ದಿನದ ಸುದ್ದಿ
ಧೂಮಪಾನ ರಹಿತ ದಿನ : ಭಾರತವನ್ನು ಶೇ. 100ರಷ್ಟು ಧೂಮಪಾನ ಮುಕ್ತಗೊಳಿಸಲು ಕೋಟ್ಪಾ ಕಾಯ್ದೆ ತಿದ್ದುಪಡಿಗೆ ವೈದ್ಯರು, ಕ್ಯಾನ್ಸರ್ ಪೀಡಿತರ ಬೆಂಬಲ
ಸುದ್ದಿದಿನ,ಬೆಂಗಳೂರು : ಪ್ರತಿವರ್ಷ ಮಾರ್ಚ್ ಎರಡನೇ ಬುಧವಾರದಂದು ಆಚರಿಸಲಾಗುವ ಧೂಮಪಾನ ರಹಿತ ದಿನದ ಹಿನ್ನೆಲೆಯಲ್ಲಿ ಜನರನ್ನು ಪರೋಕ್ಷ ಧೂಮಪಾನದಿಂದ ರಕ್ಷಿಸಲು ಹೋಟೆಲ್, ರೆಸ್ಟೋರೆಂಟ್ ಮತ್ತು ವಿಮಾನ ನಿಲ್ದಾಣಗಳಲ್ಲಿ ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು ತೆಗೆದುಹಾಕುವಂತೆ ವೈದ್ಯರು, ಕ್ಯಾನ್ಸರ್ ಪೀಡಿತರು ಮತ್ತು ಹೋಟೆಲ್ ಮಾಲೀಕರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ ಕೋಟ್ಪಾ (COTPA) 2003ಕ್ಕೆ ತಿದ್ದುಪಡಿ ಪ್ರಕ್ರಿಯೆ ಆರಂಭಿಸಿರುವ ಭಾರತ ಸರ್ಕಾರವನ್ನು ಅಭಿನಂದಿಸಿದ ಅವರು, ಭಾರತವನ್ನು ಶೇ. 100ರಷ್ಟು ಧೂಮಪಾನ ಮುಕ್ತಗೊಳಿಸಲು ಮತ್ತು ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ನಿರ್ದಿಷ್ಟ ಧೂಮಪಾನ ಪ್ರದೇಶಗಳಿಗೆ ಅನುಮತಿ ನೀಡುವ ಕಾನೂನನ್ನು ಕೂಡಲೇ ತೆಗೆದುಹಾಕಬೇಕೆಂದು ಮನವಿ ಮಾಡಿದ್ದಾರೆ.
“ಧೂಮಪಾನ ಕೋವಿಡ್ ಸೋಂಕಿಗೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಧೂಮಪಾನ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹದಗೆಡಿಸಿ, ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಕೋವಿಡ್ ಸೋಂಕಿಗೆ ತುತ್ತಾಗುವ ಧೂಮಪಾನಿಗಳು ಹೆಚ್ಚಿನ ತೊಂದರೆ ಅನುಭವಿಸುವುದಲ್ಲದೆ ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ.
ಸಂಪೂರ್ಣ ಧೂಮಪಾನ ಹೊಗೆ ಮುಕ್ತ ವಾತಾವರಣ ಕಲ್ಪಿಸಲು ಹೋಟೆಲ್, ರೆಸ್ಟೋರೆಂಟ್‌ಗಳು ಮಾತ್ರವಲ್ಲದೆ ವಿಮಾನ ನಿಲ್ದಾಣಗಳಲ್ಲಿಯೂ ಎಲ್ಲ ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು ತೆಗೆದು ಹಾಕಬೇಕು. ಬಹುತೇಕ ನಿರ್ದಿಷ್ಟ ಧೂಮಪಾನ ಪ್ರದೇಶಗಳು ಕೋಟ್ಪಾ ನಿಯಮಗಳನ್ವಯ ತೆರೆದಿರುವುದಿಲ್ಲ ಮತ್ತು ಸಾರ್ವಜನಿಕರನ್ನು ಧೂಮಪಾನ ಹೊಗೆಗೆ ಒಡ್ಡಿಕೊಳ್ಳುವಂತೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ದೂಡುತ್ತಿವೆ,” ಎಂದು ಪ್ರಸಿದ್ಧ ಕ್ಯಾನ್ಸರ್ ತಜ್ಞರಾದ ಡಾ. ರಮೇಶ್ ಬಿಳಿಮಗ್ಗ ಹೇಳಿದ್ದಾರೆ.
ಇದನ್ನೂ ಓದಿ | ಬ್ಯಾಂಕ್ ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ 2 ದಿನದ ಬ್ಯಾಂಕ್ ಮುಷ್ಕರ
ಭಾರತದಲ್ಲಿ ಕೋಟ್ಪಾ 2003ರ ಅನ್ವಯ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಈ ಕಾಯ್ದೆಯ ನಾಲ್ಕನೇ ಸೆಕ್ಷನ್ ಸಾರ್ವಜನಿಕರಿಗೆ ಪ್ರವೇಶವಿರುವ ಯಾವುದೇ ಸ್ಥಳದಲ್ಲಿ ಧೂಮಪಾನವನ್ನು ನಿಷೇಧಿಸುತ್ತದೆ. ಆದರೆ, ರೆಸ್ಟೋರೆಂಟ್, ಹೋಟೆಲ್, ವಿಮಾನ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಧೂಮಪಾನ ಮಾಡಲು ಕೋಟ್ಪಾ 2003 ಅವಕಾಶ ಒದಗಿಸುತ್ತದೆ.
“ಧೂಮಪಾನ ಮಾಡದ ಸಾವಿರಾರು ಜನ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ರೆಸ್ಟೋರೆಂಟ್, ಪಬ್ ಮತ್ತು ಕ್ಲಬ್‌ಗಳಲ್ಲಿ ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಂಡು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ. ಸಿಗರೇಟ್ ಹೊಗೆ ಧೂಮಪಾನ ಪ್ರದೇಶಗಳಿಂದ ಇತರೆ ಪ್ರದೇಶಗಳಿಗೆ ಹಬ್ಬುವುದರಿಂದ, ಯಾವುದೇ ಆವರಣದಲ್ಲಿ ಧೂಮಪಾನಕ್ಕೆ ಅನುಮತಿ ನೀಡದಂತೆ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಸ್ಥಳಗಳು ಸಂಪೂರ್ಣ ಧೂಮಪಾನ ಮುಕ್ತವಾಗಿರಬೇಕು”, ಎಂದು ಪರೋಕ್ಷ ಧೂಮಪಾನದ ಸಂತ್ರಸ್ತೆ ಮತ್ತು ಆರೋಗ್ಯ ಕಾರ್ಯಕರ್ತೆ ನಳಿನಿ ಸತ್ಯನಾರಾಯಣ್ ಮನವಿ ಮಾಡುತ್ತಾರೆ.
ಪರೋಕ್ಷ ಧೂಮಪಾನ ನೇರ ಧೂಮಪಾನದಷ್ಟೇ ಹಾನಿಕಾರಕವಾಗಿದೆ. ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುವುದರಿಂದ ವಯಸ್ಕರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದ್ರೋಗ ಸಮಸ್ಯೆ ಉಂಟಾದರೆ ಮಕ್ಕಳಲ್ಲಿ ಶ್ವಾಸಕೋಶದ ದುರ್ಬಲತೆ ಮತ್ತು ಉಸಿರಾಟ ಸಂಬಂಧಿ ಸೋಂಕು ಸೇರಿದಂತೆ ಅನೇಕ ಖಾಯಿಲೆಗಳು ಉಂಟಾಗುತ್ತವೆ. ದುರ್ಬಲ ಉಸಿರಾಟ ಮತ್ತು ಹೃದಯ ರಕ್ತನಾಳದ ಸಮಸ್ಯೆ ಇರುವವರಿಗೆ ಕೋವಿಡ್-19 ಹೆಚ್ಚು ಬಾಧಿಸುವುದಲ್ಲದೆ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ನಿರ್ದಿಷ್ಟ ಧೂಮಪಾನ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಪಾಲಿಸಲು ಮತ್ತು ಮಾಸ್ಕ್ ಧರಿಸಲು ಸಾಧ್ಯವಿಲ್ಲದ ಕಾರಣ ಹಾಗು ಧೂಮಪಾನಿಗಳು ಹೊಗೆ ತುಂಬಿದ ವಾತಾವರಣದಲ್ಲಿ ಸಿಲುಕುವುದರಿಂದ, ನಿರ್ದಿಷ್ಟ ಧೂಮಪಾನ ಪ್ರದೇಶಗಳು ಕೋವಿಡ್-19 ಸೋಂಕಿನ ಹರಡುವಿಕೆಯನ್ನು ಹೆಚ್ಚಿಸುತ್ತವೆ.
“ನಮ್ಮ ರೆಸ್ಟೋರೆಂಟನ್ನು ಶೇ. 100ರಷ್ಟು ಧೂಮಪಾನ ಮುಕ್ತವನ್ನಾಗಿ ಮಾಡಿರುವುದರಿಂದ ಗ್ರಾಹಕರು ಮತ್ತು ಸಿಬ್ಬಂದಿಯ ಆರೋಗ್ಯ ವೃದ್ಧಿಸುತ್ತಿದೆಯಲ್ಲದೆ ವ್ಯಾಪಾರವನ್ನೂ ಹೆಚ್ಚಿಸಿದೆ. ಕುಟುಂಬ ಸಮೇತ ಬರುವ ಗ್ರಾಹಕರು ಧೂಮಪಾನಕ್ಕೆ ಅನುಮತಿ ನೀಡದ ಸ್ಥಳಗಳಲ್ಲಿ ಊಟ ಮಾಡಲು ಬಯಸುತ್ತಾರೆ. ತಂಬಾಕು ಹೊಗೆಗೆ ಒಡ್ಡಿಕೊಂಡಾಗ ಮಕ್ಕಳು, ಮಹಿಳೆಯರು ಮತ್ತು ಹಿರಿಯರು ಕಸಿವಿಸಿಗೊಳ್ಳುತ್ತಾರೆ.
ಧೂಮಪಾನ ಪ್ರದೇಶವನ್ನು ತೆರವುಗೊಳಿಸಿದ ನಂತರ ನಾವು ಹೆಚ್ಚು ಸಂತುಷ್ಟ ಗ್ರಾಹಕರನ್ನು ಪಡೆದಿದ್ದು, ಜಾಗದ ಆರೋಗ್ಯಕರ ಬಳಕೆಯೂ ಸಾಧ್ಯವಾಗಿದೆ,” ಎಂದು ಬೆಂಗಳೂರಿನ ಕಾರಾ ರೆಸ್ಟೋರೆಂಟ್ ಮಾಲೀಕರಾದ ಶ್ರೀಮತಿ. ರಾಧ ನಾಯರ್ ಹೇಳುತ್ತಾರೆ. ಹೆಚ್ಚುತ್ತಿರುವ ವಹಿವಾಟಿನಿಂದ ಸ್ಪೂರ್ತಿ ಪಡೆದಿರುವ ಅವರು, ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ಇತರೆ ಕೆಫೆ ಮತ್ತು ರೆಸ್ಟೋರೆಂಟ್‌ಗಳು ಕೂಡ ಶೇ. 100ರಷ್ಟು ಧೂಮಪಾನ ಮುಕ್ತ ಪ್ರದೇಶಗಳಾಗಬೇಕು ಎಂದು ಒತ್ತಾಯಿಸುತ್ತಾರೆ.
ಕೋಟ್ಪಾ ಕಾಯ್ದೆಗೆ ತಿದ್ದುಪಡಿ ಪ್ರಕ್ರಿಯೆಯನ್ನು ಆರಂಭಿಸಿರುವ ಭಾರತ ಸರ್ಕಾರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ ನಿಯಂತ್ರಣ) (ತಿದ್ದುಪಡಿ) ಮಸೂದೆ, 2020 ಅನ್ನು ಪರಿಚಯಿಸಿದೆ.
ಭಾರತದಲ್ಲಿ ನಡೆಸಿದ ಇತ್ತೀಚಿನ ಸಮೀಕ್ಷೆಯೊಂದು ಶೇ. 72ರಷ್ಟು ಜನ ಪರೋಕ್ಷ ಧೂಮಪಾನ ಗಂಭೀರ ಆರೋಗ್ಯ ಸಮಸ್ಯೆ ಎಂದು ಭಾವಿಸಿದ್ದಾರೆ ಮತ್ತು ಶೇ. 88ರಷ್ಟು ಜನ ಈ ಪಿಡುಗನ್ನು ನಿವಾರಿಸಲು ಪ್ರಸ್ತುತ ಜಾರಿಯಲ್ಲಿರುವ ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಪ್ರಬಲವಾಗಿ ಬೆಂಬಲಿಸುತ್ತಾರೆ ಎಂದು ಬಹಿರಂಗಗೊಳಿಸಿತ್ತು.
“ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ 2003ಕ್ಕೆ ತಿದ್ದುಪಡಿ ಪ್ರಕ್ರಿಯೆ ಆರಂಭಿಸಿರುವ ಭಾರತ ಸರ್ಕಾರವನ್ನು ನಾವು ಶ್ಲಾಘಿಸುತ್ತೇವೆ. ಇದು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಪ್ರಮುಖ ಹೆಜ್ಜೆಯಾಗಿದೆ. ಬೇಜವಾಬ್ದಾರಿಯುತ ಧೂಮಪಾನಿಗಳು ಸುತ್ತಮುತ್ತಲಿನ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಕಾರಣ ಭಾರತವನ್ನು ಶೇ. 100ರಷ್ಟು ಧೂಮಪಾನ ಮುಕ್ತವಾಗಿಸುವ ನಿಟ್ಟಿನಲ್ಲಿ ಕಾನೂನುಗಳನ್ನು ಬಲಪಡಿಸುವ ತುರ್ತು ಅಗತ್ಯವಿದೆ.
ಧೂಮಪಾನಿಗಳಲ್ಲದವರು ಕೂಡ ಇದನ್ನು ಪ್ರತಿಭಟಿಸುವಲ್ಲಿಉದಾಸೀನ ತೋರುತ್ತಿದ್ದು, ಜವಾಬ್ದಾರಿಯುತ ಜನಪ್ರತಿನಿಧಿಗಳು ತಂಬಾಕು ಸಂಬಂಧಿತ ಖಾಯಿಲೆ ಮತ್ತು ಸಾವಿನಿಂದ ಜನರನ್ನು ರಕ್ಷಿಸಲು ಕಾನೂನನ್ನು ಕಠಿಣವಾಗಿ ಜಾರಿಗೆ ತರಲು ಅಷ್ಟೇನೂ ಕಾಳಜಿ ವಹಿಸುತ್ತಿಲ್ಲ,” ಎಂದು ಶ್ರೀ ಎಸ್ ಜೆ ಚಂದರ್, ಸಂಚಾಲಕರು, ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕ, ತಿಳಿಸಿದರು.
ತಂಬಾಕು ಬಳಕೆ ಜಾಗತಿಕವಾಗಿ ರೋಗ ಮತ್ತು ಅಕಾಲಿಕ ಮರಣಗಳಿಗೆ ಪ್ರಮುಖ ಹಾಗು ತಡೆಗಟ್ಟಬಹುದಾದ ಕಾರಣವಾಗಿದ್ದು, ಭಾರತದಲ್ಲಿ ಪ್ರತಿವರ್ಷ 12 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತಿದ್ದಾರೆ. ಸಮಾಜದ ಎಲ್ಲ ಸ್ತರಗಳಿಗೆ ಸೇರಿದ 26 ಕೋಟಿಗೂ ಹೆಚ್ಚು ತಂಬಾಕು ಬಳಕೆದಾರರು ಭಾರತದಲ್ಲಿದ್ದಾರೆ.
ತಂಬಾಕು ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಪ್ರತಿವರ್ಷ 1,82,000 ಕೋಟಿ ರೂಪಾಯಿಗಳು ವ್ಯಯವಾಗುತ್ತಿದ್ದು, ಇದು ಭಾರತದ ಜಿಡಿಪಿಯ ಶೇಕಡಾ 1.8% ರಷ್ಟಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ತಂಬಾಕಿನ ಎಲ್ಲ ರೀತಿಯ ಬಳಕೆಗೂ, ಅದು ಧೂಮಪಾನವಾಗಲಿ ಅಥವ ಜಗಿಯುವುದಾಗಲಿ, ಕೋವಿಡ್ ಸಂಬಂಧಿ ಸಾವು-ನೋವುಗಳಿಗೂ ಗಮನಾರ್ಹ ನಂಟಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.
ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7 ಕೋಟಿ ಅನುದಾನದಲ್ಲಿನ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ವಕೀಲ ಕೆ.ಎ.ಓಬಳಪ್ಪ ಅವರು ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಒಟ್ಟು 4 ಹಂತದಲ್ಲಿ 7 ಕೋಟಿ ರೂಪಾಯಿಗಳನ್ನು ಚಿತ್ರದುರ್ಗ ಜಿಲ್ಲೆಯ 06 ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 06 ತಾಲ್ಲೂಕುಗಳ ಉಪವಿಭಾಗಗಳಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ, ಯಾವುದೇ ಉಪವಿಭಾಗಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ ಅರ್ಜಿ ಸಲ್ಲಿಸಿ, ‘2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ’ ದೂರು ನೀಡಲಾಗಿತ್ತು ಎಂದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ನಮ್ಮ ದೂರು ಅರ್ಜಿಯನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿ, ಸೂಕ್ತ ಕ್ರಮವಹಿಸಿ ಕಛೇರಿಗೆ ವರದಿ ಸಲ್ಲಿಸಲು ಸೂಚಿಸಿರುತ್ತಾರೆ. ಅದರಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರು ವಿಚಾರಣೆ ನಡೆಸಿ, ಅರ್ಜಿದಾರರಿಗೆ ಕಡತ ವೀಕ್ಷಣೆ ಮಾಡಲು ಅವಕಾಶ ನೀಡಿ, ದಾಖಲೆ ನೀಡುವಂತೆ ಆದೇಶ ಹೊರಡಿಸಿರುತ್ತಾರೆ ಎಂದು ತಿಳಿಸಿದರು.
ಕಾರ್ಯಪಾಲಕ ಅಭಿಯಂತರರ ಆದೇಶದಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಇವರುಗಳು ವಿವಿಧ ದಿನಾಂಕಗಳAದು ಉಪವಿಭಾಗಗಳಿಗೆ ಆಹ್ವಾನಿಸಿ, ಕಡತ ಪರಿಶೀಲನೆ ಮಾಡಿಕೊಳ್ಳುವಂತೆ ತಿಳಿಸಿದ ಕಾರಣ ಉಪವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳು ನಿಗಧಿಪಡಿಸಿದ ದಿನಾಂಕದಂದು ಉಪವಿಭಾಗಗಳ ಕಛೇರಿಗೆ ಭೇಟಿ ನೀಡಿದಾಗ ಕಂಡುಬಂದ ಅಂಶಗಳೆಂದರೆ;
1. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿತ್ರದುರ್ಗ ಇಲ್ಲಿ ಒಟ್ಟು 80 ಕಾಮಗಾರಿಗಳು ನಡೆದಿದ್ದು, ಇದರಲ್ಲಿ ಕೇವಲ 23 ಕಾಮಗಾರಿಗಳ (ಅಂದಾಜು ಮೊತ್ತ ರೂ. 37.88 ಲಕ್ಷ) ಕಡತಗಳನ್ನು ತೋರಿಸಿದ್ದು, ಉಳಿದ ಕಾಮಗಾರಿಯ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಕಡತ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
2. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಳ್ಳಕೆರೆ ಇಲ್ಲಿ ಒಟ್ಟು 80 ಕಾಮಗಾರಿಗಳ ಕಡತಗಳಲ್ಲಿ 28 ಕಾಮಗಾರಿಗಳ ಕಡತಗಳನ್ನು ತೋರಿಸಿದ್ದು, ಉಳಿದ 52 ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಈ ಕಛೇರಿಗಳಲ್ಲಿ ಯಾವುದೇ ಕಡತಗಳು ಲಭ್ಯವಿರುವುದಿಲ್ಲ. ಕಛೇರಿಯ ಸಿಬ್ಬಂದಿಗಳು ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬುದಾಗಿ ದೃಢೀಕರಣ ನೀಡಿರುತ್ತಾರೆ ಎಂದು ತಿಳಿಸಿದರು.
ಕಡತ ಪರಿಶೀಲನೆಯ ತರುವಾಯ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ದೂರು ನೀಡಿ, ನಾವು ಕೋರಿದ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು. ಆದರೆ ಕಾರ್ಯಪಾಲಕ ಅಭಿಯಂತರರು ಇವರು ಮಾಹಿತಿ ಕೊಡಿಸುವಲ್ಲಿ ಮತ್ತು ತನಿಖಾ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಹಾಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಅವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುತ್ತದೆ ಎಂದರು.
ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 6 ಉಪವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 13 ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಅಂದಿನ ಕಾರ್ಯಪಾಲಕ ಅಭಿಯಂತರರಾದ ಬಸವನಗೌಡ ಪಾಟೀಲ್ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ವಕೀಲರಾದ ನಾಗರಾಜ ಪೂಜಾರ್, ಪತ್ರಕರ್ತ ಅಶೋಕ್, ಹನುಮಂತಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ2 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ12 hours agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್

