Connect with us

ದಿನದ ಸುದ್ದಿ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾಧ್ಯಮ ಪ್ರತಿನಿಧಿಗಳಿಗೆ ಮೀಡಿಯಾ ಕಿಟ್ ; ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಮಾಧ್ಯಮ ಪ್ರತಿನಿಧಿಗಳನ್ನು,ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2024-25ನೇ ಸಾಲಿಗೆ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ “ಮೀಡಿಯಾ ಕಿಟ್” ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅಥವಾ ಆಯಾ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು, ಇಲಾಖೆಯ ಮಾನ್ಯತಾ ಕಾರ್ಡು (Accriditation Card) , ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ (ಉಪಜಾತಿ), ಪತ್ರಿಕಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾನುಭವ, ವೇತನ ವಿವರಗಳನ್ನೊಳಗೊಂಡ ಮಾಹಿತಿಯನ್ನು ಭರ್ತಿ ಮಾಡಿ ಸ್ವ-ವಿಳಾಸವಿರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಬಯಸುವವರು ಅರ್ಜಿಯೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 2024-25ನೇ ಸಾಲಿನಲ್ಲಿ ವಿತರಿಸಲಾಗಿರುವ ಮಾಧ್ಯಮ ಮಾನ್ಯತಾ ಕಾರ್ಡು ಹೊಂದಿರುವ ಬಗ್ಗೆ ದೃಢೀಕೃತ ಜೆರಾಕ್ಸ್ ಪ್ರತಿ, ಜಾತಿ ದೃಢೀಕರಣಕ್ಕಾಗಿ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರದ ದೃಢೀಕೃತ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು ಹಾಗೂ ಅರ್ಜಿಯಲ್ಲಿ ನಮೂದಿಸಲಾಗಿರುವ ಎಲ್ಲಾ ಮಾಹಿತಿಗಳಿಗೆ ಅಧಿಕೃತ ಪೂರಕ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದೊಳಗಾಗಿ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಸರ್ಕಾರದ ವ್ಯಾಪ್ತಿಗೆ ಒಳಪಡುವ ನಿಗಮ, ಮಂಡಳಿಗಳಿಂದ ಹಾಗೂ ಸರ್ಕಾರದ ಯಾವುದೇ ಇಲಾಖೆಗಳಿಂದ ಈ ಯೋಜನೆಯಡಿ ಮಾಧ್ಯಮ ಕಿಟ್ ಗಳನ್ನು ಪಡೆದಿರುವುದಿಲ್ಲ ಎಂದು ರೂ. 100 ರ ಬಾಂಡ್ ನಲ್ಲಿ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು.

ಮಾಧ್ಯಮ ಕಿಟ್ ಒದಗಿಸಲು ಪತ್ರಕರ್ತರ ಸೇವಾ ಹಿರಿತನ, ವಯೋಮಿತಿ ಹಾಗೂ ಸೇವಾನುಭವದ ಗರಿಷ್ಠತೆಯನ್ನು ಪರಿಗಣಿಸಲಾಗುವುದು. ಅರ್ಜಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ವಿವರ, ಪ್ರಸಾರ ಸಂಖ್ಯೆ, ಪತ್ರಿಕೆಯ ಮಾಧ್ಯಮ ಪಟ್ಟಿಯ ವಿವರ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ದೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ದಿನಾಂಕ: 10-11-2024 ರ ಸಂಜೆ 5:00 ಗಂಟೆಯೊಳಗೆ ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿಗಳಿಗೆ ಸಲ್ಲಿಸಬೇಕು. ಲಕೋಟೆಯ ಮೇಲ್ಬಾಗದಲ್ಲಿ “ಪ.ಜಾ ಹಾಗೂ ಪ.ಪಂ.ಮಾಧ್ಯಮ ಮಾನ್ಯತೆ ಪತ್ರಕರ್ತರಿಗೆ ಮೀಡಿಯಾ ಕಿಟ್ ಗಾಗಿ ಅರ್ಜಿ” ಎಂದು ನಮೂದಿಸಿರಬೇಕು.

ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್‍ನಲ್ಲಿ ಅಂತ್ಯ ಸಂಸ್ಕಾರ

Published

on

ಸುದ್ದಿದಿನ,ದಾವಣಗೆರೆ:ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದಂತೆ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಅಪಾರ ಜನಸ್ತೋಮದೊಂದಿಗೆ ಸೋಮವಾರ ಸಂಜೆ ಜರುಗಿತು.

ಡಾ; ಶಾಮನೂರು ಶಿವಶಂಕರಪ್ಪನವರಿಗೆ 95 ವರ್ಷವಾಗಿದ್ದು ವಯೋಸಹಜ ಅನಾರೋಗ್ಯದಿಂದ ಡಿಸೆಂಬರ್ 14 ರಂದು ನಿಧನ ಹೊಂದಿದ್ದರು. 6 ಭಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಸುಧೀರ್ಘ ರಾಜಕೀಯ ಸೇವೆಯಲ್ಲಿದ್ದ ಇವರು ರಾಜ್ಯ ಸೇರಿದಂತೆ ದಾವಣಗೆರೆಗೆ ಹೊಸ ರೂಪಕೊಟ್ಟಿದ್ದರು.
ಸೋಮವಾರ ಬೆಳಗ್ಗೆ 7.30 ಗಂಟೆಯಿಂದ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನದಿಂದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.

ಮಧ್ಯಾಹ್ನ 3.30 ರಿಂದ ಹೈಸ್ಕೂಲ್ ಮೈದಾನದಿಂದ ಹೊರಟು ಹಳೇ ದಾವಣಗೆರೆ ಮಂಡಿಪೇಟೆ, ಕಾಯಿಪೇಟೆ, ಅರಳಿವೃತ್ತದ ಮೂಲಕ ಕಲ್ಲೇಶ್ವರ ಮಿಲ್‍ಗೆ ಪಾರ್ಥಿವ ಶರೀರ ತಲುಪಿತು. ಸಂಜೆ 4.30 ರಿಂದ ಅಂತಿಮ ವಿಧಿ ವಿಧಾನಗಳು ನಡೆದವು.

ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಅವರು, ಇಂಧನ ಸಚಿವರಾದ ಕೆ.ಜೆ.ಜಾರ್ಜ್‍ರವರು, ಸಮಾಜ ಕಲ್ಯಾಣ ಸಚಿವರಾದ ಡಾ; ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ.ಎಸ್.ಪಾಟೀಲ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಸೇರಿದಂತೆ ಶಾಸಕರು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.

ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರಾಷ್ಟ್ರಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿ ಅಂತಿಮವಾಗಿ ಶೋಕ ವ್ಯಕ್ತಪಡಿಸಲಾಯಿತು. ರಾಷ್ಟ್ರಧ್ವಜವನ್ನು ಅವರ ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ಪೂಜೆ, ವಿಧಿ, ವಿಧಾನಗಳೊಂದಿಗೆ ಪಾರ್ಥಿವ ಶರೀರವನ್ನು ಐಕ್ಯ ಮಂಟಪದಲ್ಲಿ ಇಡಲಾಯಿತು.

ಡಾ; ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸೊಸೆ ಹಾಗೂ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಇನ್ನಿಬ್ಬರು ಪುತ್ರರಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಸೇರಿದಂತೆ ಶಾಮನೂರು ಶಿವಶಂಕರಪ್ಪನವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಗೃಹ ಸಚಿವರಾದ ಜಿ.ಪರಮೇಶ್ವರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಬಿ.ಜೆ.ಪಿ.ಪಕ್ಷದ ರಾಜ್ಯಾದ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಂತಿಮ ದರ್ಶನ ಪಡೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

Published

on

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

Published

on

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.

ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending