ರಾಜಕೀಯ
ಬಲಪಂಥದತ್ತ ಜಾಗತಿಕ ಪಲ್ಲಟದ ಈ ಸಮಯ
- ಜಾಗತಿಕ ಅರ್ಥವ್ಯವಸ್ಥೆಯು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಮತ್ತು ಅದರ ಪರಿಣಾಮವಾಗಿ ನಿರುದ್ಯೋಗವು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಜಗತ್ತಿನಾದ್ಯಂತ ಬಲ ಪಂಥದತ್ತ ಪಲ್ಲಟ ಕಾಣುತ್ತಿದೆ. ಬಲಪಂಥದ ಬೆಳವಣಿಗೆಗೆ ಅದು ಆರ್ಥಿಕ ಬಿಕ್ಕಟ್ಟು ಮತ್ತು ನಿರುದ್ಯೋಗವನ್ನು ಗಮನಕ್ಕೆ ತಗೊಂಡಿರುವುದು ಮತ್ತು ಅಧಿಕಾರಸ್ಥರ ಪರವಾದ ರಾಜಕೀಯ ಪಕ್ಷಗಳು ಗಮನಕ್ಕೆ ತಗೊಂಡಿರದಿರುವುದೇ ಕಾರಣ ಎನ್ನಬಹುದು. ಭಾರತದಲ್ಲಿಯೂ ಸಹ ಅಭಿವೃದ್ಧಿ ಅಜೆಂಡಾದ ಮೂಲಕವೇ 2014ರಲ್ಲಿ ಮೋದಿ ಅಧಿಕಾರ ಹಿಡಿದದ್ದು. ನವ ಉದಾರವಾದವನ್ನು ಪ್ರತಿನಿಧಿಸುವ ಕಾಂಗ್ರೆಸ್‌ನಂತಹ ಒಂದು ಪಕ್ಷದಿಂದ ಬಿಜೆಪಿಯಂತಹ ಒಂದು ಬಲ ಪಂಥೀಯ ಪಕ್ಷದತ್ತ ಪಲ್ಲಟವು ಸಾಧ್ಯವಾಗಿರುವುದು ನವ-ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಎಂಬ ಸಂಗತಿಯಂತೂ ಸ್ಪಷ್ಟ.
ಮೋದಿಯವರ ಪುನರಾಯ್ಕೆಯು, ಜಗತ್ತು ಬಲ ಪಂಥಾಭಿಮುಖವಾಗಿ ಸರಿಯುತ್ತಿರುವ ವಿದ್ಯಮಾನದ ಒಂದು ಭಾಗವಾಗಿದೆ ಎಂಬ ಆಯಾಮವನ್ನು ನಾವು ಗಮನಿಸುವುದೇ ಇಲ್ಲ. ಹಾಗಾಗಿ, ಮೋದಿಯವರ ಪುನರಾಯ್ಕೆಯ ಬಗ್ಗೆ ನಾವು ಚರ್ಚಿಸುವಾಗ, ಇಡೀ ಜಗತ್ತೇ ಬಲಕ್ಕೆ ವಾಲುತ್ತಿದೆ ಎಂಬ ಅಂಶದ ಪ್ರಸ್ತಾಪ ನಮ್ಮ ಚರ್ಚೆಯಲ್ಲಿ ಬಹುತೇಕ ಇರುವುದಿಲ್ಲ. ಇಸ್ರೇಲ್‌ನಲ್ಲಿ ನೆತನ್ಯಾಹು ಪುನರಾಯ್ಕೆಗೊಂಡಿದ್ದಾರೆ. ಟರ್ಕಿಯಲ್ಲಿ ಎರ್ಡೊಗಾನ್ ಪ್ರಚಂಡ ಬಹುಮತದಿಂದ ಪುನರಾಯ್ಕೆಯಾಗಿದ್ದಾರೆ. ಚುನಾವಣೆಗೆ ಮುನ್ನ ಈ ಪಕ್ಷವು ಪುನರಾಯ್ಕೆ ಆಗುವುದೇ ಇಲ್ಲ ಎನ್ನುವ ಭವಿಷ್ಯ ನುಡಿಯನ್ನು ಸುಳ್ಳಾಗಿಸಿ, ಆಸ್ಟ್ರೇಲಿಯಾದಲ್ಲಿ ಕನ್ಸರ್ವೇಟಿವ್ ಪಕ್ಷವು ಅಧಿಕಾರಕ್ಕೆ ಮರಳಿದೆ.
ಎಡ ಪಂಥವು ಹಲವು ಹತ್ತು ದೇಶಗಳಲ್ಲಿ ಮರು ಹುಟ್ಟು ಪಡೆಯುವಂತಹ ಸ್ಪೂರ್ತಿ ತುಂಬುವ ಭರವಸೆ ಇತರರಲ್ಲಿ ಮೂಡಲು ಕಾರಣವಾಗಿದ್ದ ಎಡ ಪಕ್ಷಗಳು ಇತ್ತೀಚಿನವರೆಗೆ ಅಧಿಕಾರದಲ್ಲಿದ್ದ ಲ್ಯಾಟಿನ್ ಅಮೇರಿಕಾದಲ್ಲಿ, ಒಂದರ ನಂತರ ಮತ್ತೊಂದು ದೇಶದಲ್ಲಿ ಬಲ ಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಇಂತಹ ಬದಲಾವಣೆಗಳ ಪೈಕಿ, ಅತ್ಯಂತ ಮಹತ್ವದ್ದು ಮತ್ತು ಅದೇ ಸಮಯದಲ್ಲಿ ಕುಖ್ಯಾತ ಎನ್ನಬಹುದಾದ ಬದಲಾವಣೆ ಬ್ರೆಜಿಲ್‌ನಲ್ಲಿ ಆಗಿದೆ.
ಅಲ್ಲಿ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೇರ್ ಬೊಲ್ಸೊಮಾರೊ ಕೆಲ ವರ್ಷಗಳ ಹಿಂದೆ ಬ್ರೆಜಿಲ್‌ನಲ್ಲಿ ಅಧಿಕಾರದಲ್ಲಿದ್ದ ಮಿಲಿಟರಿ ಆಡಳಿತವನ್ನು ಹಾಡಿ ಹೊಗಳಿರುವುದೇ ಅಲ್ಲದೆ, ಮಿಲಿಟರಿಯು ಇನ್ನೂ ಹೆಚ್ಚು ಮಂದಿಯನ್ನು ಕೊಂದು ಹಾಕಿದ್ದರೆ ಒಳ್ಳೆಯದಿತ್ತು ಎಂದು ಹೇಳಿರುವುದು ದಾಖಲಾಗಿದೆ. ಈ ಎಲ್ಲವಕ್ಕೂ ಕಳಶವಿಟ್ಟಂತೆ, ಕಳೆದ ಭಾನುವಾರ ಯೂರೋಪಿಯನ್ ಒಕ್ಕೂಟದ 28ಸದಸ್ಯ ದೇಶಗಳಲ್ಲಿ ಯೂರೊ ಪಾರ್ಲಿಮೆಂಟಿಗೆ ನಡೆದ ಚುನಾವಣೆಗಳ ಫಲಿತಾಂಶವು ಯೂರೋಪಿನಲ್ಲಿ ಗಮನಾರ್ಹ ಸಂಖ್ಯೆಯ ಜನತೆಯ ಒಲವು ಬಲ ಪಂಥದತ್ತ ಸರಿಯುತ್ತಿರುವ ಅಂಶವನ್ನು ಸಾರುತ್ತದೆ.
ಫ್ರಾನ್ಸ್‌ನಲ್ಲಿ ಮುಂಬರುವ ಮಹಾ ಚುನಾವಣೆಯಲ್ಲಿ ಮರೀನ್ ಲೇ ಪೆನ್ ಅವರ ಉಗ್ರ ಬಲಪಂಥೀಯ ಪಕ್ಷವು, ಹಾಲಿ ಅಧ್ಯಕ್ಷ ಎಮ್ಯಾನ್ಯುಅಲ್ ಮೆಕ್ರಾನ್ ಅವರ ನಡು ಪಂಥೀಯ ಪಕ್ಷಗಳ ಮೈತ್ರಿಕೂಟವನ್ನು ಹಿಂದಿಕ್ಕಿ, ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಬಹುದೆಂದು ಈಗ ತೋರುತ್ತದೆ. ಇಟಲಿಯ ಉಪ ಪ್ರಧಾನ ಮಂತ್ರಿ ಮಾತ್ತಿಯೊ ಸಲ್ವಿನಿ ಅವರ ಉಗ್ರ ಬಲಪಂಥೀಯ ಪಕ್ಷವು ಇಟಲಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವುದಷ್ಟೇ ಅಲ್ಲದೆ, ಯೂರೊ ಪಾರ್ಲಿಮೆಂಟಿನಲ್ಲಿ ಜರ್ಮನಿಯ ಛಾನ್ಸೆಲರ್ ಅಂಜೆಲಾ ಮರ್ಕೆಲ್ ಅವರ ಪಕ್ಷವನ್ನು ಹಿಂದಿಕ್ಕಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಮರ್ಕೆಲ್ ಅವರ ಪಕ್ಷವು ಐದು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 9% ಕಡಿಮೆ ಮತಗಳಿಸಿದೆ. ಅಷ್ಟೇ ಅಲ್ಲ, ಜರ್ಮನಿಯ ಆಲ್ಟರ್‌ನೆಟೀವ್ ಫಾರ್ ಜರ್ಮನಿ ಎಂಬ ಉಗ್ರ ಬಲಪಂಥೀಯ ಪಕ್ಷವು 10.೫% ಮತ ಹೆಚ್ಚಿಸಿಕೊಂಡಿದೆ. ಹಂಗೆರಿಯಲ್ಲಿ, ಅಧ್ಯಕ್ಷ ವಿಕ್ಟರ್ ಒರ್ಬಾನ್ ಅವರ ಬಲಪಂಥೀಯ ಪಕ್ಷವು ಮತ್ತೊಮ್ಮೆ ಪುನರಾಯ್ಕೆಗೊಳ್ಳುವ ಹಾದಿಯಲ್ಲಿದೆ.
ಮೋದಿಯವರ ಗೆಲುವು ದೇಶದಲ್ಲಿ ಜರುಗಿದ ಅನೇಕ ಬೆಳವಣಿಗೆಗಳಿಗೆ ಸಲ್ಲುತ್ತದೆ ಎಂಬುದು ಸ್ಪಷ್ಟವಿದ್ದರೂ ಸಹ, ಇಡೀ ವಿಶ್ವವೇ ಬಲ ಪಂಥಾಭಿಮುಖವಾಗಿ ದಾಪುಗಾಲು ಹಾಕುತ್ತಿರುವ ಈ ಸನ್ನಿವೇಶವನ್ನು ಮರೆಯಬಾರದು. ಬಲ ಪಂಥದ ಕಡೆಗೆ ಕೊಂಡೊಯ್ಯುವ ಉದ್ದೇಶಪೂರ್ವಕ ಪ್ರಯತ್ನಗಳು ಚಾಲನೆಯಲ್ಲಿರುವ ಈ ಸಂದರ್ಭದಲ್ಲಿ, ಇದು ಹೀಗೆಯೇ ಆಗುತ್ತಿರುವುದು ಏಕೆ? ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗುತ್ತದೆ. ಉದಾರ ಮನೋಭಾವದ ಬೂರ್ಜ್ವಾ ವಿಶ್ಲೇಷಕರು, ಈ ಎಲ್ಲ ದೇಶಗಳ ಪಕ್ಷಗಳು ಮತ್ತು ಚಳವಳಿಗಳ ನಡುವೆ ಗೋಚರಿಸುವ ಒಂದು ಸಮಾನ ಅಂಶವನ್ನು ಕಾಣುವುದರ ಬದಲಾಗಿ, ಈ ವಾಸ್ತವದ ಚಿತ್ರವನ್ನು ತುಂಡರಿಸಿ ವಿಶ್ಲೇಷಿಸುವ ಪ್ರವೃತ್ತಿ ಬೆಳಸಿಕೊಂಡಿದ್ದಾರೆ: ಅವರು ಯೂರೋಪ್ ದೇಶದ ರಾಜಕೀಯ ಪಕ್ಷಗಳನ್ನು ಯೂರೋಪಿಯನ್ ಒಕ್ಕೂಟ ಪರ ಮತ್ತು ಯೂರೋಪಿಯನ್ ಒಕ್ಕೂಟ ವಿರೋಧಿ, ಅಥವಾ, ವಲಸೆ-ಪರ ಅಥವಾ ವಲಸೆ-ವಿರೋಧಿ ಎಂದೇ ವಿಭಜಿಸುತ್ತಾರೆ.
ಅದೇ ರೀತಿಯಲ್ಲಿ, ಬೂರ್ಜ್ವಾ ವಿಶ್ಲೇಷಕರು ಮೋದಿಯವರ ಗೆಲುವನ್ನು ಹಿಂದುತ್ವದೊಂದಿಗೆ ತಳುಕು ಹಾಕಿಕೊಂಡಿರುವ ಒಂದು ವಿದ್ಯಮಾನವಾಗಿ ನೋಡುತ್ತಾರೆಯೇ ಹೊರತು, ಯೂರೋಪಿನಲ್ಲಿ ಆಗುತ್ತಿರುವ ವಿದ್ಯಮಾನಕ್ಕೂ ಮತ್ತು ಭಾರತದ ಈ ವಿದ್ಯಮಾನಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂಬಂತೆಯೇ ನೋಡುತ್ತಾರೆ. ಡೊನಾಲ್ಡ್ ಟ್ರಂಪ್ ಅವರ ಬಲಗೊಳ್ಳುತ್ತಿರುವ ಪುನರಾಯ್ಕೆಯನ್ನೂ ಸಹ ಈ ಬೆಳವಣಿಗೆಗಳಿಂದ ಪ್ರತ್ಯೇಕಿಸಿಯೇ ಕಾಣುತ್ತಾರೆ. ಆದರೆ, ಈ ರೀತಿ ಪ್ರತ್ಯೇಕಿಸಿ ನೋಡುವುದು ಮಾರ್ಕ್ಸ್‌ವಾದಿ ವಿಶ್ಲೇಷಣೆಗೆ ಸಲ್ಲುವಂತದ್ದಲ್ಲ. ಮಾರ್ಕ್ಸ್‌ವಾದಿ ವಿಶ್ಲೇಷಣೆ ಘಟನೆಗಳನ್ನು ಸಮಗ್ರವಾಗಿ ನೋಡುತ್ತದೆ, ಅನಾವರಣಗೊಳ್ಳುತ್ತಿರುವ ಘಟನಾವಳಿಗಳ ನಡುವೆ ಇರುವ ಸಮಾನ ರೂಪ, ಕ್ರಮ ಅಥವಾ ಏರ್ಪಾಡು ಮತ್ತು ಅದರ ವರ್ಗ ವಿನ್ಯಾಸವನ್ನು ಗುರುತಿಸುತ್ತದೆ. ಅಂತಾದರೆ, ಜಗತ್ತಿನಾದ್ಯಂತ ಬಲ ಪಂಥದತ್ತ ಸರಿಯುತ್ತಿರುವುದರ ಬಗ್ಗೆ ಮಾರ್ಕ್ಸ್‌ವಾದಿಗಳು ಏನು ಹೇಳಬಹುದು?
ಇದು ಸ್ಪಷ್ಟವಾಗಿ 2008ರಲ್ಲಿ ಆರಂಭವಾಗಿ ಇನ್ನೂ ಜಾಗತಿಕ ಅರ್ಥವ್ಯವಸ್ಥೆಯನ್ನು ಬಿಗಿದುಕೊಂಡಿರುವ ಆರ್ಥಿಕ ಬಿಕ್ಕಟ್ಟನ್ನು ವ್ಯಕ್ತಪಡಿಸುತ್ತದೆ. ಈ ಬಿಕ್ಕಟ್ಟಿನಿಂದ ಸ್ವಲ್ಪ ಚೇತರಿಕೆಯ ಲಕ್ಷಣಗಳು ಆಗೊಮ್ಮೆ ಈಗೊಮ್ಮೆ ಪ್ರಕಟಗೊಂಡಿವೆ. ಆದರೆ, ಚೇತರಿಕೆಯ ಲಕ್ಷಣಗಳು ಕಾಣಿಸಿಕೊಂಡ ಸ್ವಲ್ಪವೇ ಸಮಯದಲ್ಲಿ ಜಾಗತಿಕ ಅರ್ಥವ್ಯವಸ್ಥೆಯು ಮತ್ತೊಮ್ಮೆ ಬಿಕ್ಕಟ್ಟಿನಲ್ಲಿ ಮುಳುಗುತ್ತಿತ್ತು. ಒಂದು ಪುಟಿಯುವ ರಬ್ಬರ್ ಚೆಂಡಿನ ಉಪಮಾನವು ಜಾಗತಿಕ ಅರ್ಥವ್ಯವಸ್ಥೆಯ ಈ ಪರಿಸ್ಥಿತಿಗೆ ಸೊಗಸಾಗಿ ಹೋಲುತ್ತದೆ: ಚೆಂಡು ನೆಲದಿಂದ ಪುಟಿದ ಕೂಡಲೇ ಚೇತರಿಕೆಯ ಉತ್ಸಾಹ ಏರುತ್ತಿತ್ತು; ಪುಟಿದ ಚೆಂಡು ಮತ್ತೆ ನೆಲಕ್ಕೆ ಬಿದ್ದ ಕೂಡಲೇ ಆ ಉತ್ಸಾಹ ಇಳಿಯುತ್ತಿತ್ತು.
ಇಂತಹ ವಾದದ ಬಗ್ಗೆ ತಕರಾರು ಎತ್ತಬಹುದು. ಈ ತಕರಾರಿನ ಸಮರ್ಥನೆಯಾಗಿ ಅಮೇರಿಕಾದಲ್ಲಿ ನಿರುದ್ಯೋಗದ ದರವು ಹಿಂದಿನ ದಶಕಗಳಿಗಿಂತಲೂ ಕೆಳ ಮಟ್ಟಕ್ಕೆ ಈಗ ಇಳಿದಿದೆ ಎಂದು ಹೇಳಬಹುದು. ಆದರೆ, ಉದ್ಯೋಗದಲ್ಲಿ ಭಾಗವಹಿಸುವಿಕೆಯ ದರವು 2008ರಲ್ಲಿ ಇದ್ದದ್ದಕ್ಕಿಂತಲೂ ಕೆಳಗಿದೆ. ಉದ್ಯೋಗ ಭಾಗವಹಿಸುವಿಕೆಯ ದರವು ಈಗಲೂ 2008ರಲ್ಲಿ ಇದ್ದಷ್ಟೇ ಇದೆ ಎಂದು ಊಹಿಸಿಕೊಂಡರೆ, ಅಮೇರಿಕಾದ ಇಂದಿನ ನಿರುದ್ಯೋಗದ ದರ 8% ಆಗುತ್ತದೆ, ಅಧಿಕೃತ ಅಂಕಿಗಳು ಹೇಳುವ ಹಾಗೆ 4% ಅಲ್ಲ.
ಜಾಗತಿಕ ಅರ್ಥವ್ಯವಸ್ಥೆಯು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಮತ್ತು ಅದರ ಪರಿಣಾಮವಾಗಿ ನಿರುದ್ಯೋಗವು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಜಗತ್ತಿನಾದ್ಯಂತ ಬಲ ಪಂಥದತ್ತ ಪಲ್ಲಟ ಕಾಣುತ್ತಿದೆ. ಅರ್ಥವ್ಯವಸ್ಥೆಯ ಬಿಕ್ಕಟ್ಟು ಮತ್ತು ನಿರುದ್ಯೋಗದ ಪ್ರಶ್ನೆ ಬಂದಾಗ, ಉದಾರವಾದೀ ಬೂರ್ಜ್ವಾ ಪಕ್ಷಗಳು ಸಾಮಾನ್ಯವಾಗಿ ನಿರಾಕರಣೆಯ ಧೋರಣೆ ತಳೆಯುತ್ತವೆ. ನಿರುದ್ಯೋಗ ಉಂಟಾಗುವುದಕ್ಕೆ ವ್ಯವಸ್ಥೆ ಕಾರಣವಲ್ಲ; ವಲಸಿಗರೇ ಕಾರಣ; ಆದುದರಿಂದ ವಲಸೆಯನ್ನು ತಡೆಯಬೇಕು ಎಂದು ಪ್ರತಿಪಾದಿಸುವ ಬಲ ಪಂಥವು, ಕೊನೆಯ ಪಕ್ಷ, ನಿರುದ್ಯೋಗವು ಉಂಟುಮಾಡುವ ಯಾತನೆಯನ್ನು ಗುರುತಿಸುತ್ತದೆ.
ಯೂರೋಪಿಯನ್ ಒಕ್ಕೂಟ ವ್ಯವಸ್ಥೆಯಲ್ಲಿ, ಅದರ ದುಡಿಮೆಗಾರರು ಒಕ್ಕೂಟದ 28 ಸದಸ್ಯ ದೇಶಗಳಲ್ಲಿ ಯಾವುದೇ ದೇಶಕ್ಕೆ ವಲಸೆ ಹೋಗುವ ಅವಕಾಶವು ಮುಕ್ತವಾಗಿರುವುದರಿಂದ, ಕೆಲವು ಬಲ ಪಂಥೀಯ ಪಕ್ಷಗಳು ಯೂರೋಪಿಯನ್ ಒಕ್ಕೂಟದ ವಿರೋಧಿಗಳೂ ಆಗಿದ್ದಾರೆ. ಆಡಳಿತದಲ್ಲಿರುವ ಮತ್ತು ಅವರಿಗೆ ವಿರೋಧವಿರುವ ಉದಾರವಾದೀ ಬೂರ್ಜ್ವಾ ಪಕ್ಷಗಳು ಬಿಕ್ಕಟ್ಟು ಇದೆಯೆನ್ನುವುದನ್ನೇ ಒಪ್ಪಿಕೊಳ್ಳದ ಪರಿಸ್ಥಿತಿಯಲ್ಲಿ ಮತ್ತು ಎಡ ಪಂಥವು ಈ ಬಿಕ್ಕಟ್ಟಿನಿಂದ ಹೊರಬರುವ ಒಂದು ಪರ್ಯಾಯ ಅಜೆಂಡಾವನ್ನು ಜನತೆಯ ಮುಂದಿಡುವಲ್ಲಿ ನಿಧಾನವಾಗಿರುವ ಪರಿಸ್ಥಿತಿಯಲ್ಲಿ, ಇಂತಹ ಪರಿಸ್ಥಿತಿ ನಿರ್ಮಾಣವಾಗುವುದನ್ನೇ ಕಾಯುತ್ತಿದ್ದ ಬಲ ಪಂಥವು ಕಿಂದರಿಜೋಗಿಯಂತೆ ರಂಗ ಪ್ರವೇಶಿಸಿ ನಿರುದ್ಯೋಗ ಪರಿಹರಿಸುವ ಕಿಂದರಿ ಬಾರಿಸಿತು. ಒಂದು ವಲಸೆ-ವಿರೋಧಿ ಅಜೆಂಡಾವನ್ನು ಜನತೆಯ ಮುಂದಿಡುವ ಮೂಲಕ ಬಲ ಪಂಥವು ತನ್ನ ಚಟುವಟಿಕೆಗಳಿಗೆ ಚಾಲನೆ ಕೊಟ್ಟಿದೆ. ಹೀಗೆ ಜಗತ್ತಿನ ಉದ್ದಗಲದಲ್ಲೂ ಅದರ ಬೆಳವಣಿಗೆಗೆ ಅದು ಬಿಕ್ಕಟ್ಟು ಮತ್ತು ನಿರುದ್ಯೋಗವನ್ನು ಗಮನಕ್ಕೆ ತಗೊಂಡಿರುವುದು ಮತ್ತು ಅಧಿಕಾರಸ್ಥರ ಪರವಾದ ರಾಜಕೀಯ ಪಕ್ಷಗಳು ಗಮನಕ್ಕೆ ತಗೊಂಡಿರದಿರುವುದೇ ಕಾರಣ ಎನ್ನಬಹುದು.
ಹಾಗಾದರೆ, ಭಾರತದಲ್ಲಿನ ಕತೆ ಈ ವಿವರಣೆಯ ಚೌಕಟ್ಟಿಗೆ ಹೊಂದಿಕೊಳ್ಳುತ್ತದೆಯೇ? ಭಾರತದಲ್ಲಿಯೂ ಸಹ ಅಭಿವೃದ್ಧಿ ಅಜೆಂಡಾದ ಮೂಲಕವೇ 2014ರಲ್ಲಿ ಮೋದಿ ಅಧಿಕಾರ ಹಿಡಿದದ್ದು. ಅದಕ್ಕೂ ಮುನ್ನವೇ ಯುಪಿಎ-2 (2009-14) ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ದರ ಇಳಿಮುಖವಾಗಿತ್ತು. ಹಾಗಾಗಿ, ಪ್ರತಿಯೊಬ್ಬರ ಅದೃಷ್ಟ ಖುಲಾಯಿಸುವ ನವ ಉದಾರವಾದದ ಭರವಸೆ ಮಬ್ಬಾಗಲಾರಂಭಿಸಿತ್ತು. ಜನತೆಗೆ ಕೊಟ್ಟಿದ್ದ ಅಭಿವೃದ್ಧಿ ಅಥವಾ ವಿಕಾಸ ಭರವಸೆಯನ್ನು ಈಡೇರಿಸಲು ಮೋದಿ ಸರ್ಕಾರವು ಅಧಿಕಾರದ ಅವಧಿಯಲ್ಲಿ(2014-19) ಅಕ್ಷರಷಃ ಏನನ್ನೂ ಮಾಡಲಿಲ್ಲ.
ಆ ಕಾರಣದಿಂದಾಗಿಯೇ ಈಗ ತಾನೇ ಮುಗಿದ ಚುನಾವಣೆಯಲ್ಲಿ ಅಭಿವೃದ್ಧಿ ಅಥವಾ ವಿಕಾಸದ ಬಗ್ಗೆ ಮೋದಿಯವರು ಒಂದೇ ಒಂದು ಶಬ್ದವನ್ನೂ ಉಚ್ಛರಿಸಲಿಲ್ಲ. ಆದರೆ, ಭಯೋತ್ಪಾದನೆ ವಿರುದ್ಧ ಹೋರಾಡುವೆ, ರಾಷ್ಟ್ರವನ್ನು ರಕ್ಷಿಸುವೆ, ಪಾಕೀಸ್ತಾನಕ್ಕೆ ಪಾಠ ಕಲಿಸುವೆ ಮತ್ತು ಹಿಂದುತ್ವ ಪ್ರತಿಷ್ಠಾಪನೆಯಂತಹ ಮಾತುಗಳ ಮೂಲಕ ಇಡೀ ಚರ್ಚೆಯ ದಿಕ್ಕನ್ನೇ ಮೋದಿ ಬದಲಿಸಿದರು. ಈ ತಂತ್ರಗಾರಿಕೆಯ ಮಾತುಗಳ ಮೂಲಕ, ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಸಾಧಿಸಲು ತಮ್ಮ ಸರ್ಕಾರ ಮಾಡಿದ್ದೇನು ಎಂಬುದರ ಕುರಿತು ಎದುರಾಗುವ ಇರುಸು ಮುರುಸಿನ ಪ್ರಶ್ನೆಗಳನ್ನು ನಿರಾಯಾಸವಾಗಿ ತಪ್ಪಿಸಿಕೊಂಡರು. ಅದರಿಂದ ಅವರಿಗೆ ಭರ್ಜರಿ ಅನುಕೂಲವೇ ಆಯ್ತು.
ನವ ಉದಾರವಾದವನ್ನು ಪ್ರತಿನಿಧಿಸುವ ಕಾಂಗ್ರೆಸ್‌ನಂತಹ ಒಂದು ಪಕ್ಷದಿಂದ ಬಿಜೆಪಿಯಂತಹ ಒಂದು ಬಲ ಪಂಥೀಯ ಪಕ್ಷದತ್ತ ಪಲ್ಲಟವು ಸಾಧ್ಯವಾಗಿರುವುದು ನವ ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಎಂಬ ಸಂಗತಿಯಂತೂ ಉಳಿದೇ ಉಳಿಯುತ್ತದೆ. ನವ ಉದಾರವಾದವು ಅಭಿವೃದ್ಧಿ ತರುತ್ತದೆ ಎಂಬುದಾಗಿ ಸೋಗುಹಾಕುವುದು ಕಾಗ್ರೆಸ್ ಪಕ್ಷಕ್ಕೆ ಇನ್ನೆಷ್ಟೂ ಸಾಧ್ಯವಿರಲಿಲ್ಲ. ಬಿಜೆಪಿಯಂತೂ ಅಭಿವೃದ್ಧಿಯ ಬಗ್ಗೆ ಮಾತಾಡಲೇ ಇಲ್ಲ. ಆದರೆ, ಕಥನ-ಪ್ರವಚನದ ದಿಕ್ಕನ್ನೇ ಬದಲಿಸಿತು. ಅದು ಕಾರ್ಪೊರೇಟ್-ಹಣಕಾಸು ಕುಳಗಳಿಗೆ ಹಿಡಿಸಿತು ಕೂಡ (ಅದೆಷ್ಟು ಅಂದರೆ, ಬಿಜೆಪಿ ಗೆಲ್ಲುತ್ತದೆಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದ ಕೂಡಲೇ ಷೇರು ಪೇಟೆ ಸೂಚ್ಯಂಕ ಸರ್ರನೆ ಏರಿತು).
ಬದಲಾದ ಇಂತಹ ಸಂವಾದ-ಕಥನಗಳ ಪ್ರಭಾವ ತಾತ್ಕಾಲಿಕ. ನವ ಉದಾರವಾದವು ಸಿಕ್ಕಿಹಾಕಿಕೊಂಡಿರುವ ಬಿಕ್ಕಟ್ಟಿನಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ಯಾವ ಸುಳಿವೂ ಕಾಂಗ್ರೆಸ್‌ಗೂ ಇಲ್ಲ, ಬಿಜೆಪಿಗೂ ಇಲ್ಲ. ಆದ್ದರಿಂದ, ಕೋಟ್ಯಂತರ ನಿರುದ್ಯೋಗಿಗಳಿಗೆ ಅವರು ಉದ್ಯೋಗ ಒದಗಿಸಲಾರರು. ಹಾಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಕೆಲವರಿಗೆ ನವ ಉದಾರವಾದದ ಹಾದಿಯಲ್ಲಿ ಮುಂದೆ ಹೋಗುವುದು ಅದೆಷ್ಟು ಕಷ್ಟ ಎಂಬುದರ ಅರಿವಿತ್ತು. ಹಾಗಾಗಿಯೇ, ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಕೋಟಿ ಕಡು ಬಡ ಕುಟುಂಬಗಳಿಗೆ ವಾರ್ಷಿಕ 72,000 ರೂ ಹಣ ವರ್ಗಾಯಿಸುವ ನ್ಯಾಯ ಯೋಜನೆಯ ಘೋಷಣೆ ಕೊಟ್ಟಿತ್ತು. ಮಾಮೂಲು ಪರಿಸ್ಥಿತಿಯಲ್ಲಿ ಸಾಕಷ್ಟು ಉತ್ಸಾಹ ತುಂಬುವ ಸಾಧ್ಯತೆ ಹೊಂದಿದ್ದ ಮತ್ತು ಪಕ್ಷದ ಪಾಲಿಗೆ ಅಧಿಕಾರ ತಂದುಕೊಡುವಂತಹ ಒಂದು ಯೋಜನೆಯೇ ಠುಸ್ ಪಟಾಕಿಯಂತಾಯಿತು. ಏಕೆಂದರೆ, ಅದಕ್ಕೆ ಬೇಕಾಗುವ ಹಣ ಯಾವ ಮೂಲದಿಂದ ಬರುತ್ತದೆ ಎಂಬುದನ್ನು ಕಾಂಗ್ರೆಸ್ ಪಕ್ಷವು ಹೇಳದೇ ಇದ್ದುದರಿಂದ ಅದು ಜನರ ವಿಶ್ವಾಸ ಗಳಿಸಲಿಲ್ಲ. ಇದೊಂದು ಚುನಾವಣಾ ಭರವಸೆ, ಚುನಾವಣೆಯ ಮರು ದಿನವೇ ಅದನ್ನು ಮುರಿಯಲಾಗುತ್ತದೆ ಎಂದೇ ಜನ ಸಹಜವಾಗಿ ಭಾವಿಸಿದರು.
ಅರ್ಥವ್ಯವಸ್ಥೆಯನ್ನು ಮುನ್ನೆಡೆಸುವುದು ಹೇಗೆ ಎಂಬುದರ ಬಗ್ಗೆ ಮಧ್ಯಮಾರ್ಗಿ, ಉದಾರವಾದೀ ಬೂರ್ಜ್ವಾ ಪಕ್ಷವಾದ ಕಾಂಗ್ರೆಸ್‌ಗೆ ಒಂದು ಸ್ಪಷ್ಟ ಕಲ್ಪನೆಯೇ ಇಲ್ಲ. ಆ ಪಕ್ಷಕ್ಕೆ ಸರಿಸಮನಾಗಿ ಬಿಜೆಪಿಗೂ ಅದರ ಬಗ್ಗೆ ಯಾವುದೇ ಸುಳಿವೂ ಇಲ್ಲ. ಬಿಜೆಪಿಯ ಅತಿರೇಕದ ರಾಷ್ಟ್ರವಾದವು ಬಹಳ ಬೇಗನೇ ತೆಳುವಾಗುತ್ತದೆ. ಹಸಿವು ಮತ್ತು ನಿರುದ್ಯೋಗದಿಂದ ನರಳುತ್ತಿರುವ ಜನತೆಯನ್ನು ಗಾಳಕ್ಕೆ ಸಿಕ್ಕಿಸಿದ ಹುಳ ತಿನ್ನುವ ಮೀನುಗಳೆಂದು ಭಾವಿಸಿ, ಅವರಿಗೆ ದಿನನಿತ್ಯವೂ ಪಾಕೀಸ್ತಾನ-ವಿರೋಧೀ ಮತ್ತು ಮುಸ್ಲಿಂ-ವಿರೋಧೀ ಮಾತುಗಳನ್ನೇ ಉಣಬಡಿಸುವ ಆಟ ಬಹಳ ಕಾಲ ನಡೆಯುವುದಿಲ್ಲ. ಅಲ್ಲದೆ, ಆರ್ಥಿಕ ಪರಿಸ್ಥಿತಿ ನಿಂತಲ್ಲೇ ನಿಶ್ಚಲವಾಗಿ ಉಳಿಯುವುದಿಲ್ಲ.
ಮೋದಿ ಸರ್ಕಾರವು ಆರ್ಥಿಕ ವಲಯದತ್ತ ತಲೆ ಹಾಕಿ ಮಲಗದೇ ಇದ್ದರೂ ಸಹ, ಅರ್ಥವ್ಯವಸ್ಥೆಯು ಮೋದಿಯವರನ್ನು ಅವರಷ್ಟಕ್ಕೆ ಅವರು ಇರಲು ಬಿಡುವುದಿಲ್ಲ, ಬೆನ್ನು ಹತ್ತಿದ ಬೇತಾಳನಂತೆ ಕಾಡುತ್ತದೆ. ಕಾಲಕ್ರಮೇಣ, ಆರ್ಥಿಕ ಚಟುವಟಿಕೆಗಳ ಹಿಂಜರಿತ ಮತ್ತು ವಿದೇಶ ವ್ಯಾಪಾರದ ಬಾಕಿ ಚುಕ್ತಾ ಮಾಡುವುದೇ ಒಂದು ಸಮಸ್ಯೆಯಾದಾಗ, ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತದೆ. ಆಗ, ಉತ್ತರ ಕೊಡಲು ಮೋದಿ ಸರ್ಕಾರದ ಬಳಿ ಹೇಳಿಕೊಳ್ಳುವ ಸಮರ್ಥನೆಗಳಿರುವುದಿಲ್ಲ. ಮತ್ತು, ಬಿಕ್ಕಟ್ಟಿನಿಂದ ಅರ್ಥವ್ಯವಸ್ಥೆಯನ್ನು ಪಾರುಮಾಡುವುದು ಆ ವೇಳೆಗಾಗಲೇ ಇನ್ನೂ ಹೆಚ್ಚು ಕಷ್ಟಕರವಾಗುತ್ತದೆ.
ಜನತೆಯ ದಿನನಿತ್ಯದ ಬದುಕಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ನವ ಉದಾರವಾದದ ಎರಡೂ ಪಡೆಗಳು (ಕಾಂಗ್ರೆಸ್ ಮತ್ತು ಬಿಜೆಪಿ) ಅಸಮರ್ಥವಾಗಿವೆ. ಈ ಪರಿಸ್ಥಿತಿಯಲ್ಲಿ, ಅರ್ಥವ್ಯವಸ್ಥೆಯನ್ನು ಬಿಕ್ಕಟ್ಟಿನಿಂದ ಹೊರ ಬರುವ ಮಾರ್ಗದರ್ಶನವನ್ನು ಎಡ ಪಂಥ ಮಾತ್ರ ಒದಗಿಸಬಲ್ಲದು. ಎಡ ಪಂಥದ ಈ ಮಾರ್ಗವು ನಮ್ಮನ್ನು ಬಂಡವಾಳಶಾಹಿಯಿಂದ ಆಚೆಗೆ ಕೊಂಡೊಯ್ಯಬಲ್ಲದು. ನವ ಉದಾರ ಬಂಡವಾಳಶಾಹಿ ದಿಗಂತದಿಂದ ಆಚೆಗಿನ ಕಣ್ಣೋಟ ಹೊಂದಿರುವುದು ಎಡ ಪಂಥ ಮಾತ್ರ. ಆದ್ದರಿಂದ, ಎಡ ಪರ್ಯಾಯ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಸಲ್ಲುತ್ತದೆ.
ಸಂಕ್ಷಿಪ್ತವಾಗಿ, ನಾವೀಗ ಒಂದು ಚಾರಿತ್ರಿಕ ಪರ್ವಕಾಲವನ್ನು ನೋಡುತ್ತಿದ್ದೇವೆ. ಈ ಸನ್ನಿವೇಶದಲ್ಲಿ, ಬಲಪಂಥವು ಒಂದು ಹುಸಿ ಅಥವಾ ವಿಭಜನಕಾರೀ ಅಜೆಂಡಾದ ಸುತ್ತ ಜನರನ್ನು ಅಲ್ಪ ಕಾಲದಲ್ಲೇ ಅಣಿನೆರೆಸುವಲ್ಲಿ ಎಷ್ಡೇ ಯಶಸ್ವಿಯಾಗಿದ್ದರೂ ಸಹ, ನಿರುದ್ಯೋಗ ಮತ್ತು ಹತಾಶೆಯ ಪರಿಸ್ಥಿತಿಗೆ ಒಳಗಾಗಿರುವ ಆ ಜನರನ್ನು ಆ ಪರಿಸ್ಥಿತಿಯಿಂದ ಹೊರತರುವ ಮಾರ್ಗ ತೋರಲು ಬಲ ಪಂಥವು ಮೂಲಭೂತವಾಗಿ ಅಸಮರ್ಥವಾಗಿದೆ.
ಒಂದು ರಾಷ್ಟ್ರದ ಚರಿತ್ರೆಯಲ್ಲಿ, ಅಸ್ತಿತ್ವದಲ್ಲಿರುವ ವ್ಯವಸ್ಥೆಯು ಸ್ಥಿರವಾಗಿ ಮತ್ತು ದೀರ್ಘವಾಗಿ ಬಾಳುವ ಸಾಮರ್ಥ್ಯವುಳ್ಳದ್ದೆಂದು ತೋರುವ ಕ್ಷಣಗಳಿರುತ್ತವೆ. ಆದರೆ, ಇವೆಲ್ಲವೂ ಕ್ಷಿಪ್ರವಾಗಿ ಬದಲಾಗುತ್ತವೆ, ಹಿಂದಿನಂತೆಯೆ ಸಾಗುವುದು ಇನ್ನು ಸಾಧ್ಯವಿಲ್ಲವೆಂಬ ಪರಿಸ್ಥಿತಿಯಲ್ಲಿ ಹೊಸ ಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂತಹ ಒಂದು ಕ್ಷಣ ಬಂಡವಾಳಶಾಹಿಗೆ ಈಗ ಬಂದಿದೆ, ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲೆಡೆಯಲ್ಲೂ. ಭಾರತದಲ್ಲಿ ಮತ್ತು ಬೇರೆ ಹಲವು ದೇಶಗಳಲ್ಲಿ ಬಲಪಂಥವು ಎಷ್ಡೇ ಚುನಾವಣಾ ಯಶಸ್ಸು ಗಳಿಸಿದರೂ, ಅದು ಈ ಮೂಲಭೂತ ಅಂಶವನ್ನು ಮಾರ್ಪಡಿಸಲಾರದು.
–ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಕೃಪೆ : ಜನಶಕ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.
ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆÉ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ.ಬಿ : ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ , ಬಿ.ಐ.ಇ.ಟಿ. ಕಾಲೇಜು ಹಾಗೂ ಸುತ್ತ ಮುತ್ತ ಪ್ರದೇಶಗಳು.
ಮಂಡಿಪೇಟೆ, ಬೆನ್ನೆ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಬೆಲ್ಲೌಡಿಹಲ್ಲಿ, ಮಹಾವೀರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಬಿ.ಟಿ.: ಮಂಡಕ್ಕಿ ಬಟ್ಟಿ, 1 ರಿಂದ 10 ನೇ ಕ್ರಾಸ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಮೌನೇಶ್ವರ : ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್ ರಸ್ತೆ, ಜಯನಗರ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ.
ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಇ.ಎಸ್.ಐ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ, ಪಿ.ಬಿ. ರಸ್ತೆ., ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಕೆಟಿಜೆ: ಶ್ರೀ ಮುರಘ ರಾಜೇಂದ್ರ ಸ್ವಾಮಿಗಳ ಮಠ, ಜಾಧವ್ ಕ್ಲಿನಿಕ್ ಸುತ್ತ ಮುತ್ತ , ಶಿವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ ಹಾಗು ಸುತ್ತಮುತ್ತ ಪ್ರದೇಶಗಳು, ಪಿಜೆ: ಪೋಲೀಸ್ ಕ್ವಾಟ್ರಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸಿಜಿಹೆಚ್: ಎಮ್.ಸಿ.ಸಿ. ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೊಗಟವೀರ ಕಲ್ಯಾಣ ಮಂದಿರ, ವಿನೋಬ ನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿ ನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗು ಸುತ್ತಮುತ್ತ ಪ್ರದೇಶಗಳು.
ಕರೂರು ಇಂಡಸ್ಟ್ರಿಯಲ್ ಏರಿಯಾ, ಡಿ.ಸಿ. ಕಛೇರಿ, ಜಿ.ಎಂ.ಐ.ಟಿ. ಬಸವೇಶ್ವರ ನಗರ, ರಶ್ಮೀ, ಹರಿಹರ ರಸ್ತೆ, ವಿಜಯ ನಗರ, ಅಶೋಕ ನಗರ, ಆರ್.ಟಿ.ಓ. ಕಛೇರಿ, ಎಸ್.ಪಿ. ಕಛೇರಿ, ರಿಂಗ್ ರಸ್ತೆ, ಶಿಬಾರ, ಎಸ್.ಎಂ.ಕೆ. ನಗರ, ಹಾಗೂ ಚಿತ್ತನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೇವರಹಟ್ಟಿ, ದೊಡ್ಡಬಾತಿ, ಹಳೆಬಾತಿ, ನಾರಾಯಣ ಕ್ಯಾಂಪ್, ಯರಗುಂಟಾ, ಕೋಡಿಹಳ್ಳಿ, ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮಾಗಾನಹಳ್ಳಿ, ಮಾಗಾನಹಳ್ಳಿ ಕ್ಯಾಂಪ್, ಓಬಜ್ಜಿಹಳ್ಳಿ, ಓಬಜ್ಜಿಹಳ್ಳಿ ಕ್ಯಾಂಪ್, ಕಡ್ಲೇಬಾಳು, ಹಳೆಕಡ್ಲೆಬಾಳು, ಮಾಳಗೊಂಡನಹಳ್ಳಿ, ಅರಸಾಪುರ, ಬದುನಾಯಕನತಾಂಡ, ಚಿಕ್ಕಓಬಜ್ಜೀಹಳ್ಳಿ, ದೊಡ್ಡಓಬಜ್ಜೀಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮ್ಯಾಸರಹಳ್ಳಿ, ಗುಮ್ಮನೂರು, ಹುಣಸೆಕಟ್ಟೆ, ಮುಡೇನಹಳ್ಳಿ, ಕೆಂಚಮ್ಮನಹಳ್ಳಿ, ಹೊಸಹಳ್ಳಿ, ಕಾಟಿಹಳ್ಳಿ.
ಮಂಡಲೂರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹನುಮನಹಳ್ಳಿ, ಕೊಗ್ಗÀನೂರು, ಹನುಮನಹಳ್ಳಿ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆರ್.ಎಂ.ಸಿ. ಲಿಂಕ್ ರಸ್ತೆ, ಬಿ.ಟಿ. ಲೇಔಟ್, ಗುಜರಿ ಲೈನ್, ಬಂಬೂ ಬಜಾರ್, ಮಟ್ಟಿಕಲ್, ಬಿಡಿಓ ಕಛೇರಿ, ಇಮಾಮ್ ನಗರ, ಅಮರಪ್ಪನ ತೋಟ.
ಆನೆಕೊಂಡ, ಎಲ್.ಬಿ.ಎಸ್. ನಗರ.ಟಿ.ಸಿ. ಲೇಔಟ್, ಬಿಟಿ ಲೇಔಟ್, ಕೆ.ಆರ್. ರಸ್ತೆ, ಇಮಾಮ್ ನಗರ, ಆನೆಕೊಂಡ, ಐನಳ್ಳಿ ಕಾಂಪೌಂಡ್, ಎಪಿಎಂಸಿ, ಭಾರತ್ ಕಾಲೋನಿ, ಶೇಖ್ರಪ್ಪ ನಗರ ಹೆಚ್.ಕೆ.ಆರ್. ನಗರ, ಕಬ್ಬೂರು ಬಸಾಪುರ ನಗರ, ಆಣ್ಣಾ ನಗರ, ಬಸಾಪುರ ರಸ್ತೆ, ಗೋಶಾಲೆ, ಪಿ.ಬಿ. ರಸ್ತೆ, ರವಿ ಮಿಲ್ ಹಾಗೂ ಆವರಗೆರೆ, ಹೊನ್ನೂರು, ಐಗೂರು, ಮಲ್ಲಶೆಟ್ಟಿಹಳ್ಳಿ, ತೊಳಹುಣಸೆ, ದಾವಣಗೆರೆ ವಿಶ್ವವಿದ್ಯಾಲಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ19 hours agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ1 day agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ16 hours agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ1 day agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

