Connect with us

ಸಿನಿ ಸುದ್ದಿ

ಹಾಲಿವುಡ್ ನಟಿ ‘ಲುಪಿತಾ’ಅಂತರಂಗದ ಮಾತುಗಳು : ಮಿಸ್ ಮಾಡ್ದೆ ಓದಿ ; ಅಭಿಪ್ರಾಯ ತಿಳಿಸಿ

Published

on

  • ಹಾಲಿವುಡ್ ನಟಿ ಲುಪಿತಾ ನ್ಯೋಂಗೊಗೆ ಮೊನ್ನೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಸ್ಟೀವ್ ಮಕೀನ್ ನಿರ್ದೇಶನದ “12 Years a Slave ಚಿತ್ರದಲ್ಲಿ ಪಾಟ್ಸಿ ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ ಈಕೆಗೆ ’ಅತ್ಯುತ್ತಮ ಪೋಷಕನಟಿ’ ಪ್ರಶಸ್ತಿ ಲಭಿಸಿದೆ. ಈ ಕೀನ್ಯಾ ಮೂಲದ ಪೋಷಕರನ್ನು ಹೊಂದಿರುವ ಮೆಕ್ಸಿಕನ್ ಕಪ್ಪು ವರ್ಣದ ತಾರೆಗೆ ಆಸ್ಕರ್ ಪ್ರಶಸ್ತಿ ಲಭಿಸುವ ಮುನ್ನ ‘ಎಸೆನ್ಸ್ ಮ್ಯಾಗಜೀನ್’ ಎಂಬ ಪ್ರಸಿದ್ಧ ಸಿನಿಮಾ ಪತ್ರಿಕೆ ’ಬ್ಲಾಕ್ ವಿಮೆನ್ ಇನ್ ಹಾಲಿವುಡ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆ ಪ್ರಶಸ್ತಿ ಆಕೆ ಸ್ವೀಕರಿಸುವಾಗ ಮಾಡಿದ ಭಾಷಣದಲ್ಲಿ ತನ್ನ ಅಂತರಂಗದ ಸೌಂದರ್ಯವನ್ನು ಬಿಚ್ಚಿಟ್ಟಳು. ಅವಳಾಡಿದ ಮಾತುಗಳನ್ನು ಅನುವಾದಿಸಿ ಬರಹ ರೂಪದಲ್ಲಿರಿಸಿದ್ದೇನೆ.

-ಅನುವಾದ ಮತ್ತು ಬರಹ ರೂಪ : ಹರ್ಷಕುಮಾರ್ ಕುಗ್ವೆ

“ಹುಡುಗಿಯೊಬ್ಬಳು ನನಗೆ ಬರೆದಿದ್ದ ಪತ್ರದ ಒಂದೆರಡು ಸಾಲುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ‘ಪ್ರಿಯ ಲುಪೀಟಾ, ರಾತ್ರೋ ರಾತ್ತಿ ಹಾಲಿವುಡ್‌ನಲ್ಲಿ ಯಶಸ್ಸು ಕಂಡ ನೀನು ಇಷ್ಟು ಕಪ್ಪಗಿರಲಿಕ್ಕೆ ನಿಜಕ್ಕೂ ಅದೃಷ್ಟ ಮಾಡಿದ್ದೆ ಅನ್ನಿಸುತ್ತ್ತಿದೆ. ನಾನು ನನ್ನ ಚರ್ಮವನ್ನು ಬೆಳ್ಳಗಾಗಿಸಲು ಫೇರ್‌ನೆಸ್ ಕ್ರೀಮ್ ಒಂದನ್ನು ಕೊಳ್ಳುವುದರಲ್ಲಿದ್ದೆ. ಅಷ್ಟರಲ್ಲಿ ನೀನು ಪ್ರಪಂಚದ ಭೂಪಟದಲ್ಲಿ ಕಾಣಿಸಿಕೊಂಡು ನನ್ನನ್ನು ಉಳಿಸಿದೆ”.

ಆ ಹುಡುಗಿ ಬರೆದ ಪತ್ರದ ಈ ಸಾಲುಗಳನ್ನು ಓದಿದ ನನ್ನ ಹೃದಯದಿಂದ ಕೊಂಚ ರಕ್ತ ಒಸರಿದಂತಾಯಿತು. ಶಾಲೆಯಿಂದ ಹೊರಬಿದ್ದೊಡನೆ ನಾನು ಆರಿಸಿಕೊಂಡ ಕೆಲಸ ನನ್ನನ್ನು ಈ ಮಟ್ಟಕ್ಕೆ ಪ್ರಭಾವಿಯನ್ನಾಗಿ ಮಾಡುತ್ತದೆ ಎಂಬ ಕಲ್ಪನೆಯೂ ನನಗಿರಲಿಲ್ಲ. ‘ಕಲರ್ ಪರ್ಪಲ್’ನ ಆ ಮಹಿಳೆಯರು ನನ್ನ ಪಾಲಿಗೆ ಹೇಗೆ ಆಶಾಭಾವನೆ ತುಂಬಿದ್ದರೋ ಅದೇ ರೀತಿಯಲ್ಲಿ ನಾನೂ ಇತರರಿಗೆ ಸ್ಪೂರ್ತಿಯಾಗಿ ನಿಲ್ಲುವ ದೃಶ್ಯವನ್ನು ನಾನು ಕಲ್ಪಸಿಕೊಂಡೂ ಇರಲಿಲ್ಲ. ’ನಾನು ಸುಂದರವಾಗಿಲ್ಲ; ಕಪ್ಪಾಗಿದ್ದೇನೆ ಎಂದು ನನಗೆ ನಾನೇ ಪದೇಪದೇ ಹೇಳಿಕೊಳ್ಳುತ್ತಿದ್ದ ದಿನಗಳು ನನಗೆ ನೆನಪಾಗುತ್ತವೆ. ಟಿ.ವಿ ಆನ್ ಮಾಡಿದರೆ ಸಾಕು ಬರೀ ಬಿಳಿಮುಖಗಳನ್ನು ನೋಡುತ್ತಿದ್ದೆ. ನನ್ನ ನಿಶಾವರ್ಣದ ಬಗ್ಗೆ ಅಪಹಾಸ್ಯಪರಿಹಾಸ್ಯಕ್ಕೊಳಗಾಗುತ್ತಿದ್ದೇನೆನಿಸುತ್ತಿತ್ತು.

ಪವಾಡಗಳನ್ನೇ ಜರುಗಿಸುವ ಆ ದೇವರಿಗೆ ನನ್ನ ಒಂದೇ ಒಂದು ಪ್ರಾರ್ಥನೆ ಏನಾಗಿತ್ತೆಂದರೆ ನಾನು ಬೆಳಿಗ್ಗೆ ಹಾಸಿಗೆ ಬಿಟ್ಟು ಏಳುತ್ತಿದ್ದಂತೆ ನನ್ನ ತ್ವಚೆ ಬೆಳ್ಳಗಾಗಲಿ ಎಂದಾಗಿತ್ತು. ಏಳುವಾಗ ದೇವರೇನಾದರೂ ನನ್ನ ವಿನಂತಿ ಆಲಿಸಿ ಕೃಪೆ ತೋರಿರಬಹುದೇ ಎಂಬ ಆಸೆಯ ಕಣ್ಣುಗಳಿಂದ ಕನ್ನಡಿ ಬಳಿ ಓಡುತ್ತಿದ್ದೆ. ಕತ್ತು ಬಗ್ಗಿಸಿ ಮೈ ನೋಡಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ನಾನು ಮೊದಲು ನೋಡಿಕೊಳ್ಳಬಯಸುತ್ತಿದ್ದುದು ಬೆಳ್ಳಗಾಗಿ ಬದಲಾದ ಮುಖಾರವಿಂದವನ್ನು. ಆದರೆ ಪ್ರತಿದಿನವೂ ನನಗೆ ಅದೇ ಆಶಾಭಂಗವಾಗುತ್ತಿತ್ತು. ರಾತ್ರಿ ಮಲಗುವಾಗ ಹೇಗಿತ್ತೋ ಬೆಳಗೆದ್ದು ನೊಡಿಕೊಂಡಾಗಲೂ ಹಾಗೇ ಇರುತ್ತಿತ್ತು ನನ್ನ ಮುಖ. ಕೊನೆಗೆ ದೇವರೊಂದಿಗೆ ಒಂದು ಚೌಕಾಸಿ ಕುದುರಿಸಲು ನೋಡಿದೆ.

ಆತನೇನಾದರೂ ನನ್ನ ಬೇಡಿಕೆ ಈಡೇರಿಸಿದರೆ ನಾನು ಸಕ್ಕರೆ ಉಂಡೆಗಳನ್ನು ಕದಿಯುವುದನ್ನು ನಿಲ್ಲಿಸಿಬಿಡುವ ಮಾತುಕೊಟ್ಟೆ. ಮಾತ್ರವಲ್ಲದೇ ದೇವರೇನಾದರೂ ನನ್ನನ್ನು ಸ್ವಲ್ಪವಾದರೂ ಬೆಳ್ಳಗೆ ಮಾಡಿದ್ದೇ ಆದಲ್ಲಿ ಅಮ್ಮ ಹೇಳುವ (ಇಲ್ಲೇ ಕುಳಿತಿದ್ದಾರೆ ಅಮ್ಮ) ಪ್ರತಿ ಮಾತನ್ನೂ ಚಾಚೂ ತಪ್ಪದೆ ಪಾಲಿಸುತ್ತೇನೆ ಮತ್ತು ಸ್ಕೂಲ್ ಸ್ವೆಟರ್‌ನ್ನು ಎಂದೂ ಕಳೆದುಕೊಂಡು ಮನೆಗೆ ಬರಲ್ಲ ಎಂದೂ ಮಾತುಕೊಟ್ಟೆ. ಆದರೆ ಈ ಯಾವ ಭರವಸೆಗಳೂ ದೇವರ ಮೇಲೆ ಪರಿಣಾಮ ಬೀರಲಿಲ್ಲ. ಅವನು ನನ್ನ ಮಾತುಗಳನ್ನು ಕೆಳಿಸಿಕೊಂಡೇ ಇರಲಿಲ್ಲ.
ನಾನು ಹದಿವಯಸ್ಸಿನವಳಾದಾಗ ನನ್ನ ಬಣ್ಣದ ಮೇಲೆ ನನಗಿದ್ದ ದ್ವೇಶ ಇನ್ನೂ ಹೆಚ್ಚಾಯಿತು. ನನ್ನ ಅಮ್ಮನೇನೋ ಆಗಾಗ ನನ್ನನ್ನು ‘ನೀನು ಚೆಂದ ಇದ್ದೀಯ ಕಣೆ’ ಎಂದು ಉಸುರುತ್ತಿದ್ದಳು.

ಆದರೆ ಅದು ನನಗೆನೂ ಸಮಾಧಾನ ತರುತ್ತಿಲಿಲ್ಲ. ಎಷ್ಟೆಂದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ. ಅಮ್ಮ ಹೇಳುತ್ತಿದ್ದುದೂ ಹಾಗೇ ಅಂದುಕೊಳ್ಳುತ್ತಿದ್ದೆ. ಆ ಹೊತ್ತಿನಲ್ಲಿ ಅಂತರ ರಾಷ್ರ ಮಟ್ಟದಲ್ಲಿ ಹೆಸರುವಾಸಿಯಾದ ಮಾಡೆಲ್ ತಾರೆ ಅಲೆಕ್ ವೆಕ್ ತೆರೆಯ ಮೇಲೆ ಕಾಣಿಸಿಕೊಂಡರು ನೋಡಿ. ಆಕೆಯೂ ಕತ್ತಲಿನಷ್ಟೇ ಕಡುಗಪ್ಪು ವರ್ಣದವಳು. ಆದರೂ ಪ್ರತಿಯೊಂದು ಮ್ಯಾಗಝೀನ್ ಹಾಗೂ ಪ್ರತಿಯೊಬ್ಬರ ಬಾಯಲ್ಲಿ ಆಕೆಯ ಚೆಲು”ನ ಬಗ್ಗೆ ಪುಂಖಾನುಪುಂಖವಾಗಿ ಮಾತುಗಳು ಕೇಳಿಬರುತ್ತಿದ್ದವು. ಓಪ್ರಾ ಕೂಡಾ ಆಕೆಯನ್ನು ಚೆಲುವೆ ಎಂದು ಹೇಳಿದ ಮೇಲೆ ಅದು ನಿಜಸಂಗತಿಯೇ ಸರಿ.

ನನ್ನದೇ ಬಣ್ಣದ ಮಹಿಳೆಯೊಬ್ಬಳನ್ನು ಜನರು ಸುಂದರಿ ಎಂದು ಸ್ವೀಕರಿಸುತ್ತಿರುವುದು ನನಗೆ ನನ್ನ ಕಣ್ಣುಗಳನ್ನೇ ನಂಬದಂತೆ ಮಾಡಿತ್ತು. ನನ್ನಲ್ಲಿ ನನ್ನ ಮುಖದ ಬಣ್ಣವೇ ನನಗೆ ಒಂದು ದೊಡ್ಡ ತಡೆ ಎಂದುಕೊಂಡಿದ್ದವಳು ನಾನು. ಆದರೆ ಇಲ್ಲಿ ಒಪ್ರಾ ಅದು ಹಾಗಲ್ಲ ಎನ್ನುತ್ತಿದ್ದರು. ನಾನು ನಿಜಕ್ಕೂ ಗೊಂದಲಕ್ಕೆ ಬಿದ್ದೆ. ನನ್ನ ಮನಸ್ಸು ಓಪ್ರಾ ಮಾತನ್ನು ನಿರಾಕರಿಸತೊಡಗಿತ್ತು. ಯಾಕೆಂದರೆ ನನ್ನದೇ ಅಸಮರ್ಪಕತೆಯ ಮೋಹಕ್ಕೆ ನಾನು ಹೊಂದಿಕೊಂಡಿದ್ದೆ.

ಆದರೂ ನನ್ನೊಳಗೇ ಇದ್ದ ಹೂವೊಂದು ಅರಳುತ್ತಿತ್ತು. ಅಲೆಕ್ ಅವರನ್ನು ನೋಡಿದಾಗ ನಾನು ಆಕೆಯಲ್ಲಿ ನನ್ನನ್ನೇ ಕಂಡುಕೊಂಡಿದ್ದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೂ ನನ್ನ ಸುತ್ತಲಿನ ವಾತಾವರಣದಲ್ಲಿ ಬಿಳಿಚರ್ಮಕ್ಕೆ ಆದ್ಯತೆ ನೀಡುವುದು ಇದ್ದೇ ಇತ್ತು. ಎಲ್ಲರ ದೃಷ್ಟಿಯಲ್ಲಿ ನಾನು ಸುಂದರವಲ್ಲ ಎಂಬ ಭಾವನೆ ಕೊರೆಯುತ್ತಲೇ ಇತ್ತು. ಆ ಕುರಿತು ಯೋಚಿಸಿದಾಗಲೆಲ್ಲ ಮತ್ತೆ ನಾನು ಸುಂದರಳಲ್ಲ ಎನ್ನಿಸತೊಡಗುತ್ತಿತ್ತು. ಆಗ ಅಮ್ಮ ಹೇಳುತ್ತಿದ್ದ ಮಾತು ಇಷ್ಟೆ- “ಸೌಂದರ್ಯವನ್ನು ತಿನ್ನೋಕಾಗಲ್ಲ, ಅದೇನೂ ನಿನಗೆ ಹೊಟ್ಟೆ ತುಂಬಿಸಲ್ಲ”. ಅವಳ ಈ ಮಾತುಗಳು ನನಗೆ ಬಹಳ ತಾಗಿದವು. ಸೌಂದರ್ಯ ಎನ್ನುವುದು ನಾವು ಸ್ವಾದೀನಪಡೆದುಕೊಳ್ಳಬಹುದಾದ ಅಥವಾ ನಾವು ಭೋಗಿಸುವಂತಹದ್ದಲ್ಲ. ಸೌಂದರ್ಯ ಏನಿದ್ದರೂ ನಾನು ಇರಬೇಕಾದ ಸ್ಥಿತಿ, ರೀತಿ ಎಂದು ನನಗೆ ಮನವರಿಕೆಯಾಗುವವರೆಗೂ ಅಮ್ಮ ಹೇಳಿದ್ದ ಆ ಮಾತಿನ ಅರ್ಥ ಏನೆಂದು ನನಗಾಗಿರಲಿಲ್ಲ.

’ನೀನು ನಿನ್ನ ಸೌಂದರ್ಯವನ್ನು ತಿನ್ನೋಕಾಗಲ್ಲ’ ಎಂದು ಅಮ್ಮ ಹೇಳಿದ್ದರ ಅರ್ಥ ನಮ್ಮನ್ನು ನಾವು ಉಳಿಸಿಕೊಳ್ಳುವುದು ನಾವು ಹೇಗೆ ಕಾಣುತ್ತೇವೆ ಎನ್ನುವುದನ್ನು ಅವಲಂಬಿಸಿಲ್ಲ ಎಂದು. ನಿಜದಲ್ಲಿ ನಮ್ಮನ್ನು ಉಳಿಸುವುದು ಮತ್ತು ಮೂಲಭೂತವಾಗಿ ಸುಂದರವಾದದ್ದು ಎಂದರೆ ನಮ್ಮೊಳಗಡೆ ನಮ್ಮ ಬಗೆಗೆ ಮತ್ತು ನಮ್ಮ ಸುತ್ತಲಿರುವವರ ಬಗೆಗೆ ನಾವು ಹೊಂದಿರುವ ದಯೆ; ಕರುಣೆ ಮಾತ್ರ. ಈ ಬಗೆಯ ಸೌಂದರ್ಯ ಹೃದಯವನ್ನು ಬೆಳಗಿಸಬಲ್ಲದು ಮತ್ತು ಆತ್ಮಕ್ಕೆ ಆಹ್ಲಾದವನ್ನುಂಟುಮಾಡಬಲ್ಲದು.

ನಾನು ಅಭಿನಯಿಸಿದ ಪಾತ್ರವಾದ ಪ್ಯಾಟ್ಸಿ ತನ್ನ ಒಡೆಯನೊಂದಿಗೆ ಅಷ್ಟೊಂದು ತೊಂದರೆ ಎದುರಿಸಿದ್ದೂ ಇದಕ್ಕಾಗಿಯೇ. ಅಲ್ಲದೆ ಆಕೆಯ ಈ ಕತೆಯನ್ನು ಇಲ್ಲಿಯವರೆಗೆ ಉಳಿಸಿಕೊಂಡು ಬಂದಿದ್ದೂ ಇದೇ. ಅವಳ ದೇಹದ ಸೌಂದರ್ಯ ಮಸುಕಾದ ಮೇಲೂ ಅವಳಲ್ಲಿನ ಸ್ಪೂರ್ತಿಯ ಸೌಂದರ್ಯವನ್ನು ನಾವು ನೆನಪಿಸಿಕೊಳ್ಳಬಹುದು.ನೀವು ಓದುವ ಮ್ಯಾಗಝೀನ್‌ಗಳಲ್ಲಿ, ಮತ್ತು ನಿಮ್ಮ ಟಿವಿಗಳ ಪರದೆಗಳ ಮೇಲೆ ನನ್ನ ಬರುವಿಕೆ ಯುವತಿಯರನ್ನೆಲ್ಲಾ ನನ್ನದೇ ಬಗೆಯ ಪಯಣದಕ್ಕೆ ಕೊಂಡೊಯ್ಯಲಿ.

ಬಾಹ್ಯ ಸೌಂದರ್ಯವನ್ನು ಗುರುತಿಸಿಕೊಳ್ಳುವುದರ ಜೊತೆಗೆ ಅಂತರಂಗದಲ್ಲಿ ಸುಂದರವಾಗಿ ಕಾಣುವ ಉದ್ದಿಮೆಯಲ್ಲಿ ಇನ್ನೂ ಆಳವಾಗಿ ತೊಡಗಿಸಿಕೊಳ್ಳುವ ಪಯಣ ನಿಮ್ಮದೂ ಆಗಲಿ ಎಂದು ಆಶಿಸುತ್ತೇನೆ. ನಾನು ಹೇಳಿದ ಈ ಅಂತರಂಗದ ಸೌಂದರ್ಯಕ್ಕೆ ಕಪ್ಪುಛಾಯೆ ಇರುವುದಿಲ್ಲ ಎಂದು ನೆನಪಿರಲಿ.
ಧನ್ಯವಾದಗಳು.

12 Years a Slave’ ಸಿನೆಮಾ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾಗರ | ಇಂದು ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಪುಸ್ತಕಗಳ ಬಿಡುಗಡೆ

Published

on

ಸುದ್ದಿದಿನ,ಸಾಗರ : ಅ.ರಾ.ಶ್ರೀನಿವಾಸರು ಬರೆದ ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಈ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಇಂದು ಸಂಜೆ ಪಟ್ಟಣದ ಸಿಜಿಕೆ ಸಭಾಭವನದಲ್ಲಿ ಅಂತರಂಗ ಪ್ರಕಾಶನ ಹಮ್ಮಿಕೊಂಡಿದೆ.

ಪುಸ್ತಕಗಳ ಬಿಡುಗಡೆಯನ್ನು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಎಂ.ವಿ ಮಾಡಲಿದ್ದು, ಅಧ್ಯಕ್ಷತೆಯನ್ನುನಿವೃತ್ತ ಪ್ರಾಂಶುಪಾಲರಾದ ಅ.ರಾ.ಲಂಬೋದರ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ‘ಆರು ಲಘು ನಾಟಕಗಳು’ ಕುರಿತು ನಿವೃತ್ತ ಪ್ರಾಂಶುಪಾಲರು ಡಾ. ಜಯಪ್ರಕಾಶ್ ಮಾವಿನಕುಳಿ ಹಾಗೂ ‘ಗುಚ್ಛ’ ಕುರಿತು ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕರು ಜಯಪ್ರಕಾಶ್ ತಲವಾಟ ಅವರು ಮಾತನಾಡಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ

Published

on

ಸುದ್ದಿದಿನಡೆಸ್ಕ್: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್(93) ಅವರು ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ತಿಂಗಳಲ್ಲಿ ಕುಸಿದು ಬಿದ್ದಿರುವುದರಿಂದ ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬೆಳಿಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತಗಾರ ಆಗಿರುವ ಅವರು ಸರೋದ್ ವಾದಕರೂ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ

Published

on

ಸುದ್ದಿದಿನಡೆಸ್ಕ್: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ಚಲನಚಿತ್ರ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ.

ಈ ಸಂಬಂಧ ನಾಳೆ ಚಿತ್ರದುರ್ಗದಲ್ಲಿನ ವಿವಿಧ ಸಂಘಟನೆಗಳು ದರ್ಶನ್ ವಿರುದ್ಧ ಪ್ರತಿಭಟಿಸಿ ತನಿಖೆ ಪಾರದರ್ಶಕವಾಗಿರ ಬೇಕು ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಡಿಸಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.

ಮೈಸೂರಿನ ದರ್ಶನ್ ಒಡೆತನದ ಫಾರ್ಮ್ ಹೌಸ್‌ನಲ್ಲಿ ೧೦ ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿವೆ. ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಬೆಂಗಳೂರಿನ ಸುಮನಹಳ್ಳಿ ಬಳಿಯ ವೃಷಭಾವತಿ ನಾಲೆಯಲ್ಲಿ ಅಪಾರ್ಟ್‌ಮೆಂಟ್ ಕಟ್ಟಡದ ಮುಂಭಾಗದಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿತ್ತು. ದರ್ಶನ್ ಚಿತ್ರದುರ್ಗ ಅಭಿಮಾನಿಗಳ ಸಂಘದ ಅಧ್ಯಕ್ಷರಿಗೆ ಕರೆ ಮಾಡಿ ರೇಣುಕಾಸ್ವಾಮಿ ಎಲ್ಲಿದ್ದಾರೆ ಎಂಬುದನ್ನು ಪತ್ತೆಮಾಡಿ ಬೆಂಗಳೂರಿಗೆ ಕರೆತರುವಂತೆ ಹೇಳಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending