ಭಾವ ಭೈರಾಗಿ
ಕವಿತೆ | ಬೆಸ್ತರು

ಮಚಾಡೋ ಹೇಳಿದ ಹಾಗೆ
ಕವಿ ಬೆಸ್ತ :
ನಿರಂತರದ ಹೊಳೆಯಲ್ಲಿ ಹಿಡಿದ ಮೀನು
ಐದು ನಿಮಿಷದ ಹಿಂದೆ ಬಳುಕಿ ಮಿಂಚಿದ ಮೀನು
ಹೊರಗೂ ಬದುಕಬೇಕೆನ್ನುವ ನಿಮಿಷದಾಚೆಯ ಬೆಸ್ತ.
ಕೆಲವರ ಕೈ ರಾಶಿ,
ಈ ಪವಾಡ ಕೂಡ ಅವರಿಗೆ ಸಿದ್ಧಿ.
ನಮ್ಮಂಥವರ ಕೈಯಲ್ಲಿ ಅವು
ಸತ್ತು ಎವೆಯಿಕ್ಕದೆ
ನಾರುವ ಮೀನು:
ಮತ್ತೆ ಕೆಲವರಿಗೆ
ರಾತ್ರಿ ಊಟ
ಕೈ ಗರಿಗರಿ ಕರಿದ ಮೀನು
ಹರಿವ ನೀರಿನ ಸಾರು.
–ಎ.ಕೆ.ರಾಮಾನುಜನ್
( ಎ.ಕೆ.ರಾಮಾನಜನ್ ಅವರ ‘ಕುಂಟೋ ಬಿಲ್ಲೆ’ ಕವನ ಸಂಕಲನದಿಂದ ಈ ಕವಿತೆ ತೆಗೆದುಕೊಳ್ಳಲಾಗಿದೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಮೌನಾಮೃತ

~ ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ), ಗಂಗಾವತಿ
ಅದೆಷ್ಟೋ ಬಗೆಹರಿಯದ
ಸಮಸ್ಯೆಗಳಿಗೆ
ಮೌನಾಮೃತವ
ಸಿಂಪಡಿಸಿ ಸುಮ್ಮನಾಗಿಬಿಡು.
ಅರ್ಥವಿರದ
ವ್ಯರ್ಥ ವಾಗ್ವಾದಗಳಿಗೆ
ಮೌನದ ಪೂರ್ಣವಿರಾಮವನಿಟ್ಟು
ಹೊರಟುಬಿಡು.
ಮಾತಾಡಿ
ಕಿರುಚಾಡಿ
ರಮಟರಾಡಿ ಮಾಡುವ ಬದಲು
ಒಂದರೆಗಳಿಗೆ
ಮೌನದ ಮೊರೆಹೋಗಿ ನೋಡು.
ಅದೆಷ್ಟೋ ಮುಗಿಯದ
ಮನದ ತೊಳಲಾಟಗಳಿಗೆ
ಮೌನವೆಂಬ ಉತ್ತರವುಂಟು
ಅದನ್ನಪ್ಪಿ ಮನಕ್ಕೊಂದಿಷ್ಟು
ಶಾಂತಿಯ ನೀಡಿ ನಕ್ಕುಬಿಡು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅವ ಸುಡುತ್ತಾನೆ

~ ಶೃತಿ ಮಧುಸೂದನ (ರುದ್ರಾಗ್ನಿ)
ಅವ ಸುಡುತ್ತಾನೆ…
ಅವ ಸಂಪ್ರದಾದಯವ
ಸೆರಗ ನನಗುಡಿಸಿ
ನಗುತ್ತಾನೆ…
ಅವ ಅತ್ತಿಂದತ್ತ
ಅಲೆದಾಡುವ
ಮುಂಗುರುಳ
ಮುದ್ದಿಸಿ ಮಡಿ
ಮಡಿಕೆಯ ನಿವಾಳಿಸಿ
ನಿಟ್ಟುಸಿರ ಬಿಟ್ಟ
ಬಸವನಂತೆ…
ನೆತ್ತಿ ಮೇಲಣ
ಮದ್ದೇರಿ ಮೆರೆವ
ಮುದ್ದಣನ
ಕರಿಯಂತೆ…
ಕಣ್ಣು ಕುಕ್ಕುವ
ಕೊರತೆಗಳ
ಬದಿಗಿಟ್ಟು
ಬೈತಲೆಯ
ಬಿಂದಿಯ
ಬೆವರೊಳಗಣ
ಕಾವ್ಯ ಕುಂಕುಮದಂತೆ…
ಅವ… ಅವ ಕವಿ
ಎಂಬುವ ಕಾಡಿಗೆಗೆ
ತನ್ನ ಕಪ್ಪೆಂದುಕೊಂಡು
ನನ್ನಿಂದ ದೂರ ಸರಿದವ…
ಹಾಲ್ಬೆಳಕ
ಹಠವಾದಿ
ಹೆಣ್ಣಿನ ಮುಂದೆ
ಹಮ್ಮು ಬಿಟ್ಟು
ಹಿಂದಿರುಗುವ
ಇರಾದೆ ಇಲ್ಲದೇ
ನಡೆದು ಹೋದವ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

~ವಿಜಯ್ ನವಿಲೇಹಾಳು
ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ
ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು
ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?
ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ
ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ
ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.
ಇತರೆ ಕವಿತೆಗಳು
೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243
