ಲೈಫ್ ಸ್ಟೈಲ್
ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ : ವಿವೇಕಾನಂದ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ12, 1863 – ಜುಲೈ 4,1902) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು ರಾಷ್ಟ್ರೀಯ “ಯುವದಿನ“ವೆಂದು ಆಚರಿಸಲಾಗುತ್ತದೆ.
ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ; ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು ಯುವಕರಿಗೆ ಕರೆ ನೀಡಿದ್ದರು. ಇಂದು ವಿವೇಕವಾಣಿಯ ಒಂದಿಷ್ಟು ಅಂಶ ನಮ್ಮ ಯುವ ಪೀಳಿಗೆಯ ತಲೆ ಒಳಗೆ ಹೊಕ್ಕರೆ, ಭಾರತೀಯ ಸಂಸ್ಕೃತಿಯ ಉಳಿಸಿ, ಬೆಳಸಲು ಸಾಧ್ಯವಾಗುತ್ತದೆ.
1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು “ರಾಷ್ಟ್ರೀಯ ಯುವ ದಿನ” ಎಂದು ಘೋಷಿಸಲಾಗಿದ್ದು, ಈಗಲೂ ಆಚರಣೆಯಲ್ಲಿದೆ ಎಂಬುದಷ್ಟೇ ಸಂತೋಷ. ಇಂದು ದೇಶದಾದ್ಯಂತ ಆಚರಣೆ ಜಾರಿಯಲ್ಲಿದ್ದು, ಶಾಲಾ, ಕಾಲೇಜು ಅಲ್ಲಲ್ಲಿ ಮೆರವಣಿಗೆ, ಪ್ರಬಂಧ ಸ್ಪರ್ಧೆ, ಭಾಷಣ, ಚರ್ಚಾಕೂಟದಲ್ಲಿ ಪಾಲ್ಗೊಂಡು ವಿವೇಕಾನಂದರರ ಸಂದೇಶ ಸಾರುವಲ್ಲಿ ತೊಡಗಿದ್ದಾರೆ.
ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಅಪೂರ್ವ ವಾಗ್ಮೀಯತೆ ಹಾಗೂ ಪ್ರಚೋದನಾತ್ಮಕ ಬರವಣಿಗೆ ಮೂಲಕ ನಮ್ಮ ರಾಷ್ಟ್ರ ಚೇತವನ್ನು ಜಾಗೃತಗೊಳಿಸಿ, ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಕುದುರಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದರು.
ವಿಶ್ವ ಪರ್ಯಟನೆ
ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು.
ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಅವರು ಅಮೇರಿಕಾ ಪ್ರವಾಸ ಕೈಗೊಂಡರು. 1893ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು.
ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ.
ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು.
ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು.
ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.
ಸ್ವದೇಶ ಮಂತ್ರ
ಹೋ ಜಂಬೂದ್ವೀಪದ ಮೂಲ ನಿವಾಸಿಗಳೇ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ! ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು.
ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು – ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ “ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು.
ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ”. ಸಹೋದರರೆ, ಹೀಗೆ ಸಾರಿ “ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ.” ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, “ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು.
ಚಿಕಾಗೋದಲ್ಲಿ ಒಬ್ಬ ಕ್ರಿಶ್ಚನ್ನ ಯುವಕರು ತಮ್ಮಗ್ರಂಥವನ್ನು ಭಗವದ್ಗೀತೆಯ ಕೆಳಗಿಟ್ಟು ತಮ್ಮಧರ್ಮ ಶ್ರೇಷ್ಠ ಎಂಬ ಮಂಡುವಾದ ಮಾಡಿದರು. ಆ ಪುಸ್ತಕ ಸರಿಸಿದ ವಿವೇಕಾನಂದರು ಕೆಳಗಿದ್ದ ಪುಸ್ತಕ ವನ್ನು ಕುರಿತು ಎಲ್ಲಾಧರ್ಮಗಳಿಗಿಂತ ಮೂಲ ಧರ್ಮ ನಮ್ಮಧರ್ಮ.ಎಲ್ಲಾ ಧರ್ಮವು ಒಂದೇ ಎಂದು ಹೇಳಿದರು.
ಸಹೋದರ-ಸಹೋದರಿಯರೇ ಎನ್ನುತ್ತಲೇ ನಮ್ಮ ತನ್ನೆಡೆಗೆ ಸೆಳೆಸಿಕೊಂಡು ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು 1893 ರಲ್ಲಿ ಚಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ “ಅಮೆರಿಕದ ಸಹೋದರ ಸಹೋದರಿಯರೇ” ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.
‘ವಿಶ್ವದ ಧರ್ಮಗಳ ಸಂಸತ್ತು’ ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, “ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ” ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು. ವಿವೇಕಾನಂದರು ಆ ದಿನ ತಮ್ಮ ಮೊದಲ ಉಪನ್ಯಾಸವನ್ನು ನೀಡಿದರು. ಇವರ ಸರದಿಯನ್ನು ತುಂಬಾ ಮುಂದೂಡುವಿಕೆಯ ನಂತರ ಮಧ್ಯಾಹ್ನದ ಹೊತ್ತಿಗೆ ಇವರ ಸರದಿ ಬಂದಿತು.
ಆರಂಭದಲ್ಲಿ ಅವರು ಆತಂಕಕ್ಕೊಳಗಾಗಿದ್ದರೂ, ಅವರು ಹಿಂದೂ ವಿದ್ಯಾ ದೇವತೆಯಾದ ಸರಸ್ವತಿಗೆ ನಮಸ್ಕರಿಸಿದರು, ಮತ್ತು ಅವರು ತಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪಡೆದುಕೊಂಡಿರವುದಾಗಿ ಭಾವಿಸಿದರು; ಯಾರೋ ಅಥವಾ ಇನ್ನೊಬ್ಬರು ತಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಭಾವಿಸಿದರು- (ಅದು”ದಿ ಸೋಲ್ ಆಫ್ ಇಂಡಿಯಾ, ಋಷಿಯ ಪ್ರತಿಧ್ವನಿ, ರಾಮಕೃಷ್ಣರ ಧ್ವನಿ, ಪುನರುತ್ಥಾನಗೊಂಡ ಸಮಯದ ಚೈತನ್ಯದ ಮುಖವಾಣಿ”) ನಂತರ “ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ!” ಎಂದು ಸಂಬೋಧಿಸಿ ಮಾತು ಆರಂಭಿಸಿದರು.
ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ ‘ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ’ ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು. ಮೌನವನ್ನು ಪುನಃಸ್ಥಾಪಿಸಿದಾಗ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. “ವಿಶ್ವದ ಅತ್ಯಂತ ಪ್ರಾಚೀನ ವೈದಿಕ ಕ್ರಮ ಅನುಸರಿಸಿದ ಸನ್ಯಾಸಿಗಳ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮದ ಪರವಾಗಿ ಅವರು ಯುವ ರಾಷ್ಟ್ರಗಳನ್ನು ಅಭಿನಂದಿಸಿದರು.!” (ಭಾರತಕ್ಕಿಂತ ಅವು ಕಿರಿಯ/ ಯುವ ರಾಷ್ಟ್ಟ್ರಗಳು)
ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು.
‘ಪೂರ್ವ ದೇಶದ ವಿಚಿತ್ರ ಧರ್ಮ’ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ ‘ನ್ಯೂಯಾರ್ಕ್’ ಮತ್ತು ‘ಲಂಡನ್’ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು.
ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ “ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ” (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ@ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.
‘ಸ್ವಾಮಿ ವಿವೇಕಾನಂದ’ರು ದಿವಂಗತರಾದಾಗ ಕೇವಲ 39ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-“ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು”.
ಹೀಗೆ ಸ್ವಾಮೀಜಿ ಬಗ್ಗೆ ಬರೆಯುತ್ತಲೋದರೆ ಕೊನೆಯಿಲ್ಲವೇನೋ ಅನ್ನಿಸಿಬಿಡಬಹುದು ವಾ,,,ವ್ ಒಬ್ಬ ಮನುಷ್ಯ ಇಷ್ಟೇಲ್ಲಾ ಸಾಧನೆ ಮಾಡಲಿಕ್ಕೆ ಸಾಧ್ಯವ?ಎಂಬ ಪ್ರಶ್ನೆ ಮೂಡಿತ್ತಾದರು ಯುವಜನತೆಗೆ ಬಹು ಹತ್ತಿರದವರಾಗಬೇಕಾದರೆ ಇಂತಹ ವಿಶೇಷ ಚಿಂತನೆ, ಹಾಗೂ ರಾಷ್ಟ್ರ ಜಾಗೃತಿಯನ್ನು ಚೇತನಗೊಳ್ಳಿಸಿಕೊಳ್ಳುತ್ತಾ ಮಹಾತ್ಮರನ್ನು ಆದರ್ಶನೀಯವಾಗಿ ಸ್ವೀಕರಿಸಬೇಕು ಆಗ ನವಭಾರತ ನಿರ್ಮಾಣ,ಭವ್ಯಭಾರತದ ಸಂಸ್ಕೃತಿಗಳು ಅಜರಾಮರವಾಗಲು ಸಾಧ್ಯ.
–ಕಾರ್ತಿಕ ಆಚಾರ್ಯ.ಕೆ
ಅರೆ ವೈದ್ಯಕೀಯ ವಿದ್ಯಾರ್ಥಿ
ಎಂ.ಕಲ್ಲಹಳ್ಳಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.
http://Visit : www.suddidina.com
3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?
ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.
ಉದಾಹರಣೆ:
ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.
ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!
ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ಖಾತೆದಾರರು ಏನು ಮಾಡಬೇಕು?
1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.
2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.
3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.



