ಭಾವ ಭೈರಾಗಿ
ಕವಿತೆ | ಭಾರತ ನಾಡಿನ ಜ್ಞಾನದ ರತುನ

ಭಾರತ ನಾಡಿನ ಜ್ಞಾನದ ರತುನ
ಕೇಳೋ ಕತೆಯನ್ನ
ನಾ ಹೇಳೋ ಕತೆಯನ್ನ
ನಾಡನು ಕಟ್ಟಿದ ನಾಗ ಕುಲದ
ಭೀಮನ ಕತೆಯನ್ನ
ಜೈ ಭೀಮನ ಕತೆಯನ್ನ
ಮಹಾರಾಷ್ಟ್ರದ ರಾಜ್ಯದಲ್ಲಿ
ಮಹೌ ಎಂಬ ಊರಿನಲ್ಲಿ
ಭೀಮನು ಜನಿಸಿದ್ದ ಜ್ಞಾನದ ರಾಜ್ಯದಿ ಮೆರೆದಿದ್ದ
ಚೌಡರ್ ಕೆರೆಯ ನೀರಿನಲ್ಲಿ
ಕಾಳಾರಾಂ ದೇಗುಲದಲ್ಲಿ
ಕೆಚ್ಚೆದೆ ತೋರಿದ್ದ ಗೆಲುವಿನ ನಗೆಯನು ಬೀರಿದ್ದ
ಹಕ್ಕುಗಳೇ ತಾನಾಗಿ
ನಮ್ಮಯ ದಿಕ್ಕಾಗಿ
ಗಾಂಧೀಜಿಯ ಗರಡಿಯಲಿ
ಒಪ್ಪಂದಕೆ ಸಹಿ ಹಾಕಿ
ಶೋಷಿತ ಸಮತೆಗೆ ನಾಡಿನ ಮಮತೆಗೆ
ಭೀಮನು ಹೆಸರಾದ
ಜೈ ಭೀಮನು ಹೆಸರಾದ
ಮೂವತ್ತೇಳರ ಚುನಾವಣೆಯಲಿ ಮಹಾರಾಷ್ಟ್ರದ ಪ್ರಾಂತ್ಯದಲ್ಲಿ
ಭೀಮನು ಗೆದ್ದಿದ್ದ ಕಾರ್ಮಿಕ ಮಂತ್ರಿಯು ತಾನಾದ
ರಿಸರ್ವ್ ಬ್ಯಾಂಕಿನ ಸ್ಥಾಪನೆಯಲ್ಲಿ
ಭಾಕ್ರಾ ನಂಗಲ್ ಡ್ಯಾಮಿನಲ್ಲಿ
ಜ್ಞಾನವ ಮೆರೆದಿದ್ದ ತನ್ನಯ ಕೌಶಲ ತೋರಿದ್ದ
ಕಾರ್ಮಿಕರ ಹಕ್ಕಾಗಿ
ಬಡವರ ದಿಕ್ಕಾಗಿ
ಮಹಿಳೆಯರ ಉಸಿರಾಗಿ
ರೈತರಿಗೆ ನೆರವಾಗಿ
ಸಮಗ್ರ ಭಾರತ ಕಟ್ಟಲು ಭೀಮ
ಇಟ್ಟನು ಹೆಜ್ಜೆಯನು
ದಿಟ್ಟ ಕೆಚ್ಚೆದೆ ಹೆಜ್ಜೆಯನು
ಸಂವಿಧಾನದ ಚುನಾವಣೆಯಲಿ ಬಂಗಾಳದ ಪ್ರಾಂತ್ಯದಲ್ಲಿ
ಭೀಮನು ಜಯಿಸಿದನು
ಜೈ ಭೀಮನು ಜಯಿಸಿದನು
ಸ್ವಾತಂತ್ರ್ಯದ ಹರುಷದಲ್ಲಿ ದೇಶದ ಖುಷಿಯ ನಿಮಿಷದಲ್ಲಿ
ಮಂತ್ರಿಯು ತಾನಾದ
ಕಾನೂನು ಇಲಾಖೆ ಜೊತೆಯಾದ
ಮೂಲಭೂತ ಹಕ್ಕಾದ ಕರ್ತವ್ಯ ಜೊತೆ ಬೆಸೆದ
ನಿರ್ದೇಶಕ ತತ್ವಗಳ ಪೀಠಿಕೆ ತಾ ಬರೆದ
ಹೆಮ್ಮೆಯ ಪಡೆದ ಸಂವಿಧಾನದ
ಶಿಲ್ಪಿಯು ತಾನಾದ
ಸಂವಿಧಾನವ ತಾ ಬರೆದ
ಹಿಂದೂ ಸಂಹಿತೆ ಮಸೂದೆಯಲ್ಲಿ ಮಹಿಳೆಯರ ಹಕ್ಕುಗಳಲ್ಲಿ
ಭೀಮನು ಮುಳುಗಿದನು
ಜೈ ಭೀಮನು ಮುಳುಗಿದನು
ಬುದ್ಧನ ಧ್ಯಾನದ ಮೈತ್ರಿಯಲ್ಲಿ
ಬುದ್ಧನ ಧಮ್ಮದ ದಿಕ್ಕಿನಲ್ಲಿ
ಭೀಮನು ಚಲಿಸಿದನು ಜೈ ಭೀಮನು ಚಲಿಸಿದನು
ಹತ್ತು ಲಕ್ಷ ಜೊತೆಯಲ್ಲಿ
ಇತಿಹಾಸದ ಕತೆ ಅಲ್ಲಿ
ಬುದ್ಧ ಘೋಷ ಮೊಳಗಿರಲು
ಪ್ರಕೃತಿಯೇ ಮಿನುಗಿರಲು
ಬುದ್ಧನ ಜ್ಞಾನದ ಸತ್ಯದ ಮಾರ್ಗದಿ
ಭೀಮನು ತಾ ನಡೆದ
ಬುದ್ಧನ ಹಿಂದೆಯೇ ತಾ ನಡೆದ.
–ರಘೋತ್ತಮ ಹೊ.ಬ
ಈ ಗೀತೆಯ ಗಾಯನದ ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಮೌನಾಮೃತ

~ ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ), ಗಂಗಾವತಿ
ಅದೆಷ್ಟೋ ಬಗೆಹರಿಯದ
ಸಮಸ್ಯೆಗಳಿಗೆ
ಮೌನಾಮೃತವ
ಸಿಂಪಡಿಸಿ ಸುಮ್ಮನಾಗಿಬಿಡು.
ಅರ್ಥವಿರದ
ವ್ಯರ್ಥ ವಾಗ್ವಾದಗಳಿಗೆ
ಮೌನದ ಪೂರ್ಣವಿರಾಮವನಿಟ್ಟು
ಹೊರಟುಬಿಡು.
ಮಾತಾಡಿ
ಕಿರುಚಾಡಿ
ರಮಟರಾಡಿ ಮಾಡುವ ಬದಲು
ಒಂದರೆಗಳಿಗೆ
ಮೌನದ ಮೊರೆಹೋಗಿ ನೋಡು.
ಅದೆಷ್ಟೋ ಮುಗಿಯದ
ಮನದ ತೊಳಲಾಟಗಳಿಗೆ
ಮೌನವೆಂಬ ಉತ್ತರವುಂಟು
ಅದನ್ನಪ್ಪಿ ಮನಕ್ಕೊಂದಿಷ್ಟು
ಶಾಂತಿಯ ನೀಡಿ ನಕ್ಕುಬಿಡು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅವ ಸುಡುತ್ತಾನೆ

~ ಶೃತಿ ಮಧುಸೂದನ (ರುದ್ರಾಗ್ನಿ)
ಅವ ಸುಡುತ್ತಾನೆ…
ಅವ ಸಂಪ್ರದಾದಯವ
ಸೆರಗ ನನಗುಡಿಸಿ
ನಗುತ್ತಾನೆ…
ಅವ ಅತ್ತಿಂದತ್ತ
ಅಲೆದಾಡುವ
ಮುಂಗುರುಳ
ಮುದ್ದಿಸಿ ಮಡಿ
ಮಡಿಕೆಯ ನಿವಾಳಿಸಿ
ನಿಟ್ಟುಸಿರ ಬಿಟ್ಟ
ಬಸವನಂತೆ…
ನೆತ್ತಿ ಮೇಲಣ
ಮದ್ದೇರಿ ಮೆರೆವ
ಮುದ್ದಣನ
ಕರಿಯಂತೆ…
ಕಣ್ಣು ಕುಕ್ಕುವ
ಕೊರತೆಗಳ
ಬದಿಗಿಟ್ಟು
ಬೈತಲೆಯ
ಬಿಂದಿಯ
ಬೆವರೊಳಗಣ
ಕಾವ್ಯ ಕುಂಕುಮದಂತೆ…
ಅವ… ಅವ ಕವಿ
ಎಂಬುವ ಕಾಡಿಗೆಗೆ
ತನ್ನ ಕಪ್ಪೆಂದುಕೊಂಡು
ನನ್ನಿಂದ ದೂರ ಸರಿದವ…
ಹಾಲ್ಬೆಳಕ
ಹಠವಾದಿ
ಹೆಣ್ಣಿನ ಮುಂದೆ
ಹಮ್ಮು ಬಿಟ್ಟು
ಹಿಂದಿರುಗುವ
ಇರಾದೆ ಇಲ್ಲದೇ
ನಡೆದು ಹೋದವ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

~ವಿಜಯ್ ನವಿಲೇಹಾಳು
ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ
ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು
ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?
ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ
ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ
ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.
ಇತರೆ ಕವಿತೆಗಳು
೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243
