Connect with us

ದಿನದ ಸುದ್ದಿ

ಕುಡಿಯುವ ನೀರಿನ ಅವಶ್ಯಕತೆ ಹಾಗೂ ನೈಜ ಪರಿಸರವಾಗಿ ಉಳಿಸಲು ಕುಂದವಾಡ ಕೆರೆ ಅಭಿವೃದ್ಧಿ : ಸಂಸದ ಜಿ.ಎಂ. ಸಿದ್ದೇಶ್ವರ

Published

on

ಸುದ್ದಿದಿನ,ದಾವಣಗೆರೆ : ಕುಂದವಾಡ ಕೆರೆಯು ದಾವಣಗೆರೆ ನಗರದ ಕುಡಿಯುವ ನೀರಿನ ಪ್ರಮುಖ ಸಂಗ್ರಹಗಾರವಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ಜನರಿಗೆ ಅಗತ್ಯ ಕುಡಿಯುವ ನೀರು ಪೂರೈಸಲು ಹಾಗೂ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸರವನ್ನು ಜೀವವೈವಿಧ್ಯಗಳ ವಿಕಸನಕ್ಕೆ ಅನುಕೂಲವಾಗುವಂತೆ ನೈಜ ರೀತಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಾಸ್ತವಾಂಶಗಳನ್ನು ಸಾರ್ವಜನಿಕರಿಗೆ ತಲುಪುವ ದಿಸೆಯಲ್ಲಿ ಜನಜಾಗೃತಿ ಮೂಡಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಿಟಿ ಲೆವೆಲ್ ಅಡೈಸರಿ ಫೋರಂ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರು ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿ, ಕೆರೆಯು ದಾವಣಗೆರೆ ನಗರದ ಕುಡಿಯುವ ನೀರಿನ ಪ್ರಮುಖ ಸಂಗ್ರಹಗಾರವಾಗಿದ್ದು, ಬೇಸಿಗೆಯಲ್ಲಿ ಕೆರೆ ಏರಿ ಮೇಲಿನ ಕಳೆ, ಗಿಡಗಂಟೆ ಇತ್ಯಾದಿಗಳ ಕೊಳೆಯುವಿಕೆಯಿಂದ ನೀರು ಹಸಿರುಗಟ್ಟಿ ಕುಡಿಯಲು ಯೋಗವಾಗದ ರೀತಿ ಪರಿವರ್ತನೆಯಾಗುತ್ತದೆ, ನೀರು ಕಲುಷಿತಗೊಳ್ಳುವುದರಿಂದ ಕೆರೆಯಲ್ಲಿನ ಮೀನುಗಳು, ಜೀವವೈವಿಧ್ಯಗಳು ಸಾಯುತ್ತವೆ. ಇದನ್ನು ಈ ಹಿಂದೆಯೂ ಗಮನಿಸಲಾಗಿದೆ.

ಕೆರೆಯ ಏರಿಯಲ್ಲಿನ ನೀರು ಬಸಿಯುವಿಕೆ, ಹಾಳಾಗಿರುವ ಏರಿ ಮೇಲಿನ ಕಲ್ಲುಹೊದಿಕೆ ಮುಂತಾದ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಕೆರೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದ್ದು, ಒಂದೂವರೆ ವರ್ಷದ ಹಿಂದೆಯೇ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ಏರಿಯ ಮೇಲೆ ವಿದ್ಯುತ್ ದೀಪ ಅಳವಡಿಕೆ, ಹೂವಿನ ಗಿಡಗಳನ್ನು ಹಾಕುವುದು, ಕಲ್ಲು ಬೆಂಚು ಅಳವಡಿಕೆ, ವಾಕಿಂಗ್ ಪಾತ್, ಸೈಕಲ್ ಟ್ರಾಕ್ ನಿರ್ಮಾಣ ಮಾಡಲಾಗುತ್ತಿದೆ. ಕೆರೆಯ ಒಳಗೆ ಸಾರ್ವಜನಿಕರು ಹಾಗೂ ಪ್ರಾಣಿಗಳು ಹೋಗದಂತೆ ಚೈನ್ ಲಿಂಕ್ ತಂತಿ ಬೇಲಿ ಅಳವಡಿಸಲು ಉದ್ದೇಶಿಸಲಾಗಿದೆ.

ಈ ಕೆರೆಗೆ ಯಾವುದೇ ಮಳೆ ನೀರಿನ ಒಳಹರಿವು ಇಲ್ಲದಿರುವುದರಿಂದ, ತುಂಗಭದ್ರಾ ನದಿ ಮತ್ತು ಭದ್ರಾ ಕಾಉವೆ ಮೂಲಕ ಹರಿಸಿ ತುಂಬಿಸಲಾಗುತ್ತಿದೆ. ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯ ವಿಷಯವಾಗಿರುವುದರಿಂದ, ಕೆರೆಯಲ್ಲಿ ಸ್ವಚ್ಛ ಪರಿಸರ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸತ್ಯಾಂಶಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ವಾಸ್ತವ ಸಂಗತಿಗಳನ್ನು ಅರಿಯದೆ, ಕುಂದವಾಡ ಕೆರೆ ಅಭಿವೃದ್ಧಿ ಯೋಜನೆಯು ಪರಿಸರ ವಿರೋಧಿಯೆಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕುಂದವಾಡ ಕೆರೆ ಪ್ರಸ್ತುತ ಕೇವಲ ಕೆರೆ ಮಾತ್ರವಲ್ಲದೆ, ನಗರಕ್ಕೆ ಕುಡಿಯುವ ನೀರಿಗೆ ಆಧಾರವಾಗಿರುವ ಪ್ರಮುಖ ನೀರು ಸಂಗ್ರಹಗಾರವಾಗಿದೆ. ಅಧಿಕಾರಿಗಳು ಕುಂದವಾಡ ಕೆರೆ ಅಭಿವೃದ್ಧಿಯ ಉದ್ದೇಶ ಕುರಿತ ವಾಸ್ತವ ಅಂಶಗಳನ್ನು ಸರಿಯಾದ ರೀತಿಯಲ್ಲಿ ಪ್ರಚುರಪಡಿಸಿದಲ್ಲಿ, ಯೋಜನೆ ಅಭಿವೃದ್ಧಿ ಕುರಿತಂತೆ ಇರುವ ತಪ್ಪು ಅಭಿಪ್ರಾಯಗಳು ದೂರವಾಗಲು ಸಾಧ್ಯ, ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಜನಜಾಗೃತಿ ಮೂಡಿಸಿ ಎಂದು ಸೂಚನೆ ನೀಡಿದರು.

ಚರಂಡಿ, ರಾಜಕಾಲುವೆ ನಿರ್ಮಾಣಕ್ಕೆ ಅಡ್ಡಿ

ನಗರದಲ್ಲಿ ಮಳೆ ಹೆಚ್ಚು ಬಂದಾಗ, ನೀರು ಸರಾಗವಾಗಿ ಹರಿಯದೆ, ತಗ್ಗು ಪ್ರದೇಶಗಳಿಗೆ ನುಗ್ಗಿ, ತೊಂದರೆ ಉಂಟಾಗುವುದನ್ನು ತಪ್ಪಿಸಲು ರಾಜ ಕಾಲುವೆ ಹಾಗೂ ಚರಂಡಿಗಳ ನಿರ್ಮಾಣವಾಗುತ್ತಿದ್ದು ಶೇ. 50 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಗರದಲ್ಲಿನ ರಾಜ ಕಾಲುವೆ (ಮುಖ್ಯ ಚರಂಡಿ) ಮಾರ್ಗಕ್ಕೆ ಹಲವೆಡೆ ಅನುಮೋದಿತ ಬಡಾವಣೆಯಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ತೊಂದರೆ ಉಂಟಾಗಿದೆ.

ಅಲ್ಲದೆ ನಗರದ ಹಳೆಯ ಭಾಗದಲ್ಲಿ ಚರಂಡಿ ಹಾಗೂ ರಸ್ತೆಯಲ್ಲಿ ನೀರಿನ ತೊಟ್ಟಿ, ಶೌಚಾಲಯ, ಮೆಟ್ಟಿಲುಗಳು, ಸ್ಟೇರ್‍ಕೇಸ್, ಸ್ಟೋರ್‍ರೂಂ ಇತ್ಯಾದಿಗಳನ್ನು ಅನಧಿಕೃತವಾಗಿ ಕಟ್ಟಿಕೊಂಡಿರುವುದನ್ನು ಗಮನಿಸಲಾಗಿದ್ದು, ಕಾಮಗಾರಿಗಳಿಗೆ ತೀವ್ರ ತೊಂದರೆಯಾಗಿದೆ. ಮಹಾನಗರಪಾಲಿಕೆಯಿಂದ ತೆರವು ಮಾಡಿಕೊಟ್ಟಲ್ಲಿ, ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ರವೀಂದ್ರ ಮಲ್ಲಾಪುರ ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಕ್ರಿಯಿಸಿ, ಮಹಾನಗರಪಾಲಿಕೆ ಆಯುಕ್ತರು ಕೂಡಲೆ ಅಂತಹ ಒತ್ತುವರಿಯನ್ನು ತೆರವುಗೊಳಿಸಿ, ಚರಂಡಿ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಡಬೇಕು. ಇದರಲ್ಲಿ ಯಾವುದೇ ಪ್ರಭಾವಗಳಿಗೆ ಮಣಿಯದೆ, ತುರ್ತಾಗಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ಇ-ಟಾಯ್ಲೆಟ್ ಸಮರ್ಪಕ ನಿರ್ವಹಣೆ

ನಗರ ವ್ಯಾಪ್ತಿಯಲ್ಲಿ ಈಗಾಗಲೆ 1 ಮತ್ತು 2 ನೇ ಹಂತದಲ್ಲಿ ಒಟ್ಟು 29 ಇ-ಟಾಯ್ಲೆಟ್‍ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಿದ್ದು, ಇನ್ನೂ 17 ನಿರ್ಮಾಣವಾಗಬೇಕಿದೆ. ಆದರೆ ಹಲವೆಡೆ ಇ-ಟಾಯ್ಲೆಟ್‍ಗಳ ಅಸಮರ್ಪಕ ನಿರ್ವಹಣೆಯಿಂದ ಹಾಳಾಗಿದ್ದು, ದೂರುಗಳು ಕೇಳಿಬರುತ್ತಿವೆ ಎಂದು ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯ ರವೀಂದ್ರ ಮಲ್ಲಾಪುರ ಉತ್ತರಿಸಿ, ಇ-ಟಾಯ್ಲೆಟ್‍ಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸದುದ್ದೇಶದಿಂದ ನಿರ್ಮಿಸಿದ್ದು, ಕೆಲವು ಕಿಡಿಗೇಡಿಗಳು ಕಾಯಿನ್ ಬಾಕ್ಸ್‍ನಲ್ಲಿ ಕಬ್ಬಿಣದ ತುಂಡು, ಕಟ್ಟಿಗೆ ತುಂಡುಗಳನ್ನು ಹಾಕಿ ಹಾಳು ಮಾಡುತ್ತಿದ್ದಾರೆ. ನಗರದಲ್ಲಿ ಎಲ್ಲ 46 ಇ-ಟಾಯ್ಲೆಟ್‍ಗಳನ್ನು ನಿರ್ಮಾಣ ಮಾಡಿ, ನಿರ್ವಹಣೆಗಾಗಿ ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಲಾಗುವುದು.

ರಸ್ತೆ ಸುರಕ್ಷತೆಗಾಗಿ ನಗರದಲ್ಲಿ ಹಾಕಿರುವ ಫ್ಲೆಕ್ಸಿಬಲ್ ಮೀಡಿಯನ್, ಮಾರ್ಕರ್, ಸೋಲಾರ್ ಬ್ಲಿಂಕರ್ಸ್‍ಗಳನ್ನು ದುಷ್ಕರ್ಮಿಗಳು ಕತ್ತರಿಸಿ, ಕಳುವು ಮಾಡಿಕೊಂಡು, ತಮ್ಮ ವಾಹನಗಳಿಗೆ ಅಳವಡಿಸಿರುವುದು ಕಂಡುಬಂದಿದ್ದು, ಅಂತಹ ವಾಹನಗಳ ಫೋಟೋ ಸಹಿತ ನಗರದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸ್ ಅಧಿಕಾರಿಗಳು ಇನ್ನೂ ಕ್ರಮ ಕೈಗೊಂಡಿಲ್ಲ ಎಂದರು.

ಸಭೆಯ ಮಧ್ಯದಲ್ಲಿಯೇ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ ಸಂಸದರು, ಇದುವರೆಗೂ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೂಡಲೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಕಾನೂನು ರೀತ್ಯ ಕ್ರಮ ಜರುಗಿಸುವಂತೆ ತಾಕೀತು ಮಾಡಿದರು.

ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಹಾನಗರಪಾಲಿಕೆ ಮಹಾಪೌರ ಅಜಯ್‍ಕುಮಾರ್, ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಸಿಟಿ ಲೆವೆಲ್ ಅಡೈಸರಿ ಫೋರಂ ಸದಸ್ಯರು, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ಇಂಜಿನಿಯರ್‍ಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೊರೋನ ಲಸಿಕೆ ಪಡೆದ ಸಂಸದ ಜಿ.ಎಂ.ಸಿದ್ದೇಶ್ವರ್

Published

on

ಸುದ್ದಿದಿನ,ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ನಗರದ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಭಿಯಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ (69) ಹಾಗೂ ಅವರ ಪತ್ನಿ ಗಾಯತ್ರಮ್ಮ.ಜಿ.ಎಸ್ (66), ಹಿರಿಯ ನಾಗರೀಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಸೇರಿದಂತೆ ಒಟ್ಟು 74 ಜನರು ಲಸಿಕೆ ಪಡೆದುಕೊಂಡರು.

ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಮಡದಿಯೊಂದಿಗೆ ಲಸಿಕೆ ಪಡೆದು ಮಾತನಾಡಿ, ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಕೊರೋನ ನಿಯಂತ್ರಣಕ್ಕೆ 10 ತಿಂಗಳೊಳಗಾಗಿ ಲಸಿಕೆ ಕಂಡುಹಿಡಿದಿರುವುದು ಅಭಿನಂದನಾರ್ಹ.

ಮೊದಲ ಹಂತದಲ್ಲಿ ಕೋವಿಡ್ ನಿಯಂತ್ರಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ನಂತರ ಕಂದಾಯ, ಪೌರಾಡಳಿತ, ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ ಫಲಾನುಭವಿಗಳಿಗೆ ನೀಡಲಾಗಿದೆ. ಈ ಲಸಿಕೆ ಸುರಕ್ಷಿತವಾಗಿದ್ದು, ಇದುವರೆಗೂ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿಸಿದರು.

ಮಾರ್ಚ್ 1 ರಂದು ಲಸಿಕೆ ಪಡೆಯಬೇಕಿತ್ತು. ಕಾರಣಾಂತರಗಳಿಂದ ಲಸಿಕೆ ಪಡೆಯಲು ಸಾಧ್ಯವಾಗಲಿಲ್ಲ. ಇಂದು ಸ್ವ-ಇಚ್ಚೆಯಿಂದ ನನ್ನ ಮಡದಿಯೊಂದಿಗೆ ಬಂದು ಲಸಿಕೆ ಪಡೆದಿದ್ದು, ಯಾವುದೇ ತೊಂದರೆಯಾಗಿಲ್ಲ. ಸುರಕ್ಷಿರಾಗಿದ್ದೇವೆ. ಲಸಿಕೆ ಪಡೆಯುವುದಕ್ಕು ಮುನ್ನ ಇಲ್ಲಿ ಲಸಿಕೆ ಪಡೆದ ಹಿರಿಯರನ್ನು ವಿಚಾರಿಸಿದ್ದು, ಯಾವುದೇ ರೀತಿಯ ಅಡ್ಡಪರಿಣಾಮ ಸಂಭವಿಸಿಲ್ಲ ಎಂದು ಭರವಸೆ ನೀಡಿದ್ದಾರೆ.

ಆದ್ದರಿಂದ ಲಸಿಕೆ ಪಡೆಯದ ಎಲ್ಲಾ ಹಿರಿಯ ನಾಗರೀಕರು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲಾ ಅನಾರೋಗ್ಯ ಪೀಡಿತರು ಯಾವುದೇ ಭಯವಿಲ್ಲದೇ, ಹಿಂಜರಿಯದೆ ಲಸಿಕೆ ಪಡೆದುಕೊಂಡು ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.

ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಮುಂಚೂಣಿ ಕೊರೋನ ವಾರಿಯರ್ಸ್‍ಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಮಾರ್ಚ್ 1 ರಿಂದ ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅಂತಹವರು ತಮ್ಮ ಆಧಾರ ಕಾರ್ಡ್‍ನೊಂದಿಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಶೇಕಡ 80 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ನಂತರ ಮುಂಚೂಣಿ ಕೊರೋನ ವಾರಿಯರ್ಸ್‍ಗಳಲ್ಲಿ ಶೇಕಡ 70 ರಷ್ಟು ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇನ್ನೂ ಕಂದಾಯ ಇಲಾಖೆಯಲ್ಲಿ ಶೇಕಡ 55 ರಷ್ಟು ಹಾಗೂ ಇನ್ನಿತರರು ಸೇರಿ ಶೇಕಡ 60 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ಲಸಿಕೆ ಪಡೆಯದವರಿಗೆ ಮಾ.6 ರವರೆಗೆ ಕಾಲವಕಾಶವಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು.

ಇದನ್ನೂ ಓದಿ | ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ

ಮಾರ್ಚ್ 1 ರಿಂದ ಮೂರನೇ ಹಂತದ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಮೊದಲ ದಿನ 11 ಜನ ಲಸಿಕೆ ಪಡೆದಿದ್ದರು. ಆದರೆ ಇಂದು ಸರ್ಕಾರಿ ಹಾಗೂ ಖಾಸಗಿ ಎರಡು ವಲಯಗಳು ಸೇರಿ 63 ಜನರು ಲಸಿಕೆ ಪಡೆದುಕೊಂಡಿದ್ದು, ಒಟ್ಟು 74 ಜನರು ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಮಂಗಳವಾರ ಸಂಸದರಾದ ಸಿದ್ದೇಶ್ವರ ಹಾಗೂ ಅವರ ಪತ್ನಿ ಲಸಿಕೆ ಹಾಕಿಸಿಕೊಂಡಿದ್ದು ಯಾವುದೇ ತೊಂದರೆಗಳು ಸಂಭವಿಸಿಲ್ಲ. ಆದ ಕಾರಣ ಯಾರು ಭಯ ಪಡದೇ, ಲಸಿಕೆ ಕುರಿತು ಪೂರ್ವಾಗ್ರಹ ಇಟ್ಟುಕೊಳ್ಳದೇ, ಧೈರ್ಯದಿಂದ ಮುಂದೆ ಬಂದು ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರೊಂದಿಗೆ ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಬೇಕು. ಕೊರೋನ ಮುಕ್ತ ದೇಶವನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಅಭಿಯಾನದಲ್ಲಿ ಸಂಸದರ ಪತ್ನಿ ಗಾಯತ್ರಮ್ಮ ಜಿ.ಎಸ್, ಕಾರ್ಪೋರೇಟರ್ ಆರ್.ಎಲ್.ಶಿವಪ್ರಕಾಶ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕ ನೀಲಕಂಠ, ಯುವ ಮುಖಂಡರಾದ ಶಿವಕುಮಾರ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ

Published

on

ಸುದ್ದಿದಿನ,ಕೊಪ್ಪಳ : ಬಂದ್ ಆಗಿರುವ ಶಾಲೆಯ ಡಿಪಾಸಿಟ್ ಅನ್ನು ವಾಪಾಸ್ ಪಡೆಯಲು ಮೂರುವರೆ (3.500ರೂ) ಲಂಚ ಕೇಳಿದ್ದ ಬಿ ಇ ಓ ಮತ್ತು ಎಫ್ ಡಿ ಎ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಭಾಗ್ಯನಗರದ ಎಸ್ ಎಸ್ ಕರ ಶಾಲೆಯ ಬಾಲಚಂದ್ರ ಕಬಾಡೆ ಎಂಬುವವರ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಮೂರೂವರೆ ಸಾವಿರ ಲಂಚ ಪಡೆಯುವಾಗವಾಗ ಬಿಇಓ ಉಮಾದೇವಿ ಸೊನ್ನದ, ಎಫ್ ಡಿ ಎ ಎ ಆರುಂಧತಿ ಬಲೆಗೆ ಬಿದ್ದಿದ್ದಾರೆ. ಶಾಲೆ 2002ರಲ್ಲಿ ಆರಂಭವಾಗಿದ್ದು ೨೦೦೯ 2009 ರಲ್ಲಿ ಬಂದಾಗಿತ್ತು.

ಇದನ್ನೂ ಓದಿ | ಅಶ್ಲೀಲ ಸಿಡಿ ವೈರಲ್ | ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ; ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡಿ

ಬಳ್ಳಾರಿ ಎಸ್ಪಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ ಡಿಎಸ್ಪಿ ಶಿವಕುಮಾರ್, ಎಸ್ ಐ ಎಸ್ ಎಸ್ ಬೀಳಗಿ, ಎಸೈ ಬಾಳನಗೌಡ ತಂಡವು ಈ ದಾಳಿ ನಡೆಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಶ್ಲೀಲ ಸಿಡಿ ವೈರಲ್ | ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ; ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡಿ

Published

on

ಸುದ್ದಿದಿನ, ಬೆಂಗಳೂರು : ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ಆಗಬಾರದೆಂದು ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅವರಿಗೆ ರವಾನೆ ಮಾಡಿದ್ದು ತಮ್ಮ ನಿಲುವನ್ನು ತಿಳಿಸಿದ್ದಾರೆ.

ಇದನ್ನೂ ಓದಿ | ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್; ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ

ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ತಪ್ಪಿಸಲು, ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪ್ರಕರಣದಲ್ಲಿ ನಾನು ಆರೋಪ ಮುಕ್ತನಾದ ಬಳಿಕ ನನಗೆ ಸಚಿವ ಸ್ಥಾನ ನೀಡಿ ಎಂದು ಸಿಎಂಬಿ.ಎಸ್.ಯಡಿಯೂರಪ್ಪಗೆ ರವಾನಿಸಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending