ರಾಜಕೀಯ
ಇದು ರೈತರ, ಯುವಜನರ ಮತ್ತು ಗ್ರಾಮೀಣ ಭಾರತದ ವಿರೋಧಿ ಬಜೆಟ್ : ಸಿದ್ದರಾಮಯ್ಯ ಕಿಡಿ
ಸುದ್ದಿದಿನ,ಬೆಂಗಳೂರು ; 2019-20ರ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಪತ್ರ ಸಂಪೂರ್ಣವಾಗಿ ರೈತರು, ಯುವಜನರು ಮತ್ತು ಗ್ರಾಮೀಣ ಭಾರತದ ವಿರೋಧಿ ಆಯವ್ಯಯ ಪತ್ರ ಎಂದು ಹೇಳಬಹುದಾಗಿದೆ. ರಾಜಕೀಯ ಕಾರಣಕ್ಕೆ ಈ ಟೀಕೆಯನ್ನು ನಾನು ಮಾಡುತ್ತಿಲ್ಲ. ಯಾರಾದರೂ ಆಯವ್ಯಯ ಪತ್ರವನ್ನು ಓದಿದರೆ ಮೇಲ್ನೋಟಕ್ಕೆ ಈ ಮೂರು ಕ್ಷೇತ್ರಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ಮಂಡನೆಯಾದ ಕೇಂದ್ರ ಬಜೆಟ್ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರ್ಕಾರದ ಸಾಧನೆಗಳನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಪ್ರಚಾರ ವೈಭವಕ್ಕೆ ಮರುಳಾಗಿ ಮತಚಲಾಯಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಕೇಂದ್ರ ಸರ್ಕಾರದ 2019-20 ಸಾಲಿನ ಆಯವ್ಯಯ ಪತ್ರ ಜ್ವಲಂತ ಸಾಕ್ಷಿ. ಇದರ ಜತೆಗೆ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಕೂಡಾ ನಿರ್ಲಕ್ಷಿಸಲಾಗಿದೆ. ದೇಶದ ರೈತರು ಸರಿಯಾದ ಮಳೆ ಇಲ್ಲದೆ, ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ದೇಶದ ಯುವಜನತೆ ನಿರುದ್ಯೋಗದಿಂದಾಗಿ ದಿಕ್ಕೆಟ್ಟು ಕೂತಿದ್ದಾರೆ. ಈ ಎರಡು ಪ್ರಮುಖ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ನರೇಂದ್ರ ಮೋದಿ ಸರ್ಕಾರ ತಮ್ಮದು ಹೇಗೆ ರೈತ ಮತ್ತು ಯುವಜನ ವಿರೋಧಿ ಪಕ್ಷ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ದೇಶಾದ್ಯಂತ ರೈತರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಬರಗಾಲ, ಇನ್ನೊಂದೆಡೆ ಬೆಳೆದ ಬೆಳೆಗೆ ಬೆಲೆ ಇಲ್ಲ, ಮತ್ತೊಂದೆಡೆ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಬೇಕಾದ ಅಸಹಾಯಕತೆ. ಕಳೆದ ಐದು ವರ್ಷಗಳಲ್ಲಿ ವಂಚಕ ಉದ್ಯಮಿಗಳನ್ನು ಪೋಷಿಸುತ್ತಾ ರೈತ ಸಮುದಾಯವನ್ನು ನಿರ್ಲಕ್ಷಿಸುತ್ತಾ ಬಂದಿರುವ ಮೋದಿ ಸರ್ಕಾರ ತನ್ನ ರೈತ ವಿರೋಧಿ ನೀತಿಯನ್ನು ಮುಂದುವರಿಸಿಕೊಂಡು ಹೋಗುವ ಸೂಚನೆಯನ್ನು ಆಯವ್ಯಯಪತ್ರದಲ್ಲಿ ನೀಡಿದೆ ಎಂದಿದ್ದಾರೆ.
ರೈತರ ಸಾಲ ಮನ್ನಾ ಮಾಡಬೇಕೆಂದು ಇಡೀ ದೇಶದ ರೈತರು ಒಕ್ಕೊರಲಿನಿಂದ ಮೊರೆ ಇಡುತ್ತಿದ್ದಾರೆ. ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಮೈತ್ರಿ ಸರ್ಕಾರಗಳೆರಡೂ ರೈತರ ಮೊರೆಗೆ ಓಗೊಟ್ಟು ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದೆ. ಆದರೆ ನರೇಂದ್ರ ಮೋದಿ ಸರ್ಕಾರ ರೈತರ ಮೊರೆ ಕೇಳದೆ ಇರುವಷ್ಟು ಕಿವುಡಾಗಿದೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ನಾನು ಮುಖ್ಯಮಂತ್ರಿಯಾಗಿದ್ದ ದಿನಗಳಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ವಂಚಕ ಉದ್ಯಮಿಗಳಿಗೆ ಬ್ಯಾಂಕುಗಳ ಖಜಾನೆಯನ್ನು ತೆರೆದಿಟ್ಟು, ಅವರನ್ನು ವಿದೇಶಕ್ಕೆ ಹಾರಲು ಬಿಟ್ಟ ಸರ್ಕಾರ ರೈತರನ್ನು ಮಾತ್ರ ಸತತವಾಗಿ ಸಂಪೂರ್ಣವಾಗಿ ಕಡೆಗಣಿಸುತ್ತಾ ಬಂದಿದೆ ಎಂದು ನುಡಿದಿದ್ದಾರೆ.
ಕೃಷಿ ಬೆಳವಣಿಗೆಗೆ ಪೂರಕವಾಗಿರುವ ನೀರಾವರಿ, ತೋಟಗಾರಿಕೆ, ಸಹಕಾರ ಕ್ಷೇತ್ರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನಿರುದ್ಯೋಗ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಅತ್ಯಂತ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿರುವುದರಿಂದ ನಿರುದ್ಯೋಗದ ಪ್ರಮಾಣ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಪ್ರಮಾಣ ಹೆಚ್ಚಾಗಲಿದೆ. ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ಐದು ವರ್ಷಗಳ ಹಿಂದೆ ಆಶ್ವಾಸನೆ ನೀಡಿದ್ದ ಮೋದಿ ಸರ್ಕಾರ ಈ ಆಯವ್ಯಯ ಪತ್ರದಲ್ಲಿಯೂ ಕೂಡಾ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ. ಕಳೆದ ಐದು ವರ್ಷಗಳಲ್ಲಿ ಕೇವಲ 0.3 % ನಷ್ಟು ಮಾತ್ರ ಬಜೆಟ್ ಹಣವನ್ನು ಖರ್ಚು ಮಾಡಿರುವುದು ಸರ್ಕಾರದ ದುರಹಂಕಾರ ನೀತಿಗೆ ಸಾಕ್ಷಿ.
ನೀರಾವರಿ ಕ್ಷೇತ್ರಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ 433 ಕೋಟಿ ರೂಪಾಯಿಗಳಷ್ಟು ಕಡಿಮೆ ಖರ್ಚು ಮಾಡಲಾಗಿದೆ. ಮನೆಮನೆಗೆ ಕುಡಿಯುವ ನೀರು ಪೂರೈಸುವ ಆಕರ್ಷಕ ಯೋಜನೆಯನ್ನು ಪ್ರಕಟಿಸಿರುವ ಸರ್ಕಾರ ನೀರು ಸಂಗ್ರಹದ ಬಗ್ಗೆ ಮಾತ್ರ ಏನನ್ನೂ ಹೇಳಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ನಿರುದ್ಯೋಗ ಪ್ರಮಾಣದ ಬಗ್ಗೆ ಕಣ್ಣು ಮುಚ್ಚಾಲೆ ಆಡುತ್ತಾ ಬಂದಿರುವ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ನಿರುದ್ಯೋಗದ ಪ್ರಮಾಣ 45 ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ ಎಂದು ಒಪ್ಪಿಕೊಂಡಿದೆ. ನೋಟ್ ಬ್ಯಾನ್, ಕೈಗಾರಿಕಾ ಕ್ಷೇತ್ರದ ಹಿನ್ನಡೆ ಮತ್ತು ಅವೈಜ್ಞಾನಿಕ ಜಿಎಸ್ ಟಿಯಿಂದಾಗಿ ನಿರುದ್ಯೋಗ ಹೆಚ್ಚಾಗಲಿದೆ ಎಂದು ನಮ್ಮ ಪಕ್ಷ ಸಾರಿ ಸಾರಿ ಹೇಳಿದರೂ ಪ್ರಧಾನಿ ಮೋದಿಯವರು ಕಿವಿಗೆ ಹಾಕಿಕೊಂಡಿರಲಿಲ್ಲ. ಈಗ ಅನಿವಾರ್ಯವಾಗಿ ಸರ್ಕಾರ ತಪ್ಪೊಪ್ಪಿಕೊಂಡಿದೆ ಎಂದು ಟೀಕಿಸಿದ್ದಾರೆ.
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿರಬೇಕು. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ, ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ. ಮತ್ತೆ ಮತ್ತೆ ಕೌಶಲಾಭಿವೃದ್ಧಿಯ ಜಪ ಮಾಡುವ ಮೋದಿ ಸರ್ಕಾರ ಉದ್ಯೋಗ ಸೃಷ್ಟಿಗೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲು ಸೋತಿದೆ ಎಂದು ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಆರೋಗ್ಯ ಕ್ಷೇತ್ರ ಕೂಡಾ ನಿರ್ಲಕ್ಷ್ಯಕ್ಕೀಡಾಗಿದೆ. ಬಹುಪ್ರಚಾರದ ರಾಷ್ಟ್ರೀಯ ಆರೋಗ್ಯ ಮಿಷನ್ ಗೆ ಕಳೆದ ಐದು ವರ್ಷಗಳಲ್ಲಿ ಶೇಕಡಾ 13ರಷ್ಟು ಹಣ ಕಡಿತಗೊಳಿಸಲಾಗಿದೆ. ಜಿಡಿಪಿಯ ಶೇಕಡಾ 3ರಷ್ಟು ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಬೇಕೆಂಬುದು ನಮ್ಮ ಪಕ್ಷದ ಬೇಡಿಕೆಯಾಗಿತ್ತು. ಇದೇ ರೀತಿ ಶಿಕ್ಷಣ ಕ್ಷೇತ್ರ ಕೂಡಾ ಅವಗಣನೆಗೆ ಒಳಗಾಗಿದೆ.
ಜಾಗತಿಕವಾಗಿ ತೈಲಬೆಲೆ ಕಡಿಮೆಯಾಗುತ್ತಿದ್ದರೂ ನರೇಂದ್ರ ಮೋದಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಎರಡು ರೂಪಾಯಿಗಳಷ್ಟು ಏರಿಸಿದೆ. ಇದೊಂದು ಅನಗತ್ಯ ಬೆಲೆ ಹೆಚ್ಚಳವಾಗಿದ್ದು ಇದರಿಂದ ಸಹಜವಾಗಿಯೇ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಲಿದೆ, ಸಾರಿಗೆ ದುಬಾರಿಯಾಗಲಿದೆ, ಇದರಿಂದ ಸಾಮಾನ್ಯ ಜನರ ಕಷ್ಟಗಳು ಹೆಚ್ಚಾಗಲಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಓರ್ವ ಮಹಿಳೆಯಾಗಿ ಮಹಿಳಾ ಕಲ್ಯಾಣ ಕ್ಷೇತ್ರವನ್ನೇ ನಿರ್ಲಕ್ಷಿಸಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಮಹಿಳಾಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 2000 ಕೋಟಿ ರೂಪಾಯಿ ಅನುದಾನವನ್ನು ಕಡಿತಗೊಳಿಸಲಾಗಿದೆ. ಹೊಸ ಆಯವ್ಯಯ ಪತ್ರದಲ್ಲಿ ಕೂಡಾ ಉತ್ತೇಜನಕಾರಿಯಾಗಿರುವ ಯಾವ ಕಾರ್ಯಕ್ರಮಗಳನ್ನು ನೀಡಲಾಗಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.
ತಮಗಿರುವ ಬಹುಮತದ ಬಲದಿಂದ ತಾವು ನಡೆದದ್ದೇ ದಾರಿ ಎಂಬ ದುರಹಂಕಾರ ಸರ್ಕಾರದ ನಡೆಯಲ್ಲಿ ಕಾಣಬಹುದಾಗಿದೆ. ದೇಶದ ಜನತೆಗೆ ತಮ್ಮ ತಪ್ಪಿನ ತಿಳುವಳಿಕೆಯನ್ನು ಸರ್ಕಾರವೇ ಮಾಡಿಕೊಟ್ಟಿದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ
ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.
ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್ಜೀನ್ ಬರೆದಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್ನ ಸತ್ಯ ನಾದೆಲ್ಲಾ, ಓಪನ್ಎಐ ನ ಸ್ಯಾಮ್ ಅಲ್ಟ್ಮನ್, ಮೆಟಾದ ಮಾರ್ಕ್ ಝುಕೇರ್ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಾಜಧಾನಿಯಲ್ಲಿ ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಸುದ್ದಿದಿನಡೆಸ್ಕ್:ರಾಜಧಾನಿ ಬೆಂಗಳೂರಿನಲ್ಲಿ 15 ದಿನದೊಳಗೆ ಗುಂಡಿ ಮುಚ್ಚುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.
ವಿದೇಶ ಪ್ರವಾಸಕ್ಕೂ ಮುನ್ನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಸಭೆ ನಡೆಸಿದ ಅವರು ಸರಿಯಾಗಿ ಕಾರ್ಯನಿವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟಂಬರ್ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ತಿಳಿಸಿದ ಅವರು, ಅಪಾಯಕಾರಿ ಮರಗಳಿದ್ದರೆ, ಕತ್ತರಿಸುವಂತೆ ಸೂಚಿಸಿದ್ದಾರೆ.
ಯಾವುದೇ ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮೌನೀಶ್ ಮೌದ್ಗೀಲ್, ಬಿಎಂಆರ್ಡಿಎ ಆಯುಕ್ತ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ
ಸುದ್ದಿದಿನಡೆಸ್ಕ್:ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಯ ಹಿನ್ನಡೆಗೆ ಕಾಂಗ್ರೆಸ್ ಕಾರಣ ಎಂದು ದೂರಿದ್ದಾರೆ. ಜುಲೈನಲ್ಲಿ ನಡೆದ ಸಭೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ ಅವರು, ರಾಜ್ಯದ ಜನರ ಹಿತ ಕಾಪಾಡಲು ಬದ್ಧ ಎಂದು ಹೇಳಿದ್ದಾರೆ. ಮಹದಾಯಿ ಕೇವಲ ಗೋವಾ ಸಂಬಂಧಿ ಯೋಜನೆ ಅಲ್ಲ. ಅಲ್ಲಿ ಹುಲಿ ಸಂರಕ್ಷಿತ ಪ್ರದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ5 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ4 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ6 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ5 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ4 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು
-
ದಿನದ ಸುದ್ದಿ5 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ