ದಿನದ ಸುದ್ದಿ
ಆತ್ಮಕತೆ | ವಿಶ್ವವಿದ್ಯಾಲಯದ ವಿರುದ್ಧ ನಡೆಸಿದ ಎರಡು ಧರಣಿಗಳು
- ರುದ್ರಪ್ಪ ಹನಗವಾಡಿ
ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ, ಕುವೆಂಪು ಅವರ ಮಾನಸಪುತ್ರರೆಂದೇ ಖ್ಯಾತರಾಗಿದ್ದ ಕನ್ನಡದ ಗದ್ಯ ಬರಹಗಾರ ಪ್ರೊ. ದೇ.ಜ.ಗೌ. ಅವರು ಎರಡು ಅವಧಿಗೆ ಉಪಕುಲಪತಿಗಳಾಗಿದ್ದರು. ಅವರ ಆಡಳಿತಾವಧಿಯಲ್ಲಿಯೇ ಹಲವು ಹೊಸ ಇಲಾಖೆ ಮತ್ತು ಗಂಗೋತ್ರಿಯಲ್ಲಿನ ಅನೇಕ ಹೊಸ ಕಟ್ಟಡಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಮಾಡಿಸಿದ್ದರು. ಹೀಗಿರುವಾಗ ನಾವು ಫೈನಲ್ ಎಂ.ಎ.ನಲ್ಲಿರುವಾಗ ಪ್ರಥಮ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಗಳಲ್ಲಿ ಸೇರಿಸಿಕೊಳ್ಳುವಾಗ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಬಂದ ಕಾರಣ ಸಮಾಜವಾದಿ ಯುವಜನ ಸಭಾ ವತಿಯಿಂದ ಪ್ರತಿಭಟಿಸಲು ತೀರ್ಮಾನಿಸಲಾಯಿತು.
ಮೊದಲನೆಯದಾಗಿ ವಿಶ್ವವಿದ್ಯಾಲಯದ ಪಿ.ಜಿ. ಗಳಲ್ಲಿ ಪ್ರವೇಶಾವಕಾಶಗಳು, ವಿದ್ಯಾರ್ಥಿಗಳು ಆಯಾ ವಿಷಯಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅವಕಾಶವನ್ನು ಪಡೆಯುತ್ತಿದ್ದರು. ನಾನು 1972-73ನೇ ಸಾಲಿನಲ್ಲಿ ಸೇರಿದಾಗಲೂ ಹಲವು ವಿಷಯಗಳಲ್ಲಿ ಪ್ರವೇಶಾವಕಾಶದ ಕೊನೆಯ ಹಂತದಲ್ಲಿ ಮಂತ್ರಿ ಮಹೋದಯರೋ ಇಲ್ಲ ವಿಶ್ವವಿದ್ಯಾಲಯದಲ್ಲಿನ ಪ್ರೊಫೆಸರ್ಗಳ ಶಿಫಾರಸ್ಸಿನಿಂದ ಒಂದೋ ಎರಡೋ ಕಡಿಮೆ ಅಂಕ ಪಡೆದವರಿಗೂ ಸೀಟು ಕೊಡುತ್ತಿದ್ದರು. ಇವೆಲ್ಲ ಬಹಳ ದಿನಗಳ ನಂತರ ತಿಳಿಯುತ್ತಿದ್ದವು. ಆದರೆ 1973-74 ಆರಂಭಿಕ ಪ್ರವೇಶದಲ್ಲಿ ಅನೇಕ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿದ್ದರೂ ಹಲವಾರು ವ್ಯಕ್ತಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ 8-10 ವಿದ್ಯಾರ್ಥಿಗಳು ಹಲವಾರು ಸ್ನಾತಕೋತ್ತರ ಶಾಖೆಗಳಲ್ಲಿ ಸೇರ್ಪಡೆಯಾಗಿದ್ದರು.
ಅವುಗಳ ವಿರುದ್ಧ ಸಮಾಜವಾದಿ ಯುವಜನ ಸಭಾದ ವಿದ್ಯಾರ್ಥಿಗಳು ದೇವನೂರು ಮಹಾದೇವನ ನೇತೃತ್ವದಲ್ಲಿ ಕ್ರಾರ್ಡ್ ಹಾಲ್ ಎದುರು ಧರಣಿ ಕೂತಿದ್ದೆವು. ಸಣ್ಣದೊಂದು ಪೆಂಡಾಲ್ ಹಾಕಿಕೊಂಡು ವಿಶ್ವವಿದ್ಯಾಲಯದ ಅತ್ಯುನ್ನತ ಕಲಿಕಾ ಕೇಂದ್ರಗಳಲ್ಲಿ ಕ್ರಮಬದ್ಧವಲ್ಲದ ಪ್ರವೇಶಗಳನ್ನು ರದ್ದುಪಡಿಸಲು ಆಗ್ರಹಿಸಿ ಧರಣಿ ನಡೆಯುತ್ತಿತ್ತು. ಈ ಧರಣಿ ಪ್ರಾರಂಭವಾಗುತ್ತಿದ್ದಂತೆ ಎಲ್ಲೆಲ್ಲಿ ಎಷ್ಟೆಷ್ಟು ವಿದ್ಯಾರ್ಥಿಗಳನ್ನು ಶಿಫಾರಸ್ಸಿನ ಮೇರೆಗೆ ಪ್ರವೇಶ ಪಡೆದಿದ್ದಾರೆ ಎನ್ನುವ ಚರ್ಚೆ ಬಂದು ರಾಜ್ಯಶಾಸ್ತç ವಿಭಾಗದಲ್ಲಿ ಅತ್ಯಂತ ಹೆಚ್ಚು ಅನಧಿಕೃತ ಪ್ರವೇಶ ಆಗಿದ್ದವೆಂದು ತಿಳಿದು ಬಂದಿತ್ತು.
ಉಳಿದ ವಿಭಾಗಗಳಲ್ಲಿ ಒಂದು ಎರಡು ಹೀಗೆ ಇದ್ದರೆ, ಕೆ.ಬಿ.ವೈ. ತೋಟಪ್ಪನವರು ಮುಖ್ಯಸ್ಥರಾಗಿದ್ದ ರಾಜ್ಯಶಾಸ್ತç ವಿಭಾಗದಲ್ಲಿ ಅದು ಹೆಚ್ಚಾಗಿತ್ತು. ಹೀಗೆ ಧರಣಿ ಮಾಡುತ್ತಿದ್ದ ನಮ್ಮಲ್ಲಿಗೆ ಮಹೇಶ ರಾಜ್ಯಶಾಸ್ತç ವಿಭಾಗಕ್ಕೆ ಶಿಫಾರಸ್ಸಿನಲ್ಲೇ ಪ್ರವೇಶ ಪಡೆದವನು, ನಮಗೆಲ್ಲ ಇಡ್ಲಿ ಚಟ್ನಿ ಕಟ್ಟಿಸಿಕೊಂಡು ಬಂದು ಕೊಟ್ಟನು. ಅವನ ವಿರುದ್ಧವೇ ನಾವು ಧರಣಿ ಕೂತಿದ್ದರೂ, ಯಾವ ಭಾವಾವೇಶವೂ ಇಲ್ಲದೆ, ಅವನನ್ನು ನೋಡಿ ನಮಗೆ ಅತ್ಯಾಶ್ಚರ್ಯವಾಗಿತ್ತು. ಎಲ್ಲ ಅನಧಿಕೃತ ಪ್ರವೇಶಾರ್ಥಿಗಳನ್ನು ತೆಗೆದು ಹಾಕಿದರೆ ನನಗೇನು ಬೇಸರವಿಲ್ಲ. ನಮ್ಮಪ್ಪನಿಗೆ ಸ್ವಲ್ಪ ಬೇಜಾರಾಗಬಹುದೆಂದು ಹೇಳಿದ್ದು ಈಗ ನೆನಪಾಗುತ್ತಿದೆ. ನಮ್ಮ ಧರಣಿಯಿಂದಾಗಿ ಈಗಾಗಲೇ ಆಗಿರುವ ಪ್ರವೇಶಾರ್ಥಿಗಳನ್ನು ತೆಗೆದು ಹಾಕಲಿಲ್ಲ. ಮುಂದಿನ ವರ್ಷಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿ ಪ್ರೊಫೆಸರ್ಗಳು ಪ್ರವೇಶಗಳಿಗೆ ಅರ್ಹವಾದ ವಿದ್ಯಾರ್ಥಿಗಳ ಅರ್ಜಿಗಳನ್ನು ಕುಲಪತಿಗಳ ಅನುಮೋದನೆ ಪಡೆದು, ನಂತರ ಪ್ರವೇಶಾರ್ಥಿಗಳಿಗೆ ಪ್ರವೇಶ ನೀಡುವ ಪರಿಪಾಲನೆ ಜಾರಿಗೆ ಬಂದಿದ್ದೊಂದು ಎಸ್.ವೈ.ಎಸ್. ಸಂಘಟನೆಯ ಸಾಧನೆ.
ಜೊತೆಗೆ ನಾನೂ ಕೂಡ, ಕಳೆದ ವರ್ಷವಷ್ಟೇ ಪಾರ್ವತಕ್ಕನವರ ಶಿಫಾರಸ್ಸಿನಿಂದ ಮೂರನೇ ಲಿಸ್ಟ್ನಲ್ಲಿ ಸೀಟು ಪಡೆದುಕೊಂಡಿದ್ದು, ಆ ಬಗ್ಗೆ ನನ್ನೊಳಗೆ ಅಪರಾಧಿ ಭಾವ ಇದ್ದೇ ಇತ್ತು. ಆಗ ಇದೊಂದು ದೊಡ್ಡ ಮಟ್ಟದ ಅನ್ಯಾಯವೆಂದು ಯಾರೂ ಪರಿಗಣಿಸದೆ ಮುಚ್ಚಿ ಹೋಯಿತು. ಈಗ ಅಂತಹ ಶಿಫಾರಸ್ಸಿನವರ ಸಂಖ್ಯೆಯೇ ಜಾಸ್ತಿಯಾಗಿ, ಅದರ ವಿರುದ್ಧ ಹೋರಾಟ ರೂಪಿಸುವಂತೆ ಆಗಿದ್ದು, ನಾನೂ ಕೂಡ ಭಾಗವಹಿಸಿದ್ದು ಆ ಕಾಲಘಟ್ಟದ ಎಚ್ಚರಿಕೆಯಲ್ಲಿದ್ದ ಸಂಘಟನೆಯ ಶಕ್ತಿಯಾಗಿತ್ತು.
ನಮ್ಮ ಧರಣಿಯ ವಿವರ ಮತ್ತು ಅನಧಿಕೃತ ಪ್ರವೇಶಾರ್ಥಿಗಳು ಅರ್ಥಶಾಸ್ತ್ರ ವಿಭಾಗದಲ್ಲೂ ಆಗಿರುವ ಬಗ್ಗೆ ಬಂಡಾಯ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವುಗಳ ಪ್ರತಿಗಳನ್ನು ನಾನು ಸ್ವತಃ ಕ್ಲಾಸಿನಲ್ಲಿ ಹಂಚಿದ್ದೆ. ಆದರೆ ನಮ್ಮ ವಿಭಾಗದ ಮುಖ್ಯಸ್ಥರಾದ ಜಿ.ಟಿ. ಹುಚ್ಚಪ್ಪನವರು ಯಾವುದೇ ವಿಚಾರಣೆ ನಡೆಸದೆ ಸುಮ್ಮನಾಗಿದ್ದರು. ಅವರು, ಆಗ ತೋರಿದ ದೊಡ್ಡತನ ಮರೆಯಲಾಗಿಲ್ಲ. ಅವರು ಮನಸ್ಸು ಮಾಡಿದ್ದರೆ ನನಗೆ ಶೈಕ್ಷಣಿಕವಾಗಿ ತೊಂದರೆ ಕೊಡಬಹುದಾಗಿತ್ತು. ಆದರೆ ಹಿರಿಯರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪ ಅವರು ದೊಡ್ಡತನದಿಂದಲೇ ನಡೆದುಕೊಂಡಿದ್ದರು. ಗಂಗೋತ್ರಿ ತುಂಬಾ ಎಲ್ಲ ವಿಭಾಗಗಳ ಹೊರಗೆ ಅನಧಿಕೃತ ಪ್ರವೇಶಾರ್ಥಿಗಳ ಕುರಿತು ಘೋಷವಾಕ್ಯಗಳನ್ನು ಬರೆದಿದ್ದೆವು. ವಿಜ್ಞಾನ ಮತ್ತು ರಾಜ್ಯಶಾಸ್ತç ವಿಭಾಗದಲ್ಲಿ ಆಗಿದ್ದ ಪ್ರವೇಶಾರ್ಥಿಗಳ ವಿವರಗಳನ್ನು ಬಾಟನಿ ವಿಭಾಗದಲ್ಲಿ ರೀಡರ್ ಆಗಿದ್ದ ಪ್ರೊ. ರಾಮಲಿಂಗಮ್ ಅವರೊಡನೆ ಇತರೆ ಅಧ್ಯಾಪಕರುಗಳು ಕೂಡ ನಮಗೆ ವಿವರ ನೀಡುತ್ತಿದ್ದರು. ಎಲ್ಲಾ ವಿಭಾಗಗಳ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಗೋಡೆಯ ಮೇಲೂ ಕೂಡ ಬರೆದಿದ್ದೆವು. ಮಾರನೆ ದಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಹಾ.ಮಾ. ನಾಯಕ್ ಅವರು ಬಂದು ನೋಡಿ ಇದೆಲ್ಲಾ `ತಮ್ಮ ವಿದ್ಯಾರ್ಥಿ ಮಹಾದೇವನದೇ ಕೈವಾಡವೆಂದು ರೇಗಾಡಿದರೆಂತಲೂ, ಆತನಿಗೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದರೆಂದು’ ಆಲನಹಳ್ಳಿ ಕೃಷ್ಣ ಬಂದು ನನ್ನ ಬಳಿ ಹೇಳಿದರು.
ನಾನು ಮಹಾದೇವ ಬಂದಾಕ್ಷಣ ಅವನ ಕನ್ನಡ ವಿಭಾಗದಲ್ಲಿ ಆದ ಬೆಳವಣಿಗೆಯನ್ನು ತಿಳಿಸಿದೆ ಅದಕ್ಕವನು `ನಾವೆಲ್ಲ ಮಾಡುತ್ತಿರುವ ಹೋರಾಟದಲ್ಲಿ ನಿಮ್ಮಂತವರ ಬೆಂಬಲ ತಾತ್ವಿಕವಾಗಿ ಇರುವುದೆಂದು ಭಾವಿಸಿದ್ದೆವು, ಆದರೆ ನೀವು ಆಲನಹಳ್ಳಿ ಕೃಷ್ಣ ಅವರ ಬಳಿ ಆಡಿದ ಮಾತು ಕೇಳಿ ನನಗೆ ಜಿಗುಪ್ಸೆ ಮೂಡಿ ನಿಮ್ಮಂತಹವರ ಕೆಳಗೆ ವಿದ್ಯಾಭ್ಯಾಸ ಮುಂದುವರಿಸಲು ನಾಚಿಕೆಯಾಗುತ್ತದೆ’ ಎಂದು ಪತ್ರ ಬರೆದು ಹಾ.ಮಾ. ನಾಯಕ್ ಮತ್ತು ಪ್ರಜಾವಾಣಿ ಪತ್ರಿಕೆಗೂ ಕಳಿಸಿಕೊಟ್ಟುಬಿಟ್ಟ. ಇದಕ್ಕೆಲ್ಲ ಕಾರಣರಾದ ಆಲನಹಳ್ಳಿ ಅವರಿಗೆ ಪೀಕಲಾಟವಾಯಿತು. ಪೋಸ್ಟ್ ಹಾಕಿದ ಪತ್ರ ಹಾ.ಮಾ.ನಾ.ಗೆ ಮತ್ತು ಪ್ರಜಾವಾಣಿಗೆ ತಲುಪಿದರೂ ಪ್ರಕಟಿಸದಂತೆ ಪ್ರಜಾವಾಣಿಗೆ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ ಹಾ.ಮಾ.ನಾ.ಗೆ ಬರೆದ ಪತ್ರ ತಲುಪಿ ಮಾದೇವನನ್ನು ಕರೆದು ಮಾತಾಡಿಸಿ, ಹಾ.ಮಾ.ನಾ. ನಾವುಗಳು ಮಾಡುತ್ತಿರುವ ಹೋರಾಟದ ಬಗ್ಗೆ ತಮ್ಮದೇನೂ ಅಭ್ಯಂತರವಿಲ್ಲವೆAದು ಹೇಳಿ ಕಳಿಸಿದರೆಂದು ನಂತರ ತಿಳಿಯಿತು. ಹಾಗಾಗಿ ಮಾದೇವ ಎಂ.ಎ. ಪೂರ್ತಿ ಮುಗಿಸುವ ತನಕ ಮತ್ತೇನು ತೊಂದರೆಯಾಗಲಿಲ್ಲ.
ನಮ್ಮ ಸೀನಿಯರ್ ಆಗಿದ್ದ ಬಸವಣ್ಯಪ್ಪ ಆಗಲೇ ಎಂ.ಎ. ಮುಗಿಸಿ ಪರ್ವತಕ್ಕನ ಸೋಷಿಯಾಲಜಿ ವಿಭಾಗದಲ್ಲಿ ಸಹಾಯಕ ನಿರ್ದೇಶಕನ ಕೆಲಸ ಮಾಡುತ್ತಿದ್ದ. ನಾನು ನನ್ನ ಎಸ್ವೈಎಸ್ ಚಟುವಟಿಕೆಗಳ ಬಗ್ಗೆ ಪತ್ರಿಕೆಗಳಲ್ಲಿ ವಿಶ್ವವಿದ್ಯಾಲಯದ ವಿಷಯ ಮುದ್ರಿಸಿ ತರಗತಿಯಲ್ಲಿ ಹಂಚಿದ ಬಗ್ಗೆ ತಿಳಿದು, ನನಗೆ ಎಚ್ಚರಿಕೆ ನೀಡಿ ನಿನಗೆ ಎಂ.ಎ.ನಲ್ಲಿ ಥರ್ಡ್ ಕ್ಲಾಸ್ ನೀಡಿ ಎಲ್ಲೂ ನಿನಗೆ ಕೆಲಸವಿದಲ್ಲದಂತೆ ಮಾಡುತ್ತಾರೆಂದು ತಿಳಿಸಿ ಆತಂಕ ವ್ಯಕ್ತಪಡಿಸಿದ್ದ. ಆದರೆ ಅಂತಹದ್ದೇನೂ ನಡೆಯದೆ ಫಲಿತಾಂಶ ಬಂದಾಗ ನಾನು ಎಂ.ಎ. ಸೆಕೆಂಡ್ ಕ್ಲಾಸ್ನಲ್ಲಿ ಪಾಸಾಗಿ ಹೊರಬಂದಿದ್ದೆ. ಅದಕ್ಕೆಲ್ಲ ಅಂದಿನ ಮುಖ್ಯಸ್ಥರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪನವರ ವಿಶಾಲ ಹೃದಯದ ನಡವಳಿಕೆಯೇ ಕಾರಣವಾಗಿತ್ತು.
ಇನ್ನೊಂದು ಪ್ರಕರಣ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸೋದರ ಸಂಬಂಧಿಯಾದ ಡಿ. ವಿಜಯರಾಜೇ ಅರಸ್ (ಡಿ.ವಿ. ಅರಸ್) ಅವರು ನೂತನ ರಿಜಿಸ್ಟಾçರ್ ಆಗಿ ಇದ್ದರು. ಅವರು ಬಿ.ಎ. (ಆರ್ಸ್) ಮಾಡಿ ಹಲವು ದೇಶಗಳನ್ನು ಸುತ್ತಿ ಬಂದ ಅನುಭವೀ ಆಡಳಿತಗಾರರಾಗಿದ್ದರು. ಅವರ ಆಡಳಿತ ಮತ್ತು ವೈಯಕ್ತಿಕ ಆಸಕ್ತಿಗೆ ತಕ್ಕಂತೆ ತಮ್ಮ ಛೇಂಬರ್ಗೆ ರೆಡ್ ಕಾರ್ಪೆಟ್ ಹಾಕಿಸಿಕೊಂಡದ್ದೊಂದು ದೊಡ್ಡ ಸುದ್ದಿಯಾಗಿತ್ತು. ಅದರ ವಿರುದ್ಧ ಎಸ್.ವೈ.ಎಸ್. ಧರಣಿ ಮಾಡಿ ಎಲ್ಲ ವಿದ್ಯಾರ್ಥಿಗಳಲ್ಲೂ ಚರ್ಚಿಸುವಂತೆ ಮತ್ತೆ ಪತ್ರಿಕೆಗಳಲ್ಲಿ ಬಂದು, ರಿಜಿಸ್ಟಾçರ್ ಅವರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಧರಣಿ ಮಾಡಿದ್ದೆವು. ಈಗ ಯೋಚಿಸಿದರೆ ಆಗ ನಾವು ಮಾಡುತ್ತಿದ್ದ ಸಣ್ಣ ಸಣ್ಣ ಭ್ರಷ್ಟಾಚಾರ ಸ್ವಜನ ಪಕ್ಷಪಾತಗಳಿಗೆ ಪ್ರತಿಕ್ರಿಯಿಸುತ್ತಿದ್ದ ವಿದ್ಯಾರ್ಥಿ ಸಮೂಹ ಈಗ ಇಂತಹ ಯಾವುದೇ ಸ್ಪಂದನವನ್ನು ಕಾಣದೆ ಎಲ್ಲರೂ ತಮ್ಮ ತಮ್ಮ ಜಾತಿ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ಸಮಾಜದ ಸಮಷ್ಟಿ ಬೆಳವಣಿಗೆಯ ಬಗ್ಗೆ ನಿರುತ್ಸಾಹ ಎದ್ದು ಕಾಣುತ್ತದೆ. ವಿಶ್ವವಿದ್ಯಾಲಯಗಳಲ್ಲಿ ವರ್ಷಗಟ್ಟಲೆ ಅಧ್ಯಾಪಕರಿಲ್ಲದೆ ಇದ್ದರೂ,ಆ ಬಗ್ಗೆ ದಿವ್ಯ ನಿರ್ಲಕ್ಷ್ಯ ದಿಂದ ಇರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಲ್ಲಿ ಸಂಘಟಿತ ಹೋರಾಟಗಳು ಇಲ್ಲವಾಗಿವೆ.
ಈ ಮೇಲಿನ ಎರಡು ಧರಣಿಗಳು ಎಲ್ಲಾ ವಿದ್ಯಾರ್ಥಿ ದೆಸೆಯ ಸಮಾಜವಾದಿ ಯುವಜನ ಸಭಾದ ಸಂಘಟನೆಯ ಮುಖಾಂತರ ನಡೆದವುಗಳು. ವಿದ್ಯಾರ್ಥಿಗಳಾಗಿ ನಾವು ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳಿಗೆ ಏನೂ ಮಾಡಲಾರೆವು ಎಂದು ಕೈಚೆಲ್ಲಿ ಕೂರದೆ ಸಂಘಟಿತ ಪ್ರತಿಭಟನೆ ಮಾಡಿದಾಗ ಆಗುವ ಬದಲಾವಣೆಯನ್ನು ಕೂಡ ಕಣ್ಣೆದುರಿಗೆ ತೋರಿಸುವಂತಾಗಿದ್ದವು. ಮುಂದಿನ ದಿನಗಳಲ್ಲಿ ಅಧಿಕಾರಸ್ಥರಿಗೆ ಸರಿಯಾದ ಮಾರ್ಗದಲ್ಲಿ ನಡೆಯಲು ದಿಕ್ಸೂಚಿಯಾಗಿ ನಿಂತವು ಎಂಬುದರಲ್ಲಿ ಎರಡು ಮಾತಿಲ್ಲ.
ಓ ನನ್ನ ಮೈಸೂರೆ !
ನಮ್ಮೂರ ಹಾಲಿವಾಣದ ಮುಳ್ಳುಗಳು
ಓಡಾಡೋ ದಾರಿಯ ಕೊರಕಲುಗಳು
ಒಪ್ಪಾರೆ ನೆರಕೆಯ ಹೋಟೆಲುಗಳ ಕಿಲುಬು ಕಪ್ಪುಗಳು
ಒಟ್ಟಾರೆ ಒಂದೆರಡಲ್ಲ ಹೀಗೆ ನೂರಾರು ಸಿಕ್ಕುಗಳ
ಮಡಿ ಮೈಲಿಗೆ ದಾಟಿ…
ನೇರ ಹರಿಯೋ ರೈಲುಹತ್ತಿ ಮೈಸೂರು ತಲುಪಿದ್ದು
ಮಹಾರಾಜರೇ ಕಟ್ಟಿದ ಕಾಲೇಜು ಮೆಟ್ಟಿದ್ದು
ಅರಮನೆ, ಚಾಮುಂಡಿ ಬೆಟ್ಟ
ಎತ್ತೆತ್ತಲೋ ಕೊಂಡೊಯ್ಯುವ ರಸ್ತೆಗಳು
ಹೌಹಾರುವ ನೋಟಗಳು
ಎಲ್ಲ ಹೊತ್ತೊಗೆದಿತ್ತು ನನ್ನ
ಜನ್ಮ ಜನ್ಮಾಂತರದ ಹೊರೆಯ
ಕಣ್ಣಿಗಂಟಿದಾ ಪೊರೆಯ…
ದಿವ್ಯ ದೇಗುಲದಾ ಒಳಗೆ
ಬೆಳಕ ತೋರೋ ಪಂಡಿತರು
ಕಾಸಿ ಕಾಸಿ ಹಣಿಯೋ ಕುಲುಮೆಗಳು
ಬೆಳ್ಳಿ ಬಂಗಾರದ ಭಂಡಾರಗಳು
ಉAಡು ಉಡಲು ಇತ್ತ
ರಾಜನ ಹೆಸರಿನ ತಂಗುದಾಣ
ಅದುವೇ ಪಂಚಾಮೃತ…
ಇದ್ದವರೆಲ್ಲ, ಇಲ್ಲಿ ನನ್ನಂತವರಲ್ಲ
ಆಗಲೇ ಸಿಗರೇಟು ಹಚ್ಚಿ
ಕಥೆ ಬರೆಯೋ ಮಾದೇವ
ಟರ್ಲಿನ್ ಷರ್ಟನಲ್ಲಿ ಬಂಗಾರದ ಚೈನು ಹಾಕಿ
ವಿಶಾಲ ಹೃದಯ ತೋರೋ ರೆಡ್ಡಿ
ತಾಯಿಗಡುಸಿನ ತಾವು ತೋರೋ ಮಹೇಶ
ಅವಸರದಲ್ಲೂ ಉಡದಂತೆ ಹಿಡಿದು ಒಪ್ಪಿಸೋ ಅರ್ಕೇಶ
ಅಕ್ಷರಗಳನಾಡಿಸಿ ಮಣಿಸೋ ಭಕ್ತ
ಸಮತಟ್ಟಲಿ ಹರಿಯೋ ಹೊಳೆಯಂತೆ ಗೊಟ್ಟಿಗೆರೆ ಶಿವರಾಜ
ವಾರವೆಲ್ಲ ಉಣದಿದ್ದರೂ ಬಣ್ಣಗೆಡದ ರಾಕೆ…
ಇಂತವರೆಲ್ಲರ ಕೂಡಿ ಹಾಕಿ ಮಾತಾಡೋ
ನಂಜುAಡಸ್ವಾಮಿ, ವಕೀಲ ಟಿ.ಎನ್.ಎನ್., ದಾನಿ ಪಿ. ಮಲ್ಲೇಶ್
ಅನಂತರಂಗಾಚಾರ್, ರಾಮದಾಸ್
ನೆಲಮೂಲದ ನೆರವು ತೋರೋ
ನೆಲಮನೆಯ ದೇವೇಗೌಡ
ಆಂದೋಲನದಾಳಕ್ಕೂ ಮುಳುಗಿನಿಂತ
ರಾಜಶೇಖರ ಕೋಟಿ
ಅರೆಜೀವಗೊಂಡವರ
ಹೊರೆಹೊತ್ತು ಬರುವಾ ಕೃಷ್ಣಪ್ಪ
ರಿಪೇರಿಯಲ್ಲೇ ಓಡೋ ಜೀಪಲ್ಲಿ ತೇಜಸ್ವಿ
ಕ್ರಾಂತಿಕವನಗಳ ಕಟ್ಟು ಹೊತ್ತ
ಸಂಕ್ರಮಣದ ಚಂಪಾ
ಸ್ಫೋಟಕ ಸುದ್ಧಿಯ ಪ್ರೊ. ರಾಮಲಿಂಗ
ಯುವಕರ ಕಣ್ಣಲ್ಲಿ ಮಿಂಚು ಹರಿಸೋ
ಅನಂತಮೂರ್ತಿ, ಲಂಕೇಶ, ರಾಮಮೂರ್ತಿ
ವಿಚಾರವಾದಿಗಳ ರಥಕತೆಯ
ರ್ಮಲಿಂಗಂ, ಕೊವೂರ್, ಪೆರಿಯಾರ್
ಹೆಚ್. ನರಸಿಂಹಯ್ಯ, ಕುವೆಂಪು, ಬಸವಲಿಂಗಪ್ಪ…
ಬದುಕು ಬರಹಗಳೇ
ರಸವಾಗಿ ಕೊಸರಾಗಿ ಮೈವೆತ್ತ
ಎಲ್. ಬಸವರಾಜು, ಸುಜನಾ
ಹೀಗೆ ಹರಿಯುತ್ತದೆ
ನನ್ನರಿವಿನಾ ಹರವು…
ಬೆರಗಾಗಿ – ಬೆಳಕಾಗಿ
ಕೆನೆಮೊಸರ ಕಡೆದಂತೆ
ಸೊಗಸಾಗಿ ಬೆಳೆದಿದೆ
ಇಂದಿಗೂ ತಲೆದಿಂಬಾಗಿ
ತಲೆ ಎತ್ತಿ ತಿರುಗಾಡುವ
ಅಂಬಾಗಿ…
ಮುಂದುವರಿಯುವುದು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.
ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು
ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.
ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.
ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.
ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ
ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.
ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”
ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ5 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ6 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ7 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ19 hours agoಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ


