ಅಂತರಂಗ
ಕೃಷಿ ಬಿಕ್ಕಟ್ಟಿನ ನಿರ್ಲಕ್ಷ್ಯ ಮೋದಿ ಸೋಲಿಸೀತೆ? : ಮಂಡ್ಯದ ವಳಗೆರೆಹಳ್ಳಿಯ ರೈತ ಆತ್ಮಹತ್ಯೆಗಳ ‘ಪೋಸ್ಟ್ ಮಾರ್ಟಂ’
- ಮಂಡ್ಯದ ವಳೆಗೆರೆಹಳ್ಳಿಯ ಆತ್ಮಹತ್ಯೆ ಮಾಡಿಕೊಂಡ ಐವರು ರೈತರ ಆತ್ಮಹತ್ಯೆಗಳನ್ನು ‘ರಾಜಕೀಯ-ಆರ್ಥಿಕ ಪೋಸ್ಟ್ ಮಾರ್ಟಂ’ ಮೂಲಕ ಕೃಷಿ ಸಂಕಟದ ಆಳ ಅಗಲಗಳನ್ನು ಇಲ್ಲಿ ಅಳೆಯಲಾಗಿದೆ. ಮಂಡ್ಯ ಮತ್ತು ಕೊಪ್ಪಳದ ಕೃಷಿ ಸಂಕಟಗಳನ್ನು ಕುರಿತು ಸಂಶೋಧನೆ ಮಾಡುತ್ತಿರುವ ದೀಪಾ ಕುರುಪ್ ಅದರ ಬೆಳಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಈ ಕುರಿತು ಮೋದಿ ಸರಕಾರದ ಘೋಷಣೆ ಮತ್ತು ‘ಸಾಧನೆ’ಗಳ ನಡುವಿನ ಕಂದಕವನ್ನು ತೆರೆದಿಡುತ್ತಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಬಂದಿರುವ ರೈತರ ಚಳುವಳಿಯ ಬಗೆಗೂ ಬರೆಯುತ್ತಾರೆ. ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕೃಷಿ ಸಂಕಟಗಳ ತೀವ್ರ ನಿರ್ಲಕ್ಷ ಮೋದಿಯನ್ನು ಸೋಲಿಸಬಲ್ಲದು ಎಂದು ಅಂತರ್ರಾಷ್ಟ್ರೀಯ ಓದುಗರಿಗೆ ತಿಳಿಸುವ ಈ ಲೇಖನ ‘ಅಲ್ ಜಜೀರಾ’ (https://www.aljazeera.com/news/2019/04/india-elections-farm-crisis-pm-narendra-modi-190418191725241.html)ವೆಬ್ ಮ್ಯಾಗಜೀನ್ ನಲ್ಲಿ ಪ್ರಕಟವಾಗಿದೆ. ಇಲ್ಲಿ ಬರುವ ಕೃಷಿ ಸಂಕಟದ ಹಲವು ಆಯಾಮಗಳ ಬಗ್ಗೆ ಈ ಪತ್ರಿಕೆಯಲ್ಲಿ ಹಲವು ಬರಹಗಳು ಪ್ರಕಟವಾಗಿದ್ದರೂ, ಕ್ಷೇತ್ರ ಸಮೀಕ್ಷೆಯ ಪ್ರಕರಣಗಳ ಆಧಾರವಿರುವುದರಿಂದ ಈ ಲೇಖನವನ್ನು ಇಡಿಯಾಗಿ ಪ್ರಕಟಿಸಲಾಗುತ್ತಿದೆ. ಇದನ್ನು ಈ ಕ್ಷೇತ್ರ ಸಮಿಕ್ಷೆಯಲ್ಲಿ ಭಾಗವಹಿಸಿದ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕ ಟಿ. ಯಶವಂತ ಅನುವಾದಿಸಿದ್ದಾರೆ.
“ಮಂಡ್ಯದಲ್ಲಿ ಏಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ”ಎಂದು ಮುಜಗರದಿಂದಲೇ ವಳೆಗೆರಹಳ್ಳಿ ಗ್ರಾಮಸ್ಥರನ್ನು ಪ್ರಶ್ನಿಸಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿಗೆ ಸೇರಿರುವ ವಳೆಗೆರೆಹಳ್ಳಿ ಗ್ರಾಮದ ಬಹಳಷ್ಟು ಜನರಿಗೆ 2015 ಹಾಗೂ 2017 ರ ನಡುವಿನ ಎರಡು ವರ್ಷದಲ್ಲಿ ತನ್ನ ಗ್ರಾಮದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಆಶ್ಚರ್ಯವನ್ನೇನೂ ಹುಟ್ಟಿಸಲಿಲ್ಲ.
ಆದರೆ ಏಪ್ರಿಲ್ 1ರಂದು ನಡೆದ ಶ್ರೀನಿವಾಸ್ ರವರ ಆತ್ಮಹತ್ಯೆ ಅವರ ಮನಸ್ಸಿನಲ್ಲಿ ಹಸಿರಾಗಿದೆ. 45 ವರ್ಷ ವಯಸ್ಸಿನ ರೈತ ಸುಮಾರು ಐದು ಲಕ್ಷ ರೂ ನಷ್ಟಿದ್ದ ಸಾಲದಿಂದ ಮುಕ್ತನಾಗದೆ ವೃದ್ದೆ ತಾಯಿ, ಪತ್ನಿ ಮತ್ತು ಮಗನನ್ನು ಬಿಟ್ಟು ಅಗಲಿದ್ದಾರೆ. ಕಳೆದ ವರ್ಷವಷ್ಟೇ ಬಂಧು, ಸ್ನೇಹಿತರು ಹಾಗೂ ಗ್ರಾಮದ ಲೇವಾದೇವಿದಾರರಿಂದ ಮಗಳ ಮದುವೆ ವೆಚ್ಚ ಭರಿಸಲು ಸಾಲ ಪಡೆದಿದ್ದರು. ಮತ್ತೇ ಈ ವರ್ಷ ತನ್ನ ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆಯಲು ಮತ್ತಷ್ಟು ಸಾಲ ಮಾಡಿದ್ದರು. ಹಾಕಿದ್ದ ಬಂಡವಾಳಕ್ಕಿಂತ ಸಾಕಷ್ಟು ಕಡಿಮೆ ಬೆಲೆಗೆ ಭತ್ತ ಮಾರಾಟ ಆಗಿದ್ದು, ಸಾಲ ತೀರಿಸುವ ಅವನ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿತು.
ಆದರೆ ಶ್ರೀನಿವಾಸ್ ರವರ ಸಾವು ರೈತ ಆತ್ಮಹತ್ಯೆ ಯ ಕೃಷಿ ಇಲಾಖೆ ಅಂಕಿ ಸಂಖ್ಯೆ ಪಟ್ಟಿಯಲ್ಲಿ ಸೇರ್ಪಡೆ ಆಗಿಲ್ಲ. ಲೆಕ್ಕಕ್ಕೆ ಹಾಗೂ ಪರಿಹಾರ ಸೌಲಭ್ಯಗಳ ಕ್ರಮಕ್ಕೆ ಒಳಪಡಬೇಕಾದರೆ, ಮರಣೋತ್ತರ ಪರೀಕ್ಷೆ ಮಾಡಿಸಬೇಕು. ಅವರ ಕುಟುಂಬದಂತೆ ಬಹಳಷ್ಟು ಇತರರು ಸಾಂಸ್ಕೃತಿಕ ಮತ್ತು ಭಾವನಾತ್ಮಕ ಕಾರಣಗಳಿಗಾಗಿ ಇಂತಹ ಪ್ರಕ್ರಿಯೆಯನ್ನು ನಿರಾಕರಿಸಿರುತ್ತಾರೆ. ಶ್ರೀನಿವಾಸ್ ರವರ ರೀತಿ ಎಣಿಕೆಗೆ ಪರಿಗಣಿಸದ ಆತ್ಮಹತ್ಯೆಗಳು ವಾರ್ಷಿಕವಾಗಿ ರಾಷ್ಟ್ರೀಯ ಅಪರಾಧ ರೆಕಾಡ್ರ್ಸ್ ಬ್ಯೂರೋ (ಓಅಖಃ) ಪ್ರಕಟಿಸುವ ರೈತ ಆತ್ಮಹತ್ಯೆಗಳ ಸಂಖ್ಯೆಗಿಂತ ವಾಸ್ತವವಾಗಿ ಜರುಗುತ್ತಿರುವ ಅತ್ಮಹತ್ಯೆಗಳು ಹೆಚ್ಚಿರುವುದನ್ನು ತೋರಿಸುತ್ತದೆ.
ನಿಖರವಲ್ಲದಿದ್ದರೂ 2016ರ ತನಕ ಸಾಮಾಜಿಕ ಕಾರ್ಯಕರ್ತರು ಹಾಗೂ ನೀತಿ ನಿರೂಪಕರು ಉಲ್ಲೇಖಿಸಬಹುದಾಗಿದ್ದು ಓಅಖಃ ದತ್ತಾಂಶ ಮಾತ್ರವಾಗಿತ್ತು. ಆ ನಂತರದಿಂದ ಬಿಜೆಪಿ ಸರ್ಕಾರ ಆತ್ಮಹತ್ಯೆ ಅಂಕಿಸಂಖ್ಯೆಗಳನ್ನು ಪ್ರಕಟಿಸಲು ನಿರಾಕರಿಸಿದೆ. ಅದರ ಒಟ್ಟು ರಾಜಕೀಯ ಕಥನಕ್ಕೆ ಅನುಕೂಲವಾಗುವಂv,É ನಿರುದ್ಯೋಗ ಮಟ್ಟ ಅಥವಾ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ತನಗೆ `ಮುಜುಗರ ಉಂಟುಮಾಡುವ’ ಅಂಕಿ ಸಂಖ್ಯೆಗಳನ್ನು ಮರೆಮಾಚುವ ಇಲ್ಲವೆ ತಿರುಚುವ ಕಾರ್ಯತಂತ್ರದ ಭಾಗವಾಗಿಯೇ ಇದನ್ನು ಮಾಡಲಾಗಿದೆ.
ಜನಸಂಖ್ಯೆಯ ಶೇಕಡಾ 69 ರಷ್ಟು ಅಂದರೆ 83 ಕೋಟಿ ಜನ ಇರುವ ಗ್ರಾಮೀಣ ಪ್ರದೇಶದ ಸಂಕಷ್ಟ ಅಳೆಯುವ ಸೂಚಕವಿದು. ಓಅಖಃ ಪ್ರಕಾರ 2015 ರ ಹಿಂದಿನ ಎರಡು ದಶಕಗಳಲ್ಲಿ ಕನಿಷ್ಠ 3.21 ಲಕ್ಷ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಬಿಜೆಪಿ ಆಡಳಿತದ ಹಿಂದೆಯೂ ಬಿಕ್ಕಟ್ಟು ಇರುವ ಬಗ್ಗೆ ಕೂಡ ಓಅಖಃ ಬೆಳಕು ಚೆಲ್ಲುತ್ತಿದೆ. 2014 ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ `ಕ್ರಾಂತಿ’ ಮಾಡುವುದಾಗಿ ರೈತ-ಕೃಷಿ ಕೂಲಿಕಾರರನ್ನು ನಂಬಿಸಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಗ್ರಾಮೀಣ ಬಿಕ್ಕಟ್ಟು ಮಾತ್ರ ಮತ್ತಷ್ಟು ಉಲ್ಬಣಿಸಿದೆ.
2014 ರ ಬಿಜೆಪಿ ಪ್ರಣಾಳಿಕೆ ರೈತರಿಗೆ ಉತ್ಪಾದನಾ ವೆಚ್ಚದ ಶೇಕಡಾ 50 ರಷ್ಟು ಲಾಭಾಂಶದ ಭರವಸೆ ನೀಡಿತ್ತು. ಮತ್ತೊಂದು ಅವಧಿಗೆ ಅಧಿಕಾರ ನಿರೀಕ್ಷಿಸುತ್ತಿರುವ ಮೋದಿ, 2019ರ ಬಿಜೆಪಿ ಪ್ರಣಾಳಿಕೆಯಲ್ಲಿ ಪುನುರುಚ್ಚರಿಸಿರುವ ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸಲು 2022 ರವರೆಗೆ ಅವಕಾಶ ನೀಡುವಂತೆ ಮತದಾರರನ್ನು ಕೇಳುತ್ತಿದ್ದಾರೆ. ಆದರೆ ಕೃಷಿ ಕ್ಷೇತ್ರದ ಒಟ್ಟಾರೆ ಚಿತ್ರಣ ಈ ಭರವಸೆಯ ವಿರುದ್ದ ದಿಕ್ಕಿನಲ್ಲಿದೆ.
ಕೃಷಿ ಕ್ಷೇತ್ರದ ಆರ್ಥಿಕ ಚಟುವಟಿಕೆಯ ಮಾಪಕವಾದ ಒಟ್ಟು ಮೌಲ್ಯ ವರ್ದನೆಯು(ಉಗಿಂ)2014-19 ರ ಪ್ರಸ್ತುತ ಬಿಜೆಪಿ ನೇತೃತ್ವದ ಎನ್.ಡಿ.ಎ. ಅವಧಿಯ ಸ್ಥಿರ ದರದಲ್ಲಿ ಸರಾಸರಿ ಶೇಕಡಾ 2.8 ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ನಿರಂತರ ಎರಡು ಅವಧಿಯ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಾದ ಯುಪಿಎ-1 (2004-09) ಹಾಗೂ ಯುಪಿಎ-2 (2009-14) ಗಳಿಗೆ ಹೋಲಿಸಿದರೆ ಇದು ಗಮನಾರ್ಹವಾಗಿ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಕೃಷಿಯಲ್ಲಿ ತೊಡಗಿರುವ ಪುರುಷ ಹಾಗೂ ಮಹಿಳೆಯರ ಗ್ರಾಮೀಣ ಕೂಲಿಯ ಪ್ರಮಾಣ ಸಹ ಕುಂಠಿತಗೊಂಡಿದೆ.
ವಳೆಗೆರಹಳ್ಳಿ ಆತ್ಮಹತ್ಯೆಗಳು
ಗ್ರಾಮಗಳಲ್ಲಿನ ಬಿಕ್ಕಟ್ಟಿನ ಲಕ್ಷಣಗಳು ಹಾಗೂ ಹೊರಬಿದ್ದಿರುವ ಅಂಕಿಸಂಖ್ಯೆಗಳು, ಬಿಜೆಪಿಯ ಭರವಸೆಗಳಿಗೂ ‘ಸಾಧನೆ’ಗಳಿಗ ಇರುವ ಕಂದಕವನ್ನು ತೋರಿಸುತ್ತಿವೆ. ಬಿಜೆಪಿ ಗ್ರಾಮೀಣ ಬಿಕ್ಕಟ್ಟನ್ನು ಒಂದು ರಚನಾತ್ಮಕ ಬಿಕ್ಕಟ್ಟು ಎಂದು ಗ್ರಹಿಸುವುದಿಲ್ಲ. ಬಹುತೇಕ ಕೃಷಿ ಭೂಮಿಗೆ ಕಾಲುವೆ ನೀರಾವರಿ ಹೊಂದಿರುವ ಹಾಗೂ ಭತ್ತ, ಕಬ್ಬು, ರೇಷ್ಮೆ ಬೆಳೆಯುವ ವಳೆಗೆರಹಳ್ಳಿಯಲ್ಲಿನ ಪರಿಸ್ಥಿತಿ ಇದಕ್ಕೆ ಕನ್ನಡಿಯಾಗಿದೆ. 2015 ಮತ್ತು 2017 ರ ನಡುವೆ ಆತ್ಮಹತ್ಯೆ ಮಾಡಿಕೊಂಡಿರುವ ಐದು ಕುಟುಂಬಗಳ ಜೊತೆಗಿನ ಸಂವಾದವು ಗ್ರಾಮೀಣ ಭಾರತದ ರಾಜಕೀಯ ಆರ್ಥಿಕತೆಯಲ್ಲಿನ ಬಿಕ್ಕಟ್ಟಿಗೆ ಸಾಕ್ಷಿ ಒದಗಿಸುವ ಮಾನವ ದುರಂತವನ್ನು ಅನಾವರಣಗೊಳಿಸಿದೆ.
ಜಯರಾಮು ಎಂ.(36), ಮಧುಕರ್ (40), ನಾಥಪ್ಪ,(46), ಸಿ.ಎಂ.ಸಂಪತ್(37) ಮತ್ತು ಮರಿಗೌಡ (50) – ಆತ್ಮಹತ್ಯೆ ಮಾಡಿಕೊಂಡ ಈ ಐವರ ಕುಟುಂಬಗಳು ಎರಡು ಎಕರೆಗಿಂತ ಕಡಿಮೆ ಹಿಡುವಳಿ ಹೊಂದಿದ್ದು, ಕೃಷಿ ಕೂಲಿಗಾರರಾಗಿಯೂ ಸಹ ಕೆಲಸ ಮಾಡುತ್ತಿದ್ದರು. ರಾಷ್ಟ್ರೀಯ ಸರಾಸರಿ ಹಿಡುವಳಿ 2.7 ಎಕರೆ. ಈ ಎಲ್ಲಾ ಐದು ರೈತರು ಲಾಭಗಳಿಸುವಲ್ಲಿ ವಿಫಲರಾಗಿದ್ದು ಕುತ್ತಿಗೆಮಟ್ಟ ಸಾಲದಲ್ಲಿ ಮುಳುಗಿದವರು. ಅನಾರೋಗ್ಯ, ಮದುವೆ, ಕೃಷಿ ಲಾಗುವಾಡು ಮತ್ತಿತರೆ ವೆಚ್ಚ ನಿಭಾಯಿಸುವ ಕಾರಣದಿಂದಾಗಿ ಸಾಲಗಾರರಾಗಿದ್ದರು.
ಈ ಸಾಲದ ಗಣನೀಯ ಮೊತ್ತವನ್ನು ಸ್ಥಳೀಯ ಲೇವಾದೇವಿದಾರರಿಂದ ಪಡೆಯಲಾಗಿತ್ತೇ ವಿನಃ ಬ್ಯಾಂಕ್ನಿಂದಲ್ಲ. ಮಾಸಿಕ ಶೇಕಡಾ 5 ರ ದುಬಾರಿ ಬಡ್ಡಿ ದರ. ಜುಲೈ 2015 ರಲ್ಲಿ ಆತ್ಮಹತ್ಯೆಗೀಡಾದ ಜಯರಾಮು ತಾಯಿ 58 ವರ್ಷದ ಸಣ್ಣಮ್ಮ, ರಾಜ್ಯ ಸರ್ಕಾರ ಕೊಟ್ಟ ಪರಿಹಾರ ಧನ ಅವಳ ಮಗನ ಸುಸ್ಥಿ ಸಾಲದ ಬಡ್ಡಿಗೆ ಸರಿ ಹೋಯಿತು ಎಂದು ನಿಟ್ಟುಸಿರು ಬಿಟ್ಟರು.
ಮಧುಕರ್, ಒಬ್ಬ ದಲಿತ ರೈತ, ಸುಮಾರು ಶೇಕಡಾ 9 ರಷ್ಟು ಮಾಸಿಕ ದುಬಾರಿ ಬಡ್ಡಿ ದರದ ಸಾಲಗಾರ. ಆಗಷ್ಟೇ ಗುತ್ತಿಗೆ ಪಡೆದಿದ್ದ ಒಂದು ಎಕರೆ ಭೂಮಿಗೆ ಬಾಡಿಗೆ ಪಾವತಿಸಲು ಸಾಲ ಮಾಡಿದ್ದ. ಲೇವಾದೇವಿದಾರರು ತಮ್ಮ ಹಣದ ಸುರಕ್ಷತೆಗಾಗಿ ಸಾಮಾನ್ಯವಾಗಿ ದಲಿತರನ್ನು ಹಾಗೂ ಇತರೆ ಭೂ ಹೀನ ಬಡವರನ್ನು, ಅವರ ಹತ್ತಿರ ಈ ಸಣ್ಣ ಮೊತ್ತಕ್ಕೆ ಗ್ಯಾರಂಟಿ ನೀಡಬಹುದಾದ ಯಾವುದೇ ಆಸ್ತಿ ಇರದೇ ಇರುವುದರಿಂದ, ಹೆಚ್ಚಿನ ನಷ್ಟ ಉಂಟು ಮಾಡಬಹುದಾದ ಸಾಲಗಾರರೆಂದು ಪರಿಗಣಿಸುತ್ತಾರೆ.
ಮಧುಕರ್ ಆತ್ಮಹತ್ಯೆ ಮಾಡಿಕೊಂಡ ಮೇಲೆ ಆತನ ವಿಧವೆ ಪತ್ನಿ, ಸುನಂದಾ (30),ಸಾಲ ತೀರಿಸಲು ಇದ್ದ ಅರ್ಧ ಎಕರೆ ಜಮೀನು ಮಾರಾಟ ಮಾಡಿದ್ದಾಗಿ ಹೇಳಿದರು. ಈಗ ಈ ಕುಟುಂಬಕ್ಕೆ ಯಾವುದೇ ಭೂಮಿ ಇಲ್ಲ. ಕುಟುಂಬ ನಿರ್ವಹಣೆಗಾಗಿ ಗಾಮೆರ್ಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೃಷಿ ಇಲಾಖೆ, ಆತ್ಮಹತ್ಯೆಗೀಡಾದ ವಳೆಗೆರಹಳ್ಳಿ ರೈತರನ್ನು ಸಣ್ಣ ಮತ್ತು ಅಂಚಿನ ರೈತರೆಂದು ವರ್ಗೀಕರಿಸಿದೆ. ಇಂತಹವರ ಪ್ರಮಾಣ ದೇಶದಲ್ಲಿ ಶೇಕಡಾ 86 ರಷ್ಷಿದ್ದರೂ, ಗಣತಿ ಪ್ರಕಾರ ಕೇವಲ ಶೇಕಡಾ 47 ರಷ್ಟು ಕೃಷಿ ಭೂಮಿ ಹೊಂದಿದ್ದಾರೆ. ಈ ಶೇಕಡಾ 86 ಜನರೇ ಭಾರತದ ಕೃಷಿ ಬಿಕ್ಕಟ್ಟಿನ ಬಹು ಭಾರ ಹೊತ್ತಿರುವವರು. ಕೃಷಿ ಸಂಕಟವು ಭಾರತೀಯ ರೈತರನ್ನು ತಲೆಮಾರಿನಿಂದ ತಲೆಮಾರಿಗೆ ಹೆಚ್ಚು ಹೆಚ್ಚು ತುಂಡು ಹಿಡುವಳಿದಾರರನ್ನಾಗಿಸುತ್ತಿದೆ. ಭೂ ಹಂಚಿಕೆಯ ಅಸಮಾನತೆ ಕೂಡ ತೀವ್ರಗೊಂಡಿದೆ.
ಬರಗಾಲ, ಬೆಳೆ ವಿಮೆ ಇತ್ಯಾದಿ
ಮಂಡ್ಯವೂ ಸೇರಿದಂತೆ ಭಾರತದ ಬಹುತೇಕ ಭಾಗ 2014 ರಿಂದ ಸತತ ಎರಡು ವರ್ಷಗಳ ಬರಗಾಲವನ್ನು ಅನುಭವಿಸಿದ್ದರೂ, ಈ ಯಾವ ಕುಟುಂಬಗಳು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಪಡೆದಿಲ್ಲ. ಅಸಮರ್ಪಕ ಭೂ ದಾಖಲಾತಿ ಅಥವಾ ಆಧಾರ್ ಜೊತೆ ಬ್ಯಾಂಕ್ ಖಾತೆ ಜೋಡಣೆ ಆಗದಿರುವ ಕಾರಣದಿಂದ ಬರ ಪರಿಹಾರ ಪಟ್ಟಿಯಿಂದ ಅವರು ಹೊರಗುಳಿದಿದ್ದರು ಎಂದು ವಳೆಗೆರಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಆರೋಪಿಸಿದರು.
ರೈತನ ಜೊತೆ ಪ್ರಿಮಿಯಂ ನ ಒಂದು ಭಾಗವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾವತಿಸುವ, ಮೋದಿ ಸರ್ಕಾರದ ಮಹತ್ವಕಾಂಕ್ಷಿ ಬೆಳೆ ವಿಮೆ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯೂ, ಅವರನ್ನು ಒಳಗೊಂಡಿಲ್ಲ. ಇಡೀ ಊರಿನ ಎಲ್ಲಾ ಬೆಳೆಗಳು ನಾಶವಾದರೆ ಮಾತ್ರ ವಿಮೆ ದಾವೆಗೆ ಅವಕಾಶ ಇರುವ ಈ ಯೋಜನೆ ಉಪಯೋಗಿಯಾಗಿಲ್ಲ ಎಂದು ವಳೆಗೆರಹಳ್ಳಿ ರೈತರು ತಿಳಿಸಿದರು. ಮಿಗಿಲಾಗಿ ವಾಣಿಜ್ಯ ಬೆಳೆಗಳನ್ನು ಈ ವಿಮೆ ಯೋಜನೆ ಒಳಗೊಂಡಿಲ್ಲವಾದ್ದರಿಂದ ಕಬ್ಬು ಬೆಳೆಯುವ ಎಲ್ಲರನ್ನೂ ಹೊರಗಿಟ್ಟಿದೆ.
ಸತತ ಎರಡು ವರ್ಷಗಳ ಬೆಳೆ ವಿಫಲತೆ ಕಾರಣದಿಂದ ತನ್ನ ಹೊಲದಲ್ಲಿ ಸಣ್ಣಮ್ಮನ 30 ವರ್ಷದ ಮಗ ಜಯರಾಮು 2015 ರಲ್ಲಿ ಆತ್ಮಹತ್ಯೆಗೀಡಾದರು. ಆದರೆ ಆತನಿಗೆ ಬೆಳೆ ವಿಮೆ ಸಹಾಯಕ್ಕೆ ಬಂದಿಲ್ಲ. ಈ ಯೋಜನೆ ಮೋದಿರವರ 2018-19 ರ ಕೃಷಿ ಬಜೆಟ್ ನ ಕಾಲು ಭಾಗದಷ್ಟು ಅಂದರೆ 57,600 ಕೋಟಿ ರೂಗಳ ಅನುದಾನವನ್ನು ಪಡೆದಿದ್ದರೂ, ಹೇಗೆ ಸರ್ಕಾರಿ ವೆಚ್ಚದ ಹೆಚ್ಚಳ ಅಂತಿಮವಾಗಿ ಕಾರ್ಪೋರೆಟ್ ಗಳಿಗೆ ಅನುಕೂಲವಾಗುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ. ಈ ಯೋಜನೆಯ ಅಡಿಯಲ್ಲಿ ಬರುವ 18 ವಿಮಾ ಕಂಪನಿಗಳಲ್ಲಿ 13 ಖಾಸಗಿಯಾಗಿದ್ದು, ಈ ಎಲ್ಲವೂ ರಿಲಯನ್ಸ್ ಗ್ರೂಪ್, ಟಾಟಾ ಸನ್ಸ್, ಬಜಾಜ್ ಗ್ರೂಪ್ ಹಾಗೂ ಭಾರತಿ ಎಂಟರ್ಪ್ರೈಸಸ್ ನಂತಹ ಭಾರತದ ದೈತ್ಯ ಕಾರ್ಪೊರೇಟ್ ಉಧ್ಯಮಗಳ ಒಡೆತನಕ್ಕೆ ಒಳಪಟ್ಟಂತಹವು.
ಬಿಜೆಪಿ ಯೇತರ ನೇತೃತ್ವದ ರಾಜ್ಯ ಸರ್ಕಾರಗಳು ಬರಪರಿಹಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿವೆ. “2018-19 ರಲ್ಲಿ ಬರ ಪರಿಹಾರವಾಗಿ ಬಿಜೆಪಿ ಅಧಿಕಾರದಲ್ಲಿದ್ದ ಮಹಾರಾಷ್ಟ್ರ ವು 4700 ಕೋಟಿ ರೂ ಅನುದಾನ ಪಡೆದಿದೆ. ಆದರೆ ಕರ್ನಾಟಕ ಅತ್ಯಂತ ತೀವ್ರ ಹಾಗೂ ವಿಶಾಲ ವ್ಯಾಪ್ತಿಯಲ್ಲಿ ಬರಗಾಲದ ಬವಣೆಯಲ್ಲಿದ್ದರೂ ಕೇವಲ 949 ಕೋಟಿ ರೂ ಮಾತ್ರ ಪಡೆಯಿತು. ಇದು ಕಣ್ಣಿಗೆ ರಾಚುವ ತಾರತಮ್ಯ. ಬರಪರಿಹಾರದಲ್ಲಿ ರಾಜಕೀಯ ಮಾಡುವುದು ಅಮಾನವೀಯ” ಎನ್ನುತ್ತಾರೆ ಗ್ರಾಮೀಣಾಭಿವೃದ್ದಿ ಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ.
ಬಿಜೆಪಿ ಯ ಡಿ.ವಿ.ಸದಾನಂದ ಗೌಡ ಕೇಂದ್ರ ಸರ್ಕಾರದ ಸಾಂಖ್ಯಿಕ ಹಾಗೂ ಯೋಜನೆ ಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿ ಗಳು “ಇದೂಂದು ಸುಳ್ಳಿನ ಕಂತೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 2.4 ಲಕ್ಷ ಕೋಟಿ ಕೊಟ್ಟಿದೆ. ಇದು ಕಾಂಗ್ರೆಸ್ ಕೊಟ್ಟಿದ್ದಕ್ಕಿಂತ ಮೂರು ಪಟ್ಟು ಹೆಚ್ಚು “ಎಂದು ಆರೋಪಗಳನ್ನು ಅಲ್ಲಗಳೆಯುತ್ತಾರೆ.
ಬೆಲೆಗಳ ಸಮಸ್ಯೆ
ರೈತರ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ತಾವು ಪಡೆಯುವ ಕೃಷಿ ಉತ್ಪನ್ನಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ರೈತರಿಗೆ ಸಿಗುವ ಬೆಲೆಯ ಮಾಪಕವಾದ ಪ್ರಾಥಮಿಕ ಆಹಾರ ಸರಕಿನ ಸಗಟು ದರ ಸೂಚ್ಯಂಕ (WPI) ದ ಪ್ರಕಾರ 2013 -2014 ರಿಂದ ಸಗಟು ದರ ಸೂಚ್ಯಂಕ ಇಳಿಕೆ ಅಥವಾ ನಿಶ್ಚಲ ಸ್ಥಿತಿಯಲ್ಲಿದೆ. ಬೆಲೆಗಳ ಸಮಸ್ಯೆಗೆ ರಾಜಕಾರಣಿಗಳು ಆಗ್ಗಾಗ್ಗೆ ಆರೋಪಿಸುವಂತೆ ಮಳೆ ಕಾರಣ ಎನ್ನುತ್ತಿದ್ದರೆ, ಕರ್ನಾಟಕದ ಮಂಡ್ಯ, ಕೊಪ್ಪಳ ಹಾಗೂ ಕೋಲಾರ ಜಿಲ್ಲೆಗಳ ರೈತರ ಪ್ರಕಾರ ಕೃಷಿ ಬಿಕ್ಕಟ್ಟಿನ ಮೂಲ ಬೆಲೆಗಳಲ್ಲಿದೆ. ರೈತರು ಪಡೆಯುವ ದರ ವಿರಳವಾಗಿ ಲಾಭದಾಯಕವಾಗಿದ್ದು, ಅದರ ಏರಿಳಿತವು ರೈತರ ಜೀವನವನ್ನು ಹೆಚ್ಚು ಅನಿಶ್ಚಿತೆಗೊಳಿಸಿದೆ.
ಭತ್ತದ ಗದ್ದೆಯಲ್ಲಿ ಆತ್ಮಹತ್ಯೆಗೀಡಾದ ಮರೀಗೌಡ (50)ರ ಪತ್ನಿ ಚಿಕ್ಕತಾಯಮ್ಮ (42) “ಆಗಾಗ್ಗೆ ನಾವು ಹಲವು ಬರಗಳನ್ನು ಎದುರಿಸಿದ್ದೇವೆ. ಇದು ಪ್ರಕೃತಿಯಲ್ಲಿ ಸಾಮಾನ್ಯ. ಆದರೆ ಭತ್ತ ಮಾರಿದ್ದರಿಂದ ಬಂದ ಹಣ ಆ ವರ್ಷದ ರಸಗೊಬ್ಬರದ ಖರ್ಚಿಗೂ ಸಾಲದೇ ಇರುವುದನ್ನು ನನ್ನ ಗಂಡ ಎದುರಿಸಲಾರದೇ ಹೋದ” ಎಂದು ದುಃಖಿಸಿದಳು.
ಮರೀಗೌಡ ತೀರಿ ಹೋದ ನಂತರ ಅವಳು ಮತ್ತು ಅವಳ ಮಗ ತನ್ನ ಎರಡು ಎಕರೆ ಜಮೀನಿನ ಬೆಳೆಯನ್ನು ಕಬ್ಬು ಬೆಳೆಗೆ ಬದಲಾಯಿಸಿದರು. ಇತ್ತೀಚಿನ ಬೆಳೆಯನ್ನು ಟನ್ ಗೆ 2400 ರೂಗೆ ಮಾರಿದ್ದಾರೆ. ಕಡ್ಡಾಯವಾಗಿ ರೈತರಿಗೆ ಪಾವತಿಸಬೇಕಾದ, ಸರ್ಕಾರ ನಿಗದಿಪಡಿಸಿದ ನ್ಯಾಯ ಮತ್ತು ಲಾಭದಾಯಕ ಬೆಲೆ (ಈಖP) ಗಿಂತ ಇದು 350 ರೂ ಕಡಿಮೆ. ಕಾರ್ಖಾನೆಯು ಈ ಪಾವತಿಯನ್ನೂ ನಾಲ್ಕು ತಿಂಗಳು ವಿಳಂಬ ಮಾಡಿದೆ. “ಈ ಹಣ ಬರುವಷ್ಟರಲ್ಲಿ ಬೆಳೆ ಸಾಲದ ಬಡ್ಡಿ ಬೆಳೆದಿತ್ತು. ಬೆಳೆ ಖರ್ಚಿಗಿಂತ ಈಖP ದರವೇ ಕಡಿಮೆ ಇರುವಾಗ, ನಾವು ಈಖP ಗಿಂತ ಕಡಿಮೆ ದರಕ್ಕೆ ಮಾರಾಟ ಮಾಡಿದ್ದೇವೆ” ಎಂದು ಚಿಕ್ಕತಾಯಮ್ಮ ವಿವರಿಸಿದರು.
ಕಬ್ಬು ಬೆಳೆ ಖರ್ಚಿನ ಶೇಕಡಾ 77 ರಷ್ಟು ಸೇರಿಸಿ ಈಖP ನಿಗದಿಪಡಿಸಿದ್ದೇವೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಸಂದರ್ಶಿಸಿದ ಪ್ರತಿ ಕಬ್ಬು ಬೆಳೆಗಾರರು ನಿರಾಕರಿಸಿದರು. ಜಿಲ್ಲೆಯಲ್ಲಿದ್ದ ಏಕೈಕ ಸಾರ್ವಜನಿಕ ಕಾರ್ಖಾನೆಯನ್ನು 2013 ರಲ್ಲಿ ಮುಚ್ಚುವ ಮೂಲಕ ಸರ್ಕಾರ ಖರೀದಿಯಿಂದ ಅಧಿಕೃತವಾಗಿ ದೂರ ಉಳಿಯಿತು.
2017 ಮತ್ತು 2018 ರ ಕಬ್ಬು ಅರೆಯುವ ಅವಧಿಯಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಬ್ ನ ರೈತರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದರು. ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಒಡೆತನ ಅಥವಾ ನಿಯಂತ್ರಣದಲ್ಲಿರುವುದರಿಂದ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಸರ್ಕಾರಗಳು ತೀವ್ರವಾಗಿ ಸ್ಪಂದಿಸುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ದರ ಕುಸಿತಕ್ಕೆ ಒಳಗಾದಾಗ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ದೇಶ ಭಾರತ ಸಕ್ಕರೆ ಮೇಲಿನ ರಪ್ತು ತೆರಿಗೆಯನ್ನು ತೆಗೆದುಹಾಕಿತು. ಈ ವರ್ಷದ ಮೊದಲು ಸಕ್ಕರೆ ಕಾರ್ಖಾನೆಗಳಿಗೆ 10,500 ಕೋಟಿ ರೂ. ಉತ್ತೇಜಕ ಸಾಲದ ನೆರವು ನೀಡಿತ್ತು
ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಬಿಜೆಪಿ ಪುನಃ ಭರವಸೆ ನೀಡಿದೆ. 2015 ರಲ್ಲಿ ಅಧಿಕೃತವಾಗಿ ಬಿಜೆಪಿ ಸರ್ಕಾರ ವೇ ಸುಪ್ರೀಂ ಕೋರ್ಟ್ ಗೆ “ಉತ್ಪಾದನೆ ವೆಚ್ಚಕ್ಕೂ, ಕನಿಷ್ಠ ಬೆಂಬಲ ಬೆಲೆಗೂ ಯಾಂತ್ರಿಕ ಸಂಬಂಧ ಕಲ್ಪಿಸುವುದು ಉತ್ಪಾದನೆಯನ್ನು ನಿರುತ್ಸಾಹಗೊಳಿಸಲಿದೆ ಮತ್ತು ಮಾರುಕಟ್ಟೆಯನ್ನು ವಿಕೃತಿಗೊಳಿಸಲಿದೆ” ಎಂದು ಅಪಿಡವೆಟ್ ಸಲ್ಲಿಸಿ ತನ್ನ ಅಧಿಕೃತ ಧೋರಣೆಯನ್ನು ಪ್ರಕಟಪಡಿಸಿತ್ತು.
ಕನಿಷ್ಟ ಬೆಂಬಲ ಬೆಲೆಯಲ್ಲಿ `ಐತಿಹಾಸಿಕ` ಹೆಚ್ಚಳ ಎಂದು ಮೋದಿ ರವರು ಬಣ್ಣಿಸಿ ರೈತರ ಉತ್ಪನ್ನಗಳಿಗೆ ಶೇಕಡಾ 50 ರಷ್ಟು ಲಾಭಾಂಶ ನೀಡುವ ಚುನಾವಣಾ ಭರವಸೆ ಈಡೇರಿದಂತಾಗಿದೆ ಎಂಬುದನ್ನು 2018 ರ ತನಕವೂ ಪ್ರಕಟಿಸಿರಲಿಲ್ಲ. ಆದರೆ ಈ ಹೆಚ್ಚಳ ನಾಲ್ಕು ವರ್ಷಗಳಷ್ಟೂ ತುಂಬಾ ವಿಳಂಬ ಮಾತ್ರವೇ ಅಲ್ಲ ಜೊತೆಗೆ ಭೂ ಬಾಡಿಗೆಯನ್ನು ಪರಿಗಣಿಸದೆ ಅಸಮರ್ಪಕವಾಗಿತ್ತು. ಗೇಣಿ ಭೂಮಿಯಲ್ಲಿ ಬೇಸಾಯ ಮಾಡುವ ದೊಡ್ಡ ಸಂಖ್ಯೆಯ ರೈತರನ್ನು ಒಳಗೊಂಡಿರಲಿಲ್ಲ. ಹಲವಾರು ವರದಿಗಳು ಹೇಳುವಂತೆ ಸರ್ಕಾರ ಖರೀದಿಯಲ್ಲಿ ವಿಳಂಬ ಹಾಗೂ ನಿರಾಸಕ್ತಿ ವಹಿಸಿದ್ದರಿಂದ ಬೆಲೆಗಳ ಮೇಲೆ ಪರಿಣಾಮ ಬೀರಲು ಕನಿಷ್ಠ ಬೆಂಬಲ ಬೆಲೆ ಸಂಪೂರ್ಣ ವಿಫಲವಾಯಿತು.
ಕಟಾವು ಮುಗಿದ 45 ದಿನಗಳ ನಂತರವಷ್ಟೇ ಸರ್ಕಾರಿ ಖರೀದಿ ವ್ಯವಸ್ಥೆ ಪ್ರಾರಂಭವಾಯಿತು ಎಂದು ಮಂಡ್ಯ ಹಾಗೂ ಕೊಪ್ಪಳ ಜಿಲ್ಲೆಯ ಭತ್ತ ಬೆಳೆಗಾರರು ತಿಳಿಸಿದ್ದಾರೆ. ಹಣ ಪಾವತಿ ತಿಂಗಳುಗಟ್ಟಲೆ ವಿಳಂಬ ಆಗುವುದರಿಂದ ಸರ್ಕಾರಿ ಖರೀದಿ ಕೇಂದ್ರಕ್ಕೆ ಮಾರುವುದಿಲ್ಲ ಎಂದು ಸಣ್ಣ ರೈತರು ಅತೃಪ್ತಿ ವ್ಯಕ್ತಪಡಿಸಿದರು. ಹೀಗೆ ಇವರಿಗೆ ಒSP ಯ ಮೂರನೇ ಒಂದರಷ್ಟು ಕಡಿಮೆ ಬೆಲೆಗೆ ಖಾಸಗಿ ವ್ಯಾಪಾರಿಗಳಿಗೆ ಮಾರುವುದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ.
ಜಾಗತಿಕ ಮಾರುಕಟ್ಟೆಯ ಏರಿಳಿತಗಳು
ಉದಾರೀಕರಣಗೊಂಡ ವ್ಯಾಪಾರಿ ದೋರಣೆಗಳು ಈ ಬಿಕ್ಕಟ್ಟನ್ನು ಹೆಚ್ಚಿಸಿವೆ. ಗೋಧಿ, ದ್ವಿದಳ ಧಾನ್ಯಗಳು ಹಾಗೂ ಹಾಲು ಉತ್ಪನ್ನಗಳು ಮುಂತಾದ ಸರಕುಗಳ ಅನಿಯಂತ್ರಿತ ಅಮದು ಬೆಲೆಗಳ ಅನಿಶ್ಚಿತತೆಗೆ ಕೊಡುಗೆ ನೀಡಿದೆ. ವಳೆಗೆರಹಳ್ಳಿ ಯಲ್ಲಿ ರೇಷ್ಮೆ ಕೃಷಿಕರು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಗೆ ನೇರವಾಗಿ ಜೋಡಿಸಲ್ಪಟ್ಟಿದ್ದಾರೆ.
2015 ರಲ್ಲಿ ಕಚ್ಚಾ ರೇಷ್ಮೆಯ ಅಮದು ಸುಂಕವನ್ನು ಸರ್ಕಾರ ಕಡಿತಗೊಳಿಸಿದಾಗ ಸರಸಮ್ಮನ ಪ್ರಪಂಚ ತಲೆಕೆಳಗಾಯಿತು. ಜನವರಿ 2016 ರಲ್ಲಿ ಆಕೆಯ ಗಂಡ ನಾಥಪ್ಪ ರೇಷ್ಮೆ ಗೂಡನ್ನು ಪ್ರತಿ ಕೆಜಿಗೆ 80 ರೂನಂತೆ ಮಾರಾಟ ಮಾಡಿದ. ಇದು ಆತ ಸಾಮಾನ್ಯವಾಗಿ ಮಾರಾಟ ಮಾಡುತ್ತಿದ್ದ ದರದ ಕಾಲು ಭಾಗ. “ಇದಾದ ಒಂದು ವಾರದಲ್ಲೇ ಅವರು ಆತ್ಮಹತ್ಯೆಗೀಡಾದರು” ಎಂದು 37 ವರ್ಷದ ವಿಧವೆ ಕಣ್ಣು ಒರೆಸಿಕೊಂಡರು.
ನೋಟು ರದ್ದಿನ ಮರ್ಮಘಾತ
ಭಾರತೀಯ ಆರ್ಥಿಕತೆಗೆ ಹಣಕಾಸು ಆಘಾತಕಾರಿಯಾಗಿ ಎರಗಿದ ಮೋದಿ ರವರ ನವೆಂಬರ್ 2016 ನೋಟು ರದ್ದು ಸತತ ಬರಗಾಲದಿಂದ ತತ್ತರಿಸಿ ತೆವಳುತ್ತಾ ಚೇತರಿಸಿಕೊಳ್ಳುತ್ತಿದ್ದ ಗ್ರಾಮೀಣ ಭಾರತಕ್ಕೆ ಆದ ಮರ್ಮಘಾತ. ನೋಟು ರದ್ದು ಕೃಷಿ ಮಾರುಕಟ್ಟೆಯನ್ನು ಹಾಳುಗೆಡುವಿದೆ ಎಂದು ಎರಡು ವರ್ಷದ ನಂತರ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ಸಂಸದೀಯ ಸಮಿತಿ ಮುಂದೆ ಹೇಳಿಕೊಂಡಿದೆ. ನೋಟು ರದ್ದು ಕೆಟ್ಟ ಕಾಲದಲ್ಲಿ ಬಂದ ಮತ್ತೊಂದು ದುರ್ಘಟನೆ ಮಾತ್ರವೇ ಅಲ್ಲ. ಮುಂಗಾರು
ಬೆಳೆ(ಖಾರೀಪ್)ಮಾರಬೇಕಿತ್ತು ಅಥವಾ ಹಿಂಗಾರು (ರಾಬಿ)ಬೆಳೆಗೆ ಬೇಕಾದ ಸಾಮಗ್ರಿ ಖರೀದಿಸಬೇಕಿತ್ತು. ನಗದು ಕೊರತೆ ಈ ಎರಡು ಚಟುವಟಿಕೆಗಳನ್ನು ಸ್ಥಭ್ದಗೊಳಿಸಿತ್ತು.
ನೋಟು ರದ್ದು ಪರಿಣಾಮಕಾರಿಯಾಗಿ ಕೃಷಿ ಪೂರೈಕೆ ಸರಪಳಿಯನ್ನು ಹಾಳುಗೆಡುವಿತು. ಸರ್ಕಾರವು ಒಂದು ವಾರದಲ್ಲೇ ತನ್ನ ಅಂದಾಜಿನಿಂದ ಹಿಂದೆ ಸರಿದು ನೋಟು ರದ್ದು “ಕೃಷಿ ರಂಗವನ್ನು ಔಪಚಾರಿಕಗೊಳಿಸುತ್ತಿದೆ” ಎಂದು ಹೊಗಳಿ ಹೊಸ ವರದಿಯನ್ನು ತಯಾರಿಸಿತು. ಸಂದರ್ಶಿಸಿದ ಪ್ರತಿಯೊಬ್ಬ ರೈತನ ಬಳಿಯೂ ನೋಟು ರದ್ದು ಸಮಯದಲ್ಲಿ ಅವನು ಅನುಭವಿಸಿದ ಸಂಕಟದ ಕಥೆ ಇದ್ದು, ಸರ್ಕಾರದ ವಾದವನ್ನು ಅಲ್ಲಗಳೆಯುತ್ತವೆ. ಕೃಷಿ ಕೂಲಿಕಾರರು ಸಹ ಸಂಕಟಕ್ಕೀಡಾದರು. ಕೂಲಿಕಾರರಿಗೆ ಪಾವತಿಸಲು ರೈತರ ಬಳಿ ಹಣವೇ ಇರಲಿಲ್ಲವಾದ್ದರಿಂದ ಕೆಲಸಕ್ಕಾಗಿ ಪರಿತಪಿಸಬೇಕಾಯಿತು. ಹಳ್ಳಿಗಳಲ್ಲಿ ಕೆಲಸದ ಅವಕಾಶ ಕ್ಷೀಣಿಸಿದಾಗ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ಕೆಲಸ ಅರಸಿ ನಗರ, ಪಟ್ಟಣಗಳಿಗೆ ಸಾಮಾನ್ಯವಾಗಿ ಕೂಲಿಕಾರರು ವಲಸೆ ಹೋಗುತ್ತಾರೆ. ಭಾರತದ ಬೆಳೆಯುತ್ತಿರುವ ಕಟ್ಟಡ ನಿರ್ಮಾಣ ವಲಯದಲ್ಲಿ ಅಷೊತ್ತಿಗಾಗಲೇ ಐದು ಕೋಟಿ ಜನ ಉದ್ಯೋಗ ಕಂಡು ಕೊಂಡಿದ್ದರು. ಆದರೆ ನೋಟು ರದ್ದತಿ ಹಾಗೂ 2017 ರಿಂದ ಜಾರಿಗೆ ಬಂದ ಜಿ.ಎಸ್.ಟಿ. ಕಟ್ಟಡ ನಿರ್ಮಾಣ ವಲಯದ ಚಟುವಟಿಕೆಗಳನ್ನು ನಿಧಾನಗೊಳಿಸಿತು. ಉತ್ತರ ಕರ್ನಾಟಕದ ಕೊಪ್ಪಳ ದಲ್ಲಿ ನೂರಾರು ಜನ ತಮ್ಮ ಗ್ರಾಮಕ್ಕೆ ಮರಳಿದ್ದರು.
ಕೊಪ್ಪಳದ ಕುಷ್ಟಗಿಯ ಭೂ ಹೀನ ಕೂಲಿಕಾರ ಮಾಲಕ್ ಸಾಬ್ (37) “ರೈತರು ಯಂತ್ರಗಳನ್ನು ಬಳಸುತ್ತಿರುವುದು ಮತ್ತು ಕಡಿಮೆ ಬೆಳೆ ಬೆಳೆಯುತ್ತಿರುವುದರಿಂದ ಗ್ರಾಮದಲ್ಲಿ ಕೆಲಸ ಸಿಗುವುದು ಕಷ್ಟವಾಗಿದೆ. ಇದು ಗಾಯದ ಮೇಲೆ ಉಪ್ಪು ಸವರಿದಂತೆ. ಕಟ್ಟಡ ಕಾಮಗಾರಿ ಕೆಲಸಕ್ಕೆ ವಾಪಸ್ಸಾಗಲು ಇನ್ನು ಆರು ತಿಂಗಳು ಬೇಕು” ಎನ್ನುತ್ತಾ ನಿಟ್ಟುಸಿರು ಬಿಟ್ಟರು.
ತನ್ನ ಮಹತ್ವಾಕಾಂಕ್ಷಿ ಯೋಜನೆ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ವಿಫಲವಾಗಿದೆ. ಪ್ರತಿ ಸಾರಿಯೂ ವೇತನ ಪಾವತಿಯನ್ನು ವಿಳಂಬಿಸಲಾಗುತ್ತಿದೆ. ಜನ ಜೀವನ ನಿಸ್ತೇಜಗೊಂಡು ವ್ಯಾಪಕವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಈ ರೀತಿಯ ಅನುಷ್ಠಾನ ಗ್ರಾಮೀಣ ಬಡವರ ಬದುಕಿನಲ್ಲಿ ಮತ್ಯಾವ ಪರಿಣಾಮ ಬೀರಲು ಸಾಧ್ಯ.
ರೈತ ಚಳುವಳಿಗಳು
ಇತ್ತೀಚಿನ ವರ್ಷಗಳಲ್ಲಿ ರೈತರು ಹೆಚ್ಚಿನ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಭಾರತದ ಬಿಕ್ಕಟ್ಟು ನಗರದ ರಸ್ತೆಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತಿದೆ. ಬೆಲೆ ಕುಸಿತ ಖಂಡಿಸಿ ತಮ್ಮ ಉತ್ಪನ್ನಗಳನ್ನು ರಸ್ತೆಯಲ್ಲಿ ಸುರಿದು ಅಥವಾ ಸುಟ್ಟು ಪ್ರತಿಭಟಿಸುತ್ತಿರುವ ದೃಶ್ಯಗಳು ಕರುಣಾಜನಕವಾಗಿವೆ.
ಕಾರ್ಷಿಕ ಬಿಕ್ಕಟ್ಟಿನ ಕಾರಣದಿಂದ ರೈತ ಆತ್ಮಹತ್ಯೆಗಳು 2015 ರಲ್ಲಿ 2683 ವರದಿಯಾಗಿದ್ದು ಇದು ಹಿಂದಿನ ವರ್ಷದ ಸಂಖ್ಯೆ 628 ಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು. ರಾಷ್ಟ್ರೀಯ ಅಪರಾಧ ಅಂಕಿಸಂಖ್ಯೆಗಳು ಲಭ್ಯವಿರುವ ಕೊನೆ ವರ್ಷ 2016 ರಲ್ಲಿ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು.
ಆದರೆ, ಪ್ರತಿಭಟನೆಯೂ ಹೆಚ್ಚು ಸುಸಂಘಟಿತಗೊಳ್ಳುತ್ತಿದೆ. 2017 ರ ವರೆಗೂ ರೈತ ಸಂಘಟನೆಗಳು ತಮ್ಮ ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಗಳನ್ನು ನಡೆಸುತ್ತಿದ್ದವು. ನೋಟು ರದ್ದು ಮತ್ತು ತೀವ್ರ ಬೆಲೆ ಕುಸಿತದಲ್ಲಿ ವ್ಯಕ್ತವಾಗುತ್ತಿರುವ ತೀವ್ರಗೊಂಡ ಬಿಕ್ಕಟ್ಟು ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡಿವೆ.
ಆ ವರ್ಷ ಲಾಭದಾಯಕ ಬೆಲೆ ಹಾಗೂ ಸಾಲ ಮನ್ನಾ ಬೇಡಿಕೆಗಳ ಆಧಾರದಲ್ಲಿ ಸುಮಾರು 150 ರೈತಾಪಿ ಸಂಘಟನೆಗಳು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ರಚಿಸಿಕೊಂಡವು. 2018 ರಲ್ಲಿ ,ವಿವಿದೆಡೆಗಳಿಂದ ಬಂದ ನಾಲ್ಕು ಬೃಹತ್ ರ್ಯಾಲಿಗಳು ದೇಶದ ರಾಜಧಾನಿ ನವ ದೆಹಲಿಯಲ್ಲಿ ಸಮಾವೇಶಗೊಂಡು ಪ್ರತಿಭಟನಾ ಅಲೆಯನ್ನೇ ಎಬ್ಬಿಸಿದವು.
ವ್ಯಾಪಕ ಸಾಮಾಜಿಕ ಸಂಯೋಜನೆ ಒಳಗೊಂಡ ಕಾರಣದಿಂದ ಸಹ ಈ ಕಾರ್ಷಿಕ ಪ್ರತಿಭಟನೆ ಪ್ರಾಮುಖ್ಯತೆ ಪಡೆದಿದೆ. “ಗ್ರಾಮೀಣ ಸಮಾಜದ ವಿವಿಧ ಸ್ತರಗಳ ರೈತಾಪಿ ಸಮೂಹವನ್ನು ಒಟ್ಟಾಗಿ ಸೆಳೆದಿರುವುದರಿಂದ ನಮ್ಮ ಈ ಪ್ರತಿಭಟನೆ ಅತ್ಯಂತ ಮಹತ್ವಪೂರ್ಣವಾದುದ್ದಾಗಿದೆ” ಎಂದು 1.5 ಕೋಟಿ ಸದಸ್ಯತ್ವದ ಅಖಿಲ ಭಾರತ ಕಿಸಾನ್ ಸಭಾ ದ ಜಂಟಿ ಕಾರ್ಯದರ್ಶಿ ವಿಜು ಕೃಷ್ಣನ್ ಅಭಿಪ್ರಾಯ ಪಡುತ್ತಾರೆ
ಗ್ರಾಮೀಣ ಮತ
2018 ರಲ್ಲಿ ಮೂರು ಮುಖ್ಯ ರಾಜ್ಯಗಳ ಬಿಜೆಪಿ ಸೋಲಿಗೆ ಗ್ರಾಮೀಣ ಮತವೇ ಕಾರಣ ಎಂದು ವ್ಯಾಪಕವಾಗಿ ಆರೋಪಿಸಲಾಗುತ್ತಿದೆ. ಅಂದಿನಿಂದ ಎಲ್ಲ ರಾಜಕೀಯ ಪಕ್ಷಗಳು ಸಾಲ ಮನ್ನಾ ಮತ್ತು ರೈತರ ಖಾತೆಗೆ ಹಣ ಹಾಕುವ ಯೋಜನೆ ಪ್ರಕಟಿಸುತ್ತಿವೆ.ಈ ವರ್ಷದ ಫೆÉಬ್ರವರಿ ಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ವಾರ್ಷಿಕ 6000 ರೂ. ಹಣ ನೀಡುವ ರಾಷ್ಟ್ರೀಯ ನಗದು ವರ್ಗಾವಣೆ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಕಟಿಸಿತು. ಕಾಂಗ್ರೆಸ್ ಪ್ರಣಾಳಿಕೆ ಐದು ಕೋಟಿ ಕಡು ಬಡವರಿಗೆ ಅಷ್ಟೇ ಮೊತ್ತವನ್ನು ಪ್ರತಿ ತಿಂಗಳು ನೀಡುವುದಾಗಿ ಘೋಷಿಸಿದೆ.
ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ರೈತ ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಬಿಜೆಪಿ ಕೂಡ ಒಂದು ಲಕ್ಷ ರೂ ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಹೇಳಿದರೆ, ಕಾಂಗ್ರೆಸ್ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಹಾಗೂ ಪ್ರತ್ಯೇಕ ಕೃಷಿ ಬಜೆಟ್ ಮಾಡುವುದಾಗಿ ಭರವಸೆ ನೀಡಿದೆ. ದಶಕಗಳಿಂದ ವ್ರಣಗೊಂಡು ಉಲ್ಬಣವಾಗಿರುವ ಬಿಕ್ಕಟ್ಟನ್ನು ಈ ರಾಜಕೀಯ ಪಕ್ಷಗಳು ಹೇಗೆ ನಿಭಾಯಿಸಲಿವೆ ಎಂಬುದನ್ನು ಮುಂದೆ ನೋಡಬೇಕಿದೆ. ಆದರೆ ಈಗ ವಳೆಗೆರಹಳ್ಳಿ ಯ ಎಲ್ಲ ರೈತರು ಈ ಭರವಸೆಗಳನ್ನು ನಂಬುತ್ತಿಲ್ಲ.
“ಬೆಲೆ ಬಗ್ಗೆ ಏನು? ಮತ್ತೊಮ್ಮೆ ನಮ್ಮ ಬೆಳೆ ಮಾರುವಾಗ ಈ ಹಣ ಹಾಕುವ ಯೋಜನೆ ಹೇಗೆ ಖಾತರಿ ನೀಡುತ್ತದೆ, ಇವೆಲ್ಲವನ್ನೂ ನಾವು ಹೇಗೆ ತಿಳಿಯುವುದು, ನೀವು ಮತ್ತೇ ಇಲ್ಲಿಗೆ ಬರುವ ಹೊತ್ತಿಗೆ ನಾವು ಇದ್ದವೂ ಇಲ್ಲವೋ, ನಮ್ಮ ಕುಟುಂಬದವರನ್ನು ನೀವು ಮಾತನಾಡಿಸುವುದಿಲ್ಲ ಎಂದು ನಾನು ಹೇಗೆ ಹೇಳಲಿ?”ಎಂದು , ತನ್ನ ಗ್ರಾಮದ ಮತ್ತೊಬ್ಬರನ್ನು ಕಳೆದುಕೊಂಡು ದುಃಖತಪ್ತನಾದ 32 ವರ್ಷದ ರೈತ ಉಮೇಶ್ ಕೇಳುತ್ತಾನೆ. ಇವರ ಪ್ರಕಾರ ಇದು ಒಂದು ಮುಗಿಯದ ಮಾನವ ನಿರ್ಮಿತ ದುರಂತ.
– ದೀಪಾ ಕುರುಪ್ (ಕನ್ನಡಕ್ಕೆ : ಟಿ.ಯಶವಂತ)
ಕೃಪೆ: ಅಲ್ ಜಜೀರಾ
ಮೂಲ ಲೇಖನ ಓದಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ2 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ದಿನದ ಸುದ್ದಿ6 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ಅಂಕಣ1 day agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ1 day agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ



