Connect with us

ನೆಲದನಿ

ನುಡಿಯ ಒಡಲು 12 | ನುಡಿಯರಿಮೆ (ಲಿಂಗ್ವಿಸ್ಟಿಕ್ಸ್) ಹಾಗೆಂದರೇನು..?

Published

on

  • ಡಾ,ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಭಾಗ -02

ನುಡಿಯೆಂದರೆ ಅದೊಂದು ವರ್ತನೆಯೇ?ನುಡಿಯನ್ನು ಕೂಡ ಒಂದು ವರ್ತನೆಯ ನೆಲೆಯನ್ನಾಗಿ ಗುರುತಿಸಿದವರಲ್ಲಿ ವರ್ತನಾವಾದಿಳೇ ಮುಖ್ಯರು. ನುಡಿ ಬಗೆಗಿನ ಇವರ ನಿಲುವುಗಳಿಗೆ ಸಾಕ್ಷಿಗಳೇನು? ಅವುಗಳ ಸ್ವರೂಪವೆಂತಹದು ಎಂಬುದನ್ನು ಕುರಿತು ಈಗ ಚರ್ಚಿಸೋಣ. ನುಡಿಯನ್ನು ವರ್ತನಾವಾದದ ಚೌಕಟ್ಟಿನಲ್ಲಿಟ್ಟು ಚರ್ಚಿಸಿದವರಲ್ಲಿ ಸಾಮಾಜಿಕ ಮನಶ್ಯಾಸ್ತ್ರಜ್ಞರೆ ಮೊದಲಿಗರು. ಇವರನ್ನು ವರ್ತನಾವಾದಿಗಳೆಂದೂ ಕರೆಯುತ್ತಾರೆ.

ಇವರಲ್ಲಿ ಲೋಕ ಹೆಸರುವಾಸಿ ಆದವರೆಂದರೆ, ಬಿ.ಎಫ್.ಸ್ಕಿನ್ನರ್, ಇವನು ಲೋಕದಾದ್ಯಂತ ಮನೆಮಾತಾಗಿದ್ದು ತನ್ನ ವರ್ಬಲ್ ಬಿಹೇವಿಯರ್ (1956) ಎಂಬ ಅರಿಮೆಯ ಹೊತ್ತಿಗೆಯಿಂದ ಎಂಬುದು ಗಮನಾರ್ಹ. ಮತ್ತೊಬ್ಬ ರಶಿಯಾ ನಾಡಿನ ತಿಳಿವಿಗ ಐವನ್ ಪವ್ಲಫ್ (1849 – 1936) ಎಂಬುವನಾಗಿದ್ದಾನೆ. ಇವನು ತನ್ನ ಕಲಿಕೆ ಹಾಗೂ ಶೈಕ್ಷಣಿಕ ತತ್ವಗಳ ಬಗೆಗಿನ ಚಿಂತನೆಗಳಿಂದ ಲೋಕದಾದ್ಯಂತ ಅತ್ಯಂತ ಪ್ರಭಾವಿ ಚಿಂತಕನಾಗಿ ಪ್ರಸಿದ್ಧ. ಈ ವರ್ತನಾವಾದಿಗಳ ಪ್ರಕಾರ ಮಾನವನ ಮನಸ್ಸು (ಮೈಂಡ್) ಎಂಬುದು ಒಂದು ಖಾಲಿ ಬಳಪ (ಟ್ಯಾಬೂಲ ರಸ – ಬ್ಲ್ಯಾಂಕ್ ಸ್ಲೇಟ್) ಆಗಿರುತ್ತದೆ ಎಂದು ನಂಬಿದ್ದರು.

ಅಂದರೆ ಮಾನವರಿಗೆ ಜೈವಿಕವಾಗಿ ಯಾವುದೆ ಬಗೆಯ ಗ್ರಹಿಕಾ ಸಾಮರ್ಥಗಳು ದತ್ತವಾಗಿರುವುದಿಲ್ಲವೆಂದೇ ಇವರು ತೀರ್ಮಾನಿಸಿದ್ದರು. ನುಡಿಯನ್ನು ಒಳಗೊಂಡಂತೆ ತಿಳಿವಿನ ಎಲ್ಲ ಬಗೆಯ ಕಲಿಕೆಗಳು ಅನುಕರಣೆಯಿಂದ ಮಾತ್ರ ದತ್ತವಾಗುತ್ತವೆ ಎಂದು ಇವರು ಬಲವಾಗಿ ನಂಬಿದ್ದರು. ಈ ಅನುಕರಣೆಗಳು ಆಯಾ ಕಲಿಕೆಯು ನಡೆಯುವ ಪರಿಸರದಿಂದ ಇನ್ನಷ್ಟು ಬಲಗೊಳ್ಳುತ್ತವೆ ಹಾಗೆ ಬಲಗೊಳ್ಳಲು ಬೇಕಾದ ವಾತಾವರಣ ಆ ಕಲಿಕಾ ಸನ್ನಿವೇಶದಲ್ಲಿ ಕಲಿಯುವರಿಗೆ ಸಿಗುತ್ತದೆ.

ನುಡಿ ಕಲಿಕೆ ಇಲ್ಲವೇ ಮತ್ತ್ಯಾವುದೋ ಕಲಿಕೆ ಎಂಬುದು ವರ್ತನೆಯ ಫಲಿತವೆಂದೇ ಈ ವರ್ತನವಾದಿಗಳು ನಂಬಿದ್ದರು. ಹಾಗಾಗಿ ನುಡಿ ಕಲಿಕೆ ಎನ್ನುವುದು ಪ್ರಯತ್ನ ಮತ್ತು ಪ್ರಮಾದ ವಿಧಾನ (ಟ್ರೈಯಲ್ ಅಂಡ್ ಎರರ್ ಮೆಥೆಡ್) ದಿಂದ ಈಡೇರುತ್ತದೆ ಅನ್ನುವುದು ಇವರ ಮಹತ್ವದ ಚಿಂತನೆಯಾಗಿದೆ. ಎತ್ತುಗೆಗಾಗಿ ಸೈಕಲ್ ಓಡಿಸುವ, ಈಜು ಕಲಿಯುವ, ನಡೆಯುವ, ಕೂತುಕೊಳ್ಳುವ ಮುಂತಾದ ದೈಹಿಕ ವರ್ತನೆಗಳು ರೂಢಿಗೊಳ್ಳುವುದು ಈ ಬಗೆಯ ಸತತ ಅಭ್ಯಾಸದಿಂದ. ಇಂತಹ ಅಭ್ಯಾಸ ಪ್ರಕ್ರಿಯೆಗಳು (ಹ್ಯಾಬಿಟ್ ಕಲ್ಟಿವೇಶನ್) ರೂಪುಗೊಳ್ಳುವ ಬಗೆಗಳೇ ಕಲಿಕೆಯ ವರ್ತನೆಗಳು. ಈ ವರ್ತನೆಗಳನ್ನು ಮಾನಸಿಕ ಹಾಗೂ ದೈಹಿಕವೆಂದು ವಿಂಗಡಿಸಬಹುದು. ಈ ವರ್ತನೆಗಳಿಗೆ ವರ್ತನಾವಾದಿಗಳು ಎರಡು ಲಕ್ಷಣಗಳನ್ನು ಗುರುತಿಸುತ್ತಾರೆ. ಅವುಗಳನ್ನು ಒಂದು ಪ್ರಚೋದನೆ (ಸ್ಟಿಮೂಲಸ್) ಮತ್ತೊಂದನ್ನು ಪ್ರತಿಕ್ರಿಯೆ (ರೆಸ್ಪಾನ್ಸ್) ಎಂದು ಕರೆಯಬಹುದು.

ಇಂತಹ ವರ್ತನೆಯ ಸರಣಿಯಲ್ಲಿಯೆ ನುಡಿಯನ್ನು ಕಲಿಯಲು ಬೇಕಾದ ಪ್ರಚೋದಕ ಹಾಗೂ ಅದಕ್ಕೆ ಸಮಾನ ಪ್ರತಿಕ್ರಿಯೆಗಳು ಉಂಟಾಗುತ್ತವೆ. ಈ ವರ್ತನೆಗಳು ಚಳಕವಾಗುವ ಇಲ್ಲವೇ ಯಾವುದೇ ಅಭ್ಯಾಸವಾಗುವ ಬಗೆಗಳು ನಿಗದಿತ ಕ್ರಮದಲ್ಲಿ (ಸೆಟ್ ಪ್ಯಾಟನ್ರ್ಸ್) ರೂಢಿಗೊಳ್ಳುತ್ತವೆ. ಎತ್ತುಗೆಗಾಗಿ ಬಹುತೇಕ ಮಂದಿ ಹಾವು ಇಲ್ಲವೇ ಯಾವುದಾದರೂ ಕಾಡು ಪ್ರಾಣಿಯನ್ನು ನೋಡಿದಾಗ ವರ್ತಿಸುವ ಇಲ್ಲವೇ ಪ್ರತಿಕ್ರಿಯಿಸುವ ಬಗೆ ಒಂದೇ ರೀತಿಯಲ್ಲಿರುತ್ತದೆ.

ನುಡಿ ಬಳಕೆ ಹಾಗೂ ರಚನೆಯ ಮಾದರಿಗಳು ಕೂಡ ಹೀಗೆ ಕೆಲವು ನಿಗದಿತ ಕ್ರಮದಲ್ಲಿ ರೂಪುಗೊಳ್ಳುತ್ತವೆ. ಪ್ರಶ್ನಿಸುವ, ಆದೇಶಿಸುವ, ನಿರ್ದೇಶಿಸುವ, ವಿನಂತಿಸುವ, ಉಪದೇಶಿಸುವ, ಯೋಗ ಕ್ಷೇಮವನ್ನು ವಿಚಾರಿಸುವ ಎಂಬಿತ್ಯಾದಿ ನುಡಿ ಬಳಕೆ ಹಾಗೂ ರಚನೆಯ ಮಾದರಿಗಳು ಅಂದರೆ ಮಾತಿನ ಬಗೆಗಳ ಎತ್ತುಗೆಗಳನ್ನು ಇನ್ನೂ ಸಾಕಷ್ಟು ಬಗೆಯಲ್ಲಿ ತೋರಿಸಬಹುದು. ಇಲ್ಲಿ ವಿಕ್ಷಣೆ, ಅನುಕರಣೆ, ಪರಿಸರ, ಬಲಪಡಿಸುವಿಕೆಗಳೇ ಕಲಿಕೆಯ ಮುಖ್ಯ ತತ್ವಗಳಾಗಿವೆ. ಪ್ರಾಣಿ ಮತ್ತು ಮನುಷ್ಯರ ವರ್ತನೆಗಳು ಕಲಿಕೆ ಹಾಗೂ ಅವುಗಳನ್ನು ಬಲಪಡಿಸುವಿಕೆಯಂತಹ ತತ್ವಗಳು ಕೆಲವು ಸಾಮಾನ್ಯ ನಿಯಮಗಳ ವಿಧಾನದ ನೆಲೆಯಿಂದ ನಿರ್ಧರಿಸ್ಪಟ್ಟಿರುತ್ತವೆ.

ಒಟ್ಟಾರೆಯಾಗಿ ನುಡಿ ಕಲಿಯುವ ಬಗೆ ಹಾಗೂ ನುಡಿಯ ಸ್ವರೂಪ ವರ್ತನವಾದಿಗಳ ಪ್ರಕಾರ ಬೇರೆ ಬೇರೆ ವರ್ತನೆಗಳನ್ನು ರೂಢಿಸಿಕೊಳ್ಳುವ ಮಾದರಿಯಲ್ಲಿರುತ್ತದೆ ಎಂಬುದೇ ಇವರ ಅಚಲ ನಿಲುವಾಗಿತ್ತು. ಈ ಎಲ್ಲ ಚರ್ಚೆಗಳಿಗೆ ಪೂರಕವಾಗಿ ಐವನ್ ಪವ್ಲಫ್ ಹಾಗೂ ಬಿ.ಎಫ್. ಸ್ಕಿನ್ನರ್ ಎಂಬೀ ವರ್ತನಾವಾದಿಗಳು ಪ್ರಾಣಿ ಇಲ್ಲವೇ ಪಕ್ಷಿಗಳ ಮೇಲೆ ನಡೆಸಿರುವ ಪ್ರಯೋಗಗಳನ್ನು ಗಮನಿಸಬಹುದು.

ಪ್ರಯೋಗ 1 – ಕ್ಲಾಸಿಕಲ್ ಕಂಡಿಶಯನ್ನಿಂಗ್

ಐವನ್ ಪವ್ಲಫ್‍ನ ಪ್ರಯೋಗದ ಹೆಸರು ಕ್ಲಾಸಿಕಲ್ ಕಂಡಿಶಯನ್ನಿಂಗ್. ಇದು ಕಲಿಕೆಯ ನೆಲೆಗಳನ್ನು ಕಂಡು ಹಿಡಿಯುವ ತಂತ್ರವಾಗಿದೆ. ಪವ್ಲಫ್‍ನ ಪ್ರಕಾರ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಡುವಣ ಉದ್ದೇಶಿತ ಒಡನಾಟವೇ ಕಲಿಕೆಯಾಗಿದೆ. ಇಂತಹ ತೀರ್ಮಾನಕ್ಕೆ ಬರಲು, ಪವ್ಲಫ್ ನಾಯಿಯ ಮೇಲೊಂದು ಪ್ರಯೋಗವನ್ನು ನಡೆಸಿದ್ದಾನೆ. ಒಂದು ಪಂಜರದಲ್ಲಿ (ಕೇಸ್) ನಾಯಿಯನ್ನು ಕೂಡಿಟ್ಟು, ಅದರ ವರ್ತನೆಗಳನ್ನು ಪತ್ತೆಹಚ್ಚುತ್ತಾನೆ. ಆ ಪ್ರಯೋಗದ ವಿವರಗಳು ಹೀಗಿವೆ;

ವರ್ತನಾವಾದಿ ಕಲಿಕೆ – 1

1. ತಟಸ್ಥ ಪ್ರಚೋದನೆ: ಗಂಟೆ ಬಾರಿಸುತ್ತದೆ.

2. ಗೊತ್ತುಪಾಡಿಲ್ಲದ ಪ್ರಚೋದನೆ: ಅನ್ನದ ತಟ್ಟೆ ಬರುತ್ತದೆ.

3. ಗೊತ್ತುಪಾಡಿಲ್ಲದ ಪ್ರತಿಕ್ರಿಯೆ: ಅನ್ನದ ತಟ್ಟೆ ನೋಡಿ ನಾಯಿ ಜೊಲ್ಲು ಸುರಿಸುತ್ತದೆ.

  • ಗೊತ್ತುಪಾಡಿನ ಪ್ರಚೋದನೆ: ಗಂಟೆಯನ್ನು ಮತ್ತೆ ಮತ್ತೆ ಬಾರಿಸಲಾಗುತ್ತದೆ, ಈ ಗಂಟೆ ಬಾರಿಸಿದಾಗೆಲ್ಲ ಅನ್ನದ ತಟ್ಟೆ ಬರುತ್ತದೆ.
  • ಈ ಗೊತ್ತುಪಾಡಿನ ಪ್ರಚೋದನೆಯ ನಂತರ, ನಾಯಿ ಗಂಟೆ ನಾದವನ್ನು ಕೇಳಿದಾಗಲ್ಲ ಜೊಲ್ಲು ಸುರಿಸುತ್ತದೆ.

ಈ ಪ್ರಯೋಗದ ವಿವರಗಳು ಹೇಳುವುದೇನೆಂದರೆ, ಗಂಟೆ ನಾದವನ್ನು ಕೇಳಿದಾಗೆಲ್ಲ ಅನ್ನದ ತಟ್ಟೆ ಬರುತ್ತದೆ ಎಂಬು ಸಾಮನ್ಯ ತೀರ್ಮಾನಕ್ಕೆ ನಾಯಿ ಬರುತ್ತದೆ. ಅದಕ್ಕಾಗಿ ಗಂಟೆ ನಾದ ಕೇಳಿದೊಡನೆ, ಅನ್ನದ ತಟ್ಟೆ ಬರದಿದ್ದರೂ ನಾಯಿ ಸಹಜವಾಗಿ ಜೊಲ್ಲು ಸುರಿಸುತ್ತದೆ. ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಡುವಣ ನಿರಂತರ ಒಡನಾಟವೇ ಕಲಿಕೆ ಎಂಬ ನಂಬಿಕೆಯನ್ನು ಈ ಪ್ರಯೋಗ ಬಲಪಡಿಸುತ್ತದೆ.

ಐವನ್ ಪವ್ಲಫ್ – ಚಿತ್ರ – 2

ವರ್ತನಾವಾದಿ ನುಡಿ ಕಲಿಕೆ?

ಯಾರಾದರೂ ದೊಡ್ಡವರು ಮಗುವಿಗೆ ನೀರನ್ನು ತೋರಿಸಿ, ಇದು ನೀರು ಎಂದು ಹೇಳುತ್ತಾರೆ. ಹೀಗೆ ಯಾವುದೇ ಗೊತ್ತುಪಾಡಿಲ್ಲದ ಪ್ರಚೋದನೆಗೆ, ಮಗು ಆ ನೀರನ್ನು ಕುಡಿಯುವ, ಉಗುಳುವ ಇಲ್ಲವೇ ಎರುಚುವ ಮೂಲಕ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಆದರೆ ಒಂದು ಗೊತ್ತುಪಾಡಿನ ಪ್ರಚೋದನೆಯ ಮೂಲಕ ಯಾರಾದರೂ ನೀರು ಎಂದು ಹೇಳಿದರೇ, ಆವಾಗ ಮಗು ನೀರು ಕುಡಿಯುತ್ತದೆ ಮತ್ತು ಹಾಗೇನೆ ಆ ಗೊತ್ತುಪಾಡಿನ ಪ್ರಚೋದನೆಗೆ ಪ್ರತಿಕ್ರಿಯೆಯನ್ನೂ ನೀಡುತ್ತದೆ.

ಯಾವಾಗೆಲ್ಲ ಮಗು ನೀರನ್ನು ನೋಡುತ್ತದೆಯೋ, ಆವಾಗೆಲ್ಲ ಯಾರದರೂ ನೀರು ಎಂದು ಹೇಳುತ್ತಾರೆ ಇಲ್ಲವೇ ಹೇಳಬೇಕಾಗುತ್ತದೆ. ಗಂಟೆ ನಾದದ ಪ್ರಚೋದನೆಗೆ, ಅನ್ನದ ತಟ್ಟೆ ಬರುತ್ತದೆ ಎಂದು ನಾಯಿ ಹೀಗೆ ಎದುರು ನೋಡುವ ಬಗೆಯೇ ಪ್ರತಿಕ್ರಿಯೆ. ಅದರಂತೆಯೇ ಮಗುವಿಗೆ ಯಾರದರೂ ನೀರು ತೋರಿಸಿ, ಅದು ನೀರು ಎಂದು ಹೇಳುವ ಪ್ರಚೋದನೆಗೆ, ಮಗು ನೀರನ್ನು ಕುಡಿಯುತ್ತದೆ.

ಹೀಗೆ ಯಾವುದೋ ಒಂದು ಗೊತ್ತುಪಾಡಿನ ಸನ್ನಿವೇಶದಲ್ಲಿ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಿರಂತರ ಒಡನಾಟದಿಂದ ಅಭ್ಯಾಸಗಳು ರೂಪುಗೊಳ್ಳುತ್ತವೆ. ಹೀಗೆ ಹೊರಗಿನ ವರ್ತನೆಗಳಿಂದ ರೂಪುಗೊಳ್ಳುವ ಅನುಕರಣೀಯ ಅಭ್ಯಾಸಗಳನ್ನೇ ಕಲಿಕೆಯೆಂದು ಪವ್ಲಫ್ ಹಾಗೂ ಇತರ ವರ್ತನಾವಾದಿಗಳು ವಾದಿಸುತ್ತಾರೆ.

ಪ್ರಯೋಗ 2 – ಆಪರೆನ್ಟ್ ಕಂಡಿಶಯನ್ನಿಂಗ್

ವರ್ತನಾವಾದಿ ಕಲಿಕೆ -2

ಪವ್ಲಫ್‍ನ ಕ್ಲಾಸಿಕಲ್ ಕಂಡಿಶಯನ್ನಿಂಗ್ ಪ್ರಯೋಗಗಕ್ಕೆ ವ್ಯತರಿಕ್ತವಾಗಿ ಬಿ.ಎಫ್.ಸ್ಕಿನ್ನರ್ ತನ್ನ ಈ ಆಪರೆನ್ಟ್ ಕಂಡಿಶಯನ್ನಿಂಗ್ ಪ್ರಯೋಗವನ್ನು ನಡೆಸಿರುವನು. ಇವನ ಪ್ರಕಾರ ಕಲಿಕೆಯೆಂಬುದು ತನ್ನಿಚ್ಛೆಯ ಪ್ರತಿಕ್ರಿಯೆ. ಕಲಿಕೆಯ ಪ್ರಕ್ರಿಯೆಯು ಬಲಗೊಳ್ಳುವ ಇಲ್ಲವೇ ಬಲಹೀನಗೊಳ್ಳುವ ನೆಲೆಗಳು ಸಕಾರಾತ್ಮಕ ಇಲ್ಲವೇ ನಕಾರಾತ್ಮಕ ಪರಿಣಾಮಗಳನ್ನು ಅವಲಂಬಿಸಿರುತ್ತದೆ. ಸ್ಕಿನ್ನರ್ ತನ್ನ ಈ ವಾದವನ್ನು ಬಲಪಡಿಸಲು ಪಾರಿವಾಳದ ಮೇಲೆ ಪ್ರಯೋಗವನ್ನು ನಡೆಸುತ್ತಾನೆ. ಆ ಪ್ರಯೋಗದ ವಿವರಗಳು ಹೀಗಿವೆ:

1. ಹಸಿದ ಪಾರಿವಾಳವನ್ನು ಒಂದು ಕೇಸಿನಲ್ಲಿ ಕೂಡಿಡುತ್ತಾನೆ

2. ಆಕಸ್ಮಾತ್, ಪಾರಿವಾಳ ತನ್ನ ಕೊಕ್ಕಿನಿಂದ ಆ ಕೇಸಿನ ಕೀಯನ್ನು ಕುಟುಕಿದರೆ, ಆವಾಗ ಆ ಪಾರವಾಳಕ್ಕೆ ಅನ್ನ ಸಿಗುತ್ತದೆ.

ಮೊದಲಸಲ ಈ ಘಟನೆ ನಡೆದಾಗ ಪಾರಿವಾಳ ಏನನ್ನು ಕಲಿಯಲಾರದು. ಏಕೆಂದರೆ ಪಾರಿವಾಳಕ್ಕೆ ತನ್ನ ಕೊಕ್ಕಿನಿಂದ ಕೀಯನ್ನು ಕುಟುಕಿದರೆ ತಾನು ಅನ್ನವನ್ನು ಪಡೆಯುವೇ ಎನ್ನುವ ಸಂಗತಿ ಅದಕ್ಕೆ ತಿಳದಿರುವುದಿಲ್ಲ.

3. ಅನುಷಂಗಿಕವಾಗಿ ಪಾರಿವಾಳ ಸತತವಾಗಿ ಕೀಯನ್ನು ತನ್ನ ಕೊಕ್ಕಿನಿಂದ ಕುಟುಕುತ್ತದೆ, ತನ್ನ ಹಸಿವು ನೀಗುವರೆಗೂ ಕುಟುಕುತ್ತದೆ.

ಇಂತಹ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಂಟಿನಿಂದ, ಪಾರಿವಾಳ ತಾನು ಹೇಗೆ (ಅನ್ನವನ್ನು ಪಡೆಯುವುದನ್ನು) ಕಲಿತ್ತಿದ್ದೇನೆ ಎಂಬುದನ್ನು ತೋರ್ಪಡಿಸುತ್ತದೆ.

ಬಿ.ಎಫ್.ಸ್ಕಿನ್ನರ್ – ಚಿತ್ರ – 3

ಅಪೇಕ್ಷಿತ ವರ್ತನೆಗಳಿಗೆ ಮೆಚ್ಚುಗೆಯನ್ನು ತೋರಿಸುತ್ತಲೇ ಅತ್ಯಂತ ತೊಡಕಿನ ವರ್ತನೆಗಳನ್ನು ಕಲಿಸುವ ಬಗೆಗಳನ್ನು ರೂಪಿಸಬೇಕಾಗುತ್ತದೆ. ಅಂದರೆ;

1. ಯಾವುದೇ ವರ್ತನೆ ನಿಮಗೆ ಬೇಕಾದ ವರ್ತನೆಯನ್ನು ಹೋಲುತ್ತಿದ್ದರೆ ಅಂತಹ ವರ್ತನೆಯನ್ನು ಬಲಪಡಿಸಬೇಕು.

2. ಯಾವೆಲ್ಲ ವರ್ತನೆಗಳು ನಿಮ್ಮ ಅಪೇಕ್ಷಿತ ವರ್ತನೆಗೆ ಹತ್ತಿರವಾಗಿರುತ್ತವೋ, ಆ ಎಲ್ಲ ವರ್ತನೆಗಳನ್ನೂ ಬಲಪಡಿಸಬೇಕು.

3. ಕೇವಲ ಅಪೇಕ್ಷಿತ ವರ್ತನೆಗಳನ್ನು ಮಾತ್ರ ಬಲಪಡಿಸಬೇಕು.

ಸ್ಕಿನ್ನರ್‍ಗೆ ನುಡಿಯೂ ವರ್ತನೆಯ ಮತ್ತೊಂದು ರೂಪವಷ್ಟೇ. ಕಲಿಕೆಯೆಂದರೆ ಆಯಾ ಪರಿಸರ ಇಲ್ಲವೇ ಸನ್ನಿವೇಶಕ್ಕೆ ಎದುರಾಗುವ ಪ್ರಚೋದನೆಗೆ ಪ್ರತಿಕ್ರಿಯಿಸುವ ಕ್ರಮವಷ್ಟೇ. ಅದಕ್ಕಾಗಿ ಇವನು ಹೇಳುವುದೇನೆಂದರೆ, ತಾಯ್ನುಡಿ ಇಲ್ಲವೇ ಮೊದಲ ನುಡಿಯ ಕಲಿಕೆಯಲ್ಲಿಯೂ, ಆಯಾ ನುಡಿಯನ್ನು ಕಲಿಯುವ ಮಕ್ಕಳು ತಪ್ಪು ಮಾಡುತ್ತಾರೆ. ಈ ತಪ್ಪುಗಳಲ್ಲಿ ಯಾವುದೇ ಬಗೆಯ ನಿಯತತೆ ಇರುವುದಿಲ್ಲ. ಇದು ಮಕ್ಕಳಿಂದ ಮಕ್ಕಳಿಗೆ ಬೇರೆಯಾಗುತ್ತದೆ.

ನುಡಿಯನ್ನು ಗಳಸಿಕೊಳ್ಳುವ ಪ್ರಮಾಣದಲ್ಲಿಯೂ ವ್ಯತ್ಯಾಸಗಳು ಉಂಟಾಗುತ್ತವೆ. ಮಾನವರಿಗೆ ಒದಗಿರುವ ಅಂತಸ್ಥ ಸಾಮಥ್ರ್ಯಗಳಲ್ಲಿ ನುಡಿಯೂ ಒಂದು. ಈ ನಿಲುವವನ್ನು ನಿರಾಕರಿಸುವ ನಿಟ್ಟಿನಲ್ಲಿ ಸ್ಕಿನ್ನರ್‍ನ ಮಾತುಗಳು ಇಲ್ಲಿ ಎದ್ದು ಕಾಣುತ್ತವೆ. ಎತ್ತುಗೆಗಾಗಿ; ಮಗುವಿಗೆ ನೀರು ತೋರಿಸಿ ಯಾರಾದರೂ ದೊಡ್ಡವರು ‘ನೀರು’ ಎಂದು ಹೇಳಿದರೆ, ಆ ಮಗು ಅದನ್ನು ಅನುಕರಿಸುತ್ತದೆ. ಒಂದೇ ಪಟ್ಟಿಗೆ ಇದು ನೆರವೇರುವುದಿಲ್ಲ. ಮತ್ತೆ ಮತ್ತೆ ನೀರು ಪದವನ್ನೇ, ‘ನಿ…, ನೀ.., ನೀಲು.., ನೀರು’ ಎಂದು ಹೇಳುತ್ತದೆ. ಹೀಗೆ ಒಂದೊಂದು ವರ್ತನೆಯೂ ಬಲಗೊಳ್ಳುತ್ತವೆ.

ಒಟ್ಟಾರೆ ವರ್ತನಾವಾದಿಗಳ ಪ್ರಕಾರ ನುಡಿ ಗಳಿಕೆಯೆಂಬುದೇ ರೂಢಿತಗತ ವರ್ತನೆಗಳ ಮೊತ್ತವಾಗಿದೆ. ಬಹುಮಂದಿ ನುಡಿಯರಿಗರ ಮೇಲೆ ಈ ವರ್ತನಾವಾದಿ ತಿಳುವಳಿಕೆಳು ಪ್ರಭಾವ ಬೀರಿದವು. ಪರಿಣಾಮವಾಗಿ ನುಡಿ ಓದಿನ ಮಾದರಿಗಳು ಈ ವರ್ತನಾವಾದಿ ತತ್ವಗಳಿಂದಲೇ ರೂಪುಗೊಂಡವು. ಹಾಗಾಗಿ, ನುಡಿಯರಿಗರು ನುಡಿಯ ಹೊರಸ್ತರದ (ಸ್ಪೀಚ್ಸ್, ಪರ್ಫಾರಮೆನ್ಸ್ ಹಾಗೂ ಪರೊಲ್) ರಚನೆಗಳನ್ನು ಮಾತ್ರ ವೀಕ್ಷಣೆಮಾಡುವ ಹಾಗೂ ವರ್ಣಿಸುವ ಕೆಲಸಕ್ಕೆ ಮುಂದಾದರು.

ಈ ರಚನೆಗಳು ಎಲ್ಲರೂ ಗಮನಿಸರಬಹುದಾದ ಪ್ರತಿಕ್ರಿಯೆಗಳೆ ಹೊರತು ಅವ್ಯಾವವು ನುಡಿಯ ಅಂತಸ್ಥ ಸಾಮಥ್ರ್ಯವನ್ನು ಅರಿಯುವ ಬಗೆಗಳಾಗಿರಲಿಲ್ಲ. ಲಿಯೋನಾರ್ಡ್ ಬ್ಲೂಮ್‍ಫಿಲ್ಡ್, ಎಡ್ವರ್ಡ್ ಸಪೀರ್, ಚಾಲ್ರ್ಸ್ ಹಾಕೇಟ್ ಮುಂತಾದವರು ಇದೇ ತಿಳಿವಿನ ಬಳಗಕ್ಕೆ ಸೇರಿದ್ದಾರೆ ಎನ್ನುವುದು ವಿಶೇಷ. ಸುಮಾರು ಅರ್ಧ ಶತಮಾನದವರೆಗೆ ಭಾರತ ಹಾಗೂ ಜಗತ್ತಿನಾದ್ಯಂತ ನುಡಿ ಕುರಿತ ಅಧ್ಯಯನಗಳು ಈ ವರ್ತನಾವಾದಿ ವಿಚಾರವನ್ನೇ ನೆಲೆಯಾಗಿಸಿಕೊಂಡು ನಡೆದಿರುತ್ತವೆ. ಪರಿಣಾಮವಾಗಿ ನಮ್ಮ ಗ್ರಹಿಕೆ ಮತ್ತು ಚಿಂತನೆಯ ಮೂಲ ಸ್ವರೂಪವನ್ನು ಅರಿಯುವಲ್ಲಿ ಸಾಕಷ್ಟು ತೊಡಕುಗಳನ್ನು ಎದುರಿಸಬೇಕಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ವಿಶ್ವ ಮಹಿಳಾ ದಿನ : ದಿವ್ಯಶ್ರೀ ಮನದ ಮಾತು..!

Published

on

  • ದಿವ್ಯಶ್ರೀ.ವಿ, ಬೆಂಗಳೂರು

ಪ್ರತಿವರ್ಷ ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಲಾಗುತ್ತದೆ. ಇಂಥದ್ದೊಂದು ದಿನ ಮೊದಲ ಬಾರಿಗೆ ಪ್ರಚಲಿತಕ್ಕೆ ಬಂದಿದ್ದು ನ್ಯೂಯಾರ್ಕ್‌ನಲ್ಲಿ. 1909, ಫೆಬ್ರವರಿ 28 ರಂದು ಅಲ್ಲಿ ಮೊದಲ ಬಾರಿಗೆ ಮಹಿಳಾ ದಿನವನ್ನು ಆಚರಿಸಲಾಯಿತು.

ಎರಡು ವರ್ಷದ ಬಳಿಕ ಜರ್ಮನ್‌ನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ತಮ್ಮ ದೇಶದಲ್ಲೂ ಈ ದಿನವನ್ನು ಆಚರಿಸಲು ಶುರು ಮಾಡಿದರು. ಹೀಗೆ ಕೆಲವೇ ಕೆಲವು ರಾಷ್ಟ್ರಗಳಿಗೆ ಸೀಮಿತವಾಗಿದ್ದ ಈ ದಿನಕ್ಕೆ 1977 ರಲ್ಲಿ ವಿಶ್ವಸಂಸೆ ಅಧಿಕೃತ ಅನುಮೋದನೆ ನೀಡಿ ಮಾರ್ಚ್‌ 8 ಅನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸುವಂತೆ ಘೋಷಿಸಿತು.

ಹೆಮ್ಮೆಯ ಭಾರತೀಯರು ನಾವು ಯಾವಾಗಲೂ ಮಹಿಳೆಯರು ಒಂದು ಶಕ್ತಿ ಎಂದು ನಂಬುತ್ತೇವೆ ಹೌದು ನಿಸ್ಸಂದೇಹವಾಗಿ ನಮ್ಮ ಮಾತೃ ಭೂಮಿ ಅಥವಾ ಭಾರತ್ ಮಾತಾ ಎಂದು ಕರೆಯಲ್ಪಡುವ ನಮ್ಮ ದೇಶ ದೇವತೆಯಾಗಿ ಪ್ರತಿನಿಧಿಸುತ್ತದೆ. ಈ ನಮ್ಮ ದೇಶದಲ್ಲಿ ಮಹಿಳೆಯರಿಗೆ ದೊಡ್ಡ ಗೌರವವಿದೆ ಆದರೆ ಅನೇಕ ಮಹಿಳೆಯರು ಕೆಲವು ಕ್ರೂರ ಪುರುಷರ ಕೈಯಿಂದ ಹೆಚ್ಚು ಬಳಲುತ್ತಿದ್ದಾರೆ.

ಭಾರತದಲ್ಲಿ, ಮಹಿಳೆಯರ ಸುರಕ್ಷತೆ ಇಂದು ಹೆಚ್ಚು ಅಗತ್ಯವಾಗಿದೆ, ಇತ್ತೀಚಿನ ದಿನಗಳಲ್ಲಿ ಭಾರತವು ಮಹಿಳೆಯರಿಗೆ ಸುರಕ್ಷಿತವಲ್ಲದ ದೇಶಗಳಲ್ಲಿ ಒಂದಾಗಿದೆ ಎನ್ನುವುದು ಬಹಳ ಬೇಸರದ ವಿಷಯ. ದಿನದಿಂದ ದಿನಕ್ಕೆ ಈ ವಿಷಯದ ಕುರಿತಾದ ಹೆಚ್ಚಾಗಿ ಆಲೋಚನೆ ಮಾಡಿ ಕ್ರಮ ಕೈಗೊಳ್ಳ ಬೇಕು.

ಹೆಣ್ಣಿಗೆ ದ್ರೋಹ ಮಾಡುವವರನ್ನು ಶಿಕ್ಷಿಸಲು ಮೂಲಭೂತ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿರಬೇಕು ಇದರಿಂದ ಸಮಾಜದಲ್ಲಿ ಜಾಗೃತಿ ಮತ್ತು ಸುರಕ್ಷತೆ ಉಂಟುಮಾಡುತ್ತದೆ. ಕೌಟುಂಬಿಕ ಹಿಂಸಾಚಾರವು ಮಹಿಳೆಯರು ಎದುರಿಸುತ್ತಿರುವ ನಿರ್ಣಾಯಕ ವಿಷಯವಾಗಿದೆ.

ಇದನ್ನೂ ಓದಿ | ಲಂಕೇಶರ ‘ಅವ್ವ’ ಕವಿತೆ : ಇನ್ನೊಂದು ನೋಟ ; ‘ತಾಯ್ತನ’ ಗಂಡಿನಲ್ಲೂ ಇರಲಿ

ಇನ್ನು ಅನೇಕ ಮಹಿಳೆಯರು ಮುಂದೆ ಬಂದು ಈ ವಿಷಯಗಳ ಬಗ್ಗೆ ಧ್ವನಿ ಎತ್ತಲು ಆಸಕ್ತಿ ಹೊಂದಿದ್ದಾರೆ ಹಾಗೂ ಅನೇಕ ಮಹಿಳೆಯರು ಇದರ ಬಗ್ಗೆ ಎಲ್ಲೆಡೆ ಜಾಗೃತಿ ಮತ್ತು ಹೋರಾಟ ನಡೆಸುತ್ತಿದ್ದಾರೆ, ಈ ಸಮಾಜದ ಬಗ್ಗೆ ಮಹಿಳೆಯರ ಪರಿಸ್ಥಿತಿ ಮತ್ತು ಅವರ ಮೌಲ್ಯಗಳನ್ನು ಜನರುಅರ್ಥಮಾಡಿಕೊಳ್ಳಬೇಕು.

ಹಾಗಾದರೆ ಈ ಎಲ್ಲ ಬಿಕ್ಕಟ್ಟುಗಳಿಗೆ ಪರಿಹಾರ ಇದೆ ಎಂದು ಭಾವಿಸುತ್ತೀರಾ? ಈ ಎಲ್ಲದರಿಂದ ಮಹಿಳೆಯರು ಹೊರಬರಬಹುದು ಮತ್ತು ಹೆಣ್ಣು ಹಿಂಸಾಚಾರ ಮುಕ್ತವಾಗಿ ಬದುಕಬಹುದು ಎಂದು ನೀವು ಭಾವಿಸುತ್ತೀರಾ?
ಇದಕ್ಕೆ ಉತ್ತರ ಹೌದು, ಇದೆಲ್ಲವೂ ಸಾದ್ಯ ಯಾವಾಗ ಎಂದರೆ
ಹಿಂಸೆ ಇಂದ ಬಳಲುತ್ತಿರುವ ಹೆಣ್ಣು ಮತ್ತು ಅವಳ ಜೊತೆಗೆ ಸರ್ಕಾರವು, ಇಬ್ಬರೂ ಒಟ್ಟಿಗೆ ಸೇರಿ ಈ ಎಲ್ಲಾ ಆಕ್ರಮಣಗಳ ವಿರುದ್ಧ ಹೋರಾಡಲು ಇಬ್ಬರೂ ಒಟ್ಟಾಗಿ ನಿಂತು ಅಪರಾಧಿಗೆ ಕಠಿಣ ಕಾನೂನು ರೂಪಿಸಿದರೆ ಮಾತ್ರ ಇದೆಲ್ಲವೂ ಸಾದ್ಯ.

ಮತ್ತು ಇದೆಲ್ಲದರ ಜೊತೆಗೆ ಹೆಣ್ಣು ಮಗುವಿಗೆ ತನ್ನ ಸ್ವತಂತ್ರ ಜೀವನವನ್ನು ರಚಿಸಲು ಪೋಷಕರು ಅವಕಾಶ ನೀಡಬೇಕು, ಪೋಷಕರಿಂದ ನೈತಿಕ ಬೆಂಬಲ ಸಿಗಬೇಕು ಆಗ ಮಾತ್ರ ಒಂದು ಹೆಣ್ಣು ದೈರ್ಯವಾಗಿ ಎಲ್ಲವನ್ನೂ ಎದುರಿಸಲು ಸಾದ್ಯ. ಹಾಗೂ ಮುಖ್ಯವಾಗಿ ನಮ್ಮ ಈ ಸಮಾಜವು ಮಹಿಳೆಯರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕು, ಮಹಿಳೆಯರ ಮೌಲ್ಯಗಳನ್ನು ಮತ್ತು ಈ ಭೂಮಿಯಲ್ಲಿ ಅವಳ ಸ್ಥಾನವನ್ನು ಸಮಾಜವು ತಿಳಿದುಕೊಳ್ಳಬೇಕು, ಮಹಿಳೆಯರು ದೈರ್ಯಶಾಲಿ ಎಂದು ನಿರ್ಧರಿಸ ಬೇಕು.

ಸಮಾಜವು ಮಹಿಳೆಯರ ಶಕ್ತಿಯನ್ನು ಮತ್ತು ಅವಳ ಮೌಲ್ಯವನ್ನು ಅರಿತುಕೊಳ್ಳಲಿ, ಅದು ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭವಾಗಬೇಕು, ಹಿರಿಯರು ತಮ್ಮ ಮಕ್ಕಳಿಗೆ ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿಸಬೇಕು.

ಆಗ ಮಾತ್ರ ಮಹಿಳಾ ಕ್ರಾಂತಿ ಪ್ರಾರಂಭವಾಗುತ್ತದೆ. ಆಗ ಮಾತ್ರ ಈ ತಾಯಿಯ ಭೂಮಿಯಲ್ಲಿ ಮಹಿಳೆಯರು ವಾಸಿಸಲು ಯೋಗ್ಯ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ , ನಮ್ಮ ನಾಡಿನ ದೊರೆಯಾದ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ, ಇಂತಹ ಧೀರ ವನಿತೆಯರು ಇದ್ದಂತಹ ಈ ನಾಡು ಮಹಿಳೆಯರಿಗೆ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲದ ಈ ನಾಡು ನಮ್ಮ ಭಾರತ.

ಮಹಿಳೆಯರು ಧೈರ್ಯದಿಂದ ಧ್ವನಿ ಎತ್ತಲು ಅವಳು ಧೈರ್ಯ ಮಾಡಬೇಕು ಮತ್ತು ಅದು ಅವಳ ರಕ್ಷಣೆಯು ಹೌದು. ಭಾರತ ದೇಶ ಮಹಿಳೆಯರಿಗೆ ರಕ್ಷಾ ಕವಚವಾಗಿ ಬೇಕೆ ವಿನಃ ಇತರ ಕೆಲವು ಕ್ರೂರ ವ್ಯಕ್ತಿಗಳಿಂದ ಅಪಾಯಕಾರಿ. ಆದಷ್ಟು ಬೇಗ ನಮ್ಮ ಕಾನೂನು ಹೆಣ್ಣು ಮಕ್ಕಳಿಗೆ ಹಿಂಸೆ ಕೊಡುವ ವ್ಯಕ್ತಿಗಳನ್ನು ಮುಕ್ತಗೊಳಿಸಬೇಕು. ತ್ಯಾಗಮಹಿ ಹೆಣ್ಣನ್ನು ಎಲ್ಲರೂ ಗೌರವಿಸಬೇಕು ಮಹಿಳೆಯರನ್ನು ಸುರಕ್ಷ ಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೆಣ್ಣು ಪ್ರೀತಿಗೆ ಮನಸೋಲುತ್ತಾಳೆ, ಆ ಪ್ರೀತಿಗೆ ತನ್ನ ಸರ್ವಸ್ವ ಕೊಡುತ್ತಾಳೆ ಆ ಪ್ರೀತಿಯನ್ನು ಅರಿಯುವ ಮನಸ್ಸಿರಬೇಕು ಅಷ್ಟೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’

Published

on

ತ್ತರಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ 22 ಫೆಬ್ರವರಿ 1889 ರಂದು ಜನಿಸಿ, ಜೂನ್ 26,1950 ರಂದು ನಿಧನರಾದ ಸಹಜಾನಂದ್ ಸರಸ್ವತಿ ಅವರ ನಿಜವಾದ ಹೆಸರು ನವರಂಗ್ ರೈ. ಹೋರಾಟ ಮನೋಭಾವದ ಸಹಜಾನಂದರು ಬಹುಮುಖ ಪ್ರತಿಭೆ. ಕ್ರಾಂತಿಕಾರಿ ರೈತ ನಾಯಕ, ಇತಿಹಾಸಕಾರ, ದಾರ್ಶನಿಕ, ಬರಹಗಾರ. ಅವರ ಮುಖ್ಯ ಬರಹ-ಕೃತಿ ಬಿಹಾರವನ್ನು ಕೇಂದ್ರೀಕರಿಸಿದೆ. ಅವರು ಬಿಹ್ತಾದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು ಮತ್ತು ಅಲ್ಲಿಂದ ತಮ್ಮ ವೃದ್ದಾಪ್ಯದ ದಿನಗಳಲ್ಲಿ ತಮ್ಮ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಿದರು.

ಸಹಜಾನಂದರು 1929ರಲ್ಲಿ ಬಿಹಾರ ಪ್ರಾಂತೀಯ ಕಿಸಾನ್ ಸಭೆಯನ್ನು (ಬಿಪಿಕೆಎಸ್) ರಚಿಸಿದರು. ಜಮೀನ್ದಾರರಿಂದ ಭೂ ಹಿಡುವಳಿ ಕುರಿತಾಗಿ ರೈತರ ಮೇಲೆ ನಡೆಯುತ್ತಿದ್ದ ದಾಳಿಗಳ ವಿರುದ್ಧ ರೈತರ ಕುಂದುಕೊರತೆಗಳನ್ನು ಒಟ್ಟುಗೂಡಿಸುವ ಸಲುವಾಗಿ ಈ ಸಂಘಟನೆ-ಹೋರಾಟವನ್ನು ಅವರು ಆರಂಭಿಸಿದರು. ಆ ಮೂಲಕ ಭಾರತದಲ್ಲಿ ರೈತರ ಚಳುವಳಿಗಳಿಗೆ ನಾಂದಿ ಹಾಡಿದರು.

ಕ್ರಮೇಣ ರೈತ ಚಳುವಳಿ ತೀವ್ರಗೊಂಡಿತು ಮತ್ತು ಭಾರತದ ಉಳಿದ ಭಾಗಗಳಿಗೆ ಹರಡಿತು. ಇದು 1936 ರಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ರಚನೆಗೆ ಕಾರಣವಾಯಿತು, ಅವರು ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಕಿಸಾನ್ ಪ್ರಣಾಳಿಕೆ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತು ಗ್ರಾಮೀಣ ಸಾಲಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿತು. ಆ ಜಮೀನ್ದಾರರನ್ನು ಬ್ರಿಟಿಷ್ ಸರ್ಕಾರ ಆದಾಯ ಸಂಗ್ರಹಕ್ಕಾಗಿ ನೇಮಕ ಮಾಡಿಕೊಂಡಿತ್ತು.

ಇದನ್ನೂ ಓದಿ | ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್

ಭೂ ಮಾಲೀಕತ್ವವನ್ನು ಉಳಿಸಲು ಮತ್ತು ರೈತರ ಉಳುಮೆಯ ಹಕ್ಕುಗಳನ್ನು ಉಳಿಸಿಕೊಳ್ಳಲು ನಡೆದ ಈ ಚಳುವಳಿ, ಬಿಹಾರ ಮತ್ತು ಯುನೈಟೆಡ್ ಪ್ರಾಂತ್ಯದ ಕಾಂಗ್ರೆಸ್ ಸರ್ಕಾರಗಳೊಂದಿಗೆ ಸಂಘರ್ಷ ಎದುರಿಸಬೇಕಾಗಿತು.

ಸಹಜಾನಂದ ಸರಸ್ವತಿ 1937-1938ರಲ್ಲಿ ಬಿಹಾರದಲ್ಲಿ ಬಕಾಶ್ತ್ ಚಳವಳಿಯನ್ನು ಸಂಘಟಿಸಿ ಮುನ್ನಡೆಸಿದರು. ಬಕಾಶ್ತ್ ಎಂದರೆ ಸ್ವಯಂ-ಕೃಷಿ, ಸ್ವಯಂ ಉಳುಮೆ. ಈ ಆಂದೋಲನವು ಜಮೀನ್ದಾರರ ಬಕಾಶ್ತ್ ಜಮೀನುಗಳಿಂದ ಟೆನೆಂಟ್‌ಗಳನ್ನು ಹೊರಹಾಕುವುದರ ವಿರುದ್ಧವಾಗಿತ್ತು. ಇದು ಬಿಹಾರ ಹಿಡುವಳಿ ಕಾಯ್ದೆ ಮತ್ತು ಬಕಾಶ್ತ್ ಭೂ ತೆರಿಗೆಯನ್ನು ಅಂಗೀಕರಿಸಲು ಕಾರಣವಾಯಿತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಸಹಜಾನಂದರನ್ನು ಬಂಧಿಸಲಾಗಿತ್ತು.

(ಕೃಪೆ : Mass Media Foundation)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಸಾರೇಕೊಪ್ಪದ ಬಂಗಾರ ; ಅಕ್ಷರತುಂಗಾವನ್ನು ನೆನೆದು

Published

on

  • ಸುರೇಶ ಎನ್ ಶಿಕಾರಿಪುರ

ನ್ನಮ್ಮ ಅನಕ್ಷರಸ್ತೆ ಆಕೆ ಅಕ್ಷರ ಬರೆಯುವುದು ಕಲಿತದ್ದು ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಜಾರಿಗೆ ತಂದಿದ್ದ ‘ಅಕ್ಷರ ತುಂಗಾ’ ಎಂಬ ಯೋಜನೆಯಿಂದ. ಅನಕ್ಷರಸ್ಥ ಹಿಂದುಳಿದ ವರ್ಗಗಳ ಜನ ಸಣ್ಣದಾಗಿ ದಿನಪತ್ರಿಕೆ ಓದಲು ರಾಜಕೀಯ ಸಾಮಾಜಿಕ ವೈಚಾರಿಕ ವಿಚಾರಗಳನ್ನು ಸರ್ಕಾರಗಳ ಯೋಜನೆಗಳು ವಿದ್ಯಾಮಾನಗಳನ್ನು ಅರ್ಥಮಾಡಿಕೊಳ್ಳಲು ಕಲಿತದ್ದು ಬಂಗಾರಪ್ಪನೆಂಬ ಹಿಂದುಳಿದ ವರ್ಗದ ನಾಯಕ ಜಾರಿಗೊಳಿದ್ದ ಆ ಯೋಜನೆಯಿಂದ‌.

ಆದರೆ ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ದಲಿತರು ಹಿಂದುಳಿದವರು ಅಕ್ಷರ ಕಲಿಯಬಾರದೆಂಬ ಪಾರಂಪರಿಕ ದ್ವೇಷ ಮತ್ತು ಹೊಟ್ಟೆಕಿಚ್ಚಿನ ಕಾರಣಕ್ಕೆ ಮೇಲ್ಜಾತಿಗಳು ಇದರ ಮೇಲೆ ಅಪಪ್ರಚಾರ ಶುರುವಿಟ್ಟರು. ಅಕ್ಷರ ತುಂಗಾ ಯೋಜನೆಯ ಕುರಿತ ಅಸಮಧಾನ ಅಪಪ್ರಚಾರದ ಒಂದು ಘೋಷಣೆ ಹೇಗಿತ್ತೆಂದರೆ,

“ಅಕ್ಷರತುಂಗಾ ಮೂರ್ಕೋಟಿ ನುಂಗ” ಇದನ್ನು ಅಂದಿನ ದಲಿತವಿರೋಧೀ ಹಿಂದುಳಿದವರ ವಿರೋಧಿಗಳು ಯಶಸ್ವಿಯಾಗಿ ಪ್ರಚಾರ ಮಾಡಿದರು. ಅಕ್ಷರ ಕಲಿಯುತ್ತಿದ್ದ ಜನ ಕೆಲವರು ಅದನ್ನು ಹೌದೆಂದೇ ನಂಬಿದ್ದರು. ಬಂಗಾರಪ್ಪ ಅಪ್ಪಟ ಜಾನಪದ ನಾಯಕ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಹಳ್ಳಿ ಸೊಗಡು ಸಂಪರ್ಕ ಬಿಟ್ಟುಕೊಡದ ಅಪ್ಪಣ ಹಳ್ಳೀಯ.

ಅವರಿಗೆ ಅಕ್ಷರ ಜ್ಞಾನವಿಲ್ಲದ ಕಾರಣಕ್ಕೇ ದಲಿತರು ಹಿಂದುಳಿದವರು ಹಿಂದೇಯೇ ಉಳಿದಿರುವುದು ಎಂಬ ಸ್ಪಷ್ಟ ತಿಳುವಳಿಕೆಯಿತ್ತು. ಅದಕ್ಕಾಗೇ ಅಂಬೇಡ್ಕರ್ ಗಾಂಧೀಜಿ ನೆಹರು ದೇವರಾಜ ಅರಸು ಹೋರಾಡಿದ್ದರೆಂಬ ಅರಿವಿತ್ತು ಹಾಗಾಗಿಯೇ ಶಾಲೆ ಕಲಿಯದ ಹಿರಿಯರು ಯುವಕರು ಆ ಯೋಜನೆಯ ಮೂಲಕ ನಾಲಕ್ಕಕ್ಷರ ಕಲಿತು ತಮ್ಮ ಮೇಲಾಗುವ ಅನ್ಯಾಯ ಅಕ್ರಮ ದಬ್ಬಾಳಿಕೆಗಳನ್ನು ಅರ್ಥ ಮಾಡಿಕೊಳ್ಳುವಂತಾಗಲಿ ಎಂಬುದೇ ಅವರ ಉದ್ಧೇಶವಾಗಿತ್ತು.

ಏಕೆಂದರೆ ಅನಕ್ಷರಸ್ತ ಬಡ ರೈತನಿಂದ ನಕಲಿ ಸಹಿ ಮಾಡಿಸಿಕೊಂಡು ಅವನ ಹೊಲ ಮನೆ ನುಂಗಿ ನೀರುಕುಡಿದ ಮೇಲ್ಜಾತಿ ಹಣವಂತರ ದೌರ್ಜನ್ಯಗಳ ಬರ್ಬರತೆ ಹೇಗಿರುತ್ತಿತ್ತು ಎಂಬುದನ್ನು ಆ ಕಾಲದ ಹಿರಿಯ ತಲೆಮಾರಿನವರಿಗೆ ಕೇಳಿದರೆ ಗೊತ್ತಾಗುತ್ತದೆ. ಕರಣಿಕ ಗೌಡ ಪಟೇಲ ಎಂಬುವವರೆಲ್ಲಾ ಅಕ್ಷರ ಬಲ ದೊಣ್ಣೆಯ ಬಲ ಖಡ್ಗದ ರಾಜಕೀಯ ಬಲದಿಂದಲೇ ದಮನಿತ ವರ್ಗಗಳನ್ನು ಹತ್ತಿಕ್ಕಿದ ಚರಿತ್ರೆಯೇ ನಮ್ಮ ಬೆನ್ನಿಗಿದೆ‌.

ಇಂತಹಾ ದುರುಳರಿಂದ ದುಡಿಯುವ ಶ್ರಮಜೀವಿ ಜನರನ್ನು ಪಾರು ಮಾಡಲು ಕೊನೆಯಪಕ್ಷ ಒಂದು ಅಗ್ರಿಮೆಂಟ್ ಕಾಪಿಯನ್ನೋ ನೋಂದಣಿ ವ್ಯವಹಾರವನ್ನೋ ಓದಿ ತಿಳಿದುಕೊಳ್ಳುವಂತಾಗಲಿ ಇದರಿಂದ ಸಾಕಷ್ಟು ಶೋಷಣೆಯನ್ನು ತಪ್ಪಿಸಬಹುದೆಂಬುದು ಅವರ ದೂರದೃಷ್ಟಿಯಾಗಿತ್ತು‌. ಇದು ಮೇಲ್ಜಾತಿ ಮನಸುಗಳಿಗೆ ಆಗಿಬರಲಿಲ್ಲ‌ ಅವರು ಹುನ್ನಾರದ ಬೀಜ ಬಿತ್ತಿದರು “ಅಕ್ಷರತುಂಗಾ ಮೂರ್ಕೋಟಿ ನುಂಗಾ” ಎಂದೇ ಕೂಗಿದರು‌‌.

ನನ್ನೂರಿನ ಬಿಜೆಪಿಯ ಈರಾದಿಈರರೆಲ್ಲ ಇದನ್ನು ದನಿ ಎತ್ತರಿಸಿ ಕೂಗಿದ್ದೇ ಕೂಗಿದ್ದು ಹಾಗೆ ಕೂಗುವವರಲ್ಲಿ ಮುಗ್ಧ ಅನಕ್ಷರಸ್ಥ ಜನತೆಯೂ ಇರುತ್ತಿತ್ತು. ಆದರೆ ‘ಅಕ್ಷರತುಂಗಾ’ ಯೋಜನೆಯಲ್ಲಿ ಬಂಗಾರಪ್ಪ ಗಂಟು ಹೊಡೆದರು ಎಂಬುದಕ್ಕೆ ಸಾಕ್ಷಿಯೇ ಇಲ್ಲ. ಸಾಬೀತಾಗಲೂ ಇಲ್ಲ.

ಹಿಂದುಳಿದವರ್ಗದವನೊಬ್ಬ ಅಧಿಕಾರ ಉನ್ನತಸ್ಥಾನದಲ್ಲಿ ಕೂರುವುದು ಶೋಷಿತ ಸಮುದಾಯಗಳು ಅಕ್ಷರ ಕಲಿಯುವುದು ಈ ದೇಶದ ಮೇಲ್ಜಾತಿಗಳಿಗೆ ಯಾವತ್ತೂ ಆಗದ ವಿಚಾರ.

ದೇವರಾಜ ಅರಸರಿಗೂ ಬಂಗಾರಪ್ಪನವರಿಗೂ ಕಾಡಿದರು ಸಿದ್ದರಾಮಯ್ಯನವರಿಗೂ ಕಾಡಿದರು ಮುಂದೆ ಯಾರೇ ದಲಿತ ಹಿಂದುಳಿದವ ಅಧಿಕಾರಕ್ಕೆ ಬಂದರೂ ಕಾಡುತ್ತಾರೆ ಸಾಧ್ಯವಾದಷ್ಟು ಆ ಸಮುದಾಯಗಳವರು ಅಧಿಕಾರದ ಹಂತಕ್ಕೆ ಬರುವುದನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending