಳನ್ನು ಅರಿತುಕೊಳ್ಳದೆಯೇ ಅದರ ಪ್ರಭಾವಗಳನ್ನು ಪ್ರಕಟಗೊಳಿಸುತ್ತಲೇ ಹೋಗುತ್ತಿರುತ್ತಾರೆ. ಅವರಿಗೆ ಗೊತ್ತಾದರೂ ಅವರು ಮುಂದುವರಿಸುತ್ತಿದ್ದಾರೆಂದರೆ ಅದು ಅವರ ನಿಯಂತ್ರಣಕ್ಕೆ ಮೀರಿ ಹೋಗಿದೆ ಎಂದು ಅರ್ಥ. ಅವರಿಗೆ ಅದನ್ನು ನಿಭಾಯಿಸಲು ಆಗುತ್ತಿಲ್ಲ ಎಂದು ಅರ್ಥ.

ಇಡೀ ದೇಶವೇ ಸಾಂಘಿಕವಾಗಿ ತನ್ನ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಬಳಸಿಕೊಂಡು ಒಂದು ವೈರಸ್ ವಿರುದ್ಧ ಹೋರಾಡುವಾಗಲೂ ಬಹಳ ಕಷ್ಟಪಡುತ್ತದೆ. ಆಯಾಸಗೊಳ್ಳುತ್ತದೆ. ಸೋತಂತಾಗುತ್ತದೆ. ನಿಭಾಯಿಸಲು ಆಗದೇ ಕೈ ಚೆಲ್ಲುತ್ತದೆ. ವ್ಯವಸ್ಥೆಗಳಲ್ಲಿ ಕಪ್ಪೆಗಳನ್ನು ತಕ್ಕಡಿಗೆ ಹಾಕಿದಂತೆ ಇಲ್ಲಿ ತ್ಯಾಪೆ ಹಾಕಲು ಹೋದರೆ ಅಲ್ಲಿ ಹರಿಯುತ್ತದೆ. ಅಲ್ಲಿ ತ್ಯಾಪೆ ಹಾಕಲು ಹೋದರೆ ಇಲ್ಲಿ ಹರಿಯುತ್ತದೆ.ಹರಕುಗಳು ಎಲ್ಲೆಲ್ಲಿವೆ ಎಂದೇ ತಿಳಿಯದಷ್ಟು ಸೋಂಕುಗಳು ಸೋರುತ್ತಿರುತ್ತವೆ.

ಹಾಗಿರುವಾಗ ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಹೊಕ್ಕಿರುವ ವೈರಸ್ಸುಗಳು ಯಾವುವು ಎಂದೇ ತಿಳಿಯಲು ಸಾಧ್ಯವಾಗದೇ ಒದ್ದಾಡುವುದು, ಯಾವ ಯಾವ ಬಗೆಯ ವೈರಸ್ಸುಗಳು ಎಂದು ಕೂಡಾ ಪತ್ತೆ ಹಚ್ಚಲಾಗದೇ ಹೋಗುವುದು ಏನೂ ಹೆಚ್ಚಲ್ಲ. ಅಪರಾಧವೂ ಅಲ್ಲ. ಆದರೆ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡದೇ ಹೋಗುವುದು ಅಮಾನವೀಯ. ತಿಳುವಳಿಕೆಯನ್ನು ಪಡೆಯುವುದಕ್ಕೂ ಮುಂದಾಗದೇ ತನ್ನ ಹಟಮಾರಿತನದಲ್ಲಿ ಅಡಗಿಕೊಳ್ಳುವುದು ಅಜ್ಞಾನ.

ವೈದ್ಯನು ರೋಗಿಯ ಮೇಲೆ ಕೋಪಗೊಂಡರಾದೀತೇ? ವೈದ್ಯನ ಕಾಯಕವೇ ರೋಗವನ್ನು ಗುಣಪಡಿಸುವುದಾಗಿದ್ದು, ರೋಗಿಷ್ಟನಾಗಿದ್ದಾನೆಂದು ರೋಗಿಯನ್ನು ದ್ವೇಷಿಸುವುದು ನೈತಿಕವೇ? ಹಾಗೆಯೇ ಮನಸ್ಸಿನ ವಿಚಾರಗಳಲ್ಲಿ, ವರ್ತನೆ ಮತ್ತು ಸಂಬಂಧಗಳ ನಿರ್ವಹಣೆಗಳಲ್ಲಿ ಎಲ್ಲರೂ ಅರಿವುಳ್ಳವರಾಗಬೇಕು ಮತ್ತು ತಮ್ಮೊಡನೆ ವ್ಯತ್ಯಾಸವಾಗಿ ವರ್ತಿಸುವವರ ಮೇಲೆ ಅನುಕಂಪದಿಂದ ಅವರಿಗೆ ಸುಧಾರಿಸಿಕೊಳ್ಳಲು ನೆರವಾಗಬೇಕು. ಅವರು ಸುಧಾರಿಸಿಕೊಳ್ಳಲಾಗಲಿಲ್ಲವೆಂದರೆ ನಮ್ಮ ನೈಪುಣ್ಯಕೆ ಸವಾಲು ಎಂದು ಮತ್ತಷ್ಟು ಮಗದಷ್ಟು ಜ್ಞಾನ, ಪ್ರಜ್ಞೆ ಮತ್ತು ತಂತ್ರಗಳಿಂದ ನಿಪುಣರಾಗಲು ಯತ್ನಿಸಬೇಕು. ನೆಗಡಿ ಬಂದಿದೆ ಎಂದು ಮೂಗು ಕುಯ್ದುಕೊಳ್ಳುವುದೇ?

ಅಪರಾಧಿಗಳ ನಿರ್ಮಾತರು

ಕೆಟ್ಟದಾಗಿ ವರ್ತಿಸುವವನು, ಕೆಟ್ಟ ಕೆಲಸ ಮಾಡುವವನು, ಕೆಟ್ಟ ಮಾತುಗಳನ್ನು ಆಡುವವನು ಕೆಟ್ಟವನಲ್ಲವೇ? ದುಷ್ಟ ಎಂಬುವನು ಯಾರೂ ಇಲ್ಲವೇ? ಹಾಗಿದ್ದ ಮೇಲೆ ಯಾರನ್ನು ನಾವು ದುಷ್ಟರೆನ್ನಬೇಕು? ಯಾರನ್ನು ಕೆಟ್ಟವರೆನ್ನಬೇಕು? ಅಪರಾಧಿಗಳು ಎನ್ನುವವರು ಯಾರು ಎಂದು ಕೇಳಿದರೆ, ನನ್ನ ಉತ್ತರ ‘ಯಾರೂ ಇಲ್ಲ.’
Criminals are not born but they are made ಎಂಬ ಮಾತು ನಮಗೆ ಗೊತ್ತು. ಎಲ್ಲಾ ತಾಯಂದಿರೂ ಏನೂ ಅರಿಯದ ಮುಗ್ಧ ಶಿಶುವಿಗೇ ಜನ್ಮ ನೀಡುವುದು. ಯಾವ ತಾಯಿಯೂ ಅಪರಾಧಿ ಶಿಶುವನ್ನು ಹೆರುವುದಿಲ್ಲ. ಆದರೆ ಆ ಮಗುವು ಅಪರಾಧಿಯಾಗಿ ಮುಂದೆ ರೂಪುಗೊಳ್ಳುವುದು.

ಹಾಗೆ ರೂಪಿಸುವುದಾದರೂ ಯಾರು? ಕುಟುಂಬ, ಪರಿಸರ, ಸಮಾಜ, ವ್ಯವಸ್ಥೆ, ಸಂಸ್ಕೃತಿ ಇತ್ಯಾದಿ ಆ ಮಗುವಿನ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು. ಆದರೆ ಆ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ನಾವು ಹೇಳುವುದಾದರೂ ಏನು? ನಾವು ಎಷ್ಟು ಒಳ್ಳೆ ಮಾತು ಹೇಳಿದರೂ ಅವನು ಅಥವಾ ಅವಳು ಕೇಳುವುದಿಲ್ಲ ಎಂದು ದೂರುತ್ತೇವೆ. ಇನ್ನೂ ಸುಲಭವಾಗಿ ಅವನ ಅಥವಾ ಅವಳ ಹಣೆಬರಹವೇ ಆಗಿತ್ತು ಎನ್ನುತ್ತೇವೆ.

ಹಿಂದೆ ಮಾಡಿದ ಕರ್ಮ ಹೀಗೆ ಕಾಡುತ್ತಿದೆ ಎಂದೋ, ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದೋ, ಅವರ ಹುಟ್ಟಿದ ಗಳಿಗೆಯೇ ಹಾಗಿತ್ತು, ಜಾತಕದಲ್ಲಿ ಚೆನ್ನಾಗಿಲ್ಲ, ಗ್ರಹಗತಿ ಚೆನ್ನಾಗಿಲ್ಲ; ಹೀಗೆ ಹತ್ತು ಹಲವು ನೆಪಗಳನ್ನು ತೋರುತ್ತಿರುತ್ತೇವೆ, ಇದಕ್ಕೆ ಕಾರಣ ನಾನಲ್ಲ ಎಂದು ಹೊಣೆಗಾರಿಕೆಯನ್ನು ಕೊಡವಿಕೊಳ್ಳಲು.

ಒಂದು ಮಗುವಿನ ವ್ಯಕ್ತಿತ್ವದ ರೂಪುಗೊಳ್ಳುವಿಕೆಯಲ್ಲಿ, ವರ್ತನೆಯಳನ್ನು, ಆಲೋಚನೆಗಳನ್ನು ರೂಢಿಗೊಳಿಸುವಲ್ಲಿ ಕುಟುಂಬ, ಸಮಾಜ, ವ್ಯವಸ್ಥೆ ಮತ್ತು ಶಿಕ್ಷಣ ಎಲ್ಲವೂ ವಿಫಲವಾಗಿರುವ ಸ್ಪಷ್ಟ ಕುರುಹೇ ಅಪರಾಧಗಳಿಂದ ಕೂಡಿರುವ ಸಮಾಜ. ಯಾರೂ ಯಾರನ್ನೂ ದೂರುವುದು ಬೇಕಾಗಿಲ್ಲ. ಇದು ಸಾಂಘಿಕ ವೈಫಲ್ಯ. ನಾವು ಸಾಮೂಹಿಕ ಜವಾಬ್ದಾರಿಯನ್ನು ಹೊರಬೇಕು. ಎಲ್ಲರಿಗೂ ಅವರವರ ಹೊಣೆಗಾರಿಕೆಗಳಿವೆ.ಈ ಎಚ್ಚರಿಕೆಯನ್ನು ಹೊಂದಿದ್ದು, ಜಾಗೃತರಾಗಿ ಕೆಲಸ ಮಾಡುವುದಾದರೆ ಮಾತ್ರ ಒಂದಿಷ್ಟಾದರೂ ಮುಂದಿನ ಅವಘಡಗಳನ್ನು ತಪ್ಪಿಸಬಹುದು.

ಕೆಟ್ಟದ್ದು ಮತ್ತು ಒಳ್ಳೆಯದು ಎನ್ನುವುದೇ ಅವರವರ ಪರಿಕಲ್ಪನೆ. ಅವರವರ ಆಲೋಚನೆ, ಆಸಕ್ತಿ ಮತ್ತು ಇಷ್ಟಗಳ ಆಧಾರದ ಮೇಲೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಆಲೋಚಿಸುತ್ತಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ನಿರ್ಧರಿಸುತ್ತಾರೆ. ಅದರಂತೆಯೇ ವ್ಯಕ್ತಿಗಳನ್ನೂ, ಸಿದ್ಧಾಂತಗಳನ್ನೂ ಮತ್ತು ವ್ಯವಸ್ಥೆಗಳನ್ನೂ ದೂರುತ್ತಾರೆ ಅಥವಾ ಪ್ರಶಂಸಿಸುತ್ತಾರೆ. ಹಾಗಾಗಿಯೇ ಇಷ್ಟೊಂದು ಸಂಘರ್ಷ ಮತ್ತು ದೌರ್ಜನ್ಯಗಳು ಇರುವುದು.

ಒಬ್ಬ ಅಥವಾ ಎಲ್ಲರೂ ಮಾನಸಿಕವಾಗಿ ಉಲ್ಲಾಸದಿಂದ ಆನಂದದಿಂದ ಇರಬೇಕೆಂದರೆ ಎಂತಹ ಮನೋಭಾವವನ್ನು ಹೊಂದಿರಬೇಕೆಂದರೆ, ‘ಮೂಲಭೂತ ಅಗತ್ಯಗಳನ್ನು ಪೂರೈಸಿಕೊಂಡು ನಾನು ನನ್ನವರೊಂದಿಗೆ ಚೆನ್ನಾಗಿರಬೇಕು. ಆನಂದವಾಗಿರಬೇಕು. ಹಾಗೆಯೇ ಇತರರೂ ಚೆನ್ನಾಗಿರಬೇಕು. ಆನಂದವಾಗಿರಬೇಕು. ಇಷ್ಟೇ ನಾವು ಒಳ್ಳೆಯದು ಅಥವಾ ಕೆಟ್ಟದು ಎಂಬ ಎಲ್ಲಾ ಸಿದ್ಧಾಂತಗಳನ್ನೂ ಮೀರಿ ಇರಬೇಕಾಗಿರುವ ಮೂಲ ಮನೋಭಾವ. ಇದಕ್ಕೆ ಮೀರಿ ಸಂಗತಿಗಳು ನಮ್ಮಲ್ಲಿ ಮತ್ತು ಸುತ್ತಮುತ್ತಲೂ ಘಟಿಸುತ್ತಿರುವುದರಿಂದ ಕ್ಷಮೆ, ಕರುಣೆ, ಔದಾರ್ಯ, ವಿನಯ, ಕೃತಜ್ಞತೆ ಇತ್ಯಾದಿ ಪರಿಕಲ್ಪನೆಗಳು ನಿರ್ವಹಣಾ ತಂತ್ರಗಳಾಗಿ (ಮೇನೇಜ್ಮೆಂಟ್ ಟೆಕ್ನಿಕ್ಸ್) ಬೇಕಾಗಿರುವುದು.

ಅರಿಮೆಗಳೆಲ್ಲಾ ರೋಗಗಳೇನಲ್ಲ

ನಾನು ಚೆನ್ನಾಗಿದ್ದು ನನ್ನೊಡನೆ ಇರುವವರು ಚೆನ್ನಾಗಿರಲಿಲ್ಲವೆಂದರೂ ಕೆಲವರಲ್ಲಿ ಕೀಳರಿಮೆ ಕಾಡುತ್ತದೆ. ಅದಕ್ಕೆ Successor ಅಥವಾ Survivor Guilt ಎನ್ನುತ್ತೇವೆ. ನೀವು ಜೀವನ ನಿರ್ವಹಣೆಗೆ ಅಗತ್ಯವಿರುವಂತಹ ಜೀವನೋಪಾಯಕ್ಕೆ ಮಾರ್ಗ ಕಂಡುಕೊಂಡಿರುತ್ತೀರಿ. ಆರ್ಥಿಕತೆಯಲ್ಲಿ ಸ್ವಾವಲಂಬಿಯಾಗಿರುತ್ತೀರಿ. ಆದರೆ ನಿಮ್ಮ ತಮ್ಮನೋ ಅಥವಾ ಅಣ್ಣನೋ ಅಥವಾ ಇನ್ನಾದರೂ ಗೆಳೆಯರೋ ನಿಮಗೆ ಆತ್ಮೀಯವಾಗಿ, ಬದುಕಿನಲ್ಲಿ ಆಪ್ತವಾಗಿರುವವರು ಪರಾವಲಂಬಿಯಾಗಿರುತ್ತಾರೆ. ಆರ್ಥಿಕವಾಗಿ ಮುನ್ನೆಲೆಗೆ ಬಂದಿರುವುದಿಲ್ಲ. ತೊಂದರೆಯಲ್ಲಿ ಬಳಲುತ್ತಿರುತ್ತಾರೆ. ಆಗ ನಿಮಗೆ ಈ ಅಪರಾಧ ಪ್ರಜ್ಞೆ ಕಾಡಬಹುದು.

ನಮ್ಮ ಆಪ್ತರ ಹೆಂಡತಿ ತೀರಿ ಹೋಗಿದ್ದು, ಅವರು ಸಂಸಾರ ನಿರ್ವಹಣೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ, ನಾನು ನನ್ನ ಹೆಂಡತಿಯೊಡನೆ ಸುಖವಾಗಿ ಸಂಸಾರ ನಡೆಸುವುದಕ್ಕೆ ಕಸಿವಿಸಿ ಎನ್ನಿಸುವ ಭಾವವೂ ಕೂಡಾ ಈ ಅರಿಮೆಯೇ. ಸ್ಥಾನಮಾನ, ಹೆಚ್ಚಿನ ಅಂಕ, ಉತ್ತಮವಾದ ಮನೆ; ಹೀಗೆ ಯಾವ ವಿಷಯಕ್ಕಾದರೂ ನಮ್ಮಲ್ಲಿ ನಮಗೆ ಆಪ್ತರಾಗಿರುವವರಿಗಿಂತ ಹೆಚ್ಚಾಗಿದ್ದರೆ ಈ ಅರಿಮೆಯು ಬರಬಹುದು.

ಇದಕ್ಕೆ ಮಾಡಬೇಕಾದುದೇನು? ಮುಖ್ಯವಾಗಿ ನಾವು ಯಾರ ಬಗ್ಗೆ ಹಾಗೆ ಯೋಚಿಸುತ್ತಿರುತ್ತೇವೆಯೋ ಅವರಿಗೆ ಆ ರೀತಿಯಲ್ಲಿ ನಮ್ಮ ಬಗ್ಗೆ ಭಾವನೆಗಳಿರುವುದಿಲ್ಲ ಎಂಬುದನ್ನು ಆಲೋಚಿಸಬೇಕು. ಹಾಗೆಯೇ, ನಾವು ಉದ್ದೇಶಪೂರ್ವಕವಾಗಿ ನಮ್ಮ ಏಳ್ಗೆಯನ್ನು ಕೆಳಗಿಳಿಸಿಕೊಳ್ಳದೇ ಅವರಿಗೆ ನೆರವಾಗಬೇಕು, ನಮ್ಮ ಅಹಂಕಾರವು ಎಂದಿಗೂ ಅವರಿಗೆ ನೋವನುಂಟು ಮಾಡಬಾರದು ಎಂಬ ಪ್ರಜ್ಞೆಯನ್ನು ಸದಾ ಎಚ್ಚರದಲ್ಲಿಟ್ಟುಕೊಂಡಿರಬೇಕು. ನಮ್ಮ ಏಳ್ಗೆಗೆ ಕಾರಣವಾಗಿರುವ ಅಂಶಗಳನ್ನು ಗುರುತಿಸಿಕೊಂಡು ಅವರಲ್ಲಿ ಕೊರತೆಯಾಗಿರುವ ಅಂಶಗಳನ್ನು ಪೂರೈಸುವ ಅಥವಾ ನೆರವಾಗುವ ಮೂಲಕ ಈ ಬಗೆಯ ಅಪರಾಧದ ಅರಿಮೆಯನ್ನು ತೊಡೆದುಕೊಳ್ಳಬಹುದು.

ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೆಂದರೆ ಎಲ್ಲಾ ಅರಿಮೆಗಳೂ ಮಾನಸಿಕವಾಗಿರುವುದಾದರೂ ಅವೆಲ್ಲವೂ ಮಾನಸಿಕ ಸಮಸ್ಯೆ ಆಗಿರಲೇ ಬೇಕೆಂದಿಲ್ಲ. ಅಪರಾಧ ಪ್ರಜ್ಞೆಯಂತಹ ಅರಿಮೆಗಳು ವ್ಯಕ್ತಿಯ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಅನುಕೂಲಕರವಾಗಿಯೂ ಪರಿಣಮಿಸಲು ಸಾಧ್ಯ. ಒಟ್ಟಾರೆ, ತನ್ನ ತಾನು ತಿಳಿಯುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ಸಹಜವಾಗಿ ತನ್ನ ವರ್ತನೆ ಮತ್ತು ಪ್ರತಿಕ್ರಿಯೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಅದರ ಮೂಲಕ ತಾನು ಯಾವ ಬಗೆಯ ಅರಿಮೆಗೆ ಒಳಗಾಗಿದ್ದೇನೆ ಮತ್ತು ಅದರಿಂದ ಹೊರಗೆ ಬರಲು ಏನು ಕೆಲಸ ಮಾಡಬೇಕು ಎಂಬುವುದರ ಬಗ್ಗೆ ಸಕಾರಾತ್ಮಕವಾಗಿ ಕೆಲಸ ಮಾಡಲು ಕೂಡಾ ಸಾಧ್ಯವಾಗುತ್ತದೆ. ಅದು ವ್ಯಕ್ತಿಗೂ ಹಿತವೇ, ಸಮಾಜಕ್ಕೂ ಹಿತವೇ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending