ಬಹಿರಂಗ
ದಲಿತರ ಅವ್ವ ರಮಾಬಾಯಿ ಅಂಬೇಡ್ಕರ್ ಮಾಡಿದ ಮೊಟ್ಟಮೊದಲ ಸಾರ್ವಜನಿಕ ಭಾಷಣ
ರಮಾಬಾಯಿ ಅಂಬೇಡ್ಕರ್ ರವರಿಗೆ ಜನುಮ ದಿನದ ಶುಭಾಶಯಗಳು
ಆ ದಿನದ ಬೆಳಗು ತುಂಬ ಉತ್ಸಾಹದಿಂದಲೇ ಮೂಡಿಬಂತು. ಇಂದು ಮಹಾಮಾತೆ ರಮಾಯೀ ಭೀಮರಾವ್ ಅಂಬೇಡ್ಕರ್ ಸಮಾಜದ ಮಹಿಳಾ ಮಂಡಲದಲ್ಲಿ ಭಾಷಣ ಮಾಡುವವರಿದ್ದರು. ಮನೆಯ ಎಲ್ಲ ಕೆಲಸಗಳನ್ನು ಮುಗಿಸಿದ ರಮಾಯಿ ಸಂಜೆ ಆಗಮಿಸಿದ ಮಹಿಳಾ ಮಂಡಳದ ಇಬ್ಬರು ಹೆಣ್ಣುಮಕ್ಕಳೊಂದಿಗೆ ನಡೆದಳು. ಹಾಗೆ ಹೋಗುವುದಕ್ಕಿಂತ ಮುಂಚೆ ಆಕೆ ತನ್ನ ಮಾವನ (ಸುಬೇದಾರ ರಾಮಜೀ) ಪ್ರತಿಮೆಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಳು. ಮನಸ್ಸಿನಲ್ಲಿಯೇ ತನ್ನ ಪತಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸ್ಮರಿಸಿದಳು. ಮಹಿಳಾ ಮಂಡಲದ ಸಭೆಯ ವೇದಿಕೆಯೇರಿದ ರಮಾಯಿ ಮಾತನಾಡತೊಡಗಿದಳು.
“ನನ್ನ ಆತ್ಮೀಯ ತಾಯಂದಿರೆ ಮತ್ತು ಸಹೋದರಿಯರೆ,
ಇಂದು ನಾನು ಮೊಟ್ಟಮೊದಲ ಬಾರಿಗೆ ಮಾತನಾಡಲು ನಿಂತಿದ್ದೇನೆ. ಮಾತಾಡುವಾಗ ಏನಾದರೂ ತಪ್ಪು-ತಡೆಗಳುಂಟಾದರೆ ತಿದ್ದಿಕೊಳ್ಳಿ. ನಾವು ಪ್ರತಿನಿತ್ಯದ ಬದುಕಿನಲ್ಲಿ ನೋಡುವುದೇನೆಂದರೆ, ಪತಿ ಯಾವ ಕಾರ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುತ್ತಾನೋ ಆ ಭಾರವನ್ನು ಸಹಧರ್ಮಿಣಿಯಾಗಿ ಪತ್ನಿಯರೂ ಹೆಗಲು ಕೊಟ್ಟು ಹೊತ್ತುಕೊಳ್ಳಬೇಕಾಗುತ್ತದೆ. ಇಂಥ ಅನುಭವಗಳು ನನ್ನ ಬದುಕಿನಲ್ಲಿ ಸಾಕಷ್ಟು ಇವೆ ಎಂದು ನನಗನ್ನಿಸುತ್ತದೆ. (ಜನಸಮುದಾಯದ ಕರತಾಡನ)
ನನ್ನಂತಹ ಮದುವೆಯಾಗಿರುವ ಹೆಣ್ಣಿಗೆ ಪತಿಸೇವೆಯ ಹೊರತು ಈ ಜಗತ್ತಿನಲ್ಲಿ ಮತ್ತೇ ಕೆಲವು ಸೇವಾಕಾರ್ಯಗಳು ಇವೆ ಎಂಬ ಅರಿವು ಇಲ್ಲಿಯವರೆಗೆ ನನಗಿರಲಿಲ್ಲ. ಆದರೆ ಇಂದು ಈ ಭವ್ಯ ವೇದಿಕೆಯ ಮೇಲೆ ನಿಂತು, ಸೇರಿರುವ ಬಹುದೊಡ್ಡ ಸಂಖ್ಯೆಯ ಜನಸಮುದಾಯವನ್ನು ಕಂಡಾಗ ನನಗನ್ನಿಸುತ್ತಿದೆ ; ‘ಸಕಲರಲ್ಲೂ ಅರಿವು ತುಂಬಿಯೇ ಬಿಡಬೇಕು’ (ಶಹಾಣೆ ಕರೂಣಿ ಸೋಡಾವೆ ಸಕಲಜನ)….. (ಜನಸಮುದಾಯ ಉತ್ಸಾಹದಿಂದ ಚಪ್ಪಾಳೆ ತಟ್ಟುತ್ತಲೇ ಘೋಷಣೆ ಕೂಗತೊಡಗಿದರು ; ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರಿಗೆ ಜಯವಾಗಲಿ)
ನನಗೆ ಇಂತಹ ಜೈಕಾರ ಹಾಕಬೇಡಿ. ಇನ್ನೂ ನಾನು ನಿಮಗಾಗಿ ಏನನ್ನೂ ಮಾಡಿದವಳಲ್ಲ. ಆ ಬಗ್ಗೆ ನನಗೆ ವಿಷಾದವೆನಿಸುತ್ತದೆ. ಇರಲಿ. ನಮ್ಮೆಲ್ಲರ ಮುಂದಾಳು ಡಾ. ಬಾಬಾಸಾಹೇಬ ಅಂಬೇಡ್ಕರರು ಮೇಲಿಂದ ಮೇಲೆ ಹೇಳುತ್ತಿರುತ್ತಾರೆ ; ನಾವು ಹೆಣ್ಣುಮಕ್ಕಳೆಲ್ಲ ಮುಂದೆ ಬಂದು, ಸಮಾಜದ ಕ್ರಾಂತಿ-ಚಳುವಳಿಯಲ್ಲಿ, ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳಲ್ಲಿ ಭಾಗಿಯಾಗಬೇಕು. ಯಾಕೆಂದರೆ ಹೆಣ್ಣುಮಕ್ಕಳು ಏಕನಿಷ್ಠರಾಗಿರುತ್ತಾರೆ. ಯಾವುದೇ ಚಳುವಳಿಯಲ್ಲಿ ಹೆಣ್ಣುಮಕ್ಕಳು ಸಹಭಾಗಿಯಾಗಬೇಕು. ಇದರ ಹೊರತಾಗಿ ಚಳುವಳಿಯ ಹೆಜ್ಜೆ ಮುಂದೆ ಸಾಗುವುದಿಲ್ಲ.(ಜನರಿಂದ ಪ್ರಚಂಡ ಕರತಾಡನ) ಜಗತ್ತಿನ ಕ್ರಾಂತಿ-ಚಳುವಳಿ ಯಾವುದರ ಮೇಲೆ ನಡೆಯುತ್ತವೆ ? ತ್ಯಾಗದ ಮೇಲೆ. ಅದು ಎಂಥದ್ದೇ ತ್ಯಾಗ ಇರಲಿ, ಚಳುವಳಿಗಾರರು ಎಷ್ಟೋ ಅಗ್ನಿದಿವ್ಯ ಹಾದು ಬರಬೇಕಾಗುತ್ತದೆ. ಇಲ್ಲದಿದ್ದರೆ ಬಯಸಿದ ಬಂಗಾರ ದೊರೆಯಲಾರದು. ಈ ಬಗ್ಗೆ ಒಮ್ಮೆ ಡಾ. ಅಂಬೇಡ್ಕರ ಅವರು ಹೇಳಿದ ಒಂದು ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. ಇದು ಗ್ರೀಕ್ ಪುರಾಣದಲ್ಲಿ ಬರುವ ಕತೆ.
ಡಿಮೇಟರ್ ಹೆಸರಿನ ದೇವತೆಯೊಬ್ಬಾಕೆ ಮನುಷ್ಯರೂಪ ಧರಿಸಿ ಭೂಮಿಗೆ ಬಂದಳು. ಆಕೆಯನ್ನು ಅಲ್ಲಿಯ ರಾಣಿಯೊಬ್ಬಳು ದಾಸಿಯನ್ನಾಗಿ ಇಟ್ಟುಕೊಂಡು ತನ್ನ ಬಾಲಕ ಮಗನ ಉಸ್ತುವಾರಿ ನೋಡಿಕೊಂಡಿರಲು ಹೇಳಿದಳು. ರಾಣಿಯ ಆ ಮಗನನ್ನು ‘ದೇವ’ನನ್ನಾಗಿಸಬೇಕು ಎಂಬ ಹಂಬಲ ಆ ದೇವತೆಗೆ ಉಂಟಾಯಿತು. ಹೀಗಾಗಿ ಆಕೆ ದಿನವೂ ರಾತ್ರಿ ಎಲ್ಲರೂ ಮಲಗಿಕೊಂಡ ಮೇಲೆ ಎಲ್ಲ ಬಾಗಿಲು-ಕಿಟಕಿಗಳನ್ನು ಮುಚ್ಚುತ್ತಿದ್ದಳು. ತೊಟ್ಟಿಲಲ್ಲಿ ಮಲಗಿದ ಮಗುವನ್ನು ಹೊರತೆಗೆದು, ಅದರ ಮೈಮೇಲಿನ ಬಟ್ಟೆಗಳನ್ನೆಲ್ಲ ಬಿಚ್ಚಿ ಹಾಕಿ ಬಿಸಿ ಬೂದಿಯ ಮೇಲೆ ಒಂದಿಷ್ಟು ಕಾಲ ಆ ಮಗುವನ್ನು ಮಲಗಿಸುತ್ತಿದ್ದಳು ! ಕ್ರಮೇಣ ಬೆಂಕಿಯ ಬಿಸಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಆ ಮಗುವಿಗೆ ಬಂತು. ಅದರ ಬಲ ವೃದ್ಧಿಸತೊಡಗಿತು. ಆ ಮಗುವಿನಲ್ಲಿ ಅತ್ಯಂತ ತೇಜಸ್ವಿಯಾದ ದೈವೀ ಅಂಶ ವಿಕಸಿತವಾಗತೊಡಗಿತ್ತು. ಆದರೆ ಒಂದು ರಾತ್ರಿ ಆ ಮಗುವಿನ ತಾಯಿ ರಾಣಿ ಅಚಾನಕ್ಕಾಗಿ ಆ ಕೋಣೆಯನ್ನು ಹೊಕ್ಕಳು. ಅಲ್ಲಿ ನಡೆಯುತ್ತಿದ್ದುದ್ದನ್ನೆಲ್ಲ ಕಣ್ಣಾರೆ ಕಂಡ ಆಕೆ ತುಂಬ ನೊಂದುಕೊಂಡಳು. ಆಕೆ ತಕ್ಷಣ ತನ್ನ ಮಗುವನ್ನು ಒಲೆಯ ಮೇಲಿನಿಂದ ಎತ್ತಿ ಎದೆಗವಚಿಕೊಂಡಳು. ಆ ರಾಣಿಗೆ ಆಕೆಯ ಮಗುವೇನೋ ದೊರೆಯಿತು. ಆದರೆ ಸಾಮರ್ಥ್ಯಶಾಲಿ ದೇವನಾಗಬೇಕಿದ್ದ ದೇವನನ್ನೇ ಆಕೆ ಕಳೆದುಕೊಂಡಳು..!
ಈ ಕತೆಯ ತಾತ್ಪರ್ಯ ಇಷ್ಟೆ ; ಕುಲುಮೆಯಲ್ಲಿ ಕಾಯದೆ ದೇವತನ ಬರುವುದಿಲ್ಲ. ಬೆಂಕಿ, ಮನುಷ್ಯನನ್ನು ಶುದ್ಧಿಗೊಳಿಸುತ್ತದೆ ಮತ್ತು ಮನುಷ್ಯನಲ್ಲಿ ಶಕ್ತಿಯನ್ನು ತುಂಬುತ್ತದೆ. ಆದ್ದರಿಂದ ಅಸ್ಪೃಶ್ಯ ಎನಿಸಿಕೊಂಡಿರುವವರು ಕಡುಕಷ್ಟ ಮತ್ತು ತ್ಯಾಗದ ಅಗ್ನಿದಿವ್ಯ ಸಹಿಸದೇ ಉದ್ಧಾರವಾಗಲಾರರು. ನೀವು ನಿಮ್ಮನ್ನು ಅಸ್ಪೃಶ್ಯ, ಕೀಳು ಎಂದುಕೊಳ್ಳಬೇಡಿ. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ. ‘ಮಗನಾಗಬೇಕು ತೇಜ ; ಮೂರು ಲೋಕದಲ್ಲೂ ಇರಬೇಕು ಆತನದೇ ಧ್ವಜ’ ಎಂಬ ಆಶಯವನ್ನು ಮನಸ್ಸಿನಲ್ಲಿಟ್ಟುಕೊಂಡು ಇನ್ನುಮುಂದೆ ನಮ್ಮ ಮಕ್ಕಳನ್ನು ಬೆಳೆಸಬೇಕು. ಅದರಲ್ಲೇ ನಮ್ಮ ಉದ್ಧಾರವಿದೆ. ಇಷ್ಟು ಹೇಳಿ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ” (ಪ್ರಚಂಡ ಕರತಾಡನ. ಜಯಘೋಷ ‘ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರಿಗೆ ಜಯವಾಗಲಿ)
ದಲಿತರ ಅವ್ವ : ರಮಾಬಾಯಿಯ ಎರಡನೆಯ ಮತ್ತು ಅಂತಿಮ ಭಾಷಣ
ಆ ದಿನ 29ನೇ ಜನೇವರಿ 1932 !
ಡಾ. ಬಾಬಾಸಾಹೇಬ ಅಂಬೇಡ್ಕರರು ಕುಳಿತ್ತಿದ್ದ ಲಂಡನ್ನಿನ ಹಡಗು ಬೆಳಿಗ್ಗೆ ಸರಿಯಾಗಿ ಆರು ಗಂಟೆಗೆ ಮುಂಬಾಯಿಯ ಬಂದರಿಗೆ ಬಂದು ತಲುಪಿತು. ಸೇರಿದ ಸಾವಿರಾರು ಅನುಯಾಯಿಗಳ ಹೃದಯ ಆನಂದದಿಂದ ತುಂಬಿ ತುಳುಕಿತು !
ಆ ದಿನ ನಸುಕಿನಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರರ ನಿಷ್ಟಾವಂತ ಅನುಯಾಯಿಗಳೂ, ಸಂಬಂಧಿಕರೂ ಹಾಗೂ ಹಿತಚಿಂತಕರು ಡಾ. ಬಾಬಾಸಾಹೇಬ ಅಂಬೇಡ್ಕರರ ಹಾದಿಯನ್ನು ತುಂಬ ಉತ್ಸಾಹಿತರಾಗಿಯೇ ಕಾಯುತ್ತಿದ್ದರು. ಪ್ರತಿಯೊಬ್ಬರೂ ಕೈಯಲ್ಲಿ ಹೂಮಾಲೆ-ಹೂಗುಚ್ಛ ಹಿಡಿದುಕೊಂಡು ನಸುಕಿನ ಚಳಿಗೂ ಅಂಜದೆ ಶಾಂತವಾಗಿಯೇ ಕಾಲಿಡಲೂ ಜಾಗವಿಲ್ಲದಂತೆ ಕಿಕ್ಕಿರಿದು ನಿಂತಿದ್ದರು.
ಆ ಜನಸಂದಣಿಯಲ್ಲಿಯೇ ಡಾ. ಬಾಬಾಸಾಹೇಬ ಅಂಬೇಡ್ಕರರ ಧರ್ಮಪತ್ನಿ ದಲಿತರ ಅವ್ವ ರಮಾಯಿ ನಿಂತಿದ್ದಳು ! ಸುವಾಸಿತ ಹೂವಿನಿಂದ ಮಾಡಲ್ಪಟ್ಟ ಮಾಲೆಯನ್ನು ಆಕೆ ಹಿಡಿದುಕೊಂಡು ತನ್ನ ‘ಸಾಹೇಬ’ರನ್ನು ಎದುರುಗೊಳ್ಳಲು ನಿಂತಿದ್ದಳು !ತನ್ನ ಸಾಹೇಬನನ್ನು ಯಾವಾಗ ಕಣ್ಣು ತುಂಬಿಕೊಳ್ಳುತ್ತೇನೆಯೋ ಎಂಬ ಕಾತರದಲ್ಲಿ ಆಕೆ ಇದ್ದಳು ! ಅಷ್ಟರಲ್ಲಿ ಗದ್ದಲ, ಜಯಕಾರ ಸುರುವಾದವು. ಡಾ. ಬಾಬಾಸಾಹೇಬ ಅಂಬೇಡ್ಕರರು ಹಡಗಿನಿಂದ ಇಳಿದು ಬರುತ್ತಿದ್ದರು. ಗಗನಭೇದಿ ಘೋಷಣೆ ಮುಳುಗತೊಡಗಿದವು ! ‘ಡಾ. ಬಾಬಾಸಾಹೇಬ ಅಂಬೇಡ್ಕರ ಕೀ ಜೈ !ಅಂಬೇಡ್ಕರ್ ಅಂಬೇಡ್ಕರ್ .. ದಲಿತರ ದೇವ ಅಂಬೇಡ್ಕರ್ ! ಮೊಟ್ಟಮೊದಲು ಸಮತಾ ಸೈನಿಕ ದಳವು ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಹಾರ ಹಾಕಿ ಗೌರವ ವಂದನೆ ಸಲ್ಲಿಸಿತು.
ನೋಡು ನೋಡುವಷ್ಟರಲ್ಲಿಯೇ ಹೂಮಾಲೆಗಳನ್ನು ಹಿಡಿದು ನಿಂತಿದ್ದ ಜನಸಮೂಹ ನಾ ಮುಂದು ತಾ ಮುಂದು ಎಂದು ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ಸುತ್ತುವರಿಯಿತು ! ಅಪರಿಮಿತ ಭಕ್ತಿ, ಪ್ರೇಮ ಮತ್ತು ನಿಷ್ಟೆಯ ಸಂಕೇತವಾಗಿ ಹೂಮಾಲೆಗಳು ಡಾ. ಬಾಬಾಸಾಹೇಬ ಅಂಬೇಡ್ಕರರ ಕೊರಳನ್ನು ಅಲಂಕರಿಸಿದವು. ರಮಾಯಿ ಮಾತ್ರ ಈ ಎಲ್ಲ ಗದ್ದಲದಿಂದ ಒಂದಿಷ್ಟು ದೂರವೇ ಉಳಿದಿದ್ದಳು ! ತನ್ನ ‘ಸಾಹೇಬ’ನ ಮೇಲೆ ಸೂಸುತ್ತಿದ್ದ ಅಪಾರ ಜನರ ಅಪರಿಮಿತ ಪರಿಶುದ್ಧ ಪ್ರೇಮವನ್ನು ಆಕೆ ಮೊದಲ ಬಾರಿ ನೋಡುತ್ತಿದ್ದಳು ! ನೋಡುತ್ತ ನೋಡುತ್ತ ಆಕೆಯ ಕಣ್ಣಾಲಿಗಳು ತುಂಬಿದವು ! ಆನಂದಭಾಷ್ಟ ಉದರಿದವು !ಎಲ್ಲರೂ ಮಾಲೆ ಹಾಕಿ ಮುಗಿದಾದ ಮೇಲೆ ರಮಾಯಿ ಕೊನೆಯವಳಾಗಿ ಡಾ. ಬಾಬಾಸಾಹೇಬ ಅಂಬೇಡ್ಕರರ ಬಳಿಗೆ ಹೋದಳು !ಅಖಂಡವಾಗಿ ನಿಂತ ಡಾ. ಬಾಬಾಸಾಹೇಬ ಅಂಬೇಡ್ಕರರು !ರಮಾಬಾಯಿ ತಲೆಯೆತ್ತಿ ಕೂಡ ನೋಡಲಿಲ್ಲ !ಕೈಯಲ್ಲಿರುವ ಸುವಾಸಿತ ಮಾಲೆಯನ್ನು ಆಕೆ ಡಾ. ಬಾಬಾಸಾಹೇಬ ಅಂಬೇಡ್ಕರರ ಕೊರಳಿಗೆ ಹಾಕಿದಳು !ಆದರೆ ಆಕೆ ದೃಷ್ಟಿ ಮಾತ್ರ ಅವರ ಪದತಲದಲ್ಲಿಯೇ ಇತ್ತು !ಹಗಲು-ರಾತ್ರಿಯೆನ್ನದೆ ಯಾವ ಮೂರ್ತಿಯ ಸೇವೆಯನ್ನು ಮಾಡಿದ್ದಳೋ ಅದೇ ಇಂದು ಎದುರಿಗೇ ನಿಂತಿದ್ದರೂ ಆಕೆ ಕಣ್ಣೆತ್ತಿಯೂ ಕೂಡ ನೋಡಲಿಲ್ಲ !ಹಾಗೆ ನೋಡುವುದಕ್ಕೆ ಆಕೆಯ ನಾಚಿಕೆ ಸ್ವಭಾವ ಮತ್ತು ಆಕೆ ಬಾಳಿದ ಸಂಸ್ಕಾರಗಳು ಅನುಮತಿಸಿರಲಿಕ್ಕಿಲ್ಲ !
ಆದರೆ…. ! ಈ ಹೃದಯಂಗಮವಾದ ಪ್ರಸಂಗವನ್ನು ನೋಡಿದ ಆಗ ಜನತಾ ಪತ್ರಿಕೆಯ ಸಂಪಾದಕರಾಗಿದ್ದ ಸಹಸ್ರಬುದ್ಧೆಯವರ ಚಾಣಾಕ್ಷ ಕಣ್ಣುಗಳು ಮರೆಯಲು ಸಾಧ್ಯವೇ ಇರಲಿಲ್ಲ ! ಸಹಸ್ರಬುದ್ಧೆಯವರು ಸಹಜವಾಗಿಯೇ ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಕೊನೆಯಲ್ಲಿ ಮಾಲೆ ಹಾಕಿದ್ದು ಮತ್ತು ಮಾಲೆ ಹಾಕುವಾಗ ತಲೆಯೆತ್ತಿ ನೋಡದಿರುವುದಕ್ಕೆ ಕಾರಣ ಏನು ಎಂದು ರಮಾಯಿಗೆ ಕೇಳಿಯೇ ಬಿಟ್ಟರು ! ರಮಾಯಿಗೆ ಏನು ಹೇಳಬೇಕೆಂದು ಒಂದು ಕ್ಷಣ ತೋಚಲಿಲ್ಲ ! ಸಭೆಯಲ್ಲಿ ಮಾತನಾಡಬೇಕೆಂದರೆ ತನಗೆ ಸರಿಯಾಗಿ ಮಾತನಾಡಲೂ ಬರುವುದಿಲ್ಲ ! ಮಾತನಾಡದಿದ್ದರೆ ಡಾ. ಬಾಬಾಸಾಹೇಬ ಅಂಬೇಡ್ಕರರ ಪ್ರತಿಷ್ಠೆಗೆ ಧಕ್ಕೆ ಬರಬಹುದು ! ಹಾಗೆ ನೋಡಿದರೆ ರಮಾಯಿಯೇನೂ ಅರಿಯದ ಹೆಣ್ಣುಮಗಳಲ್ಲ ! ಆಕೆ ನಿಜವಾಗಿಯೂ ಚತುರಳೂ ಬುದ್ಧಿವಂತಳೂ ಆಗಿದ್ದಳು ! ಮರುಕ್ಷಣವೇ ಆಕೆಯ ಮೈಯಲ್ಲಿ ಮಿಂಚು ಹರಿದಾಡಿದ ಅನುಭವವಾಯಿತು. ಆಗ ಆಕೆ ತಡ ಮಾಡಲಿಲ್ಲ ; ತಟ್ಟನೇ ಎದ್ದು ಬಂದು ಮಾತನಾಡಲು ಆರಂಭಿಸಿದಳು !
“ಅಧ್ಯಕ್ಷಮಹೋದಯರೇ, ನನ್ನ ಪತಿಮಹಾದೇವರೆ ಹಾಗೂ ಇಲ್ಲಿ ಸೇರಿರುವ ನನ್ನ ಬಂಧು-ಭಗಿನಿಯರೆ, ಈಗ ತಾನೆ ಸಹಸ್ರಬುದ್ಧೆ ಸಾಹೇಬರು ನನಗೆ ಕೇಳಿರುವ ಎರಡು ಪ್ರಶ್ನೆಗಳಿಗೆ ಉತ್ತರ ನೀಡಲು ನಾನು ಮಾತನಾಡಲೇಬೇಕಿದೆ. ಅದಕ್ಕಾಗಿಯೇ ಎದ್ದಿರುವೆ. ಯಾರು ಸಾಹೇಬರನ್ನು ಯಾವಾಗಲೋ ಒಮ್ಮೆ ಕ್ವಚಿತ್ತಾಗಿ ನೋಡುತ್ತಾರೋ ಅವರೆಲ್ಲ ಅವರನ್ನು ನೋಡಲಿ … ನಾನೋ ಹಗಲು-ರಾತ್ರಿ ಸಾಹೇಬರ ದರ್ಶನ ಪಡೆದು ತೃಪ್ತಳಾದವಳು. ಆದ್ದರಿಂದ ಎಲ್ಲರೂ ಮೊದಲು ಮಾಲೆ ಹಾಕಿದ ಮೇಲೆ ನಾನು ಕೊನೆಯಲ್ಲಿ ಮಾಲೆ ಹಾಕಿದೆ. ಇದು ನಿಮಗೆಲ್ಲ ಗೊತ್ತು. ಇನ್ನು ಡಾ. ಅಂಬೇಡ್ಕರ್ ಸಾಹೇಬರು ಬಡಬಗ್ಗರ-ದೀನದಲಿತರ ಉದ್ದಾರಕ್ಕಾಗಿ ಪಣ ತೊಟ್ಟು ನಿಂತವರು. ನಾನು ಅವರ ಧರ್ಮಪತ್ನಿ. ಅವರ ಸಾಧನೆಗೆ ನನ್ನ ದೃಷ್ಟಿ ತಾಗಬಾರದೆಂಬ ಒಂದೇ ಉದ್ದೇಶದಿಂದ ನಾನು ಅವರ ಮುಖವನ್ನು ನೋಡದೇ ಬರೀ ಅವರ ಪಾದಗಳನ್ನು ಕಣ್ಣು ತುಂಬಿಕೊಂಡೆ.
ಈಗ ಹೇಳಿ ಬಂಧುಗಳೇ, ನಾನು ನೀಡಿದ ಉತ್ತರ ಸರಿಯೇ ? ಸರಿಯಾಗಿಯೇ ಇದ್ದೀತು ಮತ್ತು ಅದು ನಿಮ್ಮೆಲ್ಲರ ಜೊತೆ ಸಹಸ್ರಬುದ್ಧೆಯವರಿಗೂ ಸರಿತೋರಿದೆ ಎಂದು ನಂಬಿ ನಾನು ನನ್ನ ಈ ಭಾಷಣವನ್ನು ಮುಗಿಸುತ್ತೇನೆ. (ಪ್ರಚಂಡ ಕರತಾಡನ ಮತ್ತು ಜಯಕಾರ) ರಮಾಯಿಯ ಭಾಷಣ ಮುಗಿದ ಮೇಲೆ ಡಾ. ಬಾಬಾಸಾಹೇಬ ಅಂಬೇಡ್ಕರರು ಕೆಲವು ಮಾತುಗಳನ್ನಾಡಲು ಎದ್ದು ನಿಂತರು. ಸರಿಯಾಗಿಯೇ ಮಾತನ್ನು ಆರಂಭಿಸಿದ ಅವರು ಹೇಳತೊಡಗಿದರು ;”ಬಂಧುಗಳೇ, ದುಂಡುಮೇಜು ಪರಿಷತ್ತಿನಲ್ಲಿ ಸಾಧಿಸಿದ ಸಾಧನೆ ನನ್ನದಲ್ಲ ; ಅದು ಇಲ್ಲಿ ಸೇರಿರುವ ನನ್ನ ಎಲ್ಲ ಅಸಂಖ್ಯಾತ ಬಂಧು-ಭಗಿನಿಯರ ಸಾಧನೆ. ದುಂಡು ಮೇಜು ಪರಿಷತ್ತಿನಲ್ಲಿ ನಾನು ನಿರ್ವಹಿಸಿದ ಪಾತ್ರ ಕುರಿತು ಹಿಂದೂಗಳ ಭಾವಿ ಸಂತತಿ ನನ್ನನ್ನು ರಾಷ್ಟ್ರದ್ರೋಹಿ ಎಂದು ಬಗೆಯಬಹುದು ಎಂಬುದನ್ನು ಬಲ್ಲೆ. ಈಗ ನಾನು ಏನನ್ನೂ ಹೆಚ್ಚು ಹೇಳುವುದಿಲ್ಲ. ಆದರೂ ಈ ಮೊದಲು ಮಾತನಾಡಿದ ಸೌ. ಮೋಹಿತೆಬಾಯಿಯವರು ಸೌ. ರಮಾಬಾಯಿ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಆದರೆ ನಾನು ಇಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸುವುದು ಒಳಿತು ; ಇಂದಿಗೂ ಸೌ. ಮೋಹಿತೆಬಾಯಿಯವರು ಹೇಳಿದರಲ್ಲಿ ಒಂದನ್ನೂ ನನಗೆ ಈ ನಿಮ್ಮ ಆಯೀಸಾಹೇಬ ಹೇಳಿಲ್ಲ..(ನಗು) .. ನಿಮ್ಮ ಆಯೀಸಾಹೇಬರು ಬಹುದೊಡ್ಡ ಭಾಗೀರಥಿಯಾಗಿದ್ದಾರೆ ಎಂಬುದು ನನಗೆ ಇದೀಗಲೇ ಗೊತ್ತಾಗಿದ್ದು. ಅದು ಸರಿಯೇ ನಿಮ್ಮ ಆಯೀಸಾಹೇಬರು ನಿಜವಾಗಿಯೂ ಭಾಗ್ಯದ ಭಾಗೀರಥಿಯೇ ಆಗಿದ್ದಾರೆ ! ..(ನಗು.. ಸಮೂಹದ ಕರತಾಡನ ಮತ್ತು ಪ್ರಚಂಡವಾದ ಜಯಘೋಷ ನಿರಂತರವಾಗಿತ್ತು : ಡಾ. ಬಾಬಾಸಾಹೇಬ ಅಂಬೇಡ್ಕರ ಕೀ ಜೈ ! ದಲಿತರ ಅವ್ವ ರಮಾಯಿಗೆ ಜಯವಾಗಲಿ !)
–ಅನುವಾದ : ಡಾ. ಸಿದ್ರಾಮ ಕಾರಣಿಕ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



