ಅಂತರಂಗ
ಅರಿಮೆಯ ಅರಿವಿರಲಿ-56 : ಸಸಿಗವಚ ಮತ್ತು ಶಿಶುಗವಚ

- ಯೋಗೇಶ್ ಮಾಸ್ಟರ್
ದೇಶಸೇವೆ ಎನ್ನುವುದಾದರೆ, ರಾಷ್ಟ್ರನಿರ್ಮಾಣ ಎನ್ನುವುದಾದರೆ, ನಾಗರಿಕ ಸಮಾಜ ಸಂರಚನೆ ಎನ್ನುವುದಾದರೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು. ಈ ದಿಕ್ಕಿನಲ್ಲಿ ಶಿಕ್ಷಕರಿಗೆ ಒಂದು ಅಪೂರ್ವವಾದ ಅವಕಾಶವಿದೆ. ನಾಗರಿಕ ಸಮಾಜದ, ಸದೃಢ ರಾಷ್ಟ್ರದ ನಿರ್ಮಾಣದ ಪ್ರಕ್ರಿಯೆಯು ಶಿಕ್ಷಕರಿಂದ ಪ್ರತಿದಿನವೂ ಸದಾ ಆಗುತ್ತಿರುತ್ತದೆ.
ಮಗುವೊಂದರ ಮಗುತನವನ್ನು ಜತನ ಮಾಡುವುದು ಎಂದರೆ ಸಸಿಯೊಂದು ನಾನಾ ದಾಳಿಗೆ ಸಿಕ್ಕು ನಾಶವಾಗದಂತೆ ನೋಡಿಕೊಳ್ಳಲು ಸಸಿಗವಚವನ್ನು ನಿರ್ಮಿಸಿದಂತೆ. ಬೃಹತ್ ವೃಕ್ಷವಾಗಿ ಬೆಳೆದುನಿಲ್ಲುವ ಸಾಧ್ಯತೆ ಇರುವ ಸಸಿಯನ್ನು ಯಾವುದೋ ಪಶುವು ಮೇಯದಂತೆ ನೋಡಿಕೊಳ್ಳಬೇಕು, ಗಾಳಿಗೆ, ಮಳೆಗೆ ಸಿಕ್ಕಿ ಬೀಳದಂತೆ ನೋಡಿಕೊಳ್ಳಬೇಕು, ದಾರಿಹೋಕರು, ತುಂಟ ಮಕ್ಕಳು ಎಲೆಗಳನ್ನು ತರಿಯದಂತೆ, ಚಿಗುರುಗಳನ್ನು ಚಿವುಟದಂತೆ ನೋಡಿಕೊಳ್ಳಬೇಕು. ಅದಕ್ಕಾಗಿಯೇ ಒಂದು ಒಳ್ಳೆಯ ಟ್ರೀ ಗಾರ್ಡ್ ಮಾಡಬೇಕು. ಈ ಟ್ರೀಗಾರ್ಡನ್ನು ಸಸಿಗವಚವೆನ್ನುತ್ತೇನೆ.
ಮರದ ಸಸಿ ರೂಪದ ಎಳೆವೆಯ ದಿನಗಳಲ್ಲಿ ಈ ಸಸಿಗವಚ ಬೇಕು. ಒಮ್ಮೆ ಬೇರುಬಿಟ್ಟ ಮೇಲೆ, ಗಟ್ಟಿಯಾಗಿ ನಿಂತ ಮೇಲೆ, ಬೃಹತ್ ವೃಕ್ಷವಾದ ಮೇಲೆ ಅದಕ್ಕೆ ಈ ಸಸಿಗವಚದ ಅಗತ್ಯವಿರುವುದಿಲ್ಲ. ಅಂತೆಯೇ ಮಗುವಿನ ಮಗುತನದ ಜೋಪಾನ ಮಾಡುವ ಹೊಣೆಗಾರಿಕೆ ಪೋಷಕರಿಗೆ, ಶಿಕ್ಷಕರಿಗೆ ಮತ್ತು ಸಮಾಜದ ಯಾವುದೇ ಸದಸ್ಯರಿಗೆ ಇರುವುದು.
ಸಾಧಾರಣ ಮನಸ್ಥಿತಿಯ ಮಕ್ಕಳ ಜೊತೆಜೊತೆಗೆ ಶರೀರದಲ್ಲಿ ನ್ಯೂನ್ಯತೆ ಇರುವಂತಹ ಮಕ್ಕಳು, ಬುದ್ಧಿಮತ್ತೆಯಲ್ಲಿ ಕೊರತೆಯುಳ್ಳವರು, ಮೊಂಡರು, ಹಟಮಾರಿಗಳು, ಪುಕ್ಕಲರು, ಸುಳ್ಳರು, ಮಳ್ಳರು, ದೌರ್ಜನ್ಯಕ್ಕೊಳಗಾಗಿರುವವರು, ಕ್ರೂರಿಗಳು, ದುಷ್ಕರ್ಮಿಗಳು; ಹೀಗೆ ನಾನಾ ಬಗೆಯ ಮಕ್ಕಳೂ ಇರುತ್ತಾರೆ. ಇಂತಹ ಹಲವಾರು ಮನಸ್ಥಿತಿಯ ಅಥವಾ ಮಾನಸಿಕ ಸಮಸ್ಯೆ ಇರುವವರನ್ನು ಅತ್ಯುತ್ತಮ ಪ್ರಜೆಗಳನ್ನಾಗಿ ಅಥವಾ ಪ್ರಖ್ಯಾತ ವಿಜ್ಞಾನಿಯನ್ನಾಗಿ ಅಥವಾ ಜನಪ್ರಿಯ ಮಹಾತ್ಮನನ್ನಾಗಿ ಅಥವಾ ಮಹಾನ್ ಸಂತರನ್ನಾಗಿ ರೂಪಿಸುವ ಕೆಲಸವಲ್ಲ ನಾವು ಶಿಕ್ಷಕರಿಂದ ಅಪೇಕ್ಷಿಸುವುದು.
ನಮ್ಮ ಸಮಾಜವು ಮಹಾತ್ಮರ, ಪ್ರಖ್ಯಾತರ ರೇಸ್ ಟ್ರ್ಯಾಕ್ ಆಗುವುದೇನೂ ಬೇಕಾಗಿಲ್ಲ. ಸಮಾಜದಲ್ಲಿರುವವರೆಲ್ಲಾ ಇಂದು ಮತ್ತು ನಾಳೆ ನೆಮ್ಮದಿಯಿಂದ ಬಾಳಲು ಪೂರಕವಾದ ವಾತಾವರಣವು ನಿರ್ಮಾಣವಾಗಬೇಕು. ಅದಕ್ಕೆ ಎಲ್ಲರಲ್ಲಿ ಇರಬೇಕಾಗಿರುವುದು ಸಹಕಾರದ ಧೋರಣೆ. ಅಷ್ಟರಮಟ್ಟಿಗೆ ಮಾತ್ರ ಕುಟುಂಬದಲ್ಲಿ ಪೆÇೀಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಯೋಚಿಸಬೇಕಾಗಿರುವುದು ಮತ್ತು ಯೋಜಿಸಬೇಕಾಗಿರುವುದು. ಇನ್ನುಳಿದ ಕಿರೀಟಕ್ಕೆ ಗರಿಗಳನ್ನು ಏರಿಸಿಕೊಳ್ಳುವುದು ಬಿಡುವುದು ಅವರ ಬಾಳ್ದಾರಿಯಲ್ಲಿನ ಸಂಭವಗಳಿಗೆ ಬಿಟ್ಟಿದ್ದು.
ಶಿಶುಪೋಷಣೆ ಎಂಬ ತಪಸ್ಸು
ಅದರಲ್ಲೂ ವಿಶೇಷವಾಗಿ ಶಿಕ್ಷಕರಿಗೆ ತಮ್ಮ ತರಗತಿಗಳಲ್ಲಿ ಕೆಲಸ ಮಾಡುವುದೆಂದರದು ತಪಸ್ಸು. ಸದಾ ಧ್ಯಾನನಿರತರಾಗಿರುವಂತೆ. ಜೊತೆಜೊತೆಗೆ ಹಲವು ಮಾದರಿಗಳ ಜೀವಗಳನ್ನು ಸಾಕ್ಷೀಕರಿಸುವಂತಹ ಸಾಕ್ಷಿಪ್ರಜ್ಞೆಯಾಗಿರಬೇಕು. ಮಕ್ಕಳಿದ್ದರೆ ವಾತಾವರಣವು ಸಹಜ ಜೀವಂತಿಕೆಯಿಂದಲೂ, ಲವಲವಿಕೆಯಿಂದಲೂ ತುಂಬಿರುತ್ತದೆ. ಅರಳುತ್ತಿರುವ ಮೊಗ್ಗುಗಳಂತಿರುವ ಆ ಮಕ್ಕಳ ಸುಗಂಧವನ್ನು ಆಘ್ರಾಣಿಸಿಕೊಂಡು, ಅವರ ಮಧುರ ಸಾಮಿಪ್ಯವನ್ನು ಆಸ್ವಾದಿಸಿಕೊಂಡು ಇರಲಾರದಂತಹ ಪರಿಸ್ಥಿತಿಯು ಶಿಕ್ಷಕರಿಗೆ ಸಾಮಾನ್ಯ.
ಮಕ್ಕಳನ್ನು ಗದರಿಸಬೇಕು, ಅವರ ಜಗಳ ಬಿಡಿಸಬೇಕು, ಕಲಿಸುವುದನ್ನು ಕಲಿಯದಿದ್ದರೆ ಬೇರೆಬೇರೆ ಮಾರ್ಗಗಳನ್ನು ಹುಡುಗಬೇಕು, ಅವರನ್ನು ಕ್ರಮದಲ್ಲಿಡಬೇಕು, ಎಚ್ಚರಿಸಬೇಕು, ಬುದ್ಧಿವಾದ ಹೇಳಬೇಕು, ನಿರ್ದೇಶನಗಳನ್ನು ನೀಡಬೇಕು; ಹೀಗೆ ಒಂದೆರಡರಲ್ಲದ ಹಲವು ಕ್ರಿಯೆಗಳನ್ನು ತಮ್ಮ ಅಧಿಕಾರವನ್ನು ಬಳಸಿಕೊಂಡು ಮಾಡುತ್ತಿರಲೇಬೇಕು. ಅವರೆಲ್ಲಾ ತುಂಟತನಗಳನ್ನು, ಚೇಷ್ಟೆಗಳನ್ನು ಶಿಶುಸಹಜವೆಂದು ಬಿಟ್ಟು ನೋಡಿಕೊಂಡಿರಲಾಗುವುದಿಲ್ಲ.
ಶಿಕ್ಷಕರಿಗೆ ಅವರ ಮೇಲಿನ ಅಧಿಕಾರಗಳಿಂದ ಒತ್ತಡವಿರುತ್ತವೆ. ಶಿಕ್ಷಕರು ಮಾಡಲೇಬೇಕಾದ ಕೆಲಸಗಳ ನಿರೀಕ್ಷೆಗಳಿರುತ್ತವೆ. ಏನೇ ಆಗಲಿ ವಿವಿಧ ರೀತಿಯಲ್ಲಿ ವರ್ತಿಸುವ ಮಕ್ಕಳನ್ನು ಕ್ರಮಕ್ಕೆ ತರಲು ಅಥವಾ ಸರಿದಾರಿಗೆ ತರಲು, ಕನಿಷ್ಟಪಕ್ಷ ಅವರ ಮಿತಿಮೀರಿದ ವರ್ತನೆಗಳನ್ನು ತಹಬಂದಿಗೆ ತರಲು ಅವರ ಸಮಸ್ಯೆಯ ಮೂಲದ ಬಗ್ಗೆ ತಿಳುವಳಿಕೆ ಶಿಕ್ಷಕರಿಗೆ ಇರಬೇಕು.
ಒಂದು ಮಗುವು ಕಲಿಕೆಯಲ್ಲಿ ಹಿಂದುಳಿದಿರಲು, ಬಳಲಿದಂತೆ ಕಾಣುತ್ತಿರಲು, ಕಣ್ಣುಗಳಲ್ಲಿ ಗುಳಿ ಬಿದ್ದಿರಲು, ಹಲಗೆಯ ಮೇಲೆ ಬರೆದಿರುವುದನ್ನು ದೂರದಿಂದ ಕಾಣದಿರಲು, ಕರೆದರೆ ಸರಿಯಾಗಿ ಸ್ಪಂದಿಸದಿರಲು, ಬೆರಳುಗಳಿಗೆ ಸೀಸದ ಕಡ್ಡಿಯನ್ನು ಸರಿಯಾಗಿ ಹಿಡಿಯಲು ಸಾಧ್ಯವಿಲ್ಲದಿರಲು, ತಲೆಗೂದಲಲ್ಲಿ ಹೇನು ಬಿದ್ದಿರಲು, ಒರಟಾಗಿ ನಡೆದುಕೊಳ್ಳಲು, ಪುಕ್ಕಲನಾಗಿರಲು, ಮುಖೇಡಿಯಾಗಿರಲು, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರಲು, ಬಿಸಿಲಲ್ಲಿ ತಲೆ ಸುತ್ತಿ ಬೀಳಲು; ಹೀಗೆ ನಾನಾ ತರಹದ ಸಮಸ್ಯೆಗಳಿಗೆಲ್ಲಾ ಮನೆಯವರ ಅರಿವಿಗೆ ಬರದಂತಹ ಹಲವು ಕಾರಣಗಳಿರುತ್ತವೆ.
ಆ ಕಾರಣಗಳು ಪೌಷ್ಟಿಕಾಂಶದ ಕೊರತೆ ಇರಬಹುದು, ಮಾನಸಿಕ ಸಮಸ್ಯೆ ಇರಬಹುದು, ನರದೌರ್ಬಲ್ಯವಿರಬಹುದು, ಕೌಟುಂಬಿಕ ಸಮಸ್ಯೆ ಇರಬಹುದು, ಮಗುವಿನ ಮನೆಯ ಆರ್ಥಿಕ ಸಮಸ್ಯೆ ಇರಬಹುದು, ಕುಟುಂಬಗಳಲ್ಲಿ ಸಂಘರ್ಷ ಅಥವಾ ಒಡಕು ಇರಬಹುದು, ತಂದೆ ಇಲ್ಲದ ಮಗುವೋ ಅಥವಾ ತಾಯಿ ಇಲ್ಲದ ಮಗುವೋ ಇರಬಹುದು, ಮನೋರೋಗವಿರಬಹುದು, ಖಾಯಿಲೆ ಇರಬಹುದು, ಅನುವಂಶೀಯವಾಗಿರುವ ಮಾನಸಿಕ ಅಥವಾ ಶಾರೀರಿಕ ಸಮಸ್ಯೆ ಸಮಸ್ಯೆ ಇರಬಹುದು, ಆಪ್ತ ಸಂಬಂಧಗಳ ಕೊರತೆ ಇರಬಹುದು; ಏನೋ ಅಂತೂ ಒಂದು ಬಗೆಯ ಕಾರಣವಂತೂ ಮಗುವಿನ ಕ್ರಿಯೆ, ಪ್ರತಿಕ್ರಿಯೆಗಳಲ್ಲಿ, ವರ್ತನೆಗಳಲ್ಲಿ ಕಾಣುತ್ತಿರುತ್ತದೆ.
ಶಿಕ್ಷಕರಿಗೆ ವೈದ್ಯಕೀಯವಾಗಲಿ, ಮನೋವಿಜ್ಞಾನವಾಗಲಿ, ಸಮಾಜ ವಿಜ್ಞಾನವಾಗಲಿ; ಎಲ್ಲದರ ಮೂಲತತ್ವಗಳಂತೂ ಗೊತ್ತಿರಲೇ ಬೇಕು. ಅದರಲ್ಲೂ ಮಕ್ಕಳಿಗೆ ಸಂಬಂಧಿಸಿರುವಷ್ಟು ಸಾಮಾನ್ಯ ತಿಳುವಳಿಕೆಯಂತೂ ತಿಳಿದಿರಬೇಕು. ಇದರ ಜೊತೆಗೆ ಅವರಿಗೆ ಖಂಡಿತವಾಗಿ ತಿಳಿದಿರಲೇ ಬೇಕಾದ ವಿಷಯವೆಂದರೆ ಮಕ್ಕಳ ಮಾನಸಿಕ ಸ್ಥಿತಿಯನ್ನು ವಿಶ್ಲೇಷಣೆಯನ್ನು ಮಾಡುವ ಕ್ರಮ.
ಒಂದು ವೇಳೆ ಮಗುವಿಗೆ ಶಾರೀರಿಕ ಸಮಸ್ಯೆ ಅಥವಾ ನರದೌರ್ಬಲ್ಯದಂತಹ ಸಮಸ್ಯೆಗಳಿದ್ದರೆ ಪೆÇೀಷಕರಿಗೆ ವಿಷಯ ತಿಳಿಸಿ, ಅವರು ಮತ್ತು ಶಿಕ್ಷಕರು ಒಟ್ಟಾಗಿ ಅದರ ಪರಿಹಾರಕ್ಕಾಗಿ ಕೆಲವು ಮಾರ್ಗಗಳನ್ನು ಕಂಡುಕೊಳ್ಳಬಹುದು. ಆದರೆ ಕೌಟುಂಬಿಕ ಸಮಸ್ಯೆಗಳಿದ್ದರೆ, ಒಡಕು ಕುಟುಂಬಗಳಿದ್ದರೆ, ಆರ್ಥಿಕ ಸಮಸ್ಯೆ ಅಥವಾ ಒಂಟಿ ಪೋಷಕರಾಗಿದ್ದರೆ, ಅಂತಹ ಮಕ್ಕಳ ಪೋಷಕರ ಸ್ಥಿತಿಗತಿಗಳನ್ನು ಶಿಕ್ಷಕರಿಗೆ ಸರಿ ಮಾಡಲು ಆಗುವುದಿಲ್ಲ. ಹಾಗೆ ಮಾಡಲು ಹೋಗುವುದು ಅಪ್ರಾಯೋಗಿಕ ಮತ್ತು ಅವಾಸ್ತವದ ಯೋಚನೆ.
ಆದರೆ, ಮನೆಯಲ್ಲಿ ಮಗುವು ಯಾವುದೇ ಸ್ಥಿತಿಯನ್ನು ಎದುರಿಸುತ್ತಿರಲಿ, ಮಗುವು ತನ್ನ ಸ್ವತಂತ್ರ ಅಸ್ತಿತ್ವಕ್ಕೆ ಬೇಕಾದ ಮಾನಸಿಕ ಸ್ಥೈರ್ಯ, ಸಾಮಾಜಿಕ ಧೈರ್ಯ ಮತ್ತು ಭೌದ್ಧಿಕ ಸಾಮರ್ಥ್ಯವನ್ನು ಪಡೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಂತು ಬದುಕು ನಡೆಸಲು ಶಕ್ತನಾಗಿಸಲು ಖಂಡಿತವಾಗಿ ಸಾಧ್ಯ. ಅದಕ್ಕೆ ಬೇಕಾದ ಎಲ್ಲಾ ಮಾನಸಿಕ ಮತ್ತು ಬೌದ್ಧಿಕ ತರಬೇತಿಗಳನ್ನು ನೀಡುತ್ತಾ ಭಾವನಾತ್ಮಕವಾಗಿ ಸಶಕ್ತನಾಗಿಸಲು ಪ್ರೀತಿಯ ಅನುಭವನ್ನು ಆ ಮಗುವಿಗೆ ನೀಡಬೇಕು. ಇದು ಸಾಧ್ಯ. ಶಿಕ್ಷಕರೊಬ್ಬರು ತಮ್ಮ ಸಂಪರ್ಕಕ್ಕೆ ಬರುವ ಒಂದೊಂದು ಮಗುವಿಗೂ ತಮ್ಮ ಪ್ರೀತಿಯನ್ನು ಮತ್ತು ಬದುಕಿನ ಬಗ್ಗೆ ಆಸಕ್ತಿಯನ್ನು ಹೊಂದುವಂತಹ ಪ್ರೇರಣೆಯನ್ನು ನೀಡಲು ಸಾಧ್ಯ.
ಶಿಕ್ಷಕರೆಂಬ ಊರುಗೋಲು
ನಿಜವಾಗಿಯೂ ನಿರ್ಲಕ್ಷಿತ ಮಕ್ಕಳಿಗೆ ಶಿಕ್ಷಕರು ಅತ್ಯಂತ ಬೇಕಾಗಿರುವಂತಹ ಊರುಗೋಲು, ದಾರಿದೀಪ ಮತ್ತು ಸಸಿಗವಚ (ಟ್ರೀಗಾರ್ಡ್). ಇಂದು ಮತ್ತು ನಾಳಿನ ನೆಮ್ಮದಿಯ ಸಮಾಜವನ್ನು ಬಯಸುವವಾರೇ ಆಗಲಿ ಸಸಿಗವಚದಂತೆ ಶಿಶುಗವಚವಾಗಬೇಕು.
ನಮ್ಮ ಮನೆಯ, ನೆರೆಹೊರೆಯ, ಸಮಾಜದ, ಜಗತ್ತಿನ ಪ್ರತಿಯೊಂದು ಮಗುವಿನ ಮಗುತನ ಜತನವಾಗಿರಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವುದು ಹೇಗೆ ಒಂದು ಸಂಕಲಿತ ಹೊಣೆಗಾರಿಕೆಯೋ, ರಾಷ್ಟ್ರದ ಪ್ರಗತಿಯ ಹೊಣೆಗಾರಿಕೆ ಹೇಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರುತ್ತದೆಯೋ ಅದೇ ರೀತಿ ಮಗುತನವನ್ನು ಜೋಪಾನ ಮಾಡುವುದೂ ಕೂಡಾ ಪ್ರತಿಯೊಬ್ಬನ ಅತ್ಯುನ್ನತ ಕರ್ತವ್ಯವಾಗಿರುತ್ತದೆ. ಭೂಮಿಯನ್ನು ಸಂರಕ್ಷಿಸುವಲ್ಲಿ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯು ಒಬ್ಬರಿಗೆ ಎಷ್ಟರ ಮಟ್ಟಿಗಿನ ಜವಾಬ್ದಾರಿಯಾಗಿರುತ್ತದೆಯೋ, ಮಾನವ ಸಮಾಜದ ಬಾಳ್ವೆಗೆ ಮಗುತನದ ಜತನ ಅಷ್ಟೇ ಗಂಭೀರವಾದ ಜವಾಬ್ದಾರಿಯಾಗಿರುತ್ತದೆ.
ಮಗುತನದ ಜತನಕ್ಕೆ ಶಿಶುಗವಚ
ಮಗುತನದ ಜತನವು ಸಾಮಾನ್ಯ ಕೆಲಸವಲ್ಲ. ಅದು ಸಾಮರ್ಥ್ಯ ಮತ್ತು ಶ್ರದ್ಧೆಯನ್ನು ಬೇಡುವ ಸಾಹಸದ ಕಾರ್ಯ. ಏಕೆಂದರೆ ಮಗುವು ಈ ಮಗುತನದ ಜತನದ ತಪಸ್ಸಿಗೆ ಬದ್ಧವಾಗಿರುವ, ಶಿಶುಗವಚವಾಗಲು ಕಂಕಣ ತೊಟ್ಟಿರುವ ಕೆಲವರ ಕೈಗಳಲ್ಲಿ ಮಾತ್ರ ಹಾದುಹೋಗುವುದಲ್ಲ. ಮಗುವಿನ ಮೇಲೆ ನಾನಾ ರೀತಿಗಳಿಂದ ಪ್ರಭಾವ ಬೀರುವಂತವರು, ತಿಳಿದೋ, ತಿಳಿಯದೆಯೋ ಮಗುವೆಂಬ ಮೆದು ಜೇಡಿಮಣ್ಣಿನ ಮುದ್ದೆಯನ್ನು ತಮ್ಮ ಆಶಯಕ್ಕೆ ತಕ್ಕಂತೆ, ಅರಿವಿಗೆ ತಕ್ಕಂತೆ ರೂಪುಗೊಳಿಸಲು ತಮ್ಮ ಕೈಗಳನ್ನು ಬಳಕೆ ಮಾಡುತ್ತಿರುತ್ತಾರೆ. ಈ ಎಲ್ಲಾ ಪಾಶಗಳಿಂದ ಮಗುವನ್ನು ವಿಮೋಚನಗೊಳಿಸಿಕೊಂಡು ಜಾಣ್ಮೆಯಿಂದ ಮತ್ತು ಎಚ್ಚರಿಕೆಯಿಂದ ಮಗುತನವನ್ನು ಜತನಗೊಳಿಸುವ ಶಿಶುಗವಚಗಳು ನಾವಾಗಬೇಕು.
ಮಕ್ಕಳು ತಮ್ಮ ಪ್ರಭಾವ ಮತ್ತು ಸೆಳೆತಗಳಿಂದ ರೂಪುಗೊಂಡಂತೆ ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಿರುತ್ತಾರೆ. ಅವುಗಳಿಗೆಲ್ಲಾ ಶಿಕ್ಷಕರಾದವರು ಅಥವಾ ಶಿಶುಗವಚಗಳು ಪ್ರತಿಕ್ರಿಯಿಸಬಾರದು. ಮಕ್ಕಳಿಗೂ ದೊಡ್ಡವರಿಗಿದ್ದಂತೆ ಪೂರ್ವಾಗ್ರಹಗಳಿರುತ್ತವೆ. ಸಾಂಪ್ರದಾಯಕ ನಡವಳಿಕೆಗಳು ರೂಢಿಯಾಗಿರುತ್ತವೆ. ನಮ್ಮ ನಿರ್ದೇಶನಗಳನ್ನು ಒಮ್ಮಿಂದೊಮ್ಮೆಲೇ ಸ್ವೀಕರಿಸುವುದಿಲ್ಲ. ನಮ್ಮನ್ನು ಅನುಮಾನಿಸುತ್ತಾರೆ. ಅವರ ವಿಕರ್ಷಣ ವರ್ತನೆಗಳು ನಮ್ಮನ್ನು ಅಪಮಾನಿಸುತ್ತವೆ. ಆದರೆ ತಮ್ಮ ಶಿಶುಗವಚದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಯಾವುದೇ ಹಿರಿಯರು ತಮ್ಮ ಸಾಮರ್ಥ್ಯವು ಮಗುವಿನ ವಿಕರ್ಷಣದಿಂದ ವಿಚಲಿತವಾಗದಂತೆ ಕಾಯ್ದುಕೊಳ್ಳುತ್ತಾರೆ.
ಅದೇ ಬಹಳ ಮುಖ್ಯ. ಬಹಳಷ್ಟು ಜನ ಪೋಷಕರು, ಶಿಕ್ಷಕರು ಮತ್ತು ಶಿಶುಸಂಬಂಧಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ವಿಫಲರಾಗುವುದು ಇಲ್ಲಿಯೇ. ತಮ್ಮ ಮಾತು ಕೃತಿಗಳಿಗೆ ಆಕರ್ಷಕವಾಗುವ ಮಕ್ಕಳನ್ನು ಆನಂದದಿಂದ ಅಪ್ಪಿಕೊಳ್ಳುತ್ತಾರೆ. ಆದರೆ ತಮ್ಮಿಂದ ವಿಕರ್ಷಣವಾಗುವ ಮಕ್ಕಳನ್ನು ಬಿಟ್ಟುಬಿಡುತ್ತಾರೆ. ಅವರು ನಮ್ಮ ಮಾತು ಕೇಳುವುದಿಲ್ಲ. ಅವರಿಗೆ ಎಷ್ಟು ಹೇಳಿದರೂ ಅಷ್ಟೇ. ಅವರಿಗೆ ಏನು ಮಾಡಿದರೇನು ಲಾಭ? ಇತ್ಯಾದಿ ಜಿಗುಪ್ಸೆಯ ಆಲೋಚನೆಗಳೊಂದಿಗೆ ಅಂತಹ ಮಕ್ಕಳಿಂದ ವಿಮುಖರಾಗಿಬಿಡುತ್ತಾರೆ.
ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಫಲಿತಾಂಶ ಮತ್ತು ಸಂಸ್ಥೆಯ ಕೀರ್ತಿ ಮಾತ್ರ ನಿರೀಕ್ಷೆಯ ವಸ್ತುಗಳಾಗಿರಬಹುದು. ಆದರೆ, ಶಿಕ್ಷಕರು ನಿರೀಕ್ಷಿಸಬೇಕಾಗಿರುವುದು ಅಭೌತಿಕವಾದ ವಿಷಯಗಳನ್ನು. ಜೀವಂತಿಕೆಯ ವಿಷಯಗಳನ್ನು. ತಾತ್ವಿಕ ಮತ್ತು ಭಾವನಾತ್ಮಕವಾಗಿರುವ ವಿಷಯಗಳನ್ನು. ತತ್ವ ಮತ್ತು ಭಾವುಕತೆಗಳಿಂದ ಶಿಕ್ಷಕರು ಹೊರತಾದ ಕ್ಷಣದಲ್ಲಿಯೇ ಅವನು ಅಥವಾ ಅವಳು ಶಿಕ್ಷಣವೃತ್ತಿಯ ನೈತಿಕ ಮೌಲ್ಯವನ್ನು ಕಳೆದುಕೊಂಡರೆಂದೇ ಅರ್ಥ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

- ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ
ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು
ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.
ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.
ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ
ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.
ಮಹಿಳಾ ದಿನಾಚರಣೆಯ ಇತಿಹಾಸ
ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:
1. 1908 – ಮಹಿಳಾ ಹಕ್ಕುಗಳ ಹೋರಾಟ:
ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.
2. 1909 – ಮೊದಲ ಮಹಿಳಾ ದಿನಾಚರಣೆ:
ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.
3. 1910 – ಅಂತಾರಾಷ್ಟ್ರೀಯ ಹೋರಾಟ:
ಡೆನ್ಮಾರ್ಕ್‌ನ ಕೊಪನ್‌ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.
4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:
ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.
5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:
1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.
6. 1975 – ವಿಶ್ವ ಮಹಿಳಾ ವರ್ಷ:
UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು
7. 2011 – 100ನೇ ವಾರ್ಷಿಕೋತ್ಸವ:
2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.
ಮಹಿಳಾ ದಿನಾಚರಣೆಯ ಉದ್ದೇಶ
ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.
ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ
ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್‌ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.
ಮಹಿಳೆಯರು ಬದುಕಿನ ಉತ್ಸಾಹ
ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಾಧನೆಗಳ ಬೆಳಕು
1. ಶಿಕ್ಷಣ ಮತ್ತು ಸಶಕ್ತೀಕರಣ:
ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
2. ಉದ್ಯೋಗ ಹಾಗೂ ಉದ್ಯಮಶೀಲತೆ:
ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
3. ಕ್ರೀಡೆ ಮತ್ತು ಸಾಹಸ:
ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.
4. ಸಮಾಜಸೇವೆ ಮತ್ತು ಪ್ರಭಾವ:
ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.
ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ
ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.
ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್
ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.
“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು

ಸುದ್ದಿದಿನ,ದಾವಣಗೆರೆ:ಜನಪದರು ನಿಜವಾದ ಇತಿಹಾಸವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ.‘ಒಡಲ ಕಿಚ್ಚಿಗೆ ಈ ಕಿಚ್ಚು ಕಿರಿದು’ ಎಂಬುದಾಗಿ ಸತಿ ಸಹಗಮನ ಪದ್ಧತಿಯನ್ನೂ ಸಿರಿಯಜ್ಜಿ ವಿರೋಧಿಸಿದ್ದಳು ಹಾಗಾಗಿ ಜಾನಪದರನ್ನು ನಾವು ಅಕ್ಷರ ಬಾರದವರು ಅನಕ್ಷಸ್ಥರು ಎಂಬುದಾಗಿ ಹೇಳುವುದು ತಪ್ಪು ಎಂದು ಹಿರಿಯ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ವಿಷಾದವ್ಯಕ್ತಪಡಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಯಜ್ಜಿ ಪ್ರತಿಷ್ಠಾನ, ಮಾನವ ಬಂಧುತ್ವ ವೇದಿಕೆ ಹಾಗೂ ಅಮಿತ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಾಂಶುಪಾಲ ಎಂ.ಮಂಜಣ್ಣ ಅವರ ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ ಮಾಡಿ ಅವರು ಮಾತನಾಡಿದರು.
ಸಿರಿಯಜ್ಜಿ ಭೇಟಿ ಮಾಡಿ ಸುಮಾರು 50ವರ್ಷ ಆಯಿತು.ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಜೊತೆಗೆ ಮೊದಲ ಬಾರಿಗೆ ಗುಡಿಸಲಿನ ಭೇಟಿ ಮಾಡಿದ್ದೆ. ಆಡಿನ ಹಾಲು ಕರೆದು ಜತೆಗೆ ಮುದ್ದೆ ಕೊಡುತ್ತಿದ್ದರು. ಅದು 76ರ ಈ ಇಳಿವಯಸ್ಸಿನಲ್ಲೂ ನನಗೆ ಶಕ್ತಿ ಕೊಟ್ಟಿದೆ. ಪಾಶ್ಚಾತ್ಯ ವಿದ್ವಾಂಸರು 1800 ಸಂದರ್ಭದಲ್ಲಿ ದೇಶದಲ್ಲಿ ಹುಡುಕಿ ಹೊತ್ತೊಯ್ಯುವ ಕೆಲಸ ಮಾಡಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ಅವರಿಗೆ ಅಭಿಮಾನ ಇತ್ತು. ಬುಡಕಟ್ಟು ಹಟ್ಟಿಯ ಸಿರಿಯಜ್ಜಿ ದೊಡ್ಡ ವಿದ್ವಾಂಸರು. ಅರೆ ಬರ ಕನ್ನಡ ಓದಿ ಎಲ್ಲವೂ ಗೊತ್ತದೆ ಎನ್ನುತ್ತೇವೆ. ಆದರೆ, ಸಿರಿಯಜ್ಜಿ ತನ್ನ ಬೌದ್ಧಿಕ ಶಕ್ತಿಯನ್ನು ಏನೂ ಅಲ್ಲ ಎಂದು ಹೇಳುತ್ತಿದ್ದರು. ‘ಹತ್ತ ಮಕ್ಕಳ ಹೆತ್ತು ಕತ್ತಿಗೆ ಬಲಿಕೊಟ್ಟೆ’ ಎಂಬ ಮಾತು ದೊಡ್ಡದು. ಇದರಲ್ಲಿ ದೊಡ್ಡ ಸಂದೇಶ ಇತ್ತು ಎಂದು ಸ್ಮರಿಸಿದರು.
ಅವಳ ಹಾಡುಗಾರಿಕೆಯ ಕ್ರಮ ವಿಸ್ಮಯ ಮೂಡಿಸುತ್ತಿತ್ತು. ನೋವಿನ ವಾಕ್ಯದಲ್ಲಿ ಇರುವ ಅರ್ಥ ಬಹಳ ದೊಡ್ಡದು. ಚರಿತ್ರೆಯನ್ನು ನಾಲ್ಕು ಪದಗಳಲ್ಲಿ ವಿಶ್ಲೇಷಣೆ ಮಾಡಿದಳು. . 100ಕ್ಕೂ ಹೆಚ್ಚು ತ್ರಿಪದಿಯಲ್ಲಿ ಸಿರಿಯಜ್ಜಿ ಹಾಡಿದ್ದಾಳೆ. ಸಮಾಜಿಕ, ಐತಿಹಾಸಿಕ, ಸಂತೋಷದ ಸಂಗತಿ, ಮಳೆರಾಯನ ಕುರಿತು ಹಾಡು ಹೇಳಿದ್ದಾಳೆ. ಮದುವೆ ಸಂಭ್ರದ ಸಾವಿರಾರು ತ್ರಿಪದಿ ಅವಳಲ್ಲಿದ್ದವು.ಶಿಷ್ಟ ಮತ್ತು ಜಾನಪದ ಸಾಹಿತ್ಯ ಈ ಎರಡರಲ್ಲೂ ಕೆಟ್ಟದ್ದು ಒಳ್ಳೆಯದು ಇದೆ. ಇದರ ಬಗೆಗೆ ಇನ್ನೂಹೆಚ್ಚಿನ ಅಧ್ಯಯನ ನಡೆಸಿ ಪ್ರಾಧ್ಯಾಪಕರು ಚರ್ಚಿಸಬೇಕಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಅನಕ್ಷರಸ್ಥರಲ್ಲಿ ಕೂಡ ವಿದ್ವಾಂಸರು ಇದ್ದಾರೆ. ಸಿರಿಯಜ್ಜಿ ರೀತಿಯವರು ಅಸಂಖ್ಯಾತರಷ್ಟು ಇದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಮಾನವನನ್ನೇ ನಾಶ ಮಾಡುತ್ತಿದೆ. ಜನಪದರ, ಗ್ರಾಮೀಣ ಪ್ರದೇಶದ ಒಳಿತನ್ನು ಸ್ವೀಕರಿಸುವ ಮನೋಭಾವ ಉಳಿಸಿಕೊಳ್ಳೋಣ’.ಎ.ಕೆ.ರಾಮಾನುಜನ್, ಎಸ್.ಎಲ್.ಭೈರಪ್ಪ, ಗುಂಡೂರಾವ್, ಎಚ್.ಕೆ.ರಂಗನಾಥ್ ಸೇರಿ ಅನೇಕರು ಸಿರಿಯಜ್ಜಿ ಹುಡುಕಿಕೊಂಡು ಬಂದಿದ್ದರು. ಪ್ರಾಧ್ಯಾಪಕರು ಇದನ್ನು ಗುರುತಿಸಿ ಹೇಳಬೇಕು. ಮಕ್ಕಳಿಗೆ ಪಾಠ ಮಾಡಿದರೆ ಪ್ರಾಧ್ಯಾಪಕರ ಕಾರ್ಯ ಮುಗಿಯುದಿಲ್ಲ ಎಂದು ಕಿವಿಮಾತು ಹೇಳಿದರು.
ಅನಕ್ಷರಸ್ಥರು ಎಂದು ಹೇಳುವುದು ನಮ್ಮ ಅಜ್ಞಾನ ತೋರಿಸುತ್ತದೆ. ವಿಶ್ವವಿದ್ಯಾಲಯದ್ದು ಸೀಮಿತ ಪಠ್ಯ, ಜಾನಪದದ್ದು ಅಲಿಖಿತ ಸಂವಿಧಾನ, ಅಪರಿಮಿತ ಪಠ್ಯ ಇದು ಕೂಡ ಮುಖ್ಯ.‘ಸಾವಿರದ ಸಿರಿ ಬೆಳಕು’ ಹಂಪಿ ವಿಶ್ವವಿದ್ಯಾಲಯ ಹೊರತಂದಿದೆ. ಅಪ್ರಕಟಿತ ಗೀತೆಗಳು ಇನ್ನೂ ಇವೆ. ಅಕ್ಷರಕ್ಕೆ ಅಳಿವಿಲ್ಲ. ದೇಶದ ಉತ್ತಮ ಸಂಗತಿ, ಪಳಯುಳಿಕೆ ಅಮೆರಿಕಾ, ಇಂಗ್ಲೆಂಡ್ ನಲ್ಲಿವೆ.ಎಚ್ಚರಿಕೆ, ಗಮನ ಹರಿಸಬೇಕು ಪ್ರಾಧ್ಯಾಪಕರು. ಮಕ್ಕಳ ಆಸ್ತಿ ಯಾವುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಎಂ.ಮುತ್ತಯ್ಯ ಅಭಿಪ್ರಾಯಪಟ್ಟರು.
ಮನುಷ್ಯರೆಂಬಂತೆ ಸಮಾಜ ಕಾಣದ ಸಮುದಾಯದ ಮಹಿಳೆ ಬಗ್ಗೆ ನಡೆಸಿದ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಚಿಕ್ಕ ಸಂಗತಿಗೂ ನಿರ್ಬಂಧ ಹೇರುವ ಸಮುದಾಯದಲ್ಲಿ ದೊಡ್ಡ ಕಲಾವಿದೆಯೊಬ್ಬರೂ ಹೊರಹೊಮ್ಮಿದ ರೀತಿ ವಿಸ್ಮಯ ಮೂಡಿಸುತ್ತದೆ.ಸಿರಿಯಜ್ಜಿ ಸೃಷ್ಟಿಸಿದ್ದು ಸಾಹಿತ್ಯ ಅಲ್ಲ. ಇದು ಸಮುದಾಯಕ್ಕೆ ಪರಂಪರಾಗತವಾಗಿ ಬಂದದ್ದು. ಇದು ಕಾಡುಗೊಲ್ಲ ಮಾತ್ರವಲ್ಲ ಪಶುಪಾಲನಾ ಸಮುದಾಯದ ಅಸ್ಮಿತೆ ಕೂಡ ಹೌದು. ಕಾಡಲ್ಲಿ ಕುರಿ, ಜಾನುವಾರು ಕಾಯುತ್ತ ಬದುಕುತ್ತಿದ್ದ ಸಮುದಾಯದ ಕಲೆಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಸಾಹಿತ್ಯ ಪರಂಪರೆಯಲ್ಲಿ ಜಾನಪದಕ್ಕೆ ಮಾನ್ಯತೆ ಸಿಕ್ಕಿದ್ದು ಜಿ.ಶಂ.ಪರಮಶಿವಯ್ಯ ಹಾಗೂ ಹಾ.ಮಾ.ನಾಯಕ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಾನಪದ ಸಾಹಿತ್ಯ ಕೂಡ ಸಂಶೋಧನೆಗೆ ಯೋಗ್ಯ ಕ್ಷೇತ್ರ ಮತ್ತು ವಸ್ತು ಎಂಬುದನ್ನು ಒಪ್ಪಿಸಲು ಸಾಕಷ್ಟು ಶ್ರಮಿಸಬೇಕಾಯಿತು ಎಂದು ಮೆಲುಕುಹಾಕಿದರು.
ಜಾನಪದ ಅಧ್ಯಯನ ವಿಸ್ತರಣೆ ಕಂಡ, ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆದುಕೊಂಡ ಮೂರನೇ ಘಟ್ಟವಾಗಿ ಈ ಕೃತಿ ನೋಡಬೇಕು. ಶೈಕ್ಷಣಿಕ ಅಧ್ಯಯನದ ವಸ್ತವಾಗಿ ಸಿರಿಯಜ್ಜಿ ಪರಿಣಿಸಿ ಸಂಶೋಧನೆಗೆ ಒಳಪಡಿಸಿದ್ದಕ್ಕೆ ಹೆಮ್ಮೆ ಪಡಬೇಕು. ಜಾನಪದ ಅಧ್ಯಯನದ ಇತಿಹಾಸದಲ್ಲಿ ಹೊಸದೊಂದು ಪರ್ವ ಶುರು ಆಗಿದೆ.ಕಾಡು ಗೊಲ್ಲರಂತಹ ನಿರ್ಬಂಧಿತ ಸಮುದಾಯದ ಮಹಿಳೆಯೊಬ್ಬರು ಇಷ್ಟು ಎತ್ತರಕ್ಕೆ ಬೆಳೆಯುವ ಅವಕಾಶ ಸಿಕ್ಕಿದ್ದು ವಿಸ್ಮಯ. ಅವರ ಒಳಗಿನ ಆಸಕ್ತಿ, ಪ್ರಯತ್ನ ಹಾಗೂ ಕುಟುಂಬದ ಬೆಂಬಲದ ಕಾರಣಕ್ಕೆ ಅವಳಿಗೆ ಇದು ಸಾಧ್ಯ ಆಯಿತು. ಕಾಡಗೊಲ್ಲರ, ಸಾಂಸ್ಕೃತಿಕ ವೀರರ ಆರಾಧ್ಯ ದೈವ, ಬೇರೆ ಸಮುದಾಯದ ದೈವಗಳ ಬಗ್ಗೆ ಸಿರಿಯಜ್ಜಿ ಹಾಡಿದ್ದಾರೆ. ಹಾಡುವ ಸಾಹಿತ್ಯದಲ್ಲಿ ಭೇದ ಮಾಡಿಲ್ಲ. ಸಾಹಿತ್ಯದ ಪದ-ಪದದ ವಿವರಗಳನ್ನು ಅವಳು ನೀಡುತ್ತಿದ್ದಳು. ಕಾವ್ಯ ಅವಳ ಬದುಕಿನ ಭಾಗ ಆಗಿತ್ತು. ಹೀಗಾಗಿ ಅವಳು ನಿರರ್ಗಳವಾಗಿ ಹಾಡುತ್ತದ್ದಳು. ಆದರೆ, ಒಬ್ಬ ವ್ಯಕ್ತಿ ಇಷ್ಟು ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ್ ಕಲಮರಹಳ್ಳಿ, ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ, ಕಲಾವಿದೆ ಸಿರಿಯಮ್ಮ, ಜಿ.ಕೆ.ಪ್ರೇಮಾ, ಅಮಿತ ಪ್ರಕಾಶನದ ಶಾರದಮ್ಮ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಆತ್ಮಕತೆ | ಮದುವೆಯ ಬಂಧ-ಸ್ನೇಹಿತರ ಮನೆಯಲ್ಲಿ ಔತಣ

- ರುದ್ರಪ್ಪ ಹನಗವಾಡಿ
ನನ್ನ ಹೆಂಡತಿ ಗಾಯತ್ರಿ 1979ನೇ ಬ್ಯಾಚಿನ ನನ್ನ ವಿಭಾಗದಲ್ಲಿಯೇ ವಿದ್ಯಾರ್ಥಿಯಾಗಿದ್ದವಳು. ವಿದ್ಯಾರ್ಥಿನಿಯಾಗಿ ಅವಳ ಶೈಕ್ಷಣಿಕ ಓದಿನ ಜೊತೆ ನಾಟಕ, ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿಯುಳ್ಳವಳಾಗಿದ್ದಳು. ಅವಳಿಗಿದ್ದ ತಮ್ಮ ಹಿರಿಯ/ಕಿರಿಯ ವಿದ್ಯಾರ್ಥಿನಿಗಳ ಜೊತೆಗಿನ ಸ್ನೇಹ ಸಂಬಂಧದ ಜೊತೆ, ಕೇಂದ್ರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.
ನಮ್ಮ ಕೇಂದ್ರದಿಂದ 1978ರಲ್ಲಿ ಎಂ.ಎ. ಮುಗಿಸಿದ್ದ ಯಶೋಧ ಮತ್ತು ಶಾರದ ಎಂಬ ಇಬ್ಬರು ವಿದ್ಯಾರ್ಥಿನಿಯರು ಎಂ.ಎ., ಮುಗಿಸಿದ ನಂತರ, ಬೆಂಗಳೂರಿನಲ್ಲಿ ಯಶೋಧ ವಿ.ಕೆ.ಆರ್.ವಿ. ರಾವ್ ಇನ್ಸಿಟಿಟ್ಯೂಟ್‌ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದಳು. ಶಾರದ ತನ್ನ ಸೋದರ ಸಂಬಂಧಿ ಡಾಕ್ಟರ್‌ರೊಬ್ಬರನ್ನು ಮದುವೆಯಾಗಿ ಗೃಹಿಣಿ ಯಾಗಿದ್ದಳು. ಇವರಿಬ್ಬರೂ ಮೊದಲು ಶಿವಮೊಗ್ಗದಿಂದ ದಿನವೂ ಬೆಳಿಗ್ಗೆ ಬರುತ್ತಿದ್ದ ಗಜಾನನ ಬಸ್ಸಿಗೆ ಗಾಯತ್ರಿ ಮತ್ತು ಇತರರೊಡನೆ ಕ್ಲಾಸಿಗೆ ಬರುತ್ತಿದ್ದರು. ಹಾಗಾಗಿ ಅವರಿಬ್ಬರ ಎಂ.ಎ., ಮುಗಿದ ನಂತರವೂ ಕೇಂದ್ರಕ್ಕೆ ಬಂದಾಗ ಗಾಯತ್ರಿಯನ್ನು ಜೊತೆಗೆ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಹೋಗುತ್ತಿದ್ದರು. ಹೀಗೆ ಹೋಗುವಾಗ ನಮ್ಮ ಜ್ಞಾನೇಂದ್ರ ಪ್ರಭು ಜೊತೆ ನಾನು ಶಿವಮೊಗ್ಗಕ್ಕೂ ಜೊತೆಗೆ ಹೋಗಿ ಅಲ್ಲಿನ ಮನೋಹರ ಕೆಫೆಯಲ್ಲಿ ಕಾಫಿ ಕುಡಿದು, ಹರಟೆ ಹೊಡೆದು ಹಿಂತಿರುಗುತ್ತಿದ್ದೆವು. ಆ ದಿನಗಳಲ್ಲಿಯೇ ನನಗೆ ಗಾಯತ್ರಿಯ ಪರಿಚಯವಾಗಿ ಒಬ್ಬರಿಗೊಬ್ಬರು ಆಸಕ್ತರಾಗಿದ್ದೆವು. ಅದೆಲ್ಲ ಪ್ರಭು, ದೇವರಾಜು ಮತ್ತು ಕೇಶವಮೂರ್ತಿಗಳ ನಮ್ಮ ಸ್ನೇಹ ವಲಯಕ್ಕೂ ತಿಳಿದಿತ್ತು.
ಗ್ರಾಮೀಣ ಪ್ರದೇಶಗಳಿಂದ ಬಹಳ ಹುಡುಗರು ಏನೆಲ್ಲ ಓದಿದ್ದರೂ ಹುಡುಗಿಯರೊಡನೆ ಸರಳವಾಗಿ ಮಾತಾಡಿಕೊಂಡು ಇರುವುದು ವಿರಳವಾಗಿದ್ದ ದಿನಗಳು. ನಾನಾದರೂ ಎಂ.ಎ. ಮುಗಿಸಿ 4-5 ವರ್ಷಗಳ ಪಾಠ ಮಾಡಿದ ಅನುಭವವಿದ್ದರೂ ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಹಿಂಜರಿಕೆ ಮತ್ತು ಸಂಕೋಚದ ಕಾರಣ ಹುಡುಗಿಯರಿಂದ ದೂರವೇ ಉಳಿಯುತ್ತಿದ್ದೆ.
ಓದಿನ ಜೊತೆಗೆ ಎಸ್‌ವೈಎಸ್, ಡಿ.ಎಸ್.ಎಸ್.ಗಳ ಹೋರಾಟಗಳಲ್ಲಿ ಭಾಗವಹಿಸಿ, ಬೀದಿ ಬೀದಿಗಳಲ್ಲಿ ಭಾಷಣ, ಮೆರವಣಿಗೆ ಅನೇಕ ಸಂದರ್ಭಗಳಲ್ಲಿ ಪೋಲೀಸ್ ಸ್ಟೇಷನ್‌ನಲ್ಲಿ ಬಂಧಿಯಾಗಿ ಹೊರಬಂದಿದ್ದರೂ ಪ್ರೀತಿಯ ಪ್ರೇಮಗಳ ವಿಷಯದಲ್ಲಿ ಹಿಂಜರಿಕೆ ಮತ್ತು ಸಂಕೋಚಗಳು ನನ್ನಲ್ಲಿ ಮನೆ ಮಾಡಿದ್ದವು. ನಾನು ಈ ಹಿಂದೆ ಸೋಷಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಮೂರು ಜನ ಹುಡುಗಿಯರಲ್ಲಿ ಒಬ್ಬಳು ತೋರಿದ ವಿಶೇಷ ಆಸಕ್ತಿ ಮತ್ತು ಮಾತುಕತೆಗೆ ಮಾರುಹೋಗಿ, ಅವಳು ವಿಶೇಷವಾಗಿ ತಂದು ಕೊಡುತ್ತಿದ್ದ ತಿಂಡಿ ಮತ್ತು ಪ್ರಸೆಂಟೇಷನ್‌ಗಳನ್ನು ನನ್ನ ಮೇಲಿನ ವಿಶೇಷ ಪ್ರೀತಿಯಿಂದಲೇ ಕೊಟ್ಟಿರಬೇಕೆಂದು ಭಾವಿಸಿಕೊಂಡಿದ್ದೆ. ಅದನ್ನೆಲ್ಲ ಆಗ ನನ್ನ ಜೊತೆಗಿದ್ದ ಬಸವಣ್ಯಪ್ಪನಿಗೆ ಹೇಳಿದಾಗ ಅವನು, `ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ, ನಿನಗೆ ಇಷ್ಟವಾದರೆ-ನೀನೆ ಅವಳಿಗೆ ಮದುವೆಯಾಗುವಂತೆ ಕೇಳು’ ಎಂದು ಹುರಿದುಂಬಿಸುತ್ತಿದ್ದ. ಏರು ಯೌವನದ ಸೆಳೆವಿನಲ್ಲಿದ್ದ ನಾನು ಒಂದು ದಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಸಂಜೆಯ ವಿಹಾರದಲ್ಲಿದ್ದಾಗ ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿಯೇ ಬಿಟ್ಟೆ. ನನಗಿಂತಲೂ ವಯಸ್ಸಿನಲ್ಲಿ ಮತ್ತು ಬುದ್ದಿಯಲ್ಲಿ ಮುಂದಿದ್ದ ಅವಳು ನನ್ನ ಪ್ರೇಮ ಭಿಕ್ಷೆಯನ್ನು ನಯವಾಗಿ ತಿರಸ್ಕರಿಸಿದ್ದಳು. ನಂತರ ನಾನು ನನ್ನ ವೃತ್ತಿಯನ್ನೇ ಬದಲಾಯಿಸಿದ ಕಾರಣ ಆ ಪ್ರೇಮ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿ ಬಿಆರ್‌ಪಿಗೆ ವರ್ಗವಾಗಿ ಬಂದಿದ್ದೆ.
ಈ ಹಿನ್ನೆಲೆಯಲ್ಲಿದ್ದ ನನಗೆ ತಕ್ಷಣದಲ್ಲಿ ಪ್ರೀತಿಯ ಪ್ರಸ್ತಾಪವನ್ನು ಮಾಡುವಾಗ ಅನೇಕ ರೀತಿಯ ಹಿಂಜರಿಕೆಯಲ್ಲಿ ಮುಳುಗಿ ಬಿಡುತ್ತಿದ್ದೆ. ಆದರೆ ಪ್ರಭು ಮತ್ತು ಕೇಶವಮೂರ್ತಿಯವರೊಡನೆ ನಂತರ ನನ್ನ ಹಳೆ ವಿದ್ಯಾರ್ಥಿನಿಯರಾದ ಯಶೋಧ ಮತ್ತು ಶಾರದಾ ಅವರ ಮುಖಾಂತರ ಗಾಯತ್ರಿಯ ಬಗ್ಗೆ ನನಗಿರುವ ಆಸಕ್ತಿ ತಿಳಿಸಿದೆ. ಅವಳು ಎಂ.ಎ. ಪರೀಕ್ಷೆ ಮುಗಿದಿದ್ದರಿಂದ ಊರಿಗೆ ಹೋಗಿದ್ದಳು. ಅವಳು ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಅವಳಿಗೆ ಒಂದು ಕೆಲಸ ಪಡೆದ ನಂತರ ದಿನಗಳಲ್ಲಿ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿ ನಾನಿದ್ದೆ. ಗಾಯತ್ರಿಯೂ ರಜೆಯಿದ್ದ ಕಾರಣ ತನ್ನ ಊರಾದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಹೋಗಿದ್ದಳು. ನನ್ನ ಜೊತೆ ಮನೆತನ, ಜಾತಕಗಳ ವಿವರಗಳ ಗೊಡವೆ ಇಲ್ಲದೆ, ನನ್ನನ್ನು ಮದುವೆಯಾಗಲು ಒಪ್ಪಿಸುವಲ್ಲಿ ಗಾಯತ್ರಿಯ ಗೆಳತಿಯರು, ನನ್ನ ಮಿತ್ರ ಪ್ರಭು ಎಲ್ಲ ಕಾರಣರಾಗಿದ್ದರು. ನಾನಾವ ಜಾತಿ ಮತ್ತು ಆರ್ಥಿಕ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಏನೂ ಕೆದಕದೆ ನನ್ನನ್ನು ಮಾತ್ರ ನೋಡಿ ಒಪ್ಪಿದ ಗಾಯತ್ರಿಯ ಬಗ್ಗೆ ಅಭಿಮಾನದ ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದೆ. ಹೀಗಿರುವಾಗ ಮೇ ತಿಂಗಳ ಕೊನೆ ವಾರದಲ್ಲಿ ತನ್ನ ಗೆಳತಿಯ ಜೊತೆ ಬಿ.ಆರ್.ಪಿ.ಗೆ ಬಂದ ಗಾಯತ್ರಿ ಹೊಸ ಸುದ್ದಿಯನ್ನು ತಂದಿದ್ದಳು. ರಜೆಯಲ್ಲಿ ಅವರ ಮನೆಗೆ ಬಂದಿದ್ದ ಹುಡುಗನೊಬ್ಬ ಗಾಯತ್ರಿಯನ್ನು ನೋಡಿ ಮದುವೆಯಾಗಲು ಒಪ್ಪಿರುವುದಾಗಿಯೂ, ಇಷ್ಟರಲ್ಲೇ ಮದುವೆ ಮಾತು ಆಗಬಹುದೆಂಬ ಆತಂಕದ ಸುದ್ದಿಯನ್ನು ತಿಳಿಸಿದಳು.
ಗಾಯತ್ರಿಯ ಎಂ.ಎ. ಮುಗಿದು ನೌಕರಿ ಹಿಡಿದ ನಂತರ ಎಲ್ಲರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ನಮಗೆ ನಂತರದ ಬೆಳವಣಿಗೆಗಳು ನಮ್ಮಿಬ್ಬರ ಕೈತಪ್ಪಿ ಹೋಗುವ ಆತಂಕವಾಯಿತು. ಈ ನನ್ನ ಎಲ್ಲ ಅಂತರಂಗದ ವಿಷಯಗಳನ್ನು ಚರ್ಚಿಸಲು ಪ್ರಭು ಜೊತೆ ಭದ್ರಾವತಿಗೆ ಕೃಷ್ಣಪ್ಪನವರನ್ನು ಕಂಡು ಚರ್ಚಿಸಿಕೊಂಡು ಬರಲು ಹೋದೆವು. ಕೃಷ್ಣಪ್ಪ ಮತ್ತು ಇಂದಿರಾ ಅವರ ಜೊತೆ ಎಲ್ಲ ವಿಷಯಗಳನ್ನು ಚರ್ಚಿಸಿ ದಿನಾಂಕ 4-6-1979ರಂದು ರಿಜಿಸ್ಟರ್ ಮದುವೆಯ ಕಾರ್ಯ ಮುಗಿಸಲು ತೀರ್ಮಾನಿಸಿದೆವು. ಅದಕ್ಕೂ ಮುಂಚೆ ಗಾಯತ್ರಿಯನ್ನು ಕರೆದುಕೊಂಡು ಬರಲು ತಿಳಿಸಿದರು. ಅದರಂತೆ ಹೋದಾಗ ಇಂದಿರಾ ಕೂಡ ಇದ್ದು ಗಾಯತ್ರಿಗೆ ಸಮಾಧಾನ, ಧೈರ್ಯ ಹೇಳಿ ಮದುವೆಯ ಆತಂಕವನ್ನು ಹಗುರ ಮಾಡಿದ್ದರು. ತುರ್ತಾಗಿ ಇದ್ದ ಪರಿಸ್ಥಿತಿಯಲ್ಲೇ ಮದುವೆಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ. ನಮ್ಮ ಊರ ಮನೆಯಲ್ಲಿ ಈ ವಿಷಯಗಳನ್ನು ತಿಳಿಸಿ ಚರ್ಚಿಸಿ ಒಪ್ಪಿಸುವುದು ಸಾಧ್ಯವಿರಲಿಲ್ಲ. ಏಕೆಂದರೆ ಅವ್ವ ನನ್ನ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದಳು. ಆ ರೀತಿ ಅಕ್ಕನ ಮಗಳನ್ನು ಮದುವೆಯಾಗುವುದು, ಅವರು ನನ್ನನ್ನು ಅವರ ಸಾಗರದ ಮನೆಯಲ್ಲಿಟ್ಟುಕೊಂಡು ಓದಿಸಿದ ಬಗ್ಗೆ ಋಣ ತೀರಿಸುವ ಜವಾಬ್ದಾರಿ ಎಂದು ಎಲ್ಲರ ನಂಬಿಕೆಯಾಗಿತ್ತು. ಇದನ್ನೆಲ್ಲ ತಿಳಿಗೊಳಿಸಿ ಪ್ರಸ್ತುತ ಮದುವೆ ವಿಷಯಕ್ಕೆ ಒಪ್ಪಿಸಿ ಕರೆತರುವುದು ಆ ಕ್ಷಣದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು.
ಇನ್ನು ಗಾಯತ್ರಿ ಮನೆಯವರು ಶೃಂಗೇರಿ ಮಠದ ಅನುಯಾಯಿಗಳು. ಪ್ರಥಮದಲ್ಲಿ ನಾನು ಅಬ್ರಾಹ್ಮಣನಾದ ಕಾರಣ ಈ ಮುದುವೆಯ ಪ್ರಸ್ತಾಪವೇ ಸಾಧ್ಯವಿಲ್ಲದ ಮಾತಾಗಿತ್ತು. ಅದರಲ್ಲೂ ನನ್ನ ಜಾತಿ ದಲಿತ ಗುಂಪಿಗೆ ಸೇರಿದ್ದೆಂಬುದು ತಿಳಿಸಿದರೆ ಇನ್ನು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುವುದರಲ್ಲಿತ್ತು. ಹಾಗಾಗಿ ಅವರಿಗೂ ಈ ಮದುವೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ಮದುವೆಯಾಗುವುದು ಸಾಧ್ಯವಿರಲಿಲ್ಲ. ಈ ವಿಷಯಗಳೇನಾದರೂ ಮೊದಲೇ ಗೊತ್ತಾದರೆ, ಮದುವೆಯಾಗಲು ಖಂಡಿತ ಬಿಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಕಾರಣದಿಂದಾಗಿ ಎಲ್ಲದನ್ನು ಗೌಪ್ಯವಾಗಿಟ್ಟು ಮದುವೆಯ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕೃಷ್ಣಪ್ಪ – ಇಂದಿರಾ ಅವರ ಮದುವೆ 1975ರಲ್ಲಿಯೇ ನಡೆದು ಆ ನಂತರ ಅನೇಕ ಅಂತರ್ಜಾತೀಯ, ಧರ್ಮೀಯ ಮತ್ತು ಸರಳ ಮದುವೆಗಳನ್ನು ಮಾಡಿಸಿ ಹೆಸರಾಗಿದ್ದರು. ಸಮಾಜವಾದಿ ಚಳುವಳಿ, ದಲಿತ ಚಳುವಳಿಯ ಅನೇಕ ಯುವಕ, ಯುವತಿಯರು ಇಂದಿರಾ ಕೃಷ್ಣಪ್ಪನವರ ನೇತೃತ್ವದಲ್ಲಿ ಅಂತರ್‌ಜಾತಿ ಮದುವೆಯಾಗಿದ್ದರು. ಕೃಷ್ಣಪ್ಪನವರ ಅಭಿಮಾನಿ ಬಳಗ – ಭದ್ರಾವತಿ, ಶಿವಮೊಗ್ಗದಲ್ಲಿ ಸದಾ ಇಂತಹ ಸಂದರ್ಭದಲ್ಲಿ ಬೇಕಾದ ನೆರವು ನೀಡಲು ಮುಂದಾಗಿರುತ್ತಿತ್ತು.
ಈ ತಯಾರಿಯ ಸಮಯದಲ್ಲಿಯೇ ನನ್ನ ಹಳೆಯ ವಿದ್ಯಾರ್ಥಿನಿಯರಾಗಿದ್ದ ಯಶೋಧ ಮತ್ತು ಶಾರದ ಅವರು ನೀವು ಹೇಗೂ ಲಿಂಗಾಯತರಂತೆ ಕಾಣುತ್ತೀರಿ, ಸದ್ಯದ ಸಮಯದಲ್ಲಿ ನೀವು ನಿಮ್ಮ ಜಾತಿಯನ್ನು ಲಿಂಗಾಯತರೆಂದು ಹೇಳಿ ಮದುವೆಗೆ ಗಾಯತ್ರಿ ಮನೆಯವರನ್ನು ಒಪ್ಪಿಸುವ ಸಲಹೆ ನೀಡಿದರು. ಆದರೆ ಅದೆಲ್ಲ ಆಗದ ಮಾತು ಎಂದು ನಾನು ಅವರಿಗೆ ಆಗಲೇ ತಿಳಿ ಹೇಳಿದೆ. ಮದುವೆಯ ದಿನಕ್ಕೆ ಬೇಕಾದ ಸೀರೆ, ಒಂದು ತಾಳಿ ಚೈನು ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ನನಗೆ ಒಂದು ಜೊತೆ ಷರ್ಟ್ ಪ್ಯಾಂಟ್ ಹೊಲಿಯಲು ಹಾಕಿದ್ದೆ. ಆದರೆ ನನಗೆ ಆ ಟೈಲರ್ ಮದುವೆ ದಿನಕ್ಕೆ ಕೊಡಲೇ ಇಲ್ಲ. ಗಾಯತ್ರಿಯನ್ನು ಭದ್ರಾವತಿಯ ಕೃಷ್ಣಪ್ಪನವರ ಮನೆಗೆ ಬರಲು ಹೇಳಿ ನಂತರ ಎಲ್ಲರೂ ಸೇರಿ ಸಬ್ ರಿಜಿಸ್ಟಾçರ್ ಆಫೀಸಿಗೆ ಹೋದೆವು. ಆಗ ಚಿತ್ರದುರ್ಗದಲ್ಲಿದ್ದ ಬಸವಣ್ಯಪ್ಪ ಕಟ್ಟಲು ತಾಳಿಯೊಂದನ್ನು ಕೊಂಡು ತಂದಿದ್ದ. ಸಬ್‌ರಿಜಿಸ್ಟರ್ ಆಫೀಸಿನಲ್ಲಿ ಫೀಸಾಗಿ 14ರೂ.ಗಳ ಖರ್ಚಿನಲ್ಲಿ ಭದ್ರಾವತಿಯಲ್ಲಿ ಸಮಾಜವಾದಿ ಮತ್ತು ದಲಿತ ಗೆಳೆಯರ ಸಮಕ್ಷಮದಲ್ಲಿ ಕೃಷ್ಣಪ್ಪ-ಇಂದಿರಾ ದಂಪತಿಗಳ ನೇತೃತ್ವದಲ್ಲಿ ಮದುವೆಯಾಗಿತ್ತು. ಉಟ್ಟ ಸೀರೆಯಲ್ಲಿ ನರಸಿಂಹರಾಜಪುರದಿಂದ ಬಂದಿದ್ದ ಗಾಯತ್ರಿ ಅವರ ಮನೆಯವರಿಗೆ ಪ್ರಭು ಮತ್ತು ಕೇಶವಮೂರ್ತಿಗಳು ಮಾರನೆದಿನ ಹೋಗಿ ನಮ್ಮ ವಿವಾಹ ಆಗಿರುವ ಬಗ್ಗೆ ತಿಳಿಸಿ ಬರಬೇಕೆಂಬ ಮಾತಿಗೆ ಇಬ್ಬರೂ ಮಾರನೇ ದಿನ ಗಾಯತ್ರಿಯ ಮನೆಗೆ ಹೋಗಿ ಮದುವೆಯಾದ ಸುದ್ದಿ ತಿಳಿಸಿದ್ದರು. `ಗಾಯತ್ರಿಯು ಅವಳಿಗೆ ಅಧ್ಯಾಪಕರಾಗಿದ್ದ ರುದ್ರಪ್ಪ ಎನ್ನುವವರನ್ನು ಮದುವೆಯಾಗಿದ್ದಾಳೆ, ಅವರಿಬ್ಬರೂ ಚೆನ್ನಾಗಿರುತ್ತಾರೆ, ನೀವೇನು ಚಿಂತಿಸುವ ಅಗತ್ಯವಿಲ್ಲ’ ಎಂಬುದನ್ನು ಬಾಯಿಪಾಠ ಮಾಡಿದಂತೆ ಒಪ್ಪಿಸಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ ಬಂದಿದ್ದರು. ಅದರಿಂದಾಗಿ ಅವರ ಮನೆಯವರಿಗೆ ಗಾಯತ್ರಿ ಎಲ್ಲಿ ಹೋಗಿದ್ದಾಳೆ ಮತ್ತು ಏನಾಗಿದೆ ಎಂಬುದರ ಬಗ್ಗೆ ತಕ್ಷಣ ತಿಳಿದಂತಾಗಿತ್ತು.
ನನ್ನ ಮದುವೆ ದಿನ ಕೃಷ್ಣಪ್ಪನವರ ಮನೆಯಲ್ಲಿದ್ದ ನಾವು ಅಲ್ಲಿದ್ದರೆ ಗಾಯತ್ರಿ ಮನೆ ಕಡೆಯವರು ಬಂದು ಗಲಾಟೆ ಮಾಡಬಹುದೆಂದು ಭಾವಿಸಿ ಇಂದಿರಾ ಕೃಷ್ಣಪ್ಪನವರ ಹಿತೈಷಿ ಆಧ್ಯಾಪಕ ಶಿವಮೊಗ್ಗ ಮುನೀರ್ ಮತ್ತು ಅವರ ತಾಯಿ (ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ) ಬಚ್ಚಿಮ್ಮಾ ಮನೆಗೆ ಹೋಗಿ ಉಳಿಯಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಮೊದಲ ರಾತ್ರಿ ಬಚ್ಚಿಮ್ಮಾ ಸಿಹಿ ಅಡುಗೆ ಮಾಡಿ ಔತಣ ಏರ್ಪಡಿಸಿದ್ದರು. ಊಟದ ಶಾಸ್ತç ಮಾಡಿ ಮಲಗಿದರೆ ನಿದ್ದೆ ಬಾರದೇ ಇಡೀ ರಾತ್ರಿ ಆತಂಕ ಮತ್ತು ಚಿಂತೆಗಳಲ್ಲಿ ಕಳೆದೆವು. ಮದುವೆಯಾಗಿ ಒಂದು ವಾರದಲ್ಲಿ ಅಂದರೆ 10-6-1979ರಂದು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಒಂದು ಸಂತೋಷಕೂಟ ವ್ಯವಸ್ಥೆ ಮಾಡಿದ್ದೆವು. ಅದಕ್ಕೆಲ್ಲಾ ಶಿವಮೊಗ್ಗದವನೇ ಆಗಿದ್ದ ಪ್ರಭು ಮತ್ತು ಅವನ ಅಲ್ಲಿನ ಗೆಳೆಯರಾದ ರೈತಸಂಘದ ಚಟ್ನಳ್ಳಿ ಮಂಜಪ್ಪ, ಅರ್ಚನ ಟ್ರೇರ‍್ಸ್ ಕಾಂತರಾಜ್ ಓಡಾಡಿ ನಿಗದಿಗೊಳಿಸಿದ್ದರು. ಸುಮಾರು 300-400 ಜನರಿಗೆ ಲಘು ಉಪಹಾರದೊಡನೆ ಈ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅದಕ್ಕಾಗಿ ಒಂದು ಸಾಮಾನ್ಯ ಕರೆಯೋಲೆಯನ್ನು ಸಹ ಮುದ್ರಿಸಿ ಬೇಕಾದ ಸ್ನೇಹಿತರಿಗೆ ಮತ್ತು ನನ್ನ ಊರಿನ ಸಂಬಂಧಿಕರಿಗೆ ಹಂಚಲು ನಮ್ಮ ಊರಿನ ಮಾಂತೇಶಿಗೆ ಜವಾಬ್ದಾರಿ ನೀಡಿದ್ದೆನು. ಅವನ ಮುಖಾಂತರ ಊರಿಗೆ ಕಳಿಸಿಕೊಟ್ಟಿದ್ದೆ. ಅವ್ವ ಮತ್ತು ಎಲ್ಲ ಸಂಬಂಧಿತ ಬಳಗ ಮತ್ತು ಊರಿನವರು ಹೇಳಿ ಕೇಳಿ ಮದುವೆಯಾಗದೆ ದಿಢೀರ್ ಆಗಿ ಈ ರೀತಿ ಆದ ಬಗ್ಗೆ ಆಕ್ಷೇಪಗಳನ್ನು ಮಾಡಿ ಅರ‍್ಯಾರೂ ಬಾರದೆ 7-8 ಜನ ಸ್ನೇಹಿತರು ಮಾತ್ರ ಊರಿನಿಂದ ಬಂದಿದ್ದರು. ನಂತರ ನಡೆಯಬೇಕಾಗಿದ್ದ ಸಂತೋಷಕೂಟವೂ ಕೂಡ ಶಿವಮೊಗ್ಗದಲ್ಲಿ ನಡೆಸಲು ಗಾಯತ್ರಿಯವರ ಮನೆಕಡೆಯಿಂದ ಶಿವಮೊಗ್ಗದಲ್ಲಿ ಮಾತ್ರ ಈ ಸಮಾರಂಭ ಮಾಡುವುದು ಬೇಡ ಎಂಬ ಅಭಿಪ್ರಾಯಪಟ್ಟಿದ್ದರಿಂದ ಕೊನೆ ಹಂತದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಒಂದು ತಿಳುವಳಿಕೆಯ ಸೂಚನೆಯನ್ನು ಬರೆದು ಹಾಕಿ ಇಲ್ಲಿ ನಡೆಯಬೇಕಾಗಿದ್ದ ಸಂತೋಷ ಕೂಟ ಸಮಾರಂಭವನ್ನು ಬಿಆರ್‌ಪಿಯಲ್ಲಿನ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನನ್ನ ಅನೇಕ ಸ್ನೇಹಿತರು ಸಂಜೆ ಬಂದವರು ನಂತರದ ಸ್ಥಳ ಬದಲಾವಣೆಯನ್ನು ತಿಳಿದು ಕಡೆಗವರು ಬಿಆರ್‌ಪಿಯಲ್ಲಿ ನಡೆದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಮತ್ತೆ ಕೆಲವರು ಅಲ್ಲಿ ಇಲ್ಲಿ ವಿಚಾರಿಸಿ ಬಿಆರ್‌ಪಿಗೆ ಬರುವ ವೇಳೆಗೆ ಸಂತೋಷಕೂಟವೇ ಅವಸರದ ಗಲಾಟೆಯಲ್ಲಿ ಮುಕ್ತಾಯವಾಗಿತ್ತು.
ಮದುವೆಯಾದ ಮಾರನೇ ದಿನ ಭದ್ರಾವತಿಯಲ್ಲಿರುವುದಾಗಲೀ ಹತ್ತಿರದಲ್ಲಿ ಇಲ್ಲೆಲ್ಲಿ ಇರುವುದು ಸೂಕ್ತವಲ್ಲವೆಂದು ಅವಸರದಲ್ಲಿ ಇಂದಿರಾ ಜೋಡಿಸಿಕೊಟ್ಟಿದ್ದ ಅವರದೇ ಸೂಟ್‌ಕೇಸ್‌ನಲ್ಲಿ ಒಂದೆರಡು ಸೀರೆ ಬಟ್ಟೆಗಳನ್ನು ಜೋಡಿಸಿಕೊಂಡು ಭದ್ರಾವತಿಯ ಬಸ್ ಸ್ಟಾö್ಯಂಡ್‌ಗೆ ಬಂದೆವು. ನಾನು ದಾವಣಗೆರೆಗೆ ಹೋಗೋಣವೆಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ನೋಡಿ, ಇವಳು ಅದು ನಮ್ಮ ಊರಿಗೆ ಹೋಗುವ ಬಸ್, ಅದರಲ್ಲಿ ತಮ್ಮ ಊರಿನವರು ಯಾರಾದರು ಇರುತ್ತಾರೆ ಎಂದು ಗಡಿಬಿಡಿ ಮಾಡಿದಾಗ ಅಲ್ಲೇ ಮೈಸೂರು ಕಡೆ ಹೊರಟು ನಿಂತಿದ್ದ ಬಸ್ ಹತ್ತಿ ಅರಸೀಕೆರೆಗೆ ಎರಡು ಟಿಕೆಟ್ ತೆಗೆದುಕೊಂಡು ಬಸ್ ಹತ್ತಿ ಕೂತೆವು. ಸದ್ಯ ಭದ್ರಾವತಿ ಬಿಟ್ಟೆವಲ್ಲ ಎಂಬ ಸಮಾಧಾನದಲ್ಲಿ ಸ್ವಲ್ಪ ಯೋಚಿಸುತ್ತಾ ಮೈಸೂರಿಗೆ ಹೋಗುವುದೋ ಇಲ್ಲ, ಅರಸೀಕೆರೆಯಲ್ಲಿ ಉಳಿಯುವುದೋ ಎಂಬ ಯೋಚನೆಯಲ್ಲಿದ್ದಾಗಲೇ, ಅರಸೀಕೆರೆಯಲ್ಲಿ ನಾನು ಬಿ.ಎ., ಮತ್ತು ಎಂ.ಎ. ನಲ್ಲಿ ನನ್ನ ರೂಂಮೇಟ್ ಮತ್ತು ಬ್ಯಾಚ್‌ಮೇಟ್ ಆಗಿದ್ದ ಎಲ್. ರವೀಂದ್ರ ಆಗ ಅರಸೀಕೆರೆ ತಹಸೀಲ್ದಾರನಾಗಿದ್ದ. ನಾವು ಅರಸೀಕೆರೆಯಲ್ಲಿ ಇಳಿದು ಬಸ್ ಸ್ಟಾö್ಯಂಡ್ ಹತ್ತಿರದಲ್ಲಿದ್ದ ವಸತಿಗೃಹದಲ್ಲಿ ರೂಂ ಮಾಡಿದೆವು. ನಂತರ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಯನ್ನೆಲ್ಲಾ ನೋಡಿ ಅವಳಿಗೊಂದು ಹೊಸ ಸೀರೆ ತೆಗೆದುಕೊಳ್ಳಲು ನಿರ್ಧರಿಸಿ, ವಸತಿಗೃಹದ ಎದುರಲ್ಲಿದ್ದ ಈಗಲೂ ಇರುವ `ಕನ್ನಿಕಾ ಪರಮೇಶ್ವರಿ ಕ್ಲಾತ್ ಸೆಂಟರ್’ನಲ್ಲಿ ಗಾಯತ್ರಿಗೆ `ನಾಳೆಯೊಳಗೆ ಬ್ಲೌಸ್ ಹೊಲೆದುಕೊಡುವ ಒಪ್ಪಿಗೆಯ ಮೇಲೆ ಒಂದು ಸೀರೆ ಮತ್ತಿತರ ಸಣ್ಣಪುಟ್ಟ ಸಾಮಾನುಗಳನ್ನು ಕೊಂಡುಕೊಂಡೆವು. ನಂತರ ತಹಸೀಲ್ದಾರನಾಗಿದ್ದ ರವೀಂದ್ರನಿಗೆ ಪೋನ್ ಮಾಡಿದೆ. ಹೀಗೆ ನಾನು ಮದುವೆಯಾಗಿ ಹೆಂಡತಿಯೊಡನೆ ಅರಸೀಕೆರೆ ಲಾಡ್ಜ್ನಲ್ಲಿ ಉಳಿದಿರುವ ಬಗ್ಗೆ ತಿಳಿಸಿದೆ. ಅವನು ನೇರ ಸಂಜೆ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಆತಂಕದ ಆವೇಗದಲ್ಲಿದ್ದ ನಮಗೆ ಅವನಿದ್ದುದು ಮತ್ತು ಮನೆಗೆ ತಕ್ಷಣ ಆಹ್ವಾನಿಸಿದ್ದುದು ಒಂದು ರೀತಿಯ ಸಮಾಧಾನ ನೀಡಿತ್ತು. ಸಂಜೆ ಅವರ ಮನೆಗೆ ಊಟಕ್ಕೆ ಹೊರಡುವ ಮುನ್ನ ಗಾಯತ್ರಿಯ ಎಲ್ಲಾ ಅಕ್ಕಂದಿರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ತುರ್ತಾಗಿ ಮದುವೆಯಾದ ಬಗ್ಗೆ ವಿವರಿಸಿ ತಾವೆಲ್ಲರೂ ಆಶೀರ್ವದಿಸಬೇಕೆಂದೂ, ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ನಮ್ರವಾಗಿ ವಿನಂತಿಸಿಕೊಂಡಿದ್ದೆವು.
ಸಂಜೆ ರವೀಂದ್ರನ ಮನೆಗೆ ಮದುವೆಯ ಜೋಡಿಯಾಗಿ ಔತಣವೊಂದಕ್ಕೆ ಜೊತೆಯಾಗಿ ಹೋಗುತ್ತಿರುವುದು ಮೊಟ್ಟಮೊದಲನೆಯದಾಗಿತ್ತು.
ನಾನು ಮಾಂಸಾಹಾರಿ ಮತ್ತು ಬೀರ್ ಕುಡಿಯುತ್ತಿದ್ದುದು ಗಾಯತ್ರಿಗೆ ಗೊತ್ತಿದ್ದರೂ ನಾನು ಅವಳಿಗಾಗಿ ಆ ಕ್ಷಣದಲ್ಲಿ ಕುಡಿಯುವುದು ಬೇಡ ಎಂದು ನಿರ್ಧರಿಸಿದ್ದೆ. ರವೀಂದ್ರನ ಮನೆಯಲ್ಲಿ ಅವರ ತಂದೆ ಆರ್.ಎಫ್.ಒ. ಆಗಿ ನಿವೃತ್ತರಾದವರು. ಮನೆಯಲ್ಲಿ ಮೊದಲೇ ಊಟಕ್ಕೆ ಕೂತಿದ್ದರು. ಜೊತೆಗೆ ಮ್ಯಾಕ್‌ಡೆವಲ್ ವಿಸ್ಕಿ ಬಾಟಲ್ ಹಾಗೂ ಮಾಂಸದೂಟದ ಎಲುಬಿನ ತುಣುಕುಗಳೆಲ್ಲ ಸುತ್ತಲೂ ಇದ್ದವು. ಗಾಯತ್ರಿ ನೋಡಿದ ಮೊದಲ ಮಾಂಸಹಾರಿ ಊಟದ ನೋಟದಲ್ಲಿಯೇ ಹೌಹಾರಿ ನಿಂತಿದ್ದಳು. ನಾನು ಮದುವೆ ಮಾಡಿಕೊಂಡು ಬಂದಿರುವ ಕಾರಣ ರವೀಂದ್ರ ನಿಜವಾಗಿಯೂ ಅದ್ದೂರಿ ಊಟ ಮತ್ತು ವಿಸ್ಕಿಗೆ ವ್ಯವಸ್ಥೆ ಮಾಡಿದ್ದ. ನಾನು ನನ್ನ ಮದುವೆಯ ಯಾವ ವಿವಾದಗಳನ್ನೂ ಅವನಿಗೆ ತಿಳಿಸದ ಕಾರಣ ಅವನು ತೋಚಿದಂತೆ ಮಾಡಿದ್ದ. ನಾನು ಅವನಿಗೂ ಮತ್ತು ಅವನ ಶ್ರೀಮತಿಯವರಿಗೆ, ಇವಳು ಮಾಂಸ ತಿನ್ನುವುದಿಲ್ಲ ಬೇರೇನಾದರೂ ಇದ್ದರೆ ಆದೀತೆಂದು ಹೇಳಿದೆ. ಅದಕ್ಕೇನೆಂದು 10 ನಿಮಿಷದಲ್ಲಿ ತಿಳಿಸಾರೊಂದು ತಯಾರಿಸಿದರು. ನಾನು ಗಾಯತ್ರಿ ಮತ್ತು ರವೀಂದ್ರ ಊಟ ಮಾಡಿದೆವು. ಮೊದಲ ಮದುವೆಯ ಔತಣಕೂಟ ತಿಳಿಸಾರು ಉಪ್ಪಿನಕಾಯಿ ಮೊಸರಲ್ಲಿ ಅವಳ ಊಟ ಮುಗಿದಿತ್ತು. ನನಗೆ ಒಳ್ಳೆಯ ಮಾಂಸಾಹಾರದ ಊಟವಾಗಿತ್ತು. ಅಲ್ಲಿಂದ ಮಾರನೇ ದಿನ ಮೈಸೂರಿಗೆ ಬಂದು ಜಗನ್ಮೋಹನ ಪ್ಯಾಲೇಸ್ ಹತ್ತಿರದಲ್ಲಿದ್ದ ಮಹಾರಾಜಾ ಲಾಡ್ಜ್ನಲ್ಲಿ ಉಳಿದುಕೊಂಡೆವು. ಅಲ್ಲಿಂದ ಮೈಸೂರಿನ ಗೆಳೆಯರಿಗೆ ನನ್ನ ಹಿರಿಕಿರಿ ಸ್ನೇಹಿತರಿಗೆ ಫೋನಿನಲ್ಲೆ ನಾವು ಮದುವೆಯಾಗಿ ಬಂದಿರುವ ವಿಷಯ ತಿಳಿಸಿದೆ.
ಹಿರಿಯರಾದ ಪಿ. ಮಲ್ಲೇಶ್ ಅವರು ಮನೆಗೆ ಕರೆದು ಅದ್ದೂರಿಯಾದ ಔತಣ ಮಾಡಿಸಿ ನನಗೆ ಗೊತ್ತಿರುವ ಮತ್ತು ಇನ್ನಿತರ ಸ್ನೇಹಿತರನ್ನು ಕರೆದು ನಾವಿಬ್ಬರೂ ಹೊಸದಾಗಿ ಮದುವೆಯಾಗಿ ಬಂದಿರುವ ಬಗ್ಗೆ ಅಭಿಮಾನದಿಂದ ಪರಿಚಯ ಮಾಡಿಸಿ ಹರಸಿ ಜೊತೆಗೆ ನನ್ನ ಹೆಂಡತಿಗೆ ಒಳ್ಳೆಯ ಸೀರೆಯನ್ನು ತಂದು ಉಡುಗೊರೆ ನೀಡಿದ್ದನ್ನ ಈಗಲೂ ಗಾಯತ್ರಿ ನೆನಪಿಸಿಕೊಳ್ಳುತ್ತಾಳೆ. ಮಲ್ಲೇಶ್ ಮತ್ತು ಅವರ ಶ್ರೀಮತಿ ಅವರು ಗಾಯತ್ರಿಯನ್ನು ಚೆನ್ನಾಗಿ ಮಾತಾಡಿಸಿ, ಒಳ್ಳೆಯ ಹುಡುಗನನ್ನು ಮದುವೆಯಾಗಿದ್ದೀಯ ಏನೂ ಯೋಚನೆ ಮಾಡಬೇಡ ಎಂದೆಲ್ಲ ಅವಳಿಗೆ ಸಮಾಧಾನದ ಮಾತು ಹೇಳಿ ಕಳುಹಿಸಿದ್ದರು.
ಹಾಗೆಯೇ ಮಾದೇವ ಮತ್ತು ಸುಮಿತ್ರಾಬಾಯಿಯವರು ಮನೆಗೆ, ಪಿ.ಕೆ. ಮಿಶ್ರಾಜಿ ಮತ್ತು ಮಹೇಶನ ಮನೆಗೂ ಹೋಗಿದ್ದೆವು. ಸುಮಿತ್ರಾಬಾಯಿ ಅವರು ನನ್ನ ಹೆಂಡತಿಯ ಹಿನ್ನೆಲೆ ಮೊದಲೇ ತಿಳಿದುಕೊಂಡಿದ್ದ ಕಾರಣ ಸೊಗಸಾದ ಸಸ್ಯಾಹಾರಿ ಔತಣ ಮಾಡಿದ್ದರು. ನನಗೆ ಬ್ರಾಹ್ಮಣ ಜಾತಿಯ ಅನೇಕ ಸ್ನೇಹಿತರಿರುವುದಾಗಿಯೂ ಆದುದರಿಂದ ಸಸ್ಯಾಹಾರಿ ಊಟ ಉಪಚಾರಗಳು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿ ಸುಮಿತ್ರಾಬಾಯಿ ಅವರು ಆದರಿಸಿದ್ದರು.
ಎಲ್ಲ ಸ್ನೇಹಿತರನ್ನು ಮಾತಾಡಿಸಿದ ನಂತರ ಸಂಜೆ ಎಂ.ಸಿ. ಸುಂದರೇಶ ನಮ್ಮ ಕಿರಿಯ ಗೆಳೆಯ ಮತ್ತು ತನ್ನ ಎಂಬಿಎ ಶಿಕ್ಷಣದ ನಂತರ ಸ್ವಂತ ಗ್ಯಾಸ್ ಏಜೆನ್ಸಿ ನಡೆಸುತ್ತಾ ಬೆಳೆಯುವ ಉದ್ಯಮಿಯಾಗಿದ್ದ. ಅವನು ದೊಡ್ಡ ಹೋಟೆಲೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದ. ಮಹೇಶ ಮತ್ತಿತರ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದೆವು. ಆಗ ಅಲ್ಲಿಗೆ `ಆಂದೋಲನ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ತನ್ನ ಪ್ರೇಮ ಪ್ರಕರಣದ ವೈಫಲ್ಯ ಕುರಿತು ಹೇಳುತ್ತಾ… ಅಳುತ್ತಾ ಮತ್ತಾರೂ ಮಾತಾಡಲಾಗದಂತೆ ಅವನದೇ ದೊಡ್ಡ ಗೋಳಾಯಿತು. ಮಹೇಶ ಎಲ್ಲರನ್ನು ಸಮಾಧಾನ ಮಾಡುತ್ತಾ ಪಾರ್ಟಿ ಮುಗಿಸಿದ್ದೆವು. ಸುಂದರೇಶ್, ಇವರೆಲ್ಲ ಅದಕ್ಕೆ ನಾನು ಬೇಡ ಅಂದಿದ್ದು, ಎಂದು ಬೇಸರ ಮಾಡಿಕೊಂಡಿದ್ದ. ನಾನೇ ಆತನಿಗೆ ಸಮಾಧಾನದ ಮಾತುಗಳನ್ನು ಹೇಳಿ ಅಲ್ಲಿಂದ ಬೀಳ್ಕೊಂಡಿದ್ದೆವು.
ಮಾರನೇ ದಿನ ಮಹೇಶನ ಊರಿಗೆ ಹೋಗಿ ಎರಡು ದಿನ ಅವನ ಊರಾದ ಕುಪ್ಪೇಗಾಲದಲ್ಲಿ ಇದ್ದೆವು. ಮಹೇಶನ ತಂದೆ ದೊಡ್ಡ ಜಮೀನುದಾರರು. ಮನೆಯಲ್ಲಿ ಹತ್ತಾರು ಆಳು ಕಾಳುಗಳು ಇದ್ದು ರೈತಾಪಿ ಕೆಲಸಗಳು ನಡೆಯುತ್ತಿದ್ದವು. ರೇಷ್ಮೆ, ತೆಂಗು, ಬತ್ತದ ಬೆಳೆಗಳಿದ್ದ ಹೊಲ ಗದ್ದೆಗಳ ಕಡೆ ತಿರುಗಾಡುತ್ತಾ ಅವರೂರಿಗೆ ಹೊಂದಿಕೊಂಡ ನದಿಕಡೆ ತಿರುಗಾಡಿ ಮನೆಗೆ ಬರುತ್ತಿದ್ದೆವು. ಮಹೇಶನ ಮನೆಯವರು ವಿಶೇಷವಾಗಿ ಉಪಚರಿಸಿದರು. ಗಾಯತ್ರಿ, ಅವರ ಅಡುಗೆಯ ಮನೆಯಲ್ಲಿದ್ದ ಒಂದು ಬುಟ್ಟಿ ತುಂಬಾ ಕಟ್ಟಿಟ್ಟಿದ್ದ ರಾಗಿ ಮುದ್ದೆಗಳನ್ನು ನೋಡಿ `ಇಷ್ಟೊಂದಾ’ ಎಂದು ಉದ್ಗಾರ ತೆಗೆದಿದ್ದಳು. ಅದಕ್ಕೆ ಅವರಮ್ಮ ಕೆಲಸಗಾರರಿಗೆ ಊಟ ಕೊಡದಿದ್ದರೆ ಕೆಲಸಕ್ಕೆ ಬರುವುದಿಲ್ಲ ಎಂದೆಲ್ಲ ವಿವರಣೆ ನೀಡುತ್ತಿದ್ದರು. ಎರಡು ದಿನ ಆರಾಮ ಇದ್ದು ಕುಪ್ಪೇಗಾಲದಿಂದ ಮೈಸೂರಿಗೆ ಹೊರಟು ನಿಂತಿದ್ದ ಬಸ್ಸು ಏರಿದ್ದೆವು. ನಮ್ಮನ್ನು ಕಳಿಸಲು ಬಂದಿದ್ದ ಮಹೇಶ ಏನೋ ನೆನಪು ಮಾಡಿಕೊಂಡವನಂತೆ ಬಸ್ಸಿನ ಪಕ್ಕಕ್ಕೆ ಬಂದು 200ರೂಗಳನ್ನು ನನ್ನ ಕೈಗಿಟ್ಟು ನಾನೇ ಮದುವೆ ಕಾಲಕ್ಕೆ ಸ್ವಲ್ಪ ಮುಂಚೆ ಬರಬೇಕಾಗಿತ್ತು, ಆಗಲಿಲ್ಲ ಎಂದು ಹೇಳುತ್ತಿರುವಾಗಲೇ ಬಸ್ ಮುಂದೆ ಮುಂದೆ ಚಲಿಸುತ್ತಿತ್ತು. ಧಾವಂತದಲ್ಲಿ ಮದುವೆ ನೋಂದಾಯಿಸಿಕೊಂಡು ಮೈಸೂರು ಕಡೆಗೆ ಹೋಗಿದ್ದ ನಾನು ಬಿಆರ್‌ಪಿಗೆ ವಾಪಸ್ ಬಂದಿದ್ದೆ. ನಂತರ 10ನೇ ತಾರೀಖಿನಂದು ಆಯೋಜಿಸಿದ್ದ ಔತಣಕೂಟಕ್ಕೆ ರೆಡಿಯಾಗುತ್ತಿದ್ದೆವು. ಯಾರೆಲ್ಲಾ ಬರಬಹುದು, ಏನೇನು ಬೆಳವಣಿಗೆಯಾಗಬಹುದೆಂಬ ದುಗುಡದಲ್ಲಿದ್ದೆವು. ನಮ್ಮ ಮದುವೆಗೆಲ್ಲಾ ಒತ್ತಾಸೆಯಾಗಿದ್ದ ಪ್ರಭುವಿನ ಮೇಲೆ ಎಲ್ಲರ ವಕ್ರದೃಷ್ಟಿ ಬಿದ್ದಿತ್ತು. ಗಾಯತ್ರಿ ಮನೆಯವರು ಮತ್ತು ಅವರಲ್ಲಿನ ಹಿರಿಯರನೇಕರು ಶಿವಮೊಗ್ಗದ ಅವರ ಮನೆಗೆ ಬಂದು ಗಾಯತ್ರಿಯನ್ನು ಅವರುಗಳು ಮಾತಾಡಿಸಬೇಕೆಂದು ಅದಕ್ಕಾಗಿ ನೀವು ಅವರಿಬ್ಬರನ್ನು ಶಿವಮೊಗ್ಗಕ್ಕೆ ಕರೆಸಲು ಪ್ರಭುಗೆ ಒತ್ತಾಯಿಸಿದ್ದರು.
ಅವರ ಇಚ್ಛೆಯಂತೆ ನಾನು ಗಾಯತ್ರಿ ಪ್ರಭು ಮನೆಗೆ ಸುಮಾರು ಮಧ್ಯಾಹ್ನ 11-12ರ ಸಮಯಕ್ಕೆ ಹೋದೆವು. ಗಾಯತ್ರಿಯ ಹಿರಿಯ ಅಣ್ಣ ಹೆಚ್.ಸಿ. ನಂಜುಂಡಭಟ್ಟ ಮತ್ತು ಹೆಚ್.ಸಿ. ಜಗದೀಶ್ ಹಾಗೂ ಬಂಧುವಾಗಿದ್ದ ಶಾರದಮ್ಮ ಅವರುಗಳ ಜೊತೆ ಇನ್ನೂ ಹಲವರು ಗಾಯತ್ರಿಯೊಡನೆ ಮಾತನಾಡಿದರು. ಅವರನ್ನೆಲ್ಲ ನೋಡಿದ ಗಾಯತ್ರಿ ಭಾವುಕಳಾಗಿ ಕೂತಿದ್ದಳು. ಬಂದ ಗಾಯತ್ರಿ ಬಂಧುಗಳು ಯಾರೂ ನನ್ನನ್ನು ಮಾತಾಡಿಸಲಿಲ್ಲ. ಅವರೆಲ್ಲ ಗಾಯತ್ರಿಯೊಡನೆ ಮಾತಾಡಿ ಬೇರೆಲ್ಲ ಮಾತು ಮುಗಿದು ಕೊನೆಯಲ್ಲಿ ಈಗ ಎಂ.ಎ. ಮುಗಿದಿರುವ ಕಾರಣ ಮುಂದಿನ ಓದಿಗಾಗಿ ಹೊರದೇಶಕ್ಕೆ ಹೋಗುವ ವ್ಯವಸ್ಥೆ ಮಾಡುವುದಾಗಿಯೂ, ಜೀವನದಲ್ಲಿ ಭೋಗಕ್ಕಿಂದ ತ್ಯಾಗ ದೊಡ್ಡದು ಎಂಬೆಲ್ಲ ಮಾತಾಡಿ ಈಗ ಆಗಿರುವ ಮದುವೆ ಮದುವೆಯಲ್ಲ, ಬಿಟ್ಟು ಬಿಡು ಎಂದೆಲ್ಲ ಮಾತುಗಳು ಬಂದವು. ಆಗ ಅದುವರೆಗೂ ಸುಮ್ಮನಿದ್ದ ಪ್ರಭು ಮಧ್ಯೆ ಪ್ರವೇಶಿಸಿ, ಈಗ ನನ್ನ ಸ್ನೇಹಿತ ನಿಮ್ಮ ತಂಗಿಯನ್ನು ಮದುವೆಯಾಗಿದ್ದು ಮುಂದಿನ ಜೀವನದ ವಿಷಯ ಮಾತನಾಡುವುದನ್ನು ಬಿಟ್ಟು ನೀವು ಬೇರ್ಪಡಿಸುವ ಮಾತಾಡುತ್ತಿದ್ದೀರಿ ಎಂದು ಆಕ್ಷೇಪಿಸಿ, ಇನ್ನು ಸಾಕು ಹೊರಡಿ ಎಂದು ಏರು ಧ್ವನಿಯಲ್ಲಿ ಹೇಳಿದ. ಗಾಯತ್ರಿ ಚಿಕ್ಕ ಅಣ್ಣ ಜಗದೀಶ, ಇದು ಏನು ಮನೆಯೋ ಜೈಲೋ ಹೀಗೆಲ್ಲಾ ಮಾತಾಡುತ್ತೀರೆಂದು ಹೇಳುವಾಗಲೇ, ಪ್ರಭು ಹೌದು ಇದು ಜೈಲು ನಾನಿಲ್ಲಿನ ಜೈಲ್ ಸೂಪರಿಂಟೆಂಡೆಂಟ್ ಎಂದು ಏರು ಧ್ವನಿಯಲ್ಲಿ ಹೇಳಿದ ಕಾರಣ ಮುಂದಿನ ಮಾತುಗಳು ನಿಂತು ನಮ್ಮೆಲ್ಲರ ಭೇಟಿ ಕೊನೆಗೊಂಡಿತ್ತು.
ದಿನಾಂಕ 10-6-1979ರ ಮಧ್ಯಾಹ್ನ 3-4 ಗಂಟೆಗೆ ನಾವಿಬ್ಬರೂ ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿನ ಒಂದು ಶಾಲಾ ಕೊಠಡಿಯಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಕೃಷ್ಣಪ್ಪನವರ ಸಮಾಜವಾದಿ, ದಲಿತ ಮಿತ್ರರನೇಕರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಕೃಷ್ಣಪ್ಪನವರು ಮಾತಾಡಿ, ಸರಳ, ಜಾತ್ಯತೀತ ಮದುವೆಗಳು ಭಾರತೀಯರಿಗೆ ಇಂದಿನ ಅವಶ್ಯಕವಾದ ಅಂಶಗಳೆಂದು ಮಾತನಾಡಿ ಇಂತಹ ಮದುವೆಯಾಗುತ್ತಿರುವ ನಮ್ಮಿಬ್ಬರಿಗೂ ಶುಭ ಕೋರಿದ್ದರು. ನಂತರದಲ್ಲಿ ಡಾ. ತೀ.ನಂ. ಶಂಕರನಾರಾಯಣ, ಡಾ. ಶ್ರೀಕಂಠ ಕೂಡಿಗೆ, ಡಾ. ಜಿ.ಎನ್ ಕೇಶವಮೂರ್ತಿ ಮತ್ತು ಪ್ರಭು ಕೂಡ ಮಾತಾಡಿದ ನಂತರ ನಾನು ಎಲ್ಲರಿಗೂ ಕೃತಜ್ಞತೆ ಹೇಳಿದ್ದೆ. ಇನ್ನೇನು ಇದೆಲ್ಲ ಆಗುವ ಸಮಯಕ್ಕೆ ಸರಿಯಾಗಿ ಗಾಯತ್ರಿಯ ತಂದೆ, ಅಣ್ಣಂದಿರು ಹಾಗೂ ಇತರ ಕೆಲವರು ಅಲ್ಲಿಗೆ ಬಂದರು. ಕೃಷ್ಣಪ್ಪನವರು ಇದೆಲ್ಲವನ್ನು ಗಮನಿಸುತ್ತಾ ಇದ್ದ ಕಾರಣ ಗಲಾಟೆ ಆಗುವ ಸಂಭವವನ್ನು ನಿರೀಕ್ಷಿಸಿ ನಮ್ಮಿಬ್ಬರನ್ನು ಒಂದು ಅಂಬಾಸಿಡರ್ ಕಾರಿನಲ್ಲಿ ಭದ್ರಾವತಿಗೆ ತರಾತುರಿಯಲ್ಲಿ ಕಳಿಸಿಕೊಟ್ಟರು. (ಸುದ್ದಿದಿನ.ಕಾಂ|ವಾಟ್ಸಾಪ್|9980346243
ಮುಂದುವರಿಯುವುದು
