Connect with us

ರಾಜಕೀಯ

‘ಗುಂಡಿಕ್ಕಿ ಕೊಲ್ಲಿ’ ಎನ್ನುವವರ ಮಧ್ಯೆ ಮಾನವೀಯತೆ..!

Published

on

ಕೋವಿಡ್-19 ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಏಪ್ರಿಲ್ 7 ರಂದು ದಾವಣಗೆರೆಯಲ್ಲಿ ಕೊರೊನಾ ‘ಚಿಕಿತ್ಸೆಗೆ ಸಹಕರಿಸದ ತಬ್ಲೀಗಿಗಳಿಗೆ ಗುಂಡಿಕ್ಕಿದರೂ ತಪ್ಪಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತು ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಹೇಳಿಕೆ ಇಡೀ ಮನುಕುಲವೆಂಬ ಹಾಲಿನ ಪಾತ್ರೆಗೆ ಹುಳಿ ಹಿಂಡುವ ಕಾರ್ಯವೇ ಸರಿ.

ಅವರ ಹೇಳಿಕೆ ನಂತರ ದೇಶದಲ್ಲಿ ಎರಡು ಘಟನೆಗಳು ನಡೆದವು. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಲೋಯೈತೊಲದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳ ನಡುವೆ ವಾಸಿಸುತ್ತಿರುವ ಏಕೈಕ ಹಿಂದೂ ಕುಟುಂಬದ ಹಿರಿಯ ಜೀವ ವಿನಯ್ ಸಾಹಾ (90) ವಯೋಸಹಜ ಅನಾರೋಗ್ಯದಿಂದ ಮೃತಪಟ್ಟರು. ಲಾಕ್‍ಡೌನ್ ಇರುವ ಸಂದರ್ಭದಲ್ಲಿ ಅಂತ್ಯ ಸಂಸ್ಕಾರ ಮಾಡುವುದು ಹೇಗೆಂದು ಮಕ್ಕಳು ಚಿಂತಿಸುತ್ತಿರುವ ಸಂದರ್ಭದಲ್ಲಿ ನೆರೆಮನೆಯ ಸದ್ದಾಂ ಶೇಖ್ ಸೇರಿದಂತೆ ಅನೇಕ ಮುಸ್ಲಂ ಸಹೋದರರು ನೆರವಾಗಿ ಹೆಗಲುಕೊಟ್ಟು ‘ರಾಮ್ ನಾಮ್ ಸತ್ಯ ಹೇ’ ಎಂದು ಜಪಿಸಿ ಸೌಹಾರ್ದ ಮೆರೆದರು.

ಇದೇ ರೀತಿ ಮುಂಬೈನಲಿ ಜೈನ ಸಮುದಾಯಕ್ಕೆ ಸೇರಿದ ಪ್ರೇಮಚಂದ್ ಬುದ್ಧಲಾಲ್ ಮಹಾವೀರ್ (68) ಮೃತಪಟ್ಟಾಗ ಲಾಕ್‍ಡೌನ್‍ನಿಂದ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಕ್ಕಪಕ್ಕದ ಮನೆಯ ಮುಸ್ಲಿಂ ಜನಾಂಗದ ವ್ಯಕ್ತಿಗಳೇ ಅಂತ್ಯಕ್ರ್ರಿಯೆಯಲ್ಲಿ ಭಾಗವಹಿಸಿ ಸಹಾಯ ಮಾಡಿದ್ದರು. ಈ ಎರಡೂ ಘಟನೆಗಳು ‘ಮನುಷ್ಯ ಜಾತಿ ತಾನೊಂದೆ ಒಲಂ’ ಎಂದು ಪಂಪ ಹೇಳಿದ ಮಾತಿಗೆ ಸಾಕ್ಷಿಯಾಯಿತು.

ಈ ಸುದ್ದಿಯನ್ನು ಓದಿದಾಗ ಸುಮಾರು 17 ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಮ್ಮ ಸ್ನೇಹಿತರೇ ಬಣ್ಣ ಹಚ್ಚಿದ ನಾಟಕ ‘ರಾವಿನದಿಯ ದಂಡೆಯಲ್ಲಿ’ ನೋಡಿದ ಪ್ರಸಂಗಗಳು ನೆನಪಾದವು. ಭಾರತ-ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಭಾರತದ ಗಡಿಭಾಗದ ಮುಸ್ಲಿಂ ಸಹೋದರರು ಪಾಕಿಸ್ತಾನಕ್ಕೆ, ಪಾಕಿಸ್ತಾನದಲ್ಲಿದಲ್ಲಿನ ಹಿಂದೂಗಳು ಭಾರತಕ್ಕೆ ವಲಸೆಹೋಗುತ್ತಾರೆ. ಪಾಕಿಸ್ತಾನದಲ್ಲಿದ್ದ ಹಿಂದೂ ವೃದ್ಧೆ ರತನ್ ತಾಯಿ ಅಲ್ಲಿಯೇ ಉಳಿದುಕೊಂಡು ತನ್ನ ಮಾನವೀಯ ಸ್ಪರ್ಶದಿಂದ ಅಲ್ಲಿನ ಇಸ್ಲಾಂ ಜನರ ಹೃದಯವನ್ನು ಗೆಲ್ಲುತ್ತಾಳೆ.

ಆ ವೃದ್ಧೆಗೆ ವಯೋಸಹಜ ಕಾರಣಗಳಿಂದ ಮೃತಪಟ್ಟಾಗ ಮಕ್ಕಳು, ಸಂಬಂಧಿಕರು ಇಲ್ಲದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸಿಖಂದರ್ ಮಿರ್ಜಾ ಸೇರಿದಂತೆ ಅನೇಕ ಇಸ್ಲಾಂ ಧರ್ಮದ ಜನರು ಹಿಂದೂ ವಿಧಿ ವಿಧಾನದಂತೆ ‘ರಾಮ್ ನಾಮ್ ಸತ್ಯ ಹೇ’ ಎಂದು ಪಠಿಸಿ ಅಂತ್ಯಕ್ರಿಯೆ ಮಾಡುವ ಪಾತ್ರವು ಪ್ರೀತಿ ಅನುಕಂಪವನ್ನು ತುಂಬಿಕೊಂಡು ಬರುತ್ತದೆ. ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಈ ನಾಟಕ ಬಿಂಬಿಸುತ್ತದೆ. ಶಾಂತವಾಗಿ ನಮ್ಮೊಳಗೊಂದು ಚಿಂತನೆಯನ್ನು ಬಿತ್ತುವ ಕೆಲಸವನ್ನು ಹಿಂದಿ ಲೇಖಕ ಅಸಗರ್ ವಹಾಜೀತ್ ಅವರು ರಚಿಸಿದ್ದಾರೆ.ಕನ್ನಡದಲ್ಲಿ ಡಾ. ತಿಪ್ಪೇಸ್ವಾಮಿ ತರ್ಜುಮೆ ಮಾಡಿದ್ದಾರೆ. ರಾಜ್ಯದ ಅನೇಕ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಾಟಕ ರಾವಿನದಿಯ ದಂಡೆಯಲ್ಲಿ… ಧರ್ಮ, ಸೀಮೆಗಳನ್ನು ಮೀರಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.

ಇವನಾರವ, ಇವನಾರ, ಇವನಾರವನೆಂದೆನಿಸದಿರಯ್ಯ,. ಇವ ನಮ್ಮವ, ಇವ ನಮ್ಮವ ಇವನಮ್ಮವನೆಂದೆನಿಸಯ್ಯ ಕೂಡಲಸಂಗಮದೇವಯ್ಯ. ನಿಮ್ಮ ಮನೆಯ ಮಗನೆಂದೆನಿಸಯ್ಯ.’ ಎಂದು 12ನೇ ಶತಮಾನದಲ್ಲೇ ಬಸವಣ್ಣವರು ವಚನದ ಮೂಲಕ ಸಮಾಜದ ಜನರಿಗೆ ಒಳಿತನ್ನು ಹೇಳಿದ್ದರು. ‘ಇಲ್ಲಿ ಯಾರು ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ. ಎಲ್ಲರೂ ವಿಶ್ವಮಾನವರಾಗಿ ಬಾಳಿ’ ಎಂದು ಕುವೆಂಪು ಕರೆಕೊಟ್ಟರು. ಮಹಾತ್ಮ ಗಾಂಧಿಯವರು, ಮನುಷ್ಯ ಮತ್ತು ಪ್ರಾಣಿಗಳಿಗೆ ಇರುವ ಅಂತರವೆಂದರೆ ವಿಚಾರಶೀಲತೆ. ಆದರೆ ವಿಚಾರ ಶುದ್ಧಿಯನ್ನು ಕಾಪಾಡಿಕೊಳ್ಳಿ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಪ್ರವಾದಿ ಮುಹಮ್ಮದ್‍ರು ಹೇಳಿದಂತೆ ‘ಓ ಮಾನವರೇ, ಅರಬರು ಅರಬರೇತರಿಗಿಂತ, ಬಿಳಿಯರು, ಕರಿಯರಿಗಿಂತ ಅಥವಾ ಕರಿಯರು ಬಿಳಿಯರಿಗಿಂತ ಶ್ರೇಷ್ಠರಲ್ಲ. ದೈವ ನಿಷ್ಠೆಯೊಂದೇ ಶ್ರೇಷ್ಠತೆಗೆ ಮಾನದಂಡ’ ಮಾನವೀಯತೆ ಒಂದೇ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ, ಜೈನ, ಪಾರ್ಸಿ ಧರ್ಮಗಳೆಲ್ಲವೂ ಬೋಧಿಸುವುದೊಂದೇ ಅದೇ ಮಾನವ ಧರ್ಮ. ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಾಣುವಿನ ಉಪಟಳದಿಂದ ದಿನದಿಂದ ದಿನಕ್ಕೆ ವಿಶ್ವವನ್ನೇ ಸ್ತಬ್ಧಗೊಳಿಸುತ್ತಿರುವಾಗ ಇಂತಹ ಸಂದಿಗ್ದ ಸಮಯದಲ್ಲಿ ರಾಜಕಾರಣಿಗಳು ನಿಷ್ಕಾಮ ಕರ್ಮಗಳನ್ನು ಮಾಡುತ್ತಾ ಹೋದಹಾಗೆಲ್ಲ ಮನುಷ್ಯನ ಸಂಕಲ್ಪ ಶಕ್ತಿಯು ಉತ್ತರೋತ್ತರವಾಗಿ ಬೆಳೆಯುತ್ತಾ ಹೋಗಿ ಬಾಹ್ಯ ಕರ್ಮಗಳೆಲ್ಲವೂ ಕಡಿಮೆಯಾಗತೊಡಗುತ್ತವೆ.

ಪ್ರಚಾರ ಗಿಟ್ಟಿಸಿಕೊಳ್ಳಲು ನಾಲಿಗೆ ಹರಿಬಿಟ್ಟು ಕೀಳುಮಟ್ಟದ ಮಾತುಗಳನ್ನಾಡಿ ರಾಜಕೀಯ ಮಾಡುವ ಬದಲು ಕಣ್ಣಿಗೆ ಕಾಣದ ಕೋವಿಡ್-2 ಅನ್ನು ದೂರಮಾಡಲು ಯೋಜನೆಗಳನ್ನು ರೂಪಿಸಿ. ಸಾಮಾಜಿಕವಾಗಿ, ಮಾನಸೀಕವಾಗಿ, ಆರ್ಥಿಕವಾಗಿ ಅಧೀರಾಗಿರುವ ನಿಮ್ಮ ಜನರಿಗೆ ಮನೋಸ್ಥೈರ್ಯ ತುಂಬು ಕಾರ್ಯಮಾಡಿದರೆ ಮನುಕುಲಕ್ಕೆ ಅರ್ಥ ಬಂದೀತು.

ನಿಮಗೆ ವೋಟ್ ಹಾಕಿರುವ ಜನರಿಗೆ ನ್ಯಾಯ ಒದಗಿಸುವ ಕಾರ್ಯ ನಿಮ್ಮಿಂದಾಗಬೇಕು. ಅದು ಬಿಟ್ಟು ಬೇಕಾಬಿಟ್ಟು ಮಾತುಗಳನ್ನು ಹರಿಬಿಟ್ಟು ಮನುಷ್ಯತ್ವದ ವಿರುದ್ಧವಾಗಿ ನಡೆದುಕೊಂಡರೆ ಅದು ಶೋಭೆತರುವಂತದ್ದಲ್ಲ. ಇಂತಹ ಸಂದರ್ಭದಲ್ಲಿ ಜನಾಭಿಪ್ರಾಯವನ್ನು ಧಿಕ್ಕರಿಸುವ ಸರ್ಕಾರವನ್ನು ಮುಂದೊಂದು ದಿನ ಜನರೂ ಧಿಕ್ಕರಿಸುತ್ತಾರೆ ಎನ್ನುವ ಅರಿವು ನಿಮ್ಮಲ್ಲಿದ್ದರೆ ಒಳ್ಳೆಯದು.

ಅನೇಕ ರಾಜಕಾರಣಿಗಳು ಕೋವಿಡ್-19 ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆರವಾಗಲು ಅಕ್ಕಿ, ಬೇಳೆ ಇತರೆ ಅಗತ್ಯ ವಸ್ತುಗಳನ್ನು ಕೊಡವುದು ಸರಿ. ಆದರೆ ಆ ಪ್ಯಾಕೇಟ್‍ಗಳ ಮೇಲೆ ತಮ್ಮ ಫೋಟೋವನ್ನು ಹಾಕಿ ಪ್ರಚಾರಕ್ಕೋಸ್ಕರ ಜನರಿಗೆ ಸಹಾಯ ಮಾಡುವುದು ಜನನಾಯಕನ ಲಕ್ಷಣವೇ? ಕೊರೋನಾ ವೈರಸ್ ಜಗತ್ತನ್ನೇ ಬಾಧಿಸುತ್ತಿರುವ ಹೊತ್ತಿನಲ್ಲಿ ಮನುಷ್ಯ ಕೆಲ ಘಟನೆಗಳು ಮನುಷ್ಯನ ಮಧ್ಯೆ ಮಾನವೀಯ ಸಂಬಂಧಗಳನ್ನು ವೃದ್ಧಿಸುತ್ತಿದೆ. ಒಂದು ಸಮುದಾಯವನ್ನು ಗುರಿಯಾಗಿರಿಸಿ ಸುಳ್ಳು ಸುದ್ದಿ ಹಬ್ಬಿಸುವುದು, ಪ್ರಚೋದನಾಕಾರಿ ಮಾತನಾಡುವುದು ಶೋಭೆತರುವಂತದ್ದಲ್ಲ. ಮನುಷ್ಯ ಎಷ್ಟರಮಟ್ಟಿಗೆ ಇತರರ ಒಳ್ಳೆಯದಕ್ಕೆ ದುಡಿಯುತ್ತಾನೋ ಅಷ್ಟರ ಮಟ್ಟಿಗೆ ಅವನು ದೊಡ್ಡವನಾಗುತ್ತಾನೆ. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸುವುದು ದೊಡ್ಡದಲ್ಲ. ನಮ್ಮನ್ನು ದ್ವೇಷಿಸುವವರನ್ನು ಪ್ರೀತಿಸುವುದು ದೊಡ್ಡತನ. ಪ್ರೇಮದ ಚೂರಿಯಿಂದ ಶಾಂತಿ ಸ್ಥಾಪನೆಯಾಗಬೇಕೇ ವಿನಃ ಗುಂಡಿನ ಬಲದಿಂದಲ್ಲ.

ಲೇಖಕರು : ಸೋಮನಗೌಡ ಎಸ್.ಎಂ ಕಟ್ಟಿಗೆಹಳ್ಳಿ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ 9945986049

 

 

 

 

 

ದಿನದ ಸುದ್ದಿ

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

Published

on

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

Published

on

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.

ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೆಕ್ಕೆಜೋಳ ಖರೀದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಾಲ್ ಹಾಗೂ ಗರಿಷ್ಠ 50 ಕ್ವಿಂಟಾಲ್‌ನಂತೆ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.2400.00 ರಂತೆ ಖರೀದಿಸಲಾಗುವುದು. ಮೆಕ್ಕೆಜೋಳ ಖರೀದಿದಾರರು ಡಿಸ್ಟಿಲರಿ ಮಾಲೀಕರಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಗೆ ಎನ್‌ಇಎಂಎಲ್ (NEML) ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಪ್ರೂಟ್ಸ್ ಪೊರ್ಟಲ್(FRUITS Portal) ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ರೈತರ ನೊಂದಣಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿಯನ್ನು ಹೊಂದಲಾಗಿದೆ. ರೈತರು ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು. ಸಹಕಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನೀಡಬೇಕು. ಮೆಕ್ಕೆಜೋಳ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಸಹಕಾರ ಇಲಾಖೆ ಉಪನಿಬಂಧಕ ಮಧು ಶ್ರೀನಿವಾಸ್, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್ , ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending