ರಾಜಕೀಯ
ಇದು ರೈತರ, ಯುವಜನರ ಮತ್ತು ಗ್ರಾಮೀಣ ಭಾರತದ ವಿರೋಧಿ ಬಜೆಟ್ : ಸಿದ್ದರಾಮಯ್ಯ ಕಿಡಿ
ಸುದ್ದಿದಿನ,ಬೆಂಗಳೂರು ; 2019-20ರ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಪತ್ರ ಸಂಪೂರ್ಣವಾಗಿ ರೈತರು, ಯುವಜನರು ಮತ್ತು ಗ್ರಾಮೀಣ ಭಾರತದ ವಿರೋಧಿ ಆಯವ್ಯಯ ಪತ್ರ ಎಂದು ಹೇಳಬಹುದಾಗಿದೆ. ರಾಜಕೀಯ ಕಾರಣಕ್ಕೆ ಈ ಟೀಕೆಯನ್ನು ನಾನು ಮಾಡುತ್ತಿಲ್ಲ. ಯಾರಾದರೂ ಆಯವ್ಯಯ ಪತ್ರವನ್ನು ಓದಿದರೆ ಮೇಲ್ನೋಟಕ್ಕೆ ಈ ಮೂರು ಕ್ಷೇತ್ರಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ಮಂಡನೆಯಾದ ಕೇಂದ್ರ ಬಜೆಟ್ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರ್ಕಾರದ ಸಾಧನೆಗಳನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಪ್ರಚಾರ ವೈಭವಕ್ಕೆ ಮರುಳಾಗಿ ಮತಚಲಾಯಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಕೇಂದ್ರ ಸರ್ಕಾರದ 2019-20 ಸಾಲಿನ ಆಯವ್ಯಯ ಪತ್ರ ಜ್ವಲಂತ ಸಾಕ್ಷಿ. ಇದರ ಜತೆಗೆ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಕೂಡಾ ನಿರ್ಲಕ್ಷಿಸಲಾಗಿದೆ. ದೇಶದ ರೈತರು ಸರಿಯಾದ ಮಳೆ ಇಲ್ಲದೆ, ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ದೇಶದ ಯುವಜನತೆ ನಿರುದ್ಯೋಗದಿಂದಾಗಿ ದಿಕ್ಕೆಟ್ಟು ಕೂತಿದ್ದಾರೆ. ಈ ಎರಡು ಪ್ರಮುಖ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ನರೇಂದ್ರ ಮೋದಿ ಸರ್ಕಾರ ತಮ್ಮದು ಹೇಗೆ ರೈತ ಮತ್ತು ಯುವಜನ ವಿರೋಧಿ ಪಕ್ಷ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ದೇಶಾದ್ಯಂತ ರೈತರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಬರಗಾಲ, ಇನ್ನೊಂದೆಡೆ ಬೆಳೆದ ಬೆಳೆಗೆ ಬೆಲೆ ಇಲ್ಲ, ಮತ್ತೊಂದೆಡೆ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಬೇಕಾದ ಅಸಹಾಯಕತೆ. ಕಳೆದ ಐದು ವರ್ಷಗಳಲ್ಲಿ ವಂಚಕ ಉದ್ಯಮಿಗಳನ್ನು ಪೋಷಿಸುತ್ತಾ ರೈತ ಸಮುದಾಯವನ್ನು ನಿರ್ಲಕ್ಷಿಸುತ್ತಾ ಬಂದಿರುವ ಮೋದಿ ಸರ್ಕಾರ ತನ್ನ ರೈತ ವಿರೋಧಿ ನೀತಿಯನ್ನು ಮುಂದುವರಿಸಿಕೊಂಡು ಹೋಗುವ ಸೂಚನೆಯನ್ನು ಆಯವ್ಯಯಪತ್ರದಲ್ಲಿ ನೀಡಿದೆ ಎಂದಿದ್ದಾರೆ.
ರೈತರ ಸಾಲ ಮನ್ನಾ ಮಾಡಬೇಕೆಂದು ಇಡೀ ದೇಶದ ರೈತರು ಒಕ್ಕೊರಲಿನಿಂದ ಮೊರೆ ಇಡುತ್ತಿದ್ದಾರೆ. ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಮೈತ್ರಿ ಸರ್ಕಾರಗಳೆರಡೂ ರೈತರ ಮೊರೆಗೆ ಓಗೊಟ್ಟು ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದೆ. ಆದರೆ ನರೇಂದ್ರ ಮೋದಿ ಸರ್ಕಾರ ರೈತರ ಮೊರೆ ಕೇಳದೆ ಇರುವಷ್ಟು ಕಿವುಡಾಗಿದೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ನಾನು ಮುಖ್ಯಮಂತ್ರಿಯಾಗಿದ್ದ ದಿನಗಳಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ವಂಚಕ ಉದ್ಯಮಿಗಳಿಗೆ ಬ್ಯಾಂಕುಗಳ ಖಜಾನೆಯನ್ನು ತೆರೆದಿಟ್ಟು, ಅವರನ್ನು ವಿದೇಶಕ್ಕೆ ಹಾರಲು ಬಿಟ್ಟ ಸರ್ಕಾರ ರೈತರನ್ನು ಮಾತ್ರ ಸತತವಾಗಿ ಸಂಪೂರ್ಣವಾಗಿ ಕಡೆಗಣಿಸುತ್ತಾ ಬಂದಿದೆ ಎಂದು ನುಡಿದಿದ್ದಾರೆ.
ಕೃಷಿ ಬೆಳವಣಿಗೆಗೆ ಪೂರಕವಾಗಿರುವ ನೀರಾವರಿ, ತೋಟಗಾರಿಕೆ, ಸಹಕಾರ ಕ್ಷೇತ್ರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನಿರುದ್ಯೋಗ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಅತ್ಯಂತ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿರುವುದರಿಂದ ನಿರುದ್ಯೋಗದ ಪ್ರಮಾಣ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಪ್ರಮಾಣ ಹೆಚ್ಚಾಗಲಿದೆ. ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ಐದು ವರ್ಷಗಳ ಹಿಂದೆ ಆಶ್ವಾಸನೆ ನೀಡಿದ್ದ ಮೋದಿ ಸರ್ಕಾರ ಈ ಆಯವ್ಯಯ ಪತ್ರದಲ್ಲಿಯೂ ಕೂಡಾ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ. ಕಳೆದ ಐದು ವರ್ಷಗಳಲ್ಲಿ ಕೇವಲ 0.3 % ನಷ್ಟು ಮಾತ್ರ ಬಜೆಟ್ ಹಣವನ್ನು ಖರ್ಚು ಮಾಡಿರುವುದು ಸರ್ಕಾರದ ದುರಹಂಕಾರ ನೀತಿಗೆ ಸಾಕ್ಷಿ.
ನೀರಾವರಿ ಕ್ಷೇತ್ರಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ 433 ಕೋಟಿ ರೂಪಾಯಿಗಳಷ್ಟು ಕಡಿಮೆ ಖರ್ಚು ಮಾಡಲಾಗಿದೆ. ಮನೆಮನೆಗೆ ಕುಡಿಯುವ ನೀರು ಪೂರೈಸುವ ಆಕರ್ಷಕ ಯೋಜನೆಯನ್ನು ಪ್ರಕಟಿಸಿರುವ ಸರ್ಕಾರ ನೀರು ಸಂಗ್ರಹದ ಬಗ್ಗೆ ಮಾತ್ರ ಏನನ್ನೂ ಹೇಳಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ನಿರುದ್ಯೋಗ ಪ್ರಮಾಣದ ಬಗ್ಗೆ ಕಣ್ಣು ಮುಚ್ಚಾಲೆ ಆಡುತ್ತಾ ಬಂದಿರುವ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ನಿರುದ್ಯೋಗದ ಪ್ರಮಾಣ 45 ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ ಎಂದು ಒಪ್ಪಿಕೊಂಡಿದೆ. ನೋಟ್ ಬ್ಯಾನ್, ಕೈಗಾರಿಕಾ ಕ್ಷೇತ್ರದ ಹಿನ್ನಡೆ ಮತ್ತು ಅವೈಜ್ಞಾನಿಕ ಜಿಎಸ್ ಟಿಯಿಂದಾಗಿ ನಿರುದ್ಯೋಗ ಹೆಚ್ಚಾಗಲಿದೆ ಎಂದು ನಮ್ಮ ಪಕ್ಷ ಸಾರಿ ಸಾರಿ ಹೇಳಿದರೂ ಪ್ರಧಾನಿ ಮೋದಿಯವರು ಕಿವಿಗೆ ಹಾಕಿಕೊಂಡಿರಲಿಲ್ಲ. ಈಗ ಅನಿವಾರ್ಯವಾಗಿ ಸರ್ಕಾರ ತಪ್ಪೊಪ್ಪಿಕೊಂಡಿದೆ ಎಂದು ಟೀಕಿಸಿದ್ದಾರೆ.
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿರಬೇಕು. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ, ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ. ಮತ್ತೆ ಮತ್ತೆ ಕೌಶಲಾಭಿವೃದ್ಧಿಯ ಜಪ ಮಾಡುವ ಮೋದಿ ಸರ್ಕಾರ ಉದ್ಯೋಗ ಸೃಷ್ಟಿಗೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲು ಸೋತಿದೆ ಎಂದು ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಆರೋಗ್ಯ ಕ್ಷೇತ್ರ ಕೂಡಾ ನಿರ್ಲಕ್ಷ್ಯಕ್ಕೀಡಾಗಿದೆ. ಬಹುಪ್ರಚಾರದ ರಾಷ್ಟ್ರೀಯ ಆರೋಗ್ಯ ಮಿಷನ್ ಗೆ ಕಳೆದ ಐದು ವರ್ಷಗಳಲ್ಲಿ ಶೇಕಡಾ 13ರಷ್ಟು ಹಣ ಕಡಿತಗೊಳಿಸಲಾಗಿದೆ. ಜಿಡಿಪಿಯ ಶೇಕಡಾ 3ರಷ್ಟು ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಬೇಕೆಂಬುದು ನಮ್ಮ ಪಕ್ಷದ ಬೇಡಿಕೆಯಾಗಿತ್ತು. ಇದೇ ರೀತಿ ಶಿಕ್ಷಣ ಕ್ಷೇತ್ರ ಕೂಡಾ ಅವಗಣನೆಗೆ ಒಳಗಾಗಿದೆ.
ಜಾಗತಿಕವಾಗಿ ತೈಲಬೆಲೆ ಕಡಿಮೆಯಾಗುತ್ತಿದ್ದರೂ ನರೇಂದ್ರ ಮೋದಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಎರಡು ರೂಪಾಯಿಗಳಷ್ಟು ಏರಿಸಿದೆ. ಇದೊಂದು ಅನಗತ್ಯ ಬೆಲೆ ಹೆಚ್ಚಳವಾಗಿದ್ದು ಇದರಿಂದ ಸಹಜವಾಗಿಯೇ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಲಿದೆ, ಸಾರಿಗೆ ದುಬಾರಿಯಾಗಲಿದೆ, ಇದರಿಂದ ಸಾಮಾನ್ಯ ಜನರ ಕಷ್ಟಗಳು ಹೆಚ್ಚಾಗಲಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಓರ್ವ ಮಹಿಳೆಯಾಗಿ ಮಹಿಳಾ ಕಲ್ಯಾಣ ಕ್ಷೇತ್ರವನ್ನೇ ನಿರ್ಲಕ್ಷಿಸಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಮಹಿಳಾಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 2000 ಕೋಟಿ ರೂಪಾಯಿ ಅನುದಾನವನ್ನು ಕಡಿತಗೊಳಿಸಲಾಗಿದೆ. ಹೊಸ ಆಯವ್ಯಯ ಪತ್ರದಲ್ಲಿ ಕೂಡಾ ಉತ್ತೇಜನಕಾರಿಯಾಗಿರುವ ಯಾವ ಕಾರ್ಯಕ್ರಮಗಳನ್ನು ನೀಡಲಾಗಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.
ತಮಗಿರುವ ಬಹುಮತದ ಬಲದಿಂದ ತಾವು ನಡೆದದ್ದೇ ದಾರಿ ಎಂಬ ದುರಹಂಕಾರ ಸರ್ಕಾರದ ನಡೆಯಲ್ಲಿ ಕಾಣಬಹುದಾಗಿದೆ. ದೇಶದ ಜನತೆಗೆ ತಮ್ಮ ತಪ್ಪಿನ ತಿಳುವಳಿಕೆಯನ್ನು ಸರ್ಕಾರವೇ ಮಾಡಿಕೊಟ್ಟಿದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಕೈಗಾರಿಕೆ, ಐಟಿಬಿಟಿ ಹಬ್ ಆಗದಿರುವುದು ದುರದೃಷ್ಟಕರ : ಜಿ. ಬಿ. ವಿನಯ್ ಕುಮಾರ್ ವಿಷಾದ
ಸುದ್ದಿದಿನ,ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯು ನಿಜವಾಗಿಯೂ ಇಂಡಸ್ಟ್ರಿಯಲ್, ಐಟಿಬಿಟಿ ಹಬ್ ಇಷ್ಟರೊಳಗೆ ಆಗಬೇಕಿತ್ತು. ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಖ್ಯಾತಿ ಹೊಂದಿದ್ದ ಇಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳಿಲ್ಲ, ಐಟಿಬಿಟಿ ಇಲ್ಲದಿರುವುದು ದುರದೃಷ್ಟಕರ. ವಿಶ್ವದರ್ಜೆಯ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಬರಲು ಬಿಡುತ್ತಿಲ್ಲ. ಹಾಗಾಗಿ, ಬೆಳೆಯಲು ಅವಕಾಶ ಇಲ್ಲದಂತಾಗಿದೆ ಎಂದು ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ವಿಷಾದ ವ್ಯಕ್ತಪಡಿಸಿದರು.
ನಗರದ ಯುಬಿಡಿಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ “ಎಲೆಕ್ಟ್ರಾನಿಕ್ ಅಂಡ್ ಇನ್ಸ್ಟ್ರುಮೆಂಟೇಶನ್” ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಕಾಟನ್ ಮಿಲ್ ಗಳು, ಹತ್ತಿ ಮಿಲ್ ಗಳು, ರೈಸ್ ಮಿಲ್ ಗಳು ಹೆಚ್ಚಾಗಿದ್ದವು. ಆದ್ರೆ, ಇಂದು ಕಡಿಮೆಯಾಗಿದೆ. ಈಗ ಕೆಲ ಸಕ್ಕರೆ ಕಾರ್ಖಾನೆಗಳು, ಹೈಸ್ಕೂಲ್ ಗಳು, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆ ಮತ್ತು ಕಾಲೇಜುಗಳು, ಆಸ್ಪತ್ರೆಗಳು ಹೆಚ್ಚಾಗಿವೆ. ಎಲೆಕ್ಟ್ರಾನಿಕ್ ವಿಭಾಗದ ಯಾವ ಕೈಗಾರಿಕೆಗಳೂ ಇಲ್ಲ. ಐಟಿಬಿಟಿ ಬೆಳೆದೇ ಇಲ್ಲ. ಇದು ಆಗದಿರುವುದಕ್ಕೆ ಕಾರಣವೇನು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕಾದ ತುರ್ತು ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ವಿಶ್ವದಲ್ಲಿನ ಉತ್ಕೃಷ್ಟ ಗುಣಮಟ್ಟದ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಪ್ರಯತ್ನ ಪಡಿ. ಒಂದು ವೇಳೆ ಆಗದಿದ್ದರೆ ಇಲ್ಲಿಯೇ ಸಿಗುವ ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಕೊಂಡು ಕಷ್ಟಪಟ್ಟು ಓದಿ. ತಂತ್ರಜ್ಞಾನ, ಆಗುತ್ತಿರುವ ಬದಲಾವಣೆ, ಬರುತ್ತಿರುವ ಹೊಸ ಹೊಸ ಟೆಕ್ನಾಲಜಿ ಬಗ್ಗೆ ಜ್ಞಾನ ಪಡೆದುಕೊಳ್ಳಿ. ಆಗದು ಎಂದು ಕುಳಿತರೆ ಏನೂ ಆಗುವುದಿಲ್ಲ. ನಮ್ಮ ಕೈಯಲ್ಲಿ ಸಾಧ್ಯವೆಂದುಕೊಂಡು ಮುನ್ನಡೆದರೆ ಖಂಡಿತವಾಗಿಯೂ ಆಗಿಯೇ ಆಗುತ್ತದೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಮುನ್ನುಗ್ಗಿ ಎಂದು ಕರೆ ನೀಡಿದರು.
ಅತ್ಯುನ್ನತ ಸಂಸ್ಥೆಗಳಲ್ಲಿ ಪ್ರತಿಭೆ ಅನಾವರಣಗೊಳಿಸಲು, ಹೊಸದಾಗಿ ಆವಿಷ್ಕರಿಸಲು, ಜ್ಞಾನ ಹೆಚ್ಚಿಸಿಕೊಳ್ಳಲು ಹೆಚ್ಚಿನ ಅವಕಾಶ ಸಿಗುತ್ತವೆ. ಹಾಗಾಗಿ, ಇಲ್ಲಿ ವಿದ್ಯಾರ್ಥಿಗಳು ಸೇರಬೇಕೆಂಬ ಹೆಬ್ಬಯಕೆ ಹೊಂದಿರುತ್ತಾರೆ. ಪೋಷಕರೂ ಸಹ ಮಕ್ಕಳನ್ನು ಸೇರಿಸಲು ಆಸಕ್ತಿ ತೋರುತ್ತಾರೆ. ಹೊಸ ಹೊಸ ಸಂಶೋಧನೆ ಜೊತೆಗೆ ಪಠ್ಯೇತರ ಚಟುವಟಿಕೆಗಳು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ ಅವಕಾಶಗಳು ನಿಮ್ಮನ್ನೇ ಹುಡುಕಿಕೊಂಡು ಬರುತ್ತವೆ ಎಂದು ವಿನಯ್ ಕುಮಾರ್ ಅವರು ಕಿವಿಮಾತು ಹೇಳಿದರು.
ನಾನು ಪಿಡಿಒ ಅಧಿಕಾರಿಯಾಗಿ ಇದುವರೆಗೆ ಮುಂದುವರಿದಿದ್ದರೆ ಹೆಚ್ಚಿನದ್ದು ಎಂದರೆ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುತ್ತಿದ್ದೆ. ನಾನು ಐಎಎಸ್ ಇನ್ಸೈಟ್ಸ್ ಸಂಸ್ಥೆ ಶುರು ಮಾಡಿದ ಬಳಿಕ ಕರ್ನಾಟಕದ ಅರ್ಧದಷ್ಟು ಜಿಲ್ಲೆಗಳಲ್ಲಿ ನನ್ನ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ. ಹದಿನಾರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಡಿಸಿಪಿ, ಎಎಸ್ಪಿ, ತಹಶೀಲ್ದಾರ್, ಎಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಇಷ್ಟಪಟ್ಟು, ಶ್ರದ್ಧೆ, ಪ್ರಾಮಾಣಿಕತೆ, ನಿರಂತರ ಪರಿಶ್ರಮದಿಂದ ಸಾಧ್ಯವಾಯಿತು. ಯುವಪೀಳಿಗೆ ದೊಡ್ಡ ದೊಡ್ಡ ಕನಸು ಕಾಣಬೇಕು. ಆಗ ಕನಸು ನನಸಾಗುತ್ತದೆ. ಯಾವುದೇ ಜಿಲ್ಲೆಗಳಲ್ಲಿದ್ದರೂ ನಾನು ಯಾರಿಗೂ ಸಚಿವರಿಗೆ ಹಣ ಕೊಟ್ಟು ಹುದ್ದೆ ಕೊಡಿಸಬೇಕಿಲ್ಲ. ಇನ್ಸೈಟ್ಸ್ ಸಂಸ್ಥೆಯಲ್ಲಿ ಓದಿದವರು ಅವರ ಪರಿಶ್ರಮದಿಂದಲೇ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಎಂಜಿನಿಯರಿಂಗ್ ಓದಿದ ಮೇಲೆ ಕೆಲಸ ಸಿಗುತ್ತೋ ಇಲ್ಲವೋ, ಅಂಕ ಎಷ್ಟು ಬರುತ್ತದೆಯೋ ಏನೋ, ಕ್ಯಾಂಪಸ್ ನಲ್ಲಿ ಉದ್ಯೋಗ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿಯೇ ಇರಬೇಕಾಗುತ್ತದೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇರುತ್ತದೆಯೋ ಆ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ಕೌಶಲ್ಯ, ಸತತ ಪರಿಶ್ರಮ, ತಿಳಿದುಕೊಳ್ಳುವ ಆಸಕ್ತಿ, ಹುಡುಕುವ ತುಡಿತ, ಉತ್ತಮ ವ್ಯಕ್ತಿತ್ವ ಸೇರಿದಂತೆ ಅತ್ಯುತ್ತಮ ಗುಣಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತ ಹುದ್ದೆಗೇರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಯುಬಿಡಿಟಿ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಪಿ. ನಾಗರಾಜಪ್ಪ, ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವೇಳೆ ಜಿ. ಬಿ. ವಿನಯ್ ಕುಮಾರ್ ಅವರು ಕಾಲೇಜಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನನ್ನ ಬೆಸ್ಟ್ ಫ್ರೆಂಡ್ಸ್ ಬುಕ್ಸ್: ಜಿಬಿವಿ
ನನಗೆ ಪುಸ್ತಕ ಓದುವ ಹವ್ಯಾಸ ಮೊದಲಿನಿಂದಲೂ ಇತ್ತು. ನಾನು ಬೆಳೆದಿದ್ದು ಬಡತನದಲ್ಲಿ. ನಮ್ಮದು ಸಾಮಾನ್ಯ ಕುಟುಂಬ. ಪುಸ್ತಕ ಖರೀದಿಸಲು ತೊಂದರೆ ಇಲ್ಲ. ಪುಸ್ತಕಗಳು ನನ್ನ ಒಳ್ಳೆಯ ಗೆಳೆಯ. ಬೆಳಿಗ್ಗೆ ಮತ್ತು ರಾತ್ರಿಯ ವೇಳೆಯಲ್ಲಿ ಪುಸ್ತಕ ಹೆಚ್ಚಾಗಿ ಓದಿದ್ದರಿಂದ ನನಗೆ ಆತ್ಮವಿಶ್ವಾಸ, ಜ್ಞಾನ, ಪರಿಪಕ್ವತೆಗೆ ಅನುಕೂಲವಾಯಿತು. ಇಷ್ಟೊಂದು ಸಾಧನೆ ಮಾಡಲು ಪ್ರೇರಣೆ ನೀಡಿದ್ದೇ ಬುಕ್ಸ್ ಗಳು ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದರು.
ನಾನು ಕಳೆದ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ ಆಗಿತ್ತು. ಇಂಥ ತೀರ್ಮಾನಕ್ಕೆ ಬರುವುದು ಅಷ್ಟು ಸುಲಭವಲ್ಲ. ಇದರಿಂದ ಸಾಕಷ್ಟು ನಾನು ಕಲಿತಿದ್ದೇನೆ. ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಾಗಿ ಪುಸ್ತಕ ಓದಲೇಬೇಕು. ಕೇವಲ ಓದಿನಲ್ಲೇ ಮುಳುಗದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡರೆ ಅಕಾಡೆಮಿಕ್ ವಿಚಾರದಲ್ಲಿ ಯಶಸ್ಸು ಗಳಿಸಬಹುದು. ನಮ್ಮಲ್ಲಿ ಯಾವುದೇ ಕಾರಣಕ್ಕೂ ಅನಿಶ್ಚಿತತೆ ಇರಬಾರದು ಎಂದು ಕಿವಿಮಾತು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಧಿಕ ಸಾಲ ಸೌಲಭ್ಯ ; ಬ್ಯಾಂಕ್ ಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ
ಸುದ್ದಿದಿನಡೆಸ್ಕ್:ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ- ಎಂ.ಎಸ್.ಎಂ.ಇ ಗಳಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 5 ಲಕ್ಷ 75 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಾಲ ಸೌಲಭ್ಯ ನೀಡಬೇಕೆಂಬ ಗುರಿ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಎಂ.ಎಸ್.ಎಂ.ಇ ಗಳಿಗೆ ಈ ಪ್ರಮಾಣದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಿಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಿನ್ನೆ ಎಸ್‌ಐಡಿಬಿಐ- ಸಿಡ್ಬಿ ಏರ್ಪಡಿಸಿದ್ದ ರಾಷ್ಟ್ರೀಯ ಎಂ.ಎಸ್.ಎಂ.ಇ ಕ್ಲಸ್ಟರ್ ಔಟ್‌ರೀಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಎಂ.ಎಸ್.ಎಂ.ಇ ಗಳ ಬೆಳವಣಿಗೆಗೆ ಕೇವಲ ಶೇಕಡ 9.2 ರಷ್ಟು ಸಾಲಸೌಲಭ್ಯ ಕಲ್ಪಿಸುತ್ತಿವೆ. ಆದರೆ, ಖಾಸಗಿ ಬ್ಯಾಂಕ್‌ಗಳು ಶೇಕಡ 25 ರಷ್ಟು ಹಾಗೂ ಎನ್‌ಬಿಎಫ್‌ಸಿ ಗಳು ಶೇಕಡ 39 ರಷ್ಟು ಸಾಲ ಸೌಲಭ್ಯ ನೀಡುತ್ತಿವೆ ಎಂದು ವಿವರಿಸಿದರು.
ಮುದ್ರಾ ಯೋಜನೆಯಡಿ ಈ ಹಿಂದೆ ನೀಡಲಾಗುತ್ತಿದ್ದ ಸಾಲದ ಮೊತ್ತ 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಹೊಸ ವಿಭಾಗ ’ತರುಣ್ ಪ್ಲಸ್’ ಅಡಿಯಲ್ಲಿ ಸಾಲ ಪಡೆದ ಉದ್ಯಮದಾರರು ಸಾಲ ಮರುಪಾವತಿ ಮಾಡಿದಲ್ಲಿ ಅವರಿಗೆ 20 ಲಕ್ಷ ರೂಪಾಯಿವರೆಗೂ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಪಿಎಂ ಮುದ್ರಾ ಯೋಜನೆ ; 20 ಲಕ್ಷ ರೂವರೆಗೆ ಸಾಲ ಸೌಲಭ್ಯ ಹೆಚ್ಚಳ
ಸುದ್ದಿದಿನಡೆಸ್ಕ್:ಪಿಎಂ ಮುದ್ರಾ ಯೋಜನೆ’ಯಡಿ ಉದ್ಯಮದಾರರಿಗೆ ಈ ಹಿಂದೆ ನೀಡಲಾಗುತ್ತಿದ್ದ ಸಾಲದ ಮೊತ್ತ 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೊಸ ವಿಭಾಗ ’ತರುಣ್ ಪ್ಲಸ್’ ಅಡಿಯಲ್ಲಿ ಸಾಲ ಪಡೆದ ಉದ್ಯಮದಾರರು ಸಾಲ ಮರುಪಾವತಿ ಮಾಡಿದಲ್ಲಿ ಅವರಿಗೆ 20 ಲಕ್ಷ ರೂಪಾಯಿವರೆಗೂ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ನಿನ್ನೆ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ಅತ್ಮಕತೆ | ನೀರು ಸಾಬರೂ – ಎಸಿ ಮದನಗೋಪಾಲರೂ..
-
ದಿನದ ಸುದ್ದಿ5 days ago
ಪಿಎಂ ಮುದ್ರಾ ಯೋಜನೆ ; 20 ಲಕ್ಷ ರೂವರೆಗೆ ಸಾಲ ಸೌಲಭ್ಯ ಹೆಚ್ಚಳ
-
ದಿನದ ಸುದ್ದಿ6 days ago
ದಾವಣಗೆರೆ | ಹಾಸ್ಟೆಲ್ ಎಲ್ಲಾ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಮ್ಯಾಪ್ ಮಾಡಲು ಸೂಚನೆ : ಸಿಇಓ ಸುರೇಶ್ ಬಿ ಇಟ್ನಾಳ್
-
ದಿನದ ಸುದ್ದಿ5 days ago
ಅಧಿಕ ಸಾಲ ಸೌಲಭ್ಯ ; ಬ್ಯಾಂಕ್ ಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ
-
ದಿನದ ಸುದ್ದಿ5 days ago
ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಕೈಗಾರಿಕೆ, ಐಟಿಬಿಟಿ ಹಬ್ ಆಗದಿರುವುದು ದುರದೃಷ್ಟಕರ : ಜಿ. ಬಿ. ವಿನಯ್ ಕುಮಾರ್ ವಿಷಾದ
-
ದಿನದ ಸುದ್ದಿ5 days ago
ಕವಿತೆ | ಮುರುಕುಂಬಿ
-
ದಿನದ ಸುದ್ದಿ4 days ago
ದಾವಣಗೆರೆ | ಪರಿಶಿಷ್ಟ ಜಾತಿ, ಪಂಗಡದ ರೈತರಿಂದ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ರಾಜ್ಯದಲ್ಲಿ ಭಾರೀ ಮಳೆ ಸಂಭವ ; ಐದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್