ಅಂತರಂಗ
ಹಳದಿ ಕನ್ನಡಕ ತೆಗೆದು ನೋಡೋಣವೇ..?
- ಹಿರಿಯೂರು ಪ್ರಕಾಶ್
ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆಲ್ಲಾ ಜನರಲ್ಲಿ ಪ್ರಜ್ಞಾವಂತಿಕೆ ಕೂಡಾ ಹೆಚ್ಚಾಗುತ್ತಿದೆ. ಜಗತ್ತಿನ ಸುದ್ದಿಗಳು ಅಂಗೈಯಲ್ಲೇ ಅರೆಕ್ಷಣದಲ್ಲಿ ನರ್ತಿಸುವುದರಿಂದ ಅವುಗಳ ಬಗೆಗಿನ ಕುತೂಹಲ, ಆಕರ್ಷಣೆ, ಸರಿ ತಪ್ಪುಗಳ ವಿಮರ್ಶೆ ಎಲ್ಲವೂ ಸಹಜವೆಂಬಂತೆ ಜರುಗುತ್ತಿವೆ.
ಹೀಗಾಗಿ ಫೇಸ್ ಬುಕ್, ವಾಟ್ಸಪ್, ಟ್ವೀಟ್, ಇನ್ಸ್ಟಾ ಗ್ರಾಂ… ಮುಂತಾದೆಲ್ಲೆಡೆ ಪರಸ್ಪರ ಪರಿಚಯ, ಚರ್ಚೆ, ವಾದ -ವಿವಾದ , ವಿಚಾರ -ವಿಮರ್ಶೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದನ್ನು ಕಾಣಬಹುದು. ಹೀಗಾಗಿ ಫೇಸ್ ಬುಕ್ ನಲ್ಲಿ ಅನೇಕ ವಿಚಾರಗಳ ಬಗೆಗೆ ಬರೆಯುವವರ ಸಂಖ್ಯೆ ಹೆಚ್ಚಾದಂತೆ, ಬರೆದದ್ದನ್ನು ವಿಮರ್ಶಿಸುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ . ಅನೇಕ ವಿಷಯಗಳ ಮೇಲೆ ಸಾವಿರಾರು ಜನರ ಅಭಿರುಚಿ ಅಭಿಪ್ರಾಯಗಳು ಕ್ರೋಢೀಕರಣಗೊಂಡು ಒಂದು ಆರೋಗ್ಯಕರ ಚರ್ಚೆಗೆ ವೇದಿಕೆಗಳಾಗಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಇವು ರೂಪುಗೊಂಡಿವೆ. ಇದು ಸ್ವಾಗತಾರ್ಹ ಬೆಳವಣಿಗೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದನ್ನೇ ಮತ್ತೊಂದು ಆಯಾಮದಿಂದ ನೋಡುವುದಾದರೆ, ಇಂದಿನ ಕಾಲಘಟ್ಟದಲ್ಲಿ ಒಂದು ವಿಚಾರದ ಬಗೆಗೆ ಆರೋಗ್ಯಕರ ಚರ್ಚೆಗಳು ನೆಡೆಯುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಅಭಿಪ್ರಾಯಗಳಿಗೆ ಅಥವಾ ತಾವು ನಂಬಿದ ಸಿದ್ದಾಂತಗಳಿಗೆ ವಿರುದ್ಧವಾದ ವಿಚಾರವೇನಾದರೂ ಇದ್ದಲ್ಲಿ ಅದರ ಸಾಧಕ ಭಾಧಕಗಳ ಅರ್ಥಪೂರ್ಣ ಚರ್ಚೆಗಿಂತ ಮಿಗಿಲಾಗಿ ಪೂರ್ವಾಗ್ರಹ ಪೀಡಿತವಾದ ವಿಷಯ ಮಂಡನೆಗಳು, ಜಾತಿ- ಮತ, ರಾಜಕೀಯ, ಪಕ್ಷ ಆಧಾರಿತ ದ್ವೇಷಪೂರಿತ ಪ್ರತಿಕ್ರಿಯೆಗಳು , ನಿಂದನೆ , ಆರೋಪ , ಪಕ್ಷಪಾತ ಎಲ್ಲವೂ ಒಟ್ಟೊಟ್ಟೊಗೇ ವಕ್ಕರಿಸಿಬಿಡುತ್ತವೆ. ಯಾರು ಹೆಚ್ಚು ಯಾವುದು ಶ್ರೇಷ್ಠ ಎನ್ನುವ ಅನಾರೋಗ್ಯಕರ ಮೇಲಾಟದಲ್ಲಿ ಮಾನವೀಯ ಮೂಲಗಳನ್ನೇ ಹೊಸಕಿ ಬಿಸುಡುವ ಹಂತಕ್ಕೆ ಹೋಗಿ ತಲುಪಿರುತ್ತದೆ.
ಅಪ್ಪಿತಪ್ಪಿ ಮೋದಿಯವರ ಸರ್ಕಾರದ ಉತ್ತಮ ಸಾಧನೆಯನ್ನು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ದಿಟ್ಟ ನಿರ್ಧಾರಗಳನ್ನು ಹೊಗಳಿದರೆ ನೀವು ಬಲಪಂಥೀಯ ಅಥವಾ ಹಿಂದೂವಾದಿಯಾಗಿ ಗೋಚರಿಸುತ್ತೀರ. ಅದೇ ರೀತಿ ಕಾಂಗ್ರೆಸ್‌ನ ಕೆಲವು ಹಿಂದಿನ ಸಾಧನೆಗಳನ್ನು ಮೆಚ್ಚಿ ಹೇಳಿದರೆ ನೀವು ಎಡ ಪಂಥೀಯನಾಗಿ ಅಪಹಾಸ್ಯಕ್ಕೀಡಾಗಿಬಿಡುತ್ತೀರ.
ಸ್ವಲ್ಪಮಟ್ಟಿಗೆ ಜಾತ್ಯಾತೀತತೆಯ ನೆರಳಲ್ಲಿ ಬರೆದರೆ ಬು(ಲ)ದ್ದಿಜೀವಿಯೆಂದೋ , ವಸ್ತುನಿಷ್ಠ ವಾಗಿ ವಿಮರ್ಶಿಸುವವ ಗಂಜಿಕಿರಾಕಿಯಾಗಿಯೋ ಕಂಗೊಳಿಸುವಂತೆ ಎಲ್ಲೆಡೆ ಅಸಹ್ಯಕರ ವಾಂತಿಯಾಗಿರುತ್ತದೆ. ತಮ್ಮ ಪಕ್ಷವನ್ನು ಹೊಗಳುವ ಸಿನಿಮಾ ನಟ ಅಥವಾ ನಟಿಯನ್ನು ಹಿಂದೆ ಮುಂದೆ ನೋಡದೆ ಆರಾಧಿಸುವ ಹಾಗೆ ಅವರು ಹಿಂಬಾಲಿಸುವ ಪಕ್ಷದ ತಪ್ಪುಗಳನ್ನು ಎತ್ತಿ ತೋರಿಸುವ ನಟ ನಟಿಯ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡೋದು….ತೀರಾ ಅಸಹ್ಯವಾಗಿ ಟ್ರೋಲ್ ಮಾಡುವುದು ನಿತ್ಯದ ಪ್ರಕ್ರಿಯೆಯಾಗಿದೆ.
ಯಾರಾದರೂ ಅಪರಾಧ ಮಾಡಿ ತಗಲಾಕಿಕೊಳ್ಳುವ ಮುನ್ನ ತಮ್ಮ ಪಕ್ಷದವರೆಂದು ರಾಜಾರೋಷವಾಗಿ ಹೇಳುತ್ತಿದ್ದವರು , ಅವರ ಅಪರಾಧ ಬಯಲಿಗೆ ಬಂದ ಕೂಡಲೇ ಅವರ ವರಸೆ ಬದಲಾಯಿಸಿ ಅವರನ್ನು ತಮ್ಮವರೆಂದು ಒಪ್ಪಿಕೊಳ್ಳಲು ತಯಾರಾಗದೇ ಅದನ್ನು ವಿರೋಧಿಗಳ ಹಣೆಗೆ ಕಟ್ಟುವ ಚಾಳಿ ಪರಸ್ಪರ ಕೆಸರೆರೆಚಾಟ ಮಾಮೂಲಿಯಾಗಿ ಬಿಟ್ಟಿದೆ.
ಕೆಲವರಂತೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ನೀವು ಏನೇ ಬರೆದರೂ ತಮ್ಮ ಪಕ್ಷಾಧಾರಿತ ಚೌಕಟ್ಟನ್ನು ಮೀರಿ ಹೊರಬರಲಾರರು. ಮತ್ತೇ ಕೆಲವರು ತಮ್ಮ ಧರ್ಮ ಅಥವಾ ಜಾತಿಯ ವ್ಯೂಹದಿಂದ ಆಚೆಗೆ ಏನನ್ನೂ ನೋಡುವ ಅರ್ಹತೆಯನ್ನೇ ಕಳೆದುಕೊಂಡುಬಿಟ್ಟಿರುತ್ತಾರೆ. ಬೇರೆಯವರ ಜಾತಿ ಹಾಗೂ ಧರ್ಮಗಳು ಇಂಥವರ ಕಣ್ಣಿಗೆ ಅಸಹ್ಯವಾಗಿಯೇ ಕಾಣುತ್ತವೆ.
ಉದಾಹರಣೆಗೆ ಒಂದಷ್ಟು ಜನಕ್ಕೆ ಮೋದಿಯವರನ್ನು ಹಿಂದೂಗಳನ್ನು ಕಂಡರೆ ನಖಶಿಖಾಂತ ಉರಿದುಕೊಂಡು ಹೀಯ್ಯಾಳಿಸದಿದ್ದರೆ ಸಮಾಧಾನವಿರೋದಿಲ್ಲ. ಮತ್ತೇ ಹಲವರಿಗೆ ಇಂದಿರಾ ನೆಹರೂ ಫ಼್ಯಾಮಿಲಿ ಕಂಡರೆ ಕೆಂಡದಂಥ ಕೋಪ. ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳುವ ಹಾಗೇ ಇಲ್ಲ. ರಾಮನಿಗೆ ಬಾಬರ್ ಕಂಡರೆ ದ್ವೇಷದಂತೆ , ಬಾಬರ್ ಗೆ ರಾಮನನ್ನು ಕಂಡರೆ ಈರ್ಷ್ಯೆಯಂತೆ
ಅನ್ಯ ಧರ್ಮೀಯರ ಪ್ರತೀ ನಡೆಯಲ್ಲೂ ವಿವಾದ ಹುಡುಕುವ ಪ್ರಯತ್ನ ಮುಂದುವರೆಸುತ್ತಾ ಮಂದಿರ ಮಸೀದಿ ಗಳನ್ನು ವಾರ್ ಫ಼ೀಲ್ಡ್ ಮಾಡಿಕೊಂಡು ಬಿಟ್ಟಿರುತ್ತಾರೆ.
ಅನಗತ್ಯ ಪೋಸ್ಟ್ ಗಳಿಂದ ಸಾಮಾನ್ಯ ಜನಜೀವನವನ್ನೇ ಕಂಗೆಡಿಸಿಬಿಡುತ್ತಾರೆ. ಯಾವನೋ ಒಬ್ಬ ಒಂದು ಧರ್ಮದ ವಿಚಾರದಲ್ಲಿ ಅಯೋಗ್ಯತನದ ಕೆಲಸ ಮಾಡಿದರೆ, ಅಪರಾಧ ಮಾಡಿದರೆ ಅವನು ಮೊದಲು ಯಾವ ಪಾರ್ಟಿಯವನೆಂದು , ಯಾವ ಧರ್ಮಕ್ಕೆ ಸಂಘಟನೆಗೆ ಸೇರಿದವನೆಂದು ಅಳೆದು ತೂಗಿ ಪ್ರತಿಕ್ರಿಯಿಸುತ್ತಾರೆಯೇ ಹೊರತು ಅವನ ಕುಕೃತ್ಯವನ್ನು ಮನಸಾರೆ ಖಂಡಿಸುವ ಹೃದಯ ವೈಶಾಲ್ಯತೆ ಇರುವುದಿಲ್ಲ.
ಅಂದರೆ ಧರ್ಮಾಂಧನೊಬ್ಬ ತನ್ನ ಜಾತಿ- ಧರ್ಮಕ್ಕೆ ಸೇರಿದವನಾಗಿ ಎಂತಹಾ ಹಲ್ಕಾ ಕೆಲಸ ಮಾಡಿದರೂ ಅವನನ್ನು ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳುವ ಮನಸ್ಥಿತಿಯ ಮಹಾನುಭಾವರು ನಮ್ಮ ನಡುವೆ ಹೆಚ್ಚಾಗುತ್ತಿದ್ದಾರೆ . ಅವನ ಜಾತಿ ಧರ್ಮ ಪಕ್ಷದ ಹಿನ್ನೆಲೆ ನೋಡದೇ ಕೇವಲ ಅವರ ತಪ್ಪು ತಪರಾಕಿಗಳನ್ನು ನೀವು ವಸ್ತುನಿಷ್ಠ ವಾಗಿ ಬರೆದರೋ…ಅಲ್ಲಿಗೆ ನಿಮ್ಮ ಮೇಲೆ ಎಡ ಬಲ ಗಂಜಿ ಎಂಬಿತ್ಯಾದಿ ವಿಶೇಷಣಗಳ ಬಾಣಗಳಿಂದ ಇಲ್ಲ ಸಲ್ಲದ ಯುದ್ಧಕ್ಕೆ ರೆಡಿಯಾಗುವ ಮಹಾನ್ ಸರಸ್ವತಿ ಪುತ್ರರು ಸಾಮಾಜಿಕ ಜಾಲತಾಣಗಳ ಸೈನ್ಯದಲ್ಲಿ ಶಸ್ತ್ರ ಸಜ್ಜಿತರಾಗಿ ಕಾದುಕುಳಿತಿರುತ್ತಾರೆ.!!
ಯಾಕೆ ಹೀಗೆ…??? ಒಂದು ವಿಷಯವನ್ನು ಅದರ ಸತ್ಯದ ಹಾಗೂ ವಾಸ್ತವದ ನೆರಳಲ್ಲೇ ನೋಡಿ ನೈಜತೆಯಿಂದ ಹೇಳುವ , ಬರೆಯುವ ಅಥವಾ ವಿಮರ್ಶಿಸುವ ಪರಿಸ್ಥಿತಿ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣವಾಗಿ ಕಾಣೆಯಾಗುತ್ತಿದೆಯೇ ? ವಾಸ್ತವಿಕ ನೆಲೆಗಟ್ಟಿನಲ್ಲಿ ಪ್ರಶ್ನಿಸುವುದು ಅಪರಾಧವಾಗಿ ಕಂಡುಬರುತ್ತಿದೆಯೇ ? ಎಲ್ಲವನ್ನೂ ನಮ್ಮ ನಮ್ಮ ಮೂಗಿನ ನೇರಕ್ಕೇ ನೋಡಿ ನಿರ್ಧರಿಸುವ ಪರಿಯೇ ಇಂದಿನ ಆದೇಶವೇ ? ವಿದ್ಯೆಗೂ ವಿವೇಕಕ್ಕೂ ಸಂಬಂಧವಿಲ್ಲದಂತೆ ವರ್ತಿಸುವ ರೀತಿಯಲ್ಲಿ ಮನುಷ್ಯನ ಕಾಮನ್ ಸೆನ್ಸ್ ಕಾಣೆಯಾಗುತ್ತಿರುವುದರ ಬಗ್ಗೆ ಯಃಕಿಂಚಿತ್ ಅಳುಕೂ, ಆತ್ಮವಿಮರ್ಶೆ ಇಲ್ಲವಾಗುತ್ತಿದೆಯೇ ?
ತಮಾಷೆ ಹಾಗೂ ವಿಪರ್ಯಾಸವೆಂದರೆ ಈ ಎಲ್ಲಾ ಉಲ್ಟಾ ಬೆಳವಣಿಗೆಗೆ ಅವಿದ್ಯಾವಂತರು ಕಾರಣರಲ್ಲ. ಅವರೆಲ್ಲಾ ಮೊದಲು ಹೇಗಿದ್ದರೋ ಈಗಲೂ ಅದೇ ಮುಗ್ದತೆ ಮತ್ತು ಅಮಾಯಕತನವನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ ವಿದ್ಯಾವಂತರೆನ್ನುವ ಗುಂಪುಗಳ ನಡುವೆ ಈ ವೈಷಮ್ಯದ ಮೇಲಾಟ ದ್ವೇಷಮಯವಾಗಿ ಮಾರ್ದನಿಸುತ್ತಿರುವುದು ದೇಶದ ಭವಿಷ್ಯಕ್ಕೇ ಮಾರಕ. ಇನ್ನೂ ನೋವೆಂದರೆ ಇದರ ಗಂಭೀರತೆಯನ್ನು ಅರಿಯದೇ ಅದನ್ನು ಪೋಷಿಸುವ ಕೆಲಸ ಅವ್ಯಾಹತವಾಗಿ ನೆಡೆಯುತ್ತಿರುವುದು !
ಗೆಳೆಯರೇ, ಸಾಮಾಜಿಕ ಜಾಲತಾಣದಲ್ಲಿ ಯಾರು ಯಾರನ್ನೂ ಬದಲಾಯಿಸಲು ಅಥವಾ ಪ್ರಭಾವ ಬೀರಲು ಸಾಧ್ಯವಿಲ್ಲ . ಎಲ್ಲರೂ ಅವರವರ ನೇರಕ್ಕೆ ಸರಿಯೇ ! ಆದರೆ ಒಂದು ವಿಚಾರ ತನಗೆ ಇಷ್ಟವಾಗದಿದ್ದರೂ ಒಂದು ಆರೋಗ್ಯಕರ ಚರ್ಚೆಗೆ ಒಳಪಡುವ ಮನಸು ಬಹಳಷ್ಟು ಜನರಿಗೆ ಇಲ್ಲವಾಗಿರುವುದು ಆತಂಕಕಾರಿ ಪ್ರವೃತ್ತಿ. ಈ ರೀತಿಯ ರೋಗಗ್ರಸ್ತ ಮನಸುಗಳಿಂದ ನರಳುವವರ ಭಯಾನಕ ಕೃತ್ಯಗಳ ಪರಿಣಾಮ ಸಮಾಜದ ಭಾವೈಕ್ಯತೆಯ ದೃಷ್ಟಿಯಿಂದ ತೀರಾ ಅಪಾಯಕಾರಿ.
ಈ ಎಲ್ಲದಕ್ಕೂ ಕಾರಣ – ಸಮಾಜದ ಇಡೀ ವ್ಯವಸ್ಥೆಯನ್ನು ಬಹುಪಾಲು ಜನ ಪೂರ್ವಾಗ್ರಹ ಪೀಡಿತರಾಗಿ, ಹುಟ್ಟುವ ಮುನ್ನ ಹೀಗೇ ಇಂತಹದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಗುಜರಾಯಿಸಿ ಹುಟ್ಟಿದವರಂತೆ ಭಾವಿಸಿ, ಹಳದಿ ಕನ್ನಡಕ ಧರಿಸಿ ನೋಡುತ್ತಿರುವುದೇ ಆಗಿದೆ. ಆರೋಗ್ಯಕರ ಚರ್ಚೆಯ ತಕ್ಕಡಿಯಲ್ಲಿ ತೂಗಿದ ವಿಚಾರಗಳು ಎಲ್ಲರಲ್ಲೂ ಉತ್ಸಾಹ ಉಲ್ಲಾಸವನ್ನು ಮೂಡಿಸುವಂತಿದ್ದರೂ ಅದನ್ನು ಮರೆತು ಜಾತಿ- ಧರ್ಮ, ಪಕ್ಷ, ಹುಸಿ ತತ್ವದ ಕುರುಡಲ್ಲಿ ವಾಸ್ತವವನ್ನು ಕಸದಂತೆ ಹೊಸೆದು ಬಿಸುಡುವ ದಾನವತೆ ಮೈಮೇಲೆ ಬಂದಂತಾಡುವ ಮನಸ್ಥಿತಿ ಮೆರೆಯುತ್ತಲಿದೆ.
ಮರೆಯುವ ಮುನ್ನ
ಕೇವಲ ಉನ್ನತ ವಿದ್ಯೆಯಿಂದ, ಹುದ್ದೆಯಿಂದ ನಾವು ದೊಡ್ಡವರಾಗುವುದಿಲ್ಲ. ನಾವು ಕಲಿತ ವಿದ್ಯೆ ನಮಲ್ಲಿನ ವಿವೇಕ, ಬುದ್ದಿ ಹಾಗೂ ಮುಖ್ಯವಾಗಿ ಸಾಮಾನ್ಯ ಜ್ಞಾನವನ್ನು ವೃದ್ದಿಗೊಳಿಸುವಂತಿದ್ದರೆ ಮಾತ್ರವೇ ವಿದ್ಯಾವಂತರಾಗಿದ್ದಕ್ಕೂ ಸಾರ್ಥಕ. ಇಲವಾದಲ್ಲಿ ಅದು ನಾಯಿ ಮೊಲೆಯಲ್ಲಿನ ಹಾಲಂತೆ ಸಮಾಜಕ್ಕೆ ನಿಷ್ಪ್ರಯೋಜಕ. ನಮ್ಮಿಂದ ಮತ್ತೊಬ್ಬರಿಗೆ ಒಳ್ಳೆಯದಾಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟದ್ದನ್ನು ಬಯಸುವ, ಮಾಡುವ ಕೆಲಸ ಆಗದಿದ್ದರೆ ಅದೂ ಈ ಸಮಾಜಕ್ಕೆ ಮಾಡುವ ಉಪಕಾರದಂತೆ ! ದೀಪದಿಂದ ದೀಪ ಹಚ್ಚುವ ಕೆಲಸವಾಗಬೇಕೇ ವಿನಃ ಬೆಂಕಿ ಹಚ್ಚುವ ಕೃತ್ಯವಾಗಬಾರದು. ಸಾಮಾಜಿಕ ಜಾಲತಾಣಗಳು ತಂತ್ರಜ್ಞಾನ ಇವೆಲ್ಲವನ್ನೂ ಮನುಷ್ಯತ್ವದ ತತ್ವದಾಧರದಲ್ಲಿ ಆರೋಗ್ಯಕರ ರೀತಿಯಲ್ಲಿ ಬಳಸಿದರೆ ಮಾತ್ರವೇ ನಾಡಿಗೆ ಕ್ಷೇಮ ! ಇಲ್ಲವಾದಲ್ಲಿ ಮುಂದೊಂದು ದಿನ ಅದರಿಂದ ಮಾನವೀಯ ಮೌಲ್ಯಗಳ ಕ್ಷಾಮ !
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


